ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಕ್ಷಕ್ಕಾಗಿ ವೃದ್ಧೆಯಿಂದ ಆಮರಣಾಂತ ಉಪವಾಸ

Last Updated 27 ಅಕ್ಟೋಬರ್ 2014, 12:46 IST
ಅಕ್ಷರ ಗಾತ್ರ

ಕಟಕ್‌, ಒಡಿಶಾ (ಪಿಟಿಐ): ಮೋಕ್ಷಕ್ಕಾಗಿ ಜೈನ್ ವೃದ್ಧೆಯೊಬ್ಬರು ಕಳೆದ 50 ದಿನಗಳಿಂದ ‘ಆಮರಣಾಂತ ಉಪವಾಸ’ ನಡೆಸುತ್ತಿದ್ದಾರೆ ಎಂದು ಅವರ ಕುಟುಂಬ ಮೂಲಗಳು ಹೇಳಿವೆ.

ಇಲ್ಲಿನ ಫ್ರೆಂಡ್ಸ್‌ ಕಾಲೋನಿಯ ಭವರ್‌ಲಾಲ್‌ ಸೇಥಿ ಅವರ ಪತ್ನಿ ವ್ಹಿಕಿ ದೇವಿ ಸೇಥಿ ಅವರೇ ಉಪವಾಸ ನಿರತ ವೃದ್ಧ ಮಹಿಳೆ.

ದೇಹವನ್ನು ತೊರೆದು ‘ಮೋಕ್ಷ’ ಸೇರಲು ಜೈನ್ ಸಂಪ್ರದಾಯದ ‘ಸಲ್ಲೇಖನ’ ವ್ರತವನ್ನು ಕೈಗೊಂಡಿರುವ ಸೇಥಿ ಅವರು ಸೆಪ್ಟಂಬರ್ 2 ರಿಂದ ಆಹಾರ ತ್ಯಜಿಸಿದ್ದಾರಂತೆ.

ಇದಕ್ಕಾಗಿ ಧಾರ್ಮಿಕ ಮುಖಂಡರ ಹಾಗೂ ತಮ್ಮ ಕುಟುಂಬದ ಪರವಾನಗಿ ಪಡೆದಿದ್ದಾರೆ ಎಂದು ಮೂಲಗಳು ಹೇಳಿವೆ.

ಇದನ್ನು ಸಾರ್ವಜನಿಕವಾಗಿ ಆಚರಿಸುವುದನ್ನು ಕಾನೂನು ಬಾಹಿರ  ಎಂದು ಘೋಷಿಸುವ ಜತೆಗೆ ಕ್ರಿಮಿನಲ್ ಪ್ರಕರಣ ದಾಖಲಿಸಿ ತನಿಖೆ ನಡೆಸಲು  ಒಡಿಶಾ ಪೊಲೀಸರಿಗೆ ನಿರ್ದೇಶನ ನೀಡುವಂತೆ ಕೋರಿ ‘ನ್ಯಾಯಕ್ಕಾಗಿ ಹೋರಾಟ’ ಎಂಬ ಸಾಮಾಜಿಕ  ಸಂಘಟನೆಯೊಂದು ಒರಿಸ್ಸಾ ಹೈಕೋರ್ಟಿಗೆ ಕಳೆದ ವಾರ ಅರ್ಜಿ ಸಲ್ಲಿಸಿತ್ತು. ಆದರೆ ಈ ಬಗ್ಗೆ ನ್ಯಾಯಾಲಯ ಯಾವುದೇ ನಿರ್ಧಾರ ತಳೆದಿಲ್ಲ.

ಈ ಬಗ್ಗೆ ಪ್ರತಿಕ್ರಿಯಿಸಿರುವ ನ್ಯಾಯಕ್ಕಾಗಿ ಹೋರಾಟ ಸಂಘಟನೆಯ ಕಾರ್ಯದರ್ಶಿ ಶಶಿಕಾಂತ್ ಶರ್ಮಾ, ಈ ಆಚರಣೆಯು ಸಂವಿಧಾನದ 21ನೇ ಕಲಂ ಉಲ್ಲಂಘನೆ ಆಗಿರುವುದರಿಂದ ‘ಅಸಾಂವಿಧಾನಿಕ’ ಹಾಗೂ  ‘ಅಕ್ರಮ’ವಾಗಿದ್ದು, ಐಪಿಸಿ 306 ಹಾಗೂ 309 ಕಲಂಗಳಡಿ ಶಿಕ್ಷಾರ್ಹವಾಗಿದೆ ಎಂದು ತಿಳಿಸಿದ್ದಾರೆ.

ಉಪವಾಸವನ್ನು ತಡೆಯಲು ಸ್ಥಳೀಯ ಪೊಲೀಸರು ಸೇರಿದಂತೆ ನಗರ ಪೊಲೀಸ್ ಉಪ ಆಯುಕ್ತರನ್ನು ಭೇಟಿ ಮಾಡಲಾಗಿದೆಯಾದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದೂ ಶರ್ಮಾ ತಿಳಿಸಿದ್ದಾರೆ.

ಸೇಥಿ ಅವರಿಗೆ ಹಾಸಿಗೆ ಹುಣ್ಣು ಆಗಿದೆ. ಆದರೆ ಅವರು ಚಿಕಿತ್ಸೆಗೆ ನಿರಾಕರಿಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT