ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಯರ್‌ ಹುದ್ದೆಗೆ ತೀವ್ರಗೊಂಡ ಕಸರತ್ತು

ಬಿಜೆಪಿ ಮಹತ್ವದ ಸಭೆ – ಗೌನು ತೊಡುವ ಅದೃಷ್ಟ ಯಾರಿಗೆ?
Last Updated 1 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್ ಬೆಂಗಳೂರು ಮಹಾ­ನಗರ ಪಾಲಿಕೆಯ (ಬಿಬಿಎಂಪಿ) ಪ್ರಸಕ್ತ ಕೌನ್ಸಿಲ್‌ನ ಕೊನೆಯ ಅವಧಿ­ಯಲ್ಲಿ ಮೇಯರ್‌ ಹುದ್ದೆ ಅಲಂಕರಿಸಲು ಪೈಪೋಟಿ ತೀವ್ರ­ಗೊಂ­ಡಿದ್ದು, ಅಭ್ಯರ್ಥಿ ಆಯ್ಕೆಗೆ ಮಂಗಳವಾರ ಬಿಜೆಪಿ ಕಚೇರಿಯಲ್ಲಿ ಸರಣಿ ಸಭೆಗಳು ನಿಗದಿಯಾಗಿವೆ.

ಈ ಸಲ ಮೇಯರ್‌ ಹಾಗೂ ಉಪ ಮೇಯರ್‌ ಎರಡೂ ಹುದ್ದೆಗಳನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ. ಹೀಗಾಗಿ ಹಲವು ಸದಸ್ಯರು ತಮ್ಮ ಯತ್ನ­ದಲ್ಲಿ ತೊಡಗಿದ್ದು, ನಾಯಕರಿಗೆ ತಲೆ­ನೋವು ತಂದಿದೆ. ಮೇಯರ್‌ ಅಭ್ಯರ್ಥಿ ಆಯ್ಕೆಗಾಗಿ ಇಬ್ಬರು ಕೇಂದ್ರ ಸಚಿವರೂ ಸೇರಿದಂತೆ ನಗರದ ಮೂರೂ ಸಂಸದರು (ಅನಂತಕುಮಾರ್‌, ಡಿ.ವಿ.­ಸದಾನಂದ­ಗೌಡ ಮತ್ತು ಪಿ.ಸಿ. ಮೋಹನ್‌), ಶಾಸ­ಕರು, ವಿಧಾನ ಪರಿಷತ್‌ ಸದಸ್ಯರು, ನಗರ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಸುಬ್ಬಾನರಸಿಂಹ ಮಂಗಳವಾರ ಬೆಳಿಗ್ಗೆ 11ಕ್ಕೆ ಸಭೆ ಸೇರಲಿದ್ದಾರೆ.

ನಗರ ಘಟಕದ ಪ್ರಮುಖರ ಈ ಸಭೆಯಲ್ಲಿ ಕೈಗೊಳ್ಳಲಾಗುವ ನಿರ್ಧಾರ­ವನ್ನು ಸಂಜೆ ಏರ್ಪಡಿಸ­ಲಾಗಿರುವ ಮತ್ತೊಂದು ಸಭೆಯಲ್ಲಿ ಪಕ್ಷದ ಬಿಬಿ­ಎಂಪಿ ಸದಸ್ಯರ ಗಮನಕ್ಕೆ ತರ­ಲಾಗುತ್ತದೆ. ಅವರ ಅಭಿಪ್ರಾಯ ಪಡೆದ ಬಳಿಕ ಅಭ್ಯರ್ಥಿ ಹೆಸರನ್ನು ಅಖೈರು­ಗೊ­ಳಿಸ­ಲಾಗುತ್ತದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಎನ್‌. ಶಾಂತಾಕುಮಾರಿ (ಮೂಡಲ­ಪಾಳ್ಯ) ಮತ್ತು ಬಿ.ಆರ್‌. ನಂಜುಂಡಪ್ಪ (ಜೆ.ಪಿ.ಪಾರ್ಕ್‌) ಅವರ ಮಧ್ಯೆ ನೇರ ಪೈಪೋಟಿ ಇದ್ದು, ಮಂಜು­ನಾಥ್‌ (ಶಿವನಗರ) ಅವರ ಹೆಸರೂ ಪಟ್ಟಿಯಲ್ಲಿ ಸೇರಿಕೊಂಡಿ­ರು­ವುದು ಬಿಬಿಎಂಪಿ ಸದಸ್ಯರಲ್ಲೇ ಸೋಜಿಗ ಮೂಡಿಸಿದೆ. ಗೀತಾ ವಿವೇಕಾನಂದ (ವಿಜ್ಞಾನನಗರ) ಅವರೂ ಮೇಯರ್‌ ಗೌನು ತೊಡಲು  ಪ್ರಬಲ ಆಕಾಂಕ್ಷಿ ಆಗಿದ್ದಾರೆ. ಬೆಂಗಳೂರು ದಕ್ಷಿಣ ಭಾಗದವರೇ ಮತ್ತೆ ಮತ್ತೆ ಮೇಯರ್‌ ಹುದ್ದೆ ಅಲಂಕರಿಸುತ್ತಿದ್ದು, ಬೆಂಗಳೂರು ಸೆಂಟ್ರಲ್‌ ಮತ್ತು ಉತ್ತರ ಭಾಗದ ಸದಸ್ಯರ ಕಡೆಗೂ ಗಮನಹರಿಸಬೇಕು ಎಂಬ ವಾದ ಬಲವಾಗಿ ಕೇಳಿ ಬರುತ್ತಿದೆ. ಈ ವಾದಕ್ಕೆ ಪಕ್ಷದ ನಾಯಕತ್ವ ಮಣೆ ಹಾಕಿದರೆ ಗೀತಾ ಅವರ ಹಾದಿ ಸುಗಮವಾಗಲಿದೆ.

ಕಳೆದ ಅವಧಿಯಲ್ಲೇ ಮೇಯರ್‌ ಹುದ್ದೆಗೆ ಶಾಂತಾಕುಮಾರಿ ಅವರು ತೀವ್ರ ಪ್ರಯತ್ನ ನಡೆಸಿದ್ದರು. ವಿಧಾನ ಪರಿಷತ್‌ ಸದಸ್ಯ ಸೋಮಣ್ಣ ಕೂಡ ಅವರ ಬೆಂಬಲಕ್ಕೆ ನಿಂತಿದ್ದರು. ಆಗ, ‘ಕೊನೆಯ ಅವಧಿಯಲ್ಲಿ ಮಹಿಳೆಗೆ ಪ್ರಾತಿನಿಧ್ಯ ನೀಡಲಾಗುತ್ತಿದ್ದು, ಶಾಂತಾಕುಮಾರಿ ಅವರಿಗೂ ಅವಕಾಶ ಇದೆ’ ಎಂಬ ಭರವಸೆ­ಯನ್ನು ಅನಂತಕುಮಾರ್‌ ಹಾಗೂ ಆರ್‌.­ಅಶೋಕ ಕೊಟ್ಟಿದ್ದರು ಎಂದು ಹೇಳಲಾಗುತ್ತಿದೆ.

ಪ್ರಸಕ್ತ ಕೌನ್ಸಿಲ್‌ ಅವಧಿಯಲ್ಲಿ ಇದುವರೆಗೆ ನಾಲ್ವರು ಮೇಯರ್‌ ಗೌನು ತೊಟ್ಟಿದ್ದಾರೆ. ರೆಡ್ಡಿ ಒಕ್ಕಲಿಗ (ಎಸ್‌.ಕೆ. ನಟರಾಜ್‌), ಪರಿಶಿಷ್ಟ ಜಾತಿ (ಶಾರದಮ್ಮ), ಕುರುಬ (ಡಿ.­ವೆಂಕ­ಟೇಶ­ಮೂರ್ತಿ) ಮತ್ತು ಬ್ರಾಹ್ಮಣ (ಬಿ.ಎಸ್‌. ಸತ್ಯನಾರಾಯಣ) ಸಮುದಾಯಕ್ಕೆ ಸೇರಿದ ಸದಸ್ಯರು ಇದುವರೆಗೆ ಮೇಯರ್‌ ಆಗಿದ್ದಾರೆ. ಈ ಬಾರಿ ಮೂಲ ಒಕ್ಕಲಿಗರಿಗೆ ಆ ಹುದ್ದೆ ಸಿಗಬೇಕು ಎಂಬ ಪಟ್ಟು ಹೆಚ್ಚಿನ ಸಂಖ್ಯೆಯಲ್ಲಿರುವ ಅದೇ ಸಮುದಾಯಕ್ಕೆ ಸೇರಿದ ಸದಸ್ಯರದ್ದಾಗಿದೆ.

ಮೇಯರ್‌ ಹುದ್ದೆಗೆ ಕಳೆದ 15 ದಿನಗಳಿಂದಲೂ ಲಾಬಿ ನಡೆಸ­ಲಾಗುತ್ತಿದೆ. ಆಕಾಂಕ್ಷಿಗಳು ಮುಖಂಡರ ಮನೆಗೆ ಎಡತಾಕುತ್ತಿದ್ದಾರೆ. ಈ ಮಧ್ಯೆ ಗೀತಾ ಶ್ರೀನಿವಾಸ ರೆಡ್ಡಿ ಸಹ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಅವರಿಗೆ ಜಿಲ್ಲಾ ಉಸ್ತುವಾರಿ
ಸಚಿವ ರಾಮಲಿಂಗಾರೆಡ್ಡಿ ಅವರಿಂದ ಪರೋಕ್ಷ ಬೆಂಬಲ ವ್ಯಕ್ತವಾಗಿದೆ ಎನ್ನಲಾಗಿದೆ.

ಹೊಸ ಮುಖಗಳಿಗೆ ಅವಕಾಶ ನೀಡಬೇಕು ಎಂಬ ವಾದವೂ ಕೇಳಿಬಂದಿದೆ. ಎಂಬಿಬಿಎಸ್‌ ಪದವೀಧರೆ ಗೀತಾ ಶಶಿಕುಮಾರ್‌ ಹಾಗೂ ಪಕ್ಷದ ಸಂಘಟನೆಯಲ್ಲಿ ದುಡಿದಿರುವ ಮಂಜುನಾಥ್‌ ಅವರ ಹೆಸರು ಚಾಲ್ತಿ­ಯಲ್ಲಿವೆ. ಮೇಯರ್‌ ಹುದ್ದೆ­ಯನ್ನು ತಪ್ಪಿಸಿಕೊಳ್ಳಲಿರುವ ಪ್ರಮುಖ ಅಭ್ಯರ್ಥಿ ಒಬ್ಬರಿಗೆ ಉಪ ಮೇಯರ್‌ ಆಗುವ ಅವಕಾಶ ಲಭ್ಯವಾಗುವ ಸಾಧ್ಯತೆಯಿದೆ.

ಮೇಯರ್‌ ಬಿ.ಎಸ್‌. ಸತ್ಯ­ನಾರಾ­ಯಣ ಹಾಗೂ ಉಪ ಮೇಯರ್‌ ಇಂದಿರಾ ಅವರ ಅಧಿಕಾರಾವಧಿ ಸೆ. ಮೂರ­ರಂದು ಕೊನೆಗೊಳ್ಳಲಿದೆ. ಸೆ. ಐದ­ರಂದು ನೂತನ ಮೇಯರ್‌ ಹಾಗೂ ಉಪ ಮೇಯರ್‌ ಅವರ ಆಯ್ಕೆ ನಡೆ­ಸಲು ಈಗಾಗಲೇ ಅಧಿಸೂಚನೆ ಪ್ರಕಟಿಸಲಾಗಿದೆ.

ರಮೇಶ್‌ ಆಡಳಿತ ಪಕ್ಷದ ನಾಯಕ?
ಯಡಿಯೂರು ವಾರ್ಡ್‌ನ ಬಿಜೆಪಿ ಸದಸ್ಯ ಎನ್‌.ಆರ್‌. ರಮೇಶ್‌ ಅವರು ಬಿಬಿಎಂಪಿ ಆಡ­ಳಿತ ಪಕ್ಷದ ನಾಯಕ ಆಗುವುದು ಬಹು­ತೇಕ ಖಚಿತ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ‘ರಮೇಶ್‌ ಅವರು ಹಗರಣ­ಗಳನ್ನು ಧೈರ್ಯವಾಗಿ ಬಯಲಿಗೆ ಎಳೆ­ಯು­ತ್ತಿದ್ದು, ಬಿಬಿಎಂಪಿ ಇನ್ನು ಏಳು ತಿಂಗಳಲ್ಲಿ ಚುನಾವಣೆಗೆ ಹೋಗುವುದರಿಂದ ಅವರನ್ನೇ ನಾಯ­ಕ­ರನ್ನಾಗಿ ಆಯ್ಕೆ ಮಾಡು­ವುದು ಒಳಿತು. ಇದರಿಂದ ಪಕ್ಷದ ವರ್ಚಸ್ಸು ವೃದ್ಧಿಯಾಗುತ್ತದೆ’ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ.

ಸಂಸದ ಪಿ.ಸಿ. ಮೋಹನ್‌ ಹಾಗೂ ಆರ್‌. ಅಶೋಕ ಅವರೂ ರಮೇಶ್‌ ಅವರಿಗೆ ಬೆಂಬಲ ಸೂಚಿಸಿದ್ದಾರೆ ಎಂದು ಆ ಮೂಲಗಳು ಸ್ಪಷ್ಟಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT