ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃತ್ಯುಕೂಪವಾದ ಹೆದ್ದಾರಿ

ಕನಕಗಿರಿ–ಗಂಗಾವತಿಯ ರಾಜ್ಯ ಹೆದ್ದಾರಿ: ರಸ್ತೆಯಲ್ಲೇ ಭತ್ತ ಶುಚಿ–ಎರಡು ಬಲಿ
Last Updated 7 ಮೇ 2015, 7:31 IST
ಅಕ್ಷರ ಗಾತ್ರ

ಕನಕಗಿರಿ: ಕನಕಗಿರಿ–ಗಂಗಾವತಿಯ ರಾಜ್ಯ ಹೆದ್ದಾರಿ ರಸ್ತೆ ಈಗ ಸಂಪೂರ್ಣ ಭತ್ತದಮಯ. 21 ಕಿಮೀ ದೂರದ ಉದ್ದಕ್ಕೂ  ಭತ್ತ ಶುಚಿತ್ವ ಮಾಡುವ ರೈತರದೆ ಕಾರುಬಾರು. ಇಲ್ಲಿನ ತಿಪ್ಪನಾಳ, ಸೂಳೇಕಲ್, ಮಲಕನರಡಿ ಗ್ರಾಮದಿಂದ ಹಿಡಿದು  ಗಂಗಾವತಿಯ ಕೃಷಿ ವಿಜ್ಞಾನ ಕೇಂದ್ರದ ವರೆಗಿನ ರಸ್ತೆಯಲ್ಲಿ ರೈತರು ತಾವು ಬೆಳೆದ ಭತ್ತ, ಮೆಕ್ಕೆ ಜೋಳ, ಸಜ್ಜೆ ಇತರೆ ಧಾನ್ಯಗಳನ್ನು  ರಸ್ತೆಯಲ್ಲಿ ಹಾಕಿ 
ಶುಚಿ ಮಾಡುತ್ತಿದ್ದಾರೆ.

ಭತ್ತವನ್ನು ಕಟಾವ್ ಮಾಡಿ ಅವುಗಳನ್ನು ತೂರಿ ಕಸವನ್ನು ಬೇರೆಡೆಗೆ ಸಾಗಿಸುವ ಕೆಲಸ ಕಳೆದ ತಿಂಗಳಿಂದಲೂ  ಭರದಿಂದ ನಡೆಯುತ್ತಿದ್ದು, ಕಳೆದ ವರ್ಷದ ಹಿಂದಷ್ಟೆ  ಕೋಟಿಗಟ್ಟಲೆ ಹಣ ವೆಚ್ಚ ಮಾಡಿ ನಿರ್ಮಿಸಿದ ರಸ್ತೆಯನ್ನು ರೈತರು ಟ್ರ್ಯಾಕ್ಟರ್‌ನ  ಬ್ಲೇಡ್ ಉಪಕರಣದಿಂದ ಭತ್ತವನ್ನು ಶುಚಿತ್ವ ಗೊಳಿಸುವುದು ಮಾಡುತ್ತಿದ್ದು ಅಲ್ಲಲ್ಲಿ ರಸ್ತೆ ಹಾಳಾಗಿದೆ.  

ರಸ್ತೆಯ ಎರಡು ಕಡೆಗಳಲ್ಲಿಯೂ ರೈತರು ವಿವಿಧ ಧಾನ್ಯಗಳ ಬೃಹತ್ ರಾಶಿ­ಗಳನ್ನು ಹಾಕಿದ್ದಾರೆ, ಮಳೆಯಿಂದ  ರಕ್ಷಣೆ­ಗಾಗಿ  ಪ್ಲಾಸ್ಟಿಕ್ ನಿಂದ  ಮುಚ್ಚಿ ಅದಕ್ಕೆ ಬೃಹತ್ ಕಲ್ಲುಗಳನ್ನು ಜೋಡಿಸ­ಲಾಗಿದೆ. ಇದು ಅಪಘಾತಕ್ಕೆ ಕಾರಣ. ‘ಒಂದೆಡೆ  ವಾಹನಗಳ ಸಂಚಾರಕ್ಕೆ ತೊಂದರೆಯಾಗುವುದರ ಜತೆಗೆ ಅಪಘಾತಕ್ಕೂ ಕಾರಣವಾಗುತ್ತಿದೆ.

ನಾಲ್ಕು ತಿಂಗಳ ಹಿಂದೆ ತಾವರಗೆರೆ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರ ಇಂಥ ರಾಶಿಯ ಮೇಲೆ ಬಿದ್ದು ಮೃತ ಪಟ್ಟಿದ್ದಾರೆ. ಜಾತಿ ಸಮೀಕ್ಷೆಯ ಮುಗಿಸಿಕೊಂಡು ಕನಕಗಿರಿಗೆ ಬರುತ್ತಿದ್ದ ಸಮಯದಲ್ಲಿ ಇಲ್ಲಿನ ಪ್ರಭಾರ ಉಪ ತಹಶೀಲ್ದಾರ್ ಗುಂಡಪ್ಪ ವಾಹನದಿಂದ ಬಿದ್ದು ಮೃತ ಪಟ್ಟಿದ್ದಾರೆ. ಸಾಕಷ್ಟು ಅಪಘಾತಗಳು ನಡೆದರೂ ಸಂಬಂಧಿಸಿದ ಇಲಾಖೆಗಳು ರಾಶಿ ತೆರ­ವಿಗೆ ಮುಂದಾಗುತ್ತಿಲ್ಲ’ ಎಂದು ವಾಹನ ಸವಾರ ಹನುಮಪ್ಪ  ದೂರುತ್ತಾರೆ.

‘ಭತ್ತದ ಶುಚಿತ್ವ ಸಂಚಾರಕ್ಕೆ ತೊಂದರೆ ಉಂಟು ಮಾಡಿದ್ದರೂ ಸಂಬಂಧಿಸಿದ ಲೋಕೋಪಯೋಗಿ ಹಾಗೂ ಪೊಲೀಸ್ ಇಲಾಖೆ ಈ ಕಡೆಗೆ ಗಮನ ಹರಿಸುತ್ತಿಲ್ಲ. ಭತ್ತದಲ್ಲಿನ ಕಸ, ಕಡ್ಡಿ, ದೂಳು, ದ್ವಿಚಕ್ರ ವಾಹನ ಸವಾರರ ಕಣ್ಣಿಗೆ ತಗುಲಿ, ಚಿಕಿತ್ಸೆಗೆ ದಾಖಲಾಗುವಂತೆ ಮಾಡಿದೆ. ಬಹಳಷ್ಟು ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ.

ಕನಕಗಿರಿಯಿಂದ ಕೊಪ್ಪಳದ ವರೆಗಿನ ರಸ್ತೆಯಲ್ಲಿಯೂ ಇದೇ ಸ್ಥಿತಿ ಇದೆ. ರಾತ್ರಿ ವೇಳೆಯಲ್ಲಿ ಧವಸ, ಧಾನ್ಯಗಳ ರಾಶಿಗಳನ್ನು ಪ್ಲಾಸ್ಟಿಕ್‌ಳಿಂದ ಮುಚ್ಚಿ ಅದಕ್ಕೆ ಕಲ್ಲುಗಳಿಂದ ರಕ್ಷಣೆ ನೀಡಿದ್ದು ವಾಹನ ಸಂಚರಿಸಲು ಸಮಸ್ಯೆಯಾಗಿದೆ’ ಎಂದು ಹನುಮಂತಪ್ಪ ಬಸರಿಗಿಡದ ಆರೋಪಿಸುತ್ತಾರೆ. 

ನೋಟಿಸ್ ಗೆ ಜಗ್ಗದ ರೈತರು: ಅಪಘಾತ ನಡೆದಾಗೊಮ್ಮೆ ಕಾಟಾಚಾರಕ್ಕೆ ಎಂಬಂತೆ ರಸ್ತೆಯಲ್ಲಿ ರಾಶಿ ಮಾಡುವ ರೈತರಿಗೆ ಇಲ್ಲಿನ  ಪೋಲಿಸ್ ಇಲಾಖೆಯ ಅಧಿಕಾರಿಗಳು ನೋಟಿಸ್ ನೀಡಿದ್ದರೂ ಅದಕ್ಕೆ ರೈತರು ‘ಕ್ಯಾರೆ’ ಎನ್ನುತ್ತಿಲ್ಲ, ಬದಲಾಗಿ ಮತ್ತಷ್ಟು ಹೆಚ್ಚು ರಾಶಿ ಮಾಡಿದ್ದಾರೆ. ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು’ ಎಂದು ಸ್ಥಳೀಯರು ಒತ್ತಾಯಿಸುತ್ತಾರೆ.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT