ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು

Last Updated 25 ಜೂನ್ 2016, 19:30 IST
ಅಕ್ಷರ ಗಾತ್ರ

ಭಾಷಾಂತರ ಪ್ರಕ್ರಿಯೆ ಪ್ರೇರಣೆ–ಪ್ರಭಾವ
ಲೇ:
ಮೋಹನ ಕುಂಟಾರ
ಪ್ರ: ಯಾಜಿ ಪ್ರಕಾಶನ, ‘ಭೂಮಿ’, ಎಂ.ಪಿ. ಪ್ರಕಾಶ ನಗರ, ಹೊಸಪೇಟೆ, ಬಳ್ಳಾರಿ ಜಿಲ್ಲೆ– 583201

ಅನುವಾದದ ವಿವಿಧ ಸ್ವರೂಪಗಳನ್ನು ಮೋಹನ ಕುಂಟಾರರ ಈ ಪುಸ್ತಕ ನಿಕಟವಾಗಿ ಪರಿಚಯಿಸುತ್ತದೆ. ಬೇರೆ ಭಾಷೆಗಳಿಂದ ಕನ್ನಡಕ್ಕೆ ಆಗುವ ಅನುವಾದ, ಅದರ ಹಿಂದಿನ ಪ್ರೇರಣೆ – ಪ್ರಭಾವಗಳನ್ನು ಈ ಬರಹ ಮುಖ್ಯವಾಗಿ ತನ್ನ ಕೇಂದ್ರದಲ್ಲಿಟ್ಟುಕೊಂಡಿದೆ. ಕೃತಿಯೊಂದರ ಅನುವಾದ ಎನ್ನುವುದು ಬರಿಯ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಆಗುವ ಅನುವಾದ ಮಾತ್ರವಲ್ಲ, ಅದರ ಪರಿಸರ, ದನಿ, ಬನಿಯ ಅನುವಾದವೂ ಹೌದು. ಕಾಲಕಾಲಕ್ಕೆ ಭಾಷೆ ಬದಲಾದಂತೆ ಅನುವಾದದ ಸ್ವರೂಪವೂ ಬದಲಾಗುತ್ತಾ ಇರುತ್ತದೆ. ಇಲ್ಲಿ ಮುಖ್ಯವಾಗಿ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಈ ಬರವಣಿಗೆಯನ್ನು ಮಾಡಲಾಗಿದೆ. ಆದ್ದರಿಂದ ಇದು ಅಕಡೆಮಿಕ್‌ ಮಾತ್ರವಲ್ಲ, ಸಂಕ್ಷಿಪ್ತವೂ ಆಗಿದ್ದು, ಮಾಹಿತಿಗಳಿಂದ ಕೂಡಿದೆ. ಮಾತ್ರವಲ್ಲ, ಅದರಲ್ಲಿ ಆಸಕ್ತರಾಗಿರುವವರಿಗೆ ಕೈದೀವಿಗೆಯೂ ಆಗಿದೆ.

ಭಾಷಾಂತರ ಹೇಗೆ ನಡೆಯುತ್ತದೆ, ಅದರ ಸವಾಲು, ಇಕ್ಕಟ್ಟು, ಮೂಲದ ನಿಷ್ಠೆಯಿಂದ ಹಿಡಿದು, ಅದರ ಬಗೆಗಳ ವಿವೇಚನೆ ಇಲ್ಲಿದೆ. ಜೊತೆಗೆ ದೇಶೀಯ ಹಾಗೂ ವಿದೇಶಿ ಭಾಷೆಗಳಿಂದ ಆದ ಅನುವಾದಗಳ ಸ್ಥೂಲವಾದ ನೋಟವೊಂದು ಸಿಗುತ್ತದೆ. ಈ ಅನುವಾದಗಳು ಕನ್ನಡ ಸಾಹಿತ್ಯಕ್ಕೆ ಕೊಟ್ಟ ಪ್ರೇರಣೆ, ಬೀರಿದ ಪ್ರಭಾವಗಳನ್ನು ಜೊತೆಯಾಗಿಯೇ ಈ ಬರಹ ಕೊಡಲು, ಒಳಗೊಳ್ಳಲು ಪ್ರಯತ್ನಿಸಿದೆ. ಬೇರೆ ಭಾಷೆಗಳಿಂದ ಹಲಬಗೆಯ ಕೃತಿಗಳು ಅನಾದಿಯಿಂದಲೂ ಅನುವಾದಗೊಳ್ಳುತ್ತ ಬಂದಿವೆ. ಅವೆಲ್ಲದರ ಒಂದು ಕಿರುನೋಟ ಇಲ್ಲಿ ಸಿಗುವಂತಾಗಿದೆ. ಅದೊಂದು ಶಿಸ್ತುಬದ್ಧವಾದ ಕ್ರಿಯಾಶೀಲ ಚಟುವಟಿಕೆ ಎಂಬುದರತ್ತ ಓದುಗರ ಗಮನವನ್ನು ಸೆಳೆದಿರುವ ಲೇಖಕರು ಆ ಕುರಿತ ಅಭ್ಯಾಸಕ್ಕೆ ಒಂದು ಪ್ರವೇಶಿಕೆಯನ್ನು ಒದಗಿಸಿದ್ದಾರೆ.

** *** **
ಕಥಾಸಾಹಿತ್ಯ:
ಸಾಮಾಜಿಕ ವಾಸ್ತವ (ಹೈದರಾಬಾದ್‌ ಕರ್ನಾಟಕ ಕಥಾ ಸಾಹಿತ್ಯ ಅನುಲಕ್ಷಿಸಿ)
ಲೇ: ಅಮರೇಶ ನುಗಡೋಣಿ
ಪ್ರ: ವಿಜಯಕಲ್ಯಾಣ ಪ್ರಕಾಶನ, 8ನೇ ವಾರ್ಡ್‌, ಕೊಂಡನಾಯಕನಹಳ್ಳಿ, ಹೊಸಪೇಟೆ, ಬಳ್ಳಾರಿ –583 239

ನಿಜಾಮನ ಆಳ್ವಿಕೆಗೆ ಒಳಪಟ್ಟಿದ್ದ ಹೈದರಾಬಾದ್‌ ಕರ್ನಾಟಕದ ಕಥಾ ಸಾಹಿತ್ಯದಲ್ಲಿ ಪ್ರತಿಬಿಂಬಿತವಾಗಿರುವ ಸಾಮಾಜಿಕ ವಾಸ್ತವನ್ನು ತೆರೆದಿಡುವುದು ಅಮರೇಶ ನುಗಡೋಣಿ ಅವರ ಈ ಬರಹದ ಉದ್ದೇಶವಾಗಿದೆ. ಹೈ.ಕ.ಕ್ಕೆ ಬೀದರ, ಕಲಬುರ್ಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ರಾಯಚೂರು ಜಿಲ್ಲೆಗಳು ಸೇರಿಕೊಳ್ಳುತ್ತವೆ. ಈ ಪ್ರದೇಶಗಳ ಜನರ ಬದುಕು, ಅದರ ವಾಸ್ತವವನ್ನು ತಮ್ಮ  ಕತೆ, ಕಾದಂಬರಿಗಳಲ್ಲಿ ತಂದಿದ್ದಾರೆ. ಅವುಗಳ ಚಿತ್ರಣದ ಹಿಂದೆ ಕೆಲಸ ಮಾಡಿರುವ ಲೇಖಕರ ಪ್ರಜ್ಞೆಯ ಸ್ವರೂಪವನ್ನು ದಾಖಲಿಸಲು ಇಲ್ಲಿ ಪ್ರಯತ್ನಿಸಲಾಗಿದೆ. ಹೈ.ಕ.ದ ಕಥನಗಳ ಹಿನ್ನೆಲೆಯಲ್ಲಿರುವ ಸಾಮಾಜಿಕ ಅಸಮತೋಲನ, ಅಸಮಾನತೆ, ಆರ್ಥಿಕ, ರಾಜಕೀಯ, ಸಾಂಸ್ಕೃತಿಕ ಪರಿಸರದ ಪ್ರಭಾವ ಇವೆಲ್ಲವನ್ನೂ ಒಳಗೊಂಡಂತೆ ಈ ಅಧ್ಯಯನ ಮಾತನಾಡುತ್ತದೆ. ಈ ಬಗೆಯ ದೃಷ್ಟಿಕೋನದಲ್ಲಿ ರೂಪುಗೊಂಡ ಈ ಕೃತಿ ಅಲ್ಲಲ್ಲಿ ಕುತೂಹಲ ಹುಟ್ಟಿಸುವಂತಿದೆ.

ಸಮಾಜದಲ್ಲಿ ಕಾಣುವ ಪುರೋಹಿತಶಾಹಿ, ಜಮೀನ್ದಾರಿಕೆಯ ಕೌರ್ಯ, ದೌರ್ಜನ್ಯ, ಮಠಗಳ ಹಾಗೂ ಧಾರ್ಮಿಕ ಕಟ್ಟುಪಾಡು ಇಂತಹ ವಿಷಯಗಳು ಹೈ.ಕ.ದ ಮೊದಲ ತಲೆಮಾರಿನ ಕತೆಗಾರರ ವಸ್ತುಗಳಾಗಿದ್ದವು. ಅಲ್ಲಿನ ಸಾಮಾಜಿಕ ವಾಸ್ತವ ಎಂದರೆ ಸುಡುವ ಬೆಂಕಿಯ ಕಿಡಿಗಳು. ಅವು ಅಲ್ಲಿನ ಕತೆಗಳಲ್ಲೂ ಉಳಿದುಕೊಂಡಿವೆ. ಕನ್ನಡದ ಪ್ರಗತಿಶೀಲ ಸಾಹಿತ್ಯದ ಪ್ರಭಾವದಿಂದ ಈ ಭಾಗದ ಸಾಹಿತ್ಯವೂ ಹೊರಗಾಗಿರಲಿಲ್ಲ. ಅಲ್ಲಿಂದ ಈಗಿನ ಕತೆ–ಕಾದಂಬರಿಗಳ ಬಗ್ಗೆ, ಅವುಗಳಲ್ಲಿ ಪ್ರತಿಫಲಿತವಾದ ಸಾಮಾಜಿಕ ಚಿತ್ರಣದ ಬಗ್ಗೆ ಈ ಬರಹ ಸಾಕಷ್ಟು ಹೊಳಹುಗಳನ್ನು ಕೊಡುತ್ತದೆ. ಹೈ.ಕ. ಸಾಹಿತ್ಯದಲ್ಲಿ ಇರುವ ಸಮಾಜವನ್ನು ಹುಡುಕಲು ಹೊರಟಿರುವ ಈ ಅಧ್ಯಯನ ಆ ಭಾಗದ ಸಾಮಾಜಿಕ ಚರಿತ್ರೆಯಾಗಲು ಹವಣಿಸಿದಂತಿದೆ. ಒಳನೋಟಗಳಿಲ್ಲದ ಈ ಪುಸ್ತಕ ಕೇವಲ ಕತೆ–ಕಾದಂಬರಿಗಳ ಒಣ ಮಾಹಿತಿಯಿಂದಾಗಿ ಓದುಗರಿಗೆ ನಿರಾಶೆಯನ್ನುಂಟು ಮಾಡಬಹುದು.

** *** **
ಹಂಪೆ: ಒಂದು ಸುಂದರ ದೃಶ್ಯಕಾವ್ಯ
ಲೇ:
ಟಿ.ಎಸ್‌. ಗೋಪಾಲ್
ಪ್ರ: ಭಾರತೀ ಪ್ರಕಾಶನ ಸರಸ್ವತೀಪುರಂ, ಮೈಸೂರು– 570 009

ವಿಜಯನಗರ ಸಾಮ್ರಾಜ್ಯದ ಹಂಪೆಯ ಕುರಿತಂತೆ ಸಾಕಷ್ಟು ಪುಸ್ತಕಗಳು ಪ್ರಕಟವಾಗಿವೆ. ಇದರ ಲೇಖಕ ಟಿ.ಎಸ್‌. ಗೋಪಾಲ್‌ ಇದನ್ನು ಒಂದು ಪ್ರವಾಸ ಕಥನದಂತೆ ಬರೆದು ಅಲ್ಲಿನ ವಿವಿಧ ಸ್ಥಳಗಳನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸಿದ್ದಾರೆ. ಬರಹಕ್ಕಿಂತ ಹೆಚ್ಚಾಗಿ ಇಲ್ಲಿ ಕಣ್ಣಿಗೆ ಕಟ್ಟುವುದು ಕೆಂಗೇರಿ ಚಕ್ರಪಾಣಿ, ಟಿ.ಜಿ. ಶ್ರೀನಿಧಿ ಅವರ ಮನಮೋಹಕ ಚಿತ್ರಗಳು. ಕೊಂಚ ಐತಿಹಾಸಿಕ, ಪೌರಾಣಿಕ ಹಿನ್ನೆಲೆ, ವಾಸ್ತಶಿಲ್ಪದ ವಿವರಣೆ ಇರುವ ಈ ಚಿತ್ರ–ಬರಹ ವಿಜಯನಗರವನ್ನು ಆಳಿದ ನಾಲ್ಕು ಅರಸು ಮನೆತನಗಳ ರಾಜರ ಬಗ್ಗೆ ಸಾಂದರ್ಭಿಕವಾಗಿ ಉಲ್ಲೇಖಿಸುತ್ತದೆ. ಇದು ಹಂಪಿಯ ದೇವಾಲಯಗಳು, ಸಾಸಿವೆಕಾಳು ಗಣೇಶ, ಕಡಲೆಕಾಳು ಗಣೇಶ, ಲಕ್ಷ್ಮಿನರಸಿಂಹ ಸೇರಿದಂತೆ 40 ಸ್ಥಳಗಳ ವಿವರಣೆಯನ್ನು ಕೊಡುತ್ತದೆ. ಪ್ರಾಥಮಿಕ ಮಾಹಿತಿಗಳಿಂದ ಕೂಡಿದ ಈ ಬರವಣಿಗೆ ಪ್ರವಾಸಿಗರಿಗೆ ಹಂಪಿಯ ತಿರುಗಾಟದ ರುಚಿಯನ್ನು ಹೆಚ್ಚಿಸಬಹುದು. ಜೊತೆಗೆ ಹೊಸ ಯಾತ್ರಿಕರಿಗೆ ಮಾರ್ಗದರ್ಶಿಯಾಗಿಯೂ ಉಪಯುಕ್ತವಾಗಬಹುದು.

***
ತಿದ್ದುಪಡಿ: ‘ಮೊದಲ ಓದು’ ಅಂಕಣದಲ್ಲಿ ಪ್ರಕಟವಾದ ‘ಕತೆಗಾರ’ ಪತ್ರಿಕೆಯ ಪರಿಚಯದಲ್ಲಿ (ಜೂನ್‌ 19) ‘ಗೋಪಾಲ ರಾವ್‌ ಅವರ ಬಳಿಕ ಸಂಪಾಕದರಾದ ಎನ್‌. ಅನಂತರಾಮನ್‌ ಸ್ವತಃ ಲೇಖಕರು’ ಎಂದು ಪ್ರಕಟವಾಗಿತ್ತು. ಅದು ‘ಗೋಪಾಲ ರಾವ್‌ ಅವರ ಬಳಿಕ ಸಂಪಾದಕರಾದ ಜಿ.ಎ. ನರಸಿಂಹಮೂರ್ತಿ...’ ಎಂದಾಗಬೇಕಿತ್ತು. ಈ ತಪ್ಪಿಗಾಗಿ ವಿಷಾದಿಸುತ್ತೇವೆ.
–ಸಂಪಾದಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT