ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಅದ್ಧೂರಿ ಸ್ವಾಗತಕ್ಕೆ ಬಿಜೆಪಿ ಸಿದ್ಧತೆ

Last Updated 16 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ತುಮಕೂರಿನಲ್ಲಿ ಸ್ಥಾಪಿ­ಸಲು ಉದ್ದೇಶಿ­ಸಿ­ರುವ ‘ಫುಡ್‌ಪಾರ್ಕ್‌’ಗೆ ಇದೇ 24ರಂದು ನಡೆ­ಯಲಿರುವ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವ­ಹಿ­ಸಲು ರಾಜ್ಯಕ್ಕೆ ಬರುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲು ಬಿಜೆಪಿ ನಿರ್ಧರಿಸಿದೆ.

ಪ್ರಧಾನಿಯಾದ ಬಳಿಕ ರಾಜ್ಯಕ್ಕೆ ಮೊದಲ ಬಾರಿ ಭೇಟಿ ನೀಡುತ್ತಿರುವ ಮೋದಿ ಅವರನ್ನು ಅಭೂ­ತಪೂರ್ವ­ವಾಗಿ ಸ್ವಾಗತಿಸಲು ಬಿಜೆಪಿ ಸಿದ್ಧತೆ ಆರಂಭಿ­ಸಿದ್ದು, ಪಕ್ಷದ ಮುಖಂಡ ಆರ್‌. ಅಶೋಕ ಅವರಿಗೆ ಈ ಕಾರ್ಯಕ್ರಮದ ಸಂಚಾಲಕನ ಹೊಣೆ ಹೊರಿಸ­ಲಾಗಿದೆ. ಇದೇ 23ರ ಸಂಜೆ ಐದು ಗಂಟೆಗೆ ಮೋದಿ ಅವರು ಎಚ್‌ಎಎಲ್‌ ವಿಮಾನ­ನಿಲ್ದಾಣದಲ್ಲಿ ಬಂದಿ­ಳಿ­­ಯಲಿದ್ದು, ಅಲ್ಲಿ ಅವರಿಗೆ ಅಭಿನಂದನೆ ಸಲ್ಲಿಸಲು ಬಿಜೆಪಿ ಕಾರ್ಯಕ್ರಮ ರೂಪಿಸಿದೆ.

ಎಚ್‌ಎಎಲ್‌ನಿಂದ ಪ್ರಧಾನಿ ಅವರು ನೇರವಾಗಿ ಇಸ್ರೊಗೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ಹೇಳಿವೆ.

ಕೇಂದ್ರ ಸಚಿವ ಅನಂತಕುಮಾರ್‌, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ, ಶಾಸಕ ಆರ್‌. ಅಶೋಕ, ಪಕ್ಷದ ಬೆಂಗಳೂರು ಮಹಾನಗರ ಘಟಕದ ಅಧ್ಯಕ್ಷ ಸುಬ್ಬ ನರಸಿಂಹ ಸೇರಿದಂತೆ ಹಲವು ಮುಖಂಡರು ಮಂಗಳವಾರ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ತೆರಳಿ ಅಭಿನಂದನಾ ಕಾರ್ಯ­ಕ್ರಮ ನಡೆಸಲು ಸ್ಥಳ ಪರಿಶೀಲನೆ ನಡೆಸಿದರು.

ಪ್ರತಿ ವಿಧಾನಸಭಾ ಕ್ಷೇತ್ರದಿಂದ 1,000 ಕಾರ್ಯ­ಕರ್ತರು: ಬೆಂಗಳೂರು ಮಹಾ ನಗರ ವ್ಯಾಪ್ತಿಯಲ್ಲಿ ಬರುವ ಪ್ರತಿ ವಿಧಾನಸಭಾ ಕ್ಷೇತ್ರದಿಂದ ಕನಿಷ್ಠ ಒಂದು ಸಾವಿರ ಕಾರ್ಯಕರ್ತರು ಅಭಿನಂದನಾ ಕಾರ್ಯ­ಕ್ರಮ­ದಲ್ಲಿ ಹಾಜರಿರುವಂತೆ ಮಾಡಬೇಕು ಎಂದು ಪಕ್ಷದ ನಾಯಕರು  ಪದಾಧಿ­ಕಾರಿ­ಗಳಿಗೆ ಸೂಚನೆ ನೀಡಿದ್ದಾರೆ.

ಪಕ್ಷದ ಕಚೇರಿಯಲ್ಲಿ ಮಂಗಳವಾರ ನಡೆದ ಬೆಂಗಳೂರು ನಗರ ಕಾರ್ಯ­ಕಾರಿಣಿ ಸಭೆ ನಂತರ ಪದಾಧಿಕಾರಿ­ಗಳನ್ನು ಉದ್ದೇಶಿಸಿ ಮಾತನಾಡಿದ ಆರ್‌. ಅಶೋಕ, ಅನಂತಕುಮಾರ್‌ ಮತ್ತು ಪ್ರಹ್ಲಾದ್‌ ಜೋಶಿ ಅವರು ಮುಖಂಡರಿಗೆ ಈ ಸೂಚನೆ ನೀಡಿದ್ದಾರೆ.

‘ಪ್ರಧಾನಿ ಆದ ನಂತರ ಮೋದಿ ಅವರು ಮೊದಲ ಸಲ ರಾಜ್ಯಕ್ಕೆ ಬರುತ್ತಿ­ದ್ದಾರೆ. ಆ ಸಂದರ್ಭದಲ್ಲಿ ಹಬ್ಬದ ವಾತಾವರಣ ಇರಬೇಕು. ಪಕ್ಷದ ಸಾವಿರಾರು ಕಾರ್ಯಕರ್ತರು, ಮೋದಿ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿ­ಸಲು ವ್ಯವಸ್ಥೆ ಮಾಡಬೇಕು. ಅದಕ್ಕಾಗಿ ಎಲ್ಲರೂ ಶ್ರಮಿಸಬೇಕು’ ಎಂದು ಅಶೋಕ ಅವರು ಹೇಳಿದರು.

ಇದೇ ಧಾಟಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಅನಂತಕುಮಾರ್‌ ಅವರು, ‘ಮನಮೋಹನ್‌ ಸಿಂಗ್‌ ಅವರಿಗೆ 10 ವರ್ಷಗಳಲ್ಲಿ ಸಿಗದ ಅಂತರರಾಷ್ಟ್ರೀಯ ಮನ್ನಣೆ ಮೋದಿ ಅವರಿಗೆ 100 ದಿನಗಳಲ್ಲಿ ಸಿಕ್ಕಿದೆ. ಅವರ ಸ್ವಾಗತಕ್ಕೆ ಕರ್ನಾಟಕದ ಜನ ಉತ್ಸುಕ­ರಾ­ಗಿದ್ದಾರೆ. ಪಕ್ಷವು ಅವರಿಗೆ ಅದ್ಧೂರಿ ಸ್ವಾಗತ ನೀಡಲಿದೆ’ ಎಂದು ಹೇಳಿದರು.

‘ಎಚ್‌ಎಎಲ್‌ನಲ್ಲಿ ಇಳಿದ ತಕ್ಷಣ ಕಾರ್ಯಕರ್ತ­ರನ್ನು ಉದ್ದೇಶಿಸಿ ಸ್ವಲ್ಪ ಹೊತ್ತು ಮಾತನಾಡಲು ಮೋದಿ ಒಪ್ಪಿಕೊಂಡಿದ್ದಾರೆ. ಮರುದಿನ ಅವರು ರಾಜಭವನದಿಂದ ಇಸ್ರೊಗೆ ತೆರಳಲಿದ್ದು, ಈ ಸಂದ­ರ್ಭದಲ್ಲಿ ಮಾರ್ಗದ ಇಕ್ಕೆಲ-­ಗಳಲ್ಲೂ ಅಭಿ­ಮಾನಿ­ಗಳು ನಿಂತು ಪ್ರಧಾನಿಗೆ ಸ್ವಾಗತ ಕೋರಲು ವ್ಯವಸ್ಥೆ ಮಾಡಲು ಚಿಂತಿಸ­ಲಾಗುತ್ತಿದೆ’ ಎಂದರು.

ಬಿಬಿಎಂಪಿ ಚುನಾವಣಾ ಪ್ರಚಾರ ವೇದಿಕೆ
ಮೋದಿ ಅವರನ್ನು ಅಭಿನಂದಿಸುವ ಕಾರ್ಯ­ಕ್ರಮವನ್ನು ಮುಂಬರುವ ಬಿಬಿಎಂಪಿ ಚುನಾವಣೆ ಪ್ರಚಾರಕ್ಕೆ ನಾಂದಿ ಹಾಡುವ ವೇದಿಕೆಯನ್ನಾಗಿ ಬಳಸಿಕೊಳ್ಳಲು ಬಿಜೆಪಿ ನಿರ್ಧರಿಸಿದೆ.

ಆರ್‌.ಅಶೋಕ ಮತ್ತು ಪ್ರಹ್ಲಾದ್‌ ಜೋಶಿ ಅವರು ಮಂಗಳವಾರ ಪಕ್ಷದ ಪದಾಧಿಕಾರಿಗಳಿಗೆ ಈ ಬಗ್ಗೆ ಸ್ಪಷ್ಟ ಸಲಹೆ ನೀಡಿದರು.
‘ಇನ್ನು ಆರೇಳು ತಿಂಗಳಲ್ಲಿ ಬಿಬಿಎಂಪಿ ಚುನಾ­ವಣೆ ನಡೆಯಲಿದೆ. ಮೋದಿ ಅವರು ಚುನಾವಣಾ ಪ್ರಚಾರದ ಉದ್ಘಾಟನೆಗೆ ಬರುತ್ತಿದ್ದಾರೆ ಎಂದು ತಿಳಿದುಕೊಳ್ಳಿ’ ಎಂದು ಅಶೋಕ ಹೇಳಿದರು.

ಪ್ರಹ್ಲಾದ ಜೋಶಿ ಅವರೂ ಇದೇ ಅರ್ಥದಲ್ಲಿ ಮಾತನಾಡಿದರು. ‘ಪ್ರಧಾನಿ ಆದ ನಂತರ ಮೋದಿ ಮೊದಲ ಬಾರಿ ರಾಜ್ಯಕ್ಕೆ ಬರುತ್ತಿದ್ದಾರೆ. ಪಾಲಿಕೆ ಚುನಾವಣೆಯೂ ಹತ್ತಿರದಲ್ಲೇ ಇದೆ. ಚುನಾವಣೆಗೂ ಮುನ್ನ ಮೋದಿ ರಾಜ್ಯಕ್ಕೆ ಬರುತ್ತಾರೋ ಇಲ್ಲವೋ ಗೊತ್ತಿಲ್ಲ. ಹಾಗಾಗಿ ಪಕ್ಷದ ಪರವಾದ ವಾತಾವ­ರಣ ಸೃಷ್ಟಿಸಲು ಈ ಸಂದರ್ಭ­ವನ್ನು ನಾವು ಸಮ­ರ್ಥವಾಗಿ ಬಳಸಿಕೊಳ್ಳ­ಬೇಕು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT