ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈದುಂಬಿದ ಚೇಲಾವರ

Last Updated 1 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಮಳೆಗಾಲದಲ್ಲಿ ಮೈದುಂಬಿ ಜಲಧಾರೆಯಾಗಿ ಹರಿಯುವ ಚೇಲಾವರ ಜಲಪಾತ ಕೊಡಗಿನ ಪ್ರವಾಸಿ ನಕ್ಷೆಯಲ್ಲಿ ವಿಶೇಷ ಸ್ಥಾನ ಪಡೆದಿದೆ. ಮಳೆಗಾಲದ ದಿನಗಳಲ್ಲಿ ಈ ಜಲಪಾತದ ಚೆಲುವು ಮನಮೋಹಕ. ಸೊಗಸಾದ ಜಲಪಾತದ ಸೌಂದರ್ಯವನ್ನು ವೀಕ್ಷಿಸಲು ಅಧಿಕ ಸಂಖ್ಯೆಯ ಪ್ರವಾಸಿಗರು ಬರುತ್ತಿದ್ದಾರೆ. ಇದರೊಂದಿಗೆ ಚೇಲಾವರ ಜಲಪಾತದಲ್ಲಿ ರಾಕ್ ಕ್ಲೈಂಬಿಂಗ್ ಕೂಡಾ ಜನಪ್ರಿಯವಾಗುತ್ತಿದೆ.

ವನರಾಶಿ ನಡುವೆ ಭೋರ್ಗರೆಯುತ್ತಿರುವ ಜಲಪಾತವಿದು. ಸುರಿಯುತ್ತಿರುವ ಮಳೆ, ರಭಸದಿಂದ ಬೀಸುತ್ತಿರುವ ಕುಳಿರ್ಗಾಳಿ, ಕಡಿದಾದ ಕರಿಬಂಡೆ, ಆಳ ಪ್ರಪಾತ, ವ್ಯಕ್ತಿಯೊಬ್ಬ ಸೊಂಟದಲ್ಲೊಂದು, ಕೈಯಲ್ಲೊಂದು ಹಗ್ಗ ಹಿಡಿದು ಮೆಲ್ಲನೆ ಇಳಿಜಾರಿನ ಬಂಡೆ ಇಳಿಯುತ್ತಿರುವ ರೋಮಾಂಚಕ ದೃಶ್ಯ ಇಲ್ಲಿ ಕಾಣಸಿಗುತ್ತದೆ. ಚೈಯ್ಯಂಡಾಣೆ ಸಮೀಪದ ಚೇಲಾವರ ಜಲಪಾತದಲ್ಲಿ ಪ್ರವಾಸಿಗರು ಸಾಹಸಿ ಜಲಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ಮಳೆಗಾಲದ ಆಕರ್ಷಣೆ. ಪ್ರವಾಸಿಗರೊಂದಿಗೆ ತರಬೇತಿ ಹೊಂದಿದ ಸಕಲ ಸಿದ್ಧತೆಗಳನ್ನೊಳಗೊಂಡ ತಂಡ ಮಾರ್ಗದರ್ಶನದೊಂದಿಗೆ ಸದಾ ಸಿದ್ಧವಾಗಿರುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಕೊಡಗಿನಲ್ಲಿ ಚಾರಣ, ಸಾಹಸ ಜಲಕ್ರೀಡೆಗಳಲ್ಲಿ ಭಾಗವಹಿಸಲು ಬರುವ ಪ್ರವಾಸಿಗರ, ಯುವಕ ಯುವತಿಯರ ಸಂಖ್ಯೆ ಹೆಚ್ಚುತ್ತಿದೆ. ಯುವತಿಯರೂ ಧೈರ್ಯದಿಂದ ರಾಕ್‌ಕ್ಲೈಂಬಿಂಗ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕೊಡಗು ಜಿಲ್ಲೆಯ ನರಿಯಂದಡ ಗ್ರಾಮಪಂಚಾಯತಿ ವ್ಯಾಪ್ತಿಯ ಚೇಲಾವರ ಗ್ರಾಮದಲ್ಲಿರುವ ಎರಡು ರಮಣೀಯ ಜಲಪಾತಗಳು ತಮ್ಮ ಚೆಲುವಿನಿಂದ ಪ್ರವಾಸಿಗರ ಮನಸೆಳೆದಿವೆ. ಕೊಡಗಿನಲ್ಲಿ ಅತೀ ಎತ್ತರವಾದ ತಡಿಯಂಡಮೋಳ್ ಶಿಖರ, ಬ್ರಹ್ಮಗಿರಿ ಬೆಟ್ಟಸಾಲುಗಳು ಮುಗಿಲನ್ನು ಚುಂಬಿಸುತ್ತಾ ನಿಂತಿವೆ. ಈ ಬೆಟ್ಟಸಾಲುಗಳ ಕಣಿವೆಗಳಿಂದ ಹಲವಾರು ನದಿಗಳು ಉಗಮಿಸಿ ಹರಿದು ಬರುತ್ತವೆ.

ಬ್ರಹ್ಮಗಿರಿ ಬೆಟ್ಟದ ಬುಡದಿಂದ ಕಾವೇರಿ ನದಿ ಉಗಮಿಸಿದರೆ, ತಡಿಯಂಡಮೋಳ್ ಶಿಖರದ ಸರಹದ್ದಿನಲ್ಲಿರುವ ಇಗ್ಗುತಪ್ಪ ಬೆಟ್ಟದಿಂದ ಬಲಿಯಟ್ರ ನದಿ ಮತ್ತು ಚೋಮಕುಂದು ಬೆಟ್ಟದಿಂದ ಸೋಮನನದಿಗಳು ಹರಿದುಬರುತ್ತವೆ. ಈ ಎರಡು ನದಿಗಳು ವಿರಾಜಪೇಟೆ ತಾಲ್ಲೂಕಿನ ಚೆಯ್ಯಂಡಾಣೆ ಬಳಿಯ ಚೇಲಾವರ ಗ್ರಾಮದಲ್ಲಿ ಜಲಪಾತಗಳಾಗಿ ಧುಮುಕುತ್ತವೆ. ಹಾಗೆಯೇ ಹರಿದು ಅನತಿ ದೂರದಲ್ಲಿ ಸಂಗಮವಾಗಿ ಬಲಮುರಿ ಎಂಬಲ್ಲಿ ಕಾವೇರಿ ನದಿಯನ್ನು ಸೇರುತ್ತವೆ.

ಚೇಲಾವರದ ಪ್ರಮುಖ ಜಲಪಾತ ಏಮೆಪಾರೆ ಜಲಪಾತ. ಹಸಿರು ವನರಾಶಿಯ ನಡುವೆ ಹಾಲ್ನೊರೆಯಂತೆ ಧರೆಗಿಳಿಯುವ ಈ ಜಲಪಾತ ನಯನಮನೋಹರ. ಮಳೆಗಾಲದಲ್ಲಿ ತಮ್ಮ ವೈಭವವನ್ನು ಮೆರೆಯುವ ಜಲಪಾತಗಳಲ್ಲಿ ಚೇಲಾವರ ಜಲಪಾತಗಳಿಗೆ ವಿಶೇಷ ಆಕರ್ಷಣೆ. ದಕ್ಷಿಣ ಕೊಡಗಿನ ವಿರಾಜಪೇಟೆಯಿಂದ ಸುಮಾರು 26 ಕಿ.ಮೀ. ದೂರದಲ್ಲಿರುವ ಪುಟ್ಟ ಊರು ಚೆಯ್ಯಂಡಾಣೆಗೆ ತೆರಳಿ ಅಲ್ಲಿಂದ ಕವಲು ಹಾದಿಯಲ್ಲಿ 5 ಕಿ.ಮೀ. ದೂರಕ್ಕೆ ಸಾಗಿದರೆ ನಿಸರ್ಗದ ನಡುವಿನ ಅಪೂರ್ವ ಜಲಧಾರೆಗಳ ಸೊಬಗು ಸವಿಯಬಹುದು.

ನಿತ್ಯ ಹರಿದ್ವರ್ಣದ ದಟ್ಟ ಕಾಡಿನಲ್ಲಿ ಹೆಜ್ಜೆ ಹಾಕತೊಡಗಿದರೆ ಎಲ್ಲಿಂದಲೋ ನೀರು ಭೋರ್ಗರೆದು ಧುಮುಕುವ ಸದ್ದು ಕೇಳಿ ಬರುತ್ತದೆ. ಸುತ್ತಲಿನ ಬೆಟ್ಟಗುಡ್ಡಗಳತ್ತ ದೃಷ್ಟಿ ಹಾಯಿಸುತ್ತಾ ತೂಂಗು ಕೊಲ್ಲಿಯತ್ತ ಹೆಜ್ಜೆ ಹಾಕುತ್ತಿದ್ದಂತೆ ಎಡಬದಿಯ ಕಣಿವೆಯಲ್ಲಿ ಆಮೆಯ ಬೆನ್ನಿನಂತೆ ಕಾಣುವ ಕಪ್ಪು ಬಂಡೆಯ ಮೇಲಿಂದ ಇಳಿಯುವ ಸೋಮನ ನದಿಯ ಜಲಪಾತದ ದರ್ಶನವಾಗುತ್ತದೆ.

ಸ್ಥಳೀಯರು ಈ ಜಲಪಾತವನ್ನು ಏಮೆಪಾರೆ ಎಂದು ಕರೆಯುತ್ತಾರೆ. ಎಡಬದಿಯಲ್ಲಿರುವ ಕಾಫಿಯ ತೋಟಗಳ ನಡುವೆ ಸಾಗಿದರೆ ಜಲಪಾತದ ಸನಿಹಕ್ಕೆ ತಲುಪಬಹುದು. ಮಳೆಗಾಲದಲ್ಲಿ ನೀರು ತುಂಬಿರುವಾಗ ಈ ಕಾನನ ಬೆಡಗಿಯ ಸೌಂದರ್ಯ ವರ್ಣನಾತೀತ. ಸುಮಾರು ನೂರು ಅಡಿ ಎತ್ತರದಿಂದ ಬೀಳುವ ಜಲಧಾರೆ ಶ್ವೇತ ವೈಭವದಿಂದ ಕಂಗೊಳಿಸುತ್ತದೆ. ಅನತಿ ದೂರದಲ್ಲಿ ಮತ್ತೊಂದು ಜಲಪಾತವಿದೆ. ಇದಕ್ಕೆ ಬಲಿಯಟ್ರ ಜಲಪಾತ ಎಂದು ಹೆಸರು.

ಸುಮಾರು 50 ಅಡಿಗಳಷ್ಟು ಎತ್ತರದಿಂದ ಮೂರು ಹಂತಗಳಲ್ಲಿ ಬಲಿಯಟ್ರ ಜಲಪಾತ ಧುಮುಕುತ್ತದೆ. ಚೇಲಾವರದ ಜಲಪಾತಗಳನ್ನು ವೀಕ್ಷಿಸುವ ಕುತೂಹಲದಿಂದ ಮುಂದೆ ಮುಂದೆ ಸಾಗುವಾಗ ದೃಷ್ಟಿ ಕಾಲಿನತ್ತಲೇ ಇರಬೇಕಾದ್ದು ಅನಿವಾರ್ಯ. ಚೇಲಾವರದ ಎರಡೂ ಜಲಪಾತಗಳು ತೋಟದ ಒಳಗಿರುವುದರಿಂದ ಹರಿವ ಜಲಧಾರೆಯಿಂದಾಗಿ ಸದಾ ತಂಪು ಇರುವ ತೋಟಗಳಲ್ಲಿ ಜಿಗಣೆಗಳು ಇರುತ್ತವೆ. ಸಾಹಸ ಮಾಡುವ ಮನಸ್ಸಿದ್ದರೆ ರಾಕ್ ಕ್ಲೈಂಬಿಂಗ್‌ನಲ್ಲಿ ಪಾಲ್ಗೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT