ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಘನಾ ಎಂಬ ಪ್ರೇರಣಾ!

ವ್ಯಕ್ತಿ
Last Updated 28 ನವೆಂಬರ್ 2015, 19:36 IST
ಅಕ್ಷರ ಗಾತ್ರ

ಎಂಜಿನಿಯರಿಂಗ್‌ ಪದವಿ ಪಡೆದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಕೆಲಸ ಗಿಟ್ಟಿಸಿ ಕೈ ತುಂಬ ಸಂಬಳ ಪಡೆದರೆ ‘ಲೈಫ್‌ ಸೆಟಲ್‌ ಆಯಿತು’ ಎಂದುಕೊಳ್ಳುವವರೇ ಹೆಚ್ಚು. ಅಂಥದ್ದರಲ್ಲಿ ಕಂಪ್ಯೂಟರ್‌ ಸೈನ್ಸ್‌ನಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದು ಪ್ರತಿಷ್ಠಿತ  ಕಂಪೆನಿಯ ಉದ್ಯೋಗ ತೊರೆದು, ಅಂಗವಿಕಲರ ಸೇವೆಯಲ್ಲೇ ಸಾರ್ಥಕತೆ ಕಾಣುತ್ತಿರುವವರು ಬೆಂಗಳೂರಿನ ‘ಪ್ರೇರಣಾ ರಿಸೋರ್ಸ್ ಸೆಂಟರ್‌’ನ ಮುಖ್ಯಸ್ಥೆ ಮೇಘನಾ ಜೋಯಿಸ್.

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ 2015ನೇ ಸಾಲಿನ ರಾಷ್ಟ್ರ ಪ್ರಶಸ್ತಿಗೆ ಮೇಘನಾ ಆಯ್ಕೆಯಾಗಿದ್ದಾರೆ.
ನಿವೃತ್ತ ಕೆ.ಎ.ಎಸ್‌. ಅಧಿಕಾರಿ ಜಗದೀಶ್‌ ಜೋಯಿಸ್‌ ಅವರ ಮಗಳು ಮೇಘನಾ, ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿ ಪ್ರೇರಣಾ ರಿಸೋರ್ಸ್‌ ಸೆಂಟರ್‌ನ ಮೂಲಕ ನೂರಾರು ಅಂಗವಿಕಲ ಹೆಣ್ಣು ಮಕ್ಕಳಿಗೆ ಸ್ವಾವಲಂಬಿ ಬದುಕು ನೀಡುತ್ತಿದ್ದಾರೆ. 18ರಿಂದ 45ರ ವಯೋಮಾನದವರು ಇಲ್ಲಿ ಆಶ್ರಯ ಪಡೆದಿದ್ದಾರೆ.

ಮೇಘನಾರಿಗೆ ಇದು ಅಮ್ಮನಿಂದ ಬಂದ ಹೊಣೆಗಾರಿಕೆ. 1994ರಲ್ಲಿ ಇವರ ತಾಯಿ ಪ್ರಶಾಂತಾ ಅವರು ಹುಟ್ಟು ಹಾಕಿದ್ದ ಸಂಸ್ಥೆ ಪ್ರೇರಣಾ. ಆದರೆ, 2007ರಲ್ಲಿ ಅಮ್ಮ ಅನಾರೋಗ್ಯಕ್ಕೆ ತುತ್ತಾದಾಗ  ‘ಪ್ರೇರಣಾಕ್ಕೆ ಮುಂದೆ ಯಾರು ದಿಕ್ಕು’ ಎಂಬ  ಪ್ರಶ್ನೆ ಎದುರಾಯಿತು. ಆಗ ಉತ್ತರವಾಗಿ ಬಂದವರು ಮೇಘನಾ.

ಅಮ್ಮನ ಚಟುವಟಿಕೆಗಳನ್ನು ಚಿಕ್ಕಂದಿನಲ್ಲಿಯೇ ನೋಡುತ್ತಾ ಬೆಳೆದ ಮೇಘನಾರಿಗೆ ಅಂಗವಿಕಲರ ಸೇವೆ  ಕಷ್ಟದ ಕೆಲಸವಾಗಲಿಲ್ಲ. ಮನೆಯ ಒಂದು ಭಾಗದಲ್ಲಿ ಅಮ್ಮ ಅಂಗವಿಕಲರಿಗೆ ಆಶ್ರಯ ನೀಡಿದ್ದರೆ, ಮಗಳು ಶಾಲೆಯಿಂದ ಬಂದ ನಂತರ ಆ ಮಕ್ಕಳಿಗೆ ನೃತ್ಯ ಕಲಿಸುತ್ತಿದ್ದಳು. ಆಗಲೇ ಅವರೆಲ್ಲರ ಪಾಲಿಗೆ ‘ಮೇಘನಕ್ಕ’ ಎನಿಸಿದ್ದರು. ಅಂಗವಿಕಲರ ಜೊತೆಗೆ ಬೆಳೆದು ಬಂದಿರುವ ಕಾರಣಕ್ಕೆ ಅವರ ಅಗತ್ಯಗಳು, ಅವರನ್ನು ಮುಖ್ಯವಾಹಿನಿಗೆ ತರುವಲ್ಲಿ ಎದುರಾಗುವ ಸವಾಲುಗಳ ಸ್ಪಷ್ಟ ಅರಿವಿತ್ತು.  ಹೀಗಾಗಿ  ಪ್ರೇರಣಾ ಸಂಸ್ಥೆ ಮೇಘನಾ ಅವರ ಬದುಕಿನ ಭಾಗವೇ ಆಗಿಬಿಟ್ಟಿದೆ.

ರಾಜ್ಯದ ನಾನಾ ಭಾಗಗಳಿಂದ ಬಂದ 18 ವರ್ಷಕ್ಕಿಂತ ಮೇಲ್ಪಟ್ಟ ಅಂಗವಿಕಲ ಯುವತಿಯರಿಗೆ ಇಲ್ಲಿ  ಪುನರ್ವಸತಿ ಕಲ್ಪಿಸಲಾಗಿದೆ. ಕಾಲಿಲ್ಲದವರು, ಕಣ್ಣು, ಶ್ರವಣದೋಷ ಇರುವವರಿಗೆ ಕೌಶಲ ತರಬೇತಿ ನೀಡಿ ಕಾರ್ಖಾನೆಗಳಲ್ಲಿ ಕೆಲಸ ಕೊಡಿಸುತ್ತಿದ್ದಾರೆ. ಮಾನಸಿಕ ಅಸ್ವಸ್ಥರು, ಸಂಪೂರ್ಣ ಅಂಗವಿಕಲರಾದವರೂ ತಮ್ಮ ದೈನಂದಿನ ಕೆಲಸಗಳನ್ನು ತಾವೇ ಮಾಡಿಕೊಳ್ಳುವಂತೆ ತರಬೇತಿ ನೀಡುತ್ತಿದ್ದಾರೆ.

ಹದಿನೆಂಟು ವರ್ಷದವರೆಗೆ ಶಿಕ್ಷಣ, ಆಶ್ರಯ ನೀಡುವ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು ನೂರಾರಿವೆ. ಆದರೆ, ಆ ನಂತರ ಮುಂದೇನು ಎಂಬ ಪ್ರಶ್ನೆಗೆ ಸರ್ಕಾರದಲ್ಲಿಯೂ ಉತ್ತರವಿಲ್ಲ. ಅಲ್ಲಿಯವರೆಗೂ ಸಂಸ್ಥೆಯ ಆಶ್ರಯದಲ್ಲಿದ್ದ  ಅಂಗವಿಕಲರು ಅಲ್ಲಿಂದ ಹೊರಬಂದಾಗ ಉಂಟಾಗುವ ಅಭದ್ರತೆ ಮತ್ತು ಪೋಷಕರಲ್ಲಿ ಉಂಟಾಗುವ ಪ್ರಶ್ನೆಗಳಿಗೆ ಮೇಘನಾ ಉತ್ತರವಾಗಿದ್ದಾರೆ.

ತಮ್ಮ ಸಂಸ್ಥೆಗೆ ಬರುವ ನಾನಾ ಬಗೆಯ ಅಂಗವಿಕಲ ಯುವತಿಯರಿಗೆ ಹೆಚ್ಚಿನ ಕೌಶಲದ ಅಗತ್ಯವಿಲ್ಲದ ಕೆಲಸಗಳಾದ ಪ್ಯಾಕಿಂಗ್, ಕಚೇರಿಗಳಲ್ಲಿ ಅರ್ಜಿ ವಿತರಿಸುವುದು, ದೂರವಾಣಿ ಕರೆ ನಿರ್ವಹಣೆ ಮುಂತಾದ 60 ಕೆಲಸಗಳನ್ನು ಗುರುತಿಸಿ ಕಾರ್ಖಾನೆಗಳಲ್ಲಿ, ಗಾರ್ಮೆಂಟ್ಸ್‌ಗಳಲ್ಲಿ ಉದ್ಯೋಗ ಕೊಡಿಸುತ್ತಿದ್ದಾರೆ.

ಉದ್ಯೋಗ ಪಡೆದ ಯುವತಿಯರು ಸ್ವತಂತ್ರವಾಗಿ ಬದುಕುವುದು ಸಾಧ್ಯವಾಗಬೇಕು ಎಂಬ ಉದ್ದೇಶದಿಂದ ಭಿನ್ನ ಅಂಗವೈಕಲ್ಯ ಇರುವ  ಐದರಿಂದ ಆರು ಮಂದಿಯ ಗುಂಪುಗಳನ್ನು ಮಾಡಿ ಬಾಡಿಗೆ ಮನೆಯಲ್ಲಿ ವಾಸಿಸಲು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಅವರೆಲ್ಲ ಕೆಲಸಗಳನ್ನು ಹಂಚಿಕೊಂಡು ಮಾಡುತ್ತಾ ಸ್ವತಂತ್ರವಾಗಿ ಬದುಕುವಷ್ಟು ಸಬಲರಾಗಿದ್ದಾರೆ.

ಪ್ರೇರಣಾದಲ್ಲಿ ಆಶ್ರಯ ಪಡೆಯುತ್ತಿರುವವರಲ್ಲಿ ಹೆಚ್ಚಿನವರು ಗ್ರಾಮೀಣ ಪ್ರದೇಶದಿಂದ ಬಂದವರು, ಶಿಕ್ಷಣ ವಂಚಿತರು, ನಗರ ಜೀವನದ ಅರಿವಿಲ್ಲದವರು. ಕೆಲವರಷ್ಟೇ ಪ್ರಾಥಮಿಕ ಶಿಕ್ಷಣ ಪಡೆದವರಿದ್ದಾರೆ. ಇದರ ಜೊತೆಗೆ ಅಂಗವೈಕಲ್ಯದ ಕಾರಣಕ್ಕೆ ಸ್ವಂತ ಕೆಲಸಗಳನ್ನು ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳದವರು ಇರುತ್ತಾರೆ. ಈ ಎಲ್ಲ ಸವಾಲುಗಳ ನಡುವೆ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ಸುಲಭದ ಕೆಲಸವಲ್ಲ. ಆದರೆ, ಇಂಥ ಅವಕಾಶ ವಂಚಿತರನ್ನು  ಮುಖ್ಯವಾಹಿನಿಗೆ ತರುವುದೇ ಮೇಘನಾ ಅವರ ಮುಖ್ಯ ಗುರಿಯಾಗಿದೆ.

ಸಂಪೂರ್ಣ ಪುನರ್ವಸತಿಯನ್ನು ಧ್ಯೇಯವಾಗಿಟ್ಟುಕೊಂಡ ಇವರು ಅಂಗವಿಕಲರಿಗೆ ಕೆಲಸ, ಮದುವೆ, ಆಶ್ರಯ ಈ ಮೂರರಲ್ಲಿ ಯಾವುದಾದರೂ ಒಂದು ಅಗತ್ಯವನ್ನು ಒದಗಿಸಿಕೊಡುವ ಗುರಿ ಇಟ್ಟುಕೊಂಡಿದ್ದಾರೆ. ಇದುವರೆಗೆ 800ಕ್ಕೂ ಹೆಚ್ಚು ಅಂಗವಿಕಲರಿಗೆ ವಿವಿಧ ಕಡೆ ಉದ್ಯೋಗ ಕೊಡಿಸಿದ್ದಾರೆ. 26 ಯುವತಿಯರಿಗೆ ಮದುವೆ ಮಾಡಿಸಿದ್ದಾರೆ. ಉದ್ಯೋಗ, ಮದುವೆ ಇವೆರಡೂ ಸಾಧ್ಯವಾಗದ 120 ಯುವತಿಯರಿಗೆ ಪ್ರೇರಣಾದಲ್ಲಿ ಆಶ್ರಯ ನೀಡಿ ಪೋಷಿಸುತ್ತಿದ್ದಾರೆ.

ಹೊರಗೆ ಹೋಗಿ ದುಡಿಯಲು ಸಾಧ್ಯವಾಗದ ಯುವತಿಯರಿಗೆ ಪೇಪರ್‌ ಬ್ಯಾಗ್‌, ಪ್ಲಾಸ್ಟಿಕ್‌ ಹೂಮಾಲೆ, ಬಟ್ಟೆಯ ಮ್ಯಾಟ್‌ ಮುಂತಾದ ವಸ್ತುಗಳನ್ನು ತಯಾರಿಸುವ ತರಬೇತಿ ನೀಡಿ ಚಟುವಟಿಕೆಯಿಂದ ಇರುವಂತೆ ಮಾಡುತ್ತಿದ್ದಾರೆ.

ಅನೇಕರು ನಿರ್ಗತಿಕ ಅಂಗವಿಕಲರನ್ನು ಪ್ರೇರಣಾದ ಬಾಗಿಲಿಗೆ ತಂದು ಬಿಡುತ್ತಾರೆ. ಭಿಕ್ಷಾಟನೆಯಲ್ಲಿ ನಿರತರಾಗಿದ್ದವರನ್ನು ಪೊಲೀಸರು ತಂದು ಬಿಡುತ್ತಾರೆ. ಇದರ ಜೊತೆಗೆ ಪ್ರೇರಣಾ ಸಂಸ್ಥೆ ನಡೆಸುವ ಅಂಗವಿಕಲರ ಜಾಗೃತಿ ಶಿಬಿರಗಳ ಮೂಲಕ ಬರುವವರೂ ಇದ್ದಾರೆ. ಇವರೆಲ್ಲರಿಗೂ ಯಾವುದೇ ತಾರತಮ್ಯ ಮಾಡದೆ ಆಶ್ರಯ ನೀಡುತ್ತಿದ್ದಾರೆ ಮೇಘನಾ.

ಸಂಪೂರ್ಣವಾಗಿ ದಾನಿಗಳ ನೆರವಿನಿಂದ ನಡೆಸುತ್ತಿರುವ ಸಂಸ್ಥೆಗೆ  60 ಜನ ಕಾಯಂ ದಾನಿಗಳಿದ್ದಾರೆ. ಅಕ್ಕಿ, ಬೇಳೆ ಮುಂತಾದ ವಸ್ತುಗಳನ್ನು ದಾನ ಮಾಡುವವರೂ ಇದ್ದಾರೆ. ದಾನಿಗಳಿಂದ ಬಟ್ಟೆ ಪಡೆಯುತ್ತಾರೆ. ಕೆಲವರು ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವದ ಹೆಸರಿನಲ್ಲಿ ದಾನ ಮಾಡುತ್ತಾರೆ. ಸ್ವಂತ ನಿವೇಶನ, 11 ಕೊಠಡಿಗಳ ವ್ಯವಸ್ಥಿತ ಕಟ್ಟಡದಲ್ಲಿ ಪ್ರೇರಣಾ ಕಾರ್ಯ ನಿರ್ವಹಿಸುತ್ತಿದೆ. ಪ್ರೇರಣಾಕ್ಕೆ ಬರುವ ಎಲ್ಲ ಯುವತಿಯರಿಗೆ ಮೊದಲು ಮನೆ ನಿರ್ವಹಣೆ, ಅಡುಗೆ, ಮನೆಗೆಲಸ ಕಲಿಸುತ್ತಾರೆ. ಹಾಗಾಗಿ ಇಡೀ ಸಂಸ್ಥೆಯಲ್ಲಿ ಆಯಾಗಳನ್ನು ಇಟ್ಟುಕೊಂಡಿಲ್ಲ. 

ಮೇಘನಾ ಅವರಿಗೆ ಈಗ ಕೇವಲ 30 ವರ್ಷ. ಇವರಿಗೆ ಮೂರು ವರ್ಷದ ಮಗನಿದ್ದಾನೆ. ಪತಿ ಚಲನಚಿತ್ರ ನಿರ್ದೇಶಕ ವಿಶ್ರುತ್ ಪತ್ನಿಯ ಎಲ್ಲ ಕೆಲಸಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT