ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ ಸಂಪರ್ಕ ಸೇತುವೆ ಆರಂಭ

Last Updated 20 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಸಂಪಿಗೆ ರಸ್ತೆ­ಯಲ್ಲಿರುವ ಮಂತ್ರಿ ಸ್ಕ್ವೇರ್ ಮಾಲ್‌ ಮತ್ತು ಅದರ ಪಕ್ಕದಲ್ಲಿರುವ ಮೆಟ್ರೊ ನಿಲ್ದಾಣ ನಡುವೆ ನಿರ್ಮಿಸಲಾದ ಸಂಪರ್ಕ ಸೇತುವೆಯನ್ನು ಬುಧವಾರ ಮೇಯರ್ ಬಿ.ಎಸ್.ಸತ್ಯನಾರಾಯಣ ಅವರು ಸಂಚಾರಕ್ಕೆ ಮುಕ್ತಗೊಳಿಸಿದರು.

ಕಾರ್ಯಕ್ರಮದಲ್ಲಿ ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಸಿಂಗ್‌ ಖರೋಲಾ ಮಾತ­ನಾಡಿ, ‘ಖಾಸಗಿ ಸಹಭಾಗಿತ್ವದ ಯೋಜ­ನೆ­ಗಳು ಯಶಸ್ವಿಯಾಗುವುದಿಲ್ಲ ಎನ್ನುವ ಮಾತು ಆಗಾಗ ಕೇಳಿ ಬರುತ್ತಿರುತ್ತದೆ. ಆದರೆ, ನಾವು ಇದೇ ಮಾದರಿಯಲ್ಲಿ ಯಶಸ್ವಿಯಾಗಿದ್ದೇವೆ. ಮೆಟ್ರೊ ನಿಲ್ದಾಣ ಮತ್ತು ಸೇತುವೆಯನ್ನು ಮಂತ್ರಿ ಡೆವಲಪರ್ಸ್‌ ಸಂಸ್ಥೆಯೇ ನಿರ್ಮಿಸಿ ನಮಗೆ ಹಸ್ತಾಂತರಿಸಿದೆ. ಈ ಮಾರ್ಗ­ದಲ್ಲಿ ಕಳೆದ ಆರು ತಿಂಗಳಿನಿಂದ ಮೆಟ್ರೊ ರೈಲುಗಳು ಸಂಚರಿಸುತ್ತಿವೆ. ಈ ಜಂಟಿ ಯೋಜನೆಯಿಂದ ಮೆಟ್ರೊ ಮತ್ತು ಮಂತ್ರಿ ಮಾಲ್‌ ಎರಡಕ್ಕೂ ಪ್ರಯೋ­ಜನ­ವಾಗುತ್ತದೆ’ ಎಂದು ಹೇಳಿದರು.

‘ಮುಂಬರುವ ದಿನಗಳಲ್ಲಿ ಎರಡನೇ ಹಂತದಲ್ಲಿ ಮೆಟ್ರೊ ನಿಲ್ದಾಣಗಳ ಬದಿಯ ಸ್ಥಳವನ್ನು ಕೂಡ ನಾವು ಇದೇ ಮಾದರಿ ಯೋಜನೆಗಳಿಂದ ಅಭಿವೃದ್ಧಿ­ಪಡಿಸುವ ಚಿಂತನೆ ಇದೆ. ಇದರಿಂದ ವಾಹನ ದಟ್ಟಣೆ ಕಡಿಮೆ ಆಗುವ ಜತೆಗೆ ನಾಗರಿಕರಿಗೂ ಅನುಕೂಲವಾಗುತ್ತದೆ’ ಎಂದು ತಿಳಿಸಿದರು.

‘ನಗರದಲ್ಲಿ ಈ ಹಿಂದೆ ಇದ್ದ ಕೆರೆಗಳು ಇಂದು ಕಣ್ಮರೆಯಾಗುತ್ತಿವೆ. ಅಂತ­ರ್ಜಲ ಕುಸಿಯುತ್ತಿದೆ. ಕೆರೆಗಳನ್ನು ಉಳಿಸಿ, ಪುನರುಜ್ಜಿವನಗೊಳಿಸುವ ಕಾರ್ಯ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಮಂತ್ರಿ ಡೆವಲಪರ್ಸ್‌ ಕೂಡ ಒಂದು ಕೆರೆಯನ್ನು ದತ್ತು ಪಡೆದು ಅಭಿವೃದ್ಧಿಪಡಿಸಬೇಕು’ ಎಂದು ಮೇಯರ್‌ ಸತ್ಯನಾರಾಯಣ ಸಲಹೆ ನೀಡಿದರು.

‘ಮುಂಬರುವ ದಿನಗಳಲ್ಲಿ ಕೆ.ಆರ್. ಮಾರುಕಟ್ಟೆ ಹಾಗೂ ಅದರ ಬಳಿ ನಿರ್ಮಿಸುವ ಮೆಟ್ರೊ ನಿಲ್ದಾಣದ ನಡುವೆ ಕೂಡ ಇದೇ ಮಾದರಿ ಸೇತುವೆಯನ್ನು ನಿರ್ಮಿಸಿದರೆ ಜನರಿಗೆ ತುಂಬಾ ಅನುಕೂಲವಾಗುತ್ತದೆ’ ಎಂದು ತಿಳಿಸಿದರು. ಮಂತ್ರಿ ಡೆವಲಪರ್ಸ್‌ ಅಧ್ಯಕ್ಷ ಸುಶೀಲ್ ಮಂತ್ರಿ ಮಾತನಾಡಿ, ‘ಈ ಪ್ರಯತ್ನ ದೇಶದಲ್ಲಿಯೇ ಮೊದಲನೆ­ಯದಾಗಿದೆ. ಇದರಿಂದ ಜನರಿಗೆ ಅಗತ್ಯವಸ್ತುಗಳ ಸುರಕ್ಷಿತ ಖರೀದಿಗೆ ಅನುಕೂಲವಾಗುತ್ತದೆ. ಅಲ್ಲದೆ ಈ ಭಾಗದ ಸಂಚಾರ ದಟ್ಟಣೆ ಕೂಡ ಕಡಿಮೆಯಾಗಲಿದೆ’ ಎಂದರು.

‘ಗೋದಾವರಿ’ ಬದಲು ‘ಮಾರ್ಗರೀಟಾ’ ಬಳಕೆ
ಇದೇ ಸಮಾರಂಭದಲ್ಲಿ ಸುದ್ದಿಗಾರರೊಂದಿಗೆ ಮೆಟ್ರೊ ಸುರಂಗ ಮಾರ್ಗ ನಿರ್ಮಾಣ ವಿಭಾಗದ ಮುಖ್ಯ ಎಂಜಿನಿಯರ್ ಎನ್.ಪಿ.ಶರ್ಮಾ ಮಾತನಾಡಿ, ‘ಪ್ಲಾಟ್‌ಫಾರಂ ರಸ್ತೆಯ ಕೃಷ್ಣ ಫ್ಲೋರ್‌ ಮಿಲ್‌ ಬಳಿ ನೆಲದಾಳದಲ್ಲಿ  ಮೆಜೆಸ್ಟಿಕ್‌ ಕಡೆಗೆ  ಸುರಂಗ ಕೊರೆಯುವಾಗ ಕೆಟ್ಟು ನಿಂತಿರುವ  ‘ಗೋದಾವರಿ’ ಸುರಂಗ ಕೊರೆಯುವ ಯಂತ್ರ (ಟಿಬಿಎಂ) ಯಂತ್ರವನ್ನು ಸಿಕ್ಕಿಕೊಂಡಿರುವ ಸ್ಥಳದಲ್ಲೇ ದುರಸ್ತಿ  ಮಾಡಲು ಸಾಧ್ಯವಿಲ್ಲ’ ಎಂದು ಹೇಳಿದರು.

‘ಯಂತ್ರವು 350 ಟನ್ ತೂಕವಿದೆ. ಅದನ್ನು ಹೊರತೆಗೆದು ದುರಸ್ತಿಗೊಳಿಸಿ ಪುನಃ ಬಳಕೆ ಮಾಡುವುದು ತುಂಬಾ ವೆಚ್ಚದಾಯಕ ಮತ್ತು ಇದಕ್ಕೆ ದೀರ್ಘ ಸಮಯ ಬೇಕು. ಆದ್ದರಿಂದ, ಸದ್ಯಕ್ಕೆ ಯಂತ್ರದ ದುರಸ್ತಿ ಯೋಜನೆ ಕೈಬಿಡಲಾಗಿದೆ. ಅದಕ್ಕೆ ಪರ್ಯಾಯವಾಗಿ ಮೆಜೆಸ್ಟಿಕ್‌  ನೆಲದಡಿಯ ನಿಲ್ದಾಣದ ಕಡೆಯಿಂದ ‘ಮಾರ್ಗರೀಟಾ’ ಯಂತ್ರದಿಂದ ಬಳಸಿ ಸುರಂಗ ಕೊರೆಯಲಾಗುತ್ತದೆ. ಕೊನೆಗೆ  ಕೆಟ್ಟಿರುವ ಯಂತ್ರವನ್ನು ಹೊರಕ್ಕೆ ತೆಗೆದು ರಿಪೇರಿ ಮಾಡಲಾಗುತ್ತದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT