ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಘಸ್ಫೋಟ: ಸಂಕಷ್ಟದಲ್ಲಿ ಕನ್ನಡಿಗರು

ಉತ್ತರಾಖಂಡ ಮಳೆಗೆ ಸಿಲುಕಿದ ಬೆಂಗಳೂರು, ಬೆಳಗಾವಿ, ಕಲಬುರ್ಗಿ ಯಾತ್ರಿಕರು
Last Updated 30 ಮೇ 2016, 0:12 IST
ಅಕ್ಷರ ಗಾತ್ರ

ಬೆಂಗಳೂರು: ಉತ್ತರಾಖಂಡದಲ್ಲಿ  ಮೇಘಸ್ಪೋಟದಲ್ಲಿ 80 ಕನ್ನಡಿಗರು ಸಿಲುಕಿಕೊಂಡಿದ್ದು, ಇದರಲ್ಲಿ ಇಬ್ಬರು ಸ್ವಾಮೀಜಿ ಸೇರಿ 54 ಜನ ಸುರಕ್ಷಿತ ಸ್ಥಳ ತಲುಪಿದ್ದಾರೆ. ಉಳಿದ 26 ಜನ ಭಾನುವಾರ ರಾತ್ರಿ ತನಕ ಸಂಪರ್ಕಕ್ಕೆ ಸಿಕ್ಕಿಲ್ಲ.

ಬೆಂಗಳೂರು, ಬೆಳಗಾವಿ, ಕಲಬುರ್ಗಿ ಸೇರಿದಂತೆ ರಾಜ್ಯದ ವಿವಿಧ ಭಾಗದ ಯಾತ್ರಿಕರನ್ನು ಒಳಗೊಂಡ 45 ಮಂದಿಯ ತಂಡ  ಕೈಲಾಸ್‌ ಚಂದ್ರ ಪ್ರಜಾಪತಿ ನೇತೃತ್ವದಲ್ಲಿ ಯಾತ್ರೆಗೆ ತೆರಳಿತ್ತು.  ಈ  ತಂಡ ಪ್ರವಾಹದಲ್ಲಿ ಸಿಲುಕಿದೆ.    ಅವರು ಹಿಂತಿರುಗುವಾಗ, ದಾರಿಯಲ್ಲಿ ಸೇತುವೆ ಕೊಚ್ಚಿ ಹೋಗಿದೆ. ಹಾಗಾಗಿ  ಅವರು  ತವರಿಗೆ ಮರಳಲು  ಸಾಧ್ಯವಾಗುತ್ತಿಲ್ಲ. 45 ಜನರೂ ಉತ್ತರಾಖಂಡದ ಟೆಹ್ರಿ ಜಿಲ್ಲೆಯ ಚಮಿಯಲ್ ಎಂಬ ಹಳ್ಳಿಯ ಸತ್ಯಂ ವಸತಿಗೃಹದಲ್ಲಿ ಸುರಕ್ಷಿತವಾಗಿ ಉಳಿದುಕೊಂಡಿದ್ದಾರೆ. 

ಕೈಲಾಸ್‌ ಚಂದ್ರ ಪ್ರಜಾಪತಿ ಅವರು ವಿಪತ್ತು ನಿರ್ವಹಣಾ ಇಲಾಖೆಯ ಬೆಂಗಳೂರಿನ ನಿಯಂತ್ರಣ  ಕೇಂದ್ರವನ್ನು ಸಂಪರ್ಕಿಸಿ ಈ ಮಾಹಿತಿ ನೀಡಿದ್ದಾರೆ.
‘ತಾತ್ಕಾಲಿಕ ಸೇತುವೆ ನಿರ್ಮಾಣ ಕೆಲಸ ನಡೆಯುತ್ತಿದೆ. ನಾಳೆ  ಮರಳುವ ಸಾಧ್ಯತೆ ಇದೆ’ ಎಂದು ತಿಳಿಸಿದ್ದಾರೆ.

ಕೇದಾರನಾಥ ಯಾತ್ರೆಗೆ ತೆರಳಿದ್ದ  ತುಮಕೂರು ಜಿಲ್ಲೆ ಕೊರಟಗೆರೆಯ 9 ಮಂದಿಯ ತಂಡವೂ ಸುರಕ್ಷಿತ ಸ್ಥಳದಲ್ಲಿದೆ. ಈ ತಂಡದಲ್ಲಿ  ಕೊರಟಗೆರೆಯ ಹನುಮಂತಪ್ಪ ಸ್ವಾಮೀಜಿ ಮತ್ತು ವೀರಭದ್ರ ಶಿವಾಚಾರ್ಯಸ್ವಾಮೀಜಿ ಕೂಡ ಇದ್ದಾರೆ.  ಬೆಂಗಳೂರಿನ ನಾಗರಬಾವಿಯ 14 ಜನರ ತಂಡ ಹಾಗೂ ಧಾರವಾಡದ 12 ಜನರ ತಂಡ ಕೇದಾರನಾಥ ಯಾತ್ರೆಗೆ ತೆರಳಿತ್ತು.  ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ವಿಪತ್ತು ನಿರ್ವಹಣಾ ಇಲಾಖೆಯ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಸಿ.ಎಂ ಸೂಚನೆ: ಕನ್ನಡಿಗರನ್ನು ಸುರಕ್ಷಿತವಾಗಿ ಮರಳಿ ಕರೆತರಲು ಎಲ್ಲಾ ರೀತಿಯ ಪ್ರಯತ್ನ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

‘ರಾಜ್ಯ ಸರ್ಕಾರದ ದೆಹಲಿ ಸ್ಥಾನಿಕ ಆಯುಕ್ತರು ಉತ್ತರಾಖಂಡ ಟೆಹ್ರಿ ಜಿಲ್ಲಾಡಳಿತದ ಸಂಪರ್ಕದಲ್ಲಿದ್ದಾರೆ. ಅಲ್ಲದೆ ವಿಪತ್ತು ನಿರ್ವಹಣಾ ಇಲಾಖೆಯೂ ಸಂತ್ರಸ್ತರನ್ನು ಕರೆತರಲು ಸನ್ನದ್ಧವಾಗಿದೆ. ಇಲಾಖೆಯ ಸಿಬ್ಬಂದಿ ಅಲ್ಲಿನ ಕಂಟ್ರೋಲ್ ರೂಂನಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಕಚೇರಿಯ ಮೂಲಗಳು ತಿಳಿಸಿವೆ.
*
ಮಾಹಿತಿಗಾಗಿ ನಿಯಂತ್ರಣ ಕೊಠಡಿ ಸಂಖ್ಯೆ 1070 ಅಥವಾ 080 22340676 ಅನ್ನು ಸಂಪರ್ಕಿಸಬಹುದು ಎಂದು ಸಿಎಂ ಕಚೇರಿಯ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT