ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್‌ ಗೋಪುರ ಅಕ್ರಮ ನಿರ್ಮಾಣ

ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಸೂಕ್ಷ್ಮ ಪರಿಸರ ವಲಯದಲ್ಲಿ ಕಾಮಗಾರಿ
Last Updated 23 ಸೆಪ್ಟೆಂಬರ್ 2014, 9:53 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ತಾಲ್ಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಸೂಕ್ಷ್ಮ ಪರಿಸರ ವಲಯದಲ್ಲಿ ಖಾಸಗಿ ಕಂಪೆನಿಯೊಂದು ಅಕ್ರಮವಾಗಿ ಮೊಬೈಲ್ ಗೋಪುರ ನಿರ್ಮಿಸುತ್ತಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.

ತಾಲ್ಲೂಕಿನಿಂದ ಕೇರಳದ ಕಲ್ಲಿಕೋಟೆಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ– 212ರಲ್ಲಿ ಮೊಬೈಲ್ ಗೋಪುರ ನಿರ್ಮಿಸಲಾ­ಗುತ್ತಿದೆ. ತಾಲ್ಲೂಕು ಕೇಂದ್ರದಿಂದ 20 ಕಿ.ಮಿೇ. ಮತ್ತು ಕರ್ನಾಟಕದ ಗಡಿ­ಯಿಂದ ಕೆಲವೇ ಕಿಲೋಮೀಟರ್‌ ಅಂತರದಲ್ಲಿ ನಿರ್ಮಾಣವಾಗುತ್ತಿದೆ. ಮದ್ದೂರು ಅರಣ್ಯ ವಲಯ ಕಚೇರಿಯಿಂದ ಕೆಲವೇ ಅಡಿಗಳ ದೂರದಲ್ಲಿ ಅಕ್ರಮವಾಗಿ ಕಾಮಗಾರಿ ನಡೆಯುತ್ತಿರುವುದು ಅಚ್ಚರಿಯ ಸಂಗತಿ.

ಮೊಬೈಲ್ ಗೋಪುರ ನಿರ್ಮಾಣ­ವಾ­ಗುತ್ತಿರುವ ಪ್ರದೇಶವು ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಸೂಕ್ಷ್ಮ ಪರಿಸರ ವಲಯದ ‘ಬಿ’ ಗುಂಪಿಗೆ ಸೇರಿದೆ. ಸರ್ಕಾರದ ಆದೇಶದಂತೆ ಇಲ್ಲಿ ಯಾವುದೇ ರೀತಿಯ ವಾಣಿಜ್ಯ ಉದ್ದೇಶಗಳಿಗಾಗಿ ಭೂ ಬಳಕೆಯಾಗಲಿ ಅಥವಾ ಯಾವುದೇ ನಿರ್ಮಾಣವಾಗಲಿ ಕೈಗೊಳ್ಳು­ವಂತಿಲ್ಲ.

ಈ ಆದೇಶ ಜಾರಿಗೂ ಮೊದಲೇ ಇಲ್ಲಿ ಸರ್ಕಾರಿ ಸ್ವಾಮ್ಯದ  ಕಂಪೆನಿಯೊಂದರ ಮೊಬೈಲ್ ಗೋಪುರ ನಿರ್ಮಾಣ­ವಾಗಿದೆ. ಆದರೆ, ಆದೇಶ ಜಾರಿಯಾದ ನಂತರ ಖಾಸಗಿ ಕಂಪೆನಿ­ಯೊಂದು ಇಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಟವರ್ ನಿರ್ಮಿ­­ಸು­ತ್ತಿದ್ದು, ಆದೇಶ ಉಲ್ಲಂಘಿಸಿದೆ.
ವ್ಯವಸಾಯಕ್ಕೆಂದು ಗುರುತಿಸಲಾದ ಭೂಮಿಯಲ್ಲೇ ಈ ಟವರ್‌ ನಿರ್ಮಾಣವಾಗುತ್ತಿದೆ. ಮದ್ದೂರು ಗ್ರಾಮದ ನಿವಾಸಿ ಬಸವೇಗೌಡ ಎಂಬುವವರು ತಿಂಗಳ ಬಾಡಿಗೆ ಆಧಾರದ ಮೇಲೆ ಭೂಮಿ ನೀಡಿದ್ದಾರೆ. ಉತ್ತರಪ್ರದೇಶದಿಂದ ಬಂದಿರುವ ಸುಮಾರು 10 ಮಂದಿ ಕಾರ್ಮಿಕರು ಗೋಪುರ ನಿರ್ಮಿಸುತ್ತಿದ್ದಾರೆ. ಬೆಂಗಳೂರಿನ ಕಾರ್ಖಾನೆಯೊಂದು ಕಬ್ಬಿಣದ ವಸ್ತುಗಳನ್ನು ಪೂರೈಸುತ್ತಿದೆ.
ಈ ಅನಧಿಕೃತ ನಿರ್ಮಾಣದ ಬಗ್ಗೆ ಅರಣ್ಯ ಇಲಾಖೆ ಅಥವಾ ಬೇರಂಬಾಡಿ ಗ್ರಾಮ ಪಂಚಾಯಿತಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ನಿರಾಕ್ಷೇಪಣ ಪತ್ರಕ್ಕೆ ಸೂಚನೆ
ಅನುಮತಿ ಪಡೆಯಲು ಜಮೀನು ಮಾಲೀಕರು ಬಂದಿದ್ದರು. ಅರಣ್ಯ ಇಲಾಖೆಯಿಂದ ನಿರಾಕ್ಷೇಪಣ ಪತ್ರ ತಂದ ನಂತರ ಅನುಮತಿ ನೀಡಲಾ­ಗು­ವುದು ಎಂದು ತಿಳಿಸಿದ್ದೇನೆ.
– ಸುದರ್ಶನ್‌, ಕಾರ್ಯದರ್ಶಿ, ಬೇರಂಬಾಡಿ ಗ್ರಾಮ ಪಂಚಾಯಿತಿ

ಸೂಚನೆ ನೀಡಿದ್ದೇನೆ
ಮೊಬೈಲ್ ಗೋಪುರ ನಿರ್ಮಾಣ ಮಾಡುತ್ತಿರುವವರಿಗೆ ಸೂಚನೆ ನೀಡಿದ್ದೇನೆ. ಇದುವರೆಗೆ ಯಾರೂ ಸಂಪರ್ಕಿಸಿಲ್ಲ. ಅನುಮತಿ ಕೂಡಾ ಪಡೆದಿಲ್ಲ.
– ರತ್ನ ಪ್ರಭಾ, ವಲಯ ಅರಣ್ಯಾಧಿಕಾರಿ, ಮದ್ದೂರು ವಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT