ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಭಾಷೆ ಚಿತ್ರಕಲೆ...

Last Updated 2 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಪ್ರತಿಯೊಂದು ಮಗುವು ಒಬ್ಬ ಶ್ರೇಷ್ಠ ಕಲಾವಿದ. ಚಿತ್ರಗಳು ಮಕ್ಕಳ ಭಾಷೆ.  ಅವರಿಗೆ ಮೊದಲು ಬರುವುದೇ ಚಿತ್ರಕಲೆ. ಆನಂತರ ಬರಹ-ಓದು. ಚಿತ್ರ ಗೀಚುವುದೇ ಅವರಿಗೆ ಆನಂದ. ನಮ್ಮ ಸಮಾಜದ ಎಲ್ಲ ವರ್ಗಗಳ ಪ್ರತಿಶತ 80 ಮಕ್ಕಳು ತಾವು ಇಷ್ಟಪಡುವ ಆಟಕ್ಕಿಂತಲೂ ಹೆಚ್ಚು ಸಮಯವನ್ನು ಚಿತ್ರಕಲೆಯಲ್ಲಿ ತೊಡಗಿಸಿಕೊಳ್ಳಲು ಇಚ್ಛಿಸುವುದನ್ನು ಕಾಣಬಹುದು.

ಚಿತ್ರಕಲೆಯು ಮಗುವಿನ ಮಾನಸಿಕ ಬೆಳವಣೆಗೆಗೆ ಸ್ವಾಭಾವಿಕ ಸಾಧನ ‘ಹಳೆಮನೆಯ ಬಿಟ್ಟು, ಹೊಸಮನೆಗೆ ಬಂದೆವು ಸಾಮಾನು ಸಟ್ಟು ಸರಂಜಾಮು ಅಲ್ಲಿಂದಿಲ್ಲಿಗೆ ಬಂದವು ಮಗು ಬಿಡಿಸಿದ ಗೋಡೆ ಗೀಚು, ಚಿತ್ರ  ಮಾತ್ರ ತರಲಾಗಲಿಲ್ಲ.’ ಕನ್ನಡದ ಕವಿಯೊಬ್ಬನ ಈ ಸಾಲುಗಳು ಮುಗ್ಧ ಮಗುವಿನ ಗೀಚಾಟದ ಹಿಂದೆ ತುಡಿದ ನೆನಪು, ನೋವು ಹರ್ಷಗಳನ್ನು ಹೇಳುತ್ತವೆ. 

ಚಿತ್ರಕಲೆಯು ಶಿಶುಗಳ ರಚನಾ ಸಾಮರ್ಥ್ಯದ ಬೆಳವಣಿಗೆ, ಭಾವಾಭಿವ್ಯಕ್ತಿ, ಕಲ್ಪನಾಶಕ್ತಿ ವರ್ಧಿಸುವುದಕ್ಕೆ ಅವಕಾಶ ನೀಡುತ್ತದೆ. ಕೆಲವು ಹಂತಗಳಲ್ಲಿ ಮಗು ಮಾತಿನಲ್ಲಿ ವ್ಯಕ್ತಪಡಿಸಲಾಗದ ತನ್ನ ಸಂವೇದನೆಯನ್ನು ಹೊರಗೆಡವಲು ಚಿತ್ರಕಲೆಯಂತಹ ಮೌನ ಭಾಷೆಯನ್ನು ಅವಲಂಭಿಸುತ್ತದೆ. ಚಿತ್ರಕಲೆಯೆಂಬ ಈ ವರ್ಣಮಯ ಕ್ರಿಯೆ ಮಗುವಿನ ಆಪ್ತಮಿತ್ರನಂತೆ. ಯಾಕೆಂದರೆ ತಾನು ರೂಪಿಸಿದ ಚಿತ್ರದ ಮೂಲಕ ತನ್ನ ಮನಸ್ಸಿನಲ್ಲಿರುವ ಅದೃಶ್ಯವಾದ ಅನೇಕ ಭಾವನೆಗಳ ಸ್ವರೂಪವನ್ನು ತಾನೇ ಸೃಷ್ಟಿಸಿ ಅದನ್ನು ತಾನೇ ನೋಡಿ ಆನಂದಿಸುತ್ತಾನೆ.

ಚಿತ್ರಕಲೆ ಚಿತ್ತಾರ ಗೀಚಾಟ ಇವೆಲ್ಲ ನಮಗೆ ಸಂಬಂಧಿಸಿದ್ದಲ್ಲ; ಇದು ಕಲಾಶಿಕ್ಷಕರಿಗೆ ಮತ್ತು ಚಿತ್ರಕಲಾ ವಿದ್ಯಾರ್ಥಿಗಳಿಗೆ ಮಾತ್ರ ಎಂದು ಭಾವಿಸಬೇಡಿ. ಚಿತ್ರಕಲೆಯು ರೂಪರಚನಾ ಸಾಮರ್ಥ್ಯ ಕಡಿಮೆ ಇರುವ ಹಾಗೂ ಬೌದ್ಧಿಕವಾಗಿ ಮಂದವಾಗಿರುವ ಮಕ್ಕಳಿಗೆ ಮಹತ್ವದ್ದಾಗಿದೆ. ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಸೃಜನಾತ್ಮಕ ಗುಣಗಳನ್ನು ಹುಟ್ಟುತ್ತದೆ. ಸ್ವಾತಂತ್ರ್ಯ ನೀಡಿ ಆಲೋಚನಾಶಕ್ತಿಯನ್ನು ಉಪಯೋಗಿಸುವಂತೆ ಮಾಡುತ್ತದೆ. ಬುದ್ಧಿಮತ್ತೆ ಬೆಳೆಯುತ್ತದೆ. 

ಪ್ರಯೋಜನಗಳು
ಪೆನ್ನು, ಪೆನ್ಸಿಲ್, ಕ್ರೇಯನ್ಸ್‌ ಹೀಗೆ ಯಾವುದಾದರೂ ಅವರ ಕೈಗೆ ಕೊಟ್ಟು ಅವರು ಗೀಚುವುದನ್ನು ಗಮನಿಸಿ.  ತಮ್ಮ ಭಾವನೆಗಳನ್ನು ಸಹಜ ಸ್ವಭಾವದ ಗುರುತುಗಳಿಂದ, ಬಣ್ಣಗಳಿಂದ ತಮ್ಮದೇ ಆದ ಮಾಯಾ ಪ್ರಪಂಚವನ್ನೇ ನಿರ್ಮಿಸುತ್ತಾರೆ. ಅವರು ಮಾನಸಿಕವಾಗಿ ಬದಲಾವಣೆ ಗೊಳ್ಳುವುದರ ಜೊತೆ ಜೊತೆಗೆ ಅವರು ಹಸ್ತಾಕ್ಷರಗಳನ್ನು  ಸುಂದರವಾಗಿ ಬರೆಯಲು ಪ್ರಾರಂಭಿಸುತ್ತಾರೆ.

ಮಗು ಚಿತ್ರ ರಚಿಸುವಾಗ ಮಗುವಿನಲ್ಲಾಗುವ ಬದಲಾವಣೆಗಳನ್ನು ಗಮನಿಸಬೇಕು. ಮಕ್ಕಳನ್ನು ಆಗಾಗ ತೋಟ, ಉದ್ಯಾನ, ಕಾಡು, ನದಿ, ಗಿಡ, ಮರ, ಪ್ರಾಣಿ ಇತ್ಯಾದಿಗಳನ್ನು ಪ್ರತ್ಯಕ್ಷವಾಗಿ ತೋರುವ ಮೂಲಕ ಅವರ ನೆನಪಿನ ಉಗ್ರ್ರಾಣದಲ್ಲಿ ಸಾಧ್ಯವಾದಷ್ಟು ದೃಶ್ಯಭಾಷೆಯ ಸಂಗ್ರಹ ಹೆಚ್ಚಾಗುವಂತೆ ಮಾಡಬೇಕು.

ಮಕ್ಕಳಿಗೆ ಚಿತ್ರಕಲೆ ಇಷ್ಟವಾಗುವುದು ಆ ಮಗುವಿನ ತಂದೆ, ತಾಯಿ ಅಥವಾ ವಂಶದವರು ಕಲಾವಿದರಾಗಿದ್ದಾರೆಂದಾಗಲಿ, ಕಲೆಯ ಪರಿಸರದಲ್ಲಿ ಬೆಳೆದವರೆಂದಾಗಲಿ ಅಥವಾ ಮಗುವಿಗೆ ವಿಶೇಷ ಕಲಾಪ್ರತಿಭೆ ಇದೆಯೆಂದಾಗಲಿ ಅಲ್ಲ. ನಮ್ಮ ಸಮಾಜದ ಪ್ರತಿಯೊಂದು ಸಂವೇದನಾಶೀಲ ಮಕ್ಕಳು ಚಿತ್ರಕಲೆಯ ಮೂಲಕ ಹೊರಜಗತ್ತಿನೊಂದಿಗೆ ಸಂವಾದಿಸುತ್ತವೆ. ಪ್ರತಿ ಮಗುವಿನಲ್ಲೂ ಕಲಾಜ್ಞಾನ ಇದ್ದೇ ಇರುತ್ತದೆ. ಆ ಜ್ಞಾನವನ್ನು ನಾವು ಅರಿತು ಅವರಿಗೆ ಕಲಾಶಿಕ್ಷಣ ಕೊಡಬೇಕು.

ಮಕ್ಕಳಲ್ಲಿ ಈ ಎಲ್ಲಾ ಬೆಳವಣಿಗೆಗಳ ಸಾಮರ್ಥ್ಯವನ್ನು ಬೆಳೆಸುವ ಹಿನ್ನೆಲೆಯಲ್ಲಿ ಚಿತ್ರಕಲಾ ಶಿಕ್ಷಣ ಕೊಡಿಸಿ. ಮಕ್ಕಳ ಕನಸುಗಳಿಗೆ ಬಣ್ಣ ತುಂಬಿ. ಮನಸ್ಸು ಮಾಡಿದರೆ ಮಕ್ಕಳಲ್ಲಿ ಏನೇಲ್ಲಾ ಕ್ರಿಯಾಶೀಲತೆಯನ್ನು ತುಂಬಬಹುದು ಎನ್ನುವುದಕ್ಕೆ ಚಿತ್ರಕಲೆಯೇ ಸಾಕ್ಷಿಯಾಗುತ್ತದೆ.                
                                           
ಮಕ್ಕಳಿಗೆ ಕಟ್ಟುವ ಕೆಡವುವ ಖುಷಿಯನ್ನು ಅನುಭವಿಸಲು ಮುಕ್ತ ಅವಕಾಶ ಕೊಡಬೇಕು. ಶಾಲೆಗೆ ಹೋಗುವ ಮಕ್ಕಳಿಗೆ ಓದು-ಬರಹಗಳಲ್ಲಿ ತಪ್ಪು ಮಾಡಲು ಅವಕಾಶ ಇರಬೇಕು. ಮಕ್ಕಳಿಗೆ ಅವರು ಮಾಡಿದ ತಪ್ಪನ್ನು ದೃಶ್ಯದ ಮೂಲಕ ಸ್ಪಷ್ಟವಾಗಿ ಅವರ ಅರಿವಿಗೆ ತರಬೇಕು. ಮಾಡಿದ ತಪ್ಪನ್ನು ಮರುಕಳಿಸಿದಂತೆ ಎಚ್ಚರವಹಿಸಬೇಕು. ಮಗು ಇಷ್ಟಪಡುವ ಕಲೆ ಮೂಲಕ ಮಗುವಿನ ಮನಸ್ಸನ್ನು ಅರಿತು ಸಹಕರಿಸಿದಲ್ಲಿ ಮಗು ಉಲ್ಲಾಸದಿಂದ ಲವಲವಿಕೆ ಯಿಂದ ತನ್ನ ಪರಿಸರವನ್ನು ಅನುಭವಿಸುತ್ತದೆ. 

ಮಕ್ಕಳು ಚಿತ್ತರಿಸಿದ ಚಿತ್ರಗಳು ನಿಮಗೆ ಅರ್ಥವಾಗದಿದ್ದರೆ ಅವುಗಳನ್ನು ಅಸಂಬದ್ಧ ಎಂದು ಅವುಗಳನ್ನು ನಿಷೇಧಿಸಬೇಡಿ. ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮಗಳುಂಟಾಗುತ್ತವೆ. ಈಗಿನ ನವ್ಯ ಕಲೆಗಳು  ಮಕ್ಕಳ ಚಿತ್ರಕಲೆಯಂತೆ ಹೋಲಿಕೆಯಾಗುತ್ತವೆ. ಮಕ್ಕಳ ಚಿತ್ರಗಳನ್ನು ಅಸಂಬದ್ಧ ಎನ್ನುವುದಾದರೆ, ಈಗಿನ ನವ್ಯ ಕಲೆಯನ್ನು ಅಸಂಬದ್ಧ ಎನ್ನಬಹುದಲ್ಲವೇ?

ಭಾಷೆಯೇ ಕಷ್ಟ, ಚಿತ್ರ ಸುಲಭ!
ಮಕ್ಕಳ ಚಿತ್ರಗಳು ಅಮೂಲ್ಯವಾದವು. ಇವರು ಚಿತ್ರಗಳನ್ನು  ನೋಡಿ ಚಿತ್ರಿಸುವುದಿಲ್ಲ; ಕಲ್ಪನೆಯಿಂದಲೇ ಚಿತ್ರಿಸುತ್ತಾರೆ. ಅವರ ಚಿತ್ರಗಳೆಂದರೆ ಗುರುತುಗಳಿಂದ ಅವರ ಅನುಭವ ಪರಂಪರೆಯನ್ನು ವ್ಯಕ್ತಪಡಿಸುತ್ತಾರೆ. ಅವರ ಚಿತ್ರಗಳಲ್ಲಿ ಒಂದು ಶಕ್ತಿ ಇರುತ್ತದೆ. ಕಾರಣ ಮಕ್ಕಳ ಚಿತ್ರಕಲೆಯನ್ನು  ಶುದ್ಧವಾದ ಕಲೆ ಎನ್ನಬಹುದು.

ಚಿತ್ರಗಳ ಮೂಲಕ ಅವರಿಗೆ ತಮ್ಮ ಭಾವನೆಗಳನ್ನು ತೋಡಿಕೊಳ್ಳುವ ಬಯಕೆ. ಅವರಿಗೆ ಭಾಷೆಯೇ ಅಮೂರ್ತ, ತಿಳಿಸಲು ಬಹಳ ಕಷ್ಟ. ಅದನ್ನು ದೃಶ್ಯ ರೂಪದಲ್ಲಿ ಅಂದರೆ ಚಿತ್ರಭಾಷೆಯಲ್ಲಿ ಅರುಹಲು ಸುಲಭ, ಇದು ಮಕ್ಕಳ ಸಹಜ ಗುಣವಾಗಿದೆ.

ಮಕ್ಕಳ ಚಿತ್ರಗಳಲ್ಲಿ ಹೆಚ್ಚಾಗಿ ಕೆಂಪು, ಹಳದಿ ಬಣ್ಣಗಳ ಬಳಕೆ ಹೆಚ್ಚಾಗಿರುತ್ತದೆ. ಚಿತ್ರಕಲೆ ಮಗುವಿಗೆ ತುಂಬಾ ಆನಂದ ಕೊಡುವ ಪ್ರಕ್ರಿಯೆ, ಯಾಕೆಂದರೆ ತಾನು ರೂಪಿಸಿದ ಚಿತ್ರದ ಮೂಲಕ ತನ್ನ ಮನಸ್ಸಿನಲ್ಲಿರುವ ಅದೃಶ್ಯವಾದ ಅನೇಕ ಭಾವನೆಗಳ ಸ್ವರೂಪವನ್ನು ತಾನೇ ಸೃಷ್ಟಿಸಿಕೊಳ್ಳುತ್ತದೆ. ಒಂದು ಸಂದರ್ಭದಲ್ಲಿ ಮಹಾತ್ಮ ಗಾಂಧಿ ಅವರು  ತಮ್ಮ ಹಸ್ತಾಕ್ಷರಗಳು ಚಂದವಿಲ್ಲವೆಂದು ಬೇಸರ ಪಡುತ್ತಾ ಹೀಗೆ ಹೇಳುತ್ತಾರೆ.

ಶಿಕ್ಷಣದಲ್ಲಿ ಅಕ್ಷರಗಳನ್ನು ಕಲಿಸುವುದಕ್ಕಿಂತ ಮುಂಚೆ ಮಕ್ಕಳಿಗೆ ಚಿತ್ರಗಳನ್ನು, ಸುಳುವುಗಳನ್ನು  ಬರೆಯಲು ಕಲಿಸತಕ್ಕದ್ದು. ಅಕ್ಷರಗಳನ್ನು ಚಿತ್ರಕಲೆಯ ವಿಭಾಗವಾಗಿ ತಿಳಿಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT