ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಚಿಂತನೆಗೆ ಮೂರ್ತರೂಪ

ಜಂಟಿ ಅಧಿವೇಶನದಲ್ಲಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಭಾಷಣ
Last Updated 10 ಜೂನ್ 2014, 9:11 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮೋದಿ ನೇತೃ­ತ್ವದ ಹೊಸ ಸರ್ಕಾರವು ಭ್ರಷ್ಟಾಚಾರ ರಹಿತ ಅಭಿವೃದ್ಧಿಯ ಮೂಲಕ ದೇಶದ ಪುನಶ್ಚೇತನಕ್ಕೆ ಒತ್ತು ನೀಡಲಿದೆ ಎಂದು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು  ಹೇಳಿದರು.

ಸಂಸತ್ತಿನ ಜಂಟಿ ಅಧಿವೇಶನ ಉದ್ದೇ­ಶಿಸಿ ಸೋಮವಾರ ಭಾಷಣ ಮಾಡಿದ ಅವರು, ‘ಜನರು ದೇಶದ ಏಕತೆ ಮತ್ತು ಆಧು­ನಿಕತೆಗಾಗಿ ಮತ ನೀಡಿದ್ದಾರೆ. ಜನರ ಈ ಆಶೋತ್ತರವನ್ನು ಸರ್ಕಾರ ಈಡೇ­ರಿಸಲಿದೆ. ಈ ಕಾರ್ಯದಲ್ಲಿ ದೇಶದ 125 ಕೋಟಿ ಜನತೆಯೂ ತೊಡ­ಗಿಕೊಳ್ಳಲಿದೆ. ದೇಶದ ಪ್ರಗತಿ ಹಾದಿ­ಯಲ್ಲಿ ಅಲ್ಪಸಂಖ್ಯಾತರೂ ಸಮಾನ ಭಾಗಿಗಳಾಗಿರುತ್ತಾರೆ’ ಎಂದ ರಾಷ್ಟ್ರಪತಿ, ‘ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌’ ಎಂಬ ಸರ್ಕಾರದ ಧ್ಯೇಯ ವಾಕ್ಯವನ್ನು ಉಲ್ಲೇಖಿಸಿದರು.

ರಾಜಕೀಯ ಸ್ಥಿತಿಗತಿ, ದೇಶದ ಆರ್ಥಿಕತೆ, ವಿದೇಶಾಂಗ ನೀತಿ, ಭ್ರಷ್ಟಾಚಾರಕ್ಕೆ ಕಡಿವಾಣ, ಆಂತರಿಕ ಭದ್ರತೆ, ರಾಜ್ಯ– ಕೇಂದ್ರ ಸರ್ಕಾರಗಳ ಸಾಮರಸ್ಯಗಳ ಬಗ್ಗೆ ಭಾಷಣದಲ್ಲಿ ಬೆಳಕು ಚೆಲ್ಲಿದ ಪ್ರಣವ್‌, ‘ಸುಮಾರು 30 ವರ್ಷಗಳ ನಂತರ ದೇಶದಲ್ಲಿ ಒಂದು ಪಕ್ಷಕ್ಕೆ ಸ್ಪಷ್ಟ ಜನಾದೇಶ ನೀಡಿದ  ಚುನಾವಣೆ ಇದಾಗಿದೆ. ಈ ಸಾರಿ ಶೇ 66.4ರಷ್ಟು ಸಾರ್ವಕಾಲಿಕ ದಾಖಲೆಯ ಮತದಾನ ಆಗಿರುವುದು ದೇಶದ ಜನತೆ ಪ್ರಜಾತಂತ್ರ ವ್ಯವಸ್ಥೆ ಮೇಲೆ ಇರಿಸಿರುವ ಬಲವಾದ ನಂಬಿಕೆಯ ದ್ಯೋತಕ’ ಎಂದರು.

‘ಈ ಹಿಂದಿನ ಸಾಲುಗಳಲ್ಲಿ ತ್ರಿಶಂಕು ಸ್ಥಿತಿಯ ಜನಾದೇಶದಿಂದ ಸಮ್ಮಿಶ್ರ ಸರ್ಕಾರಗಳು ರಚನೆಯಾಗಿ ಮೈತ್ರಿಕೂಟ­ದಲ್ಲಿ ಒಂದಲ್ಲಾ ಒಂದು ತಕರಾರು, ವಿವಾದಗಳು ಇರುತ್ತಿದ್ದವು. ಆದರೆ, 2014ರ ಚುನಾವಣೆಯಲ್ಲಿ ಜನತೆ ಸ್ಥಿರ ಸರ್ಕಾರ ಬಯಸಿ ಮತದಾನ ಮಾಡಿ­ದ್ದಾರೆ. ನಾನು ಜನವರಿ 26ರ ಗಣತಂತ್ರ ದಿವಸದ ಭಾಷಣದಲ್ಲೂ ಸ್ಥಿರ ಸರ್ಕಾರದ ಅಗತ್ಯವನ್ನು ಪ್ರಸ್ತಾಪಿಸಿದ್ದೆ’ ಎಂದು ಮುಖರ್ಜಿ ನೆನಪಿಸಿಕೊಂಡರು.

ಬೆಲೆ ಏರಿಕೆಗೆ ಕಡಿವಾಣ: ಹಣದುಬ್ಬರಕ್ಕೆ ಲಗಾಮು, ಬಂಡ­ವಾಳ ಹೂಡಿಕೆ ಆಕ­ರ್ಷಣೆ, ಉದ್ಯೋಗ ಸೃಷ್ಟಿ ಹೆಚ್ಚಳ, ಪ್ರಾದೇಶಿಕ ವಲಯದ ಮತ್ತು ಅಂತರ­ರಾಷ್ಟ್ರೀಯ ಸಮುದಾಯ­ಗಳಲ್ಲಿ ವಿಶ್ವಾಸ ವೃದ್ಧಿ ಇವು ಹೊಸ ಸರ್ಕಾರದ ಆದ್ಯತಾ ವಲಯಗಳಾಗಿವೆ. ಈ ನಿಟ್ಟಿನಲ್ಲಿ ಪಾರದರ್ಶಕ ಮತ್ತು ನ್ಯಾಯೋಚಿತ­ವಾದ ನೀತಿಗಳನ್ನು ಜಾರಿಗೆ ತರಲಿದೆ’ ಎಂದು ತಿಳಿಸಿದರು.

‘ಪ್ರತಿಕೂಲ ಪರಿಣಾಮ ಬೀರದಂತಹ ತರ್ಕ ಬದ್ಧ ಮತ್ತು ಸರಳೀಕೃತ ತೆರಿಗೆಯ ಮೂಲಕ ಪ್ರಗತಿಗೆ ಒತ್ತು ನೀಡಿ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅನುಷ್ಠಾನಕ್ಕೆ ಸರ್ಕಾರ ಮುಂದಾಗಲಿದೆ. ಉದ್ಯೋಗ ಸೃಷ್ಟಿಗೆ ನೆರವಾಗುವಂತಹ ವಿದೇಶಿ ನೇರ ಬಂಡವಾಳ ಹೂಡಿಕೆಯು (ಎಫ್‌ಡಿಎ) ಸೇರಿದಂತೆ ಇನ್ನಿತರ ಹೂಡಿಕೆ­ಗಳಿಗೆ ಉತ್ತೇಜನ ನೀಡುವಂತಹ ನೀತಿಗಳನ್ನು ಸರ್ಕಾರ ರೂಪಿಸಲಿದೆ’ ಎಂದರು.

‘ಕೃಷಿ ಮತ್ತು ಕೃಷಿ ಆಧಾರಿತ ಉತ್ಪನ್ನಗಳ ಪೂರೈಕೆ ಸುಧಾರಿಸು­ವುದು, ಕಾಳಸಂತೆಗೆ ಕಡಿವಾಣ ಹಾಕುವ ಮೂಲಕ ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಸುಧಾರಣೆ ತರಲಾಗುವುದು. ಈ ಸಾರಿ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮುಂಗಾರು ಮಳೆಯಾಗುವ ಸಾಧ್ಯತೆ ಇದೆ ಎಂಬ ವರದಿ ಹಿನ್ನೆಲೆಯಲ್ಲಿ ಸರ್ಕಾರ ಈಗಾಗಲೇ ಅನಿರೀಕ್ಷಿತ ಪರಿಸ್ಥಿತಿಯನ್ನು ನಿಭಾಯಿಸಲು ಯೋಜನೆಯನ್ನು ಸಿದ್ಧ ಮಾಡುತ್ತಿದೆ’ ಎಂದರು.

ಚಿಕ್ಕ ಸರ್ಕಾರ, ಚೊಕ್ಕ ಆಡಳಿತ: ‘ಪ್ರಜಾತಂತ್ರ ವ್ಯವಸ್ಥೆಯ ವಿಶ್ವಾಸಾರ್ಹತೆ ಹೆಚ್ಚಿಸಲು ಸರ್ಕಾರ, ‘‘ಚಿಕ್ಕ ಸರ್ಕಾರ, ಗರಿಷ್ಠ ಮಟ್ಟದ ಚೊಕ್ಕ ಆಡಳಿತ’’ ಎನ್ನುವ ಮಂತ್ರವನ್ನು ಅಳವಡಿಸಿಕೊಂಡಿದೆ. ಸರ್ಕಾರದ ಎಲ್ಲಾ ಕ್ರಿಯೆಗಳು ನಾಗರಿಕತೆಯ ಮೂಲ ಆಶಯಕ್ಕೆ ತಕ್ಕಂತೆಯೇ ಇರುತ್ತದೆ’ ಎಂದರು.

‘ದೇಶದಲ್ಲಿ ಕಾಡುತ್ತಿರುವ ಬಡತನ  ಸರ್ಕಾರದ ಮುಂದಿರುವ ಬಹುದೊಡ್ಡ ಸವಾಲು. ಆದ್ದರಿಂದ ಸರ್ಕಾರ ಬಡತನದ ಪ್ರಮಾಣ ತಗ್ಗಿಸುವುದನ್ನು ಮಾತ್ರ ಗುರಿಯಾಗಿರಿಸಿಕೊಂಡಿಲ್ಲ.  ಬಡತನ ನಿರ್ಮೂಲನೆಯನ್ನೇ ಹೆಗ್ಗುರಿ­ಯಾಗಿರಿಸಿಕೊಂಡಿದೆ. ಹಾಗಾಗಿ ಅಭಿವೃದ್ಧಿಯು ಮೊದಲು ಬಡವರ ಕಲ್ಯಾಣದಿಂದ ಆರಂಭವಾಗಲಿದೆ. ಕಡು ಬಡವರಿಗೆ ಮೊದಲು ಜೀವನಾವಶ್ಯಕ ಸೌಕರ್ಯಗಳನ್ನು ಕಲ್ಪಿಸುವ ಕಾರ್ಯ ತುರ್ತಾಗಿ ನಡೆಯಲಿದೆ’ ಎಂದು ಹೇಳಿದರು.

‘ಪಾರದರ್ಶಕ ಮತ್ತು ದಕ್ಷ ಆಡಳಿತ ನೀಡಲು ಭ್ರಷ್ಟಾಚಾರ ಹೋಗಲಾಡಿ­ಸುವುದು ಮುಖ್ಯ ಕೆಲಸ. ಈ ನಿಟ್ಟಿನಲ್ಲಿ ಲೋಕಪಾಲ ಕಾಯ್ದೆ ಅಡಿಯಲ್ಲಿ ಸರ್ಕಾರ ಹೊಸಕಾನೂನು  ರೂಪಿಸ­ಲಿದೆ’ ಎಂದರು.

ಆರ್ಥಿಕತೆ, ಕೃಷಿ: ‘ಹಳಿತಪ್ಪಿರುವ ದೇಶದ ಅರ್ಥ ವ್ಯವಸ್ಥೆಯನ್ನು ಪ್ರಗತಿಯ ಹಾದಿಗೆ ತರುವುದು ಮತ್ತು ಆಹಾರ ಕ್ಷೇತ್ರದಲ್ಲಿನ ಏರಿಳಿತವನ್ನು ಸರಿದೂಗಿಸುವುದು ಸರ್ಕಾರದ ಮೊದಲ ಆದ್ಯತೆ. ಸತತ ಎರಡು ಸಾಲುಗಳಿಂದ ಶೇ 5ಕ್ಕಿಂತ ಕಡಿಮೆ ಮಟ್ಟದಲ್ಲಿರುವ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ದರವನ್ನು ವೃದ್ಧಿಸು­ವುದು ಮತ್ತು ಪ್ರಗತಿ ಕಾಯ್ದುಕೊಳ್ಳು­ವುದು ಸರ್ಕಾರದ ಪ್ರಮುಖ ಗುರಿ­ಯಾಗಿದೆ’ ಎಂದು ಹಣಕಾಸು ಸಚಿವರೂ ಆಗಿದ್ದ ರಾಷ್ಟ್ರಪತಿ ಮುಖರ್ಜಿ ಹೇಳಿದರು.

ವಿದೇಶಾಂಗ ನೀತಿ: ‘ನೆರೆಹೊರೆಯ ರಾಷ್ಟ್ರಗಳೊಂದಿಗೆ ಶಾಂತಿ, ಸ್ಥಿರತೆ ಮತ್ತು ಆರ್ಥಿಕವಾಗಿ ಸಹಕಾರಿಯಾಗುವಂತಹ ನೀತಿಯನ್ನು ಅಳವಡಿಸಿಕೊಳ್ಳುವುದು ಸರ್ಕಾದ ಆಶಯ. ಇದೇ ವೇಳೆಗೆ ದ್ವಿಪಕ್ಷೀಯ ಸಂಬಂಧಕ್ಕೆ ತೊಡಕಾಗುವಂತಹ ವಿಷಯಗಳನ್ನು ಯಾವುದೇ ಹಿಂಜರಿಕೆ ಇಲ್ಲದೆ ಪ್ರಸ್ತಾಪಿಸಲಿದೆ’ ಎಂದು ರಾಷ್ಟ್ರಪತಿ ಹೇಳಿದರು.

‘ಪ್ರಾದೇಶಿಕ ವಲಯದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಭದ್ರತಾ ವಿಷಯ­ವನ್ನು ಸೂಕ್ಷ್ಮವಾಗಿ ಅವಲೋಕಿ­ಸಲಾಗುವುದು. ಗಡಿಯಾಚೆಯಿಂದ ಎದುರಾಗುವ ಭಯೋತ್ಪಾದನೆಯನ್ನು ಹತ್ತಿಕ್ಕಲಾಗುವುದು’ ಎಂದರು.

ಆಂತರಿಕ ಭದ್ರತೆಗೆ ಆದ್ಯತೆ: ‘ದೇಶದ ಆಂತರಿಕ ಭದ್ರತೆಗೆ ಸವಾ­ಲೊಡ್ಡಿರುವ ಉಗ್ರರ ವಿಧ್ವಂಸಕ ಕೃತ್ಯ, ನಕ್ಸಲ್‌ ಹಿಂಸಾಚಾರ, ಗಲಭೆಗಳನ್ನು ಹತ್ತಿಕ್ಕಲು ಸರ್ಕಾರ ಗರಿಷ್ಠ ಮಟ್ಟದಲ್ಲಿ ಕ್ರಮವಹಿಸಲಿದೆ. ಈ ನಿಟ್ಟಿನಲ್ಲಿ ಪೊಲೀಸ್‌ ವ್ಯವಸ್ಥೆಯನ್ನು ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಸುಧಾರಿಸಲಾ­ಗುವುದು’ ಎಂದು ಪ್ರಣವ್ ಹೇಳಿದರು.

‘ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಂದು ತಂಡವಾಗಿ (ಟೀಂ ಇಂಡಿಯಾ) ಕಾರ್ಯ ನಿರ್ವಹಿಸುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಪರಸ್ಪರ ಸಹಕಾರವನ್ನು ಬಲಗೊಳಿಸಲು ರಾಷ್ಟ್ರೀಯ ಅಭಿವೃದ್ಧಿ ಮಂಡಲಿ ಮತ್ತು ಅಂತರ್‌ ರಾಜ್ಯ ಮಂಡಳಿಗಳನ್ನು ಪುನರ್ಬಲವರ್ಧನೆಗೊಳಿಸಲಾಗುವುದು’ ಎಂದರು.

‘ಕೋಮು ಗಲಭೆ ಮತ್ತು ಮಾವೊ­ವಾದಿಗಳಿಂದ ಎದುರಾಗುವ ವಿಧ್ವಂಸಕ ಕೃತ್ಯಗಳನ್ನು ನಿಗ್ರಹಿಸಲು ರಾಜ್ಯ ಸರ್ಕಾರಗಳ ಜೊತೆ ಕೇಂದ್ರ ಚರ್ಚಿಸಿ ರಾಷ್ಟ್ರೀಯ ಮಟ್ಟದ ಯೋಜನೆ ರೂಪಿಸಲಿದೆ’ ಎಂದು ಹೇಳಿದರು.ಸುಮಾರು 50 ನಿಮಿಷಗಳ ಕಾಲದ ಭಾಷಣದಲ್ಲಿ ಪ್ರಣವ್‌ ಮುಖರ್ಜಿ ಅವರು ಕೆಲವೊಮ್ಮೆ ಮೇಜನ್ನು ಕುಟ್ಟಿದರು. ‘ನೀವು (ಹೊಸ ಸದಸ್ಯರು) ಸಂಸತ್‌ ಭವನದಲ್ಲಿರುವುದಕ್ಕ ಜನತೆ ಕಾರಣ ಎನ್ನುವುದನ್ನು ಮರೆಯಬೇಡಿ. ಜನರ ಸೇವೆಯೇ ನಿಮ್ಮ ಪರಮ ಗುರಿಯಾಗಬೇಕು’ ಎಂದು ಕಿವಿಮಾತು ಹೇಳಿದರು.

ಉಭಯ ಸದನಗಳ ಸದಸ್ಯರು, ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸಂಪುಟದ ಸಹೋದ್ಯೋಗಿಗಳು, ಮೇಲ್ಮನೆ ಸದಸ್ಯರಾದ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತಿತರರು ರಾಷ್ಟ್ರಪತಿಗಳ ಭಾಷಣ ಆಲಿಸಿದರು.
ಹೊಸ ಸರ್ಕಾರ ರಚನೆ ಬಳಿಕ ರಾಷ್ಟ್ರಪತಿ ಅವರು ಸಂಸತ್ತಿನ ಎರಡೂ ಸದನಗಳ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡುವುದು ಸಂವಿಧಾನದ ಅನುಸಾರ ಕಡ್ಡಾಯ.

ಚತುಷ್ಕೋನ ರೈಲು ಯೋಜನೆ
‘ದೆಹಲಿ, ಮುಂಬೈ, ಕೋಲ್ಕತ್ತ ಹಾಗೂ ಚೆನ್ನೈ ನಗರಗಳನ್ನು ಸಂಪರ್ಕಿಸುವ ಅತಿ ವೇಗದ ಚತುಷ್ಕೋನ ರೈಲು ಯೋಜನೆ  ಆರಂಭಿಸಲಾಗುವುದು’ ಎಂದು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಹೇಳಿದರು.

ಮಗಳನ್ನು ಓದಿಸಿ...
ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯವನ್ನು ಯಾವುದೇ ಕಾರ­ಣಕ್ಕೂ ಸಹಿಸುವುದಿಲ್ಲ ಎನ್ನು­ವುದು ಮೋದಿ ಸರ್ಕಾರದ ದೃಢ ಸಂಕಲ್ಪ.
ಸಂಸತ್‌ ಹಾಗೂ ವಿಧಾನಸಭೆ­ಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸ­ಲಾತಿ ನೀಡುವುದಕ್ಕೂ ಹೊಸ ಸರ್ಕಾರ ನಿರ್ಧರಿಸಿದೆ. ಅಲ್ಲದೇ ಸಮಾ­ಜದ ಹಾಗೂ ದೇಶದ ಅಭಿವೃದ್ಧಿ­ಯಲ್ಲಿ ಮಹಿಳೆ­ಯರ ಪಾತ್ರವನ್ನು ಗುರುತಿ­ಸಲಿದೆ.  ‘ಮಗಳನ್ನು ಉಳಿಸಿ, ಮಗಳನ್ನು ಓದಿಸಿ’  (ಬೇಟಿ ಬಚಾವೊ ಬೇಟಿ ಪಢಾವೊ)   ಜನಾಂದೋಲನ ಹಮ್ಮಿ­ಕೊಳ್ಳ­ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT