ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್‌ ಬ್ಯಾಂಕಿಂಗ್‌ ವಿಸ್ತರಣೆಗೆ ಸಲಹೆ

ಟಿಎಸ್‌ಎಸ್‌ನಲ್ಲಿ ಎಟಿಎಂ ವ್ಯವಸ್ಥೆ
Last Updated 20 ಡಿಸೆಂಬರ್ 2014, 9:24 IST
ಅಕ್ಷರ ಗಾತ್ರ

ಶಿರಸಿ: ಇಲ್ಲಿನ ಪ್ರಮುಖ ಅಡಿಕೆ ವಹಿವಾಟು ಸಹಕಾರಿ ಸಂಸ್ಥೆಯಾಗಿರುವ ಟಿಎಸ್‌ಎಸ್‌ ತನ್ನ ಸದಸ್ಯ ಗ್ರಾಹಕರಿಗೆ ಇನ್ನು ದಿನದ 24 ಗಂಟೆ ಹಣ ಪಡೆಯುವ ಸೌಲಭ್ಯ ಒದಗಿಸಿದೆ. ಗ್ರಾಹಕರ ಅನುಕೂಲಕ್ಕಾಗಿ ಟಿಎಸ್‌ಎಸ್‌ ಆವರಣದಲ್ಲಿ ಎಟಿಎಂ ವ್ಯವಸ್ಥೆಯನ್ನು ಪ್ರಾರಂಭಿಸಿದೆ.

ನಬಾರ್ಡ್‌ನ ಮುಖ್ಯ ಮಹಾಪ್ರಬಂಧಕ ಜಿ.ಆರ್‌. ಚಿಂತಾಲ್‌ ಅವರು ಎಟಿಎಂ ಹಾಗೂ ಸ್ಮಾರ್ಟ್‌ ಕಾರ್ಡ್‌ ಸೌಲಭ್ಯವನ್ನು ಶುಕ್ರ­ವಾರ ಉದ್ಘಾಟಿಸಿದರು. ‘ಆಧುನಿಕ ತಂತ್ರ­ಜ್ಞಾನದ ಯುಗದಲ್ಲಿ ಗ್ರಾಹಕರ ಸ್ನೇಹಿ ಸೌಲಭ್ಯಗಳೆಡೆಗೆ ಸಂಸ್ಥೆಗಳು ಯೋಚಿಸಬೇಕಾಗಿದೆ.

ಟಿಎಸ್‌ಎಸ್ ಗ್ರಾಹಕರಿಗೆ ಪ್ರಸ್ತುತ ಎಟಿಎಂ ಸೌಲಭ್ಯ ನೀಡಿದ್ದು, ಇನ್ನೆರಡು ವರ್ಷಗಳಲ್ಲಿ ಮೊಬೈಲ್‌ ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಕಲ್ಪಿಸುವಂತಾಗಬೇಕು’ ಎಂದರು.
‘ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಉತ್ಪಾದಕರ ಸಂಘ ರಚನೆಯ ಕುರಿತು ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ.

ನಬಾರ್ಡ್‌ ಕರ್ನಾಟಕವು ದೇಶದಲ್ಲೇ ಮೊದಲು ಉತ್ಪಾದಕರ ಸಂಘ ರಚಿಸಿದ ಹೆಗ್ಗಳಿಕೆ ಪಡೆದಿದೆ. 2 ಸಾವಿರ ಉತ್ಪಾದಕ ಸಂಘಗಳ ರಚನೆಯ ಗುರಿ ಹೊಂದಿರುವ ನಬಾರ್ಡ್‌ ಆರ್ಥಿಕ ನೆರವು ನೀಡಿ ಇವುಗಳನ್ನು ಸದೃಢಗೊಳಿಸುತ್ತಿದೆ. ಉತ್ಪಾದಕರ ಸಂಘಗಳಿಗೆ ವಿಶೇಷ ಅನುದಾನವನ್ನು ನಬಾರ್ಡ್‌ ನೀಡುತ್ತದೆ. ರೈತರನ್ನು ಬಲಿಷ್ಠಗೊಳಿಸುವುದು ನಬಾರ್ಡ್ ಗುರಿಯಾಗಿದೆ’ ಎಂದು ಹೇಳಿದರು.

‘ಟಿಎಸ್‌ಎಸ್‌ ಅಡಿಕೆ ಹೊರತಾಗಿ ಕಿರು ಅರಣ್ಯ ಉತ್ಪನ್ನ ಅಥವಾ ಇನ್ನಾವುದಾದರೂ ಹೊಸ ಉತ್ಪನ್ನಗಳ ಬಗ್ಗೆ ಯೋಚಿಸಬೇಕು. ಹೊಸ ರಚನಾತ್ಮಕ ಚಟುವಟಿಕೆ ಮೂಲಕ ರೈತರಿಗೆ ಆರ್ಥಿಕ ಅಭಿವೃದ್ಧಿಗೆ ನೆರವಾಗಬೇಕು’ ಎಂದು ಚಿಂತಾಲ್‌ ಹೇಳಿದರು.

‘ಕ್ಷೇತ್ರ ವಿಸ್ತರಣೆ ಯೋಜನೆ ಅಡಿಯಲ್ಲಿ ಡೊಳ್ಳಮೆಣಸು ಬೆಳೆ ಬೆಳೆಯಲು ಪ್ರೋತ್ಸಾಹಿಸಲಾಗುವುದು. ಬೆಂಗಳೂರು ನಗರ ಒಂದರಲ್ಲೇ ದಿನಕ್ಕೆ 7 ಕ್ವಿಂಟಲ್‌ ಡೊಳ್ಳಮೆಣಸು ವ್ಯಾಪಾರವಾಗುತ್ತದೆ. ರೈತರಿಗೆ ಸರಾಸರಿ ಕೆ.ಜಿ. ಯೊಂದಕ್ಕೆ ₨ 60–70 ದರ ಸಿಗುತ್ತದೆ’ ಎಂದರು.

ಬಹುಪಯೋಗಿ ಸ್ಮಾರ್ಟ್‌ ಕಾರ್ಡ್: ‘ಸ್ಮಾರ್ಟ್‌ ಕಾರ್ಡ್‌ ಬಹುಪಯೋಗಿ ಕಾರ್ಡ್‌ ಆಗಿದೆ. ನಬಾರ್ಡ್‌ ಸಹಯೋಗ­ದೊಂದಿಗೆ ಟಿಎಸ್‌ಎಸ್‌ ಶೇರು ಸದಸ್ಯರಿಗೆ ಸ್ಮಾರ್ಟ್‌ ಕಾರ್ಡ್‌ ಅನ್ನು ವಿತರಿಸಲಾಗುತ್ತಿದೆ. ಸ್ಮಾರ್ಟ್ ಕಾರ್ಡ್‌ ಅನ್ನು ಐಡಿ ಕಾರ್ಡ್‌ ಆಗಿ, ಎಟಿಎಂ ಕಾರ್ಡ್‌ ಹಾಗೂ ಮಾಹಿತಿ ಭಂಡಾರ­ವಾಗಿ ಉಪಯೋಗಿಸಬಹುದು.

ಇದರಲ್ಲಿ ಸದಸ್ಯರ ವೈಯಕ್ತಿಕ ವಿವರ, ವೈದ್ಯಕೀಯ, ವಿಮೆ, ಬ್ಯಾಂಕ್ ಮಾಹಿತಿ, ಪಹಣಿ ಪತ್ರಿಕೆ, ವಾಹನ ಮಾಹಿತಿ, ಕರೆಂಟ್ ಬಿಲ್ ಹಾಗೂ ಫೋನ್ ಬಿಲ್ ಮಾಹಿತಿ, ರೇಷನ್‌ಕಾರ್ಡ್, ಆಧಾರ್ ಕಾರ್ಡ್‌ ಸೇರಿದಂತೆ ಎಲ್ಲ ಮಾಹಿತಿಗಳು ಇರು­ತ್ತವೆ.

ಇದರಿಂದ ಸದಸ್ಯರು ಎಲ್ಲ ಕಾಗದ ಪತ್ರ­ಗಳನ್ನು ಬ್ಯಾಗಿನಲ್ಲಿ ಇಟ್ಟುಕೊಂಡು ಓಡಾಡುವ ಅವಶ್ಯಕತೆ ಇರುವುದಿಲ್ಲ’ ಎಂದು ಟಿಎಸ್‌ಎಸ್‌ ಅಧ್ಯಕ್ಷ ಶಾಂತಾರಾಮ ಹೆಗಡೆ ಹೇಳಿದರು. 

ನಬಾರ್ಡ್‌ ಸಂಸ್ಥೆಯು ಎಟಿಎಂ ನವೀ­ಕರಣಕ್ಕೆ ₨ 6.78 ಲಕ್ಷ, ಸ್ಮಾರ್ಟ್‌ ಕಾರ್ಡ್‌ ಮತ್ತು ಎಟಿಎಂ ಕಾರ್ಡ್‌ ವಿತರಣೆಗೆ ₨ 6.50 ಲಕ್ಷ ನೆರವು ನೀಡಿದೆ ಎಂದು ಹೇಳಿದರು. ನಬಾರ್ಡ್‌ ಜಿಲ್ಲಾ ಪ್ರಬಂಧಕ ಯೋಗೀಶ, ಟಿಎಸ್‌ಎಸ್‌ ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ, ನಿರ್ದೇಶಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT