ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಪದಕದ ನಿರೀಕ್ಷೆಯಲ್ಲಿ ಭಾರತ

ವೇಟ್‌ಲಿಫ್ಟಿಂಗ್‌: ಸಂಜಿತಾ, ಮೀರಾಬಾಯಿ ಚಾನು ಮೇಲೆ ಭರವಸೆ
Last Updated 23 ಜುಲೈ 2014, 19:42 IST
ಅಕ್ಷರ ಗಾತ್ರ

ಗ್ಲಾಸ್ಗೊ (ಪಿಟಿಐ): ಇಪ್ಪತ್ತನೇ ಕಾಮನ್‌ವೆಲ್ತ್‌ ಕ್ರೀಡಾಕೂಟದ ಸ್ಪರ್ಧೆಗಳು ಗುರುವಾರ ಆರಂಭವಾಗಲಿದ್ದು, ವೇಟ್‌ ಲಿಫ್ಟಿಂಗ್‌ನಲ್ಲಿ ಭಾರತ ತನ್ನ ಮೊದಲ ಪದಕ ನಿರೀಕ್ಷಿಸುತ್ತಿದೆ. ಮಹಿಳೆಯರ 48 ಕೆ.ಜಿ. ಮತ್ತು ಪುರುಷರ 56 ಕೆ.ಜಿ. ವಿಭಾಗದ ಸ್ಪರ್ಧೆಗಳಲ್ಲಿ ಪಣಕ್ಕಿಟ್ಟಿರುವ ಪದಕಗಳಲ್ಲಿ ಕೆಲವನ್ನು ಭಾರತ ತನ್ನದಾಗಿಸಿಕೊಳ್ಳುವ ಸಾಧ್ಯತೆಯಿದೆ.

2013 ರಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್‌ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಸ್ಪರ್ಧಿಗಳು ಗಮನಾರ್ಹ ಪ್ರದರ್ಶನ ತೋರಿದ್ದರು. ಅದೇ ರೀತಿಯ ಸಾಧನೆಯನ್ನು ಪುನರಾವರ್ತಿಸುವ ವಿಶ್ವಾಸದಲ್ಲಿ ಭಾರತದ ಲಿಫ್ಟರ್‌ಗಳು ಇದ್ದಾರೆ.
ನೈಜೀರಿಯದ ಸ್ಪರ್ಧಿಗಳಿಂದ ಭಾರತಕ್ಕೆ ಪ್ರಬಲ ಪೈಪೋಟಿ ಎದುರಾಗಲಿದೆ. ಆಫ್ರಿಕಾ ದೇಶದ ಲಿಫ್ಟರ್‌ಗಳು 2010ರ ಕೂಟದಲ್ಲಿ ಐದು ಚಿನ್ನ, ನಾಲ್ಕು ಬೆಳ್ಳಿ ಮತ್ತು ಐದು ಕಂಚಿನ ಪದಕ ಜಯಿಸಿದ್ದರು. ಭಾರತ ತಲಾ ಎರಡು ಚಿನ್ನ ಮತ್ತು ಬೆಳ್ಳಿ ಹಾಗೂ ನಾಲ್ಕು ಕಂಚು ಗೆದ್ದುಕೊಂಡಿತ್ತು.

ಕುಮುಕ್‌ಚಾಮ್‌ ಸಂಜಿತಾ ಮತ್ತು ಸಾಯಿಕೋಮ್‌ ಮೀರಾಬಾಯಿ ಚಾನು ಅವರು ಮಹಿಳೆಯರ 48 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಈ ವಿಭಾಗದಲ್ಲಿ ಭಾರತ ಎರಡು ಪದಕಗಳನ್ನು ಗೆಲ್ಲುವ ನಿರೀಕ್ಷೆಯಿದೆ. 2010 ರಲ್ಲಿ ನವದೆಹಲಿಯಲ್ಲಿ ನಡೆದಿದ್ದ ಕೂಟದ ಈ ವಿಭಾಗದ ಸ್ಪರ್ಧೆಯಲ್ಲಿ ಭಾರತ ತಲಾ ಒಂದು ಬೆಳ್ಳಿ ಮತ್ತು ಕಂಚು ಜಯಿಸಿತ್ತು.

ನೈಜೀರಿಯದ ಚಿಕಾ ಅಮಲಾಹ, ಕೆನಡಾದ ಜೆಸ್ಸಿಕಾ ರುಯೆಲ್‌ ಮತ್ತು ದಕ್ಷಿಣ ಆಫ್ರಿಕಾದ ಪೋರ್ಟಾ ರೀಸ್‌ ಅವರು ಭಾರತದ ಸ್ಪರ್ಧಿಗಳಿಗೆ ಸವಾಲೊಡ್ಡಲಿದ್ದಾರೆ. ಚಿಕಾ ಅವರು ಕಾಮನ್‌ವೆಲ್ತ್‌ ಚಾಂಪಿಯನ್‌ಷಿಪ್‌ನಲ್ಲಿ 53 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿ ಬೆಳ್ಳಿ ಜಯಿಸಿದ್ದರು. ಇಲ್ಲಿ ಅವರು 48 ಕೆ.ಜಿ. ವಿಭಾಗದಲ್ಲಿ ಪದಕಕ್ಕಾಗಿ ಪೈಪೋಟಿ ನಡೆಸಲಿದ್ದಾರೆ.

ಮಾರ್ಚ್‌– ಏಪ್ರಿಲ್‌ ತಿಂಗಳಲ್ಲಿ ನಡೆದಿದ್ದ ರಾಷ್ಟ್ರೀಯ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ ನಲ್ಲಿ ಸಂಜಿತಾ ಮತ್ತು ಮೀರಾಬಾಯಿ ಕ್ರಮವಾಗಿ 179 ಮತ್ತು 161 ಕೆ.ಜಿ. ಭಾರ ಎತ್ತುವಲ್ಲಿ ಯಶಸ್ವಿಯಾಗಿದ್ದರು. ಕಾಮನ್‌ವೆಲ್ತ್‌ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಮೀರಾಬಾಯಿ 166 ಕೆ.ಜಿ. ಭಾರ ಎತ್ತುವ ಮೂಲಕ ಚಿನ್ನ ಜಯಿಸಿದ್ದರು.

ಪುರುಷರ 56 ಕೆ.ಜಿ. ವಿಭಾಗದಲ್ಲಿ ಭಾರತಕ್ಕೆ ಚಿನ್ನ ಗೆಲ್ಲುವ ಉತ್ತಮ ಅವಕಾಶವಿದೆ. ಸುಖೇನ್‌ ಡೇ ಮತ್ತು ಗಣೇಶ್‌ ಮಾಲಿ ಈ ವಿಭಾಗದಲ್ಲಿ ಕಣದಲ್ಲಿದ್ದಾರೆ. ಹಾಲಿ ಚಾಂಪಿಯನ್‌ ಎನಿಸಿರುವ ಮಲೇಷ್ಯಾದ ಅಮೀರುಲ್‌ ಇಬ್ರಾಹಿಂ ಈ ಬಾರಿ ಸ್ಪರ್ಧಿಸದೇ ಇರುವುದರಿಂದ ಭಾರತ ಚಿನ್ನ ಗೆಲ್ಲುವ ಸಾಧ್ಯತೆ ಹೆಚ್ಚಿದೆ.

ಬ್ಯಾಡ್ಮಿಂಟನ್‌ನಲ್ಲಿ ಭರವಸೆ
ಕಾಮನ್‌ವೆಲ್ತ್‌ ಕೂಟದ ಬ್ಯಾಡ್ಮಿಂಟನ್‌ನ ಮಿಶ್ರ ತಂಡ ವಿಭಾಗದ ಪಂದ್ಯದಲ್ಲಿ ಭಾರತ ತಂಡದವರು ಘಾನಾ ಜೊತೆ ಪೈಪೋಟಿ ನಡೆಸಲಿದ್ದಾರೆ.‌ ಸೈನಾ ನೆಹ್ವಾಲ್‌ ಅನುಪಸ್ಥಿತಿಯಲ್ಲಿ ಪಿ. ಕಶ್ಯಪ್‌ ಮತ್ತು ಪಿ.ವಿ. ಸಿಂಧು ಅವರು ಭಾರತದ ಭರವಸೆ ಎನಿಸಿಕೊಂಡಿದ್ದಾರೆ. ದುರ್ಬಲ ಘಾನಾ ವಿರುದ್ಧ ಭಾರತಕ್ಕೆ ಗೆಲುವು ಪಡೆಯಲು ಕಷ್ಟವಾಗದು.

ಬ್ಯಾಡ್ಮಿಂಟನ್‌ ಪಂದ್ಯಗಳು ಎಮಿರೇಟ್ಸ್‌ ಅರೆನಾದಲ್ಲಿ ನಡೆಯಲಿವೆ. ಮಿಶ್ರ ತಂಡ ವಿಭಾಗದಲ್ಲಿ ಭಾರತ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಘಾನಾ ಅಲ್ಲದೆ, ಕೀನ್ಯಾ ಮತ್ತು ಉಗಾಂಡ ತಂಡಗಳು ಇದೇ ಗುಂಪಿನಲ್ಲಿವೆ. 2010ರ ಕಾಮನ್‌ವೆಲ್ತ್‌ ಕೂಟದ ಬ್ಯಾಡ್ಮಿಂಟನ್‌ನಲ್ಲಿ ಭಾರತ ಎರಡು ಚಿನ್ನ ಮತ್ತು ತಲಾ ಒಂದು ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದುಕೊಂಡಿತ್ತು.

ಆತ್ಮವಿಶ್ವಾಸದಲ್ಲಿ ಆರ್ಚರಿ ಸ್ಪರ್ಧಿಗಳು
ಸೌರವ್‌ ಘೋಷಾಲ್‌ ಮತ್ತು ದೀಪಿಕಾ ಪಳ್ಳಿಕಲ್‌ ಅವರನ್ನೊಳಗೊಂಡ ಭಾರತ ಆರ್ಚರಿ ತಂಡದವರು ತಮ್ಮ ಪದಕದೆಡೆಗಿನ ಅಭಿಯಾನ ವನ್ನು ಗುರುವಾರ ಆರಂಭಿಸಲಿದ್ದಾರೆ. ಕಾಮನ್‌ವೆಲ್ತ್‌ ಕೂಟದ ಆರ್ಚರಿಯಲ್ಲಿ ಭಾರತ ಇದುವರೆಗೆ ಒಂದೂ ಪದಕ ಗೆದ್ದಿಲ್ಲ. ಪದಕದ ಬರ ನೀಗಿಸುವ ಉತ್ತಮ ಅವಕಾಶ ಈ ಬಾರಿ ಲಭಿಸಿದೆ. ಡಬಲ್ಸ್‌ ಮತ್ತು ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಭಾರತ ಪದಕಗಳನ್ನು ನಿರೀಕ್ಷಿಸುತ್ತಿದೆ. ವೈಯಕ್ತಿಕ ವಿಭಾಗದಲ್ಲಿ ಸೌರವ್‌ ಮತ್ತು ದೀಪಿಕಾ ಪದಕ ಗೆದ್ದು ಅಚ್ಚರಿ ಉಂಟುಮಾಡುವ ಸಾಮರ್ಥ್ಯ ಹೊಂದಿದ್ದಾರೆ.

ಇಲ್ಲಿ ನಾಲ್ಕನೇ ಶ್ರೇಯಾಂಕ ಪಡೆದಿರುವ ಸೌರವ್‌ ಮೊದಲ ಸುತ್ತಿನ ಪಂದ್ಯದಲ್ಲಿ ಸೇಂಟ್‌ ವಿನ್ಸೆಂಟ್‌ ಮತ್ತು ಗ್ರೆನಾಡೈನ್ಸ್‌ನ ಜೂಲ್ಸ್‌ ಸ್ನ್ಯಾಗ್‌ ವಿರುದ್ಧ ಪೈಪೋಟಿ ನಡೆಸುವರು. ಸೌರವ್‌ಗೆ ಕ್ವಾರ್ಟರ್‌ ಫೈನಲ್‌ನಲ್ಲಿ ಮಲೇಷ್ಯಾದ ಆಂಗ್‌ ಬೆಂಗ್‌ ಎದುರಾಗುವ ಸಾಧ್ಯತೆಯಿದೆ. ಅಲ್ಲೂ ಗೆಲುವು ಪಡೆದರೆ ಸೆಮಿಫೈನಲ್‌ನಲ್ಲಿ ಎರಡನೇ ಶ್ರೇಯಾಂಕದ ಆಟಗಾರ ಇಂಗ್ಲೆಂಡ್‌ನ ಜೇಮ್ಸ್‌ ವಿಲ್‌ಸ್ಟ್ರಾಪ್‌ ಎದುರಾಗಬಹುದು.

ಪಳ್ಳಿಕಲ್‌ಗೆ ಮಹಿಳೆಯರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನಲ್ಲಿ ‘ಬೈ’ ಲಭಿಸಿದೆ. ಎರಡನೇ ಸುತ್ತಿನಲ್ಲಿ ಅವರಿಗೆ ಟ್ರಿನಿಡಾಡ್‌ನ ಚಾರ್ಲೊಟ್‌ ನಾಗ್ಸ್‌ ಅಥವಾ ಶ್ರೀಲಂಕಾದ ನಾಡುನಿ ಗುಣವರ್ಧನೆ ಎದುರಾಗುವ ಸಾಧ್ಯತೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT