ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್‌ ಮಾಯೆಯ ‘ಲಾಗಿನ್‌’

Last Updated 9 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

ನಿಮ್ಮಿಷ್ಟದ ನಿರ್ದೇಶಕನ ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುವ ಹೊಚ್ಚ ಸಿನಿಮಾ ನೋಡಲು ಥಿಯೇಟರ್‌ನಲ್ಲಿ ಕುಳಿತಿದ್ದೀರಿ. ಮೊಬೈಲ್ ಫೋನ್ ಚಾಲೂ ಇದ್ದರೆ ತೊಂದರೆ ತಪ್ಪಿದ್ದಲ್ಲ ಎಂದು ಅದನ್ನು ಆಫ್ ಮಾಡಿ ಜೇಬಿಗಿಳಿಸಿದ್ದೀರಿ. ಸಿನಿಮಾ ಶುರುವಾಗಿ ಐದಾರು ನಿಮಿಷಗಳು ಕಳೆಯುವ ಹೊತ್ತಿಗೆ ಫೋನ್ ಕಂಪಿಸಿದಂತಾಗುತ್ತದೆ. ನೀವು ಅದನ್ನು ಹೊರ ತೆಗೆದು ಆಫ್ ಆಗಿರುವುದನ್ನು ಖಚಿತ ಪಡಿಸಿಕೊಂಡು ಮತ್ತೆ ಕಿಸೆಯೊಳಕ್ಕೆ ಇಟ್ಟುಕೊಳ್ಳುತ್ತೀರಿ. ಅರ್ಧ ಗಂಟೆ ಕಳೆದು ಮತ್ತೆ ಅದೇ ಅನುಭವ ಆದರೆ...?

ಸ್ಕೂಟರ್‌ನಲ್ಲೋ ಬೈಕ್‌ನಲ್ಲೋ ಹೋಗುತ್ತಿರುವಾಗ ಪ್ಯಾಂಟಿನ ಕಿಸೆಯೊಳಗಿರುವ ಫೋನ್ ಕಿರುಗುಟ್ಟಿದಂತೆ ಆಗಿ ಬೈಕ್ ನಿಲ್ಲಿಸಿ ಫೋನ್ ತೆಗೆದು ನೋಡಿದರೆ ಅದು ತೆಪ್ಪಗೆ ಮಲಗಿರುವುದು ನಿಮ್ಮ ಅನುಭವಕ್ಕೆ ಬಂದಿದೆಯೇ? ಬಸ್ಸಿನೊಳಗೆ ಕುಳಿತಿರುವಾಗ ಬ್ಯಾಗಿನೊಳಗಿರುವ ಫೋನ್ ಕಿರುಗುಟ್ಟಿದಂತಾಗಿ ತೆಗೆದು ನೋಡಿದರೂ ಯಾವುದೇ ಕರೆ ಅಥವಾ ಮೆಸೇಜ್ ಬಂದಿರದೇ ಇರುವುದು ನಿಮ್ಮ ಗಮನಕ್ಕೆ ಬಂದಿದೆಯೇ?

ನಿತ್ಯವೂ ಇಂಥ ಅನುಭವಗಳು ಅನೇಕರಿಗೆ ಆಗಿರುತ್ತವೆ. ಕೆಲವೇ ಕೆಲವರಷ್ಟೇ ಇದೇಕೆ ಹೀಗಾಯಿತು ಎಂದು ತಲೆ ಕೆಡಿಸಿಕೊಂಡಿರುತ್ತಾರೆ. ಈ ಎಲ್ಲಾ ಅನುಭವಗಳ ಹಿಂದೆಯೂ ಫೋನಿನ ತಂತ್ರಜ್ಞಾನದ ತಪ್ಪೇನೂ ಇಲ್ಲ. ಆಫ್ ಮಾಡಿಟ್ಟ ಫೋನ್ ತಾನೇ ತಾನಾಗಿ ಆನ್ ಆಗಿರುವುದಿಲ್ಲ. ಫ್ಲೈಟ್ ಮೋಡ್‌ನಲ್ಲಿರುವ ಫೋನ್ ಆಕ್ಟಿವ್ ಮೋಡ್‌ಗೂ ಬಂದಿರುವುದಿಲ್ಲ. ಹಾಗಿದ್ದರೆ ಕಿಸೆಯೊಳಗೆ, ಬ್ಯಾಗಿನೊಳಗೆ, ಟೇಬಲ್ ಮೇಲೆ ಫೋನ್ ಕಿರುಗುಟ್ಟಂತೆ ಆಗುವುದೇಕೆ....?

ಸರಳವಾಗಿ ಹೇಳುವುದಾದರೆ ಇದೊಂದು ಭ್ರಮೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಇದು ನಮ್ಮನ್ನು ಬಾಧಿಸುತ್ತಿರುವ ಮೊಬೈಲ್ ಫೋನ್ ಗೀಳಿನ ಲಕ್ಷಣ. ಇಲ್ಲಿ ಮೊಬೈಲ್ ಫೋನ್ ಎಂಬುದು ಆನುಷಂಗಿಕ ಮಾತ್ರ. ಇದು ಕೇವಲ ಫೋನಿಗೆ ಸಂಬಂಧಿಸಿದ ಗೀಳಲ್ಲ. ಆ ಫೋನಿನಲ್ಲಿ ನಾವು ಬಳಸುತ್ತಿರುವ ಸಾಮಾಜಿಕ ಮಾಧ್ಯಮಗಳ ಗೀಳು.

ಫೇಸ್‌ಬುಕ್‌ನಲ್ಲಿ ನಮ್ಮ ಸ್ಟೇಟಸ್‌ಗೆ ಎಷ್ಟು ಲೈಕ್ ಬಂದಿರಬಹುದು ಎಂಬ ಕುತೂಹಲದಿಂದ ಆರಂಭಿಸಿ ವ್ಹಾಟ್ಸ್ ಆ್ಯಪ್ ಗ್ರೂಪಿನಲ್ಲಿ ಹಾಕಿದ ಮೆಸೇಜಿಗೆ ಬಂದಿರಬಹುದಾದ ಪ್ರತಿಕ್ರಿಯೆಯ ಕುರಿತ ಆಸಕ್ತಿ, ಉಳಿದವರು ಏನು ಮಾಡುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ ತೆವಲು ಇತ್ಯಾದಿಗಳೆಲ್ಲಾ ಸೇರಿ ಫೋನ್ ಆಗಾಗ ಕಿರುಗುಟ್ಟುವಂತೆ ಭಾಸವಾಗುತ್ತಿರುತ್ತದೆ. ಫೋನಿನ ತೊಂದರೆಯೇ ಬೇಡವೆಂದು ಅದನ್ನು ಆಫ್ ಮಾಡಿಟ್ಟಾಗಲೂ ಅದನ್ನು ಎತ್ತಿ ನೋಡುವುದಕ್ಕೆ ನಮ್ಮನ್ನು ಪ್ರೇರೇಪಿಸುವುದಕ್ಕೆ ಸುಪ್ತ ಮನಸ್ಸು ಮಾಡುವ ಸಂಚು ಫೋನ್ ಕಿರುಗುಟ್ಟಂತೆ ಅನ್ನಿಸುವುದಕ್ಕೆ ಮುಖ್ಯ ಕಾರಣ.

ನಮ್ಮ ಫೋನುಗಳನ್ನು ನಾವೆಷ್ಟು ಹಚ್ಚಿಕೊಂಡಿದ್ದೇವೆ ಎಂಬುದರ ಪರಿಕಲ್ಪನೆಯೇ ನಮಗಿಲ್ಲ. ಕಳೆದ ವರ್ಷ ಪ್ರಕಟವಾದ ಸಮೀಕ್ಷೆಯೊಂದು ಇದಕ್ಕೊಂದು ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿದೆ. ಬಿಟುಎಕ್ಸ್ ಕೇರ್ ಸಂಸ್ಥೆ ನಡೆಸಿದ ವಿಶ್ವವ್ಯಾಪಿ ಸಮೀಕ್ಷೆಯಲ್ಲಿ ನಿಮ್ಮ ಸ್ಮಾರ್ಟ್ ಫೋನ್‌ನಿಂದ ದೂರವಿರುವುದಕ್ಕೆ ನಿಮಗೇನು ಕೊಡಬೇಕು ಎಂಬ ಪ್ರಶ್ನೆಯೊಂದನ್ನು ಕೇಳಲಾಗಿತ್ತು. ಅಮೆರಿಕನ್ನರಂತೂ ತಮ್ಮ ಜೀವದ ಗೆಳೆಯರನ್ನೂ ಫೋನ್‌ಗಾಗಿ ಬಿಟ್ಟು ಕೊಡಲು ಸಿದ್ಧರಿದ್ದರು.

ದಿನಕ್ಕೆ ನೂರು ಡಾಲರುಗಳು ಅಂದರೆ ಸುಮಾರು 6000 ರೂಪಾಯಿಗಳನ್ನು ಕೊಟ್ಟರೂ ಮೊಬೈಲ್ ಫೋನ್ ಬಿಟ್ಟುಕೊಡಲು ಭಾರತೀಯರು ಸಿದ್ಧರಿರಲಿಲ್ಲವಂತೆ. ಕೊನೆಗೆ ಒಂದು ಕಾರು ಕೊಟ್ಟರೆ ಮೊಬೈಲ್ ಫೋನ್‌ನಿಂದ ದೂರವಿರುತ್ತೇನೆಂದು ಭಾರತೀಯರು ಹೇಳಿದರು ಎಂದು ಸಮೀಕ್ಷೆಯ ಫಲಿತಾಂಶ ಹೇಳುತ್ತಿದೆ. ಹದಿನೆಂಟರಿಂದ ಮೂವತ್ತೈದರ ಪ್ರಾಯದ ಶೇಕಡಾ 98ರಷ್ಟು ಮಂದಿಯೂ ರಾತ್ರಿ ಮಲಗುವಾಗ ಫೋನ್ ಅನ್ನು ಬಳಿಯಲ್ಲೇ ಇಟ್ಟುಕೊಂಡು ಮಲಗುತ್ತಾರೆ ಎಂಬುದನ್ನೂ ಕ್ಯಾಸ್ಪರಸ್ಕಿ ನಡೆಸಿದ ಸಮೀಕ್ಷೆ ಬಹಿರಂಗ ಪಡಿಸಿತ್ತು.

ಹತ್ತಾರು ಕಂಪೆನಿಗಳ ಉತ್ಪನ್ನಗಳನ್ನು ಸೂಕ್ಷ್ಮವಾಗಿ ಗಮನಿಸಿ, ಕಿಸೆಯ ಶಕ್ತಿಗೆ ಅನುಗುಣವಾಗಿ ಖರೀದಿಸಿದ ಫೋನ್ ಒಂದರ ಜೊತೆಗೆ ಜನರಿಗೆ ಸ್ವಲ್ಪ ಹೆಚ್ಚೇ ಎನಿಸುವಷ್ಟು ಅಕ್ಕರೆ ಇದ್ದರೆ ಅದರಲ್ಲಿ ತಪ್ಪೇನು ಎಂಬ ಪ್ರಶ್ನೆಯೂ ನಿಮ್ಮ ಮನಸ್ಸಿಗೆ ಬಂದಿರಬಹುದು. ಸ್ಮಾರ್ಟ್‌ಫೋನ್‌ಗಳು ಅಗ್ಗವಾಗಿವೆ ಎಂದು ಹೇಳುವ ಹೊತ್ತಿಗೇ ಬರೇ ಅಗ್ಗದ ಸ್ಮಾರ್ಟ್‌ಫೋನ್‌ನಿಂದ ಯಾರೂ ತೃಪ್ತರಲ್ಲ ಎಂಬ ಅಂಶವನ್ನೂ ಗಮನಿಸಲೇಬೇಕಾಗುತ್ತದೆ. ಹೊಸ ಹೊಸ ಕಿರುತಂತ್ರಾಂಶಗಳು ಬೇಡುವ ತಾಂತ್ರಿಕ ಸಂಪನ್ಮೂಲವನ್ನು ಅನುಲಕ್ಷಿಸಿಯೇ ಫೋನ್ ಖರೀದಿಸಿರುವವರು ಅದನ್ನು ಜತನದಿಂದ ಜೇಬಿನಲ್ಲಿ ಇಟ್ಟುಕೊಳ್ಳದೇ ಹೋದರೆ ಹೇಗೆ? ಈ ಪ್ರಶ್ನೆಯೇನೋ ತರ್ಕ ಬದ್ಧವಾಗಿದೆ. ಆದರೆ ಸ್ಮಾರ್ಟ್ ಫೋನ್ ಜನರ ಆರೋಗ್ಯದ ಮೇಲೆ ಬೀರುತ್ತಿರುವ ಪರಿಣಾಮದ ಪಟ್ಟಿಯನ್ನು ನೋಡಿದರೆ ಫೋನು ಫೋನಷ್ಟೇ ಅಲ್ಲ ಎಂಬುದು ತಿಳಿಯುತ್ತದೆ.

ಫೋಮೋ ಸಿಂಡ್ರೋಮ್
ಫೋಮೋ ಎಂದರೆ ‘ಫಿಯರ್ ಆಫ್ ಮಿಸ್ಸಿಂಗ್ ಔಟ್’ ಎಂಬುದರ ಸಂಕ್ಷಿಪ್ತ ರೂಪ. ಮೊಬೈಲ್ ಫೋನಿಗೆ ಅತಿಯಾಗಿ ಅಂಟಿಕೊಂಡ ಎಲ್ಲರಲ್ಲೂ ಕಾಣಿಸುವ ಸಮಸ್ಯೆ ಇದು. ಉದಾಹರಣೆಗೆ ನಾಲ್ಕೈದು ಮಂದಿ ಗೆಳೆಯರು ಕುಳಿತು ಮಾತನಾಡುತ್ತಿದ್ದೀರಿ ಎಂದುಕೊಳ್ಳಿ. ಗೆಳೆಯನೊಬ್ಬ ಹೇಳುತ್ತಿರುವ ವಿಚಾರವನ್ನು ಗಂಭೀರವಾಗಿ ಕೇಳುತ್ತಿರುವಾಗಲೇ ಜೇಬಿನಿಂದ ಮೊಬೈಲ್ ಫೋನ್ ತೆಗೆದು ನೋಡಿ ಅಲ್ಲೇನೋ ಟೈಪಿಸಿ ಯಾರಿಗೋ ಕಳುಹಿಸಿ ಮತ್ತೆ ‘ಅದೇನೋ ಹೇಳುತ್ತಿದ್ದೆಯಲ್ಲಾ...?’ ಎಂಬ ಪ್ರಶ್ನೆಯನ್ನು ಕೇಳುವವರನ್ನು ನಾವೆಲ್ಲಾ ಗಮನಿಸಿರುತ್ತೇವೆ. ಅಷ್ಟೇಕೆ ಕೆಲವೊಮ್ಮೆ ನಾವೇ ಮಾಡಿರುತ್ತೇವೆ. ಈ ವರ್ತನೆ ಮಿತಿ ಮೀರಿದರೆ ಅದಕ್ಕೆ ಫೋಮೋ ಸಿಂಡ್ರೋಮ್ ಎನ್ನುತ್ತಾರೆ.

ಎದುರು ಕುಳಿತಿರುವ ಗೆಳೆಯರ ಮಾತನ್ನು ಕೇಳಿಸಿಕೊಳ್ಳದೆ ಆನ್‌ಲೈನ್‌ನಲ್ಲಿ ನಡೆಯುತ್ತಿರುವ ಗೆಳೆಯರ ಸಂಭಾಷಣೆಯಿಂದ ದೂರವಾಗಿಬಿಡುತ್ತೇನೆ ಎಂಬ ಭಯದಲ್ಲಿ ನರಳುವವರಿವರು. ಇದೊಂದು ವಿಚಿತ್ರ ಸಮಸ್ಯೆ. ಸಾಮಾಜಿಕ ಸಂಪರ್ಕದಿಂದ ದೂರವಾಗಿ ಬಿಡುತ್ತಿದ್ದೇವೆ ಎಂಬ ಭಯದಲ್ಲಿ ಇವರು ಹೆಚ್ಚು ಹೆಚ್ಚು ತಮ್ಮ ಮೊಬೈಲ್ ಫೋನಿನ ಸಾಮಾಜಿಕ ಜಾಲತಾಣದ ಆ್ಯಪ್‌ಗಳನ್ನು ಬಳಸುತ್ತಿರುತ್ತಾರೆ. ವಿಚಿತ್ರ ಎಂದರೆ ಇದೇ ವೇಳೆ ಅವರೆದುರೇ ಇರುವ ಗೆಳೆಯರು ಮತ್ತು ಮನೆಯವರನ್ನು ಮರೆಯುತ್ತಿರುತ್ತಾರೆ.

ನಿದ್ರಾ ಹೀನತೆ
ರಾತ್ರಿ ನಿದ್ರಿಸುವುದು ಎಂಬುದು ಕೇವಲ ದೇಹಕ್ಕೆ ವಿಶ್ರಾಂತಿ ಕೊಡುವ ವಿಚಾರವಷ್ಟೇ ಅಲ್ಲ. ದೇಹವೆಂಬ ಹಾರ್ಡ್‌ವೇರು ಮತ್ತು ಅದನ್ನು ನಡೆಸುವ ಮನಸ್ಸೆಂಬ ಸಾಫ್ಟ್‌ವೇರ್‌ಗಳು ತಮ್ಮನ್ನು ತಾವು ಸರ್ವೀಸ್ ಮಾಡಿಕೊಳ್ಳುವ ಕ್ರಿಯೆ ನಡೆಯುವುದು ನಿದ್ರೆಯ ಹೊತ್ತಿನಲ್ಲಿ. ರಾತ್ರಿ ನಿದ್ರೆ ಬಿಟ್ಟು ಫೋನ್‌ನಲ್ಲಿ ಚಾಟ್ ಮಾಡುವುದು ಅಥವಾ ಫೇಸ್‌ಬುಕ್ ಚೆಕ್ ಮಾಡುವುದರಿಂದ ನಿದ್ರೆ ಹಾರಿಹೋಗುತ್ತದೆ. ಇದು ರಾತ್ರಿ ನಮ್ಮ ದೇಹದಲ್ಲಿ ಉತ್ಪತ್ತಿ ಆಗಬೇಕಾದ ಮೆಲೋಟೊನಿನ್ ಎಂಬ ಹಾರ್ಮೋನ್‌ನ ಉತ್ಪಾದನೆಗೇ ತಡೆಯೊಡ್ಡುತ್ತದೆ. ಅರ್ಥಾತ್ ನಮ್ಮನ್ನು ನಿದ್ರಾಹೀನತೆಗೆ ತಳ್ಳುತ್ತದೆ.

ನಮ್ಮ ಪಕ್ಕದಲ್ಲಿಯೇ ಪವಡಿಸುವ ಫೋನು ರಾತ್ರಿಯಿಡೀ ಸುಮ್ಮನಿರುವುದಿಲ್ಲ. ಅದರೊಳಗಿರುವ ನೂರಾರು ಆ್ಯಪ್‌ಗಳಲ್ಲಿ ಯಾವುದಾದರೊಂದು ನೋಟಿಫಿಕೇಶನ್ ಸ್ವೀಕರಿಸುತ್ತಿರುತ್ತದೆ. ಇನ್ನಾವುದೋ ಕಾಲ ವಲಯದಲ್ಲಿರುವ ಯಾರೋ ಕಳುಹಿಸುವ ಮೆಸೇಜು, ಇ–ಮೇಲುಗಳ ನೋಟಿಫಿಕೇಶನ್‌ಗಳು ಆಗಾಗ ಬರುತ್ತಲೇ ಇರುತ್ತವೆ. ಈ ಎಲ್ಲಾ ಸಂದರ್ಭಗಳಲ್ಲಿಯೂ ಫೋನು ಸದ್ದು ಮಾಡುತ್ತದೆ ಇಲ್ಲವೇ ಕಂಪಿಸುತ್ತದೆ. ಆಗೆಲ್ಲಾ ಎದ್ದು ಅದೇನೆಂದು ನೋಡಿ ಮತ್ತೆ ನಿದ್ರಿಸಲು ನಡೆಸುವ ಪ್ರಯತ್ನ ನಮಗೆ ಅಗತ್ಯವಿರುವ ಗಾಢ ನಿದ್ರೆಯನ್ನು ಹಾಳು ಮಾಡಿರುತ್ತದೆ.

ಡಿಜಿಟಲ್ ಅಮ್ನೇಸಿಯಾ
ಸ್ಮಾರ್ಟ್ ಫೋನುಗಳು ಹೆಚ್ಚು ವ್ಯಾಪಕವಾದ ಮೇಲೆ ಕಾಣಿಸಿಕೊಂಡಿರುವ ಹೊಸ ಬಗೆಯ ಮರೆಗುಳಿತನವಿದು. ಮೊಬೈಲ್ ಫೋನುಗಳೇ ಇಲ್ಲದ ಕಾಲದಲ್ಲಿ ದೂರವಾಣಿ ಸಂಖ್ಯೆಗಳನ್ನು ಸಾಮಾನ್ಯವಾಗಿ ಬರೆದಿಟ್ಟುಕೊಳ್ಳುತ್ತಿದ್ದರು. ಹೆಚ್ಚು ಶ್ರೀಮಂತರಾದರೆ ‘ಪಿಡಿಎ’ ಎಂದು ಕರೆಯಲಾಗುತ್ತಿದ್ದ ಡಿಜಿಟಲ್ ಪರ್ಸನಲ್ ಅಸಿಸ್ಟೆಂಟ್‌ಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದರು.

ಈ ಎಲ್ಲಾ ಪ್ರಕ್ರಿಯೆಯಲ್ಲಿಯೂ ಅಗತ್ಯದ ದೂರವಾಣಿ ಸಂಖ್ಯೆಗಳು ನೆನಪಿನಲ್ಲಿಯೇ ಉಳಿದಿರುತ್ತಿದ್ದವು. ಹತ್ತಿರದ ಸಂಬಂಧಿಗಳ ದೂರವಾಣಿ ಸಂಖ್ಯೆ, ಮಕ್ಕಳ ಶಾಲೆಯ ದೂರವಾಣಿ ಸಂಖ್ಯೆ, ಕಚೇರಿ ದೂರವಾಣಿ ಸಂಖ್ಯೆಗಳೆಲ್ಲಾ ಆಗ ಎಲ್ಲರ ಬೆರಳ ತುದಿಯಲ್ಲೇ ಇರುತ್ತಿದ್ದವು. ಸ್ಮಾರ್ಟ್ ಫೋನ್‌ಗಳು ಬಂದ ನಂತರ ಸ್ಥಿತಿ ಸಂಪೂರ್ಣವಾಗಿ ಬದಲಾಗಿ ಹೋಗಿದೆ. ಈಗ ಯಾರಲ್ಲಾದರೂ ನಿಮ್ಮ ನಂಬರ್ ಹೇಳಿ ಅಂದರೆ ‘ನಿಮ್ಮ ನಂಬರ್ ಹೇಳಿ ಮಿಸ್ ಕಾಲ್ ಕೊಡುತ್ತೀನಿ’ ಎಂಬ ಉತ್ತರ ಕೇಳಿಬರುತ್ತದೆ.

ಮಕ್ಕಳ ಶಾಲೆಯ ನಂಬರ್, ಹೆಂಡತಿಯ ನಂಬರ್ ಕೂಡಾ ನೆನಪಿಟ್ಟುಕೊಳ್ಳದವರು ಈಗ ಕಾಣ ಸಿಗುತ್ತಾರೆ. ಅಷ್ಟೇ ಅಲ್ಲ ಇವರನ್ನು ಕಂಡು ಯಾರೂ ಆಶ್ಚರ್ಯಪಡುವುದೂ ಇಲ್ಲ. ಈಗ ಎಲ್ಲಾ ನಂಬರುಗಳೂ ಸ್ಮಾರ್ಟ್ ಫೋನ್‌ನ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿ ಸುರಕ್ಷಿತ. ಯಾರ ಸಂಖ್ಯೆಯೂ ಯಾರಿಗೂ ಗೊತ್ತಿರುವುದಿಲ್ಲ. ಈಗಂತೂ ಸ್ವಯಂ ಚಾಲಿತ ಬ್ಯಾಕ್ ಅಪ್ ವ್ಯವಸ್ಥೆಯೂ ಇರುವುದರಿಂದ ಫೋನ್ ಕಳೆದುಕೊಂಡರೂ ಭಯ ಪಡಬೇಕಾಗಿಲ್ಲ.

ಈ ಸವಲತ್ತುಗಳ ಮಧ್ಯೆ ಕಳೆದು ಹೋದದ್ದು ನಮ್ಮ ನೆನಪಿಟ್ಟುಕೊಳ್ಳುವ ಸಾಮರ್ಥ್ಯ. ಎರಡಂಕೆಯ ಸಂಖ್ಯೆಗಳನ್ನು ಕೂಡಿಸುವುದಕ್ಕೂ ಫೋನ್‌ನಲ್ಲಿರುವ ಕ್ಯಾಲ್ಕುಲೇಟರ್ ಬಳಸುವುದು ಈ ಮರೆಗುಳಿತನದ ಮತ್ತೊಂದು ಲಕ್ಷಣ. ಇದು ಕೇವಲ ಸೋಮಾರಿತನವಷ್ಟೇ ಅಲ್ಲ. ನಮಗೇನು ತಿಳಿದಿದೆ, ನಮಗೇನು ಸಾಧ್ಯ ಎಂಬುದನ್ನು ನಾವೇ ಮರೆಯುವ ಅವಸ್ಥೆ. ನಾವು ಮಾಡಬೇಕಾಗಿರುವುದಕ್ಕೆ ತಂತ್ರಜ್ಞಾನವನ್ನು ನಂಬುವ ಸ್ಥಿತಿ.

ಉದ್ವೇಗ
ಹಿಂದೆಂದೂ ನಮ್ಮನ್ನು ಕಾಡದೇ ಇದ್ದ ಉದ್ವಿಗ್ನತೆ ಇತ್ತೀಚೆಗೆ ನಮ್ಮನ್ನು ಕಾಡುತ್ತಿದೆ. ಇದಕ್ಕೆ ಮುಖ್ಯ ಕಾರಣ ನಮ್ಮ ಸಂವಹನದ ಮಾದರಿಯಲ್ಲಿ ಆಗಿರುವ ಬದಲಾವಣೆ. ಹಿಂದೆ ಯಾರಾದರೂ ನಮ್ಮನ್ನು ಟೀಕಿಸಬೇಕಿದ್ದರೆ ಎದುರೆದುರು ಆ ಕೆಲಸ ಮಾಡಬೇಕಿತ್ತು. ಇಲ್ಲವಾದರೆ ನಮಗೆ ತಲುಪುವಂತೆ ಒಂದು ಪತ್ರ ಬರೆಯಬೇಕಿತ್ತು. ಅದಕ್ಕೆ ನಾವೊಂದು ಉತ್ತರ ಬರೆಯುವುದಕ್ಕೆ ನಮಗೂ ಒಂದಷ್ಟು ಸಮಯ ಬೇಕಿತ್ತು. ಈ ಅವಧಿಯಲ್ಲಿ ನಮ್ಮ ಮನಸ್ಸು ಪ್ರಶಾಂತವಾಗಿ ಆಲೋಚಿಸಿ ಉದ್ವಿಗ್ನತೆಯನ್ನು ಕಳೆದುಕೊಂಡು ಟೀಕೆಗೆ ಪ್ರಬುದ್ಧ ಉತ್ತರವೊಂದನ್ನು ಕಂಡುಕೊಳ್ಳುತ್ತಿತ್ತು.

ಈಗಿನ ಸ್ಥಿತಿ ಹಾಗಲ್ಲ. ಸಿಟ್ಟು ಬಂದರೆ ನಾವೊಂದು ಮೆಸೇಜ್ ಒಗೆಯುತ್ತೇವೆ. ಆ ಕಡೆಯಿಂದಲೂ ಮೆಸೇಜ್ ಒದ್ದುಕೊಂಡೇ ಬರುತ್ತದೆ. ಮನಸ್ಸಿಗೆ ಅನ್ನಿಸಿದ್ದನ್ನೆಲ್ಲವನ್ನೂ ಬರೆಯುವುದಷ್ಟೇ ಅಲ್ಲ ಅದನ್ನು ತಕ್ಷಣ ಕಳುಹಿಸಿಯೂ ಬಿಡುತ್ತೇವೆ. ಯಾರೋ ರಾಜಕಾರಣಿಯ ಯಾವುದೋ ನಿಲುವಿನ ಬಗ್ಗೆ ಚರ್ಚಿಸುತ್ತಾ ಬಹುಕಾಲದ ಗೆಳೆಯರು ಶತ್ರುಗಳಾಗಿಬಿಡುವುದು ಸಾಮಾಜಿಕ ಜಾಲತಾಣಗಳಲ್ಲಿ ತೀರಾ ಸಾಮಾನ್ಯ. ಇದು ಕೇವಲ ಅಲ್ಲಿಗೇ ಮುಗಿದು ಹೋಗುವ ವಿಚಾರವಲ್ಲ. ಇದು ಮತ್ತೂ ಮುಂದುವರೆದು ನಮ್ಮ ದೈನಂದಿನ ಬದುಕಿನ ಮೇಲೂ ಪರಿಣಾಮ ಬೀರುತ್ತದೆ. ಕಚೇರಿಯ ಸಮಸ್ಯೆಗಳನ್ನು ಮನೆಗೆ ಒಯ್ದಂತೆ ಸೈಬರ್ ಸಮಸ್ಯೆಯನ್ನು ನಾವು ನಿಜ ಬದುಕಿಗೆ ಎಳೆದುಕೊಂಡು ತರುತ್ತಿರುತ್ತೇವೆ.

ಇಷ್ಟೆಲ್ಲಾ ಸಮಸ್ಯೆಗಳಿವೆ ಎಂಬ ಕಾರಣಕ್ಕೆ ಫೋನ್ ಬಳಸುವುದನ್ನು ಬಿಡಲು ಸಾಧ್ಯವೇ? ಅದು ಪ್ರಾಯೋಗಿಕವೇ? ಖಂಡಿತವಾಗಿಯೂ ಅಲ್ಲ. ಅತಿಯಾದರೆ ಅಮೃತವೂ ವಿಷ ಎಂಬುದು ನೆನಪಿಟ್ಟುಕೊಂಡರೆ ಸಾಕಾಗುತ್ತದೆ ಅಥವಾ ಈ ಸಮಸ್ಯೆಗೆ ಮತ್ತೊಂದು ತರ್ಕದ ಮೂಲಕವೂ ಉತ್ತರ ಕೊಡಬಹುದು. ತಂತ್ರಜ್ಞಾನದ ಚಕ್ರ ತಿರುಗುತ್ತಾ ಸಾಗಿದಂತೆ ಈ ಸಮಸ್ಯೆಗಳಿಗೆ ತಾನಾ ತಾನಾಗಿ ಪರಿಹಾರಗಳೂ ಇರಬಹುದು. ಈ ಚಕ್ರ ಎಷ್ಟು ಬೇಗ ತಿರುಗುತ್ತದೆ ಎಂಬುದಷ್ಟೇ ಸದ್ಯದ ಪ್ರಶ್ನೆ.
*
ನೀವು ಅತಿಯಾಗಿ ಫೋನ್ ಬಳಸುತ್ತಿದ್ದೀರಿ ಎಂದು ನಿಮಗನ್ನಿಸುತ್ತಿದ್ದರೆ ಅದನ್ನು ನಿವಾರಿಸಿಕೊಳ್ಳುವುದಕ್ಕೆ ಕೆಲವು ಸುಲಭದ ತಂತ್ರಗಳು ಇಲ್ಲಿವೆ.
1. ದಿನದ ನಿರ್ದಿಷ್ಟ ಅವಧಿಯಲ್ಲಿ ಫೋನ್ ಆಫ್ ಮಾಡಿ ಇಟ್ಟುಕೊಳ್ಳಿ.
2. ಬಹಳ ಇಷ್ಟಪಡುವ ಆ್ಯಪ್‌ಗಳನ್ನೆಲ್ಲಾ ಅನ್ ಇನ್‌ಸ್ಟಾಲ್ ಮಾಡಿ.
3. ನಂಬರುಗಳನ್ನು ನೆನಪಿಟ್ಟುಕೊಂಡು ಡಯಲ್ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ.
4. ಫೋನ್ ಬಳಸಲು ಅನುಮತಿ ಇಲ್ಲದೇ ಇರುವ ಸ್ಥಳಗಳಲ್ಲಿ ಹೆಚ್ಚು ಕಾಲ ಇರುವುದನ್ನು ಅಭ್ಯಾಸ ಮಾಡಿಕೊಳ್ಳಿ.
5. ಹತ್ತು ವರ್ಷಗಳ ಹಿಂದಿನ ತನಕವೂ ಎಲ್ಲರೂ ದೂರವಾಣಿ ಬಳಸುತ್ತಿರಲಿಲ್ಲ ಎಂಬುದನ್ನು ನೆನಪಿಸಿಕೊಳ್ಳಿ.
6. ನೀವು ಫೇಸ್‌ಬುಕ್, ವಾಟ್ಸ್ ಆ್ಯಪ್, ಟ್ವಿಟ್ಟರ್, ಟೆಲಿಗ್ರಾಂ, ಹೈಕ್‌ನಲ್ಲಿ ಇಲ್ಲದ ಮಾತ್ರಕ್ಕೆ ನಿಮಗೆ ತುರ್ತು ಸಂದೇಶಗಳು ತಲುಪುವುದಿಲ್ಲ ಎಂಬ ಭ್ರಮೆ ಬಿಟ್ಟುಬಿಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT