ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು

Last Updated 30 ಏಪ್ರಿಲ್ 2016, 19:36 IST
ಅಕ್ಷರ ಗಾತ್ರ

ಅಲ್ಲಮನೆಡೆಗೆ (ಕವಿತೆಗಳು)
ಲೇ:
ಕಸ್ತೂರಿ ಬಾಯರಿ
ಪ್ರ: ಶಕ್ತಿ ಪ್ರಿಂಟರ್‍ಸ್‌ ಅಂಡ್‌ ಪಬ್ಲಿಷರ್‍ಸ್‌್‌, ನಂ. 277, 5ನೇ ಅಡ್ಡರಸ್ತೆ, ವಿಧಾನಸೌಧ ಬಡಾವಣೆ ವಿಸ್ತರಣೆ, ಕವಿಧಾಮ ನಗರ,
ಲಗ್ಗೆರೆ, ಬೆಂಗಳೂರು– 560 058

ಕನ್ನಡ ಸಾಹಿತ್ಯದಲ್ಲಿ ವಚನಕಾರ ಅಲ್ಲಮಪ್ರಭುವನ್ನು ತಮ್ಮ ಬರಹಗಳಲ್ಲಿ ಒಳಗೊಳ್ಳಲು ಪ್ರಯತ್ನಿಸಿದವರು ಅನೇಕರಿದ್ದಾರೆ. ಅವನ ತಾತ್ವಿಕತೆ, ಬೆಡಗನ್ನು ಕಾವ್ಯದ ಮೂಲಕ ಅರಿಯಲು ಕಸ್ತೂರಿ ಬಾಯರಿ ತಮ್ಮ ಕವನ ಸಂಗ್ರಹ ‘ಅಲ್ಲಮನೆಡೆಗೆ’ ಕೃತಿಯಲ್ಲಿ ಹವಣಿಸಿದ್ದಾರೆ.

ಇಲ್ಲಿನ ಕವಿತೆಗಳು ಆಲಯವನ್ನು ಬಿಟ್ಟು ಬಯಲಾಗುತ್ತವೆ. ಬಯಲಿನಲ್ಲಿ ಕಾಣುವ ಆಕಾಶ, ನಕ್ಷತ್ರ, ನೆಲ, ಬೆಟ್ಟಗಳನ್ನು ಅವು ತೀರದ ವ್ಯಾಮೋಹದಿಂದ, ನಿಶ್ಯಬ್ದವಾಗಿ ಒಳಗೊಳ್ಳುತ್ತವೆ. ಇಲ್ಲಿನ ಕವಿತೆಗಳ ಆತ್ಮಸಂಗಾತಕ್ಕೆ ಅಲ್ಲಮ ಜೊತೆಯಾಗಿದ್ದಾನೆ. ಹಾಗಾಗಿ ಇಲ್ಲಿನ ಘನತರ ಚಿತ್ರಗಳ ಆತ್ಮ ಅಲ್ಲಮನಾಗಿದ್ದಾನೆ. 

‘ಅಲ್ಲಮನೆಂದರೆ’ ಎಂಬ ಕವಿತೆಯಲ್ಲಿ ಅಲ್ಲಮ ಕವಯಿತ್ರಿಯ ಸ್ವಂತದ ತಲ್ಲಣಗಳಿಗೆ ಒದಗುವುದನ್ನು ಕಾಣಬಹುದು.

ಕಂಗಳ ಮುಂದಿನ ಕತ್ತಲೆ, ಮನದ ಮುಂದೆ
ಬಟ್ಟೆ, ಹೊರಗಡೆಯ ಶೃಂಗಾರ ಮರೆತು
ಒಳಗೆ ನೋಡಿದವರ ಬೆಳಕಿನ ಸೂರ್ಯನ ಕಿರಣಗಳು,
ಅಂಬರದೊಳಗೆ ಒಂದು ಬಯಲು ಹುಟ್ಟುವುದು.
...
ಅಲ್ಲಮನೆಂದರೆ ಅಲ್ಲಿ ಇಲ್ಲಿ ಎಲ್ಲಿಯೂ ಇಲ್ಲದ ಬಯಲು.
ಇಲ್ಲಿನ ಕವಿತೆಗಳೆಲ್ಲ ಘನವಾದ ಅನುಭವ, ಪದಗಳಿಗೆ ನಿಲುಕದ ಅನುಭಾವವನ್ನು ಮಂಡಿಸಲು ಹೊರಡುವುದಿಲ್ಲ. ಇಲ್ಲಿ ಅಲ್ಲಮನಿದ್ದಾನೆ. ಆದರೆ, ಅವನೇ ಎಲ್ಲವೂ ಅಲ್ಲ. ಈ ಕವಿತೆಗಳು ಆ ದಿಸೆಯಲ್ಲಿನ ಪ್ರಯಾಣವಷ್ಟೆ.

‘ಗಂಧವತಿ’ ಎಂಬ ಕವಿತೆಯಲ್ಲಿ ‘ಹೆಣ್ಣು ನಾನು ಭೂಮಿ ತೂಕದವಳು/ ರಿಂಗಣಿಸುತ್ತವೆ ರೋಮ ರೋಮಗಳಲಿ/ ನರ್ತನದ ಹೆಜ್ಜೆ ಗೆಜ್ಜೆ ಸಪ್ಪಳಗಳು ಹಾಗೂ/ ತುಡಿತದ ನಿನಾದಗಳು ಅರಳಿ, ಹೂಗಳ/ ಘಮ ನನ್ನಲಿ’ ಎನ್ನುತ್ತಾರೆ ಕವಿ.

ಭೂಮಿಯಲ್ಲಿ ಕಾಣಿಸುವ, ಕೇಳಿಸುವ ಎಲ್ಲವನ್ನೂ ತನ್ನೊಳಗೆ ಇಟ್ಟುಕೊಂಡಿರುವ ಹೆಣ್ಣಿನ ಬಗ್ಗೆ ಈ ಕವಿತೆ ಮಾತನಾಡುತ್ತದೆ. ಇನ್ನೊಂದು ಕವಿತೆ ‘ಹಳೇ ಮಂದಿ’ ಬೇರೆಯದೇ ಅನುಭವವನ್ನು ಮಂಡಿಸುತ್ತದೆ.

‘ಅವರ ಪಾದಗಳು ನೆರಿಗೆಗಟ್ಟಿವೆ ಹಾಗೂ/ ಹಾಕಿಕೊಂಡ ಬೂಟುಗಳು ಮೆತ್ತಗಾಗಿವೆ./ ಅವರು ಏನನ್ನೂ ಹುಡುಕುತ್ತಿಲ್ಲ ಬರೀ ನಿಧಾನವಾಗಿ/ ನಡೆಯುತ್ತಿದ್ದಾರೆ.

ಅವರೀಗ ಹಳದಿ ಎಲೆ./ ಹಗುರಾಗಿದ್ದಾರೆ ಮಾಗಿದ್ದಾರೆ.’ ಎನ್ನುವ ಈ ಕವಿತೆ ಆಯುಷ್ಯ ಮುಗಿಯುತ್ತ ಬಂದ ಹಳೇ ಮಂದಿ ಕಾಲವೆಂಬ ಮರದ ಹಳದಿ ಎಲೆಯಂತೆ ಮಾಗಿ, ಹಗುರಾಗುವುದನ್ನು ಚಿತ್ರವತ್ತಾಗಿ ಹೇಳುತ್ತದೆ. ಇಂತಹ ಚಿತ್ರಗಳು ಇಲ್ಲಿನ ಅನೇಕ ಕವಿತೆಗಳಲ್ಲಿ ಮಿಂಚುತ್ತವೆ.


ಕಸ್ತೂರಿ ಬಾಯರಿ ಅವರ ಕಾವ್ಯ ಮೆಲುದನಿಯದು. ‘ನಾನು ಕವಿ’ ಎಂಬ ಭಾರದಿಂದ ದೂರ ನಿಂತು ಬದುಕನ್ನು ಸಂಭ್ರಮ, ವಿಸ್ಮಯ, ಬೆರಗಿನಿಂದ ನೋಡಿ ಸರಳವಾಗಿ ಬರೆಯುತ್ತಾರೆ.

ಅದಕ್ಕೂ ಮುಖ್ಯವಾಗಿ ಹೆಣ್ಣೊಬ್ಬಳ ಸಾರ್ವಜನಿಕವಾಗಲು ಒಲ್ಲದ, ಆದರೆ ಎಲ್ಲರಿಗೂ ಸಲ್ಲುವ ದನಿಯೊಂದು ಇಲ್ಲಿನ ಕವಿತೆಗಳಲ್ಲಿ ಅಂತರ್ಜಲದಂತೆ ಹರಿದಿದೆ. ಅದು ಲೋಕವನ್ನು ಅಂತಃಕರಣದಿಂದ ಕಂಡು ಸ್ಪಂದಿಸಿದ್ದರ ಫಲ ಮಾತ್ರವಲ್ಲದೆ ಪ್ರತಿಫಲನವೂ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT