ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು

Last Updated 21 ಮೇ 2016, 19:51 IST
ಅಕ್ಷರ ಗಾತ್ರ

ಫೋಟೊ ಕ್ಲಿಕ್ಕಿಸುವ ಮುನ್ನ
ಲೇ:
ಶಿವು ಕೆ.
ಪ್ರ: ಶಿವು ಕೆ. ಪ್ರಕಾಶನ
118, 7ನೇ ಮುಖ್ಯರಸ್ತೆ, 5ನೇ ಅಡ್ಡರಸ್ತೆ,
ಲಕ್ಷ್ಮಿನಾರಾಯಣಪುರ,
ಬೆಂಗಳೂರು–560 021

ಈಗಿನ ಡಿಜಿಟಲ್‌ ಯುಗದಲ್ಲಿ ಛಾಯಾಗ್ರಹಣದ ಹವ್ಯಾಸ ಎಲ್ಲರ ಕೈಗೂ ನಿಲುಕುವಂತಾಗಿದೆ. ಕೈಯಲ್ಲೇ ಮೊಬೈಲ್‌ ಎಂಬ ಮಾಯಾಪೆಟ್ಟಿಗೆ ಇರುವುದರಿಂದ ಪ್ರತಿಯೊಬ್ಬರೂ ಪ್ರತಿಕ್ಷಣದ ಛಾಯಾಗ್ರಾಹಕರೇ. ಹಾಗಿದ್ದೂ ಛಾಯಾಗ್ರಹಣ ಕಲೆ ಎಲ್ಲರಿಗೂ ಒಲಿದಿರುವುದಿಲ್ಲ ಮತ್ತು ಅದನ್ನು ಕಲಿಯಬೇಕು ಎನ್ನುವವರಿಗೆ ಸರಿಯಾದ ದಾರಿ–ಗುರು ಸಿಕ್ಕಿರುವುದಿಲ್ಲ.

ಈ ಕೊರತೆಯನ್ನು ನೀಗಿಸುವ ದಿಸೆಯಲ್ಲಿ ಸ್ವತಃ ಉತ್ತಮ ಛಾಯಾಚಿತ್ರಕಾರರಾದ ಶಿವು ಕೆ. ಕಲಿಕಾ ಕುತೂಹಲಿಗಳಿಗೆ ಛಾಯಾಗ್ರಹಣ ಮಾರ್ಗದರ್ಶಿಯಾಗುವ ‘ಫೋಟೊ ಕ್ಲಿಕ್ಕಿಸುವ ಮುನ್ನ’ ಕೃತಿಯನ್ನು ಬರೆದಿದ್ದಾರೆ.

ಈ ಹಿಂದೆ ಛಾಯಾಗ್ರಹಣ ಕಲಿಯಬೇಕಿದ್ದರೆ ಹಿರಿಯ ಛಾಯಾಗ್ರಾಹಕರ ಹಿಂ‘ಬಾಲಕ’ರಾಗಿ ಕಲಿಯಬೇಕಿತ್ತು. ಈಗಿನ ಸ್ಥಿತಿ ಹಾಗಿಲ್ಲ; ಕೈಯಲ್ಲಿ ಕ್ಯಾಮೆರಾ ಇದ್ದರೆ ಕಂಡದ್ದನ್ನು ಕ್ಲಿಕ್ಕಿಸಿ, ಪುಸ್ತಕಗಳ ನೆರವಿನಿಂದ ಕಲಿಯಬಹುದು. ಈಗ ಕನ್ನಡದಲ್ಲಿ ಅಂತಹ ಹವ್ಯಾಸಿಗಳಿಗೆ, ಆ ವೃತ್ತಿಯಲ್ಲಿ ತೊಡಗಬೇಕು ಎನ್ನುವವರಿಗೆ ಶಿವು ಅವರ ಈ ಪುಸ್ತಕ ನೆರವಾಗಬಹುದು.

ಸ್ವತಃ ಅವರ ಅನುಭವ, ಪ್ರಯೋಗಗಳ ವಿವರಣೆಗಳೊಂದಿಗೆ ಬರೆಯಲ್ಪಟ್ಟ ಇಲ್ಲಿನ ಬರವಣಿಗೆ ಚೇತೋಹಾರಿಯಾಗಿದೆ. ಅಗತ್ಯ ತಾಂತ್ರಿಕ ವಿವರಗಳು, ಕ್ಯಾಮೆರಾಗಳ ವಿಧಗಳು, ಛಾಯಾಗ್ರಹಣದ ಬಗೆಗಳು ಮತ್ತಿತರ ಸಕಲೆಂಟೂ ವಿವರಗಳು ಆಸಕ್ತರಿಗೆ ಇಲ್ಲುಂಟು. ಲೇಖಕರ ಚಿತ್ರಗಳೊಂದಿಗೆ ಸಲೀಂ ಬಳಬಟ್ಟಿ,  ಸಿ.ಆರ್‌. ಸತ್ಯನಾರಾಯಣ, ವಿನೋದ್‌ಕುಮಾರ್‌ ಕೆ., ರಾಕೇಶ್‌ಕುಮಾರ್‌, ಶಶಿಧರ ಹಿರೇಮಠ ಅವರ ಚಿತ್ರಗಳೊಂದಿಗೆ ಛಾಯಾಗ್ರಹಣದ ಕಥನ ನಿರೂಪಣೆಗೊಂಡಿದೆ.

ಇದು ಕೇವಲ ತಾಂತ್ರಿಕ ವಿವರಗಳು ಇರುವ ಅಕಡೆಮಿಕ್‌ ಪುಸ್ತಕವಲ್ಲ. ಕತೆಯಂತೆ ಛಾಯಾಗ್ರಹಣದ ಬಗ್ಗೆ ನಿರೂಪಿಸಿರುವುದರಿಂದ ಇದನ್ನು ಕತೆ ಪುಸ್ತಕದಂತೆಯೂ ಓದಬಹುದು. ಆದ್ದರಿಂದಲೇ ಇದನ್ನು ಯಾರಾದರೂ ಓದಿದ ಬಳಿಕ ಕ್ಯಾಮೆರಾ ಹಿಂದೆ ತಮ್ಮ ಕಣ್ಣನ್ನು ಇಡುವಂತೆ ಅವರನ್ನು ಪ್ರೇರೇಪಿಸಬಲ್ಲುದು.

****

ಬ್ಲಿಸ್ಟರ್ಸ್
(ಇಂಗ್ಲಿಷ್‌ ಅತಿಸಣ್ಣಕತೆಗಳು)

ಲೇ: ಎಸ್‌.ಎಫ್‌. ಯೋಗಪ್ಪನವರ
ಪ್ರ: ಅಲೆಮಾರಿ ಪ್ರಕಾಶನ,
7/1, ಮಾರುತಿ ನಿಲಯ, 5ನೇ ಮುಖ್ಯರಸ್ತೆ,
6ನೇ ಅಡ್ಡರಸ್ತೆ, ಕೃಷ್ಣಪ್ಪ ಬ್ಲಾಕ್‌,
ಗಂಗಾನಗರ, ಬೆಂಗಳೂರು– 560 032

ಕನ್ನಡದ ಕತೆಗಾರ, ಕಾದಂಬರಿಕಾರ, ಅನುವಾದಕ ಎಸ್‌.ಎಫ್‌. ಯೋಗಪ್ಪನವರ ಇಂಗ್ಲಿಷ್‌ನಲ್ಲಿ ಬರೆದ ಪುಟ್ಟ ಕತೆಗಳನ್ನು ಇಲ್ಲಿ ಕೊಟ್ಟಿದ್ದಾರೆ. ಅತಿಸಣ್ಣ ಕತೆಗಳಾದ ಇವನ್ನು ಅವರು ‘ಪುಟ್ಟ ರೂಪಕಗಳ ಸಂಗ್ರಹ’ ಎಂದು ಕರೆದುಕೊಂಡಿದ್ದಾರೆ. ಸಾಹಿತ್ಯದಲ್ಲಿ ಹಲವಾರು ಅರ್ಥದ ಪದರುಗಳನ್ನು ತೆರೆಯುವ ರೂಪಕಗಳ ಲೋಕವೇ ಇಲ್ಲಿದೆ.

ಈ ಅತಿಸಣ್ಣ ಕತೆಗಳು ರೂಪಕಗಳಾಗಿರುವಂತೆಯೇ ಕಿರುವಿವರಗಳಲ್ಲೇ ಮನುಷ್ಯ ಬದುಕಿನ ಅಗಾಧ ಸ್ವರೂಪವನ್ನು ತೆರೆದು ತೋರುತ್ತವೆ. ಅವರ ಕತೆಗಳ ಪ್ರಮುಖ ಲಕ್ಷಣವೆಂದರೆ ತಾತ್ವಿಕ ಹುಡುಕಾಟವಾಗಿದೆ. ಮಾತನಾಡುವ ಚಿತ್ರಗಳಂತಿರುವ ಈ ಸಣ್ಣ ಕತೆಗಳು ಲೋಕದಲ್ಲಿ ನಡೆಯುವ ಹಲಬಗೆಯ ಘಟನೆಗಳನ್ನು ಚಿತ್ರಿಸುತ್ತವೆ.

ಎರಡು ಸಾಲಿನ ಕತೆಗಳಿಂದ ಹಿಡಿದು ಎರಡು ಪುಟಗಳ ಕತೆಗಳು ಇಲ್ಲಿವೆ. ಈ ಕತೆಗಳಲ್ಲಿ ರೇಖಿಸಲಾದ ಅನುಭವದ ಚಿತ್ರಗಳು ಓದುಗರು ತಮ್ಮೊಳಗೆ ಇಳಿದು ನೋಡಿಕೊಳ್ಳುವಂತೆ ಮಾಡುತ್ತವೆ. ಓದುಗರ ಸ್ವಂತದ ಪ್ರತಿಫಲನ ಇಲ್ಲಿನ ನೂರಕ್ಕೂ ಹೆಚ್ಚು ಕತೆಗಳಲ್ಲಿ ಸಾಧ್ಯವಾಗುತ್ತದೆ.

ಅತಿಸಣ್ಣ ಕತೆಗಳಲ್ಲಿ ಅತಿ ಬರವಣಿಗೆ ಸಲ್ಲದು. ಆ ಸಂಗ್ರಹ ಗುಣ ಇಲ್ಲೂ ಇದೆ. ಈ ಅತಿಸಣ್ಣ ಕತೆಗಳು ಕೊಂಚ ಸಮತೋಲನ ತಪ್ಪಿದರೆ ನಗೆಹನಿ, ಘಟನೆಯೊಂದರ ಮಂಡನೆ ಆಗಬಹುದು. ಆದರೆ, ಆ ಅಪಾಯವನ್ನು ಕತೆಗಾರರ ಕಸುಬುದಾರಿಕೆ ತಡೆದಿದೆ.

****

ಮಹಿಳೆ, ಚಳವಳಿ
ಮತ್ತು ರಾಜಕಾರಣ

ಲೇ: ಕೆ. ಷರೀಫಾ
ಪ್ರ: ಸಿರಿವರ ಪ್ರಕಾಶನ,
ಎಂ37/ಬಿ, 8ನೇ ಅಡ್ಡರಸ್ತೆ,
ಲಕ್ಷ್ಮಿನಾರಾಯಣಪುರ,
ಬೆಂಗಳೂರು– 560 021

ಪ್ರಸ್ತುತ ಪುಸ್ತಕದ ಬರಹಗಳು ಮಹಿಳೆಯರ ಹೋರಾಟ ಹಾಗೂ ಅವರನ್ನು ಎಲ್ಲ ರೀತಿಯಿಂದ ಸುತ್ತುವರೆದಿರುವ ರಾಜಕೀಯವನ್ನು ವಿಶ್ಲೇಷಿಸುತ್ತವೆ. ಕೆ. ಷರೀಫಾ ಅವರ ಈ ಪುಸ್ತಕದಲ್ಲಿ ಮಹಿಳೆಯರ ಹೋರಾಟ, ಅವರ ಕ್ರಿಯಾಶೀಲತೆ ಮತ್ತು ಅವರು ಎದುರಿಸುತ್ತಿರುವ ಸಮಸ್ಯೆಗಳು ಕೇಂದ್ರದಲ್ಲಿವೆ.

ಇವೆಲ್ಲ ಸಾಮಾಜಿಕವಾಗಿ, ರಾಜಕೀಯವಾಗಿ ಮಹಿಳೆಯರಿಗೆ ಸಿಗಬೇಕಾದ ಅವಕಾಶಗಳ ಬಗ್ಗೆ ಮಾತನಾಡುತ್ತವೆ. ಮತ್ತು ಇಲ್ಲಿನ ಬರಹಗಳು ಒಳಗೊಳ್ಳುವ, ಓದುಗರ ಗಮನ ಸೆಳೆಯುವ ವಸ್ತು ವಿಸ್ತಾರ ದೊಡ್ಡದಾಗಿಯೇ ಇದೆ.

ಅಲ್ಲಿ ಮರ್ಯಾದಾ ಹತ್ಯೆಯ ಬರ್ಬರ ಕೊಲೆಗಳು, ವರದಕ್ಷಿಣೆಗೆ ಬಲಿಯಾಗುತ್ತಿರುವ ಮುಸ್ಲಿಂ ಮಹಿಳೆ, ಕೋಮುವಾದದ ಕ್ರೌರ್ಯ, ಲಿಂಗ ತಾರತಮ್ಯ, ಗುಜ್ಜರ್‌ ಜನಾಂಗದವರಿಗೆ ಮದುವೆಯ ನೆಪದಲ್ಲಿ ಮಾರಾಟವಾಗುವ ಉತ್ತರ ಕರ್ನಾಟಕದ ಹುಡುಗಿಯರು ಇನ್ನಿತರ ಸಂಗತಿಗಳ ಬಗ್ಗೆ ತಮ್ಮ ಬರಹಗಳಲ್ಲಿ ವಸ್ತುನಿಷ್ಠವಾಗಿ ಬರೆಯುತ್ತಾರೆ.

ಲೇಖಕಿ ಆಯ್ದುಕೊಳ್ಳುವ ಸಂಗತಿಗಳು ಅತ್ಯಂತ ಸಮಕಾಲೀನವಾಗಿವೆ. ಸಮಾಜದ ಕ್ರೌರ್ಯ, ಹಿಂಸೆ, ದುರಂತವನ್ನು ಕೊನೆಗೂ ಮಹಿಳೆಯರೇ ಅನುಭವಿಸಬೇಕಾಗುತ್ತದೆ ಎಂಬ ಸುಡುಸತ್ಯದತ್ತ ಇಲ್ಲಿನ ಬರಹಗಳು ಬೆರಳು ಮಾಡುತ್ತವೆ. ಇವು ಒಂದೆಡೆಯಾದರೆ ಪುಸ್ತಕದ ಎರಡನೆ ಭಾಗ ಸಾಹಿತ್ಯಕ್ಕೆ ಸಂಬಂಧಿಸಿದ್ದು.

ಮಹಿಳಾ ಕಾವ್ಯ, ನವೋದಯ ಕಾಲದ ಕವಯಿತ್ರಿಯರು, ಬೇಬಿತಾಯಿ ಕಾಂಬಳೆ ಅವರ ಮರಾಠಿ ಆತ್ಮಕಥೆ ‘ಬದುಕು ನಮ್ಮದು’, ಸತ್ಯಾನಂದ ಪಾತ್ರೋಟರ ಕಾವ್ಯ ಮತ್ತಿತರ ವಿಷಯಗಳ ಬಗ್ಗೆ ಬರೆದಿದ್ದಾರೆ.

ಪತ್ರಿಕೆಗಳಿಗೆ ಬರೆಯುವ ಕಾಲದ ಒತ್ತಡದಲ್ಲಿ ಸೃಷ್ಟಿಯಾದ ಇಲ್ಲಿ ಲೇಖನಗಳು ಆಳಕ್ಕಿಳಿಯದೇ ಪ್ರಮುಖ ಅಂಶಗಳನ್ನು ಪ್ರಸ್ತಾಪಿಸುತ್ತವೆ. ಇದರಿಂದಾಗಿ ಭಾಷೆಗೆ ತೀವ್ರತೆ ಸಿಕ್ಕಿದರೂ ಅಲ್ಲಲ್ಲಿ ಭಾಷಣವಾಗುವುದನ್ನು ಅವರಿಗೆ ತಪ್ಪಿಸಲು ಸಾಧ್ಯವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT