ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲಂತಬೆಟ್ಟು: ಸಹಪಂಕ್ತಿ ಭೋಜನ

Last Updated 26 ಜನವರಿ 2015, 20:37 IST
ಅಕ್ಷರ ಗಾತ್ರ

ಉಜಿರೆ (ದಕ್ಷಿಣ ಕನ್ನಡ ಜಿಲ್ಲೆ): ‘ದೇಶಕ್ಕೆ ಸ್ವಾತಂತ್ರ್ಯ ಬಂದು ಆರು ದಶಕ ಕಳೆದರೂ ದಲಿತ ಸಮು­ದಾಯಕ್ಕೆ ಎಲ್ಲ ಹಕ್ಕುಗಳನ್ನು ನಿರಾಕರಿಸಿ ತಿರಸ್ಕಾರ ಭಾವನೆಯಿಂದ ನೋಡುವ ಪ್ರವೃತ್ತಿ ಬದಲಾಗಿಲ್ಲ. ದಲಿ­ತರು ಅದೇ ಸ್ಥಿತಿಯಲ್ಲಿರಬೇಕು ಎಂದು ಬಯಸುವ ಶಕ್ತಿಗಳು ಇಂದು ಪ್ರಬಲ­ವಾಗಿವೆ’ ಎಂದು ನಿಡುಮಾಮಿಡಿ ಮಠದ ಮಾನವ ಧರ್ಮ ಪೀಠದ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಹೇಳಿದರು.

ಬೆಳ್ತಂಗಡಿಯ ಮೇಲಂತಬೆಟ್ಟು ಕೆಲ್ಲಕೆರೆ ದಲಿತ ಕಾಲೊನಿಯಲ್ಲಿ ಗಣ-ರಾಜ್ಯೋತ್ಸವ ಆಚರಣೆಯ ಸಂದರ್ಭ ದಲಿತ ಹಕ್ಕುಗಳ ಹೋರಾಟ ಸಮಿತಿ ಆಶ್ರಯದಲ್ಲಿ ಸೋಮವಾರ ಏರ್ಪಡಿ-ಸಿದ್ದ ಸಹಪಂಕ್ತಿ ಭೋಜನ ಮತ್ತು ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾಜಿಕ ಉನ್ನತಿಯನ್ನು ಸಾಧಿ­ಸಲು ದಲಿತರು ತುಳಿತಕ್ಕೆ ಒಳಗಾಗಲೇ ಬೇಕು ಎಂಬ ನಿಲುವನ್ನು ಮೇಲ್ವರ್ಗದ ಜನರು ಹೊಂದಿದ್ದಾರೆ. ಈ ರೀತಿಯ ಶೋಷಣೆ ನಿವಾರಣೆಗೆ ನಿರಂತರ ಪ್ರಯತ್ನ ಅಗತ್ಯ. ಒಂದೇ ದಿನದಲ್ಲಿ ಬದಲಾವಣೆ ಸಾಧ್ಯ ಇಲ್ಲ ಎಂದು ಅವರು ಹೇಳಿದರು.

ಮೈಸೂರಿನ ಶಿವಯೋಗೀಶ್ವರ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಮಾತನಾಡಿ, ಇಂದು ಅಸಲಿ ಭಾರತವನ್ನು ಹಿಂದೆ ಸರಿಸಿ ನಕಲಿ ಭಾರತ ವಿಜೃಂಭಿಸುತ್ತಿದೆ. ಸಾಮಾ­ಜಿಕ ಬದಲಾವಣೆಯಾಗದೆ ಆರ್ಥಿಕ ಹಾಗೂ ರಾಜಕೀಯ ಬದಲಾವಣೆ ಸಾಧ್ಯ­ವಾಗುವುದಿಲ್ಲ ಎಂದರು.
ಸಾಹಿತಿ ಅತ್ರಾಡಿ ಅಮೃತಾ ಶೆಟ್ಟಿ ಮಾತನಾಡಿ, ಶೋಷಿತ ಸಮುದಾಯ­ಗಳು ಮಾನಸಿಕ ಗುಲಾಮಗಿರಿಯಿಂದ ಬಳಲುತ್ತಿದ್ದು, ಕೀಳರಿಮೆ ಮುಕ್ತರಾಗಿ ಸ್ವಾಭಿಮಾನದಿಂದ ಬದುಕಬೇಕು ಎಂದು ಸಲಹೆ ಮಾಡಿದರು.

ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ರಾಜ್ಯ ಸಹಸಂಚಾಲಕ ಎಸ್.ವೈ ಗುರುಶಾಂತ್ ಅಧ್ಯಕ್ಷತೆ ವಹಿಸಿದ್ದರು. ಚಿತ್ರದುರ್ಗ ಛಲವಾದಿ ಮಠದ ಬಸವ­ನಾಗಿ­ದೇವ ಶರಣರು, ಮೈಸೂರಿನ ಬಸವಲಿಂಗಮೂರ್ತಿ ಶರಣರು, ತುಮಕೂರು ಹುಲಿಯೂರು ದುರ್ಗ ವಿಶ್ವಮಾನವ ಮಂಟಪದ ಮುದ್ದಣ ಸ್ವಾಮೀಜಿ ಉಪಸ್ಥಿತರಿದ್ದರು.

ದಲಿತ ಹಕ್ಕುಗಳ ಹೋರಾಟ ಸಮಿ-ತಿಯ ತಾಲ್ಲೂಕು ಸಂಚಾಲಕ ಶೇಖರ ಎಲ್. ಸ್ವಾಗತಿಸಿದರು. ಶ್ಯಾಮರಾಜ್ ಕಾರ್ಯಕ್ರಮ ನಿರೂಪಿಸಿದರು.  ಸಭೆಯ ಬಳಿಕ ಸ್ವಾಮೀಜಿಗಳು ಗುರುವಪ್ಪ ಅವರ ಮನೆಯಲ್ಲಿ ಪೂಜೆ ನಡೆಸಿದರು. ಪಕ್ಕದಲ್ಲಿರುವ ರವಿ ಹಾಗೂ ಸುಶೀಲಾ ಅವರ ಮನೆಯಲ್ಲಿ ದಲಿತರೇ ಅಡುಗೆ ತಯಾರಿಸಿ ಬಡಿಸಿದರು. ಸ್ವಾಮೀಜಿಗಳು ಸಹಪಂಕ್ತಿಯಲ್ಲಿ ಕುಳಿತು ಭೋಜನ ಸ್ವೀಕರಿಸಿದರು. ಎ.ಎಸ್.ಪಿ ರಾಹುಲ್‌ ಕುಮಾರ್ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT