ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ಅರಮನೆಯಲ್ಲಿ ವಿವಾಹ ಸಂಭ್ರಮ

ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅದ್ದೂರಿ ವಿವಾಹಕ್ಕೆ ಎಣ್ಣೆಶಾಸ್ತ್ರದ ಮುನ್ನುಡಿ
Last Updated 25 ಜೂನ್ 2016, 19:30 IST
ಅಕ್ಷರ ಗಾತ್ರ

ಮೈಸೂರು: ಅರಮನೆಯಲ್ಲಿ ಶನಿವಾರ ಎಣ್ಣೆಸ್ನಾನದ ವಿಧಿವಿಧಾನಗಳೊಂದಿಗೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರ ಅದ್ದೂರಿ ವಿವಾಹ ಮಹೋತ್ಸವಕ್ಕೆ ಮುನ್ನುಡಿ ಬರೆಯಲಾಯಿತು. ಮೂರು ದಶಕಗಳ ಬಳಿಕ ರಾಜವಂಶಸ್ಥರ ಮನೆಯಲ್ಲಿ ಮದುವೆ ನಡೆಯುತ್ತಿದ್ದು, ಸಂಭ್ರಮ ಅಂಬರ ಮುಟ್ಟಿದೆ.

ರಾಜಸ್ತಾನದ ಡುಂಗರಪುರ ರಾಜಮನೆತನದ ತ್ರಿಷಿಕಾ ಕುಮಾರಿ ಸಿಂಗ್‌ ಜತೆಗಿನ ವಿವಾಹಕ್ಕೆ ಪ್ರಮೋದಾದೇವಿ ಒಡೆಯರ್‌, ರಾಜಪುರೋಹಿತರು ಹಾಗೂ ಕುಲಪುರೋಹಿತರ ಸಾರಥ್ಯದಲ್ಲಿ ಶನಿವಾರ ನಸುಕಿನ 4 ಗಂಟೆಯಿಂದಲೇ ಚಟುವಟಿಕೆಗಳು ಗರಿಗೆದರಿದವು.

ಯದುವಂಶ ರಾಜಮನೆತನದ ಸಂಪ್ರದಾಯದಂತೆ ವಿವಾಹ ಶಾಸ್ತ್ರಗಳು ನೆರವೇರುತ್ತಿದ್ದು, ವರ ಹಾಗೂ ನಾಂದಿ ಕೂರುವವರಿಗೆ ವಾಣಿವಿಲಾಸ ದೇವರ ಮನೆಯಲ್ಲಿ ಅರಿಸಿನ ಎಣ್ಣೆ ಸ್ನಾನದ ವಿಧಿವಿಧಾನ ನಡೆಸಲಾಯಿತು. ಪವಿತ್ರಸ್ನಾನ (ಮಂಗಳಸ್ನಾನ) ಮುಗಿಸಿದ ಯದುವೀರ ಅವರು ಆತ್ಮವಿಲಾಸ ಗಣಪತಿಯ ದರ್ಶನ ಪಡೆದರು. ಬಳಿಕ ಚಾಮುಂಡಿ ತೊಟ್ಟಿಗೆ ಬಂದು ಗಣಪತಿ ಹಾಗೂ ಚಾಮುಂಡೇಶ್ವರಿ ಪೂಜೆ ನೆರವೇರಿಸಿದರು. ಅಲ್ಲಿಯೇ ಮುಡಿಪು ಕಟ್ಟಲಾಯಿತು.

ಸೂರ್ಯೋದಯಕ್ಕೆ ಮುನ್ನವೇ ಅರಮನೆಯ ಆನೆ ಬಾಗಿಲಿನಲ್ಲಿ ಚಪ್ಪರಶಾಸ್ತ್ರ ಜರುಗಿತು. ಚಪ್ಪರವನ್ನು ತೆಂಗಿನ ಗರಿಯಿಂದ ನಿರ್ಮಿಸಲಾಗಿದ್ದು, ಮಾವಿನ ಎಲೆಗಳಿಂದ ಶೃಂಗರಿಸಲಾಗಿತ್ತು. ಅರಮನೆಯ ಕಲ್ಯಾಣ ಮಂಟಪದಲ್ಲಿ ಹೋಮ-ಹವನ ಸಾಂಗೋಪವಾಗಿ ನಡೆಯಿತು.

8 ಗಂಟೆ ಸುಮಾರಿಗೆ ಯದುವೀರ, ಕನ್ನಡಿ ತೊಟ್ಟಿಯಲ್ಲಿ ಅರಮನೆಯ ರಾಜಗುರುಗಳಾದ ಪರಕಾಲ ಮಠದ ಅಭಿನವ ವಾಗೀಶ ಬ್ರಹ್ಮತಂತ್ರ ಸ್ವತಂತ್ರ ಸ್ವಾಮೀಜಿ ಅವರ ಪಾದಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಪ್ರಮೋದಾದೇವಿ ಹಾಗೂ ವಧುವಿನ ಪೋಷಕರಾದ ಹರ್ಷವರ್ಧನ್‌ ಸಿಂಗ್‌ ಮತ್ತು ಮಹೇಶ್ರೀಕುಮಾರಿ ಇದ್ದರು. 10.45ರ ಸುಮಾರಿಗೆ ಕಲ್ಯಾಣಮಂಟಪದಲ್ಲಿ ಸ್ತಂಬ ಮುಹೂರ್ತ, ಗಣಪತಿ ಪೂಜೆ ಜರುಗಿತು. ಕನ್ನಡಿ ಕಟ್ಟೆಯಲ್ಲಿ ಈಡು ಮತ್ತು ಶಕುನ ಶಾಸ್ತ್ರ (ವರನ ಕಡೆಯವರಿಂದ ವಧುವಿಗೆ) ನಡೆಯಿತು.

ಸಂಜೆ ಉದಕ ಶಾಂತಿ ಪಾರಾಯಣ ಜರುಗಿತು. ವಾದ್ಯ ಘೋಷದೊಂದಿಗೆ ಕೋಡಿಸೋಮೇಶ್ವರ ಸ್ವಾಮಿ ದೇಗುಲದಿಂದ ವರನ ಮನೆಗೆ ದೇವರ ಮೂರ್ತಿ ತರಲಾಯಿತು.ತ್ರಿಷಿಕಾ ಜತೆಗೆ ಪೋಷಕರು ಹಾಗೂ ಕುಟುಂಬವರ್ಗದವರು ಸಾಂಸ್ಕೃತಿಕ ನಗರಿಯ ಪಂಚತಾರ ಹೋಟೆಲಿನಲ್ಲಿ ಬೀಡುಬಿಟ್ಟಿದ್ದಾರೆ. ಅವರು ಹೋಟೆಲಿನಲ್ಲಿಯೇ ವಿವಿಧ ಶಾಸ್ತ್ರಗಳನ್ನು ನಡೆಸುತ್ತಿದ್ದಾರೆ. ಕರ್ನಾಟಕ, ರಾಜಸ್ತಾನ, ಮಧ್ಯಪ್ರದೇಶ ಸೇರಿದಂತೆ ವಿವಿಧೆಡೆಯ ರಾಜವಂಶಸ್ಥರು, ಅರಸು ಕುಟುಂಬದವರು, ಯದುವೀರ ಕುಟುಂಬದವರು ಸಂಭ್ರಮದಲ್ಲಿ ಭಾಗಿಯಾಗಿಯಾಗಿದ್ದಾರೆ.

ಭಾನುವಾರ ಕೂಡ ಧಾರ್ಮಿಕ ವಿಧಿವಿಧಾನಗಳು ಮುಂದುವರಿಯಲಿವೆ. ಜೂನ್ 27ರಂದು ಬೆಳಿಗ್ಗೆ 9.05ರಿಂದ 9.35ರ ವರೆಗೆ ಮುಹೂರ್ತ ನೆರವೇರಲಿದೆ.ಜೂನ್ 28ರಂದು ರಾತ್ರಿ 7.30ರಿಂದ 8.30ರ ವರೆಗೆ ದರ್ಬಾರ್‌ ಸಭಾಂಗಣದಲ್ಲಿ ಆರತಕ್ಷತೆ, ಸಂಗೀತ ಕಾರ್ಯಕ್ರಮ ಹಾಗೂ 29ಕ್ಕೆ ನವದಂಪತಿ ಮೆರವಣಿಗೆ ನಡೆಯಲಿದೆ.

ವಯೋಲಿನ್‌ ವಾದಕರಾದ ಡಾ.ಮೈಸೂರು ಮಂಜುನಾಥ್‌ ಹಾಗೂ ಮೈಸೂರು ನಾಗರಾಜ್‌ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಮದುವೆಗೆಂದೇ ಅವರು ಹೊಸ ರಾಗ ರಚಿಸಿದ್ದಾರೆ.

ವರನಿಗೆ ಅಂಗರಕ ಉಡುಪು
ವಿವಾಹ ಮಹೋತ್ಸವದಲ್ಲಿ ಯದುವೀರ ಅವರು ಅಂಗರಕ (ಉದ್ದನೆಯ ಕೋಟ್‌) ಧರಿಸಿ ಕಂಗೊಳಿಸಲಿದ್ದಾರೆ. ಸ್ವತಃ ಪ್ರಮೋದಾದೇವಿ ಅವರೇ ಈ ಪೋಷಾಕಿನ ವಿನ್ಯಾಸ ರೂಪಿಸಿದ್ದಾರೆ. ಇತರೆ ಉಡುಪುಗಳನ್ನು ಬೆಂಗಳೂರಿನಲ್ಲಿ ಖರೀದಿಸಿದ್ದಾರೆ. ಅರಮನೆಯ ಸುಮಾರು 60 ಸಿಬ್ಬಂದಿಗೆ ಪಂಚೆ ಹಾಗೂ ಅಂಗಿಗಳನ್ನು ಕೊಡುಗೆಯಾಗಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಸ್ತ್ರಸೂತ್ರ: ಮದುವೆಗೆ ಬರುವ ಆಹ್ವಾನಿತರು ಬಿಳಿ ಅಥವಾ ಕಪ್ಪು ಬಣ್ಣದ ಉದ್ದದ ಕೋಟು, ಬಿಳಿ ಪ್ಯಾಂಟು ಮತ್ತು ವಲ್ಲಿ ಮತ್ತು ಟರ್ಬನ್‌ ಧರಿಸಿರಬೇಕು. 

ಒಳಗೆ ಸಂಭ್ರಮ, ಹೊರಗೆ ನಿರಾಸೆ...
ಸದಾ ಪ್ರವಾಸಿಗರಿಂದ ಗಿಜುಗುಡುತ್ತಿದ್ದ ಅರಮನೆಯ ಆವರಣದಲ್ಲೀಗ ಮದುವೆಯ ಸಡಗರ ಮನೆಮಾಡಿದೆ. ಆದರೆ, ಅರಮನೆಯ ಕಾಂಪೌಂಡ್‌ನ ಸುತ್ತಮುತ್ತ ನಿರಾಸೆಯ ವಾತಾವರಣ.

‘ವಿವಾಹ ನಿಮಿತ್ತ ಪ್ರವೇಶವಿಲ್ಲ’ ಎಂದು ಪ್ರವೇಶ ದ್ವಾರದಲ್ಲಿ ಫಲಕ ಹಾಕಲಾಗಿದೆ. ಪ್ರವಾಸಿಗರು ಹಾಗೂ ಸಾರ್ವಜನಿಕರು ಬಂದು ನಿರಾಸೆಯಿಂದ ವಾಪಸ್‌ ಹೋಗುತ್ತಿದ್ದಾರೆ.ಪ್ರಮುಖವಾಗಿ ವಿದೇಶಿ ಪ್ರವಾಸಿಗರಿಗೆ ಸರಿಯಾದ ಮಾಹಿತಿ ಇಲ್ಲ. ಕ್ಯಾಮೆರಾ ಹಿಡಿದುಕೊಂಡು ಬಂದು ಪ್ರವೇಶದ್ವಾರದ ಬಳಿ ಅಸಹಾಯಕರಾಗಿ ನಿಂತಿದ್ದು ಕಂಡುಬಂತು. 

ಜೂನ್‌ 29ರ ವರೆಗೆ ಅರಮನೆ ಪ್ರವೇಶಿಸದಂತೆ ಸಾರ್ವಜನಿಕರಿಗೆ, ಪ್ರವಾಸಿಗರಿಗೆ   ನಿರ್ಬಂಧ ವಿಧಿಸಲಾಗಿದೆ. ಪೊಲೀಸ್ ಬಿಗಿಭದ್ರತೆ ಒದಗಿಸಲಾಗಿದೆ. ಮೂಲಗಳ ಪ್ರಕಾರ ಆವರಣದಲ್ಲಿ ನಡೆಯಲಿರುವ ನವದಂಪತಿಯ ಮೆರವಣಿಗೆ ವೇಳೆ ಸಾರ್ವಜನಿಕರಿಗೆ ಅವಕಾಶ ನೀಡುವ ಸಾಧ್ಯತೆ ಇದೆ.

ಮೈಸೂರು: ವಿವಾಹ ಮಹೋತ್ಸವದಲ್ಲಿ ವಿಶ್ವವಿಖ್ಯಾತ ಅರಮನೆಯು ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸಲಿದೆ. ಒಂದು ಲಕ್ಷಕ್ಕೂ ಹೆಚ್ಚು ಬಲ್ಬುಗಳು ಸಂಜೆ ವೇಳೆ ಬೆಳಗಲಿದ್ದು, ಸಮಾರಂಭಕ್ಕೆ ಮತ್ತಷ್ಟು ಮೆರುಗು ನೀಡಲಿವೆ.

ರಾಜಸ್ತಾನದಿಂದ ಬಂದಿರುವ ವಧು ತ್ರಿಷಿಕಾ ಕುಮಾರಿ ಸಿಂಗ್‌ ಅವರ ಕುಟುಂಬದವರ ಪಾಲಿಗೆ ಇದೊಂದು ಸ್ಮರಣೀಯ ಕ್ಷಣ ಕೂಡ. ‘ಎಷ್ಟು ಹೊತ್ತು ದೀಪ ಬೆಳಗಿಸಬೇಕು ಎಂಬುದು ಇನ್ನೂ ನಿಗದಿಯಾಗಿಲ್ಲ. ರಾಜವಂಶಸ್ಥರು ಕೇಳಿದ ಸಮಯದಲ್ಲಿ ಸೌಲಭ್ಯ ಒದಗಿಸಲಾಗುವುದು. ಕೋರಿಕೆ ಮೇರೆಗೆ ಪ್ರತಿ ದಿನ ಒಂದರಿಂದ ಒಂದೂವರೆ ಗಂಟೆ ಕಾಲ ಅವಕಾಶ ನೀಡಲಾಗುವುದು’ ಎಂದು ಅರಮನೆ ಮಂಡಳಿ ಮೂಲಗಳು ತಿಳಿಸಿವೆ. ಸಾಮಾನ್ಯವಾಗಿ ಶನಿವಾರ ಹಾಗೂ ಭಾನುವಾರ ಸಂಜೆ ಒಂದು ಗಂಟೆ ದೀಪ ಬೆಳಗಿಸಲಾಗುತ್ತದೆ.

ಹೋಟೆಲ್‌ನಲ್ಲೇ ವಧು ಶಾಸ್ತ್ರ
ವಧು ತ್ರಿಷಿಕಾ ಕುಮಾರಿ ಸಿಂಗ್‌ ಹಾಗೂ ಅವರ ಕುಟುಂಬದವರು ರ‍್ಯಾಡಿಸನ್‌ ಬ್ಲ್ಯೂ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಇದೇ ಹೋಟೆಲ್‌ನಲ್ಲಿಯೇ  ವಧುವಿನ ಕಡೆಯ ವಿಧಿವಿಧಾನಗಳು ನಡೆಯುತ್ತಿವೆ. 

ಗಣಪತಿ ಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಇಲ್ಲಿಯೇ ನಡೆದಿವೆ. ನೀರೆರೆಯುವ ಶಾಸ್ತ್ರ ಕೂಡ ಇಲ್ಲಿ ಜರುಗಲಿದೆ. ರಾಜಸ್ತಾನ, ಗುಜರಾತ್‌, ಮಧ್ಯಪ್ರದೇಶದ ರಾಜಮನೆತನಗಳಿಗೆ ಆಹ್ವಾನ ನೀಡಲಾಗಿದೆ. ಕೆಲವರು ಈಗಾಗಲೇ ಮೈಸೂರಿಗೆ ಬಂದು ಲಲಿತಮಹಲ್‌ ಅರಮನೆ, ರ‍್ಯಾಡಿಸನ್‌ ಬ್ಲ್ಯೂ ಹಾಗೂ ರಿಗಾಲಿಸ್‌ ಹೋಟೆಲ್‌ಗಳಲ್ಲಿ ವಾಸ್ತವ್ಯ ಹೂಡಿದ್ದಾರೆ. ವಧುವಿನ ಕಡೆಯವರು ಭಾನುವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಅರಮನೆ ಪ್ರವೇಶಿಸಲಿದ್ದಾರೆ.

ವಿಶೇಷ ಭೋಜನ
ಸಮಾರಂಭಕ್ಕೆ ಬರುವ ಗಣ್ಯರಿಗೆ ನಿತ್ಯವೂ ವಿಶೇಷ ಭೋಜನ ವ್ಯವಸ್ಥೆ ಮಾಡಲಾಗಿದೆ. ದಕ್ಷಿಣ ಹಾಗೂ ಉತ್ತರ ಭಾರತ ಶೈಲಿಯ ತಿನಿಸುಗಳು ಇರಲಿವೆ. ಪ್ರತಿದಿನ ಎರಡು ರೀತಿಯ ಪಾಯಸ, ಎರಡು ಥರದ ಪಲ್ಯ, ರಸಂ, ಸಾಂಬಾರು ಸಿದ್ಧಪಡಿಸಲಾಗುತ್ತಿದೆ. ಯದುವೀರ ಅವರ ನೆಚ್ಚಿನ ‘ಜಹಾಂಗೀರ್‌’ ಸಿಹಿ ತಿನಿಸು ಪ್ರಮುಖ ಆಕರ್ಷಣೆ.

ರಾಜವಂಶಸ್ಥರ ಖಾಸಗಿ ನಿವಾಸದ ಮುಂಭಾಗದಲ್ಲಿ ಸಿದ್ಧಪಡಿಸಿರುವ ಉತ್ತರ ಭಾರತದ ಶೈಲಿಯ ವಾಟರ್‌ ಪ್ರೂಫ್‌ ಶಾಮಿಯಾನದಲ್ಲಿ ಭೋಜನ ವ್ಯವಸ್ಥೆ ಇರಲಿದೆ. 

ಆಹ್ವಾನಿತರಿಗೆ ಮಾತ್ರ ಪ್ರವೇಶ: ಆಹ್ವಾನಿತರಿಗೆ ಮದನ್‌ ವಿಲಾಸ ಪೋರ್ಟಿಕೊ ಮತ್ತು ಜಯರಾಮ ದ್ವಾರದಲ್ಲಿ ಪ್ರವೇಶ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT