ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಯರ್‌ ಅಧಿಕಾರ ಇನ್ನೂ 4 ತಿಂಗಳು

ಊಹಾಪೋಹಗಳಿಗೆ ತೆರೆ; ಸತ್ಯನಾರಾಯಣ ಅವಧಿ ಅಬಾಧಿತ
Last Updated 22 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮೇಯರ್ ಬಿ.ಎಸ್. ಸತ್ಯ­ನಾರಾಯಣ ಹಾಗೂ ಉಪ ಮೇಯರ್ ಇಂದಿರಾ ಇಬ್ಬರೂ ಸೆಪ್ಟೆಂಬರ್ 4ರವರೆಗೆ ಅಧಿಕಾರದಲ್ಲಿ ಮುಂದುವರಿ­ಯು­­ವುದು ಖಚಿತವಾಗಿದ್ದು, ಈ ಸಂಬಂಧ ಎದ್ದಿದ್ದ ಎಲ್ಲ ಊಹಾಪೋಹಗಳಿಗೆ ತೆರೆ ಬಿದ್ದಿದೆ.

‘ಮೇಯರ್‌ ಹಾಗೂ ಉಪ ಮೇಯರ್‌ ಅವರನ್ನು 2013ರ ಸೆ. 4ರಂದು ಆಯ್ಕೆ ಮಾಡಲಾಗಿದೆ. ಅಲ್ಲಿಂದ ಒಂದು ವರ್ಷದ ಅವಧಿಗೆ, ಅಂದರೆ, 2014ರ ಸೆ. 4ರವರೆಗೆ ಅವರು ಅಧಿಕಾರದಲ್ಲಿ ಇರಲಿದ್ದಾರೆ’ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತ ಎಂ. ಲಕ್ಷ್ಮಿನಾರಾಯಣ ‘ಪ್ರಜಾವಾಣಿ’ ಗೆ ಸ್ಪಷ್ಟಪಡಿಸಿದರು.

‘ಮೇಯರ್‌ ಹಾಗೂ ಉಪ ಮೇಯರ್‌ ಅಧಿಕಾರಾವಧಿ ಕುರಿತಂತೆ ಯಾವುದೇ ಗೊಂದಲ ಇಲ್ಲ. ಆಯ್ಕೆಯಾದ ದಿನದಿಂದ ಒಂದು ವರ್ಷದವರೆಗೆ ಅವರು ಅಧಿಕಾರ ಹೊಂದಿರುತ್ತಾರೆ ಎಂಬುದು ಕರ್ನಾಟಕ ಪೌರಾಡಳಿತ ಕಾಯ್ದೆ –1976ರಲ್ಲಿ ತುಂಬಾ ಸ್ಪಷ್ಟವಾಗಿದೆ’ ಎಂದು ಅವರು ವಿವರಿಸಿದರು.

ಬಿಬಿಎಂಪಿಗೆ ಆಯ್ಕೆಯಾಗಿರುವ ಪ್ರಸಕ್ತ ಕೌನ್ಸಿಲ್‌ನ ಆಡಳಿತಾವಧಿ 2015ರ ಏಪ್ರಿಲ್‌ವರೆಗೆ ಇದೆ. ಈ ಆಡಳಿತಾವಧಿ­ಯಲ್ಲಿ ಮೊದಲ ಮೇಯರ್‌ ಆಗಿ ನಟರಾಜ್‌ ಅವರು 2010ರ ಏಪ್ರಿಲ್‌ 23ರಂದು ಅಧಿಕಾರ ಸ್ವೀಕರಿಸಿದ್ದರು. ಹೀಗಾಗಿ ಪ್ರತಿವರ್ಷ ಏಪ್ರಿಲ್‌ ತಿಂಗಳ ಕೊನೆಯ ವಾರದಲ್ಲಿ ನೂತನ ಮೇಯರ್‌ ಆಯ್ಕೆ ಮಾಡುವುದು ವಾಡಿಕೆಯಾಗಿತ್ತು.

ಮೀಸಲಾತಿ ವಿವಾದ: ಮೂರನೇ ಅವಧಿಗೆ (2012–13) ಡಿ.ವೆಂಕಟೇಶಮೂರ್ತಿ ಅವರು ಮೇಯರ್‌ ಆಗಿದ್ದರು. 2013ರ ಏಪ್ರಿಲ್‌ ಕೊನೆ ವಾರ­ದಲ್ಲಿ ಅವರು ಅಧಿ-­ಕಾರ ಹಸ್ತಾಂತರ ಮಾಡ­ಬೇಕಿತ್ತು. ಆದರೆ ಮುಂದಿನ (4ನೇ) ಅವಧಿ­ಯಲ್ಲಿ ಮೇಯರ್‌ ಮತ್ತು ಉಪ ಮೇಯರ್‌ ಅವರ ಮೀಸಲಾತಿ ನಿಗದಿ ಕುರಿತ ವಿವಾದ ಕೋರ್ಟ್‌ ಮೆಟ್ಟಿಲೇರಿ­ದ್ದರಿಂದ, ವಾಡಿಕೆ­ಯಂತೆ ಏಪ್ರಿಲ್‌ ಕೊನೆಯ ವಾರದಲ್ಲಿ ಈ ಸ್ಥಾನಗಳಿಗೆ ಚುನಾವಣೆ ನಡೆಸಲು ಆಗಲಿಲ್ಲ.

ವಿಧಾನಸಭಾ ಚುನಾವಣೆ ಸಹ ಬಂದಿದ್ದ­ರಿಂದ ಮೀಸಲಾತಿ ವಿವಾದ ಬಗೆಹರಿಯದೆ ಆಯ್ಕೆ ಪ್ರಕ್ರಿಯೆ ನನೆಗುದಿಗೆ ಬಿದ್ದಿತ್ತು. ಕಾನೂನು ತಜ್ಞರ ಅಭಿಪ್ರಾಯ ಪಡೆದ ಆಗಿನ ರಾಜ್ಯ ಸರ್ಕಾರ ವೆಂಕಟೇಶಮೂರ್ತಿ ಅವರನ್ನೇ ಉಸ್ತುವಾರಿ ಮೇಯರ್‌ ಆಗಿ ಮುಂದುವರಿಸಿತ್ತು.

ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಮೇಯರ್‌ ಹುದ್ದೆಯನ್ನು ಈಗಾಗಲೇ ಸಾಮಾನ್ಯ ವರ್ಗಕ್ಕೆ ಮೀಸಲಿಟ್ಟಿದ್ದು, ಅದಕ್ಕೆ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಹೈಕೋರ್ಟ್‌ಗೆ ಮಾಹಿತಿ ನೀಡಿತು. ಆಗ ಅಡೆತಡೆಗಳೆಲ್ಲ ನಿವಾರಣೆಯಾಗಿ, ಸೆ. 4ರಂದು ಚುನಾವಣೆ ನಡೆಯಿತು. ಹೀಗಾಗಿ ಸತ್ಯನಾರಾಯಣ ಮತ್ತು ಇಂದಿರಾ ಅವರು ಅಧಿಕಾರ ಸ್ವೀಕರಿಸುವಾಗ ಅದಾಗಲೇ ಏಪ್ರಿಲ್‌ ಕಳೆದು ನಾಲ್ಕು ತಿಂಗಳಾಗಿತ್ತು.

ದ್ವಂದ್ವ ನಿಲುವು: ಮೇಯರ್‌ ಹಾಗೂ ಉಪ ಮೇಯರ್‌ ಅವರ ಅಧಿಕಾರಾವಧಿಗೆ ಸಂಬಂಧಿಸಿದಂತೆ ಬಿಬಿಎಂಪಿ ಸದಸ್ಯರಿಂದ ದ್ವಂದ್ವ ಅಭಿಪ್ರಾಯ ಕೇಳಿಬಂದಿತ್ತು. ‘ಯಾವಾಗ ಅಧಿಕಾರ ಸ್ವೀಕಾರ ಮಾಡಿ­ದರೂ ಆಡಳಿತಾವಧಿ ಮುಗಿಯುವುದು ಮಾತ್ರ ಏಪ್ರಿಲ್‌ನಲ್ಲಿ’ ಎಂದು ಒಂದು ವರ್ಗ ಅಭಿಪ್ರಾಯಪಟ್ಟರೆ, ‘ಆಯ್ಕೆಯಾದ ದಿನದಿಂದ ಒಂದು ವರ್ಷದವರೆಗೆ ಅವರು ಅಧಿಕಾರದಲ್ಲಿ ಇರುತ್ತಾರೆ’ ಎಂಬುದು ಇನ್ನೊಂದು ವರ್ಗದ ಅಭಿಮತವಾಗಿತ್ತು.

ತಮ್ಮ ಅಧಿಕಾರಾವಧಿಗೆ ಸಂಬಂಧಿಸಿ-­ದಂತೆ ದ್ವಂದ್ವ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಸತ್ಯನಾರಾಯಣ, ಇದೇ ತಿಂಗಳ 4ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ‘ಕರ್ನಾಟಕ ಪೌರಾಡಳಿತ ಕಾಯ್ದೆ ಪ್ರಕಾರ ನಮ್ಮ ಅಧಿಕಾರಾವಧಿ ಸೆ. 4ರಂದು ಕೊನೆಗೊಳ್ಳಲಿದೆ’ ಎಂದು ಅವರ ಗಮನಕ್ಕೆ ತಂದಿದ್ದರು. ನಗರಾಭಿವೃದ್ಧಿ ಇಲಾಖೆಗೂ ಅವರು ಮಾಹಿತಿ ನೀಡಿದ್ದರು.

ಮೇಯರ್‌ ಅವರ ಈ ಕ್ರಮಕ್ಕೆ ಕೆಲವು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದರು. ಕೊನೆ ಅವಧಿಯಲ್ಲಿ ಮೇಯರ್‌ ಹುದ್ದೆ ಮಹಿ­ಳೆಗೆ ಮೀಸಲಾಗಿದ್ದು, ಸೆಪ್ಟೆಂಬರ್‌ ಬಳಿಕ ಅವಕಾಶ ಒದಗಿಸಿದರೆ ಅವರ ಅಧಿ­ಕಾರ ಕೇವಲ 6 ತಿಂಗಳಲ್ಲೇ ಕೊನೆಗೊ­ಳ್ಳ­ಲಿದೆ. ಈಗಲೇ ಅವಕಾಶ ಮಾಡಿ­ಕೊ­ಡ­ಬೇಕು ಎಂಬ ಒತ್ತಾಯವೂ ಕೇಳಿಬಂದಿತ್ತು.

ಸೆಪ್ಟೆಂಬರ್‌ವರೆಗೆ ಅಧಿಕಾರ: ‘ಕಳೆದ ವರ್ಷ ನಡೆದ ಬೆಳವಣಿಗೆಗಳನ್ನು ಗಮನಿಸಬೇಕು. ಮೀಸಲಾತಿ ವಿವಾದ ಹೈಕೋರ್ಟ್‌ನಲ್ಲಿ ಇತ್ತು. ತೀರ್ಪು ಬಂದಿದ್ದೇ ಆಗಸ್ಟ್‌ನಲ್ಲಿ. ಬಳಿಕ ಸೆಪ್ಟೆಂಬರ್‌ನಲ್ಲಿ ಚುನಾವಣೆ ನಡೆ­ಯಿತು. ಅಲ್ಲಿಂದ 1 ವರ್ಷದ ಅವ­ಧಿಗೆ ನಾವು ಅಧಿಕಾರದಲ್ಲಿ ಇರುತ್ತೇವೆ’ ಎಂದು ಸತ್ಯನಾರಾಯಣ ಪ್ರತಿಕ್ರಿಯಿಸಿದರು.

ಮೇಯರ್‌ ಪತ್ರಕ್ಕೆ ಸರ್ಕಾರದಿಂದ ಇದು­ವರೆಗೆ ಯಾವುದೇ ಉತ್ತರ ಬಂದಿಲ್ಲ. ಕಾನೂನು ತಜ್ಞರ ಅಭಿಪ್ರಾಯ ಪಡೆಯ­ಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ‘ಅಧಿಕಾರಾವಧಿಗೆ ಸಂಬಂಧಿಸಿ­ದಂತೆ ಯಾವುದೇ ಗೊಂದಲವಿಲ್ಲ. ಜಿಲ್ಲಾ ಉಸ್ತು­ವಾರಿ ಸಚಿವರ ಜತೆಗೂ ನಾನು ಮಾತನಾ­ಡಿ­ದ್ದೇನೆ. ನಮ್ಮ ಅವಧಿ ಸೆಪ್ಟೆಂಬರ್‌­ನಲ್ಲಿ ಕೊನೆಗೊಳ್ಳಲಿದೆ’ ಎಂದು ಉಪ ಮೇಯರ್‌ ಇಂದಿರಾ ತಿಳಿಸಿದರು.
‘ಸರ್ಕಾರ ಮೇಯರ್‌ ವಿಷಯಕ್ಕೆ ಸಂಬಂಧಿಸಿ ಇದುವರೆಗೆ ನನಗೆ ಯಾವುದೇ ಸೂಚನೆ ನೀಡಿಲ್ಲ. ಆದರೆ, ಅವಧಿಗೆ ಕುರಿತಂತೆ ಗೊಂದಲಕ್ಕೆ ಆಸ್ಪದ ಇಲ್ಲದಂತೆ ಕಾಯ್ದೆಯಲ್ಲಿ  ಸ್ಪಷ್ಟವಾಗಿದೆ’ ಎಂದು ಆಯುಕ್ತರು ಮಾಹಿತಿ ನೀಡಿದರು.

ಸೆಪ್ಟೆಂಬರ್‌ನಲ್ಲಿ ಚುನಾವಣೆ
ಸದ್ಯದ ಮೇಯರ್‌ ಹಾಗೂ ಉಪ ಮೇಯರ್‌ ಅವಧಿ ಸೆ. 4ರವರೆಗೆ ಇದೆ. ಅಲ್ಲಿಯವರೆಗೂ ಅವರೇ ಆಡ­ಳಿತ ನಡೆಸಲಿದ್ದಾರೆ. ಆ ಹುದ್ದೆಗಳಿಗೆ ಮತ್ತೆ ಸೆಪ್ಟೆಂಬರ್‌ನಲ್ಲಿ ಚುನಾವಣೆ ಜರುಗಲಿದೆ. ಬಿಬಿಎಂಪಿಗೆ ಸಂಬಂಧಿ­ಸಿದ ಎಲ್ಲ ಪ್ರಕ್ರಿ­ಯೆಯನ್ನು ಪೌರಾ­ಡಳಿತ ಕಾಯ್ದೆ­ಯಂತೆಯೇ ನಡೆಸಲಾಗುತ್ತದೆ.
–ಆರ್‌. ರಾಮಲಿಂಗಾರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT