ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ ಕೆಲಸ ತಡವಾಗಿದೆ ನಿಜ. ಆದರೆ...

ವಾರದ ಸಂದರ್ಶನ - ಕೆ.ಜೆ.ಜಾರ್ಜ್‌ ಬೆಂಗಳೂರು ಅಭಿವೃದ್ಧಿ ಸಚಿವ
Last Updated 21 ನವೆಂಬರ್ 2015, 19:59 IST
ಅಕ್ಷರ ಗಾತ್ರ

ರಾಜಧಾನಿ ಎದುರಿಸುತ್ತಿರುವ ಸಂಚಾರ ದಟ್ಟಣೆ ಸಮಸ್ಯೆಯನ್ನು ನೀಗಿಸಲು ಸುರಂಗ ರಸ್ತೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುತ್ತಿದೆ ಎನ್ನುತ್ತಾರೆ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌. ನಗರದ ಅಭಿವೃದ್ಧಿ ಹೊಣೆ ಹೊತ್ತಿರುವ ಅವರು, ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ:

* ಬಹಳ ವರ್ಷಗಳ ಬಳಿಕ ಬೆಂಗಳೂರು ನಗರದ ಅಭಿವೃದ್ಧಿಗೆ ಪ್ರತ್ಯೇಕ ಸಚಿವರು ಸಿಕ್ಕಿದ್ದಾರೆ. ಆ ಹೊಣೆ ಹೊತ್ತಿರುವ ತಮ್ಮಿಂದ ನಗರದ ಜನ ಬದಲಾವಣೆಯನ್ನು ನಿರೀಕ್ಷಿಸಬಹುದೆ?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಬಿಎಂಪಿ ಚುನಾವಣೆ ಸಂದರ್ಭದಲ್ಲಿ ಕೊಟ್ಟ ಮಾತಿನಂತೆ ಬೆಂಗಳೂರು ಅಭಿವೃದ್ಧಿಗೆ ಪ್ರತ್ಯೇಕ ಸಚಿವರ ವ್ಯವಸ್ಥೆ ಮಾಡಿದ್ದಾರೆ. ಆ ಹೊಣೆಯನ್ನು ನನಗೆ ವಹಿಸಿದ್ದಾರೆ. ನಗರ ಪ್ರದಕ್ಷಿಣೆ ಸಂದರ್ಭದಲ್ಲಿ ರಾಜಧಾನಿಯ ಗುರುತರ ಸಮಸ್ಯೆಗಳೆಲ್ಲ ಅವರ ಗಮನಕ್ಕೆ ಬಂದಿವೆ. ಅಂತಹ ಸಮಸ್ಯೆಗಳಿಗೆ ಪರಿಹಾರವಾಗಿ ಹಲವು ಯೋಜನೆಗಳನ್ನೂ ರೂಪಿಸಿದ್ದಾರೆ. ಹೀಗಾಗಿ ನಗರದ ಅಭಿವೃದ್ಧಿಗೆ ಈಗ ಮಾರ್ಗನಕ್ಷೆಯೊಂದು ಸಿದ್ಧವಾಗಿದೆ. ಅದರ ತ್ವರಿತಗತಿ ಅನುಷ್ಠಾನಕ್ಕೆ ಯತ್ನಿಸಲಿದ್ದೇನೆ.

* ಗಬ್ಬುನಾರುವ ತ್ಯಾಜ್ಯ, ಮಿತಿಮೀರಿದ ರಸ್ತೆ ಗುಂಡಿ ಹಾಗೂ ನೀರಿನ ಅಭಾವ–ಇಷ್ಟೇ ನಗರದ ಪ್ರಮುಖ ಸಮಸ್ಯೆಗಳು. ಅವುಗಳಿಂದ ಮುಕ್ತಿ ಹೊಂದಲು ಇನ್ನೆಷ್ಟು ವರ್ಷಗಳವರೆಗೆ ಕಾಯಬೇಕು?
1990ರ ದಶಕದಲ್ಲಿ ನಾನು ಸಚಿವನಾದಾಗ ಬೆಂಗಳೂರಿನ ಜನಸಂಖ್ಯೆ ಬರಿ 40 ಲಕ್ಷ ಇತ್ತು. ಈಗ ಜನಸಂಖ್ಯೆ ಕೋಟಿಗಿಂತ ಹೆಚ್ಚಾಗಿದೆ. ಅಂಕೆಗೆ ಸಿಗದಷ್ಟು ವೇಗದಲ್ಲಿ ನಗರ ಬೆಳೆದಿದೆ. ಆ ವೇಗಕ್ಕೆ ತಕ್ಕಂತೆ ಸೌಲಭ್ಯ ಕಲ್ಪಿಸುವ ಕೆಲಸಗಳು ಆಗಿಲ್ಲ. ಕಸವನ್ನು ಭೂಭರ್ತಿ ಘಟಕಗಳಲ್ಲಿ ಸುರಿಯಲಾಯಿತೇ ಹೊರತು ಸಂಸ್ಕರಣೆ ಕಡೆಗೆ ಗಮನಹರಿಸಲಿಲ್ಲ. ಅದರ ಬಿಸಿ ಈಗ ತಟ್ಟುತ್ತಿದೆ.

ಆಗಿರುವ ಲೋಪಗಳನ್ನು ಸರಿಪಡಿಸುವ ದಾರಿಯಲ್ಲಿ ಪ್ರತಿದಿನ 2,350 ಟನ್‌ ತ್ಯಾಜ್ಯ ಸಂಸ್ಕರಣೆಗೆ ವ್ಯವಸ್ಥೆ ಮಾಡಲಾಗಿದೆ. ಆರು ಘಟಕಗಳು ಕಾರ್ಯಾರಂಭ ಮಾಡಿದ್ದು, ಲಿಂಗಬೀರನಹಳ್ಳಿ ಘಟಕದ ಕಾರ್ಯಾಚರಣೆಗೆ ಮಾತ್ರ ನ್ಯಾಯಾಲಯದ ತಡೆಯಾಜ್ಞೆ ಇದೆ. ಸತಾರೆಮ್‌ ಇಂಡಿಯಾ ಸಂಸ್ಥೆ ನಿತ್ಯ ಸಾವಿರ ಟನ್‌ ಕಸ ಸಂಸ್ಕರಣೆ ಘಟಕ ಹಾಕುತ್ತಿದೆ. ಎದುರಾಗಿರುವ ವಿರೋಧ ಶಮನ ಮಾಡಲು ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಆಗುತ್ತಿದೆ. ನೆದರ್ಲೆಂಡ್‌ ಸಂಸ್ಥೆ ಜತೆಗೂ ಕಸ ಸಂಸ್ಕರಣೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಯೋಜನೆಗಳ ಫಲಶ್ರುತಿ ಎದ್ದುಕಾಣಲು ಕನಿಷ್ಠ ಇನ್ನೊಂದು ವರ್ಷ ಬೇಕು.

ಇನ್ನು ರಸ್ತೆ ಗುಂಡಿಗಳ ಸಮಸ್ಯೆ. ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಬಿಬಿಎಂಪಿ ಅಸಹಾಯಕವಾಗಿದೆ. ಮಳೆ ಬಿಡುವು ನೀಡಿದ ಕ್ಷಣವೇ ದುರಸ್ತಿ ಕಾರ್ಯ ಆರಂಭವಾಗಲಿದೆ. ಗುಣಮಟ್ಟದ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ವರ್ಷಾಂತ್ಯದ ವೇಳೆಗೆ ನೀರು ಸೋರಿಕೆ ಪ್ರಮಾಣವನ್ನು ಶೇ 20ಕ್ಕೆ ಇಳಿಸಿ, ನೀರಿನ ಕೊರತೆಯನ್ನೂ ನೀಗಿಸಲಿದ್ದೇವೆ.

* ರಸ್ತೆ ಗುಂಡಿಗಳನ್ನು ಮುಚ್ಚುವ ಕಾಮಗಾರಿಯಲ್ಲಿ ವ್ಯಾಪಕಭ್ರಷ್ಟಾಚಾರದ ಆರೋಪ ಕೇಳಿಬಂದಿದೆಯಲ್ಲ?
ರಸ್ತೆ ದುರಸ್ತಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಭ್ರಷ್ಟಾಚಾರದ ಆರೋಪ ಬಂದ ಕೂಡಲೇ ಬಿಬಿಎಂಪಿ ಆಯುಕ್ತರ ಜತೆ ಮಾತನಾಡಿದ್ದೇನೆ. ರಸ್ತೆ ಗುಂಡಿಗಳ ಹೆಸರಿನಲ್ಲಿ ಹಣವೇನೂ ಪೋಲಾಗಿಲ್ಲ. ಅದೆಲ್ಲ ಸುಳ್ಳು ಆಪಾದನೆ. ಆಯುಕ್ತರಿಗೂ ಈ ಸಂಬಂಧ ಪ್ರತಿಕ್ರಿಯಿಸಲು ಸೂಚಿಸಿದ್ದೇನೆ.

* ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆಗೂ ಕಸದ ಸಮಸ್ಯೆ ಹೆಚ್ಚಳಕ್ಕೂ ಏನಕೇನ ಸಂಬಂಧ ಇದೆಯೆ?
ರಾಮಲಿಂಗಾ ರೆಡ್ಡಿ ಅವರು ನನ್ನ ಆಪ್ತ ಸ್ನೇಹಿತರು. ನಾವು ಪರಸ್ಪರ ಸಹಕಾರದಿಂದ ಕೆಲಸ ಮಾಡುತ್ತಿದ್ದೇವೆ. ಬೆಂಗಳೂರಿಗೆ ಪ್ರತ್ಯೇಕ ಸಚಿವ ಸ್ಥಾನ ಸೃಷ್ಟಿಸಿದ್ದರಿಂದ ಉಸ್ತುವಾರಿ ಹೊಣೆ ಬದಲಾಗಿದೆಯೇ ಹೊರತು ಅನ್ಯ ಉದ್ದೇಶದಿಂದಲ್ಲ.

ನಾನು ಬೆಂಗಳೂರು ಅಭಿವೃದ್ಧಿ ಸಚಿವನಾಗಿ ಅಧಿಕಾರ ವಹಿಸಿಕೊಂಡ ಸಂದರ್ಭ ಕ್ಲಿಷ್ಟಕರವಾಗಿತ್ತು. ಮಳೆಯ ಕಾಟ ಶುರುವಾಗಿತ್ತು. ಹಬ್ಬಗಳಿಂದ ಕಸದ ಪ್ರಮಾಣ ಹೆಚ್ಚಿತ್ತು. ಟೆರ್ರಾಫರ್ಮಾ ಘಟಕದಲ್ಲಿ ಹೆಚ್ಚಿನ ತ್ಯಾಜ್ಯ ಸಂಗ್ರಹ ಆಗಿತ್ತು. ಎಲ್ಲಿ ಮಂಡೂರಿನಂತಹ ಸಮಸ್ಯೆ ಎದುರಾಗುವುದೋ ಎಂಬ ಭೀತಿಯಿಂದ ಕಸದ ಘಟಕಗಳಿರುವ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು.

ಗ್ರಾಮಸ್ಥರ ಆತಂಕವನ್ನು ನಿವಾರಣೆ ಮಾಡಲಾಗುತ್ತಿದೆ. ಯುರೋಪಿನಲ್ಲಿ ನಗರದ ಮಧ್ಯದಲ್ಲೇ ಕಸ ಸಂಸ್ಕರಣೆ ಘಟಕಗಳಿವೆ. ಅವು ಗಬ್ಬುವಾಸನೆ ಸೂಸುವುದಿಲ್ಲ. ವಾತಾವರಣ ಕೆಡಿಸುವುದಿಲ್ಲ. ಅಂತಹ ವ್ಯವಸ್ಥೆಯನ್ನು ಇಲ್ಲಿಯೂ ಸೃಷ್ಟಿಸಲಿದ್ದೇವೆ.

* ಬಿಬಿಎಂಪಿ, ಬಿಡಿಎ, ಬಿಎಂಆರ್‌ಡಿಎ, ಬೆಸ್ಕಾಂ, ಜಲಮಂಡಳಿ ಯೋಜನೆಗಳನ್ನು ಒಂದಕ್ಕೊಂದು ಪೂರಕವಾಗಿ ಅನುಷ್ಠಾನಕ್ಕೆ ತರುವುದೆಂದರೆ ಒಂದು ರೀತಿಯಲ್ಲಿ ಕಪ್ಪೆಗಳನ್ನು ತೂಗಿದಂತೆ. ಅವುಗಳ ಮಧ್ಯೆ ಸಮನ್ವಯ ಸಾಧಿಸುವುದು ಸಾಧ್ಯವೆ?
ಸ್ವತಃ ಮುಖ್ಯಮಂತ್ರಿಯವರು ಸಮನ್ವಯದ ಕೊರತೆಯನ್ನು ಗಮನಿಸಿದ್ದಾರೆ. ಅವರ ಸೂಚನೆ ಮೇರೆಗೆ ಈಗ ಪ್ರತಿ 15 ದಿನಕ್ಕೊಮ್ಮೆ ಎಲ್ಲ ಅಧಿಕಾರಿಗಳು ಸಭೆ ಸೇರಿ ಸಹಕಾರದಿಂದ ಕೆಲಸ ಮಾಡಲು ಆರಂಭಿಸಿದ್ದಾರೆ. ಪರಸ್ಪರ ಪೂರಕವಾಗಿ ಕೆಲಸ ಮಾಡಲು ಅನುಕೂಲ ಆಗುವಂತೆ ಸಾಫ್ಟ್‌ವೇರ್‌ ರೂಪಿಸಲಾಗಿದೆ. ಹಿಂದಿದ್ದ ಸಮಸ್ಯೆಗಳು ಮುಂದಿನ ದಿನಗಳಲ್ಲಿ ಇರುವುದಿಲ್ಲ ಬಿಡಿ.

* ವಿಧಾನಸಭೆ ಚುನಾವಣೆ ಕಾಲಕ್ಕೆ ಕಾಂಗ್ರೆಸ್‌ ಪಕ್ಷ ಬೆಂಗಳೂರಿನಲ್ಲಿ ಸ್ವರ್ಗವನ್ನೇ ನಿರ್ಮಾಣ ಮಾಡುವಂತಹ ಭರವಸೆಗಳನ್ನು ನೀಡಿತ್ತು. ನಿಮ್ಮ ಪಕ್ಷ ಅಧಿಕಾರಕ್ಕೆ ಬಂದ ಎರಡೂವರೆ ವರ್ಷಗಳ ನಂತರವೂ ಜನರ ನರಕಯಾತನೆ ತಪ್ಪಿಲ್ಲವಲ್ಲ?
ಹೌದು, ಚೀನಾ, ಸಿಂಗಪುರದಂತೆ ನಮ್ಮಲ್ಲಿ ವೇಗವಾಗಿ ಕೆಲಸಗಳು ಆಗುವುದಿಲ್ಲ. ಅದಕ್ಕೆ ಕಾರಣ ನಮ್ಮಲ್ಲಿನ ವ್ಯವಸ್ಥೆ. ಅಲ್ಲಿನ ಸರ್ಕಾರಗಳು ನಿರ್ಣಯ ಕೈಗೊಂಡರೆ ಯಾರೂ ಪ್ರಶ್ನೆ ಮಾಡುವುದಿಲ್ಲ. ವೇಗವಾದ ಅನುಷ್ಠಾನವಷ್ಟೇ ಬಾಕಿ ಉಳಿದ ಕೆಲಸ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಂಗದ ಆದೇಶ ಪಾಲಿಸುವ ಜತೆಗೆ, ಸರ್ಕಾರೇತರ ಸಂಸ್ಥೆಗಳು, ಮಾಧ್ಯಮಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದೆ ಹೆಜ್ಜೆ ಹಾಕಬೇಕು. ಸರಿ–ತಪ್ಪುಗಳನ್ನು ಅವಲೋಕಿಸಬೇಕು. ಯೋಜನೆಗಳ ಅನುಷ್ಠಾನದ ಹಂತದಲ್ಲಿ ಹಲವು ಪ್ರಕ್ರಿಯೆ ಪೂರೈಸಬೇಕು. ಹೀಗಾಗಿ ಅಭಿವೃದ್ಧಿ ವೇಗ ನಿಧಾನವಾಗಿದೆ.

* ಬಿಬಿಎಂಪಿಯಲ್ಲಿ ಬಿಜೆಪಿ ಆಡಳಿತವಿದ್ದಾಗ ಅದರ ವಿಭಜನೆಗೆ ಮೇರೆ ಮೀರಿದ ಉತ್ಸಾಹ ತೋರಿದ್ದ ಸರ್ಕಾರ, ಬಿಬಿಎಂಪಿಯಲ್ಲಿ ಕಾಂಗ್ರೆಸ್‌ಗೆ ಅಧಿಕಾರ ಸಿಕ್ಕಮೇಲೆ ಜಾಣಮೌನ ವಹಿಸಿದ್ದು ಏಕೆ?
ಬಿಬಿಎಂಪಿ ವಿಭಜನೆ ಮಸೂದೆ ರಾಜ್ಯಪಾಲರ ಮೂಲಕ ರಾಷ್ಟ್ರಪತಿ ಅವರ ಅವಗಾಹನೆಗೆ ಹೋಗಿದೆ. ಅಲ್ಲಿಂದ ಏನು ಸಂದೇಶ ಬರುವುದೋ ನೋಡೋಣ. ರಾಜಕೀಯ ಪಕ್ಷಗಳಿವೆ, ಚುನಾಯಿತ ಕೌನ್ಸಿಲ್‌ ಇದೆ. ಎಲ್ಲರೊಂದಿಗೆ ಕುಳಿತು, ಚರ್ಚಿಸಿ, ಒಂದು ನಿರ್ಧಾರಕ್ಕೆ ಬರುವುದು ಸರ್ಕಾರದ ನಿಲುವಾಗಿದೆ.

* ಬಿಬಿಎಂಪಿ–ಬಿಡಿಎಯಲ್ಲಿ ನಡೆದ ಹಗರಣಗಳನ್ನು ಜನ ಮರೆತುಬಿಡಬೇಕೆ? ಇಲ್ಲವೆ ತನಿಖೆಗೆ ಚುರುಕು ಮುಟ್ಟಿಸಿ ವಾಸ್ತವ ಸಂಗತಿಯನ್ನು ಬಯಲು ಮಾಡಲಾಗುವುದೆ?
ಲೋಕಾಯುಕ್ತ, ಸಿಐಡಿ, ಬಿಎಂಟಿಎಫ್‌ ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳು ಅಲ್ಲಿನ ಹಗರಣಗಳ ತನಿಖೆ ನಡೆಸುತ್ತಿವೆ. ಸರ್ಕಾರ ಯಾವುದರಲ್ಲೂ ಮಧ್ಯ ಪ್ರವೇಶ ಮಾಡುವುದಿಲ್ಲ. ತಪ್ಪು ಮಾಡಿದ್ದು ಸಾಬೀತಾದರೆ ಅಂಥವರು ಸಹಜವಾಗಿಯೇ ಶಿಕ್ಷೆ ಅನುಭವಿಸಲಿದ್ದಾರೆ. ಈ ಸಂಸ್ಥೆಗಳು ಒಳ್ಳೆಯ ಕೆಲಸವನ್ನೂ ಮಾಡಿವೆ. ಆದರೆ, ಹಗರಣಗಳಿಂದ ಅವುಗಳೆಲ್ಲ ಮಸುಕಾಗಿವೆ.

* ಬೆಂಗಳೂರು ಮೆಟ್ರೊ ಕಾಮಗಾರಿ ಗುಣಮಟ್ಟದ ಕುರಿತು ಅಪಸ್ವರ ಎದ್ದಿದೆ. ಕೆಲಸವೂ ನಿಧಾನಗತಿಯಲ್ಲಿ ಸಾಗಿದೆಯಲ್ಲ?
ಕೆಲಸ ನಿಧಾನವಾಗಿದ್ದು ನಿಜ. ಈ ಕುರಿತು ನಾನು ಯಾರನ್ನೂ ದೂರುವುದಿಲ್ಲ. ಆದರೆ, ಕಾಮಗಾರಿ ಗುಣಮಟ್ಟ ಕಳಪೆ ಎಂಬುದನ್ನು ನಾನು ಒಪ್ಪುವುದಿಲ್ಲ. ಇಂತಹ ಸಾಮಾನ್ಯೀಕೃತ ಆರೋಪಗಳಿಗೆ ಪ್ರತಿಕ್ರಿಯಿಸುವುದು ಏನಿದೆ? ಮೆಟ್ರೊ ಸೇವೆ ಶೀಘ್ರ ಎಲ್ಲ ಭಾಗಕ್ಕೂ ಸಿಗುವಂತೆ ನಿರಂತರವಾಗಿ ಒತ್ತಡ ಹೇರಿ ಕೆಲಸ ಮಾಡಿಸುತ್ತೇನೆ.

* ಬೆಳ್ಳಂದೂರು–ವರ್ತೂರು ಕೆರೆಗಳ ನೊರೆ ಹಾವಳಿಗೆ ಮುಕ್ತಿ ಎಂದು?
ನೊರೆ ತಡೆಗಟ್ಟಲು ಈಗ ತಾತ್ಕಾಲಿಕ ವ್ಯವಸ್ಥೆ ಮಾಡುತ್ತಿದ್ದೇವೆ. ಶಾಶ್ವತ ಪರಿಹಾರಕ್ಕೆ ನೀರು ಸಂಸ್ಕರಣಾ ಘಟಕಗಳ ಸ್ಥಾಪನೆ ಮಾಡಲಿದ್ದೇವೆ. ಅದಕ್ಕೆ ಸಹಜವಾಗಿಯೇ ಕಾಲಾವಕಾಶ ಅಗತ್ಯವಾಗಿದೆ.

* ಕೆಪಿಸಿಸಿ ಅಧ್ಯಕ್ಷರು ನಿಮ್ಮ ಹುದ್ದೆಯನ್ನು ಕಿತ್ತುಕೊಂಡರು ಎನ್ನುವ ಮಾತಿದೆ. ನಿಮ್ಮದು ಹಿಂಬಡ್ತಿಯೋ, ಮುಂಬಡ್ತಿಯೋ?
ನಾನು ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತನಾಗಿದ್ದ ದಿನಗಳಲ್ಲಿ ಶಾಸಕ ಅಥವಾ ಸಚಿವ ಆಗುತ್ತೇನೆ ಎಂದು ಎಣಿಸಿರಲಿಲ್ಲ. ಎಲ್ಲವೂ ಪಕ್ಷ ನೀಡಿದ ಕೊಡುಗೆ. ನಾಯಕರು ವಹಿಸಿದ ಜವಾಬ್ದಾರಿ ನಿಭಾಯಿಸುವುದಷ್ಟೇ ನನ್ನ ಕೆಲಸ. ಖಾತೆ ಹಂಚಿಕೆ ಮುಖ್ಯಮಂತ್ರಿ ಅವರಿಗೆ ಬಿಟ್ಟ ವಿಚಾರ. ನನಗೆ ಹಿಂಬಡ್ತಿಯೂ ಆಗಿಲ್ಲ. ಮುಂಬಡ್ತಿಯನ್ನೂ ಪಡೆದಿಲ್ಲ. ಸಂಪುಟದ ಸದಸ್ಯನಾಗಿ ಸಿಕ್ಕ ಹೊಣೆಯನ್ನು ನಿಭಾಯಿಸುತ್ತಿದ್ದೇನೆ.

* ಬೆಂಗಳೂರಿಗೆ ಸೇವೆ ಸಲ್ಲಿಸುವ ಸಂಸ್ಥೆಗಳ ಧೋರಣೆ ನೋಡಿದರೆ ಆಡಳಿತ ವ್ಯವಸ್ಥೆಗೆ ಜಡ್ಡುಗಟ್ಟಿದಂತೆ ತೋರುವುದಿಲ್ಲವೆ?
ಆರ್ಥಿಕ ಅಶಿಸ್ತು, ಸೇವಾ ಮನೋಭಾವದ ಕೊರತೆ ನಮ್ಮ ಗಮನಕ್ಕೂ ಬಂದಿದೆ. ಆದ್ದರಿಂದಲೇ ಟಿ.ಎಂ.ವಿಜಯಭಾಸ್ಕರ್‌, ಕುಮಾರ್‌ ನಾಯಕ್‌, ವಿ.ರಶ್ಮಿ, ಸುಬೋಧ್‌ ಯಾದವ್‌ ಅವರಂತಹ ದಕ್ಷ ಅಧಿಕಾರಿಗಳನ್ನು ಆ ಸಂಸ್ಥೆಗಳಿಗೆ ನಿಯೋಜಿಸಿದ್ದೇವೆ. ಆಡಳಿತ ವ್ಯವಸ್ಥೆ ಚುರುಕು ಪಡೆದುಕೊಳ್ಳುತ್ತಿದೆ.

* ಬೆಂಗಳೂರಿಗೆ ತುರ್ತಾಗಿ ಆಗಬೇಕಾಗಿದ್ದು ಏನು? ಬರಲಿರುವ ಹೊಸ ಯೋಜನೆಗಳು ಯಾವುವು?
ಸಂಚಾರ ದಟ್ಟಣೆ ಸಮಸ್ಯೆ ನೀಗಿಸುವುದು ತುರ್ತು ಅಗತ್ಯ. ಪೆರಿಫೆರಲ್‌ ವರ್ತುಲ ರಸ್ತೆ, ಎತ್ತರಿಸಿದ ರಸ್ತೆ, ಸಿಗ್ನಲ್‌ಮುಕ್ತ ಕಾರಿಡಾರ್‌ ವ್ಯವಸ್ಥೆ ನಿರ್ಮಾಣ ಮತ್ತು ರಸ್ತೆ ವಿಸ್ತರಣೆ ಯೋಜನೆಗಳ ಮೂಲಕ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ. ನಗರದ ನಾಲ್ಕೂ ಕಡೆಗೆ ಅಡೆತಡೆ ಇಲ್ಲದೆ ಸಂಚರಿಸಲು ಸುರಂಗ ರಸ್ತೆಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಜಪಾನ್‌, ಕೊರಿಯಾಗಳಲ್ಲಿ ಈಗಾಗಲೇ ಸುರಂಗ ರಸ್ತೆಗಳಿವೆ. ಅವುಗಳ ನಿರ್ಮಾಣಕ್ಕೆ ಭೂಸ್ವಾಧೀನದ ಅಗತ್ಯವೂ ಇಲ್ಲ. ಸುರಂಗ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಅಧ್ಯಯನ ನಡೆಯುತ್ತಿದೆ.

ಮೆಟ್ರೊ ಎರಡನೇ ಹಂತದ ಯೋಜನೆಗೂ ಚಾಲನೆ ನೀಡಲಾಗಿದೆ. ಉಪನಗರ ರೈಲು ಯೋಜನೆಗೆ ಮಾತುಕತೆ ನಡೆಯುತ್ತಿದೆ. ಭೂಕಬಳಿಕೆ ತಡೆಗಟ್ಟಿ, ಅತಿಕ್ರಮಿತ ಪ್ರದೇಶವನ್ನು ಬಿಬಿಎಂಪಿ ಸ್ವಾಧೀನಕ್ಕೆ ಪಡೆಯುವ ಅಗತ್ಯವಿದೆ.

* ಗೃಹ ಸಚಿವರಾಗಿ ಮಾಡಿದ ಕೆಲಸ ತೃಪ್ತಿ ತಂದಿದೆಯೆ?
ಯಾಕಿಲ್ಲ, ಪೊಲೀಸ್‌ ನೇಮಕಾತಿಯಲ್ಲಿ ಶೇ 20ರಷ್ಟು ಮಹಿಳಾ ಮೀಸಲಾತಿ, ಅತ್ಯಾಚಾರ ಪ್ರಕರಣಗಳ ವಿಚಾರಣೆಗೆ ತ್ವರಿತ ನ್ಯಾಯಾಲಯಗಳ ಸ್ಥಾಪನೆ, ಪೊಲೀಸ್‌ ಸಿಬ್ಬಂದಿಗೆ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ, ವಸತಿ ಯೋಜನೆ, ಆರು ವಲಯಗಳಲ್ಲಿ ಸೈಬರ್‌ ಠಾಣೆಗಳ ಆರಂಭ ಮತ್ತಿತರ ಕಾರ್ಯಗಳು ನನ್ನ ಅವಧಿಯಲ್ಲೇ ಆಗಿವೆ. ಆದರೆ, ಋಣಾತ್ಮಕ ಅಂಶಗಳಿಗೆ ಸಿಕ್ಕಷ್ಟು ಪ್ರಚಾರ ಈ ಸಂಗತಿಗಳಿಗೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT