ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು: ಕ್ಯಾತೆ ಏಕೆ?

Last Updated 17 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರಿನಿಂದ ನೂರು ಕಿ.ಮೀ.  ದೂರದಲ್ಲಿ ಕಾವೇರಿ ಹರಿಯುವ ಸುಂದರ ಪ್ರವಾಸಿ ತಾಣ ಮೇಕೆದಾಟು. ಇಲ್ಲಿ ಅಣೆಕಟ್ಟು ಕಟ್ಟುವ ಸಲುವಾಗಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ಅದರ ಪರಿಪೂರ್ಣ ಯೋಜನಾ ವರದಿ ತಯಾರಿಸಲು (ಡಿಪಿಆರ್) ಸರ್ಕಾರ  ಜಾಗತಿಕ ಟೆಂಡರ್ ಕರೆದಿದೆ. ಈ ಬಾರಿಯ ಬಜೆಟ್‌ನಲ್ಲಿ ಮುಖ್ಯಮಂತ್ರಿ, ಡಿಪಿಆರ್‌ಗೆ ರೂ 25 ಕೋಟಿ ಒದಗಿಸಿದ್ದಾರೆ. ಅದರ ವರದಿ ಬಂದ ನಂತರವಷ್ಟೇ ಮೇಕೆದಾಟು ಅಣೆಕಟ್ಟು ಯೋಜನೆಯ ರೂಪುರೇಷೆಗಳು ಗೊತ್ತಾಗಲಿವೆ.

ಆದರೆ ಅದು ಗೊತ್ತಾಗುವ ಮುನ್ನವೇ ತಮಿಳುನಾಡಿನಲ್ಲಿ ರಾಜಕೀಯ ಮೇಲಾಟ ಶುರುವಾಗಿದೆ. ಈ ಯೋಜನೆ ವಿರೋಧಿಸಿ  ಅಲ್ಲಿನ ರೈತ ಸಂಘಟನೆಗಳು  ತಮಿಳುನಾಡು ಬಂದ್‌ಗೆ ಕರೆಕೊಟ್ಟಿದ್ದವು. ಸರ್ಕಾರ, ಸುಪ್ರೀಂ ಕೊರ್ಟಿನ ಮೆಟ್ಟಿಲೇರಿ ಮತ್ತೊಮ್ಮೆ ತಗಾದೆ ತೆಗೆದಿದೆ. ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕಾವೇರಿ ನ್ಯಾಯಮಂಡಳಿ ಅಂತಿಮ ತೀರ್ಪು  ಈಗಾಗಲೇ ಬಂದುಬಿಟ್ಟಿದೆ. ಆ ತೀರ್ಪಿನ ಅನ್ವಯವೇ ಕರ್ನಾಟಕ ಪ್ರತಿವರ್ಷ, ಅದರ ಪಾಲಿನ 192 ಟಿ.ಎಂ.ಸಿ. ಅಡಿ ನೀರನ್ನು ತಮಿಳುನಾಡಿಗೆ ಬಿಡುತ್ತಿದೆ. ಅದಕ್ಕೆ ಯಾವ ಅಭ್ಯಂತರವೂ ಇಲ್ಲ.

ಆದರೆ ಕೆಲವೊಮ್ಮೆ ಮಾನ್ಸೂನ್ ಮಾರುತಗಳು ವಿಪರೀತವಾಗಿ ಬೀಸಿ ಪ್ರವಾಹದ ರೂಪದಲ್ಲಿ ಕಾವೇರಿ ಮೈದುಂಬಿ ಹರಿದುಬಿಡುತ್ತಾಳೆ. ಇಂಥ ಸಂದರ್ಭದಲ್ಲಿ ಉಂಟಾದ ನೀರಿನ ಅತಿಯಾದ ಸಂಗ್ರಹವನ್ನು ತಡೆದಿಟ್ಟುಕೊಳ್ಳಲಾಗದೆ ಆ ಹೆಚ್ಚುವರಿ ನೀರನ್ನು ಕೂಡ ನದಿಗೆ ಬಿಡಲಾಗುತ್ತಿದೆ. ಆ ಹೆಚ್ಚುವರಿ ನೀರು ನೇರ ತಮಿಳುನಾಡಿನ ಮೆಟ್ಟೂರು ಡ್ಯಾಂ ಸೇರುತ್ತಿದೆ. ಈ ಹೆಚ್ಚುವರಿ ನೀರಿಗೆ ಯಾವ ಲೆಕ್ಕವೂ ಇಲ್ಲ. ಹೆಚ್ಚುವರಿಯಾಗಿ ಹರಿಯುವ ಈ ನೀರಿನ ಪ್ರಮಾಣವೆಷ್ಟು? ಅದು ಎಲ್ಲಿಂದ ಎಲ್ಲಿಗೆ, ಯಾವಾಗ ಹರಿಯುತ್ತದೆ? ಎಂಬ ವಿಸ್ತೃತ ವರದಿಗಾಗಿಯೇ ಸರ್ಕಾರ ಟೆಂಡರ್ ಕರೆದಿದೆ.

ಅದರ ಸವಿಸ್ತಾರ ವರದಿ ಬಂದ ನಂತರ ನಮ್ಮ ಹೆಚ್ಚುವರಿ ನೀರನ್ನು ನಮ್ಮಲ್ಲೇ ಶೇಖರಿಸಿಕೊಳ್ಳುವ ಸಲುವಾಗಿ  ಮೇಕೆದಾಟುವಿನಲ್ಲಿ ಎರಡು ಅಥವಾ ಮೂರು ಅಣೆಕಟ್ಟುಗಳನ್ನು ನಿರ್ಮಿಸಿ ಆ ಹೆಚ್ಚುವರಿ ನೀರನ್ನು ಬೆಂಗಳೂರು ನಗರ,  ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳಿಗೆ ಕುಡಿಯುವ ನೀರಿನ ಪೂರೈಕೆಗಾಗಿ ಬಳಸುವ ಉದ್ದೇಶವಿದೆ, ಅದೇ ಮೇಕೆದಾಟು ಜಲ ಯೋಜನೆ.

ಈಗಿನ ಅಂದಾಜಿನ ಪ್ರಕಾರ ಹೆಚ್ಚುವರಿ ನೀರಿನ ಅಂದಾಜು ಪ್ರಮಾಣ ಸುಮಾರು 20 ಟಿ.ಎಂ.ಸಿ. ಅಡಿ. ಇದು ಈ ಮೂರು ಜಿಲ್ಲೆಗಳಿಗೆ ಒಂದು ವರ್ಷಕ್ಕೆ ಕುಡಿಯಲು ಸಾಕಾಗುತ್ತದೆ. ಹೀಗೆ ಶೇಖರಿಸಿದ ನೀರನ್ನೇ ಬೆಂಗಳೂರಿನ ತಿಪ್ಪಗೊಂಡನಹಳ್ಳಿ, ಚನ್ನಪಟ್ಟಣದ ಕಣ್ವ, ಹೆಸರಘಟ್ಟ, ಮಂಚನಬೆಲೆ ಮುಂತಾದ ಕೆರೆ ಮತ್ತು ಜಲಾಶಯಗಳಿಗೆ ತುಂಬಿಸಿ ವರ್ಷಪೂರ್ತಿ ಕುಡಿಯುವ ನೀರು ಕೊಡಲು ಯೋಜನೆ ರೂಪಿಸಲಾಗಿದೆ.

ಇದು ಇನ್ನೂ ಆರಂಭದ ಪರಿಕಲ್ಪನೆಯಷ್ಟೆ. ಅಲ್ಲಿ ಇನ್ನೂ ಡ್ಯಾಂ ಕಟ್ಟಿಲ್ಲ; ನೀರನ್ನೂ ಶೇಖರಿಸಿಲ್ಲ. ಆದರೆ ಅದಕ್ಕೆ ತಮಿಳುನಾಡು ತಕರಾರು ಇದೆ. ಅವರ ವಾದ ಇಷ್ಟೆ. ಕಾವೇರಿ ವಿವಾದಕ್ಕೆ ನ್ಯಾಯಮಂಡಳಿ ಅಂತಿಮ ತೀರ್ಪು ಪ್ರಕಟಿಸುವ ಮುನ್ನ ನ್ಯಾಯಮಂಡಳಿಯ ಮುಂದೆ ಈ ಯೋಜನೆಯ ಪ್ರಸ್ತಾಪವಾಗಿರಲಿಲ್ಲ ಎಂಬುದು.  ಹಾಗಾಗಿ ಈ ಯೋಜನೆಯನ್ನು ಈಗ ಕೈಗೆತ್ತಿಕೊಂಡರೆ ನ್ಯಾಯಮಂಡಳಿ ತೀರ್ಪನ್ನು ಉಲ್ಲಂಘಿಸಿದಂತಾಗುತ್ತದೆ. ಮೇಲಾಗಿ ಕರ್ನಾಟಕ ಸರ್ಕಾರ, ತಮಿಳುನಾಡಿಗೆ ಈ ಬಗ್ಗೆ ಮಾಹಿತಿ ನೀಡದೆ ಯೋಜನೆಯನ್ನು ಕೈಗೆತ್ತಿಕೊಂಡಿದೆ.

ನ್ಯಾಯಮಂಡಳಿ ತೀರ್ಪಿನ 13ನೇ ಪರಿಚ್ಛೇದದ ಪ್ರಕಾರ ತಗ್ಗು ಪ್ರದೇಶದ ಕೃಷಿಗೆ ಕೊರತೆಯಾಗದಂತೆ ನೀರು ಬಿಡಬೇಕು. ಈ ಯೋಜನೆ ಪೂರ್ಣಗೊಂಡರೆ ತಮಿಳುನಾಡಿನ ಕೃಷಿಗೆ ಜೂನ್‌ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಬಿಡಬೇಕಾದ ನೀರಿಗೆ ಖೋತಾ ಆಗುವ ಸಾಧ್ಯತೆ ಇದೆ.

ತಮಿಳುನಾಡಿಗೆ ನಿಸರ್ಗದತ್ತವಾಗಿ ಸೇರಬೇಕಾದ ಹೆಚ್ಚುವರಿ ನೀರನ್ನು ಕರ್ನಾಟಕ ಹಿಡಿದಿಟ್ಟುಕೊಂಡಂತಾಗುತ್ತದೆ- ಹೀಗೆ ಅವರ ಆಕ್ಷೇಪಣೆಗಳು ಬೆಳೆಯುತ್ತಾ ಹೋಗಿವೆ.

ನ್ಯಾಯಮಂಡಳಿಯ ತೀರ್ಪಿನಂತೆ 192 ಟಿ.ಎಂ.ಸಿ. ಅಡಿ ನೀರು ಕೊಟ್ಟ ಮೇಲೆ ಅದರ ತೀರ್ಪನ್ನು ಹೇಗೆ ಉಲ್ಲಂಘಿಸಿದಂತಾಗುತ್ತದೆ? ಮೇಲಾಗಿ ಕರ್ನಾಟಕ ಸರ್ಕಾರ ತನ್ನ ಜಲಾನಯನ ಯೋಜನೆಗಳ ಮಾಹಿತಿಯನ್ನು ತಮಿಳುನಾಡು ಸರ್ಕಾರಕ್ಕೆ  ನೀಡಲೇಬೇಕೆಂಬ ಷರತ್ತು ಮಧ್ಯಂತರ ತೀರ್ಪಿನಲ್ಲಿತ್ತೇ ವಿನಾ ಅಂತಿಮ ತೀರ್ಪಿನಲ್ಲಿ ಎಲ್ಲಿದೆ? ಅಂದಮೇಲೆ ಮಾಹಿತಿ ಕೊಡುವ ಅಗತ್ಯವಾದರೂ ಎಲ್ಲಿದೆ? 13ನೇ ಪರಿಚ್ಛೇದದ ಪ್ರಕಾರ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಕೊಡಬೇಕಾದ ನೀರಿನ ಕುರಿತು ನಮ್ಮವರು ಯೋಚಿಸಬೇಕೆ ಹೊರತು ಅವರಲ್ಲ!  

ಹಾಗಾಗಿ ತಮಿಳುನಾಡಿನ ಈ ಯಾವ ವಾದದಲ್ಲೂ ಹುರುಳಿಲ್ಲ. ಅವರು ಹೇಳಲೇಬೇಕೆಂದು ಹೊರಟಿರುವುದು ಅವರ ಕೊನೆಯ ಆಕ್ಷೇಪಣೆಯಲ್ಲಿ ಸ್ಪಷ್ಟವಾಗಿದೆ. ಅದೇನೆಂದರೆ ನಿಸರ್ಗದತ್ತವಾಗಿ ತಮಿಳುನಾಡಿಗೆ ಸೇರಬೇಕಾದ ನೀರನ್ನು ಕರ್ನಾಟಕ ಹಿಡಿದಿಟ್ಟುಕೊಂಡಂತಾಗುತ್ತದೆ ಎಂಬುದೇ ಅವರ ನೇರ ಆಕ್ಷೇಪಣೆ.

ರಾಷ್ಟ್ರೀಯ ಜಲನೀತಿ ಕೂಡ ಕುಡಿಯುವ ನೀರಿಗೆ ಮೊದಲ ಆದ್ಯತೆ ಕೊಟ್ಟಿರುವುದರಿಂದ ಮೇಕೆದಾಟು ಯೋಜನೆಯಿಂದ ಕರ್ನಾಟಕ ಹಿಂದೆ ಸರಿಯಬೇಕಾದ ಅಗತ್ಯ ಇಲ್ಲ. ಅದರಲ್ಲೂ ಡಿಪಿಆರ್‌  ವರದಿ ಬಂದ ಬಳಿಕ ಸುಪ್ರೀಂ ಕೋರ್ಟ್ ಹಾಗೂ ನದಿ ಪ್ರಾಧಿಕಾರದ ಮುಂದೆ ಆ ವರದಿಯನ್ನು ಮಂಡಿಸಿ ಅದರ ಅನುಮೋದನೆ ಪಡೆದ ನಂತರವೇ ಯೋಜನೆಯನ್ನು ಪ್ರಾರಂಭಿಸುತ್ತೇವೆಂದು ಸರ್ಕಾರ ಸ್ಪಷ್ಟವಾಗಿಯೇ ಹೇಳಿದೆ.

ಹಾಗೆ ನೋಡಿದರೆ ಇದು ಕುಡಿಯುವ ನೀರಿನ ಯೋಜನೆ. ಕೃಷಿಗೆ 192 ಟಿ.ಎಂ.ಸಿ. ಅಡಿ ನೀರು ಕೊಟ್ಟರೆ, ಕುಡಿಯುವ ನೀರಿಗಾಗಿ ಚೆನ್ನೈ ಒಂದಕ್ಕೇ 5 ಟಿ.ಎಂ.ಸಿ. ಅಡಿ ನೀರನ್ನು ಕರ್ನಾಟಕ ಕೊಡುತ್ತಿದೆ. ನೆರೆಯ ಆಂಧ್ರಪ್ರದೇಶ, ಕೃಷ್ಣಾ ನದಿ ನೀರು ಹರಿಸಲು ಮಡಕಶಿರಾದಿಂದ ತುಮಕೂರಿನ ಪಾವಗಡದ ಮಾರ್ಗದಲ್ಲಿ ಪೈಪ್‌ಲೈನ್ ಹಾಕಿದೆ. ಇದೇ ತಮಿಳುನಾಡು ಕನ್ನಡಿಗರ ವಿರೋಧದ ನಡುವೆಯೂ ಹೊಗೇನಕಲ್‌ನಿಂದ ಕೃಷ್ಣಗಿರಿಗೆ ನೀರು ತೆಗೆದುಕೊಂಡು ಹೋಗಿದೆ. ಇಷ್ಟೆಲ್ಲಾ ನಡೆದರೂ ಇವರಿಗೆ ಕೊಡುವುದನ್ನು ಕೊಟ್ಟು ನಮ್ಮ ನೀರಿಗೆ ನಾವು ಚೆಕ್‌ಡ್ಯಾಂ ಕಟ್ಟಿಕೊಂಡರೆ, ಇವರು ಆಕ್ಷೇಪಿಸುತ್ತಾರಲ್ಲ!

ಇದು ಯಾವ ನ್ಯಾಯ? ಕೆಆರ್‌ಎಸ್‌ ಗರಿಷ್ಠ ಮಟ್ಟ 124 ಅಡಿ. ಆದರೆ ಈ ಆಳವನ್ನು ಮೀಟರ್‌ ಇಟ್ಟು ಚೆಕ್ ಮಾಡಿದ್ದು ಯಾವಾಗ? ಕೆಆರ್‌ಎಸ್‌ ನಲ್ಲಿ ಹೂಳು ತುಂಬಿದೆ. ಅದನ್ನು ತೆಗೆದರೆ ನೀರು ಸಂಗ್ರಹ ಹೆಚ್ಚುತ್ತದೆ. ಇದರಿಂದ ಎರಡೂ ರಾಜ್ಯಗಳಿಗೆ ಅನುಕೂಲ. ಆದರೆ ಈ ಹೂಳೆತ್ತಲು ಹೋದರೆ ಅದಕ್ಕೂ ತಕರಾರು.

ಜಲಾಶಯಗಳ ಹೂಳೆತ್ತಿ ನೀರು ಸಂಗ್ರಹಿಸಿದರೆ ತಪ್ಪೇ? ಹರಿದುಹೋಗುವ ಹೆಚ್ಚುವರಿ ನೀರಿಗೆ ಚೆಕ್ ಡ್ಯಾಂ ಕಟ್ಟಿದರೆ ತಪ್ಪೇ? ಕಟ್ಟಿದ ಚೆಕ್ ಡ್ಯಾಂನಿಂದ ವಿದ್ಯುತ್ ಉತ್ಪಾದಿಸಿದರೆ ತಪ್ಪೇ? ಬೇಸಿಗೆಯಲ್ಲಿ ಕುಡಿವ ನೀರಿಗೆ ತತ್ವಾರವಾದಾಗ ದಾಹ ತೀರಿಸಿದರೆ ತಪ್ಪೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT