ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ತಡೆಗೆ ತೃತೀಯ ರಂಗ ಸರ್ಕಾರ: ಕಾಂಗ್ರೆಸ್‌

Last Updated 25 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಮೋದಿ ಅವರು ಪ್ರಧಾನಿಯಾಗುವುದನ್ನು ತಪ್ಪಿಸುವ ಸಲುವಾಗಿ ಕಾಂಗ್ರೆಸ್‌ ಪಕ್ಷ ತೃತೀಯ ರಂಗದೊಂದಿಗೆ  ಕೈ ಜೋಡಿಸಿ ಸರ್ಕಾರ ರಚಿಸುವ ಸಾಧ್ಯತೆಯಿದೆ ಎಂದು ಮಹಾ­ರಾಷ್ಟ್ರ ಮುಖ್ಯಮಂತ್ರಿ ಪೃಥ್ವಿ­ರಾಜ್‌ ಚವಾಣ್‌ ಸುಳಿವು ನೀಡಿದ್ದಾರೆ.

ಚುನಾವಣಾ ನಂತರ ನಡೆಯಬಹು­ದಾದ  ರಾಜಕೀಯ ಬೆಳವಣಿಗೆಗಳ ಬಗ್ಗೆ ಪತ್ರಿಕಾಗೋಷ್ಠಿ­ಯಲ್ಲಿ ಶುಕ್ರವಾರ ಮುನ್ಸೂ­ಚನೆ ನೀಡಿದ ಅವರು, ‘ನನಗೆ ನರೇಂದ್ರ ಮೋದಿಯವರು ಪ್ರಧಾನಿ­ಯಾಗು­­ತ್ತಾರೆ ಎಂದು ಅನಿಸುತ್ತಿಲ್ಲ. ಒಂದು ವೇಳೆ  ಕಾಂಗ್ರೆಸ್‌ಗಿಂತ  ಬಿಜೆಪಿ ಅಧಿಕ ಸ್ಥಾನಗಳನ್ನು ಪಡೆದರೂ, ಮೋದಿ ಅವರಿಗೆ ಪ್ರಾದೇಶಿಕ ಪಕ್ಷಗಳ ಬೆಂಬಲ ದೊರಕುವುದಿಲ್ಲ’ ಎಂದರು.

‘ಕಾಂಗ್ರೆಸ್‌ ತೃತೀಯ ರಂಗ­ದೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿ­ಸುವ ಸಾಧ್ಯತೆ­ಯಿದೆ’ ಎಂದರು. ಗುರುವಾರ ರಾಜ್ಯದಲ್ಲಿ ನಡೆದ  ಅಂತಿಮ ಹಂತದ ಚುನಾ­ವಣೆಯಲ್ಲಿ ಮತ­ದಾನ ಪ್ರಮಾಣ ಹೆಚ್ಚಳ ಆಗಿರುವ ಬಗ್ಗೆ ಉತ್ತ­ರಿಸಿದ ಅವರು, ‘ಮೊದಲ ಬಾರಿ ಮತ­ದಾರ­ರಿಗೆ ಅಧಿಕಾರದಲ್ಲಿ­ರುವ ಪಕ್ಷದ ವಿರುದ್ಧ ಮತದಾನ ಮಾಡುವ ಪ್ರವೃತ್ತಿ ಇರು­ತ್ತದೆ.  ಆದರೆ ಎಲ್ಲಿಯೂ ನನಗೆ ಮೋದಿ ಅಲೆ ಕಾಣು­ತ್ತಿಲ್ಲ’ ಎಂದು ಅವರು ಹೇಳಿದರು.

ಪ್ರಾದೇಶಿಕ ಪಕ್ಷಗಳು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ಹಿರಿಯ ಕಾಂಗ್ರೆಸ್‌ ಮುಖಂಡರೊಬ್ಬರ ವಿವಾದಿತ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಚವಾಣ್‌, ‘ಪ್ರಾದೇಶಿಕ ಪಕ್ಷಗಳು ಲೋಕ­ಸಭೆ ಚುನಾವಣೆಗೆ ಸ್ಪರ್ಧಿಸುವು­ದ­ರಿಂದ ರಾಜಕೀಯ ಅಸ್ಥಿರತೆ ಉಂಟಾ­ಗು­­ತ್ತದೆ. ಇದರ ಬಗ್ಗೆ ಚರ್ಚೆ ನಡೆಸುವ ಅಗ­ತ್ಯ­ವಿದೆ. ನಾನು ಅಥವಾ ಕಾಂಗ್ರೆಸ್‌ ಪಕ್ಷ ಇದರ ಬಗ್ಗೆ ನಿರ್ಧರಿಸಲು ಸಾಧ್ಯ­ವಿಲ್ಲ. ಎಲ್ಲಾ ರಾಜಕೀಯ ಪಕ್ಷಗಳ ಸಲಹೆ ಪಡೆದು ಸಂವಿಧಾನಬದ್ಧವಾಗಿ ಈ ಬಗ್ಗೆ ಒಮ್ಮತದ ತಿದ್ದುಪಡಿ ಮಾಡ­ಬೇಕು. ಪಕ್ಷಗಳ ಬೆಂಬಲವಿಲ್ಲದೇ ಏನೂ ಮಾಡಲು ಸಾಧ್ಯವಿಲ್ಲ’ ಎಂದರು. ಚವಾಣ್‌ ನಿಲುವಿಗೆ  ಎನ್‌ಸಿಪಿ ವಿರೋಧ ವ್ಯಕ್ತಪಡಿಸಿದೆ.

ಕಾಂಗ್ರೆಸ್‌ ಕೊನೆಯ ಯತ್ನ: ಬಿಜೆಪಿ ವ್ಯಂಗ್ಯ
ನವದೆಹಲಿ (ಪಿಟಿಐ): ಹೆಚ್ಚುವರಿ ಚುನಾವಣಾ ಪ್ರಣಾಳಿಕೆ  ಬಿಡುಗಡೆ­ಗೊಳಿಸಿ ಹಿಂದುಳಿದ ಮುಸ್ಲಿಮರಿಗೆ ಮೀಸ­ಲಾತಿ ಕಲ್ಪಿಸುವುದಾಗಿ ಹೇಳಿ­ರುವ ಕಾಂಗ್ರೆಸ್‌ ವಿರುದ್ಧ ಹರಿಹಾ­ಯ್ದಿ­ರುವ ಬಿಜೆಪಿ, ಕೆಲ ಮತಗಳನ್ನು ಸೆಳೆಯಲು ಕಾಂಗ್ರೆಸ್‌ ನಡೆಸಿದ ಕೊನೆಯ ಹತಾಶ ಪ್ರಯತ್ನ  ಇದು ಎಂದು ಶುಕ್ರವಾರ ವ್ಯಂಗ್ಯವಾಡಿದೆ.

‘ಸೋಲುವ ಪಕ್ಷದ ಪೂರಕ ಪ್ರಣಾಳಿಕೆಯನ್ನು ಜನರು ನಂಬುವು­ದಿಲ್ಲ’ ಎಂದು ಬಿಜೆಪಿ ವಕ್ತಾರ ಪ್ರಕಾಶ್‌ ಜಾವಡೇಕರ್‌ ಇಲ್ಲಿ ಸುದ್ದಿ­ಗಾರರಿಗೆ ತಿಳಿಸಿದರು. ಅಲ್ಪಸಂಖ್ಯಾತರ ಸಬಲೀಕರಣಕ್ಕಾಗಿ ಹಿಂದುಳಿದ ಮುಸ್ಲಿಮರಿಗೆ ಶೇ 4.5ರಷ್ಟು ಮೀಸಲು ಕಲ್ಪಿಸಲಾಗುವುದು ಎಂದು ಕಾಂಗ್ರೆಸ್‌ ತನ್ನ ಅಂತರ್ಜಾಲ ದಲ್ಲಿ ಭರವಸೆ ನೀಡಿರುವುದಕ್ಕೆ ಬಿಜೆಪಿಯಿಂದ ಈ ಪ್ರತಿಕ್ರಿಯೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT