ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ಟಿದ ಕಾಡು ಮತ್ತು ಹತ್ತಿದ ಜಾಂಡೀಸು

ಪ್ರಬಂಧ
Last Updated 13 ಜೂನ್ 2015, 19:30 IST
ಅಕ್ಷರ ಗಾತ್ರ

ಅದೊಂದು ತರಹದ ವಿಚಿತ್ರವಾದ ದಿರಿಸು. ಪ್ಯಾಂಟು ಮತ್ತು ಷರ್ಟುಗಳೆಂದು ಬೇರೆ ಬೇರೆ ವಿಂಗಡಿಸಲಾಗುವುದಿಲ್ಲ. ಎರಡನ್ನೂ ಸೇರಿಸಿ ಹೊಲೆದಿರುತ್ತಾರೆ. ಅದಕ್ಕೆ ‘ಢಾಂಗರಿ’ ಎಂಬ ಹೆಸರು ಬೇರೆ. ಉದ್ದೋಉದ್ದಕ್ಕೆ ಧರಿಸಿಕೊಂಡು ನಿಂತರೆ ಥೇಟು ಸಿಪಾಯಿಯೇ. ಸಾಲದೆಂಬಂತೆ ಕೈಗೊಂದು ಎಕೆ ಫಾರ್ಟಿಸೆವೆನ್ನು! ಇದಿಷ್ಟು ಸಾಕಿತ್ತು, ಕೌದಳ್ಳಿ ಹಾಗೂ ಅಕ್ಕಪಕ್ಕದ ಹಳ್ಳಿಗಳ ಜನರು ನಮ್ಮನ್ನು ವಿಚಿತ್ರ ಪ್ರಾಣಿಗಳಂತೆ ನೋಡಲಿಕ್ಕೆ.

ಹೊತ್ತು ಮೂಡುವ ಮೊದಲು ಇನ್ನೂ ಕತ್ತಲಿರುವಂತೆಯೇ ಮೊಣಕಾಲವರೆಗೂ ಕಟ್ಟಿಕೊಂಡ ಬೂಟುಗಳನ್ನು ಪಟಪಟನೆ ಬಡಿಯುತ್ತಾ ಗೆಸ್ಟುಹೌಸಿನಿಂದ ಹೊರಬೀಳುತ್ತಿದ್ದೆವು. ಬೆಳಗ್ಗೆ ಆಗ ತಾನೇ ಕಣ್ಣುಜ್ಜಿಕೊಂಡು ಹೊರಬರುತ್ತಿರುವವರು, ತಂಬಿಗೆಗಳನ್ನು ಕೈಯಲ್ಲಿ ಹಿಡಿದು ಫಾರಿನ್ನಿಗೆ ಹೊರಟು ನಿಂತವರು, ಮಕ್ಕಳು ಮರಿಗಳನ್ನು ನಿಲ್ಲಿಸಿಕೊಂಡು ಅವುಗಳ ಹಲ್ಲು ಮತ್ತಿತರೆ ದೇಹದ ಭಾಗಗಳನ್ನು ತೊಳೆಯುತ್ತಿರುವವರು, ಬೆಳಗಿನ ಆ ಶುಭ್ರ ಹವೆಯನ್ನು ತಮ್ಮ ಮೋಟುಬೀಡಿಗಳಿಂದ ಕಲುಷಿತಗೊಳಿಸುತ್ತಿರುವವರು...

ಹೀಗೆ ಸಮಸ್ತರೂ ತಮ್ಮ ತಮ್ಮ ಕೈಂಕರ್ಯಗಳನ್ನು ಕೆಲಹೊತ್ತು ಮರೆತವರಂತೆ ಬಿಡುಗಣ್ಣು ಬಿಟ್ಟುಕೊಂಡು ನಮ್ಮನ್ನೇ ನೋಡುತ್ತಾ ನಿಲ್ಲುತ್ತಿದ್ದರು. ಅವರ ಕಣ್ಣಿಗೆ ನಾವು ಜೀವದ ಮೇಲಿನ ಆಸೆ ಬಿಟ್ಟು ಬಂದು ಕಾಡು ಸೇರಿಕೊಂಡ ದಡ್ಡರಂತೆ ಕಾಣುತ್ತಿದ್ದೆವೋ ಅಥವಾ ಜೊತೆಗಾರರಿಲ್ಲದೆ ದುರ್ಬಲಗೊಂಡಿದ್ದ ಕಾಡುಗಳ್ಳನ ಪ್ರಾಣ ತೆಗೆಯಬಂದ ಹಂತಕರಂತೆ ಕಾಣುತ್ತಿದ್ದೆವೋ ಹೇಳಲಾಗುತ್ತಿರಲಿಲ್ಲ.

ಹಾಗೆ ಅನ್ನಿಸಲು ಕಾರಣವೂ ಇತ್ತು. ನಾನು ಎಸ್ಟಿಎಫ್ ಸೇರಿಕೊಳ್ಳುವುದರೊಳಗಾಗಿ ಕಾಡುಗಳ್ಳ ವೀರಪ್ಪನ್ ಜೊತೆ ಕೊನೆಯ ಮೂವರು ಜೊತೆಗಾರರಷ್ಟೇ ಉಳಿದಿದ್ದರು. ಮೊದಲಿನಂತೆ ಕಾಡಿನೊಳಗೆ ಸರಾಗವಾಗಿ ಸಂಚಾರ ಮಾಡಲು ಅವನಿಗೆ ಸಾಧ್ಯವಾಗುತ್ತಿರಲಿಲ್ಲ. ಆರೋಗ್ಯದ ಸಮಸ್ಯೆಗಳು ಹಣ್ಣು ಮಾಡಿದ್ದವು. ಅನಿರ್ದಿಷ್ಟ ಸಮಯದೊಳಗೆ ಅವನು ಯಾವುದಾದರೂ ಒಂದು ರೀತಿಯಲ್ಲಿ ಸಿಕ್ಕಿಬೀಳುವ ಸಾಧ್ಯತೆ ಇದೆಯೆಂಬ ಮಾಹಿತಿಗಳು ಹರಿದಾಡುತ್ತಿದ್ದವು. ಅದಕ್ಕೆಂದೇ ಎಂಥಾ ಪರಿಸ್ಥಿತಿಯನ್ನಾದರೂ ಎದುರಿಸಲು ನಮ್ಮನ್ನು ಸರ್ವ ಸನ್ನದ್ಧರಾಗಿ ಮಾಡಲಾಗಿತ್ತು.

ಸಾಮಾನ್ಯ ತರಬೇತಿಯ ಮೊದಲ ಆ ಒಂದು ತಿಂಗಳಲ್ಲೂ ನಮಗೆ ನೀಡಲಾಗಿದ್ದ ಎಕೆ ಫಾರ್ಟಿಸೆವೆನ್ನುಗಳನ್ನು ಮಲಗುವಾಗ ಮಗ್ಗುಲಲ್ಲೇ ಇಟ್ಟುಕೊಂಡಿರುತ್ತಿದ್ದೆವು. ಸೆಕೆಗಾಲದ ರಾತ್ರಿಗಳಲ್ಲಿ ಗೆಸ್ಟ್‌ಹೌಸ್ ಮುಂಭಾಗದ ಆವರಣದಲ್ಲಿ ಅಲ್ಲಲ್ಲೇ ಸೊಳ್ಳೆಪರದೆಗಳನ್ನು ಕಟ್ಟಿಕೊಂಡು ನಿದ್ದೆ ಹೋಗುತ್ತಿದ್ದ ನಾವು ಆಯುಧಗಳನ್ನು ತಬ್ಬಿಕೊಂಡೇ ಇರುತ್ತಿದ್ದೆವು. ಎಚ್ಚರವಾದಾಗಲೊಮ್ಮೆ ಅವುಗಳ ಮೈದಡವುತ್ತಿದ್ದರೆ ಏನೋ ಧೈರ್ಯ!

‘ನೀವೆಲ್ಲಾದ್ರೂ ಕಾಡ್ನಲ್ಲಿ ಅಡ್ಡಾಡುವಾಗ ವೀರಪ್ಪನ್ ಕಾಣಿಸ್ದ ಅಂದ್ರೆ ಹಂಗೇ ರೈಫಲ್ ಎತ್ತಿ ‘ಢಂ’ ಅನ್ನಿಸಿಬಿಡಿ... ಆಮೇಲೆ  ನೋಡಿಕೊಳ್ಳೋಣ..’ ಅಂತ ನಮ್ಮ ಮಾವ ರಣೋತ್ಸಾಹ ತುಂಬಿ ಕಳಿಸಿದ್ದರು. ಆದರೆ ಆ ದಟ್ಟಾರಣ್ಯದಲ್ಲಿ ಅದೇ ಉಲ್ಟಾ ಕೂಡ ಆಗಬಹುದಿತ್ತು. ವಿಶೇಷ ಕಾರ್ಯಾಚರಣೆ ಪಡೆಗೆಂದು ­ಹೊರಟಾಗಲೇ ಮನೆಮಂದಿಯೆಲ್ಲಾ ದಿಗಿಲುಗೊಂಡಿದ್ದರು. ಕೆಲವರಂತೂ ನಾವಿನ್ನೂ ವಾಪಸ್ಸು ಬರುವುದೇ ಇಲ್ಲವೇನೋ ಎಂಬಂತೆ ಕಳಿಸಿಕೊಟ್ಟಿದ್ದರು.

ಆದರೆ ಕಾಡು ಆತ್ಮೀಯವಾಗಿ ಬರಮಾಡಿಕೊಂಡಿತ್ತು. ಒತ್ತೊತ್ತಾಗಿ ಬೆಳೆದು ನಿಂತ ಮರಗಳು, ಹಸಿರು ಹೊದ್ದ ಸಾಲು ಬೆಟ್ಟಗಳು ನಮಗೆ ಮೋಡಿ ಮಾಡಿದ್ದವು. ನಗರದ ನಿತ್ಯದ ಜಂಜಡಗಳು, ಬಂಪರುಗಳನ್ನು ತಾಕಿಸುತ್ತಾ ಓಡಾಡುವ ವಾಹನಗಳನ್ನು ನೋಡಿ ಬೇಸತ್ತವರಿಗೆ ಯಾವುದೋ ಹೊಸ ಲೋಕಕ್ಕೆ ಬಂದಂತಾಗಿತ್ತು.

ಕೆಎಸ್‌ಆರ್‌ಪಿಯ ಅಡುಗೆ ಸಿಬ್ಬಂದಿ ಟೈಮುಟೈಮಿಗೆ ಮುದ್ದೆ ಸಾಂಬಾರುಭರಿತ ರುಚಿಕಟ್ಟು ಊಟವನ್ನು ಒದಗಿಸುತ್ತಿದ್ದರು ಬೇರೆ. ಒಬ್ಬ ಮನುಷ್ಯ ಸಂತೋಷವಾಗಿರಲು ಇನ್ನೇನು ಬೇಕು? ಹೊಟ್ಟೆ ತುಂಬಾ ಊಟ, ಕಣ್ತುಂಬಾ ನಿದ್ದೆ! ಸಂಸಾರದಿಂದ ದೂರ ಇರಬೇಕಿತ್ತು ಎಂಬುದೇನೋ ನಿಜ, ಆದರೆ ಅದೇನು ಪರ್ಮನೆಂಟಲ್ಲವಲ್ಲ? ಹೇಗೂ ಬಂದದ್ದಾಗಿದೆ, ಕಾಡಿನಲ್ಲಿದ್ದಷ್ಟು ದಿನ ಕಾಡು ಜನಗಳ ಹಾಗೆ ಬದುಕಿ ಇಲ್ಲಿಯ ರಸಾನುಭವಗಳನ್ನು ದಕ್ಕಿಸಿಕೊಂಡೇ ಹೋಗಬೇಕೆಂಬ ತೀರ್ಮಾನಕ್ಕೆ ಬಂದಿದ್ದೆವು.

ಇಲಾಖೆಯಲ್ಲಿರುವ ಯಾವ ಕಟ್ಟುಪಾಡು, ರೀತಿ ರಿವಾಜುಗಳು ಕಾಡಿನಲ್ಲಿರಲಿಲ್ಲ. ದಿನಾ ಬೆಳಗ್ಗೆ ಎದ್ದು ಗಡ್ಡ ಕೆರೆದುಕೊಳ್ಳಬೇಕು, ತಲೆಗೂದಲು ಟ್ರಿಮ್ಮು ಮಾಡಿಸಿಕೊಳ್ಳಬೇಕೆನ್ನುವ ನಿಯಮಗಳಿರಲಿಲ್ಲ. ಆಗೊಮ್ಮೆ ಈಗೊಮ್ಮೆ ಸ್ನಾನ ತಪ್ಪಿಸಿದರೂ ನಡೆಯುತ್ತಿತ್ತು. ಶಿಸ್ತು, ಸಮಯಪಾಲನೆಗಳು ಎಲ್ಲೆಡೆಯಂತೆ ಇಲ್ಲಿಯೂ ಇದ್ದುವಾದರೂ ಅದಕ್ಕೂ ಮೀರಿದ ವಿಶೇಷ ಅನ್ನಿಸುವಂತಹ ಒಗ್ಗಟ್ಟೊಂದು ನಮ್ಮ ವಿಶೇಷ ಪಡೆಯ ಸಿಬ್ಬಂದಿಗಳಲ್ಲಿತ್ತು.

ನಾವೆಲ್ಲರೂ ಒಂದೇ ಉದ್ದೇಶಕ್ಕೆ, ಕಾರ್ಯಸಿದ್ಧಿಗೆ ಬಂದವರೆನ್ನುವ ಅರಿವು ನಮ್ಮಲ್ಲಿ ಜಾಗೃತವಿದ್ದುದೇ ಇದಕ್ಕೆ ಕಾರಣವಿರಬಹುದು. ಹಾಗಾಗಿ ಒಬ್ಬರಿಗೊಬ್ಬರು ಆಸರೆಯೇನೋ ಎಂಬಂತೆ ಪ್ರತಿಯೊಬ್ಬರ ವರ್ತನೆ ಇರುತ್ತಿತ್ತು.

ಶಿಸ್ತಿಗಿಂತಲೂ ಇದು ಬಹು ಪ್ರಾಮುಖ್ಯತೆಯ ಸಂಗತಿಯಾಗಿತ್ತು ಎಂಬುದು ನನ್ನ ಅನಿಸಿಕೆ. ದೇಶ ಕಾಯುವ ಸೈನಿಕರು ಇದಕ್ಕೂ ಹೆಚ್ಚಿನ ಒಗ್ಗಟ್ಟು, ಮನೋಬಲಗಳನ್ನು ತೋರುತ್ತಾರಲ್ಲ, ಅವರಿಗೆ ಬೇರೆ ಇನ್ನೆಂತಹ ಕಾರಣಗಳು ಇದ್ದಿರಬಹುದು?
ಬಿಡಿ, ನಾವು ಅಂತಹ ತ್ಯಾಗಿಗಳಲ್ಲ... ಆದರೂ ಕೆಲ ತಿಂಗಳ ಮಟ್ಟಿಗೆ ನಮ್ಮ ನಮ್ಮ ಪ್ರಾಣಗಳನ್ನು ಮುಷ್ಟಿಯಲ್ಲಿಟ್ಟುಕೊಂಡು ಕೆಲಸ ಮಾಡಿದ ಅನುಭವವಾದದ್ದು ಮಾತ್ರ ಸತ್ಯ.

ಅರಣ್ಯ ಅಂದರೇನು ಎಂಬುದೇ ಗೊತ್ತಿಲ್ಲದೆ ಹುಡುಗಾಟ ಆಡಿಕೊಂಡು ಒಂದು ತಿಂಗಳ ತರಬೇತಿ ಮುಗಿಸಿದ ನಮಗೆ ಅದರ ಅಗಾಧ ದರ್ಶನ ಆದದ್ದು ಮಾತ್ರ ಕೂಂಬಿಂಗ್ ಕಾರ್ಯಾಚರಣೆಗೆಂದು ಒಳಹೊಕ್ಕಾಗಲೇ. ಒಮ್ಮೆ ಕಾಡಿನ ಒಳಹೊಕ್ಕರೆ ವಾಪಾಸು ಬರುವುದಕ್ಕೇ ಐದಾರು ದಿನಗಳು ಹಿಡಿಯುತ್ತಿದ್ದವು. ಸಣ್ಣ ಸಣ್ಣ ಚೀಲಗಳಲ್ಲಿ ಏಳೆಂಟು ಮಂದಿಯ ತಂಡ ಬೆನ್ನ ಮೇಲೆ ಅಗತ್ಯವಾದ ರೇಷನ್ನುಗಳನ್ನು ಹೊತ್ತು ರೈಫಲ್ಲು ಹಿಡಿದು ಹೊರಟಿತೆಂದರೆ ಅದು ಪಕ್ಕಾ ವನವಾಸದ ಆರಂಭಿಕ ಹಂತ! ಪಯಣವೆಂದರೆ ಎಂಥಾ ಪಯಣ?

ಕಾಲ್ನಡಿಗೆಯಲ್ಲಿ ಕಿಲೋಮೀಟರುಗಟ್ಟಲೇ ಹಾದಿಯನ್ನು ಸವೆಸಬೇಕು. ಅದನ್ನು ಹಾದಿ ಅಂದವರಾರು? ಯಾರೂ ಮಾಡಿಟ್ಟ ಹಾದಿಯಲ್ಲ. ರೈಫಲ್ಲಿನ ತುದಿಯಿಂದಲೇ ಪೊದೆಗಳನ್ನು, ಮುಳ್ಳುಕಂಟಿಗಳನ್ನು ಸರಿಸುತ್ತ ಹೋಗಬೇಕು. ಇಳಿಜಾರು ಪ್ರದೇಶಗಳಲ್ಲಿ ರೈಫಲ್ಲು ನೆಲಕ್ಕೆ ತಾಕಿಸದಂತೆ ಎತ್ತಿಹಿಡಿದು ಜಾರುತ್ತಾ ಹೋಗಬೇಕು. ಹಳ್ಳಕೊಳ್ಳಗಳಲ್ಲಿ ಲಗೇಜು ಸಮೇತ ‘ಹ್ಶೆಜಂಪ್’ ಮಾಡಬೇಕು. ಒಂದೇ, ಎರಡೇ..?

ಅಂತಹ ಕಾಡಿನಲ್ಲೂ ನಾವು ಹಸಿವೆಯಿಂದ ನರಳದಂತೆ, ನೋಯದಂತೆ ನೋಡಿಕೊಂಡವನೆಂದರೆ ನಮ್ಮ ತಂಡದ ಸಿದ್ಧರಾಜು. ಎಲ್ಲಿ ಕಲಿತಿದ್ದನೋ? ರುಚಿಕಟ್ಟಾದ ಊಟವನ್ನು ಮಾಡಿಹಾಕುತ್ತಿದ್ದ. ಮೂರು ಕಲ್ಲುಗಳನ್ನು ಜೋಡಿಸಿ ಒಣಗಿದ ಕಡ್ಡಿಪುರಲೆಗಳನ್ನು ಒಟ್ಟಿ ಬೆಂಕಿ ಹೊತ್ತಿಸಿದನೆಂದರೆ ಅವನ ಅಡಿಗೆ ಘಮ ಅತ್ತಿತ್ತ ಹರಡಲಾರಂಭಿಸಿತೆಂದೇ ಲೆಕ್ಕ.

ಇವನ ನಳಪಾಕಕ್ಕೆ ಮನಸೋತು ವಾಸನೆ ಹುಡುಕಿಕೊಂಡು ಸ್ವತಃ ವೀರಪ್ಪನೇ ದಯಮಾಡಿಸಿಬಿಟ್ಟರೆ ಏನಪ್ಪಾ ಗತಿ? ಅಂತ ಎಷ್ಟೋ ಬಾರಿ ನಮಗೆಲ್ಲಾ ಅನಿಸಿದ್ದುಂಟು. ಸಿದ್ಧರಾಜು ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ‘ಮೊದ್ಲು ಹೊಟ್ಟೆ ತುಂಬಿಸ್ಕಳಿ ಸಾ.. ವೀರಪ್ಪನ್ನ ಹೊಡೆಯಕ್ಕೆ ತಾಕತ್ತು ಬೇಡ್ವೇ..? ಅರೆಹೊಟ್ಟೆ ತಿಂದ್ರೆ ಅದ್ಯಾವ ಬೆಟ್ಟ ಗುಡ್ಡ ಹತ್ತೋಕಾದೀತು..?’ ಅನ್ನುವ ಲಾಜಿಕ್ಕನ್ನು ಮುಂದಿಡುತ್ತಿದ್ದ.

ಅದಕ್ಕೆ ತಕ್ಕಂತೆ ಆತ ಕೆಲಸದಲ್ಲೂ ಮುಂದು. ನಾವೆಲ್ಲರೂ ಒಬ್ಬರ ಹಿಂದೊಬ್ಬರಂತೆ ದುರ್ಗಮ ಹಾದಿಯನ್ನು ಭೇದಿಸುತ್ತಾ ಹೋಗುತ್ತಿದ್ದರೆ ನಮ್ಮ ಇಡೀ ತಂಡವನ್ನು ಸಿದ್ಧರಾಜು ಲೀಡ್ ಮಾಡುತ್ತಿದ್ದ. ನಾನು ಟ್ರೂಪ್ ಮುಖಂಡನಾದ್ದರಿಂದ ಮಧ್ಯದಲ್ಲಿರಬೇಕಾಗುತ್ತಿತ್ತು. ಇದ್ದುದರಲ್ಲಿ ಶಾಣ್ಯಾ ಎಂಬಂತಿದ್ದ ಬನ್ನ ಎಲ್ಲರ ಹಿಂದಿರುತ್ತಿದ್ದ. ಈ ಬನ್ನನ ವಿಶೇಷತೆ ಏನೆಂದರೆ ಕಾಡಿನಲ್ಲಿನ ಎಲ್ಲಾ ಪ್ರಾಣಿಗಳ ವಿವರ, ಅವು ಅಪಾಯಕಾರಿಯೇ, ಅಲ್ಲವೇ..?

ನಿರೀಕ್ಷಿಸದಿದ್ದಾಗ ಅವು ಎದುರಾದರೆ ಏನು ಮಾಡಬೇಕು..? ಎಂಬುದರ ಬಗ್ಗೆ ಅವನಿಗೆ ಮಾಹಿತಿಯಿತ್ತು. ಅವನ ದೃಷ್ಟಿಯೂ ಅಷ್ಟೇ ನಿಖರ. ಅಂತಲೇ ಪ್ರತಿ ಕ್ರೀಡಾಕೂಟದಲ್ಲೂ ಆತನಿಗೆ ಶೂಟಿಂಗ್‌ಗೆ ಸಂಬಂಧಪಟ್ಟ ಬಹುಮಾನವೊಂದು ಕಟ್ಟಿಟ್ಟ ಬುತ್ತಿ. ಇಂತಹ ಅನುಭವಿಗಳ ತಂಡದಲ್ಲಿದ್ದ ನನಗೆ ಸಹಜವಾಗಿಯೇ ನನ್ನ ಪಾಲಿನ ಕೆಲಸ ಹಗುರವಾಗಿತ್ತು. ಎಲ್ಲರೂ ತಮ್ಮತಮ್ಮ ಹೊಣೆಯರಿತು ಕೆಲಸ ನಿರ್ವಹಿಸುತ್ತಿದ್ದರು. ಅಲ್ಲದೆ ಅವರೆಲ್ಲ ನನಗಿಂತ ಹಲವು ವರ್ಷಗಳ ಮುಂಚಿನಿಂದಲೇ ಇಂತಹ ಕಾರ್ಯಾಚರಣೆಯಲ್ಲಿ ಪಳಗಿದ್ದರು.

ಕಾರ್ಯಾಚರಣೆಯ ಭಾಗವಾಗಿ ಕಾಡಿನಲ್ಲಿ ಸಾಗುತ್ತಿರುವಾಗ ಜೋರುದನಿಯಲ್ಲಿ ಮಾತನಾಡಬಾರದೆನ್ನುವ ವಿಷಯ ನನಗೆ ಗೊತ್ತಾದದ್ದು ಅವರಿಂದಲೇ. ಬೆಳಗ್ಗೆ ಎದ್ದು ಲಗೇಜುಗಳನ್ನು ಬೆನ್ನಿಗೇರಿಸಿಕೊಂಡು ನಡೆಯಲಾರಂಭಿಸಿದರೆ ಕೈಲಿದ್ದ ರೂಟು ಮ್ಯಾಪುಗಳನ್ನು ಅನುಸರಿಸಿಕೊಂಡು ಮೈಲುಗಟ್ಟಲೆ ದಾರಿ ಸವೆಸುತ್ತಿದ್ದೆವು. ಕೆಲವೊಮ್ಮೆ ಕಾಡೊಳಗಿನ ಮೌನ ಅಸಹನೀಯವೆನ್ನಿಸುತ್ತಿತ್ತು. ‘ಬನ್ನಾ..

ನಮ್ಮೊಳಗೇ ಅಂತ್ಯಾಕ್ಷರಿಗಳನ್ನಾದರೂ ಹಾಡಿಕೊಳ್ಳುತ್ತಾ ಹೋಗಬಹುದಲ್ವಾ..? ಈ ಸುಸ್ತಾಗೋದು, ದಾರಿ ಸವೆಯೋದು ಇವೆಲ್ಲಾ ಗೊತ್ತಾಗೊಲ್ಲ..’ ಅಂದೆ. ಹಾಗನ್ನುತ್ತಿದ್ದಂತೆ ಜೊತೆಗಿದ್ದ ಸಿಬ್ಬಂದಿ ನನ್ನನ್ನು ವಿಚಿತ್ರವಾಗಿ ನೋಡಿದರು. ಅಂತಹ ತಪ್ಪು ಏನು ಮಾತನಾಡಿದೆ ಅನ್ನುವುದು ನನಗೆ ಗೊತ್ತಾಗಲಿಲ್ಲ. ‘ಹಂಗೆಲ್ಲಾದ್ರೂ ಮಾಡ್ಗೀಡೀರಾ ಸಾರ್.. ನಾವಿಲ್ಲಿ ಬಂದಿರೋದು ಪಿಕ್ನಿಕ್ಕಿಗಲ್ಲ, ಹಾಡು ಹಾಡಿಕೊಂಡು, ಡ್ಯಾನ್ಸು ಮಾಡಿಕೊಂಡು  ಕಾಲ ಕಳೆಯೋದಿಕ್ಕೆ...

ಹಾಗೆ ಮಾಡೋದ್ರಿಂದ ಎದುರಾಳಿಗೆ ನಮ್ಮ ಇರುವು ಗೊತ್ತಾಗೋ ಸಾಧ್ಯತೆ ಇರ್ತದೆ. ಅಷ್ಟೇ ಅಲ್ಲ, ಕಾಡಲ್ಲಿರೋ ಪ್ರಾಣಿಗಳು ನಮ್ಮ ಬೆನ್ನು ಹತ್ತಿ ಬರಲೂಬಹುದು. ಕಾಲಿಕ್ಕುವ ಮೊದಲು ಕಾಡಿನ ನೈಸರ್ಗಿಕ ನಿಯಮ ಏನು ಅನ್ನೋದನ್ನು ನಾವು ತಿಳ್ಕೋಬೇಕಾಗ್ತದೆ. ಅದನ್ನು ಮೀರಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ. ವೀರಪ್ಪನ್ನು ಅಂತೂ ಈ ವಿಷಯದಲ್ಲಿ ಡಾಕ್ಟರೇಟೇ ಮಾಡ್‌ಬಿಟ್ಟವ್ನೆ...

ಅದಕ್ಕೇ ಅವ್ನು ಇಷ್ಟು ವರ್ಷ ನಮ್ಮ ಕೈಗೆ ಸಿಗದೇ ಓಡಾಡಿಕೊಂಡಿರೋದು... ಈ ಕಾಡ್ನಲ್ಲಿರೋ ಪ್ರಾಣಿಗಳ್ಗೂ ಅವನ್ಗೂ ಒಂಥರಾ ಹೊಂದಾಣಿಕೆ ಆಗಿಬಿಟ್ಟಿದೆ...’ ಅಂತ ವಿವರಿಸಿದ. ಕಾಡಿನ ಮೂಲ ಗುಣ ನಿಶ್ಶಬ್ದ. ಪ್ರಾಣಿಗಳ ಗುಟುರು, ಪಕ್ಷಿಗಳ ಕಲರವಗಳಂತಹ ಕೆಲವೇ ಶಬ್ದಗಳನ್ನು ಹೊರತುಪಡಿಸಿದರೆ ಮಿಕ್ಕೆಲ್ಲವೂ ಅಲ್ಲಿ ಅಮಾನ್ಯ ಎನ್ನುವ ಸಂಗತಿ ಕೆಲವೇ ದಿನಗಳಲ್ಲಿ ನನ್ನ ಅನುಭವಕ್ಕೂ ಬಂತು.

ಸೂರ್ಯ ಮುಳುಗುತ್ತಿದ್ದಂತೆ ಕಾಡಿನಲ್ಲಿ ಕತ್ತಲಾವರಿಸುತ್ತಿತ್ತು. ಅಷ್ಟರೊಳಗೆ ನಾವು ರಾತ್ರಿ ಕಳೆಯಲು ಜಾಗಗಳನ್ನು ಹುಡುಕಿಕೊಳ್ಳಬೇಕಿತ್ತು. ರಾತ್ರಿ ವೇಳೆ ಸಂಚರಿಸಲು ಅಸಾಧ್ಯವಾದ ಕಾರಣ ಪ್ಲಾಸ್ಟಿಕ್ ಷೀಟಿನ ಟೆಂಟುಗಳನ್ನು ಹಾಕಿಕೊಂಡು ಅದರೊಳಗೆ ಸೇರಿಕೊಳ್ಳುತ್ತಿದ್ದೆವು. ಟೆಂಟಿನ ಮುಂಭಾಗದಲ್ಲಿ ಒಣಗಿದ ರೆಂಬೆ ಕೊಂಬೆಗಳನ್ನು ಒಟ್ಟು ಮಾಡಿ ಅತಿ ಸಣ್ಣದಾಗಿ ಬೆಂಕಿ ಹಾಕಿಕೊಳ್ಳಲಾಗುತ್ತಿತ್ತು.

ರಾತ್ರಿ ಪೂರಾ ಅದು ಉರಿಯುವಂತೆ ನೋಡಿಕೊಳ್ಳುತ್ತಿದ್ದೆವು. ತಲಾ ಮೂರು ಗಂಟೆಯ ಪಾಳಿಯಂತೆ ಒಬ್ಬೊಬ್ಬರು ಎಚ್ಚರವಿದ್ದು ಮೈಎಲ್ಲಾ ಕಣ್ಣು ಕಿವಿಯಾಗಿ ನಿದ್ದೆಯಲ್ಲಿರುತ್ತಿದ್ದ ಇತರರನ್ನು ಕಾಯುತ್ತಾ ಕೂರುತ್ತಿದ್ದೆವು. ಅಂತಹ ಹೊತ್ತಿನಲ್ಲಿ ಸಣ್ಣದೊಂದು ಸರಪರ ಶಬ್ದವಾದರೂ ಕತ್ತು ಹೊರಳಿಸಿ ನೋಡುವಂತಾಗುತ್ತಿತ್ತು. ಅದರಷ್ಟು ಕಠಿಣವಾದ ಸಮಯವನ್ನು ನಾನು ಎಲ್ಲೂ ಅನುಭವಿಸಿರಲಿಕ್ಕಿಲ್ಲವೇನೋ..?

ಆ ಸರಹೊತ್ತಿನಲ್ಲಿ, ದಟ್ಟ ಅಡವಿ ಮಧ್ಯೆ ಜೊತೆಗಾರರು ಮೈಮರೆತು ಮಲಗಿರುವಾಗ ರೈಫಲ್ಲು ಹಿಡಿದು ಬೆಂಕಿಯಲ್ಲಿ ಮೈ ಕಾಯಿಸಿಕೊಂಡು ಒಬ್ಬನೇ ಅವರನ್ನು ಕಾಯುತ್ತಾ ಕೂರುವುದಿದೆಯಲ್ಲಾ... ನಿಜವಾದ ತಾಳ್ಮೆಯ ಪರೀಕ್ಷೆ ಎಂದರೆ ಅದು! ನಿಜಕ್ಕೂ ಆ ಮೂರು ತಾಸುಗಳು ಮೂರು ಯುಗಗಳಂತೆ ಮುಗಿಯುತ್ತಿದ್ದವು. ನಗರಗಳಲ್ಲಿ ಪಟ್ಟಾಂಗ ಹೊಡೆಯುತ್ತಾ ಕೆಲವು ಯುವಕರು ‘ಟೈಮು ಹೇಗೆ ಹೋಗುತ್ತೆ ಅನ್ನುವುದು ಗೊತ್ತೇ ಆಗ್ತಿಲ್ಲಾ ಗುರೂ...’ ಅನ್ನುತ್ತಿರುತ್ತಾರಲ್ಲ?

ಅಂತಹವರನ್ನು ಕರೆದುಕೊಂಡು ಹೋಗಿ ಕಾರಿರುಳ ರಾತ್ರಿ ದಟ್ಟಕಾನನದ ಮಧ್ಯೆ ಕೈಗೊಂದು ರೈಫಲನ್ನು ಕೊಟ್ಟು ಸೆಂಟ್ರಿ ಡ್ಯೂಟಿಗೆ ಕೂರಿಸಬೇಕು ಅನ್ನಿಸುತ್ತದೆ. ಶುರುವಿನಲ್ಲಿ ರಾತ್ರಿ ವೇಳೆ ಟೆಂಟಿನ ಮುಂದೆ ಹಾಗೆ ಬೆಂಕಿ ಹಾಕಿಕೊಳ್ಳುವುದಕ್ಕೆ ಕಾರಣ ಏನಿರಬಹುದೆಂದು ನನಗೆ ಹೊಳೆದಿರಲಿಲ್ಲ. ಅದೊಂದು ರಾತ್ರಿ ಬನ್ನನನ್ನು ಮಾತಿಗೆಳೆದಾಗ ಆತನೇ ಉತ್ತರ ಕೊಟ್ಟಿದ್ದ. ‘ಇದು ದಟ್ಟವಾದ ಅಡವಿ ಸಾರ್... ಪ್ರಾಣಿಗಳಿಗೆ ನಮ್ಮಂಗೆ ಕಣ್ತುಂಬಾ ನಿದ್ದೆ ಹೊಡೆಯೋ ಅಭ್ಯಾಸ ಇರಲ್ಲ... ಅವು ಆಹಾರ ಹುಡುಕ್ತಾ ಇರ್ತವೆ, ಅಲ್ಲಿ ಇಲ್ಲಿ ಏನಾದರೂ ಸಿಕ್ತದಾ ಅಂತ ನೋಡ್ತಾ ಇರ್ತವೆ...

ಎಂಥ ಕಾರ್ಗತ್ತಲಿನಲ್ಲೂ ಸ್ಪಷ್ಟವಾಗಿ ನೋಡೋ ಶಕ್ತಿಯನ್ನು ದೇವ್ರು ಅವುಗಳಿಗೆ ಕೊಟ್ಟಿದ್ದಾನೆ. ಬಹುತೇಕ ಕಾಡು ಪ್ರಾಣಿಗಳೆಲ್ಲಾ ನಿಶಾಚರಿಗಳೇ... ಅವು ಹೆದರೋದು ಬೆಂಕಿಗೆ ಮಾತ್ರವೇ... ಉದಾಹರಣೆಗೆ ಸಡನ್ನಾಗಿ ರಾತ್ರಿ ಹೊತ್ತಿನಲ್ಲಿ ಕರಡಿಯೊಂದು ಎದುರು ಬಂದು ನಿಂತ್ಕೊಂಡ್ರೆ ಏನ್ಮಾಡ್ತೀರಿ..?’ ಅಂತ ನನ್ನೆಡೆಗೆ ಪ್ರಶ್ನೆಯೊಂದನ್ನು ಎಸೆದ. ‘ಅಯ್ಯೋ, ನಾನೂ ನೋಡಿದ್ದೀನಿ ಬಿಡಯ್ಯಾ ಸಿನಿಮಾಗಳಲ್ಲಿ...

ಬೆಂಕಿ ಇರೋ ಕಡ್ಡಿಯೊಂದನ್ನು ಅದರ ಮುಂದೆ ಹಿಡಿದು ಹೆದರಿಸಿದ್ರೆ ಎದ್ದೂ ಬಿದ್ದೂ ಓಡಿಹೋಗತ್ತೆ ಅಲ್ವಾ..?’ ಅಂದೆ. ’ಹ್ಞಾ... ನೋಡಿ ಸಾರ್... ಕರೆಕ್ಟಾಗಿ ತಿಳ್ಕಂಡಿದೀರಿ... ಕರಡಿ ಅಂತ ಅಲ್ಲ, ಎಲ್ಲಾ ಪ್ರಾಣಿಗಳೂ ಅಷ್ಟೆ. ಕೆಲವಕ್ಕೆ ಬಹಳ ದೂರದಿಂದ್ಲೇ ಬೆಂಕಿ ಉರಿಯುವುದು ಗೊತ್ತಾಗ್ತದೆ, ಅಂಥ ಸಮಯದಲ್ಲಿ ಅವು ತಮ್ಮ ಸಂಚಾರದ ದಾರಿಯನ್ನು ಬದಲಿಸಿಕೊಳ್ತವೆ. ಆ ಕಾರಣಗಳಿಂದ್ಲೇ ಈ ಮುಂಜಾಗ್ರತೆ ಕ್ರಮ’ ಅನ್ನುವ ಸಮಜಾಯಿಷಿ ನೀಡಿದ.

ಕೂಂಬಿಂಗ್ ನಡೆಸುವ ಎಲ್ಲಾ ತಂಡಗಳು ತಮಗೆ ನೀಡಿದ ರೂಟ್‌ಮ್ಯಾಪಿನ ಪ್ರಕಾರ ಅರಣ್ಯವನ್ನು ಜಾಲಾಡಿ ಎಂಟು ಹತ್ತು ದಿನಗಳಿಗೊಮ್ಮೆ ಬೇಸ್ ಕ್ಯಾಂಪಿಗೆ ಬಂದು ಸೇರಿಕೊಳ್ಳುತ್ತಿದ್ದವು. ನಾವೂ ಆ ಪ್ರಕಾರ ಕಾಡುಮೇಡುಗಳನ್ನೆಲ್ಲಾ ಸುತ್ತಿ, ಬೆಟ್ಟಗಳನ್ನು ಹತ್ತಿಳಿದು ಬೇಸ್ ಕ್ಯಾಂಪಿಗೆ ಬಂದು ಸೇರಿಕೊಳ್ಳುವಷ್ಟರಲ್ಲಿ ಸಾಕುಬೇಕಾಗಿ ಹೋಗುತ್ತಿತ್ತು. ಕೇವಲ ವಾರದ ಮಟ್ಟಿಗಿನ ಕಾಡುಜೀವನವೇ ನಮ್ಮನ್ನಿಷ್ಟು ಮೆತ್ತಗೆ ಮಾಡುತ್ತದಲ್ಲ...?

ಇನ್ನು ವರ್ಷಗಟ್ಟಲೇ ಕಾಡಿನಲ್ಲೇ ಸೆಟ್ಲ್ ಆಗಿಹೋಗಿರುವ ವೀರಪ್ಪನ್ನು ಅದು ಹೇಗೆ ನೆಮ್ಮದಿಯಾಗಿದ್ದಾನು? ಅದೂ ಒಂದು ಜೀವನವಾ? ಒಂದು ಸಿನಿಮಾ ನೋಡಂಗಿಲ್ಲ, ಒಂದು ಹಾಡು ಕೇಳಂಗಿಲ್ಲ, ಇಪ್ಪತ್ನಾಲ್ಕು ಗಂಟೆಯೂ ಜೀವ ಭಯದ ಮಧ್ಯೆಯೇ ಬದುಕಬೇಕು. ಯಾರು ಯಾವ ದಿಕ್ಕಿನಿಂದ ಬಂದು ತನ್ನನ್ನು ಹೊಡೆದು ಮುಗಿಸುತ್ತಾರೋ... ಮೊದಲೇ ತನ್ನ ತಲೆಗಿಷ್ಟು ಬೆಲೆ ಎಂದು ಬಹುಮಾನ ಬೇರೆ ಘೋಷಿಸಿದ್ದಾರೆ...

ಭಾರಿ ಹಣದ ಆಸೆಗೆ ತನ್ನ ಸಂಪರ್ಕದಲ್ಲಿರುವವರೇ ಯಾಕೆ ತನ್ನ ಬಗ್ಗೆ ಪೊಲೀಸರಿಗೆ ಮಾಹಿತಿ ಕೊಡಬಾರದು? ಎನ್ನುವ ಪ್ರಶ್ನೆಗಳು ಅವನನ್ನು ಹಣ್ಣು ಹಣ್ಣು ಮಾಡಿಯೇ ಇರುತ್ತವೆ. ಹಾಗೆಂದೇ ಆತ ತನ್ನ ಬಗ್ಗೆ ಮಾಹಿತಿ ನೀಡುವವರನ್ನು ಕ್ರೂರವಾಗಿ ಹಿಂಸಿಸುತ್ತಿದ್ದ.

ಪೊಲೀಸ್ ಮಾಹಿತಿದಾರರು ಎಂದರೆ ಸಾಕು, ಅವನ ನಿರ್ದಯತೆ ಅಲ್ಲಿ ಮೆರೆಯುತಿತ್ತು. ಅಭದ್ರತೆ, ಅಸುರಕ್ಷತೆಯಿಂದ ಸದಾಕಾಲ ನರಳುವ ಮನುಷ್ಯನ ವರ್ತನೆ ಹೇಗಿರುತ್ತದೆ ಎಂಬುದಕ್ಕೆ ವೀರಪ್ಪನ್ನು ಒಳ್ಳೆಯ ಉದಾಹರಣೆಯಾಗಿದ್ದ. ಒಬ್ಬ ಮನುಷ್ಯ ಯಾವ ನಾಗರಿಕ ಸಮಾಜದ ಸಂಪರ್ಕಗಳೂ ಇಲ್ಲದೆ, ಪ್ರೀತಿಪಾತ್ರರಿಲ್ಲದೆ ವರ್ಷಾನುಗಟ್ಟಲೆ ಕಾಡಿನಲ್ಲಿ ಮಳೆ ಬಿಸಿಲಿಗೆ ಮೈಯೊಡ್ಡಿ ಬದುಕು ಸವೆಸುತ್ತಾನಲ್ಲ...

ಅದಕ್ಕಿಂತಲೂ ಘೋರ ಶಿಕ್ಷೆ ಇನ್ಯಾವುದಿದೆ?– ಹೀಗೆಲ್ಲ ನಮಗೇ ಅನ್ನಿಸುತ್ತಿತ್ತು. ಜೀವನದ ಬಹುತೇಕ ಆಯಸ್ಸನ್ನೆಲ್ಲಾ ಕಾಡಿನಲ್ಲೇ ಕಳೆದ ಅವನಲ್ಲಿ ಮಾನವನ ವರ್ತನೆಗಳಿಗಿಂತ ಹೆಚ್ಚಾಗಿ ಪ್ರಾಣಿಗಳ ಗುಣವರ್ತನೆಗಳೇ ಆವಾಹನೆಯಾಗಿದ್ದವು. ಅತಿ ಸ್ಪಷ್ಟವಾಗಿ ಆತ ಕೆಲವು ಪ್ರಾಣಿ ಪಕ್ಷಿಗಳ ಧ್ವನಿಯನ್ನು ಅನುಕರಣೆ ಮಾಡುತ್ತಿದ್ದ ಅನ್ನುವುದೇ ಇದಕ್ಕೆ ಉದಾಹರಣೆ. ಆದರೆ ಮನುಷ್ಯ ತಾನೊಂದು ಪ್ರಾಣಿ ಅಂತ ಅಂದುಕೊಂಡ ಮಾತ್ರಕ್ಕೆ ಪ್ರಾಣಿಯಾಗಿಬಿಡಲಾರ.

ದೇವರು ಮಾನವನನ್ನು ಭಿನ್ನವಾಗಿ ಸೃಷ್ಟಿಸಿದ್ದಾನೆ. ಪ್ರಾಣಿಗಳಿಗಿಲ್ಲದಿರುವ ಅನೇಕ ವಿಶೇಷತೆಗಳು ಮಾನವನಿಗಿವೆ. ಪ್ರಾಣಿಗಳು ಮಾತನಾಡಲಾರವು, ಮನುಷ್ಯನಂತೆ ಯೋಚಿಸುವ ಶಕ್ತಿ ಅವುಗಳಿಗಿಲ್ಲ. ಮನುಷ್ಯನಿಗೆ ಭಾವನೆಗಳ ಏರುಪೇರುಗಳಿವೆ. ಬಲಹೀನತೆಗಳಿವೆ. ಮತ್ತು ಅವೆಲ್ಲ ವೀರಪ್ಪನ್‌ಗೂ ಇದ್ದವು.

ನಾವು ಬೇಸ್‌ಕ್ಯಾಂಪಿಗೆ ಬಂದು ಸೇರಿದ ನಂತರ ಅಲ್ಲಿ ಮೂರ್ನಾಲ್ಕು ದಿನಗಳ ವಿಶ್ರಾಂತಿ ಸಿಕ್ಕುತ್ತಿತ್ತು. ಅಲ್ಲಿ ಇತರೆ ತಂಡಗಳ ಜೊತೆಗಾರರರು ಮಾತುಕತೆಗೆ ಸಿಕ್ಕುತ್ತಿದ್ದರು. ಮುಂದೆ ತೆಗೆದುಕೊಳ್ಳಬೇಕಾದ ಮುಂಜಾಗ್ರತೆಗಳ ಚರ್ಚೆಯಾಗುತ್ತಿತ್ತು. ಇವು ನಮಗೆ ಕಾಡಿನಲ್ಲಿ ಎದುರಾಗಬಹುದಾದ ಅನಿರೀಕ್ಷಿತ ಸಂದರ್ಭಗಳಲ್ಲಿ ಪ್ರತಿಕ್ರಿಯಿಸಲು ಸಹಾಯ ಮಾಡುತ್ತಿದ್ದವು.

ಕಾಡು ಎಂಬುದೇ ಪ್ರತ್ಯೇಕ ಲೋಕ. ಅಲ್ಲಿರುವ ಎಲ್ಲಾ ಪ್ರಾಣಿ ಪಕ್ಷಿಗಳು ಈ ಅಪಾಯಕಾರಿ ಮನುಷ್ಯನ ಸಹವಾಸ ಬೇಡವೇ ಬೇಡ ಎಂದು ನಿರ್ಧರಿಸಿದಂತೆ ಸ್ವಚ್ಛಂದವಾಗಿ ಆಡಿಕೊಂಡಿರುತ್ತವೆ. ಯಾವುದೇ ದುಗುಡ ದುಮ್ಮಾನಗಳಿಲ್ಲದೆ ಅವು ಓಡಾಡಿಕೊಂಡಿರುವುದನ್ನು ನೋಡುವುದೇ ಕಣ್ಣಿಗೆ ಹಬ್ಬ.

ಕೆಲವೊಮ್ಮೆ ಕಾಡಿನ ಮಧ್ಯಭಾಗದಲ್ಲಿ ಜಿಂಕೆ, ಚಿಗರೆ ಮರಿಗಳು ಹುಲುಸಾಗಿ ಬೆಳೆದಿರುತ್ತಿದ್ದ ಹುಲ್ಲನ್ನು ಮೆಲ್ಲುತ್ತಾ ಗುಂಪು ಗುಂಪಾಗಿ ಕಾಣಸಿಗುತ್ತಿದ್ದವು. ನಮ್ಮ ಸಪ್ಪಳವಾಗುತ್ತಿದ್ದಂತೆ ಅವು ಮೇಯುವುದನ್ನು ನಿಲ್ಲಿಸಿ ನಮ್ಮತ್ತ ಆತಂಕದ ದೃಷ್ಟಿ ಬೀರುತ್ತಾ ನಿಂತುಬಿಡುತ್ತಿದ್ದವು.

ನೆಮ್ಮದಿಯಾಗಿದ್ದ ನಮ್ಮ ಮನೆಯೊಳಕ್ಕೆ ಇವರಾರಪ್ಪಾ ಕಾಲಿಟ್ಟವರು? ಎಂಬ ಗಾಬರಿ ಅವುಗಳ ಕಣ್ಣಿನಲ್ಲಿರುತ್ತಿತ್ತು. ಎಲ್ಲವೂ ಅಲ್ಲಲ್ಲೇ ಸರಿದು ಒತ್ತೊತ್ತಾಗಿ ಒಂದೇ ಕಡೆ ನಿಂತು ನಾವು ದೂರ ಹೋಗುವವರೆಗೂ ಕಾಯುತ್ತಿದ್ದು ನಂತರ ತಮ್ಮ ಚಟುಟಿಕೆಗಳನ್ನು ಮುಂದುವರೆಸುತ್ತಿದ್ದವು. ‘ನೋಡು ಬನ್ನಾ... ಮನುಷ್ಯರನ್ನ ಕಂಡ್ರೆ ಸಾಕುಪ್ರಾಣಿ ಪಕ್ಷಿಗಳು ಎಷ್ಟು ಹೆದರ್ತವೆ..ಅಲ್ವಾ ?’ ಅಂದರೆ, ‘ಹೌದು ಸಾರ್... ಈ ಮನುಷ್ಯ ಭಾಳಾ ವಿಚಿತ್ರ ಜೀವಿ... ಯಾವುದನ್ನೂ ನೆಮ್ದಿಯಾಗಿ ಅವುಗಳ ಪಾಡಿಗೆ ಅವು ಇರೋದಿಕ್ಕೆ ಬಿಡೋನಲ್ಲ.

ಅವ್ನು ಕಾಲಿಟ್ಟ ಕಡೆ ಹುಲ್ಲೂ ಬೆಳೆಯಲ್ಲ ಅಂತಾರೆ. ಎಲ್ಲಾ ಕಾಡು ಪ್ರಾಣಿಗಳನ್ನು ನುಂಗಿ ನೀರು ಕುಡಿದುಬಿಟ್ಟವ್ನೆ, ಆನೆಯಂಥಾ ದೊಡ್ಡ ದೊಡ್ಡ ಪ್ರಾಣಿಗಳನ್ನೇ ದಂತಕ್ಕೋಸ್ಕರ ಕೊಂದು ಮಲಗಿಸ್ತಾನೆ. ಈ ಜಿಂಕೆಯಂಥವು ಚರ್ಮ, ಮಾಂಸಕ್ಕೆ ಬಲಿಯಾಗ್ತವೆ. ಇನ್ನು ರೆಕ್ಕೆ ಪುಕ್ಕ ಇರೋ ಪಕ್ಷಿಗಳ ಗತಿಯಂತೂ ಆ ದೇವ್ರೇ ಕಾಪಾಡ್ಬೇಕು. ಈ ಕಾಡು ಮತ್ತು ಕಾಡಿನಲ್ಲಿರೋ ಪ್ರಾಣಿಗಳು ಕಾಣೆಯಾಗ್ತಿರೀದಕ್ಕೆ ಬೇರೆ ಏನೂ ಕಾರಣ ಇಲ್ಲ ಸಾರ್. ಮನುಷ್ಯಾನೇ. ಅವನ ದುರಾಸೆ ಸ್ವಾರ್ಥಕ್ಕೆ ಮುಂದೆ ಕೆಲವು ವರ್ಷಗಳಲ್ಲಿ ಈ ಕಾಡೇ ಕಣ್ಮರೆಯಾದ್ರೂ ಆಶ್ಚರ್ಯವಿಲ್ಲ...’ ಅನ್ನುತ್ತಿದ್ದ.

ನಮ್ಮ ರಾತ್ರಿಗಳು ದೀರ್ಘವಾಗಿರುತ್ತಿದ್ದವು. ಪ್ರತಿದಿನ ಕತ್ತಲಾಗುತ್ತಿದ್ದಂತೆಯೇ ಸಮತಟ್ಟಾದ ಜಾಗ ಹುಡುಕಿ ಬಿಡಾರ ಹೂಡಿ ತಂಗುತ್ತಿದ್ದೆವು. ಇನ್ನು ಊಟ ತಯಾರಿಸಿಕೊಂಡು ತಿನ್ನುವಷ್ಟರಲ್ಲಿ ಒಂದೂವರೆ ಗಂಟೆ ಹಿಡಿಯುತ್ತಿತ್ತು. ಅಂದರೆ ಸಂಜೆ ಏಳೂವರೆಗೆಲ್ಲಾ ನಮ್ಮ ಕೆಲಸ ಫಿನಿಶ್! ಸರಿ, ಮುಂದೆ ಮಾಡುವುದೇನು? ಎಲ್ಲರೂ ಟೆಂಟಿನೊಳಗೆ ಸೇರಿಕೊಂಡು ನಾಳಿನ ಕೂಂಬಿಂಗ್ ವಿವರಗಳನ್ನು ಕೆಲಹೊತ್ತು ಚರ್ಚಿಸಿ ನಿದ್ದೆಗೆ ಜಾರಿಬಿಡುತ್ತಿದ್ದೆವು.

ಆದಷ್ಟೂ ಕಡಿಮೆ ಮಾತನಾಡುವುದು ನಮಗೆ ರೂಢಿಯಾಗಿಬಿಟ್ಟಿತ್ತು. ಏನೇ ಪ್ರಯತ್ನಪಟ್ಟರೂ ಕಾಡಿನಲ್ಲಿರುವಷ್ಟು ದಿನ ಮೈಮರೆಯುವಂಥ ನಿದ್ದೆ ಹತ್ತಿರ ಸುಳಿಯುತ್ತಿರಲಿಲ್ಲ. ಹೊತ್ತು ಮೂಡುವುದಕ್ಕೆ ಇನ್ನೂ ಬಹಳ ಸಮಯವಿರುವಂತೆಯೇ ಕಾಡಿನ ಪಕ್ಷಿಸಂಕುಲ ತಮ್ಮ ಸಂವಹನ ಭಾಷೆಯಾದ ‘ಚಿವ್.. ಚಿವ್..’ ಮತ್ತು ‘ಕೂ.. ಕೂ..’ ನಂತಹ ಧ್ವನಿಗಳನ್ನು ಹೊರಡಿಸುತ್ತಾ ನಮ್ಮನ್ನು ಎಚ್ಚರಿಸಿಬಿಡುತ್ತಿದ್ದವು.

ಹಾಗೆ ಎದ್ದವರು ಕೇವಲ ಅರ್ಧಗಂಟೆಯೊಳಗೆ ನಮ್ಮ ನಿತ್ಯಕರ್ಮಗಳನ್ನು ಮುಗಿಸಿ ಸಾಮಾನು ಸರಂಜಾಮು ಹೆಗಲಿಗೇರಿಸಿಕೊಂಡು ಹೊರಟುಬಿಡುತ್ತಿದ್ದೆವು. ಬಿಸ್ಕೀಟು, ಬ್ರೆಡ್ಡುಗಳಂಥ ರೆಡಿಮೇಡು ತಿಂಡಿಗಳು ಬೆಳಗಿನ ನಮ್ಮ ತಿನಿಸುಗಳಾಗಿರುತ್ತಿದ್ದವು. ನಾವು ಅಷ್ಟು ಬೇಗ ಹೊರಡಲು ಕಾರಣವಿರುತ್ತಿತ್ತು. ಬೆಳಗಿನ ಹೊತ್ತು ಶರೀರದಲ್ಲಿ ಹೆಚ್ಚು ಶಕ್ತಿ ಪುಟಿಯುತ್ತಿರುವುದರಿಂದ ಅದನ್ನು ಆದಷ್ಟೂ ಬಳಸಿಕೊಳ್ಳುವುದು ನಮ್ಮ ಉದ್ದೇಶವಾಗಿತ್ತು.

ಬೆಳಗಿನ ಹೊತ್ತು ಪಕ್ಷಿಗಳ ಕಲರವ ಬಹಳ ಜೋರಾಗಿರುತ್ತಿತ್ತು. ಸೂರ್ಯ ಹುಟ್ಟಲಾರಂಭಿಸುತ್ತಿದ್ದಂತೆ ಅವು ಕಡಿಮೆ ಆಗಿಬಿಡುತ್ತಿದ್ದವು. ನಗರಗಳಲ್ಲಿ ಕೇಳಿಯೇ ಇರುತ್ತಿರಲಿಲ್ಲ, ಅಂತಹ ಚಿತ್ರ ವಿಚಿತ್ರ ಧ್ವನಿ ಹೊರಡಿಸುವ ಪಕ್ಷಿಗಳು ಕಾಡಿನಲ್ಲಿದ್ದವು. ಕೆಲವೂ ಕಣ್ಣಿಗೂ ಬೀಳುತ್ತಿದ್ದವು. ಅಂತಹ ಅಪರೂಪದ ಬಣ್ಣಬಣ್ಣದ ಪಕ್ಷಿಗಳನ್ನು ನಾನು ಆವರೆಗೂ ಕಂಡಿರಲಿಲ್ಲ.

ಎಂತಹ ಬಣ್ಣಗಳೆಂದರೆ ನೀಲಿ-ಕೆಂಪು, ಹಳದಿ-ಹಸಿರು ಇಂತಹ ಎರಡು ಅಥವಾ ಮೂರು ವರ್ಣಗಳ ಕಾಂಬಿನೇಷನ್ನುಗಳಲ್ಲಿ ಕಾಣಸಿಗುತ್ತಿದ್ದವು. ಯಾರೋ ಅನುಭವಿ ಚಿತ್ರಕಾರ ಬಹಳ ತದೇಕಚಿತ್ತದಿಂದ ಮಾಡಿದ ವಿನ್ಯಾಸದಂತಿರುತ್ತಿತ್ತು ಅವುಗಳ ಚಿತ್ತಾರ. ಕೆಲವು ಬಾರಿ ಅವುಗಳನ್ನು ನೋಡುತ್ತಲೇ ಸುತ್ತಲಿನ ವಾತಾವರಣದಿಂದ ಕಳೆದುಹೋಗಿಬಿಡುತ್ತಿದ್ದೆ.

‘ಅಷ್ಟು ಮೈಮರೀಬೇಡಿ ಸಾರ್... ಇದು ಸಾವಿರಾರು ಎಕರೆಗಳಲ್ಲಿ ಹಬ್ಬಿರುವ ಬೃಹತ್ ವನಸಂಪತ್ತು. ಇದು ಎಂತೆಂತಹ ಜೀವಜಾಲಗಳಿಗೆ ಆಶ್ರಯ ಕೊಟ್ಟಿದೆ ಅಂಥ ಹೇಳಕ್ಕೇ ಬರಲ್ಲ... ಯಾವ ಪಕ್ಷಿ ಪ್ರಾಣಿ ತಜ್ಞರೂ ಈವರೆಗೆ ಕಂಡುಕೇಳರಿಯದಂಥ ಹೊಸ ಹೊಸ ಜೀವಜಂತುಗಳು ಈ ಕಾಡಿನಲ್ಲಿರಬಹುದು... ದೇವರ ಸೃಷ್ಟಿಗೆ ಕೊನೆ ಎಲ್ಲಿರ್ತದೆ..?’ ಅಂತ ನಮ್ಮ ತಂಡದ ಇನ್ನೊಬ್ಬ ಸದಸ್ಯ ಪಾಂಡು  ಎಚ್ಚರಿಸುತ್ತಿದ್ದರೆ ‘ಎಂತಹ ಪ್ರಾಣಿಗಳಾದರೂ ಇದ್ದುಕೊಳ್ಳಲಿ... ನಮಗೆ ಎದುರಾಗುವಂಥವು ಮಾತ್ರ ನಿರಪಾಯಕಾರಿಗಳಾಗಿದ್ದರೆ ಸಾಕು’ ಅಂದುಕೊಳ್ಳುತ್ತಿದ್ದೆ.

ಅದಕ್ಕೆ ತಕ್ಕ ಹಾಗೆ ಒಂದು ಸಂದರ್ಭದಲ್ಲಿ ಕಾಡುಹಂದಿಯೊಂದು ನಮ್ಮನ್ನು ಎದುರಿನಿಂದ ಅಟಕಾಯಿಸಿಕೊಂಡುಬಿಟ್ಟಿತ್ತು. ತಕ್ಷಣಕ್ಕೆ ಏನು ಮಾಡಬೇಕೆಂದು ತೋಚದೆ ನಿಂತಿದ್ದ ನಮ್ಮನ್ನು ಅದು ಮುಂದೆ ಹೋಗದಂತೆ ಅಡ್ಡಹಾಕಿತ್ತು. ಅದೇಕೆ ಅಷ್ಟು ವ್ಯಗ್ರವಾಗಿತ್ತೋ? ನಮ್ಮನ್ನೇ ದಿಟ್ಟಿಸಿ ನೋಡುತ್ತಾ ಮುಂಗಾಲುಗಳಿಂದ ಆಗಾಗ ನೆಲ ಕೆದರುತ್ತಿತ್ತು.

‘ಕಾಡಹಾದೀಲಿ ಅರಿವಿಲ್ದೆ ಯಾವ್ಯಾವ ಪ್ರಾಣಿಗಳ್ಗೆ ಯಾವ್ಯಾವ ರೀತೀಲಿ ತೊಂದ್ರೆ ಕೊಟ್ಟಿರ್ತೇವೋ? ನೆನಪಿಟ್ಕೊಂಡು ಬಂದು ಹಿಂಗೆ ಸೇಡು ತೀರಿಸಿಕೊಳ್ಳೋಕೆ ತಯಾರಾಗಿ ನಿಂತಿರ್ಬೋದು... ಮೈಮೇಲೆ ಬೀಳೋಕೆ ಎಲ್ಲಾ ಸಿದ್ಧತೇನೂ ಮಾಡ್ಕೊಂಡು ಬಂದಿರೋ ಹಾಗಿದೆ, ಏನಯ್ಯಾ ಮಾಡೋದು?’ ಎಂದು ಪಕ್ಕದಲ್ಲಿದ್ದ ಪಾಂಡುವಿಗೆ ಪಿಸುಗುಟ್ಟಿದೆ.

‘ಹಂಗೇನೂ ಇರಾಕಿಲ್ಲ ತಡೀರಿ... ಸೇಡು ಗೀಡು ಎಲ್ಲಾ ಮನುಷ್ಯನಿಗಷ್ಟೆ, ಪ್ರಾಣಿಗಳು ಆ ಸಮಯಕ್ಕೆ ಏನು ಬೇಕೋ ಆ ವರ್ತನೆ ತೋರ್ತವೆ... ಇದಕ್ಕೆ ನಮ್ಮ ಮೇಲೆ ದಾಳಿ ಮಾಡೋ ಉದ್ದೇಶ ಇರಂಗಿಲ್ಲ... ನಾವು ಅದನ್ನ ದಾಟಿ ಹೋಗದಂತೆ ತಡೀತಾ ಇದೆ ಅಂದ್ರೆ ಆ ಕಡೆ ಏನೋ ಇರ್ಬೋದು...’

ಅಂದು ಬನ್ನನನ್ನು ಬಳಸಿ ಹೋಗಿ ನೋಡುವಂತೆ ಕಣ್ಸನ್ನೆ ಮಾಡಿದ. ನಾವು ಕಾಡುಹಂದಿಯ ಗಮನವನ್ನು ಹಿಡಿದಿಟ್ಟಿರುವಂತೆಯೇ ಮೆತ್ತಮೆತ್ತಗೆ ಕಾಲು ಸರಿಸುತ್ತಾ ಬದಿಗೆ ಸರಿದುಕೊಂಡ ಬನ್ನ ನೆಲದ ಮೇಲೆ ಮಲಗಿ ತೆವಳುತ್ತಾ ಆ ಬದಿಗೆ ಹೋದವನು ಎರಡು ಮೂರು ನಿಮಿಷಗಳಲ್ಲಿ ವಾಪಸ್ಸಾದ. ಅಲ್ಲಿಯವರೆಗೂ ನಾವು ಮತ್ತು ಆ ಕಾಡುಹಂದಿ ಅದೇ ಸ್ಥಿತಿಯನ್ನು ಕಾಯ್ದುಕೊಂಡಿದ್ದೆವು.

ಬಂದವನು ನಮ್ಮನ್ನು ನೋಡಿ ಇನ್ನೊಂದು ಪರ್ಯಾಯದ ಹಾದಿಯಲ್ಲಿ ಸಾಗುವಂತೆ ಕಣ್ಸನ್ನೆಯಲ್ಲೇ ತಿಳಿಸುತ್ತಾ ಇನ್ನು ಅಲ್ಲಿಂದ ತೆರಳೋಣವೆಂದು ಸೂಚಿಸಿದ. ನಾವು ಹೆಜ್ಜೆ ಹಿಂದಿಕ್ಕುತ್ತಾ ಸರಿಯುತ್ತಿದ್ದಂತೆ ಕಾಡುಹಂದಿಯು ಮುಂದೆ ಮುಂದೆ ಬರಬಹುದೆಂದು ಎಣಿಸಿದ್ದೆವು. ಆದರೆ ಅದು ತಾನೂ ಹೆಜ್ಜೆ ಹಿಂದಿಕ್ಕಿಕೊಂಡು ಪಕ್ಕದ ಪೊದೆಯಲ್ಲಿ ತೂರಿಕೊಂಡಿತು. ಅದರ ಕೋಪಕ್ಕೆ ಕಾರಣವೇನೆಂದು ನಂತರ ಬನ್ನನಲ್ಲಿ ವಿಚಾರಿಸಿದೆ.

‘ಅಂತಹದೇನಿಲ್ಲ ಸಾರ್. ಎರಡು ಮೂರು ದಿನಗಳ ಹಿಂದೆ ಮರಿಗಳ್ನ ಹಾಕಿತ್ತು ಅನ್ಸುತ್ತೆ... ಪೊದೆಗಳ ಹಿಂದೆ ಅವೆಲ್ಲಾ ಚಿನ್ನಾಟ ಆಡ್ತಾ ಇದ್ವು... ಎಷ್ಟಾದ್ರೂ ತಾಯಿ ಅಲ್ವಾ... ಅವುಗಳನ್ನ ನಮ್ಮಿಂದ ಕಾಪಾಡೋಕೆ ಹಂಗೆ ಹೆದರಿಸ್ತು ಅಷ್ಟೆ...’ ಅಂತ ಸಮಜಾಯಿಷಿ ಕೊಟ್ಟ. ಇನ್ನೊಮ್ಮೆ ಕಾಡಮಧ್ಯದಲ್ಲಿ ಬಿಡಾರ ಹಾಕಿಕೊಂಡು ರಾತ್ರಿ ಕಳೆದಿದ್ದೆವು. ಮುಂಜಾವು ಇನ್ನೂ ಕಣ್ಣು ಬಿಟ್ಟಿರಲಿಲ್ಲ. ಸೆಂಟ್ರಿ ಡ್ಯೂಟಿಯಲ್ಲಿದ್ದ ಪಾಂಡು ಅವಸರದಿಂದ ಎಬ್ಬಿಸಿದ್ದ. ‘ಎಲ್ರೂ ಬೇಗ ಎದ್ದು ಹೊರಡ್ಬೇಕಾಯ್ತದೆ ಸಾರ್. ಹತ್ತಿರದಲ್ಲಿ ರೆಂಬೆಗಳು ಮುರಿಯೋ ಸದ್ದು ಕೇಳ್ತಿದೆ...

ಗಜಸವಾರಿ ಇತ್ತ ಕಡೆ ಹೊರಟಹಾಗಿದೆ’ ಅಂದಿದ್ದ. ಹಾಗನ್ನುತ್ತಿದ್ದಂತೆ ಎಲ್ಲರೂ ಸ್ಪ್ರಿಂಗಿನಂತೆ ಎದ್ದು ಕುಳಿತಿದ್ದೆವು. ನಿದ್ದೆಗಣ್ಣಿನಲ್ಲಿ ಎದ್ದು ನಸುಗತ್ತಲಲ್ಲೇ ದಾರಿ ಮಾಡಿಕೊಂಡು ಹೊರಟುಬಿಟ್ಟೆವು. ಸ್ವಲ್ಪ ದೂರದಲ್ಲೇ ಲಟಲಟನೆ ಕೊಂಬೆಗಳು ಮುರಿಯುತ್ತಿರುವ, ಆನೆಗಳು ಮರಕ್ಕೆ ಮೈ ಉಜ್ಜುವ ಸರಪರ ಸದ್ದು ಕಿವಿಗೆ ಬೀಳುತ್ತಿತ್ತು. ಹಾಗೆ ಆನೆಗಳಿಂದ ಪಾರಾಗಿ ಬಂದ ಸಂಗತಿಯನ್ನು ನಾನು ಮುಂದೆ ನಮ್ಮ ಇತರೆ ತಂಡಗಳ ಜೊತೆಗಾರರೊಂದಿಗೆ ಹಂಚಿಕೊಂಡಾಗ ಅವರು ‘ಇದೇನ್ ಸಾಹಸ ಬಿಡೋ ಮಾರಾಯಾ... ನೀವು ಅವುಗಳ ಕಣ್ಣಿಗೇ ಬಿದ್ದಿಲ್ಲ...

ನಾವು ಎಷ್ಟು ಬಾರಿ ಅವುಗಳ ಜೊತೆ ಮುಖಾಮುಖಿಯಾಗಿದ್ದೀವಿ... ನಮ್ಮ ಚಿದಾನಂದ ಸಾಹೇಬರ ತಂಡದವರು ಕಳೆದ ತಿಂಗಳಷ್ಟೆ ಅವುಗಳ ಕೈಗೆ ಸಿಕ್ಕಿ ಬಚಾವಾಗಿ ಬಂದಿದ್ದಾರೆ. ಬೆನ್ನಟ್ಟಿ ಬರುತ್ತಿದ್ದ ಅವುಗಳನ್ನು ಹೆದರಿಸಿ ಓಡಿಸಲು ಅವರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಬೇಕಾಯಿತಂತೆ...’ ಎಂದು ಹೇಳಿ ನನ್ನ ಆತಂಕವನ್ನು ದ್ವಿಗುಣಗೊಳಿಸಿದರು.
ಕಾರ್ಯಾಚರಣೆ ಅಂತ್ಯ ಕಾಣುವವರೆಗೆ ಅರಣ್ಯದಲ್ಲಿ ಯಾರೂ ಕ್ಷೇಮವಲ್ಲ ಎಂಬ ಸಂಗತಿ ನಮಗೆ ಗೊತ್ತಿತ್ತು.

ನಮಗಿಂತಲೂ ಹಿಂದೆ ಬಂದ ಎಷ್ಟೋ ಅಧಿಕಾರಿ ಸಿಬ್ಬಂದಿಗಳು ವೀರಪ್ಪನ್ ಆಟಾಟೋಪಕ್ಕೆ ಸಿಕ್ಕು ಪ್ರಾಣ ತೆತ್ತ ಅಥವಾ ಗಾಯಗೊಂಡ ಪ್ರಕರಣಗಳು ಕಣ್ಣ ಮುಂದೆಯೇ ಇದ್ದವು. ‘ವೀರಪ್ಪನ್ ಜೊತೆ ಕಾದಾಡಿ ಜೀವ ಬಿಟ್ರೆ ಒಂದ್ ತೂಕ ಇರ್ತದೆ ಸಾರ್... ಅಟ್‌ಲೀಸ್ಟು ಜನಗಳ ಕಣ್ಣಲ್ಲಿ ಹೀರೋ ಆದ್ರೂ ಆಗ್ತೀವಿ.

ಎಲ್ರೂ ನಮ್ಮ ಫೋಟೋ ನೋಡಿ ಸಲ್ಯೂಟ್ ಮಾಡ್ತಾರೆ. ಆದ್ರೆ ಈ ಹುಲಿ, ಸಿಂಹಗಳು ಬಂದು ನಮ್ಮುನ್ನ ತಿಂದ್ಕೊಂಡು ಹೋದ್ರೆ ಆ ಗೌರವವೂ ಸಿಕ್ಕಲ್ಲ... ನಮ್ಮ ಕುಟುಂಬಗಳಿಗೆ ಕಾಂಪೆನ್ಸೇಷನ್ನು ಸಿಕ್ಕಬೌದು ಅಷ್ಟೆ...’ ಅಂತ ಬನ್ನ ಹಗುರವಾಗಿ ಹೇಳಿಕೊಂಡು ನಗುತ್ತಿದ್ದ. ‘ಅದಿರಲಿ ಬನ್ನಾ... ಈ ಕಾಡೊಳಗೆ ಅನಿರೀಕ್ಷಿತವಾದದ್ದು ಘಟಿಸಿ ನಾವೆಲ್ಲಾ ಸತ್ತೋದ್ರೆ ಕನಿಷ್ಟ ಅದು ಹೊರಜಗತ್ತಿಗೆ ಗೊತ್ತಾಗ್ತದೋ ಇಲ್ವೋ..? ಮೊದ್ಲು ಅದು ಹೇಳು...’ ಎಂದು ನನ್ನ ಅಸಲಿ ಸಂಶಯವನ್ನು ಮುಂದಿಡುತ್ತಿದ್ದೆ.

ಹೇಳದೇ ಉಳಿದ ವಿಷಯ ಅಂದರೆ ಅದು ಕುಡಿವ ನೀರಿನದ್ದು. ಎಷ್ಟೇ ಬಾಟಲಿಗಳಲ್ಲಿ ನೀರು ತುಂಬಿಕೊಂಡು ಹೊರಟರೂ ಕೇವಲ ಒಂದೆರೆಡು ದಿನಗಳಲ್ಲಿ ನಮ್ಮ ನೀರಿನ ಸರಕು ಖಾಲಿಯಾಗಿಬಿಡುತ್ತಿತ್ತು. ಅಂತಹ ಸಮಯದಲ್ಲಿ ಕಾಡಿನೊಳಗೆ ಅಲ್ಲಲ್ಲಿ ಹರಿವ ಸಣ್ಣ ನೀರಿನ ತೊರೆಗಳನ್ನು ಆಶ್ರಯಿಸುತ್ತಿದ್ದೆವು.

ಕೆಲವು ಕಡೆ ನೀರು ನಿಜಕ್ಕೂ ಶುದ್ಧವಾಗಿರುತ್ತಿತ್ತು. ಸೋಸುವ ಅವಶ್ಯಕತೆಯೂ ಇರುತ್ತಿರಲಿಲ್ಲ. ಮತ್ತೆ ಕೆಲವು ಕಡೆ ಕುಡಿಯಲು ಅಷ್ಟೇನು ಸೂಕ್ತವಲ್ಲದ ನೀರಿನ ತಾಣಗಳು ಸಿಗುತ್ತಿದ್ದವು. ಆಯ್ಕೆ ಮಾಡುವ ಅವಕಾಶ ನಮಗಿರುತ್ತಿರಲಿಲ್ಲ. ಎರಡು ತುತ್ತು ಕಡಿಮೆ ತಿಂದರೂ ಕಾಲ ತಳ್ಳಬಹುದಾಗಿತ್ತು.

ಆದರೆ ನೀರಿಲ್ಲದೆ ನಮ್ಮ ಯಾವ ಆಟವೂ ನಡೆಯುತ್ತಿರಲಿಲ್ಲ. ಪ್ರತಿದಿನ ಕತ್ತಲು ಕವಿಯುವುದರೊಳಗಾಗಿ ಯಾವುದಾದರೊಂದು ನೀರಿನ ತಾಣವನ್ನು ಹುಡುಕಿಕೊಳ್ಳಲೇಬೇಕಾಗುತ್ತಿತ್ತು. ನೀರು ಶುದ್ಧ ಆಗಿಲ್ಲದಿದ್ದರೆ ನಮ್ಮ ಬನೀನುಗಳನ್ನೇ ಜೊತೆಗಿರುತ್ತಿದ್ದ ಸಣ್ಣ ಬಿಂದಿಗೆಯ ಬಾಯಿಗೆ ಕಟ್ಟಿ ಎರಡೆರೆಡು ಬಾರಿ ಸೋಸುತ್ತಿದ್ದೆವು. ಆದರೆ ನೀರಿನೊಳಗಿನ ಬ್ಯಾಕ್ಟೀರಿಯಾಗಳನ್ನು ನಮ್ಮ ಬನೀನಿಗೆ ಫಿಲ್ಟರು ಮಾಡಲು ಆಗುತ್ತಿತ್ತಾ?

ಹಾಗಾಗಿಯೇ ರಜ ಪಡೆದು ನಗರಕ್ಕೆ ಬಂದಾಗೊಮ್ಮೆ ಜ್ವರ ಕಾಣಿಸಿಕೊಂಡಂತಾಗಿ ವೈದ್ಯರ ಬಳಿ ಹೋದೆ. ಕಾಡಿನಲ್ಲಿ ಕಚ್ಚಿಸಿಕೊಂಡ ಸೊಳ್ಳೆಗಳ ಸಂಖ್ಯೆಯೇನು ಕಡಿಮೆಯಿರಲಿಲ್ಲ. ಕುಡಿದಿದ್ದ ತೊರೆ ನೀರುಗಳಿಗೆ ಕೊನೆಯಿರಲಿಲ್ಲ. ಪರೀಕ್ಷೆ ಮಾಡಿದ ವೈದ್ಯರು ಹೇಳಿದರು.

‘ಸ್ವಾಮಿ, ನಿಮಗೆ ಬಂದಿರೋದು ಜಾಂಡೀಸು ಎನ್ನುವ ರೋಗ... ಮೊದಲು ಬ್ಲಡ್ ಟೆಸ್ಟು ಮಾಡಿಸಿ, ಹೆಪಟೈಟಿಸ್ ಬಿ ಅಂತ ರಿಪೋರ್ಟು ಬಂದ್ರೆ ದೊಡ್ಡ ಸಮಸ್ಯೆಯೊಂದು ಶುರುವಾಗ್ತದೆ... ಅದಿಲ್ಲ ಅಂದ್ರೆ ಅಟ್ಲೀಸ್ಟು ಟ್ರೀಟುಮೆಂಟು ಮಾಡಿ ಗುಣ ಮಾಡ್ಬಹುದು. ನೀವೇನಾದ್ರೂ ನೆಗ್‌ಲೆಕ್ಟು ಮಾಡಿ ಮತ್ತೆ ಕಾಡಿನ ಕಡೆ ಮುಖ ಮಾಡಿದಿರೆಂದರೆ ಹುಲಿ, ಸಿಂಹ, ವೀರಪ್ಪನ್‌ಗಳ್ಯಾವುದೂ ಬೇಡ. ಈ ಕಾಯಿಲೇನೇ ಸಾಕು, ನಿಮ್ಮನ್ನ ತಿಂದುಹಾಕಿಬಿಡುತ್ತೆ...’ ಅಂದರು.

ನಾನೊಬ್ಬನೇನಾ ಕಾಡಿಗೆ ಹೋದವನು? ಅಲ್ಲಿ ಹರಿಯೋ ನೀರು ಕುಡಿದವನು? ಸೊಳ್ಳೆ, ಜಿಗಣೆಗಳಿಗೆ ಮೈಒಡ್ಡಿ ಕಚ್ಚಿಸಿಕೊಂಡವನು? ಎಲ್ಲರೂ ಹೇಗಿದ್ದರೋ ನಾನೂ ಹಾಗೆಯೇ ಇದ್ದೆ. ಜಾಂಡೀಸು ಬರುವುದಿದ್ದರೆ ಎಲ್ಲರಿಗೂ ಬರಬೇಕಿತ್ತಲ್ವಾ? ಅನ್ನುವ ನನ್ನ ವಿತಂಡವಾದ ರಕ್ತ ಪರೀಕ್ಷೆಯ ವರದಿ ಬರುತ್ತಿದ್ದಂತೆ ಹುದುಗಿಹೋಯಿತು.

ಜಾಂಡೀಸು ಹತ್ತಿರುವುದು ಖಚಿತವಾಗಿತ್ತು. ಅದೃಷ್ಟಕ್ಕೆ ವೈದ್ಯರು ಹೇಳಿದಂತೆ ಮಾರಕ ರೋಗವಾಗಿರಲಿಲ್ಲ. ಎರಡು ತಿಂಗಳು ಹಾಸಿಗೆ ಬಿಟ್ಟು ಮೇಲೇಳದಂತೆ ಮಾಡಿದ ಆ ಜಿಗುಟು ರೋಗದಿಂದ ನಾನು ಮುಕ್ತನಾಗುವಷ್ಟರಲ್ಲಿ ಮಲೆಮಾದೇಶ್ವರ ಕಾಡು ನರಹಂತಕ ವೀರಪ್ಪನ್‌ನನ್ನು ಕೊಡವಿಕೊಂಡು ಮುಕ್ತವಾಗಿಬಿಟ್ಟಿತ್ತು! ನಾನು ಮರಳಿ ಕಾಡು ಸೇರುವುದರೊಳಗೆ ಇಡೀ ಕಾರ್ಯಾಚರಣೆ ಪಡೆಯೇ ವಿಜಯೋತ್ಸವದಲ್ಲಿ ಮುಳುಗಿಹೋಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT