ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ: ಸೈಕಲ್‌ ಸವಾರರಿಗೆ ಪ್ರತ್ಯೇಕ ಮಾರ್ಗ

ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ಕಾಮಗಾರಿ ಆರಂಭ: ವಾಹನ ದಟ್ಟಣೆ ನಿಯಂತ್ರಣಕ್ಕೆ ಪ್ರಯತ್ನ
Last Updated 25 ಜೂನ್ 2016, 20:00 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಯಾಣಿಕರು ಮೆಟ್ರೊ ನಿಲ್ದಾಣ ತಲುಪಲು ಮೋಟಾರು ವಾಹನದಲ್ಲಿ ಪ್ರಯಾಣಿಸುವ ಬದಲು ಸೈಕಲ್‌ ಬಳಸುವುದನ್ನು ಉತ್ತೇಜಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ ಹಾಗೂ ಬೃಹತ್‌ ಬೆಂಗಳೂರು ಮಹಾನಗರಪಾಲಿಕೆ (ಬಿಬಿಎಂಪಿ) ಮುಂದಾಗಿವೆ. 

ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದ ಬಳಿ ಸೈಕಲ್‌ ಸವಾರರಿಗೆ  ಪ್ರತ್ಯೇಕ  ಮಾರ್ಗ ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ.

‘ಬೈಯಪ್ಪನಹಳ್ಳಿ   ಮೆಟ್ರೊ ನಿಲ್ದಾಣದಿಂದ ಆರ್‌ಎಂಜೆಡ್‌ ಇನ್ಫಿನಿಟಿವರೆಗೆ ಸುಮಾರು 1 ಕಿ.ಮೀ ಉದ್ದದ ಸೈಕಲ್‌ ಮಾರ್ಗ ನಿರ್ಮಿಸಲಾಗುತ್ತಿದೆ.  ಪ್ರಯಾಣಿಕರ ಪ್ರತಿಕ್ರಿಯೆ ನೋಡಿಕೊಂಡು ಇತರ ಮೆಟ್ರೊ ನಿಲ್ದಾಣಗಳ ಬಳಿಯೂ ಸೈಕಲ್‌ ಸವಾರರಿಗೆ ಪ್ರತ್ಯೇಕ ಮಾರ್ಗ ನಿರ್ಮಿಸುವ ಆಲೋಚನೆ ಇದೆ’ ಎನ್ನುತ್ತಾರೆ ಮೆಟ್ರೊ ನಿಗಮದ ವಕ್ತಾರ ಯು.ಎ.ವಸಂತ ರಾವ್‌.

‘ಇಂದಿರಾನಗರದ 80 ಅಡಿ ರಸ್ತೆಯಿಂದ ಹಳೆಮದ್ರಾಸ್‌ ರಸ್ತೆಯ ಹೋಪ್‌ ಫಾರ್ಮ್‌ವರೆಗೆ (ಕೆ.ಆರ್‌.ಪುರ– ಹೂಡಿ ಮಾರ್ಗವಾಗಿ) ₹ 143 ಕೋಟಿ ವೆಚ್ಚದಲ್ಲಿ ಸಿಗ್ನಲ್‌ರಹಿತ ಕಾರಿಡಾರ್‌ ನಿರ್ಮಿಸಲಾಗುತ್ತಿದೆ. ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದಿಂದ   ಆರ್‌ಎಂಜೆಡ್‌ ಇನ್ಫಿನಿಟಿವರೆಗೆ  ಸೈಕಲ್‌ ಸವಾರರಿಗೆ ಪ್ರತ್ಯೇಕ ಮಾರ್ಗವನ್ನೂ ನಿರ್ಮಿಸುತ್ತಿರುವುದು ಈ ಕಾಮಗಾರಿಯ ಒಂದು ಭಾಗ. ಆರ್‌ಎನ್‌ಎಸ್‌ ಇನ್‌ಫ್ರಾ  ಕಂಪೆನಿ ಈ ಕಾಮಗಾರಿಯ ಗುತ್ತಿಗೆ ಪಡೆದಿದೆ’ ಎಂದು ಬಿಬಿಎಂಪಿಯ ಎಂಜಿನಿಯರ್‌ ಒಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪಾದಚಾರಿ ಮಾರ್ಗದ ಪಕ್ಕ ಸೈಕಲ್‌ ಮಾರ್ಗ: ‘ಈ ಹಿಂದೆ ರಸ್ತೆಯಲ್ಲೇ ಸೈಕಲ್‌ಗೆ ಪ್ರತ್ಯೇಕ  ಟ್ರ್ಯಾಕ್‌ ನಿರ್ಮಿಸಲಾಗುತ್ತಿತ್ತು.  ಆದರೆ, ಇದಕ್ಕೆ ಇತರ ವಾಹನಗಳೂ ಈ ಟ್ರ್ಯಾಕ್‌ಗೆ ಬರದಂತೆ ತಡೆಯಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ನಾವು ಇಲ್ಲಿ ರಸ್ತೆಯ ಬದಲು ಪಾದಚಾರಿ ಮಾರ್ಗದಲ್ಲಿ ಸೈಕಲ್‌ ಮಾರ್ಗ ನಿರ್ಮಿಸುತ್ತಿದ್ದೇವೆ. ಇದು ರಸ್ತೆಗಿಂತ ಎತ್ತರದಲ್ಲಿ ಇರಲಿದೆ. ಇತರ ವಾಹನಗಳು ಟ್ರ್ಯಾಕ್‌ ಅನ್ನು ಪ್ರವೇಶಿಸದಂತೆ ತಡೆಯನ್ನು ನಿರ್ಮಿಸಲಾಗುತ್ತದೆ’ ಎಂದು  ಅವರು ವಿವರಿಸಿದರು.

‘ನೂತನ ರಸ್ತೆ  11 ಮೀಟರ್‌ ಅಗಲ ಇರಲಿದೆ. ಅದರ ಪಕ್ಕದಲ್ಲಿ ಒಂದೂವರೆ ಅಡಿ ಜಾಗವನ್ನು ಗಿಡ ಬೆಳೆಸಲು  ಬಳಸುತ್ತೇವೆ. ಅದರ ಪಕ್ಕದಲ್ಲಿ 1.5 ಮೀಟರ್‌  ಅಗಲದ ಸೈಕಲ್‌ ಮಾರ್ಗ ಹಾಗೂ 2.5 ಮೀಟರ್‌ ಅಗಲದ ಪಾದಚಾರಿ ಮಾರ್ಗ ನಿರ್ಮಿಸಲಾಗುತ್ತಿದೆ.  ಜಾಗದ ಲಭ್ಯತೆ ಆಧಾರದಲ್ಲಿ ಕೆಲವು ಕಡೆ ಸೈಕಲ್‌ ಮಾರ್ಗದ ಅಗಲದಲ್ಲಿ ವ್ಯತ್ಯಾಸ ಆಗಲಿದೆ. ಟೆಂಡರ್‌ಶ್ಯೂರ್‌ ರಸ್ತೆಗಳ ಮಾದರಿಯಲ್ಲೇ ಈ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ’ ಎಂದು ಅವರು ತಿಳಿಸಿದರು. 

1 ತಿಂಗಳಲ್ಲಿ ಪೂರ್ಣ: ‘ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದಿಂದ ಆರ್‌ಎಂಜೆಡ್‌ವರೆಗಿನ ಸೈಕಲ್‌ ಮಾರ್ಗ  ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಒಂದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಭವಿಷ್ಯದಲ್ಲಿ ಮಾನ್ಯತಾ ಟೆಕ್‌ಪಾರ್ಕ್‌, ಬಿಗ್‌ಬಜಾರ್‌ ಕಡೆಗೂ ಸೈಕಲ್‌ ಮಾರ್ಗ ನಿರ್ಮಿಸುವ ಚಿಂತನೆ ಇದೆ’ ಎಂದರು.

‘ಆರ್‌ಎಂಜೆಡ್‌ ಇನ್ಫಿನಿಟಿ ಪ್ರದೇಶದ ವಿವಿಧ ಕಚೇರಿಗಳಲ್ಲಿ ಐದಾರು ಸಾವಿರ ಮಂದಿ ಕೆಲಸ ಮಾಡುತ್ತಾರೆ. ಈ ಪೈಕಿ ಹೆಚ್ಚಿನವರು ಮೆಟ್ರೊ ಬಳಸುತ್ತಾರೆ.  ಇಲ್ಲಿನ ಮೆಟ್ರೊ ನಿಲ್ದಾಣದಲ್ಲಿ ಬೈಕ್‌ ಅನ್ನು ಬಾಡಿಗೆಗೆ ನೀಡಲಾಗುತ್ತಿದೆ. ಇದರಿಂದಾಗಿ ಈ ಪ್ರದೇಶದ ರಸ್ತೆಗಳಲ್ಲಿ ವಾಹನದ ದಟ್ಟಣೆ ಕಡಿಮೆಯಾಗಿದೆ. ಸೈಕಲ್‌ ಮಾರ್ಗ ನಿರ್ಮಾಣವಾದರೆ ಇದು ಇನ್ನಷ್ಟು ಕಡಿಮೆ ಆಗಬಹುದು’ ಎಂದು ಅವರು ವಿಶ್ಲೇಷಿಸಿದರು.  

ಇನ್ನಷ್ಟು ಸೈಕಲ್‌ ಮಾರ್ಗಗಳಾಗಲಿ: ‘ಮೆಟ್ರೊ ನಿಲ್ದಾಣದ ಬಳಿ ಜಾಗ ಲಭ್ಯ ಇರುವ ಕಡೆಯೆಲ್ಲ  ಸೈಕಲ್‌ ಸವಾರರಿಗೆ ಪ್ರತ್ಯೇಕ ಮಾರ್ಗ  ನಿರ್ಮಿಸುವ ಮೂಲಕ ಸೈಕಲ್‌ ಬಳಕೆಯನ್ನು ಉತ್ತೇಜಿಸಬೇಕು ಎಂದು ಮೆಟ್ರೊ ನಿಗಮ ಹಾಗೂ ಬಿಬಿಎಂಪಿ ಅಧಿಕಾರಿಗಳಲ್ಲಿ ವಿನಂತಿಸಿದ್ದೆವು. ನಿಗಮದವರು ನಮ್ಮನ್ನು ಹಾಗೂ ಟೆಕ್‌ಪಾರ್ಕ್‌ ಪ್ರತಿನಿಧಿಗಳನ್ನು ಕರೆದು ಸಭೆ ನಡೆಸಿದ್ದರು. ಇದೀಗ ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದ ಬಳಿ ಸೈಕಲ್‌ ಸವಾರರಿಗೆ ಪ್ರತ್ಯೇಕ ಮಾರ್ಗ ನಿರ್ಮಿ  ನಿರ್ಮಿಸಲು ಬಿಬಿಎಂಪಿ ಹಾಗೂ ಮೆಟ್ರೊ ನಿಗಮ ಮುಂದಾಗಿರುವುದು ಸ್ವಾಗತಾರ್ಹ’ ಎಂದು ‘ನಮ್ಮ ಸೈಕಲ್‌’  ಬಳಗದ ಎಚ್‌.ಆರ್‌.ಮುರಳಿ ತಿಳಿಸಿದರು.

‘ಸೈಕಲ್‌ ಸವಾರರಿಗಾಗಿ  ಎರಡು ಮೀಟರ್‌ ಅಗಲದ ಮಾರ್ಗವನ್ನು ನಿರ್ಮಿಸಿದರೂ ಸಾಕು. ಮೆಟ್ರೊ ನಿಲ್ದಾಣದಲ್ಲಿ ಸೈಕಲ್‌ ನಿಲುಗಡೆಗೆ  ಸ್ಥಳಾವಕಾಶ ನೀಡಬೇಕು. ಸೈಕಲ್‌ ಅನ್ನು ಹಂಚಿಕೊಂಡು ಬಳಸುವುದಕ್ಕೆ ಅವಕಾಶ ಇರುವುದರಿಂದ ಇದಕ್ಕೆ ಹೆಚ್ಚೇನು ಜಾಗ ಬೇಕಾಗುವುದಿಲ್ಲ. ನಮ್ಮ ಸಂಘಟನೆ ವತಿಯಿಂದ ಭಾರತೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿ ಸೈಕಲ್‌ ಬಳಕೆಗೆ ಉತ್ತೇಜನ ನೀಡಿದ್ದೇವೆ.  ಬೈಯಪ್ಪನಹಳ್ಳಿ ಮಾರ್ಗದಲ್ಲಿ 50ರಿಂದ 100 ಸೈಕಲ್‌ಗಳು ಸಾಕಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT