ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಘಸ್ಫೋಟಕ್ಕೆ 12 ಬಲಿ

Last Updated 1 ಜುಲೈ 2016, 23:30 IST
ಅಕ್ಷರ ಗಾತ್ರ

ಡೆಹ್ರಾಡೂನ್‌ (ಪಿಟಿಐ): ಉತ್ತರಾಖಂಡದಲ್ಲಿ ಮತ್ತೆ ಮೇಘಸ್ಫೋಟ ಸಂಭವಿಸಿದ್ದು, ಹಠಾತ್‌ ಪ್ರವಾಹ ಹಾಗೂ ಭಾರಿ ಭೂಕುಸಿತದಿಂದ 12 ಮಂದಿ ಬಲಿಯಾಗಿದ್ದಾರೆ. 17 ಮಂದಿ ಅವಶೇಷಗಳಡಿ ಸಿಲುಕಿದ್ದು, ಬದುಕುಳಿದಿರುವ ಸಂಭವ ತೀರಾ ಕಡಿಮೆ ಎನ್ನಲಾಗಿದೆ.

ಕೇಂದ್ರ ಸರ್ಕಾರ ನೆರವಿಗೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ಕೈಜೋಡಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯನ್ನು (ಎನ್‌ಡಿಆರ್‌ಎಫ್‌) ಸ್ಥಳಕ್ಕೆ ಕಳುಹಿಸಿದೆ.

ಪಿಥೋರಗಡ ಜಿಲ್ಲೆಯಲ್ಲಿ ಭಾರಿ ಹಾನಿ ಉಂಟಾಗಿದ್ದು, ಎಂಟು ಮಂದಿ ಬಲಿಯಾಗಿದ್ದಾರೆ. ಚಮೋಲಿ ಜಿಲ್ಲೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.
ಪಿಥೋರಗಡದ ಸಿಂಘಾಲಿ ಪ್ರದೇಶದಲ್ಲಿ ಶುಕ್ರವಾರ ಬೆಳಗಿನ ಜಾವ ಮೇಘಸ್ಫೋಟ ಸಂಭವಿಸಿದೆ. ಇದರಿಂದ ಸುಮಾರು 50 ಕಿ.ಮೀ ವ್ಯಾಪ್ತಿಯಲ್ಲಿ ಎರಡು ಗಂಟೆ ಅವಧಿಯಲ್ಲಿ 100 ಮಿ.ಮೀ ಗೂ ಅಧಿಕ ಮಳೆ ಬಿದ್ದಿದೆ.

ಭಾರಿ ಮಳೆಯಿಂದ ಏಳು ಗ್ರಾಮಗಳಲ್ಲಿ ಪ್ರವಾಹ ಉಂಟಾಗಿದ್ದು, ಹಲವು ಮನೆಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ‘ಸಿಂಘಾಲಿ ಪ್ರದೇಶದಲ್ಲಿ ಐದು ಹಾಗೂ ಥಾಲ್‌ ಗ್ರಾಮದಲ್ಲಿ ಮೂರು ಮೃತದೇಹಗಳು ದೊರೆತಿವೆ. ಕಾಣೆಯಾದ ಇತರರಿಗಾಗಿ ಶೋಧ ಕಾರ್ಯ ಮುಂದುವರಿದಿದೆ’ ಎಂದು ಪಿಥೋರ್‌ಗಡ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಎಚ್‌.ಸಿ. ಸೆಮ್ವಾಲ್‌ ಹೇಳಿದ್ದಾರೆ.

ಮೇಘಸ್ಫೋಟ: ಬದರೀನಾಥ ಯಾತ್ರಿಗಳ ರಕ್ಷಣೆ
ಡೆಹ್ರಾಡೂನ್‌ (ಪಿಟಿಐ): ಉತ್ತರಾಖಂಡದಲ್ಲಿ ಸಂಭವಿಸಿದ ಮೇಘಸ್ಫೋಟ ಘಟನೆಯಿಂದ ಬದರೀನಾಥ ಮತ್ತು  ಕೇದಾರನಾಥ ಯಾತ್ರಿಗಳು  ಸಂಕಷ್ಟಕ್ಕೆ ಸಿಲುಕಿದ್ದಾರೆ.

ಚಮೋಲಿಯಲ್ಲಿನ ಹೋಟೆಲ್‌ ಬಳಿ ಭೂಕುಸಿತದಿಂದ ಬದರೀನಾಥಕ್ಕೆ ಹೋಗುತ್ತಿದ್ದ 70 ಯಾತ್ರಿಗಳು ಸಂಕಷ್ಟಕ್ಕೆ ಸಿಲುಕಿದ್ದರು. ಪೊಲೀಸರು ಹಾಗೂ ಎಸ್‌ಡಿಆರ್‌ಎಫ್‌ ಸಿಬ್ಬಂದಿ ಎಲ್ಲ ಯಾತ್ರಿಗಳನ್ನು ರಕ್ಷಿಸಿದರು.

17 ಮಂದಿ ನಾಪತ್ತೆ:  ‘ಏಳು ಗ್ರಾಮಗಳ 17 ಮಂದಿ ಕಾಣೆಯಾಗಿದ್ದು, ಅವರ ಪತ್ತೆಗೆ ಐಟಿಬಿಪಿ, ಎಸ್‌ಎಸ್‌ಬಿ ಸಿಬ್ಬಂದಿ ಪ್ರಯತ್ನಿಸುತ್ತಿದ್ದಾರೆ’ ಎಂದು ಜಿಲ್ಲಾ ವಿಕೋಪ ನಿರ್ವಹಣೆ ಅಧಿಕಾರಿ ಆರ್‌.ಎಸ್‌. ರಾಣಾ ಹೇಳಿದ್ದಾರೆ.

‘ಸುಗಮ ಸಂಚಾರ ಮತ್ತು ಸಂವಹನ ವ್ಯವಸ್ಥೆಯ ಅಭಾವದ ಕಾರಣದಿಂದ ರಕ್ಷಣಾ ಕಾರ್ಯಕರ್ತರು ಪ್ರವಾಹಪೀಡಿತ ಪ್ರದೇಶ ತಲುಪಲು ಸಾಕಷ್ಟು ಕಷ್ಟಪಟ್ಟರು’ ಎಂದು ಅವರು ತಿಳಿಸಿದ್ದಾರೆ. 

2 ಲಕ್ಷ ಪರಿಹಾರ:  ಉತ್ತರಾಖಂಡ ಮುಖ್ಯಮಂತ್ರಿ ಹರೀಶ್‌ ರಾವತ್‌ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ₹ 2 ಲಕ್ಷ ಪರಿಹಾರ ಪ್ರಕಟಿಸಿದ್ದಾರೆ.

‘ಭಾರಿ ಪ್ರವಾಹದಿಂದ ಮನೆಗಳು ಕೊಚ್ಚಿಕೊಂಡು ಹೋಗಿವೆ. ಹಲವು ಮಂದಿ ಇನ್ನೂ ಅವಶೇಷಗಳಡಿ ಸಿಲುಕಿದ್ದಾರೆ. ಐಟಿಬಿಪಿ, ಎಸ್‌ಡಿಆರ್‌ಎಫ್‌ ಮತ್ತು ಅರೆ ಸೇನಾ ಪಡೆ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ’ ಎಂದು ರಾವತ್‌ ಹೇಳಿದ್ದಾರೆ.

ನೆರವಿನ ಭರವಸೆ: ಮೇಘಸ್ಫೋಟದಿಂದ ತೊಂದರೆ ಅನುಭವಿಸಿರುವ ಉತ್ತರಾಖಂಡಕ್ಕೆ ಕೇಂದ್ರ ಸರ್ಕಾರ ಎಲ್ಲ ರೀತಿಯ ನೆರವಿನ ಭರವಸೆ ನೀಡಿದೆ.
‘ಮೇಘಸ್ಫೋಟದಿಂದ ತೊಂದರೆಗೆ ಒಳಗಾದ ಪ್ರದೇಶಕ್ಕೆ ಎನ್‌ಡಿಆರ್‌ಎಫ್‌ ತಂಡಗಳು ತೆರಳಿವೆ. ಹೆಚ್ಚುವರಿ ತಂಡಗಳನ್ನು ಸನ್ನದ್ಧವಾಗಿಡಲಾಗಿದೆ’ ಎಂದು ರಾಜನಾಥ್‌ ತಿಳಿಸಿದ್ದಾರೆ.

ನೈನಿತಾಲ್‌, ಡೆಹ್ರಾಡೂನ್‌ ಮತ್ತು ಹರಿದ್ವಾರ ಸೇರಿದಂತೆ ಉತ್ತರಾಖಂಡದ ಹಲವೆಡೆ ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT