ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖಂಡರಿಗೆಲ್ಲ ಮುಖಭಂಗ!

ಕಲಬುರ್ಗಿ, ತುಮಕೂರಿನಲ್ಲಿ ಕಾಂಗ್ರೆಸ್‌, ಹಾಸನದಲ್ಲಿ ಜೆಡಿಎಸ್‌, ಶಿವಮೊಗ್ಗದಲ್ಲಿ ಬಿಜೆಪಿಗೆ ಸೋಲು
Last Updated 30 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಎಲ್ಲ ಪಕ್ಷಗಳ ಮುಖಂಡರಿಗೂ ಮತದಾರರು ಸರಿಯಾದ ಪಾಠವನ್ನೇ ಕಲಿಸಿದ್ದಾರೆ.

ಎಲ್ಲ ನಾಯಕರೂ ಸ್ವಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ವಿಫಲರಾಗಿದ್ದಾರೆ.

ಹಾಸನದಲ್ಲಿ ಎಚ್‌.ಡಿ.ದೇವೇಗೌಡ, ಬೆಂಗಳೂರು ಗ್ರಾಮಾಂತರದಲ್ಲಿ ಎಚ್‌.ಡಿ.ಕುಮಾರಸ್ವಾಮಿ, ಕಲಬುರ್ಗಿಯಲ್ಲಿ ಖರ್ಗೆ, ತುಮಕೂರಿನಲ್ಲಿ ಜಿ.ಪರಮೇಶ್ವರ ಅವರಿಗೆ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಸಾಧ್ಯವಾಗಿಲ್ಲ.

ಮೈಸೂರು–ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಒಬ್ಬರನ್ನೇ ಕಣಕ್ಕೆ ಇಳಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ರಕ್ಷಣಾತ್ಮಕ ಆಟವಾಡಿದರು. ಇದೇ ರೀತಿ ಹುಬ್ಬಳ್ಳಿ–ಧಾರವಾಡ–ಗದಗ ದ್ವಿಸದಸ್ಯ ಕ್ಷೇತ್ರದಲ್ಲಿ ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ್‌ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್‌ ಜೋಶಿ ಅವರೂ ಪಕ್ಷದಿಂದ ಒಬ್ಬ ಅಭ್ಯರ್ಥಿಯನ್ನು ಮಾತ್ರ ಕಣಕ್ಕೆ ಇಳಿಸಿ ಇದೇ ತಂತ್ರ ಅನುಸರಿಸಿದರು. ಇದು ಚುನಾವಣೆಗಿಂತ ಮುಂಚೆಯೇ ಆಡಿದ ಸುರಕ್ಷಿತ ಆಟ.

ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ಸ್ವಕ್ಷೇತ್ರವಾದ ಕಲಬುರ್ಗಿಯಲ್ಲಿ ಬಿಜೆಪಿ ಗೆದ್ದಿದೆ. ಇಲ್ಲಿ ಸಚಿವರಾದ ಖಮರುಲ್‌ ಇಸ್ಲಾಂ, ಶರಣ ಪ್ರಕಾಶ ಪಾಟೀಲ್‌ ಇದ್ದರು. ಜೊತೆಗೆ ಪಕ್ಕದ ಕೊಪ್ಪಳದಲ್ಲಿ ಬಾಬುರಾವ್‌ ಚಿಂಚನಸೂರ್ ಕೂಡ ಇದ್ದರು. ಆದರೂ ಹಾಲಿ ಸದಸ್ಯ ಅಲ್ಲಮ ಪ್ರಭು ಅವರನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಮತ್ತು ಸಚಿವ ಸಂಪುಟದಲ್ಲಿ ‘ನಾನೇ ನಂಬರ್‌ 2 ’ ಎಂದು ಹೇಳಿಕೊಳ್ಳುವ ಕಾನೂನು ಸಚಿವ ಟಿ.ಬಿ.ಜಯಚಂದ್ರ ಇದ್ದರೂ ತುಮಕೂರಿನಲ್ಲಿ ಕಾಂಗ್ರೆಸ್‌ ಗೆದ್ದಿಲ್ಲ. ಅಲ್ಲಿ ಜೆಡಿಎಸ್‌ ಜಯ ಸಾಧಿಸಿದೆ.

ಮಧುಗಿರಿ ಶಾಸಕ ಕೆ.ಎನ್‌. ರಾಜಣ್ಣ ಅವರ ಪುತ್ರ ರಾಜೇಂದ್ರ ಅವರಿಗೆ ಇಲ್ಲಿ ಕಾಂಗ್ರೆಸ್‌ ಟಿಕೆಟ್‌ ನೀಡಲಾಗಿತ್ತು. ರಾಜಣ್ಣ ಅವರು ಸ್ವತಃ ಶಾಸಕರಲ್ಲದೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಅಧ್ಯಕ್ಷರೂ ಹೌದು. ಅವರು ಅಪೆಕ್ಸ್ ಬ್ಯಾಂಕ್‌ ಅಧ್ಯಕ್ಷರೂ ಕೂಡ. ಅವರ ಪತ್ನಿ ಜಿಲ್ಲಾ ಪಂಚಾಯ್ತಿ ಸದಸ್ಯೆ. ಅವರ ಪುತ್ರ ರಾಜೇಂದ್ರ ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ.  ಹೀಗಿದ್ದರೂ ರಾಜೇಂದ್ರ ಅವರಿಗೇ ಟಿಕೆಟ್‌ ನೀಡಿದ್ದರಿಂದ ಕಾಂಗ್ರೆಸ್‌ ಪಕ್ಷದವರೇ ಅವರನ್ನು ಸೋಲಿಸಿದ್ದಾರೆ ಎನ್ನುವುದು ಗುಟ್ಟಲ್ಲ.

ಕೋಲಾರದಲ್ಲಿ ಕೇಂದ್ರದ ಮಾಜಿ ಸಚಿವರಾದ ವೀರಪ್ಪ ಮೊಯ್ಲಿ ಮತ್ತು ಕೆ.ಎಚ್‌.ಮುನಿಯಪ್ಪ ಅವರ ಕಿತ್ತಾಟದಲ್ಲಿ ಪಕ್ಷಕ್ಕೆ ಸೋಲಾಗಿದೆ ಎಂಬ ಪುಕಾರು ಇದೆ.

ಅತಿ ಅಚ್ಚರಿಯ ಫಲಿತಾಂಶ  ಹಾಸನ ಜಿಲ್ಲೆಯದ್ದು. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೇ ಈ ಫಲಿತಾಂಶವನ್ನು ನಂಬಲು ಸಾಧ್ಯವಾಗುತ್ತಿಲ್ಲ. ಆದರೂ ಈ ಫಲಿತಾಂಶ ನೀಡಿದ ಸಂದೇಶ ಎಂದರೆ ಎಲ್ಲೆಲ್ಲಿ ಕಾಂಗ್ರೆಸ್‌ ಒಳಜಗಳವಿಲ್ಲದೆ ಒಂದಾಗಿದೆಯೋ ಅಲ್ಲೆಲ್ಲ ಜಯವಾಗಿದೆ. ಒಳಜಗಳ ಇರುವಲ್ಲಿ ಸೋಲಾಗಿದೆ. ಅದಕ್ಕೆ ಉದಾಹರಣೆ ಮಂಡ್ಯ ಜಿಲ್ಲೆ.

ಮಂಡ್ಯ ಜೆಡಿಎಸ್‌ನಲ್ಲಿ ಸಾಕಷ್ಟು ಗೊಂದಲವಿದ್ದರೂ ಅಪ್ಪಾಜಿ ಗೌಡರು ಗೆದ್ದಿದ್ದಾರೆ. ಚೆಲುವರಾಯ ಸ್ವಾಮಿಯೂ ಪಕ್ಷಕ್ಕೆ ಹಾನಿ ಮಾಡಲಿಲ್ಲ. ಆದರೆ ಕಾಂಗ್ರೆಸ್‌ ಒಳಜಗಳ ಮತ್ತೊಮ್ಮೆ  ಪಕ್ಷಕ್ಕೆ ಹಾನಿ ಮಾಡಿದೆ.

ಹಾಸನ ಜಿಲ್ಲೆಯನ್ನು ಜೆಡಿಎಸ್‌ ಭದ್ರಕೋಟೆ ಎಂದೇ ಕರೆಯಲಾಗುತ್ತಿತ್ತು. ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರ ತವರು ಇದು. ಇಲ್ಲಿ ಕಾಂಗ್ರೆಸ್‌ ಗೆದ್ದಿದೆ. ಹಾಲಿ ಸದಸ್ಯ ಜೆಡಿಎಸ್‌ನ ಪಟೇಲ್‌ ಶಿವರಾಂ ಬಗ್ಗೆ ಪಕ್ಷದ ಶಾಸಕರಿಗೆ ಒಲವು ಇರಲಿಲ್ಲ. ಎಚ್‌.ಡಿ.ರೇವಣ್ಣ ಅವರೂ ವಿರೋಧವಾಗಿದ್ದರು. ಭವಾನಿ ರೇವಣ್ಣ ಅವರಿಗೆ ಟಿಕೆಟ್‌ ಕೊಡಿ ಎಂದು ಪಕ್ಷದ ಕಾರ್ಯಕರ್ತರು ಒತ್ತಾಯಿಸಿದ್ದರು. ಆದರೆ ಇದಕ್ಕೆ ದೇವೇಗೌಡ ಒಪ್ಪಲಿಲ್ಲ. ದೇವೇಗೌಡರು ದೇವಸ್ಥಾನಕ್ಕೆ ಹೋಗಿಬಂದು ಬರಿಗಾಲಿನಲ್ಲಿಯೇ ಮತದಾನ ಮಾಡಿದ್ದರೂ ಪಕ್ಷಕ್ಕೆ ಗೆಲುವಾಗಲಿಲ್ಲ.

ಅದೇ ರೀತಿ ಬೆಂಗಳೂರು ಗ್ರಾಮಾಂತರದಲ್ಲಿಯೂ ರಾಜ್ಯ ಜೆಡಿಎಸ್‌ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಜನಪ್ರಿಯ ನಾಯಕ ಎಂದೇ ಭಾವಿಸಲಾಗಿತ್ತು. ಇಲ್ಲಿಯೂ ಕಾಂಗ್ರೆಸ್‌ ಜಯ ಗಳಿಸಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿಯ ಜನಪ್ರಿಯ ನಾಯಕ ಬಿ.ಎಸ್‌.ಯಡಿಯೂರಪ್ಪ ಹಾಗೂ ವಿಧಾನ ಪರಿಷತ್‌ ಪ್ರತಿ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ಇಬ್ಬರೂ ಇದ್ದರೂ ಅಲ್ಲಿ ಹಾಲಿ ಸದಸ್ಯ ಸಿದ್ದರಾಮಣ್ಣ ಅವರನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸಿದ್ದರಾಮಣ್ಣ ಅವರಿಗೆ ಟಿಕೆಟ್‌ ನೀಡಲು ಯಡಿಯೂರಪ್ಪ ಅವರಿಗೆ ಇಷ್ಟ ಇರಲಿಲ್ಲ ಎಂಬ ಮಾತುಗಳೂ ಇವೆ. ಆದರೆ ಇದನ್ನು ಯಡಿಯೂರಪ್ಪ ಅಲ್ಲಗಳೆದಿದ್ದಾರೆ. ಸೋಲನ್ನೂ ಒಪ್ಪಿಕೊಂಡಿದ್ದಾರೆ.

ಬಂಡೆದ್ದರೂ ಗೆಲುವು: ಬಿಜೆಪಿಯ ಹಿರಿಯ ನಾಯಕ ಬಸನ ಗೌಡ ಪಾಟೀಲ್‌ ಯತ್ನಾಳ್‌ ಅವರು ಪಕ್ಷದ ವಿರುದ್ಧ ಬಂಡೆದ್ದು ಸ್ಪರ್ಧೆ ಮಾಡಿದ್ದರೂ ಗೆಲುವು ಸಾಧಿಸಿದ್ದಾರೆ. ಇಲ್ಲಿ ಹಣಕ್ಕಿಂತಲೂ ಜಾತಿಯ ಮಹಾತ್ಮೆಯೇ ನಡೆದಿದೆ ಎನ್ನಲಾಗುತ್ತಿದೆ.

ಬೆಳಗಾವಿ ಜಿಲ್ಲೆಯಲ್ಲಿ ರಾಯಭಾಗದ ಹುಲಿ ಎಂದೇ ಪ್ರಸಿದ್ಧರಾಗಿದ್ದ ವಿ.ಎಲ್‌.ಪಾಟೀಲ್‌ ಅವರ ಪುತ್ರ ವಿವೇಕರಾವ್‌ ಪಾಟೀಲ್‌ ಪಕ್ಷೇತರರಾಗಿ ಗೆದ್ದಿದ್ದಾರೆ. ಕಾಂಗ್ರೆಸ್‌ ಪಕ್ಷದ ರಮೇಶ್ ಜಾರಕಿಹೊಳಿ ಹಾಗೂ ಬಿಜೆಪಿಯ  ಬಾಲಚಂದ್ರ ಜಾರಕಿಹೊಳಿ ಇವರ ಬೆಂಬಲಕ್ಕೆ ನಿಂತಿದ್ದರು ಎನ್ನುವುದು ರಹಸ್ಯವಾಗಿ ಉಳಿದಿಲ್ಲ.

ಕಾಂಗ್ರೆಸ್‌ನಿಂದ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಜಯಪ್ರಕಾಶ ಹೆಗ್ಡೆ (ದಕ್ಷಿಣ ಕನ್ನಡ) ಹಾಗೂ ದಯಾನಂದ ರೆಡ್ಡಿ (ಬೆಂಗಳೂರು ನಗರ) ಇಬ್ಬರೂ ಸೋತಿದ್ದಾರೆ. ಜಯಪ್ರಕಾಶ ಹೆಗ್ಡೆ ಸಾಕಷ್ಟು ಮತಗಳಿಸಿದ್ದರೆ ದಯಾನಂದ ರೆಡ್ಡಿ ಕೇವಲ 19 ಮತ ಗಳಿಸುವ ಮೂಲಕ ಹೀನಾಯ ಸೋಲು ಅನುಭವಿಸಿದ್ದಾರೆ. ಪಕ್ಷದ ತೀರ್ಮಾನಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಹೀಗಾಗುತ್ತದೆ ಎಂದು ಪಕ್ಷದ ನಾಯಕರು ಹೇಳುತ್ತಿದ್ದಾರೆ.

‘ಕಾಂಗ್ರೆಸ್‌ ಪಕ್ಷದವರು ಅತಿ ಹೆಚ್ಚಿನ ಹಣ ನೀಡಿದ್ದಾರೆ’ ಎಂದು ದಯಾನಂದ ರೆಡ್ಡಿ ಆರೋಪಿಸಿದ್ದಾರೆ. ಆದರೆ ವಿಧಾನ ಪರಿಷತ್‌ ಚುನಾವಣೆಯಲ್ಲಿ ಹಣದ ಹೊಳೆ ಹರಿದಿರುವುದು ಬಹಿರಂಗ ಗುಟ್ಟು.  ಒಂದು ಮತಕ್ಕೆ ₹ 15 ಸಾವಿರದಿಂದ ಹಿಡಿದು ₹ 1 ಲಕ್ಷದವರೆಗೂ ನೀಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಎಲ್ಲ ಪಕ್ಷದವರೂ ಹಣ ಹಂಚಿದ್ದಾರೆ. ಆದರೆ ಮತದಾರರು ಎಲ್ಲ ಪಕ್ಷದವರಿಂದಲೂ ಹಣ ಪಡೆದು ತಮಗೆ ಯಾರು ಬೇಕೋ ಅವರಿಗೆ ಮತ ಚಲಾಯಿಸಿದ್ದಾರೆ ಎನ್ನುವುದು ಚುನಾವಣಾ ಫಲಿತಾಂಶದಿಂದ ಮತ್ತೊಮ್ಮೆ ದೃಢಪಟ್ಟಿದೆ.

ಇಷ್ಟೆಲ್ಲಾ ಆದರೂ ಈ ಫಲಿತಾಂಶ ಕಾಂಗ್ರೆಸ್‌ ಪಕ್ಷದ ಮುಖಂಡರಲ್ಲಿ ಕೆಲವು ಸಂಶಯಗಳನ್ನು ಹುಟ್ಟು ಹಾಕಿದೆ.
ದೇಶದಲ್ಲಿಯೇ ಉತ್ತಮ ಎನ್ನಬಹುದಾದ ಪಂಚಾಯತ್‌ರಾಜ್‌ ತಿದ್ದುಪಡಿ ಮಸೂದೆಯನ್ನು ಇಲ್ಲಿ ಅಂಗೀಕರಿಸಲಾಗಿದೆ. ವಿಧಾನ ಪರಿಷತ್‌ ಚುನಾವಣೆಯಲ್ಲಿ ಪಂಚಾಯತ್‌ ಸಂಸ್ಥೆಗಳ ಮತದಾರರೇ ಹೆಚ್ಚಿದ್ದರೂ ಯಾಕೆ ಹೆಚ್ಚಿನ ಸ್ಥಾನ ಲಭ್ಯವಾಗಿಲ್ಲ? ಪಂಚಾಯತ್ ರಾಜ್‌ ಮಸೂದೆಯ ವಿಷಯ ಚುನಾವಣಾ ವಿಷಯವೇ ಆಗಿರಲಿಲ್ಲ ಯಾಕೆ? ಇದನ್ನು ಕಾಂಗ್ರೆಸ್‌ ಪಕ್ಷ ಯಾಕೆ ಚುನಾವಣೆಯಲ್ಲಿ ಬಳಸಿಕೊಳ್ಳಲಿಲ್ಲ ಎಂದು ಪ್ರಶ್ನಿಸುವವರೂ ಇದ್ದಾರೆ. ಅಂದಹಾಗೆ ಕಾಂಗ್ರೆಸ್‌ ಶಾಸಕರೊಬ್ಬರು ಇನ್ನೊಂದು ಪ್ರಶ್ನೆಯನ್ನೂ ಮುಂದಿಟ್ಟಿದ್ದಾರೆ.
‘ಸಿದ್ದರಾಮಯ್ಯ ಸರ್ಕಾರಕ್ಕೆ ಎರಡೂವರೆ ವರ್ಷ ಆಗಿದೆ. ವಿಧಾನ ಪರಿಷತ್‌ ಚುನಾವಣೆಯಲ್ಲಿ ಮತದಾರರು ನಿರಾಸೆಯನ್ನೇನೂ ಮಾಡಿಲ್ಲ. ಇನ್ನಾದರೂ ಸರ್ಕಾರ ಚುರುಕಾಗುವುದೇ?’ ಶಾಸಕರ ಈ ಪ್ರಶ್ನೆಗೆ ಯಾರು ಉತ್ತರಿಸಬೇಕು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT