ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಎಂ.ಎ ಫಸ್ಟ್‌ಕ್ಲಾಸ್‌!

Last Updated 1 ಮೇ 2016, 7:43 IST
ಅಕ್ಷರ ಗಾತ್ರ

ಅಹಮದಾಬಾದ್‌: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಜಕೀಯ ವಿಜ್ಞಾನ ವಿಷಯದಲ್ಲಿ ಪ್ರಥಮ ದರ್ಜೆಯೊಂದಿಗೆ ಸ್ನಾತಕೋತ್ತರ ಪದವಿ ಪಡೆದಿದ್ದಾರೆ ಎಂದು ಕೇಂದ್ರ ಮಾಹಿತಿ ಆಯೋಗ ತಿಳಿಸಿದೆ ಎಂದು ‘ಅಹಮದಾಬಾದ್‌ ಮಿರರ್‌’ ಪತ್ರಿಕೆ ವರದಿ ಮಾಡಿದೆ.

ಮೋದಿ ಅವರ ಶೈಕ್ಷಣಿಕ ಅರ್ಹತೆ ಬಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಪದೇ ಪದೇ ಪ್ರಶ್ನೆ ಮಾಡುತ್ತಲೇ ಇದ್ದರು. ಇದೇ ವಿಷಯ ಮೋದಿ ಅವರನ್ನು ಟೀಕಿಸಲು ಕೇಜ್ರಿವಾಲ್‌ ಅವರಿಗೆ ಅಸ್ತ್ರವಾಗಿತ್ತು.

ಕೇಜ್ರಿವಾಲ್‌ ಕೇಳಿದ್ದ ಮಾಹಿತಿಯನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಪರಿಗಣಿಸಿದ್ದ ಕೇಂದ್ರ ಮಾಹಿತಿ ಆಯೋಗದ ಅಧ್ಯಕ್ಷ ಆಚಾರ್ಯಲು ಅವರು, ಮೋದಿ ಅವರ ಶೈಕ್ಷಣಿಕ ಅರ್ಹತೆಯ ಎಲ್ಲಾ ಮಾಹಿತಿಯನ್ನು ಒದಗಿಸುವಂತೆ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ನಿರ್ದೇಶನ ನೀಡಿದ್ದರು.

ಪ್ರಧಾನಮಂತ್ರಿ ಕಾರ್ಯಾಲಯ ಒದಗಿಸಿರುವ ಮಾಹಿತಿಯ ಪ್ರಕಾರ ಮೋದಿ ಅವರು ಗುಜರಾತ್‌ ವಿಶ್ವವಿದ್ಯಾಲಯದ ಬಾಹ್ಯ ವಿದ್ಯಾರ್ಥಿಯಾಗಿ ರಾಜಕೀಯ ಶಾಸ್ತ್ರದಲ್ಲಿ ಎಂ.ಎ ಪದವಿಯನ್ನು ಪ್ರಥಮ ದರ್ಜೆಯೊಂದಿಗೆ ಪೂರ್ಣಗೊಳಿಸಿದ್ದಾರೆ ಎಂದು ಮಿರರ್‌ ವರದಿ ಮಾಡಿದೆ.

ಮೋದಿ ಅವರು 1983ರಲ್ಲಿ ಶೇಕಡ 62.3 ಅಂಕಗಳೊಂದಿಗೆ ಎಂ.ಎ ಪದವಿ ಮುಗಿಸಿದ್ದಾರೆ. ಎರಡು ವರ್ಷಗಳ ಸ್ನಾತಕೋತ್ತರ ಪದವಿಯಲ್ಲಿ ಮೋದಿ ಯುರೋಪಿಯನ್‌ ರಾಜಕೀಯ, ಭಾರತೀಯ ರಾಜಕೀಯ ವಿಶ್ಲೇಷಣೆ ಮತ್ತು ರಾಜಕೀಯ ಮಾನವಶಾಸ್ತ್ರ ವಿಷಯಗಳನ್ನು ಅಭ್ಯಸಿದ್ದರು ಎಂದು ವರದಿಯಾಗಿದೆ.

ಮೋದಿ ಅವರು ಪ್ರಿ– ಸೈನ್ಸ್‌ ಕೋರ್ಸ್‌ ಅನ್ನು ವಿಸ್ನಾಪುರದ ಎಂ.ಎನ್‌. ವಿಜ್ಞಾನ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದರು ಎಂದು ಪ್ರಧಾನಮಂತ್ರಿ ಕಾರ್ಯಾಲಯ ನೀಡಿರುವ ಮಾಹಿತಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಮೋದಿ ಕೋರ್ಸ್‌ ಪೂರ್ಣಗೊಳಿಸಿರುವ ಬಗ್ಗೆ ಯಾವುದೇ ದಾಖಲೆಗಳಿಲ್ಲ ಎನ್ನುತ್ತದೆ ಮಿರರ್‌ ವರದಿ.

ಮೋದಿ ಅವರು ಪ್ರಿ–ಸೈನ್ಸ್‌ ಕೋರ್ಸ್‌ ಮಾಡುವ ಸಮಯದಲ್ಲೇ ಅವರ ರಾಜಕೀಯ ಆಪ್ತರಾದ ಹಾಲಿ ಗುಜರಾತ್‌ ಮುಖ್ಯಮಂತ್ರಿ ಆನಂದಿಬೆನ್‌ ಅವರು ಅದೇ ಕಾಲೇಜಿನಲ್ಲಿ ಎರಡನೇ ವರ್ಷದ ಎಂ.ಎಸ್ಸಿ ಅಭ್ಯಾಸ ಮಾಡುತ್ತಿದ್ದರು. ಅವರಿಬ್ಬರ ದಾಖಲಾತಿ ಸಂಖ್ಯೆಯೂ ಒಂದೇ ಆಗಿತ್ತು. ಅದು ‘71’ ಎಂದು ಮಿರರ್‌ ವರದಿ ಮಾಡಿದೆ.

‘1967ರಲ್ಲಿ ಮೋದಿ ಅವರು ಪ್ರಿ–ಸೈನ್ಸ್‌ ಕೋರ್ಸ್‌ಗೆ ಸೇರಿದ್ದರು. ಅದೇ ವರ್ಷವೇ ಆನಂದಿಬೆನ್‌ ಅವರು ಎಂ.ಎಸ್ಸಿಗೆ ಪ್ರವೇಶ ಪಡೆದಿದ್ದರು. ಮೋದಿ ಅವರ ಪ್ರಿ–ಸೈನ್ಸ್‌ ಕೋರ್ಸ್‌ ತರಗತಿಯ ದಾಖಲಾತಿ ಸಂಖ್ಯೆ 71 ಮತ್ತು ಆನಂದಿಬೆನ್‌ ಅವರ ಎಂಎಸ್ಸಿ ತರಗತಿಯ ದಾಖಲಾತಿ ಸಂಖ್ಯೆಯೂ 71. ಇದು ಕಾಕತಾಳೀಯವಷ್ಟೆ’ ಎಂದು ಎಂ.ಎನ್‌. ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಕೆ.ಎಂ.ಜೋಶಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT