ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು– ಕೊಡಗು: ಶೇ 65.20

ಉದಯಗಿರಿ ಪೊಲೀಸರ ಮೇಲೆ ಕಲ್ಲು ತೂರಾಟ: ಬಹುತೇಕ ಶಾಂತಿಯುತ ಮತದಾನ
Last Updated 18 ಏಪ್ರಿಲ್ 2014, 9:57 IST
ಅಕ್ಷರ ಗಾತ್ರ

ಮೈಸೂರು: ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಗುರುವಾರ ನಡೆದ ಲೋಕಸಭೆ ಚುನಾವಣೆಯಲ್ಲಿ ದಾಖಲೆ ಪ್ರಮಾಣದ ಮತದಾನ ನಡೆಯಿತು. ಈ ಕ್ಷೇತ್ರದಲ್ಲಿ ಶೇ 65.20ರಷ್ಟು ಮತದಾನ ನಡೆಯುವ ಮೂಲಕ ಕಳೆದ ಬಾರಿಯ ಶೇ 58ರ ಪ್ರಮಾಣವನ್ನು ಮೀರಿತು.

ಸಂಜೆ 6 ಗಂಟೆಯ ಹೊತ್ತಿಗೆ ಚುನಾವಣಾ ಆಯೋಗದ ಮೂಲಗಳು ನೀಡಿರುವ ಈ ಮಾಹಿತಿಯ ಪ್ರಕಾರ, ಮೈಸೂರು–ಕೊಡಗು ಲೋಕಸಭಾ ವ್ಯಾಪ್ತಿಯ ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಶೇ 77.54ರಷ್ಟು ಮತದಾನವಾಗಿರುವುದು ಗರಿಷ್ಠ ಪ್ರಮಾಣವಾಗಿದೆ. ಕ್ಷೇತ್ರದ ನರಸಿಂಹರಾಜ ವಿಧಾನಸಭಾ ವ್ಯಾಪ್ತಿಯಲ್ಲಿ ಅತಿ ಕಡಿಮೆ ಶೇ 55.93ರಷ್ಟು ಮತದಾನವಾಗಿದೆ. ಉಳಿದಂತೆ ಹುಣಸೂರು (75.82), ಚಾಮುಂಡೇಶ್ವರಿ (67.26), ಕೃಷ್ಣರಾಜ (57.31), ಚಾಮರಾಜ (57.70), ವಿರಾಜಪೇಟೆ (65), ಮಡಿಕೇರಿ (68.80) ಕ್ಷೇತ್ರಗಳಲ್ಲಿ ಮತದಾನವಾಗಿದೆ.

ಕಾರ್ಯಕರ್ತರ ಜಟಾಪಟಿ: ಆರು ಮಂದಿಗೆ ಗಾಯ
ಮತದಾರರನ್ನು ಮತಗಟ್ಟೆಗೆ ಕರೆತರುವ ವಿಚಾರದಲ್ಲಿ ಸೋಶಿಯಲ್‌ ಡೆಮಾಕ್ರೆಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ) ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ನಡೆದ ಜಟಾಪಟಿಯಲ್ಲಿ ಆರು ಮಂದಿ ಗಾಯಗೊಂಡಿರುವ ಘಟನೆ ಮೈಸೂರಿನ ಉದಯಗಿರಿ ಠಾಣೆಯ ಆವರಣದಲ್ಲೇ ನಡೆದಿದೆ.

ಘಟನೆಯಿಂದ ಆಕ್ರೋಶಗೊಂಡ ಕಾಂಗ್ರೆಸ್‌ ಬೆಂಬಲಿಗರು ಶಾಸಕ ತನ್ವೀರ್‌ ಸೇಟ್‌ ಸಮ್ಮುಖದಲ್ಲೇ ಪೊಲೀಸ್‌ ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿದರು. ಗುಂಪು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಇದರಿಂದ ಉದಯಗಿರಿಯಲ್ಲಿ ಗುರುವಾರ ಸಂಜೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಘಟನೆಯಲ್ಲಿ ಕಾಂಗ್ರೆಸ್‌ನ ಅಕ್ರಂ, ಸೈಯದ್‌ ವಾಸೀಮ್‌್, ಮಹಮ್ಮದ್‌ ಖಲೀಮ್‌ ಉಲ್ಲಾ, ಸನಾಉಲ್ಲಾ, ಎಸ್‌ಡಿಪಿಐನ ತಾಹೀರ್‌ ಅಹಮ್ಮದ್‌, ಮಹಮ್ಮದ್‌ ತಬ್ರಿಜ್‌ ಗಾಯಗೊಂಡಿದ್ದಾರೆ. ಎಲ್ಲರನ್ನೂ ಕೆ.ಆರ್‌. ಆಸ್ಪತ್ರೆಗೆ ದಾಖಲಿಸಲಾಗಿದೆ. ಇದಕ್ಕೂ ಮುನ್ನ ಮಂಡಿ ಮೊಹಲ್ಲಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯ ಬಳಿ ಎಸ್‌ಡಿಪಿಐ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿದೆ.

ಮತದಾನ ಜಾಗೃತಿಗೆ ರಿಯಾಯಿತಿ ಸೂತ್ರ
ಮೈಸೂರು: ಲೋಕಸಭೆ ಚುನಾವಣೆಯಲ್ಲಿ ಮತದಾರರನ್ನು ಮತಚಲಾವಣೆಗೆ ಪ್ರೇರೇಪಿಸಲು ಏ. 17ರಂದು ನಗರದ ವಿವಿಧ ಉದ್ಯಮ ಸಂಸ್ಥೆಗಳು ಮತದಾರರಿಗೆ ವಿಶೇಷ ರಿಯಾಯಿತಿ ದರದಲ್ಲಿ ವಸ್ತುಗಳನ್ನು ಖರೀದಿಸಲು ಅವಕಾಶ ಕಲ್ಪಿಸಿದ್ದವು.

ಪುಸ್ತಕ ಖರೀದಿಗೆ ಶೇ 10 ರಿಯಾಯಿತಿ
ಮೈಸೂರು: ಸಪ್ನಾ ಪುಸ್ತಕ ಮಳಿಗೆಯವರು ಮತ ಹಕ್ಕು ಚಲಾಯಿಸಿ ಪುಸ್ತಕ ಖರೀದಿಸುವ ಗ್ರಾಹಕರಿಗೆ ಶೇ 10 ವಿಶೇಷ ರಿಯಾಯಿತಿ ನೀಡಿದರು. ಗುರುವಾರ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 8.30ರವರೆಗೆ ಈ ಸೌಕರ್ಯ ಕಲ್ಪಿಸಲಾಗಿತ್ತು. ಗ್ರಾಹಕರು ಮತದಾನ ಮಾಡಿರುವ ಬಗ್ಗೆ ಎಡಗೈ ಹೆಬ್ಬೆರಳಿನ ಶಾಯಿ ಗುರುತು ತೋರಿಸಿ ರಿಯಾಯಿತಿ ಸೌಲಭ್ಯ ಪಡೆದುಕೊಂಡರು.

ಮತದಾನ ಶ್ರೇಷ್ಠ ಹಕ್ಕು, ಪ್ರತಿಯೊಬ್ಬ ಮತದಾರರು ಈ ಹಕ್ಕನ್ನು ಚಲಾಯಿಸಬೇಕು. ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆಯಡಿ ಸಂಸ್ಥೆಯು ಈ ಸೌಕರ್ಯ ಕಲ್ಪಿಸಿದೆ. ಗ್ರಾಹಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಮಳಿಗೆಯ ವ್ಯವಸ್ಥಾಪಕರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT