ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು

Last Updated 27 ಜೂನ್ 2015, 19:30 IST
ಅಕ್ಷರ ಗಾತ್ರ

ಸಮಕಾಲೀನ ಭಾರತೀಯ ಸಣ್ಣ ಕಥೆಗಳು
ಸಂ: ಶಾಂತಿನಾಥ ದೇಸಾಯಿ
ಕನ್ನಡಕ್ಕೆ: ಬಸು ಬೇವಿನಗಿಡದ
ಪು: 272
ರೂ. 135
ಪ್ರ: ಸಾಹಿತ್ಯ ಅಕಾದೆಮಿ, ಸೆಂಟ್ರಲ್‌ ಕಾಲೇಜು ಆವರಣ, ಡಾ. ಬಿ.ಆರ್‌. ಅಂಬೇಡ್ಕರ್ ರಸ್ತೆ, ಬೆಂಗಳೂರು– 560 001

ಭಾರತದ 21 ಭಾಷೆಗಳ ಕತೆಗಳನ್ನು ಬಹುಹಿಂದೆಯೇ ಕನ್ನಡದ ನವ್ಯಕತೆಗಾರ, ವಿಮರ್ಶಕ ಶಾಂತಿನಾಥ ದೇಸಾಯಿ ಅವರು ಕಲೆಹಾಕಿ ಈ ಪುಸ್ತಕವನ್ನು ಸಂಪಾದಿಸಿದ್ದರು. ಇಂಗ್ಲಿಷ್‌ನಲ್ಲಿ ಸಂಪಾದಿಸಲಾಗಿದ್ದ ಈ ಪುಸ್ತಕ ಭಾರತೀಯ ಕಥೆಗಳ ಸರಣಿಯಲ್ಲಿ ನಾಲ್ಕನೇ ಪುಸ್ತಕವಾಗಿದೆ. ಇದು ಮೊದಲಿಗೆ ಯಾವಾಗ ಪ್ರಕಟವಾಯಿತು ಎಂಬ ಮಾಹಿತಿ ಇಲ್ಲಿ ಕಾಣಸಿಗುವುದಿಲ್ಲ. ಇದು ಈಗ ಬಸು ಬೇವಿನಗಿಡದ ಅವರ ಅನುವಾದದ ಮೂಲಕ ಕನ್ನಡಿಗರಿಗೂ ಸಿಗುವಂತಾಗಿದೆ.

ಹಿಂದಿ ಭಾಷೆಯ ಕತೆಗಾರ ನಿರ್ಮಲ್‌ ವರ್ಮಾ, ಮಲಯಾಳಂನ ಎಂ.ಟಿ. ವಾಸುದೇವನ್‌ ನಾಯರ್‌, ಒಡಿಯಾ ಭಾಷೆಯ ಗೋಪಿನಾಥ ಮೊಹಂತಿ ಅವರಂತರ ಪ್ರಸಿದ್ಧ ಕತೆಗಾರರ ಕತೆಗಳು ಇಲ್ಲಿವೆ. ಇದರೊಂದಿಗೆ ಸಿಂಧಿ, ಮಣಿಪುರಿ, ನೇಪಾಳಿ, ಕೊಂಕಣಿ, ಡೊಗ್ರಿ, ಅಸ್ಸಾಮಿ, ಕಾಶ್ಲೀರಿ ಭಾಷೆಯ ಕತೆಗಳೂ ಇವೆ.

ಆಗಿನ ಭಾರತೀಯ ಭಾಷೆಗಳ ಕತೆಗಳಲ್ಲಿ ಆಗುತ್ತಿರುವ ಬದಲಾವಣೆ, ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಶಾಂತಿನಾಥರು ಈ ಕತೆಗಳನ್ನು ಸಂಪಾದಿಸಿದ್ದಾರೆ. ಇಲ್ಲಿರುವ ಅರ್ಧ ಡಜನ್‌ ಕತೆಗಳು ಜಗತ್ತಿನ ಕಥಾಸಂಕಲನದಲ್ಲಿ ಸೇರ್ಪಡೆಗೊಳ್ಳಲು ಅರ್ಹತೆ ಪಡೆದಿವೆ ಎಂದೂ ಶಾಂತಿನಾಥರು ತಮ್ಮ ಮುನ್ನುಡಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಲ್ಲಿರುವ ವೈದೇಹಿ ಅವರ ‘ಸೌಗಂಧಿಯ ಸ್ವಗತಗಳು’, ಇಂಗ್ಲಿಷ್‌ ಕಥೆಗಾರ್ತಿ ಶಶಿ ದೇಶಪಾಂಡೆ ಅವರ ‘ಕೊಕ್ಕೆಹುಳು, ಹಾವ್‌ಮೀನು, ತಗಣಿ, ಉಣಿ ಮತ್ತು ಚಿಕ್ಕಾಡು’ ಎಂಬ ಕತೆಗಳನ್ನು ಹೊರತುಪಡಿಸಿದರೆ ಉಳಿದ ಕತೆಗಾರರ ಕತೆಗಳು ಅವುಗಳ ಇಂಗ್ಲಿಷ್‌ ಅನುವಾದವನ್ನು ಆಧರಿಸಿ ಆಯ್ಕೆಯಾಗಿವೆ. ಇವು ಭಾರತೀಯ ಬದುಕಿನ ಕೆಲವು ಗುಣಲಕ್ಷಣಗಳನ್ನು ತೋರುತ್ತವೆ. ಆದ್ದರಿಂದ ಇವು ಕನ್ನಡಕ್ಕೆ ಹೊರತು ಎನಿಸದ ಕತೆಗಳಾಗಿ ಓದುಗರಿಗೆ ಸಿಕ್ಕಂತಾಗಿದೆ.
***

ಬಲಿಪ ಗಾನಯಾನ
ಬಲಿಪ ನಾರಾಯಣ ಭಾಗವತರ ಭಾಗವತಿಕೆಯ ಬದುಕು
ಲೇ: ನಾಗವೇಣಿ ಮಂಚಿ
ಪ್ರ: ಡಾ. ಪಿ. ದಯಾನಂದ ಪೈ ಮತ್ತು ಪಿ. ಸತೀಶ್‌ ಪೈ ಯಕ್ಷಗಾನ ಅಧ್ಯಯನ ಕೇಂದ್ರ, ಮಂಗಳೂರು ವಿಶ್ವವಿದ್ಯಾಲಯ, ಮಂಗಳಗಂಗೋತ್ರಿ– 99

ಬಲಿಪ ನಾರಾಯಣ ಭಾಗವತರು ತಂಕುತಿಟ್ಟಿನ ಯಕ್ಷಗಾನ ಭಾಗವತರು. ಸುಮಾರು 60 ವರ್ಷಗಳಿಗೂ ಹೆಚ್ಚು ಕಾಲ ಯಕ್ಷಗಾನ ರಂಗದಲ್ಲಿದ್ದವರು. ಅಪಾರ ಅನುಭವ ಉಳ್ಳ ಈ ಭಾಗವತರನ್ನು ಆಗಾಗ ಮಾತನಾಡಿಸಿ ಮಹತ್ವದ ಈ ಪುಸ್ತಕವನ್ನು ನಾಗವೇಣಿ ಮಂಚಿ ಬರೆದಿದ್ದಾರೆ. ಇದು ಒಂದು ರೀತಿಯಲ್ಲಿ ಬಲಿಪ ಭಾಗವತರ ನೆನಪಿನ ಕಥನ; ಜೊತೆಗೆ ದಕ್ಷಣ ಕನ್ನಡದ ಯಕ್ಷಗಾನ ಚರಿತ್ರೆಯನ್ನೂ ಇದು ಹೇಳುತ್ತದೆ.

ಯಕ್ಷಗಾನ ಸಾಮೂಹಿಕ ಪ್ರಯತ್ನದ ಫಲವಾಗಿ ರಂಗದ ಮೇಲೆ ಮೂಡುವಂಥದ್ದು. ಅದಕ್ಕೆ ಅನೇಕರ ಪ್ರಯತ್ನ, ನೆರವು ಬೇಕು. ತಮ್ಮೊಂದಿಗೆ ಕೆಲಸ ಮಾಡಿದ ಹಲವು ಕಲಾವಿದರ ಬಗ್ಗೆಯೂ ಬಲಿಪರು ಹೇಳುತ್ತಾರೆ. ಕೇವಲ ಅವರು, ಅವರ ಕುಟುಂಬದ ಬಗ್ಗೆ ಹೇಳಿಕೊಂಡಿದ್ದು ಇಲ್ಲಿಲ್ಲ. ಕಲೆಯ ಬದುಕಿನ ಹಲವು ಸ್ತರಗಳಿರುವ ಇದರಲ್ಲಿ, ಯಕ್ಷಗಾನ ಮೇಳಗಳ ತಿರುಗಾಟ, ಆಗಾಗ ಕಂಡ ಬದಲಾವಣೆಗಳು, ಹಿರಿಯ ಕಲಾವಿದರ ಚಿತ್ರಣವಿದೆ.

ಅನೇಕ ಕಲಾವಿದರಂತೆ ಬಡತನವನ್ನೇ ಕಂಡ ಬಲಿಪರಿಗೆ ಅದಕ್ಕಿಂಲೂ ಮಿಗಿಲಾಗಿ ಕಲೆಯ ಕುರಿತಾದ ಪ್ರೀತಿಯೇ ಇಲ್ಲಿನ ಮಾತುಗಳಲ್ಲಿ ಕಾಣುತ್ತದೆ. ಯಕ್ಷಲೋಕದೊಡನೆ ಜೀವಂತ ಸಂಬಂಧವನ್ನು ಯಾವಾಗಲೂ ಇರಿಸಿಕೊಂಡ ಅವರು ಅದು ತಮ್ಮನ್ನು ಉದ್ದಕ್ಕೂ ಪೊರೆದುದ್ದನ್ನು ಇಲ್ಲಿ ಹೇಳಿಕೊಂಡಿದ್ದಾರೆ.

‘ನನಗೆ ಯಕ್ಷಗಾನ ಜೀವನೋಪಾಯಕ್ಕೆ ಆಧಾರವಾಗಿದೆ, ಅದು ನನ್ನನ್ನು ಉಳಿಸಿದೆ, ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಿದ್ದೇನೆ, ಹಾಡು ಆತ್ಮತೃಪ್ತಿ ನೀಡಿದೆ’ ಎನ್ನುವ ಅವರಿಗೆ ಯಕ್ಷಾಗಾನ ಮರ್ಯಾದೆಯ ಕಲೆಯಾಗಿ ಕಂಡಿದೆ. ಈ ಕಲೆಯ ಹುಚ್ಚನ್ನು ಹಚ್ಚಿಕೊಂಡು ರಾತ್ರಿ ಪೂರ್ತಿ ನಿದ್ದೆಗೆಟ್ಟು ಇಡೀ ಪ್ರಸಂಗವನ್ನು ನಿಯಂತ್ರಿಸುವ ಭಾಗವತಿಕೆ ಮಾಡಿದ ಈ ಕಲಾವಿದ ಅದರಿಂದ ಕಂಡ ನೆಮ್ಮದಿ, ತನ್ನ ಕಲೆಯ ಕುರಿತಾದ ಉತ್ಸಾಹ ಇಲ್ಲಿನ ಪುಟಗಳಲ್ಲಿ ಮೂಡಿದೆ. ಬಲಿಪರ ಈ ಅನುಭವ ಕಥನ ನಾಡಿನ ಕಲಾಪ್ರೇಮಿಗಳಿಗೆ ಸ್ಫೂರ್ತಿ ಕೊಡಬಹುದು.
***

ಆ ಮೂಲೆ ಈ ಮೂಲೆ
ಲೇ: ಡಾ. ಸಿದ್ಧಲಿಂಗಯ್ಯ
ಪ್ರ: ಅಂಕಿತ ಪುಸ್ತಕ
ಪು:176
ರೂ.150
ನಂ. 53, ಶ್ಯಾಮಸಿಂಗ್‌ ಕಾಂಪ್ಲೆಕ್ಸ್‌, ಗಾಂಧಿಬಜಾರ್‌ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು– 560 004

ಕವಿ ಡಾ. ಸಿದ್ಧಲಿಂಗಯ್ಯ ತಮ್ಮ ಭಾಷಣ, ಪತ್ರಿಕೆಗಳಿಗೆ ನೀಡಿದ ಪ್ರತಿಕ್ರಿಯೆಗಳನ್ನು ಇಲ್ಲಿ ಸಂಕಲಿಸಿದ್ದಾರೆ. ಇಲ್ಲಿನ ಅನೇಕ ಲೇಖನಗಳು ಅವರು ಆಗಾಗ ಮಾಡಿದ ಭಾಷಣಗಳು. ಚುರುಕಾದ, ತಮಾಷೆಯ ಭಾಷಣಕ್ಕೆ ಹೆಸರಾದ ಸಿದ್ಧಲಿಂಗಯ್ಯ ಅವರ ಮಾತುಗಾರಿಕೆಯ ಪ್ರತಿಫಲವಾಗಿಯೇ ಇವು ಮೂಡಿವೆ. ಅವರ ಈ ಲೇಖನಗಳ ಮುಖ್ಯ ಆವರಣ ದಲಿತ ಚಿಂತನೆಯಾಗಿದೆ. ಅಂಬೇಡ್ಕರ್‌ ಹಾಗೂ ದಲಿತ ಚಿಂತನೆ ಅವರ ಸಾಮಾಜಿಕ ಚಿಂತನೆಯ ಬರಹಗಳಲ್ಲಿದೆ.

ಇವೆಲ್ಲವೂ ಈ ಪುಸ್ತಕದ ಮೊದಲ ಭಾಗದಲ್ಲಿವೆ. ಅಲ್ಲಿ ಮಂಟೇಸ್ವಾಮಿ ಕೊಂಡ, ಹೊಗೇನಕಲ್‌ ವಿವಾದದ ಕುರಿತೂ ಒಂದೊಂದು ಲೇಖನಗಳಿವೆ. ಇವೆಲ್ಲವನ್ನೂ ಅವರ ಸಾಮಾಜಿಕ ಕಳಕಳಿಯ, ಚಿಂತನೆಯ ಭಾಗವನ್ನಾಗಿಯೇ ಓದುಗರು ಅವನ್ನು ನೋಡಬಹುದು. ಭಾರತದ ಅತ್ಯುತ್ತಮ ಎನ್ನಬಹುದಾದ ಚಿಂತನೆಗಳಿಗೆ ಸಿದ್ಧಲಿಂಗಯ್ಯ ಅವರದು ತೆರೆದ ಮನಸ್ಸು. ಆ ಚಿಂತನೆಗಳ ಹೆಣೆಗೆಯನ್ನೂ ಅಲ್ಲಲ್ಲಿ ಇಲ್ಲಿನ ಮಾತುಗಳಲ್ಲಿ ಕಾಣಬಹುದು.

ಎರಡನೆ ಭಾಗದಲ್ಲಿ ಕರ್ನಾಟಕದ ಹಲವು ಮೂಲೆಯ ಸಾಹಿತಿಗಳು, ಹೋರಾಟಗಾರರು, ರಾಜಕಾರಣಿಗಳ ಕುರಿತ ನುಡಿಚಿತ್ರಗಳಿವೆ. ರಾಜಕಾರಣಿಗಳಾದ ರಾಮಕೃಷ್ಣ ಹೆಗಡೆ, ಬಿ. ಬಸವಲಿಂಗಪ್ಪ, ಕೆ.ಎಚ್‌. ರಂಗನಾಥ್‌, ಬಿ. ರಾಚಯ್ಯ, ಸಾಹಿತಿಗಳಾದ ಚನ್ನವೀರ ಕಣವಿ, ಹಂ.ಪ. ನಾಗರಾಜಯ್ಯ, ಸಿ.ಎನ್‌. ರಾಮಚಂದ್ರನ್‌, ಗೊ.ರು. ಚೆನ್ನಬಸಪ್ಪ ಮತ್ತಿತರ ಬಗ್ಗೆ ಮಾಡಿದ ಭಾಷಣಗಳು, ಬರೆದ ಲೇಖನಗಳು ಇದರಲ್ಲಿವೆ. ಸಿದ್ಧಲಿಂಗಯ್ಯ ಅವರು ಕನ್ನಡ ನಾಡಿನಲ್ಲಿ ಅಜಾತಶತ್ರು ಎನ್ನಬಹುದು.

ಅವರಿಗೆ ಎಲ್ಲರೊಂದಿಗೆ ಆತ್ಮೀಯ ಹಾಗೂ ಅಂತಃಕರಣದ ಸಂಬಂಧ ಇರುವುದನ್ನು ಇಲ್ಲಿನ ಲೇಖನಗಳು ಮನಗಾಣಿಸುತ್ತವೆ. ಅವರಿಂದ ಬರೆಸಿಕೊಂಡವರು ಅವರನ್ನು ಸದಾ ನೆನೆಯುವಂತೆ ಅವರ ಮಾತುಗಳು ಇವೆ. ವ್ಯಕ್ತಿಗಳಲ್ಲಿ ‘ಕೆಟ್ಟದ್ದನ್ನು ನೋಡಬೇಡ, ಕೇಳಬೇಡ’ ಎಂಬ ಮಾತಿಗೆ ಅವರ ಬರಹಗಳು ಹತ್ತಿರ. ಹಾಗಾಗಿ ಅವರ ಲೇಖನಿಗೆ ವಸ್ತುವಾಗಿರುವ ವ್ಯಕ್ತಿಗಳ ಉತ್ತಮ ಗುಣಗಳು ಮಾತ್ರ ಇಲ್ಲಿ ಗೋಚರಿಸುತ್ತವೆ. ಮುಂದೆ ಬಂದರೆ ಹಾಯದ, ಹಿಂದೆ ಬಂದರೆ ಒದೆಯದ, ನೋಯಿಸದ ಪುಣ್ಯಕೋಟಿಯ ಗುಣ ಲಕ್ಷಣ ಅವರ ಈ ಭಾಗದ ಬರಹಗಳಿಗಿದೆ.
***

ಜಿ.ಎಸ್‌. ಆಮೂರರ ಕನ್ನಡ ವಿಮರ್ಶೆಯ ಸ್ವೀಕೃತಿ
ಸಂ: ಜಿ.ಎಂ. ಹೆಗಡೆ,
ಪು: 528ರೂ.450
ಪ್ರ: ಸಾಹಿತ್ಯ ಪ್ರಕಾಶನ
ಕೊಪ್ಪೀಕರ ಬೀದಿ, ಹುಬ್ಬಳ್ಳಿ–580 020

ಕನ್ನಡದ ವಿಮರ್ಶಕ ಜಿ.ಎಸ್‌. ಆಮೂರರಿಗೆ 90 ವರ್ಷ ತುಂಬಿದ ಸಂದರ್ಭದಲ್ಲಿ ಅವರ ಅಭಿಮಾನಿಗಳು, ಶಿಷ್ಯರು, ಆತ್ಮೀಯರು ಸಲ್ಲಿಸಲಾದ ಅಭಿನಂದನಾ ಗ್ರಂಥ ಇದು. ಇದನ್ನು ವಿಮರ್ಶಕ ಜಿ.ಎಂ. ಹೆಗಡೆ ಸಂಪಾದಿಸಿದ್ದಾರೆ. ಇಂಗ್ಲಿಷ್‌ ಅಧ್ಯಾಪಕ ವೃತ್ತಿಯಲ್ಲಿದ್ದ ಆಮೂರರು ಕನ್ನಡದಲ್ಲಿ ಮುಖ್ಯವಾಗಿ ವಿಮರ್ಶಕರಾಗಿ ಗುರುತಿಸಿಕೊಂಡವರು.

ಕೃತಿಯ ಅಂತಃಸತ್ವವನ್ನು ಬಿಟ್ಟುಕೊಡದೇ ವಸ್ತುನಿಷ್ಠವಾಗಿ ವಿವರಿಸುವ, ಅದರ ಒಳಾವರಣವನ್ನು ಹೊಸಬೆಳಕಿನಲ್ಲಿ ತೋರುವ ವಿಮರ್ಶಕರಾಗಿ ಅವರು ವಿಶಿಷ್ಟರಾಗಿದ್ದಾರೆ. ಈ ಪುಸ್ತಕವನ್ನು ಸ್ಥೂಲವಾಗಿ ನಾಲ್ಕು ಭಾಗಗಳಲ್ಲಿ ವಿಂಗಡಿಸಲಾಗಿದೆ. ಮೊದಲಿನ ಭಾಗ ಅವರ ಪುಸ್ತಕಗಳಿಗೆ ಹಿರಿಯ ಹಾಗೂ ಅವರ ಸಹಲೇಖಕರು ಬರೆದ ಮುನ್ನುಡಿ, ಬೆನ್ನುಡಿ, ಒಳನುಡಿಗಳನ್ನು ಒಳಗೊಂಡಿದೆ.

ಎರಡನೆ ಭಾಗದ ಲೇಖನಗಳು ಅವರ ವಿಮರ್ಶೆ, ಆಸಕ್ತಿ, ವ್ಯಕ್ತಿತ್ವವನ್ನು ಒಳಗೊಂಡ, ಅವರ ಬಗ್ಗೆ ಅಭಿಮಾನ ಸೂಸುವ ಬರಹಗಳಾಗಿವೆ. ಇನ್ನೆರಡು ಭಾಗಗಳಲ್ಲಿ ಒಂದು ಅವರ ಕೃತಿ ಪರಿಚಯ, ವಿಮರ್ಶೆ ಇದ್ದರೆ, ಇನ್ನೊಂದರಲ್ಲಿ ಅವರ ಸಂದರ್ಶನಗಳಿವೆ. ಇವೆಲ್ಲವೂ ಆಮೂರರ ಬದುಕು, ಬರವಣಿಗೆಯ ಸಮಗ್ರ ಚಿತ್ರವನ್ನು ಕೊಡುತ್ತವೆ.

ಕನ್ನಡ ಸಾಹಿತ್ಯದ ಧೀಮಂತರೆಲ್ಲ ಇಲ್ಲಿ ಬರೆದಿದ್ದಾರೆ. ದ.ರಾ. ಬೇಂದ್ರೆ, ಗೋಪಾಲಕೃಷ್ಣ ಅಡಿಗ, ಎಸ್‌. ದಿವಾಕರ್‌, ಡಿ.ಆರ್‌. ನಾಗರಾಜ್‌, ಚಂದ್ರಶೇಖರ ಕಂಬಾರರೊಂದಿಗೆ ಅವರ ಸಮಕಾಲೀನ ವಿಮರ್ಶಕರೂ ಅವರ ಬಗ್ಗೆ ಬರೆದಿದ್ದಾರೆ. ಅರ್ಧಶತಮಾನಕ್ಕೂ ಹೆಚ್ಚು ಕಾಲ ವಿಮರ್ಶೆ ಬರೆಯುತ್ತ, ಕನ್ನಡ ಸಾಹಿತ್ಯಕ್ಕೆ ಪ್ರತಿಸ್ಪಂದಿಸುತ್ತ ಬಂದ ಆಮೂರರ ಒಟ್ಟೂ ಬರವಣಿಗೆ ಕನ್ನಡದ ಸಾಹಿತ್ಯ ಪರಂಪರೆಯನ್ನು ಸರಿಯಾದ ದಿಸೆಯಲ್ಲಿ ಕಥಿಸುವಷ್ಟು ಶಕ್ತಿಶಾಲಿಯಾಗಿದೆ.

ಅವರ ವಿಮರ್ಶಾ ಮಾದರಿಗಳು, ಒಳನೋಟಗಳು ಕನ್ನಡ ಸಾಹಿತ್ಯವನ್ನು ಬೇರೊಂದು ರೀತಿಯಲ್ಲಿ ನೋಡುವಂತೆ ಮಾಡಿವೆ. ಅದು ಇಂದಿನ ಬರಹಗಾರರಿಗೆ ಮಾತ್ರವಲ್ಲ ಮುಂದಿನ ಪೀಳಿಗೆಯವರಿಗೂ ದಿಕ್ಸೂಚಿಯಾಗುವಂತಿದೆ. ಜೊತೆಗೆ ಈ ಅಭಿನಂದನಾ ಗ್ರಂಥ ಕೂಡ ಆಮೂರರ ಸಾಹಿತ್ಯದ ಅಭ್ಯಾಸಕ್ಕಷ್ಟೇ ಅಲ್ಲದೇ ಕನ್ನಡ ವಿಮರ್ಶೆಯ ಅಭ್ಯಾಸಕ್ಕೂ ನೆರವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT