ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು

Last Updated 28 ಮೇ 2016, 19:30 IST
ಅಕ್ಷರ ಗಾತ್ರ

ಪಾಪು ಪ್ರಪಂಚ
ಲೇ: ಪಾಟೀಲ ಪುಟ್ಟಪ್ಪ
ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ ರಸ್ತೆ, ಹುಬ್ಬಳ್ಳಿ– 580 020

ಪತ್ರಕರ್ತ ಪಾಟೀಲ ಪುಟ್ಟಪ್ಪ ಅವರು ಬರೆದ ಅಂಕಣ ಬರಹಗಳ ಸಂಗ್ರಹ ‘ಪಾಪು ಪ್ರಪಂಚ’. ಆಕಾರದಲ್ಲಿ, ಪ್ರಸ್ತಾಪಿಸಿದ ಸಂಗತಿಗಳಲ್ಲಿ ಸಾಕಷ್ಟು ದೊಡ್ಡದಾದ ಈ ಪುಸ್ತಕ ಹತ್ತು ಹಲವು ಸಂಗತಿಗಳನ್ನು ಓದುಗರ ಎದುರು ಮಂಡಿಸುತ್ತದೆ. ಪಾಪು ದಶಕಗಳ ಕಾಲ ಪತ್ರಕರ್ತ ವೃತ್ತಿಯಲ್ಲಿದ್ದವರು. ಸಹಜವಾಗಿಯೇ ಕರ್ನಾಟಕ ಮಾತ್ರವಲ್ಲ, ದೇಶ–ವಿದೇಶಗಳನ್ನು ಸುತ್ತಿದವರು.

ಜೊತೆಗೆ ಕನ್ನಡ ನಾಡು–ನುಡಿಯ ಚಿಂತಕರಲ್ಲಿ ಒಬ್ಬರು. ಈ ಎಲ್ಲ ಅಂಶಗಳನ್ನು ಒಳಗೊಂಡು ಅವರ ಅಂಕಣಗಳು ಹಲವಾರು ಸಂಗತಿ, ಲೋಕಗಳನ್ನು ಹಾದುಬರುತ್ತವೆ. ಒಂದೇ ಅಂಕಣದಲ್ಲಿ ಅನೇಕ ವಿಷಯಗಳನ್ನು ಗೊಂದಲಕ್ಕೆ ಆಸ್ಪದ ಕೊಡದಂತೆ ವಿವರಿಸುವುದು ಪಾಪು ಅವರ ಶೈಲಿ. ಅದು ವಿಜ್ಞಾನ, ಸಾಹಿತ್ಯ, ರಾಜಕಾರಣ, ಭಾಷೆ, ದೇಶ ಯಾವುದೇ ಇರಬಹುದು. ಪಾಪು ತಮ್ಮದೇ ರೀತಿಯಲ್ಲಿ ಮನಮುಟ್ಟುವಂತೆ ಹೇಳುತ್ತಾರೆ.

ಅಂಕಣ ಬರೆಯುವ ಪ್ರತಿ ಪತ್ರಕರ್ತನಿಗೆ ಒಂದೊಂದು ಅಂಕಣವೂ ಭರವಸೆಯ ವ್ಯವಸಾಯ. ಅಂಕಣಕಾರ ಓದುಗರಿಗೆ ಬೇಸರವಾಗದಂತೆ, ವಸ್ತು ಪುನರುಕ್ತಿಗೊಳ್ಳದಂತೆ ಒಂದರಿಂದ ಒಂದರತ್ತ ಜಿಗಿಯುತ್ತಲೇ ಇರಬೇಕಾಗುತ್ತದೆ. ಆ ದಿಸೆಯಲ್ಲಿ ಪಾಪು ಇಲ್ಲಿ ಒಳಗೊಂಡ ವಿಷಯಗಳ ವ್ಯಾಪ್ತಿ ವಿಸ್ತಾರವಾಗಿಯೇ ಇದೆ. ಅವುಗಳಲ್ಲಿ ಕೆಲವು ದೈನಿಕದಲ್ಲಿ ಎಲ್ಲರೂ ಕಾಣುವ, ಕೇಳಿರುವುದನ್ನೇ ಒಳಗೊಳ್ಳುತ್ತವೆ.

ಇಲ್ಲಿ ಉಲ್ಲೇಖಿತರಾಗಿರುವ ರಾಜಕೀಯ ವ್ಯಕ್ತಿಗಳು, ಪ್ರಸಿದ್ಧರು, ಗಣ್ಯರನ್ನು ಪತ್ರಕರ್ತರಾಗಿ ಪಾಪು ಸಮೀಪದಿಂದ ನೋಡಿದವರು. ಆದ್ದರಿಂದಲೇ ಅವರ ಕುರಿತ ಸಮೀಪದ ನೋಟ ಇಲ್ಲಿ ಕಾಣಸಿಗುತ್ತದೆ. ಯಾರಿಗೂ ಗೊತ್ತಿಲ್ಲದ ಸಾಮಾನ್ಯರೂ ಇಲ್ಲಿದ್ದಾರೆ.

ಒಂದರ್ಥದಲ್ಲಿ ಇದು ಪಾಪು ಅವರ ಆತ್ಮಕತೆ; ಜೊತೆಗೆ ಅವರ ಈ ಆತ್ಮಕತೆಯಲ್ಲಿ ಕರ್ನಾಟಕ, ಭಾರತದ ಇತಿಹಾಸವೂ ದಾಖಲಾಗಿದೆ. ಈ ಅಂಕಣಗಳ ಇನ್ನೊಂದು ಗುಣವೆಂದರೆ ಅದರ ವಸ್ತುನಿಷ್ಠತೆ. ಅದು ಒಬ್ಬ ಪತ್ರಕರ್ತನಿಗೆ ಇರಬೇಕಾದದ್ದೇ ಆದ್ದರಿಂದ ಅವರು ಸತ್ಯ ಹೇಳುವಲ್ಲಿ ಹಿಂಜರಿಯುವುದಿಲ್ಲ. ಅದಕ್ಕೆ ಅವರು ಬಳಸುವ ವ್ಯಂಗ್ಯ, ಹರಿತ ಮಾತುಗಳು ಇದಕ್ಕೊಂದು ರುಚಿಯನ್ನು ಒದಗಿಸಿವೆ. ಇಲ್ಲಿ ಬಂದು ಹೋಗುವ ವ್ಯಕ್ತಿ, ಘಟನೆಗಳ ಚಿತ್ರಸಮೂಹ ತಕ್ಷಣಕ್ಕೆ ಮನದಿಂದ ಮರೆಯಾಗುವುದಿಲ್ಲ.

***
ಜಾನಪದ ಶೋಧ
ಎರಡು ಪುಸ್ತಕಗಳ ಲೇಖಕ: ಎ.ವಿ. ನಾವಡ
ಪ್ರ: ಅಸ್ಮಿತೆ ಪ್ರಕಾಶನ, ಸಂ. ೩೦೧, ಎಬೋಡ್‌ ಅಪಾರ್ಟ್‌ಮೆಂಟ್‌,
ಕಲ್ಪನಾ ರಸ್ತೆ, ವಾಸ್‌ ಲೇನ್‌,
ಮಂಗಳೂರು– 575  002

ಸಾಹಿತ್ಯ ಶೋಧ
ಪ್ರ: ಶೋಧನ ಪ್ರಕಾಶನ, ಸಂ. ೩೦೧, ಎಬೋಡ್‌ ಅಪಾರ್ಟ್‌ಮೆಂಟ್‌, ಕಲ್ಪನಾ ರಸ್ತೆ, ವಾಸ್‌ ಲೇನ್‌, ಮಂಗಳೂರು– 575  002

ಸಂಶೋಧಕ, ಲೇಖಕ ಎ.ವಿ. ನಾವಡರು ತಾವು ಇದುವರೆಗೆ ಸಾಹಿತ್ಯ, ಸಂಸ್ಕೃತಿಯ ಕುರಿತಾಗಿ ಬರೆದ ಬರಹಗಳನ್ನು ಮೊದಲ ಸಂಪುಟ ‘ಸಾಹಿತ್ಯ ಶೋಧ’ದಲ್ಲಿ ಒಟ್ಟುಗೂಡಿಸಿದ್ದಾರೆ. ಅವರು ಒಂದೇ ಕ್ಷೇತ್ರಕ್ಕೆ ಸೀಮಿತರಾಗಿ ಕೆಲಸ ಮಾಡಿದ ವಿದ್ವಾಂಸರಲ್ಲ. ಅವರ ಆಸಕ್ತಿ, ವ್ಯಾಮೋಹದಿಂದ ತೊಡಗಿಸಿಕೊಂಡ ಕ್ಷೇತ್ರಗಳು ಹಲವಾರು.

ಜಾನಪದ, ಭಾಷೆ, ಅನುಭಾವ, ನಿಘಂಟುಶಾಸ್ತ್ರ, ಮಿಶನರಿಗಳು ಮಾಡಿದ ಕೆಲಸ, ಭಾಷಾಂತರ, ಗ್ರಂಥಸಂಪಾದನೆ, ವ್ಯಾಕರಣ, ಛಂದಸ್ಸು ಹೀಗೆ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿ ಅವರು ಬರೆದ ಲೇಖನಗಳು ಈ ಸಂಪುಟದ ಮೂಲಕ ಒಂದೆಡೆ ಸಿಗುವಂತಾಗಿದೆ. ಹೀಗೆ ಹತ್ತಾರು ಶಿಸ್ತುಗಳ ಹೊಕ್ಕು ಬಳಕೆ ಇರುವುದರಿಂದ ಅವರ ಬರಹಗಳಲ್ಲಿ ವೈವಿಧ್ಯಮಯ ತೋಟಗಳ ಸಮೃದ್ಧ ಫಲಗಳು ಸಿಗುತ್ತವೆ.

ಇಲ್ಲಿ ಗೋವಿಂದ ಪೈ ಅವರ ಛಂದಃಪ್ರಯೋಗಗಳಿಂದ ಹಿಡಿದು ಕೊರಗ ಭಾಷೆಯ ವರೆಗೆ ೮೦ಕ್ಕೂ ಹೆಚ್ಚು ಬರಹಗಳು ಸಂಕಲಿತವಾಗಿವೆ. ಜೊತೆಗೆ ಕಾಲಕಾಲಕ್ಕೆ ಅವರು ಕೆಲವು ಪುಸ್ತಕಗಳಿಗೆ ಮುನ್ನುಡಿಗಳು ಇವುಗಳೊಂದಿಗೆ ಇವೆ. ನಾವಡರ ‘ಸಾಹಿತ್ಯದ ಶೋಧ’ವು ಸಂಸ್ಕೃತಿಯ ವಿದ್ಯಾರ್ಥಿಗಳಿಗೆ ಹೊಸಹೊಳಹು, ನೋಟಗಳನ್ನು ಕೊಡಬಲ್ಲುದು. ಇದಲ್ಲದೇ ಪ್ರಖರ ವಿಶ್ಲೇಷಣೆ, ವಿಮರ್ಶೆಗಳ ಮೂಲಕ ಕರ್ನಾಟಕದ ಸಂಸ್ಕೃತಿ ಚಿಂತನೆಗೆ ಹೊಸ ಎಳೆಗಳನ್ನು ಈ ಸಂಪುಟ ಜೋಡಿಸುತ್ತದೆ.

ಇನ್ನೊಂದು ಸಂಪುಟ ‘ಜಾನಪದ ಶೋಧ’ ನಾವಡರ ಜಾನಪದ ಲೇಖನಗಳನ್ನು ಒಳಗೊಂಡಿದೆ. ಈ ಕ್ಷೇತ್ರದಲ್ಲಿ ಅವರು ದಶಕಗಳ ಕಾಲ ತೊಡಗಿಸಿಕೊಂಡವರು. ಅದರಲ್ಲೂ ಅವರು ತುಳು ಜಾನಪದದ ಕುರಿತಾಗಿ ಮಾಡಿದ ಸಂಶೋಧನೆ, ಕೆಲಸಗಳು ಮಹತ್ವದ್ದಾಗಿವೆ.

ಈ ಪುಸ್ತಕದಲ್ಲಿ ಜಾನಪದದ ಶಾಸ್ತ್ರ ಪರಿಭಾಷೆ, ಅನುಸಂಧಾನ, ಸಮುದಾಯ ಅಧ್ಯಯನ, ಆರಾಧನಾ ಸಂಪ್ರದಾಯಗಳು ಹಾಗೂ ಈ ಅಧ್ಯಯನದ ತಾತ್ವಿಕತೆಯ ಭಾಗಗಳಿವೆ. ಇವುಗಳೊಂದಿಗೆ ಕನ್ನಡ ಜನಪದ ಸಾಹಿತ್ಯದ ಪರಿಶೀಲನೆ ಮತ್ತು ತುಳುವ ಜಾನಪದದ ವಿಭಾಗವೂ ಇದೆ.

ನಾಗಾರಾಧನೆಯಾದ ‘ನಾಗಮಂಡಲ’, ಯಕ್ಷಗಾನ, ಕನ್ನಡದ ಜನಪದ ಕತೆ, ಭೂತಾರಾಧನೆ ‘ಪಾಣಾರಾಟ’, ತುಳು ಪಾಡ್ದನಗಳ ಕುರಿತಾಗಿ ಇಲ್ಲಿ ಹಲವು ಲೇಖನಗಳು ಇವೆ.

ಇದಲ್ಲದೇ ಜಾನಪದ ಕ್ಷೇತ್ರದ ಹಲವು ದಿಕ್ಕಿನ ಅವರ ಅಧ್ಯಯನಗಳೂ ಇಲ್ಲಿ ಸೇರಿಕೊಂಡಿವೆ. ಇಲ್ಲಿರುವ ೫೦ರಷ್ಟು ಲೇಖನಗಳು ನಾವಡರು ಜಾನಪದ ಕ್ಷೇತ್ರದಲ್ಲಿ ಮಾಡಿದ ಕೆಲಸಗಳನ್ನು, ಅವೆಷ್ಟು ಮುಖ್ಯವಾಗಿವೆ ಎಂಬುದನ್ನು ಓದುಗರಿಗೆ ಮನಗಾಣಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT