ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆದುಳಿನ ಆಘಾತಕ್ಕೆ ಶಸ್ತ್ರ ಚಿಕಿತ್ಸೆ

Last Updated 12 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಮಾನವ ರಚನೆ ಮತ್ತು ವಿಕಾಸದಲ್ಲಿ ಮೆದುಳು ಅತಿ ಮುಖ್ಯವಾದ ಪಾತ್ರವಹಿಸುತ್ತದೆ. ಕಿರೀಟಪ್ರಾಯವಾಗಿರುವ ಮೆದುಳಿನಲ್ಲಿ 20 ಕೋಟಿಗಳಷ್ಟೂ ನರಗಳೂ, ಟ್ರಿಲಿಯನ್‌ಗಳಷ್ಟು ಸಂಪರ್ಕಗಳೂ ಇರುತ್ತವೆ. (ಟ್ರಿಲ್ಲಿಯನ್ಸ್‌ ಎಂದರೆ ಒಂದರ ಪಕ್ಕ 14 ಸೊನ್ನೆ ಬರುವ ಸಂಖ್ಯೆ) ನಮ್ಮ ದೇಹದಲ್ಲಿರುವ ಎಲ್ಲ ಅಂಗಗಳಿಗಿಂತಲೂ ಹೆಚ್ಚು ಶಕ್ತಿಯ ಬೇಡಿಕೆ ಇರಿಸುವ ಅಂಗವಾಗಿದೆ ಮೆದುಳು.

ಹೃದಯದಿಂದ ಹೊರ ಚಲಿಸುವ ರಕ್ತ ಪರಿಚಲನೆಯಲ್ಲಿ ಒಂದನೇ ಮೂರರಷ್ಟು ಅಂಶ ಮೆದುಳಿಗೆ ಸರಬರಾಜು ಆಗುತ್ತದೆ. ಸಾಮಾನ್ಯವಾಗಿ ಮೆದುಳು ಕಾರ್ಯ ನಿರ್ವಹಿಸಲು 55ಎಂಎಲ್‌/100 ಗ್ರಾಂ, ಪ್ರತಿ ನಿಮಿಷವೂ ಮೆದುಳಿಗೆ ಬೇಕು. ಇದಲ್ಲದೇ ನಾವು ಉಸಿರಾಡುವಾಗ ಆಮ್ಲಜನಕದ ಪ್ರಮಾಣದಲ್ಲಿ ಸಿಂಹಪಾಲು ಮೆದುಳಿಗೆ ಸಲ್ಲುತ್ತದೆ. ಸೇವಿಸಿದ ಆಹಾರ ಶಕ್ತಿಯಾಗಿ ಪರಿವರ್ತನೆಯಾದ ನಂತರ ಅದರಲ್ಲಿಯೂ ಬಹುಪಾಲು ಮಿದುಳಿಗೆ ಸಲ್ಲುತ್ತದೆ. ಇಷ್ಟೆಲ್ಲ ಆದ ಮೇಲೂ ಮೆದುಳಿಗೆ ಸಹನಶೀಲ ಗುಣವೇ ಇಲ್ಲವೆನ್ನಬಹುದು. ರಕ್ತ ಸರಬರಾಜು ಆಗುವುದರಲ್ಲಿ ಒಂದಿನಿತು ವ್ಯತ್ಯಾಸವಾದರೂ, ಒಂದೆರಡದೇ ಕ್ಷಣಗಳಷ್ಟು ಅಡೆತಡೆ ಉಂಟಾದರೂ ಮೆದುಳು ಆಘಾತಕ್ಕೆ ಒಳಗಾಗುವ ಸಾಧ್ಯತೆ ಇದೆ. ಅದನ್ನೇ ಪಾರ್ಶ್ವವಾಯು ಎಂದು ಕರೆಯುತ್ತಾರೆ.

ಮೆದುಳು ಆಘಾತ ಒಂದು ದುರಂತವೆಂದೇ ಕರೆಯಬಹುದು. ಸರಾಗ ರಕ್ತಪರಿಚಲನೆಯಲ್ಲಿ ಅಡೆತಡೆ ಅಥವಾ ಮೆದುಳಿನಲ್ಲಿ ಇಲ್ಲವೇ ಮೆದುಳಿನ ಸುತ್ತ ರಕ್ತಸ್ರಾವವಾದರೆ ಮೆದುಳು ತನ್ನ ಕಾರ್ಯವೈಖರಿಯಲ್ಲಿ ಸೋಲು ಎದುರಿಸತೊಡಗುತ್ತದೆ. ನರಕೇಂದ್ರದ ಮೂಲಕ ಕಾರ್ಯ ನಿರ್ವಹಿಸುವಲ್ಲಿ ವೈಫಲ್ಯ ಉಂಟಾಗುತ್ತದೆ. ಪರಿಣಾಮವಾಗಿ ಮಾತನಾಡುವ ಶಕ್ತಿ ಸ್ಪರ್ಶ ಜ್ಞಾನ, ಸಮತೋಲನ ಕಳೆದುಕೊಳ್ಳಬಹುದು. ಕೈಕಾಲುಗಳಿಗೆ ಪಾರ್ಶ್ವವಾಯುವಾಗಬಹುದು. ಮೆದುಳು ಆಘಾತಕ್ಕೆ ಒಳಗಾದವರು ಕೋಮಾಕ್ಕೆ ಹೋಗಬಹುದು. ಸಾವನ್ನಪ್ಪಬಹುದು. ಇದು ಹೃದಯಾಘಾತವನ್ನೇ ಹೋಲುವಂಥ ತೊಂದರೆಯಾಗಿದೆ. ಪ್ರತಿ ಸಾವಿರ ಜನರಲ್ಲಿ ಇಬ್ಬರು ಮೆದುಳಿನ ಆಘಾತಕ್ಕೆ ಒಳಗಾಗಿ ಸಾವನ್ನಪ್ಪುತ್ತಾರೆ. ಸಾವು ಹಾಗೂ ಅಂಗವೈಕಲ್ಯಕ್ಕೆ ಮೂರನೆ ಅತಿ ಸಾಮಾನ್ಯವಾದ ಅಂಶವಾಗಿದೆ. ಪ್ರತಿ ವರ್ಷ 20 ಲಕ್ಷ ಜನರು ಮೆದುಳು ಆಘಾತಕ್ಕೆ ಒಳಗಾಗುತ್ತಾರೆ. ಅವರ ಸಾಮಾಜಿಕ ಮತ್ತು ಆರ್ಥಿಕ  ಹಾಗೂ ವೈದ್ಯಕೀಯ ಸೌಲಭ್ಯಗಳೇನೇ ಇದ್ದರೂ ಇಷ್ಟು ದೊಡ್ಡ ಸಂಖ್ಯೆಯಲ್ಲಿ ರೋಗಕ್ಕೆ ಬಲಿಯಾಗುವವರಿದ್ದಾರೆ.

ಮೆದುಳಿನ ಒಂದು ಭಾಗಕ್ಕೆ ರಕ್ತ ಸರಬರಾಜು ಆಗದೇ ಇದ್ದಾಗ ಇದಕ್ಕೆ ರಕ್ತ ಕೊರತೆಯ ಆಘಾತ ಎಂದು ಕರೆಯಲಾಗುತ್ತದೆ. ಸ್ಟ್ರೋಕ್‌ ಅಥವಾ ಪಾರ್ಶ್ವವಾಯು ಎಂದೂ ಸಾಮಾನ್ಯರು ಹೇಳುತ್ತಾರೆ. ಮೆದುಳಿನ ಒಳಗೆ   ರಕ್ತಸ್ರಾವವಾದಲ್ಲಿ ಹೆಮರಾಜಿಕ್‌ ಅಟ್ಯಾಕ್‌ ಅಥವಾ ಮೆದುಳಿನಲ್ಲಿ ರಕ್ತ ಸ್ರಾವ ಎಂದು ಬ್ರೈನ್‌ ಹೆಮರೇಜ್‌ ಎಂದು ಕರೆಯಲಾಗುತ್ತದೆ. ಮೆದುಳಿನ ಸುತ್ತ ರಕ್ತ ಸ್ರಾವವಾಗುತ್ತಿದ್ದರೆ ಮೆದುಳಿನ ನಡುಪೊರೆಯ ರಕ್ತ ಸ್ರಾವ ಎನ್ನಲಾಗುತ್ತದೆ.

ಕೆಲವು ಯುವತಿಯರಲ್ಲಿ ವಿಶೇಷವಾಗಿ ಹೆರಿಗೆಯ ನಂತರ ಮೆದುಳಿನಲ್ಲಿರುವ ವೇನಸ್‌ ವ್ಯವಸ್ಥೆಯಲ್ಲಿ ರಕ್ತ ಸರಬರಾಜು ಮಾಡುವಲ್ಲಿ ಅಡೆತಡೆ ಉಂಟಾಗುವ ಸಾಧ್ಯತೆಗಳಿರುತ್ತವೆ. ಅದು ವೇನಸ್‌ ಸ್ಟ್ರೋಕ್‌ಗೆ ಕಾರಣವಾಗುತ್ತದೆ. ಈ ಆಘಾತಕ್ಕೆ ಕಾರಣವಾಗುವ ಪ್ರತಿಯೊಂದನ್ನೂ ಸಿಟಿ ಸ್ಕ್ಯಾನ್‌ ಮೂಲಕ ಪತ್ತೆ ಹಚ್ಚಬಹುದು. ಆಘಾತದ ಮೊದಲ ಮೂರು ಗಂಟೆಗಳನ್ನು ಚಿಕಿತ್ಸೆಗೆ ‘ಸುವರ್ಣ ಅವಧಿ’ ಎಂದು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ತುರ್ತು ಮತ್ತು ತೀವ್ರ ಚಿಕಿತ್ಸೆಯ ಅಗತ್ಯ ಸ್ಟ್ರೋಕ್‌ ಆದ ಘಟಕಕ್ಕೆ ಅತ್ಯಗತ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಒಬ್ಬಿಬ್ಬರು ವೈದ್ಯರಲ್ಲ, ವೈದ್ಯರ ತಂಡವೇ ಇರಬೇಕಾಗಿರುವುದು ಅತ್ಯಗತ್ಯ. ನರ ರೋಗ ತಜ್ಞರು, ನರ ಶಸ್ತ್ರ ಚಿಕಿತ್ಸಕರು, ನರಗ್ರಂಥಿ ತಜ್ಞರು, ತುರ್ತು ಪರಿಸ್ಥಿತಿ ನಿರ್ವಹಿಸಬಲ್ಲವರ ತಂಡ ಜೊತೆಗೆ ವಿಶೇಷ ಸೌಲಭ್ಯಗಳೂ ಲಭ್ಯ ಇರಬೇಕು.

ರಕ್ತ ಸರಬರಾಜು ಸಮರ್ಪಕವಾಗಿರಲು ಹಲವಾರು ಶಸ್ತ್ರಚಿಕಿತ್ಸೆಯ ಅಗತ್ಯವೂ ಇರುತ್ತದೆ. ಈ ಚಿಕಿತ್ಸೆಯ ಮೂಲಕ ಕಾರಣ ಮತ್ತು ಪರಿಣಾಮಗಳನ್ನು ಪತ್ತೆ ಮಾಡಬಹುದಾಗಿದೆ. ಇವು ಜೀವ ಉಳಿಸುವ ಕ್ರಿಯೆಗಳಾಗಿರುತ್ತವೆ. ಅಷ್ಟೇ ಅಲ್ಲ, ಜೀವನದ ಗುಣಮಟ್ಟವನ್ನೂ ಹೆಚ್ಚಿಸುತ್ತವೆ.

ಈ ನಿಟ್ಟಿನಲ್ಲಿ ಡಿಕಾಂಪ್ರೆಸ್ಸಿವ್‌ ಕ್ರಾನಿಟೊಮಿ ಜೀವರಕ್ಷಕ ಶಸ್ತ್ರಚಿಕಿತ್ಸೆಯಾಗಿದೆ. ಮೆದುಳು ಆಘಾತಕ್ಕೆ ಒಳಗಾಗಿ ಊತ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಊತ ಬಂದಾಗ ಮೆದುಳಿನ ಸುತ್ತಲಿನ ಪ್ರದೇಶವೂ ಹಾನಿಗೊಳಗಾಗುವ ಸಾಧ್ಯತೆ ಇರುತ್ತದೆ. ಈ ಚಿಕಿತ್ಸೆಯಲ್ಲಿ ತಲೆ ಬುರುಡೆಯ ಒಂದು ಭಾಗವನ್ನು ತೆರೆಯಲಾಗುತ್ತದೆ. ಆಗ ಮೆದುಳಿನ ಊತ ಹೊರಭಾಗದಲ್ಲಿ ವಿಸ್ತರಿಸುವುದರಿಂದ ಉಳಿದ ಭಾಗಕ್ಕೆ ಹಾನಿಯಾಗುವುದು ತಪ್ಪುತ್ತದೆ. ಇದು ಆಂತರಿಕ ನರಗಳಲ್ಲಿ ಆಗುವ ಒತ್ತಡವನ್ನು ತಡೆಯುತ್ತದೆ. ಆಘಾತಕ್ಕೆ ಒಳಗಾಗದ ಮೆದುಳಿನ ಇತರ ಭಾಗದ ಟಿಶ್ಯು ಹಾನಿಗೊಳಗಾಗದಂತೆ ತಡೆಯುತ್ತದೆ. ಮೆದುಳು ಸಂಪೂರ್ಣವಾಗಿ ಮುಚ್ಚಿರುವ ಸ್ಥಿತಿಯಲ್ಲಿರುವುದರಿಂದ ಅದರ ಊತ ಸುತ್ತಲಿನ ಪ್ರದೇಶವನ್ನೂ ಆವರಿಸುತ್ತದೆ. ಹೀಗಾಗುವುದರಿಂದ ಕೇವಲ ರಕ್ತ ಸರಬರಾಜು ಅಷ್ಟೇ ಅಲ್ಲ, ಸೆರೆಬ್ರೊ ಸ್ಫೈನಲ್‌ ಫ್ಲ್ಯೂಡ್‌ ಸರಬರಾಜು ಆಗುವುದನ್ನೂ ತಡೆಯುತ್ತದೆ. ತಲೆಬುರುಡೆಯ ಬಹುತೇಕ ಭಾಗವನ್ನು ತೆಗೆಯುವುದರಿಂದ ಊತ ಹೊರ ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಊತದ ಪ್ರಕ್ರಿಯೆ ಮುಗಿದ ತಕ್ಷಣ ತೆರೆದ ಪ್ರದೇಶವನ್ನು ಮತ್ತೆ ಮರು ಜೋಡಣೆ ಮಾಡಲಾಗುತ್ತದೆ. ಮೆದುಳಿಗೆ ಎರಡು ಅಭಿಧಮನಿಗಳ ಮೂಲಕ ಅತಿ ಹೆಚ್ಚು ರಕ್ತ ಸರಬರಾಜು ಮಾಡಲಾಗುತ್ತದೆ. ಉಳಿದಂತೆ ಸಾಮಾನ್ಯವಾಗಿ ರಕ್ತ ಸಾಗಣೆ ಆಗುತ್ತಿರುತ್ತದೆ.

ಕೆಲವೊಮ್ಮೆ ಈ ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್‌ ಸಂಗ್ರಹಣೆಯಿಂದಾಗಿ ಸರಾಗ ರಕ್ತ ಪೂರೈಕೆಯ ಮೇಲೆ ಪರಿಣಾಮ ಬೀರಬಹುದು. ಸಂಗ್ರಹಣೆಯಾದ ಕೊಬ್ಬಿನಂಶವು ಕೆಲವೊಮ್ಮೆ ರಕ್ತ ಪೂರೈಕೆಯಲ್ಲಿ ಸೇರಿಕೊಂಡು ಅಲ್ಲಲ್ಲೇ ತಡೆ ಉಂಟು ಮಾಡಬಹುದು. ಹೀಗಾದಾಗ ಮಲ್ಟಿಪಲ್‌ ಸ್ಟ್ರೋಕ್‌ಗಳು ಕಾಣಿಸಿಕೊಳ್ಳುತ್ತವೆ.

ಕೈಕಾಲು ಮುಖಗಳಲ್ಲಿ ನಿಶ್ಯಕ್ತಿ ಕಾಣಿಸಿಕೊಳ್ಳುವುದು, ಮಾತು ಕಳೆದುಕೊಳ್ಳುವುದು, ನೆನಪಿನ ಶಕ್ತಿ ಅಥವಾ ಸಮತೋಲನ ಕಳೆದುಕೊಳ್ಳುವ ಸಮಸ್ಯೆಗಳಿಗೆ ಟಿಐಎ (TIA) ಎಂದು ಕರೆಯಲಾಗುತ್ತದೆ. ಇವು ಕ್ಯಾರೋಟಿಡ್‌ ರೋಗದ ವಿಕ್ಷಿಪ್ತ ವಿಧಗಳಾಗಿವೆ. ಇವಕ್ಕೆ ಶಸ್ತ್ರಚಿಕಿತ್ಸೆಯಲ್ಲಿ ರಕ್ತನಾಳಗಳಲ್ಲಿರುವ ಕೊಬ್ಬಿನ ಅಂಶವನ್ನು ತೆಗೆಯಲಾಗುತ್ತದೆ. ರಕ್ತನಾಳದಲ್ಲಿ ರಕ್ತ ಪೂರೈಕೆಗೆ ಇರುವ ಅಡೆತಡೆಗಳನ್ನು ನಿವಾರಿಸಲಾಗುತ್ತದೆ. ಇದರಿಂದಾಗಿ ಭವಿಷ್ಯದಲ್ಲಿ ಮೆದುಳು ಆಘಾತ ಉಂಟಾಗುವುದನ್ನು ತಡೆಯಬಹುದು. ಮೆದುಳಿಗೆ ಮೊದಲಿನಂತೆ ಸರಾಗವಾಗಿ ರಕ್ತ ಪೂರೈಕೆ ಆಗಬಹುದು.

ನ್ಯೂರೊ ಸೊನೊಲಜಿ ರಕ್ತನಾಳದಲ್ಲಿ ಸಂಗ್ರಹವಾಗುವ ಕೊಬ್ಬಿನಂಶವನ್ನು ಪತ್ತೆ ಹಚ್ಚುವ ಅತಿ ಸರಳ ನಾಜೂಕು ಮತ್ತು ಅತ್ಯಾಧುನಿಕ ವಿಧಾನವಾಗಿದೆ. ಇದೇ ಸಮಯದಲ್ಲಿ ಸೆರೆಬ್ರಲ್‌ ಪ್ರಸರಣೆಯ ಮೇಲೆಯೂ ಒಂದು ನಿಗಾ ಇಡಲಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ನಲ್ವತ್ತನೇ ವಯಸ್ಸಿನ ನಂತರ ಕ್ಯಾರೋಟಿಡ್‌ ಸ್ಕ್ರೀನಿಂಗ್‌ ತಪಾಸಣೆಗೆ ನಿಯಮಿತವಾಗಿ ಒಳಪಡುವುದರಿಂದ ಆಘಾತವನ್ನು ತಡೆಯಬಹುದಾಗಿದೆ. ಕುಟುಂಬದಲ್ಲಿ ಸ್ಟ್ರೋಕ್‌ ಇರುವ ಉದಾಹರಣೆಗಳಿದ್ದರಂತೂ ಈ ತಪಾಸಣೆಗೆ ಒಳಪಡುವುದು ಅತ್ಯಗತ್ಯ.
ಒಂದು ವೇಳೆ ಆಘಾತ ತೀವ್ರತರನಾಗಿದ್ದಲ್ಲಿ ರಕ್ತ ಸರಬರಾಜನ್ನು ಪುನರ್‌ಸ್ಥಾಪಿಸುವುದು ಕಷ್ಟವಾಗುತ್ತದೆ. ಅತಿ ನಾಜೂಕಿನ ಶಸ್ತ್ರಚಿಕಿತ್ಸೆಯ ಮೂಲಕ ಹೊರ ರಕ್ತನಾಳಗಳಿಂದ ಒಳ ರಕ್ತನಾಳಗಳಿಗೆ ಸಂಪರ್ಕ ಕಲ್ಪಿಸುವ ಚಿಕಿತ್ಸೆಯಾಗಬೇಕು. ಇದು ಹೃದಯದ ಬೈಪಾಸ್‌ ಚಿಕಿತ್ಸೆಯಂಥದ್ದೇ ಚಿಕಿತ್ಸೆಯಾಗಿರುತ್ತದೆ. ಬುರುಡೆಯ ಹೊರಗಿರುವ ರಕ್ತನಾಳಗಳಿಂದ ಮೆದುಳಿನ ಒಳಗಿರುವ ರಕ್ತನಾಳಕ್ಕೆ ಸಂಪರ್ಕ ಕಲ್ಪಿಸಿ, ರಕ್ತ ಸಾಗಾಣಿಕೆಯನ್ನು ಸರಾಗವಾಗುವಂತೆ ನಿರ್ವಹಿಸಲಾಗುತ್ತದೆ.

ಮೆದುಳಿನ ಆಘಾತಕ್ಕೆ ರಕ್ತದ ಏರೊತ್ತಡ, ಮಧುಮೇಹ, ಮದ್ಯಪಾನ, ಧೂಮಪಾನ, ಸ್ಥೂಲಕಾಯ, ಚಟುವಟಿಕೆಯಿಲ್ಲದ ಜೀವನಶೈಲಿ ಇವೆಲ್ಲವೂ ಕಾರಣಗಳಾಗಬಹುದು. ಸಾಮಾನ್ಯವಾಗಿ ಇಂಥ ಲಕ್ಷಣಗಳಿರುವ ಎಲ್ಲ ವ್ಯಕ್ತಿಗಳು ತಮ್ಮ ಜೀವನದ ಮೇಲೆ ನಿಯಂತ್ರಣವಿರಿಸಿಕೊಳ್ಳಬೇಕು. ಅಗತ್ಯವಿದ್ದಲ್ಲಿ ಮಾರ್ಪಾಟು ಮಾಡಿಕೊಳ್ಳಬೇಕು. ಆಗ ಮೆದುಳಿನ ಆಘಾತ ತಡೆಯಬಹುದಾಗಿದೆ.
ಮಾಹಿತಿಗೆ: infogh@globalhospitalsindia.com 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT