ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ ಹಾದಿಯಲಿ ರಿಯಾಲ್ಟಿ ಪ್ರಭೆ

Last Updated 26 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಟ್ರೊ ನಿಲ್ದಾಣದಿಂದ ಕೇವಲ 200 ಮೀಟರ್‌ಗಳಷ್ಟು ಹತ್ತಿರದಲ್ಲಿ ನಿಮ್ಮ ಕನಸಿನ ಮನೆ’, ‘ಉದ್ದೇಶಿತ ಮೆಟ್ರೊ ನಿಲ್ದಾಣಕ್ಕೆ ಐದು ನಿಮಿಷಗಳ ನಡಿಗೆ ದೂರದಲ್ಲಿ ಲಕ್ಷುರಿ ಮನೆಗಳು’...
ರಿಯಲ್‌ ಎಸ್ಟೇಟ್‌ಗೆ ಸಂಬಂಧಿಸಿದ ಜಾಹೀರಾತುಗಳಲ್ಲಿ ಮೇಲಿನಂತೆ ‘ನಮ್ಮ ಮೆಟ್ರೊ’ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ನಿವೇಶನಗಳು, ಫ್ಲಾಟ್‌ಗಳು, ವಿಲ್ಲಾಗಳು, ಮನೆಗಳ ಮಾರಾಟಕ್ಕೆ ನೀಡುವ ಬಹುತೇಕ ಜಾಹೀರಾತುಗಳಲ್ಲಿ ಮೆಟ್ರೊ ರೈಲಿನ ಚಿತ್ರ ಕಾಯಂ ಎಂಬಂತೆ ಆಗಿಬಿಟ್ಟಿದೆ. ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿ  ‘ನಮ್ಮ ಮೆಟ್ರೊ’ ಭಾರಿ ಸಂಚಲನವನ್ನೇ ಉಂಟು ಮಾಡಿದೆ.

ಹಿಂದೆಲ್ಲ ಹೊಸ ಬಡಾವಣೆ, ಹೊಸ ಅಪಾರ್ಟ್‌ಮೆಂಟ್‌ಗಳು ನಗರದ ಕೇಂದ್ರಭಾಗವಾದ ಮೆಜೆಸ್ಟಿಕ್‌, ವಿಧಾನಸೌಧ ಅಥವಾ ಎಂ.ಜಿ. ರಸ್ತೆಯಿಂದ ಎಷ್ಟು ದೂರದಲ್ಲಿವೆ ಎಂಬುದನ್ನೇ ಪ್ರಧಾನವಾಗಿ ಹೇಳಲಾಗುತ್ತಿತ್ತು. ರಾಜಧಾನಿಯ ಜನ ಜೀವನದಲ್ಲಿ ‘ನಮ್ಮ ಮೆಟ್ರೊ’ ಪ್ರವೇಶ ಮಾಡಿದ ಮೇಲೆ ಮೆಟ್ರೊ ನಿಲ್ದಾಣಗಳನ್ನು ಕೇಂದ್ರವಾಗಿಟ್ಟುಕೊಂಡು ಆಯಾ ಬಡಾವಣೆ ಅಥವಾ ಸ್ಥಳದ ಮಹತ್ವವನ್ನು ತಿಳಿಸಲಾಗುತ್ತಿದೆ. ಕೇಂದ್ರ ಭಾಗ ಎಂಬುದರ ಪರಿಕಲ್ಪನೆಯೇ ಬದಲಾಗಿ ಹೋಗಿದೆ.

ಸಂಚಾರ ದಟ್ಟಣೆಯ ಕಿರಿಕಿರಿ ಇಲ್ಲದ, ಸುಗಮ ಸಂಚಾರದ ಭರವಸೆ ಹುಟ್ಟಿಸಿರುವ ಮೆಟ್ರೊ ಯೋಜನೆಯು ರಿಯಲ್‌ ಎಸ್ಟೇಟ್‌ ವ್ಯವಹಾರದ ಬೆಳವಣಿಗೆಗೆ ವೇಗೋತ್ಕರ್ಷ ನೀಡಿದೆ; ಮುಂಬರುವ ವರ್ಷಗಳಲ್ಲಿಯೂ ಈ ಕ್ಷೇತ್ರದ ಬೆಳವಣಿಗೆ ಏರುಮುಖವಾಗಲಿದೆ ಎಂಬುದರ ಸುಳಿವು ನೀಡಿದೆ.

2006ರಲ್ಲಿ ಮೆಟ್ರೊ ಯೋಜನೆಗೆ ಶಂಕುಸ್ಥಾಪನೆ ನೆರವೇರಿದಾಗ ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿ ಯಾವುದೇ ಚಲನೆ ಉಂಟಾಗಲಿಲ್ಲ. 2011ರ ಅಕ್ಟೋಬರ್‌ನಲ್ಲಿ ಬೈಯಪ್ಪನಹಳ್ಳಿಯಿಂದ ಎಂ.ಜಿ.ರಸ್ತೆವರೆಗಿನ ಮಾರ್ಗದಲ್ಲಿ ರೈಲು ಓಡಾಡಲು ಶುರು ಮಾಡಿದ ಮೇಲೆ ಮೆಟ್ರೊದ ಪರಿಣಾಮಗಳು ಕಾಣಿಸಿಕೊಳ್ಳಲಾರಂಭಿಸಿದವು. ಇಂದಿರಾ ನಗರ, ಹಲಸೂರು, ಎಂ.ಜಿ. ರಸ್ತೆಯಲ್ಲಿ ಆಸ್ತಿಗಳ ಬೆಲೆಯಲ್ಲಿ ಏರಿಕೆ ಕಂಡು ಬಂತು.  2014ರಲ್ಲಿ ಮಲ್ಲೇಶ್ವರದ ಸಂಪಿಗೆ ರಸ್ತೆಯಿಂದ ಪೀಣ್ಯ ಇಂಡಸ್ಟ್ರಿವರೆಗಿನ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾದ ಮೇಲೆ ಆ ಭಾಗದಲ್ಲಿ ರಿಯಲ್‌ ಎಸ್ಟೇಟ್‌ ಕ್ಷೇತ್ರದ ಚಟುವಟಿಕೆಗಳು ಗರಿಗೆದರಿದವು.

ಹಳೇ ಮದ್ರಾಸ್‌ ರಸ್ತೆ, ತುಮಕೂರು ರಸ್ತೆ, ಮೈಸೂರು ರಸ್ತೆ ಹಾಗೂ ಕನಕಪುರ ರಸ್ತೆಗಳಲ್ಲಿ ನೂರಾರು ಸಂಖ್ಯೆಯಲ್ಲಿ ಅಪಾರ್ಟ್‌ಮೆಂಟ್‌ಗಳು ತಲೆ ಎತ್ತುತ್ತಿವೆ.

ಬನ್ನೇರುಘಟ್ಟ ರಸ್ತೆ, ನಾಗವಾರ– ಥಣಿಸಂದ್ರ ರಸ್ತೆ, ವೈಟ್‌ಫೀಲ್ಡ್‌, ಎಲೆಕ್ಟ್ರಾನಿಕ್‌ ಸಿಟಿ ಪ್ರದೇಶಗಳಲ್ಲಿ ಎರಡನೇ ಹಂತದಲ್ಲಿ ಮೆಟ್ರೊ ಬರಲಿದೆ. ಆದರೂ ಈ ಪ್ರದೇಶಗಳಲ್ಲಿ ನಿರ್ಮಾಣಗೊಳ್ಳಲಿರುವ ಮೆಟ್ರೊ ನಿಲ್ದಾಣಗಳನ್ನು ಹೆಸರಿಸಿ, ಹೊಸ  ಅಪಾರ್ಟ್‌ಮೆಂಟ್‌ಗಳು ಮತ್ತು ಬಡಾವಣೆಗಳಿಗೆ ಗ್ರಾಹಕರನ್ನು ಸೆಳೆಯುವ ಪ್ರಯತ್ನ ಜೋರಾಗಿಯೇ ನಡೆದಿದೆ.
ಮೆಟ್ರೊ ಕಾರಣದಿಂದಾಗಿ ಮನೆಗಳು, ವಾಣಿಜ್ಯ ಮಳಿಗೆಗಳ ಬಾಡಿಗೆಯೂ ಗಗನಮುಖಿಯಾಗಿದೆ. ಮೆಟ್ರೊ ಮಾರ್ಗದ ಸನಿಹದಲ್ಲಿ ಇರುವ ಬಡಾವಣೆಗಳಲ್ಲಿ ಬಾಡಿಗೆ ದರ ಯದ್ವಾತದ್ವಾ ಹೆಚ್ಚಾಗಿದೆ.

ಕುಶ್‌ಮನ್‌ ಅಂಡ್‌ ವೇಕ್‌ಫೀಲ್ಡ್‌ ಸಂಸ್ಥೆಯ ಸಮೀಕ್ಷಾ ವರದಿ ಪ್ರಕಾರ ನಗರದ ಹಳೆಯ ಭಾಗಗಳಲ್ಲಿ ವಸತಿ ಮತ್ತು ವಾಣಿಜ್ಯ ಆಸ್ತಿಗಳ ಮೌಲ್ಯದಲ್ಲಿ ಶೇ 37ರಷ್ಟು ಏರಿಕೆಯಾಗಿದೆ. ಮೆಟ್ರೊ ಮಾರ್ಗ ನಿರ್ಮಾಣವಾಗುವ ನಗರದ ಹೊರ ವಲಯಗಳಲ್ಲಿ ಆಸ್ತಿಗಳ ಬಂಡವಾಳ ಮೌಲ್ಯದಲ್ಲಿ  ಗರಿಷ್ಠ ಶೇ 95ರಷ್ಟು ಹೆಚ್ಚಳವಾಗಿರುವುದು ಗಮನಾರ್ಹ.

ಮೆಟ್ರೊ ಮಾರ್ಗದ ಆಸುಪಾಸಿನಲ್ಲಿ ಕಟ್ಟಡ ನಿರ್ಮಾಣ ಅನುಪಾತವನ್ನು (ಫ್ಲೋರ್‌ ಏರಿಯಾ ರೇಷಿಯೋ) ಹೆಚ್ಚಿಸಿರುವುದು ರಿಯಲ್‌ ಎಸ್ಟೇಟ್‌ ಬೆಳವಣಿಗೆಗೆ ಮತ್ತಷ್ಟು ಪುಷ್ಟಿ ನೀಡಿದೆ. ಕೆಲಸದ ಸ್ಥಳಗಳಿಗೆ ಸಮೀಪದಲ್ಲೇ ಮನೆ ಮಾಡಬೇಕಾದ ಒತ್ತಡಕ್ಕೆ ಸಿಲುಕಿದ್ದ ಉದ್ಯೋಗಿಗಳ ಮನಸ್ಥಿತಿಯಲ್ಲೂ ಬದಲಾವಣೆಗಳಾಗಿವೆ. ಮೆಟ್ರೊ ಸಂಪರ್ಕದ ಲಾಭ ಪಡೆದು ಸ್ವಲ್ಪ ದೂರದ ಬಡಾವಣೆಗಳಲ್ಲೂ ಮನೆ ಮಾಡುವ ಮನೋಭಾವ ಹೆಚ್ಚುತ್ತಿದೆ.

ಮೊದಲ ಮತ್ತು ಎರಡನೇ ಹಂತದ ಎಲ್ಲ ಮಾರ್ಗಗಲ್ಲಿ ರೈಲು ಸಂಚಾರ ಆರಂಭವಾದ ಮೇಲೆ ನಗರದ ಜನ ಜೀವನದ ಚಿತ್ರಣವೇ ಬದಲಾಗಲಿದೆ. ಆ ಬದಲಾವಣೆಯು ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲೂ ಢಾಳಾಗಿ ಕಾಣಿಸಿಕೊಳ್ಳಲಿದೆ.

ವ್ಯವಹಾರ ಪ್ರಗತಿ
ರಿಯಲ್‌ ಎಸ್ಟೇಟ್‌ ಮೇಲೆ ‘ನಮ್ಮ ಮೆಟ್ರೊ’ ಯೋಜನೆಯ ಪರಿಣಾಮವು ಚೆನ್ನಾಗಿದೆ. ಮೆಟ್ರೊ ಮಾರ್ಗ ಹಾದು ಹೋಗಿರುವ ಪ್ರದೇಶಗಳಲ್ಲಿ ರಿಯಲ್‌ ಎಸ್ಟೇಟ್‌ ವ್ಯವಹಾರವು ಉತ್ತಮವಾಗಿ ಪ್ರಗತಿ ಕಾಣುತ್ತಿದೆ. ಕಳೆದ ಕೆಲವು ವರ್ಷಗಳಿಂದ ಬೆಳವಣಿಗೆಯು ಏರುಮುಖವಾಗಿಯೇ ಸಾಗಿದೆ. ಮುಂದಿನ ವರ್ಷಗಳಲ್ಲಿ ಮತ್ತಷ್ಟು ಬೆಳವಣಿಗೆಯಾಗಲಿದೆ.
ಸುರೇಶ್‌ ಹರಿ, ಕಾರ್ಯದರ್ಶಿ, ಕ್ರೆಡಾಯ್‌ ಬೆಂಗಳೂರು
ಚಿತ್ರಗಳು: ಸತೀಶ್‌ ಬಡಿಗೇರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT