ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಲೆಹಾಲೂಡಿಕೆಗೆ ಸಹಕರಿಸಿ

Last Updated 1 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

‘ನೀವು ಹೇಳೋದು ಒಳ್ಳೆ ಚೆನ್ನಾಗಿದೆ! ಮೊಲೆಹಾಲೂಡಿಸುವವಳು ಹೆಣ್ಣು. ಅದನ್ನು ಕುಡಿಯುವುದು ಅವಳ ಕೂಸು. ಇಲ್ಲಿ ಪುರುಷರ ಪಾತ್ರ ಯಾಕಿರಬೇಕು? ಗಂಡಸಿಗೇಕೆ ಗೌರಿ ದುಃಖ?’ ಎಂದು ಮೂಗು ಮುರಿಯುವವರೂ ಇರಬಹುದೇನೊ?

ಆದರೆ ಇಲ್ಲಿ ಕೇಳಿ. ಉಕ್ಕಿ ಬರುವ ಪ್ರೀತಿಯಿಂದ ಹೆಣ್ಣು ತನ್ನ ಎಳೆಮಗುವನ್ನು ತೋಳುಗಳಲ್ಲಿ ಒರಗಿಸಿಕೊಂಡು ಅದರ ಹೂಬಾಯಿಗೆ ಮೊಲೆತೊಟ್ಟು ಹಚ್ಚಿ ಹಾಲೂಡಿಸಬೇಕಾದರೆ ಅವಳ ಮನಸ್ಸು ಸಮಾಧಾನದಿಂದಿರಬೇಕು. ಅವಳಲ್ಲಿ ಯಾವ ಬಗೆ ಒತ್ತಡವೂ ಮನೆ ಮಾಡಿರಕೂಡದು. ಕೋಪ, ಖಿನ್ನತೆ, ಆತಂಕಗಳಂಥ ನೇತ್ಯಾತ್ಮಕ ಭಾವನೆಗಳು ಅವಳಿಂದ ದೂರವಿರಬೇಕು. ಅವಳು ಶಾಂತಿ, ಸಂತೋಷಗಳಿಂದ ಈ ದಿವ್ಯ ಪೋಷಣೆಯ ಕ್ರಿಯೆ ನಿರ್ವಹಿಸುವಾಗ, ಅವಳ ಮನಸ್ಸು ಒಂದು ಧ್ಯಾನಸ್ಥಿತಿಯಲ್ಲಿರುತ್ತದೆ. ಹಾಗಿದ್ದಾಗ ಮಾತ್ರ ಮೊಲೆಹಾಲುಕ್ಕಿ ಚಪ್ಪರಿಸುತ್ತಿರುವ ಕೂಸಿನ ಹೊಟ್ಟೆ ತುಂಬುತ್ತದೆ, ಅದರ ಮುಂದಿನ ಸಮರ್ಪಕ ಬೆಳವಣಿಗೆಗೆ ಅದು ನಾಂದಿಯೂ ಆಗುತ್ತದೆ.

ಮೊಲೆಹಾಲೂಡಿಸುವ ಹೆಣ್ಣು, ಈ ಮನಃಸ್ಥಿತಿಯಲ್ಲಿರಬೇಕಾದರೆ ಅವಳ ಕುಟುಂಬದಲ್ಲಿ ಸೂಕ್ತ ಪರಿಸರ ಸಿದ್ಧವಾಗಬೇಕು. ಮುಖ್ಯವಾಗಿ ಪತಿಯ ಪ್ರೀತಿ ಸಹಕಾರ, ಬೆಂಬಲಗಳು ಅವಳಲ್ಲಿ ಶಾಂತಿ, ನೆಮ್ಮದಿಗಳನ್ನು ತಂದು, ಅವಳ ಮಿದುಳಿನ ಪಿಟ್ಯುಟರಿ, ಹೈಪೊಥಾಲಮಸ್‌ ಗ್ರಂಥಿಗಳಿಂದ ಸಂಬಂಧಿತ ರಸದೂತಗಳು ಒಸರಿ, ರಕ್ತ ಸೇರಿ, ಮೊಲೆಹಾಲುಡಿಕೆ ಯಶಸ್ವಿಯಾಗಿ ಮುಂದುವರಿಯುತ್ತದೆ. ಹಾಗಾಗಿ ಈ ಪ್ರಕ್ರಿಯೆಯಲ್ಲಿ ಕುಟುಂಬದ ಎಲ್ಲ ಸದಸ್ಯರ ಪಾತ್ರ, ಪ್ರಭಾವಗಳು ಸಾಕಷ್ಟಿರುತ್ತವೆ. ಎಲ್ಲರಿಗೂ ಮೊಲೆಹಾಲೂಡಿಕೆಯ ಬಗ್ಗೆ ಇತ್ಯಾತ್ಮಕ ಧೋರಣೆ ಇರಬೇಕು.

ತಂದೆ–ತಾಯಿ ನಡುವಣ ಸಂಬಂಧ, ತಂದೆ–ಮಗುವಿನ ನಡುವಣ ಸಂಬಂಧ ಇವು ಹೇಗಿವೆ? ಗಂಡ ಹೆಂಡತಿಯರ ಮಧ್ಯೆ ವೈಮನಸ್ಸು, ವೈಷಮ್ಯಗಳಿದ್ದು  ಪ್ರೀತಿಯ ಕೊರತೆ ಇದೆಯೆ? ‘ನಿಕಟ ಸಂಗಾತಿ ಹಿಂಸೆ’ (ಇಂಟಿಮೇಟ್‌ ಪಾರ್ಟ್ನರ್‌ ವೊಯ್ಲೆನ್ಸ್‌) ಯೇನಾದರೂ ಕುಟುಂಬದಲ್ಲಿದ್ದರಂತೂ, ಮೊಲೆಹಾಲೂಡಿಕೆ ಸಮರ್ಪಕವಾಗಿರುವ ಸಾಧ್ಯತೆ ಬಹಳ ಕಡಿಮೆ. ತನ್ನ ಹೆಂಡತಿ ಮೊಲೆಕುಡಿಸುತ್ತಿದ್ದರೆ ಅವಳ ಸೌಂದರ್ಯ ಕುಂದುತ್ತದೆ. ತನ್ನ ಸಾಮಾಜಿಕ ಜೀವನ ಶೈಲಿಗೆ ಪೆಟ್ಟು ಬೀಳುತ್ತದೆ ಎನ್ನುವ ಧೋರಣೆ ಇರುವ ಪುರುಷರು ಮಗುವಿಗೆ ಫಾರ್ಮುಲಾ ಹಾಲನ್ನು ಕುಡಿಸಲು ತುದಿಕಾಲಲ್ಲಿ ನಿಂತಿರುತ್ತಾರೆ!

ಗ್ರಾಮೀಣ ಭಾಗದಲ್ಲಿ ಈಗಲೂ ಮಗು ಹೆಣ್ಣಾಗಿದ್ದರೆ ಬೇಗ ಹಾಲು ಬಿಡಿಸುವುದೂ ಉಂಟು. ಗಂಡು ಮಗುವಿಗೆ ಹೆಚ್ಚು ಕಾಲ ಹಾಲೂಡಿಸುವಂತೆ ಪ್ರೋತ್ಸಾಹಿಸುತ್ತಾರೆ. ಇನ್ನೂ ಕೆಲವು ಕಡೆಗಳಲ್ಲಿ ‘ಬೇಗ ಗರ್ಭ ನಿಲ್ಲಲಿ, ಮುಂದೆ ಗರ್ಭ ನಿಂತು ಗಂಡು ಮಗು ಮೂಡಲಿ’ ಎಂದು ನಿರೀಕ್ಷಿಸುತ್ತಾ, ಆಗ ಹುಟ್ಟಿರುವ ಹೆಣ್ಣುಮಗುವಿಗೆ ಕೆಲವೇ ದಿನಗಳಲ್ಲಿ ಹಾಲು ಬಿಡಿಸುತ್ತಾರೆ. ಈ ಕಾರಣಗಳಿಂದ ಮಗುವಿಗೆ ತಾಯಿಹಾಲಿನ ಪೂರ್ಣ ಪೋಷಣೆ ದೊರಕಬೇಕಾದರೆ ಕುಟುಂಬದಲ್ಲಿನ ಪುರುಷರ ಪಾತ್ರ ಮಹತ್ತರವಾಗಿದೆ. ಇದರಲ್ಲಿ ಅನುಮಾನವಿಲ್ಲ. ಹುಟ್ಟಿದ ಮಗು ಹೆಣ್ಣಾಗಲಿ, ಗಂಡಾಗಲಿ ಅದು ತಂದೆ ತಾಯಿ ಇಬ್ಬರಿಗೂ ಬೇಕಾದ ಮಗುವಾಗಿರಬೇಕು.

ಇನ್ನು, ಹೆಣ್ಣೇನಾದರೂ ಹೊರಗೆ ದುಡಿಯುತ್ತಿದ್ದರೆ ಅವಳಿಗೆ ಮತ್ತಷ್ಟು ಸಮಸ್ಯೆಗಳು ಎದುರಾಗುತ್ತವೆ. ಅವಳು ತನ್ನ ಕುಟುಂಬ ಹಾಗೂ ದುಡಿತದ ಕಾರ್ಯಸ್ಥಾನ ಇವುಗಳ ನಡುವೆ ಸಮತೋಲನವನ್ನು ತರಲು ಹೆಣಗುತ್ತಾಳೆ. ಅನೇಕ ದೇಶಗಳಲ್ಲಿ ದುಡಿಯುವ ಹೆಣ್ಣಿಗೆ ಮೊಲೆಹಾಲೂಡಿಸಲು ಮಗುವನ್ನು ನೋಡಿಕೊಳ್ಳಲು ಎರಡು ವರ್ಷಗಳವರೆಗೂ ರಜೆ ದೊರೆಯುತ್ತದೆ. ಅವಳು ಹಾಗೂ ಮಗುವನ್ನು ನೋಡಿಕೊಳ್ಳಲು ಪತಿಗೂ ಸಾಕಷ್ಟು ರಜೆ ನೀಡುತ್ತಾರೆ! ನಮ್ಮೆಲ್ಲರ ಪರಿಸ್ಥಿತಿ ಮೊದಲಿಗಿಂತ ಸುಧಾರಿಸಿದೆಯಾದರೂ ಬಹಳಷ್ಟು ಕಾಳಜಿಯ ಅಗತ್ಯವಿದೆ. ಸಂಸ್ಥೆಗಳ ಪುರುಷ ಅಧಿಕಾರಿಗಳು ಮೊಲೆಯುಡಿಸುತ್ತಿರುವ ಸ್ತ್ರೀಯರಿಗೆ ಇನ್ನೂ ಹೆಚ್ಚಿನ ಅನುಕೂಲಗಳನ್ನು ನೀಡಬೇಕಾಗಿದೆ.
ಅವಳ ಕೆಲಸದಲ್ಲಿ ನಮ್ಯತೆ (ಫ್ಲೆಕ್ಸಿಬಿಲಿಟಿ) ಇರಬೇಕಾದ ಅಗತ್ಯವಿದೆ.

ಉದಾಹರಣೆಗೆ ಮೊಲೆಹಾಲೂಡಿಸುವ ಹೆಣ್ಣು ಕೆಲಸಕ್ಕೆ ಹಾಜರಾದರೂ; ಅಲ್ಲಿ ಮಗುವಿಗೆ ಹಾಲೂಡಿಸಲು ಸೂಕ್ತ ಸ್ಥಳವೇ ಇರುವುದಿಲ್ಲ. ಅಂಥವರಿಗಾಗಿ ಒಂದು ಪ್ರತ್ಯೇಕವಾದ ಕೋಣೆಯನ್ನು ಕಾದಿರಿಸುವುದು ಆ ಸಂಸ್ಥೆಯ ಅಧಿಕಾರಿಗಳ ಆದ್ಯ ಕರ್ತವ್ಯವಾಗಿರುತ್ತದೆ. ಅಲ್ಲಿ ಆ ಸ್ತ್ರೀಯರಿಗೆ ಸೂಕ್ತ ರಕ್ಷೆಯೂ ಇರಬೇಕು. ಅವರು, ತಮ್ಮ ಕೆಲಸವನ್ನು ನಡುನಡುವೆ ಬಿಟ್ಟು ಹಾಲೂಡಿಸಲು ಹೋಗುವ ಬಗ್ಗೆ ಕೊಂಕು ಮಾತುಗಳನ್ನಾಡಿ, ಅವರಿಗೆ ಕಿರುಕುಳ ನೀಡುವವರೂ ಉಂಟು.

ಆ ಸ್ತ್ರೀಯರನ್ನು ಯಾವುದೋ ನೆಪ ಹೂಡಿ, ಕೆಲಸದಿಂದ ಬಿಡಿಸುವ ಪ್ರಸಂಗಗಳನ್ನು ಕಾಣುತ್ತೇವೆ. ನಮ್ಮ ದೇಶ ನಿಜವಾಗಿಯೂ ಮುಂದುವರಿಯಬೇಕಾದರೆ ಇಂಥ ಸಂದರ್ಭಗಳು ಏಳಲೇಬಾರದು. ಮೊಲೆಹಾಲೂಡಿಸುವ ಹೆಣ್ಣು ಕುಟುಂಬ ಹಾಗೂ ತನ್ನ ಕಾರ್ಯಸ್ಥಾನಗಳ ನಡುವಣ ಸಮತೋಲನವನ್ನು ಕಾಪಾಡಿಕೊಳ್ಳಲು ಎಲ್ಲರೂ ಸಹಕರಿಸಬೇಕಾಗುತ್ತದೆ, ಎಲ್ಲರೂ ಸ್ಪಂದಿಸಬೇಕಾಗುತ್ತದೆ. ಕಾನೂನು ನೆರವಿದೆ ನಿಜ. ಆದರೆ ಜನರ ಮನಃಸ್ಥಿತಿ ಬದಲಾಗುವುದು ಇನ್ನೂ ಹೆಚ್ಚು ಮುಖ್ಯ. ಇದೇ ನಿಯಮ ಎಲ್ಲಾ ಸಾಮಾಜಿಕ ತಾಣಗಳಲ್ಲಿಯೂ ಪಾಲಿಸಬೇಕು. ಹಾಲೂಡಿಸುವವರಿಗೆ ಪ್ರತ್ಯೇಕ ಕೊಠಡಿ ಕಾದಿರಿಸಬೇಕು.

ಆರ್ಥಿಕವಾಗಿ ಮೇಲುಸ್ತರದಲ್ಲಿರುವ ಕುಟುಂಬಗಳಲ್ಲಿ ಪತಿಯು ದುಬಾರಿ ಹಾಲು ಡಬ್ಬಿ ಕೊಂಡುತರುವುದರಲ್ಲಿ ಹೆಮ್ಮೆಪಡುತ್ತಾನೆ. ತನ್ನ ಪ್ರೀತಿಯನ್ನು ತಪ್ಪು ದಾರಿಯಲ್ಲಿ ಪ್ರದರ್ಶಿಸುತ್ತಾನೆ. ‘ಮೊಲೆಹಾಲೂಡಿಸುವವರು ಬಡವರು ಎನ್ನುವ ಧೋರಣೆ ತಿದ್ದಿಕೊಂಡು ಮಗುವಿನ ಸರ್ವತೋಮುಖ ಬೆಳವಣಿಗೆಗೆ ಹಾಗೂ ಅದರ ಉತ್ತಮ ಆರೋಗ್ಯಕ್ಕೆ ತಾಯಿಹಾಲಿಗಿಂತ ಬೇರಿಲ್ಲ ಎಂಬ ಅರಿವನ್ನು ಪಡೆಯಬೇಕಾಗಿದೆ.

ಈ ನಿಟ್ಟಿನಲ್ಲಿ ಹೆಣ್ಣು ಗರ್ಭಿಣಿಯಾಗಿದ್ದಾಗಲೇ ನೀಡುವ ಆಪ್ತ ಸಮಾಲೋಚನೆಗೆ ಪತಿಯೂ ಸೇರಿಕೊಳ್ಳುವುದು ಅಗತ್ಯ. ಇಲ್ಲಿ ತಮ್ಮಲ್ಲಿ ಆಳವಾಗಿ ಹುದುಗಿರುವ ತಪ್ಪಭಿಪ್ರಾಯಗಳನ್ನು ಬದಲಿಸುವ  ಅವಕಾಶ ಅವರಿಗಿರುತ್ತದೆ. ಹಾಲೂಡಿಕೆಯ ಸಮಯದಲ್ಲಿ ಸ್ತನಗಳಲ್ಲಿ ನೋವು, ಬಾವು, ಮೊಲೆತೊಟ್ಟಿನ ಬಿರುಕು,ಗಾಯಗಳು ಇದ್ದಾಗ ಪುರುಷರು ಅವರನ್ನು ಪ್ರಾರಂಭದಲ್ಲಿಯೇ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಿದ್ಧರಾಗಿರಬೇಕು. ಇಲ್ಲಿ ನಿರಾಸಕ್ತಿ ತೋರಿದರೆ ಮುಂದೆ ಅಲ್ಲಿ ಕೀವು ಸೇರಿಕೊಂಡು ಜ್ವರ ಬಂದು ತಾಯಿ, ಮಗು ಇಬ್ಬರೂ ತೊಂದರೆ ಅನುಭವಿಸಬೇಕಾಗುತ್ತದೆ. ಹಾಲುಣ್ಣಿಸುವುದು ಹೆಣ್ಣಿನ ಹೊಣೆ ಮಾತ್ರವಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT