ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ಟಿಲುಗಳಿಲ್ಲದ ದುರ್ಗ ಹತ್ತುವ ಸವಾಲು

Last Updated 11 ಜುಲೈ 2014, 19:30 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ ತಾಲ್ಲೂಕಿನ ಪ್ರಸಿದ್ಧ ಬೆಟ್ಟಗಳಲ್ಲಿ ಒಂದಾಗಿರುವ ಮಾಕಳಿ ದುರ್ಗ ಅಥವಾ ದೊಡ್ಡಬೆಟ್ಟ ಶಿವನ ಭಕ್ತರಿಗೆ ಹಾಗೂ ಚಾರಣಪ್ರಿಯರಿಗೆ ಅಚ್ಚುಮೆಚ್ಚಿನ ತಾಣ. ಇದು ಬೆಂಗಳೂರಿನಿಂದ 52 ಕಿ.ಮೀ ದೂರದಲ್ಲಿದೆ. ಬೆಂಗಳೂರಿನ ಕೆಂಪೇಗೌಡ ಬಸ್‌ ನಿಲ್ದಾಣದಿಂದ ದೊಡ್ಡಬಳ್ಳಾಪುರ ಮಾರ್ಗವಾಗಿ ಗೌರಿಬಿದನೂರಿಗೆ ಹೋಗುವ ಎಲ್ಲ ಬಸ್ಸುಗಳು ಮಾಕಳಿ ಬೆಟ್ಟದ ತಪ್ಪಲಿನ ಮೂಲಕವೇ ಹೋಗುತ್ತವೆ. ಬೆಂಗಳೂರಿನಿಂದ ಒಂದೂವರೆ ಗಂಟೆ ಪ್ರಯಾಣವಷ್ಟೆ. 

ದೊಡ್ಡಬಳ್ಳಾಪುರ ತಾಲ್ಲೂಕಿನ ಸಾಸಲು ಹೋಬಳಿಯ ಗುಂಡಮಗೆರೆ ಸಮೀಪದ ಮಾಕಳಿ ಬೆಟ್ಟಕ್ಕೆ ಹತ್ತಲು ಯಾವುದೇ ಮೆಟ್ಟಿಲುಗಳ ಸೌಲಭ್ಯ ಇಲ್ಲ. ಹೆಚ್ಚುಕಮ್ಮಿ ೨.೫ ಕಿಲೋ ಮೀಟರ್ ಎತ್ತರದ ಈ ಬೆಟ್ಟವನ್ನು ಒಂದೂವರೆ ಗಂಟೆ ಸಮಯದಲ್ಲಿ ಹತ್ತಬಹುದು. ಅಷ್ಟೇನೂ ಕಡಿದಾಗಿಲ್ಲ. ಗುಂಡಮಗೆರೆ ಗ್ರಾಮದ ಕಡೆಯಿಂದ ಬೆಟ್ಟಕ್ಕೆ ಹತ್ತಲು ಸುಲಭವಾದ ಕಾಲು ದಾರಿ ಇದೆ. ಬೆಟ್ಟಕ್ಕೆ ಹತ್ತುವಾಗ ನವಿಲು, ನರಿ, ಕಾಡು ಕೋಳಿ, ಮೊಲ ಸೇರಿದಂತೆ ಸಣ್ಣಪುಟ್ಟ ಕಾಡು ಪ್ರಾಣಿಗಳು ಕಣ್ಣಿಗೆ ಬೀಳುತ್ತವೆ.

ಬೆಟ್ಟದ ಮೇಲೆ ಪಾಳೆಗಾರರ ಕಾಲದಲ್ಲಿ ನಿರ್ಮಿಸಲಾಗಿರುವ ಕೋಟೆ ಇತ್ತಾದರೂ, ಈಗ ನಾಶವಾಗಿದೆ. ಮಳೆ ಬಂದರೆ ರಕ್ಷಣೆ ಪಡೆಯಲು ಹಾಗೂ ಅಡುಗೆ ಮಾಡಿಕೊಂಡು ಕುಳಿತು ಊಟ ಮಾಡಲು ಒಂದಿಷ್ಟು ಸ್ಥಳಾವಕಾಶವಿದೆ. 

ಕೋಟೆಯ ಒಳ ಭಾಗದಲ್ಲೇ ಕುಡಿಯುವ ನೀರಿಗಾಗಿ ಬಂಡೆಗಳ ಮಧ್ಯದಲ್ಲೇ ನಿರ್ಮಿಸಲಾಗಿರುವ ಹಾಲು ಬಾವಿ, ನೀರು ಬಾವಿ ಹೆಸರಿನ ಎರಡು ಕೊಳಗಳು ಇವೆ. ಇವಲ್ಲದೆ ಕೋಟೆಯ ಹೊರ ಭಾಗದ ಬೃಹತ್ ಬಂಡೆಯಲ್ಲಿ ಹನುಮನ ದೊಣೆ ಕೂಡ ಇದೆ. ಈ ದೊಣೆಯಲ್ಲಿ ಬೇಸಿಗೆ, ಮಳೆಗಾಲ ಸೇರಿದಂತೆ, ಬರಗಾಲದಲ್ಲೂ ಸಹ ನೀರು ಇದ್ದೇ ಇರುತ್ತದೆ.

ಕಾರ್ತೀಕ ಮಾಸ ಹಾಗೂ ಮಹಾ ಶಿವರಾತ್ರಿ ಸಂದರ್ಭಗಳಲ್ಲಿ ಕಾಡುಮಲ್ಲೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಈ ಸಂದರ್ಭದಲ್ಲಿ ಮಾಕಳಿ ಬೆಟ್ಟದಲ್ಲಿ ತಾಲ್ಲೂಕಿನ ಜನರಷ್ಟೇ ಅಲ್ಲದೆ ದೂರದ ತುಮಕೂರು, ಗೌರಿಬಿದನೂರು, ಬೆಂಗಳೂರು ಸೇರಿದಂತೆ ಹತ್ತಾರು ಕಡೆಗಳಿಂದ ಸಾವಿರಾರು ಜನ ಶಿವಭಕ್ತರು ಕಾಡುಮಲ್ಲೇಶ್ವರನ ದರ್ಶನಕ್ಕೆ ಆಗಮಿಸುತ್ತಾರೆ.
ಮಾಕಳಿ ದುರ್ಗದಲ್ಲಿ ಒಂದು ರಾತ್ರಿ ತಂಗಿದರೆ ಮಾತ್ರ ಪ್ರಕೃತಿ ಸೌಂದರ್ಯದ ಸವಿಯನ್ನು ಕಣ್ಣು ತುಂಬಿಕೊಳ್ಳಬಹುದು. ಬೆಳಿಗ್ಗೆ ಸೂರ್ಯ ಉದಯಿಸುವ ಸಮಯ ಹಾಗೂ ಮಾಕಳಿ ದುರ್ಗದ ಸುತ್ತಲಿನ ಬೆಟ್ಟಗಳ ಸಾಲಿನಿಂದ ಕೇಳಿ ಬರುವ ನವಿಲುಗಳ ಕೂಗು ಚಾರಣಿಗರಿಗೆ ಕಚಗುಳಿಯಿಡುತ್ತದೆ.

ಚಾರಣಿಗರಿಗೆ ಬೆಟ್ಟದ ಮೇಲೆ ಕುಡಿಯಲು ನೀರು, ಉಳಿದುಕೊಳ್ಳಲು ಕೋಟೆ, ಒಳಗೊಂದಿಷ್ಟು ಜಾಗ ಸಿಗುತ್ತದಷ್ಟೆ. ಅಡುಗೆ ಮಾಡಿಕೊಳ್ಳಲು ಅಗತ್ಯ ಸಾಮಗ್ರಿಗಳನ್ನು ಕೊಂಡೊಯ್ಯಬೇಕು. ರಾತ್ರಿ ತಂಗುವುದಿದ್ದರೆ ಬೆಳಕಿಗಾಗಿ ಮೇಣದ ಬತ್ತಿ ಅಥವಾ ಚಾರ್ಜರ್‌ ಬ್ಯಾಟರಿಗಳನ್ನು ತೆಗೆದುಕೊಂಡು ಹೋದರೆ ಒಳಿತು. ಬೆಟ್ಟದ ಮೇಲೆ ವಿದ್ಯುತ್ ಸೌಲಭ್ಯ ಇಲ್ಲ.

ಮಾಕಳಿ ದುರ್ಗ ಬೆಟ್ಟಕ್ಕೆ ಚಾರಣ ಹೋಗಲು ಇಂತಹದ್ದೇ ಕಾಲ ಸೂಕ್ತ ಎನ್ನುವಂತೇನೂ ಇಲ್ಲ. ಮಳೆಗಾಲ, ಚಳಿಗಾಲ ಬೇಸಿಗೆ ಯಾವುದೇ ಸಮಯದಲ್ಲಿ ಚಾರಣ ಹೊರಟರೂ ಭಿನ್ನ ರೀತಿಯ ಅನುಭವಗಳನ್ನು ಪಡೆಯಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT