ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಮಧ್ಯಸ್ಥಿಕೆಗೆ ಸದಸ್ಯರ ಆಗ್ರಹ

ಮಹಾದಾಯಿ; ರಾಜ್ಯಸಭೆಯಲ್ಲಿ ಚರ್ಚೆ
Last Updated 29 ಜುಲೈ 2016, 19:30 IST
ಅಕ್ಷರ ಗಾತ್ರ

ನವದೆಹಲಿ: ಮಹಾದಾಯಿ ನದಿಯ 7 ಟಿಎಂಸಿ ಅಡಿ ನೀರಿಗಾಗಿ ಕರ್ನಾಟಕ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಮಂಡಳಿಯು ತಿರಸ್ಕರಿಸಿರುವುದರಿಂದ ಉಂಟಾಗಿರುವ ಬೆಳವಣಿಗೆಯು ರಾಜ್ಯಸಭೆಯಲ್ಲಿ ಶುಕ್ರವಾರ ಚರ್ಚೆಗೆ ಒಳಗಾಯಿತು.

ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್‌ ಸದಸ್ಯ ಕೆ.ರೆಹಮಾನ್‌ಖಾನ್‌,  ಉತ್ತರ ಕರ್ನಾಟಕ ಭಾಗದ ಜನರ ಕುಡಿಯುವ ನೀರಿನ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸಿ ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಬೇಕು ಎಂದು ಕೋರಿದರು.

ಉತ್ತರ ಕರ್ನಾಟಕದಾದ್ಯಂತ ನೀರಿಗಾಗಿ ಆಗ್ರಹಿಸಿ ಜನತೆ ಉಗ್ರ ಸ್ವರೂಪದ ಹೋರಾಟ ನಡೆಸುತ್ತಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕೇಂದ್ರ ಸರ್ಕಾರ ಈ ಕುರಿತು ಗಮನ ಹರಿಸುವ ಮೂಲಕ ಸಮಸ್ಯೆ ಪರಿಹರಿಸಬೇಕು ಎಂದು ಅವರು ಮನವಿ ಮಾಡಿದರು.

ಮಹಾದಾಯಿ ನದಿ ನೀರು ಹಂಚಿಕೆಗೆ ಸಂಬಂಧಿಸಿದ ವಿವಾದವು ನ್ಯಾಯಮಂಡಳಿಯಲ್ಲಿ ವಿಚಾರಣೆ ಹಂತದಲ್ಲಿದೆ ಎಂಬುದು ಸ್ಪಷ್ಟ. ಆದರೆ, ಈ ಹಿಂದೆ ಇಂಥದ್ದೇ ಸ್ಥಿತಿ ಎದುರಾದಾಗ ಪ್ರಧಾನಿಯವರು ಕಾನೂನು ಚೌಕಟ್ಟಿನ ಹೊರಗೆ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಿದ ಉದಾಹರಣೆಗಳಿವೆ. ಈಗಲೂ ಮೋದಿ ಅವರು ಅದೇ ಮಾರ್ಗವನ್ನು ಅನುಸರಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

ಉತ್ತರ ಕರ್ನಾಟಕದ ಜನತೆ ಕುಡಿಯಲು ಮತ್ತು ನೀರಾವರಿ ಉದ್ದೇಶಕ್ಕೆ ನೀರನ್ನು ಕೇಳುತ್ತಿರುವುದು ನ್ಯಾಯಸಮ್ಮತವಾಗಿದೆ. ಕೂಡಲೇ ಕೇಂದ್ರ ಸರ್ಕಾರ ಮಧ್ಯಸ್ಥಿಕೆವಹಿಸಿ ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದು ಸದಸ್ಯ ಕೆ.ಸಿ. ರಾಮಮೂರ್ತಿ ದನಿಗೂಡಿಸಿದರು.

ಈ ಕುರಿತು ಪ್ರಧಾನಿಯವರ ಗಮನ ಸೆಳೆಯುವುದಾಗಿ ಸಂಸದೀಯ ವ್ಯವಹಾರಗಳ ಖಾತೆಯ ರಾಜ್ಯ ಸಚಿವ ಮುಖ್ಯಾರ್‌ ಅಬ್ಬಾಸ್‌ ನಖ್ವಿ ಭರವಸೆ ನೀಡಿದರು.

ಸಚಿವ ಸಂಪುಟದಲ್ಲಿ ಭಿನ್ನಾಭಿಪ್ರಾಯ 
ಬೆಂಗಳೂರು:
ಮಹಾದಾಯಿ ನ್ಯಾಯಮಂಡಳಿ ಮುಂದೆ ಮಧ್ಯಂತರ ಅರ್ಜಿ ಸಲ್ಲಿಸುವ ವಿಷಯದಲ್ಲಿ ರಾಜ್ಯದ ಸಚಿವರ ನಡುವೆಯೇ ಭಿನ್ನಾಭಿಪ್ರಾಯಗಳಿತ್ತು ಎಂಬ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.

ಮಧ್ಯಂತರ ಅರ್ಜಿ ಸಲ್ಲಿಸುವ ವಿಷಯ ಸಚಿವ ಸಂಪುಟದ ಮುಂದೆ ಚರ್ಚೆಗೆ ಬಂದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಮಧ್ಯಂತರ ಪರಿಹಾರ ಕೇಳುವ ಅಗತ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಆದರೆ, ಹಿರಿಯ ಸಚಿವ ಎಚ್‌.ಕೆ. ಪಾಟೀಲರೂ ಸೇರಿದಂತೆ ಮುಂಬೈ– ಕರ್ನಾಟಕ ಭಾಗದ ಕೆಲವು ಸಚಿವರು ಅರ್ಜಿ ಹಾಕಬೇಕೆಂಬ ನಿಲುವು ತಳೆದರು ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಅಲ್ಲದೆ, ‘ಮಹಾದಾಯಿ ವಿವಾದವನ್ನು ರಾಜಕೀಯಕ್ಕೆ ಬಳಸಿಕೊಂಡ ವಿರೋಧ ಪಕ್ಷಗಳು ಮಧ್ಯಂತರ ಅರ್ಜಿ ಸಲ್ಲಿಸಬೇಕು ಎಂದು ಒತ್ತಡ ಹೇರಿದ್ದರಿಂದ ನ್ಯಾ. ಜೆ.ಎಂ. ಪಾಂಚಾಲ ಅವರ ನೇತೃತ್ವದ ನ್ಯಾಯಮಂಡಳಿ ಮುಂದೆ ಅರ್ಜಿ ಸಲ್ಲಿಸಲಾಯಿತು’ ಎಂದೂ ಮೂಲಗಳು ಹೇಳಿವೆ.
ನ್ಯಾಯಮಂಡಳಿ ಇನ್ನೇನು ಅಂತಿಮ ವರದಿ ಕೊಡಲಿರುವುದರಿಂದ ಮಧ್ಯಂತರ ಅರ್ಜಿ ಸಲ್ಲಿಸುವುದು ಬೇಡ’ ಎಂದು ಹಿರಿಯ ವಕೀಲ ಎಫ್‌.ಎಸ್‌. ನಾರಿಮನ್‌ ಸಲಹೆ ಮಾಡಿದ್ದರು. ಆದರೆ, ಎರಡು ಸಲ ಮುಖ್ಯಮಂತ್ರಿಗಳು, ಮೂರು ಸಲ ಜಲ ಸಂಪನ್ಮೂಲ ಸಚಿವರು ನಾರಿಮನ್‌ ಅವರನ್ನು ಭೇಟಿ ಮಾಡಿ ಮನವೊಲಿಸಿದರು.

ಮುಂಬೈ– ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಕೆಲವು ಸಚಿವರು, ವಿರೋಧ ಪಕ್ಷಗಳು ಸ್ವಲ್ಪ ಸಂಯಮ ತೋರಿದ್ದರೆ ರಾಜ್ಯ ಸರ್ಕಾರ ಮುಜುಗರದಿಂದ ಪಾರಾಗಬಹುದಿತ್ತು ಎಂದೂ ಮೂಲಗಳು ಅಭಿಪ್ರಾಯಪಟ್ಟಿವೆ.

ಆದರೆ, ಕಾವೇರಿ ವಿವಾದದಲ್ಲಿ ನ್ಯಾಯಮಂಡಳಿ ನೀಡಿರುವ ಮಧ್ಯಂತರ ಆದೇಶವನ್ನು ಮಹಾದಾಯಿ ವಿವಾದಕ್ಕೆ ಸಮರ್ಥನೆಯಾಗಿ ನೀಡಲಾಯಿತು.

ಕಾವೇರಿ ನೀರು ಬಳಕೆಗೆ ಸಂಬಂಧಿಸಿದಂತೆ 1924ರಲ್ಲಿ ಆಗಿದ್ದ ಒಪ್ಪಂದದ ಅವಧಿ ಮುಗಿದಿದ್ದರಿಂದ ತಮಿಳುನಾಡು ಮಧ್ಯಂತರ ಅರ್ಜಿ ಸಲ್ಲಿಸಿತ್ತು ಎಂದು ಮನವರಿಕೆ ಮಾಡಿದರೂ ಪ್ರಯೋಜನವಾಗಲಿಲ್ಲ ಎಂದೂ ಮೂಲಗಳು ವಿವರಿಸಿವೆ.

ಗೊಂದಲ: ರಾಜ್ಯದ ಮಧ್ಯಂತರ ಅರ್ಜಿಯನ್ನು ನ್ಯಾಯಮಂಡಳಿ ತಿರಸ್ಕರಿಸಿರುವುದರಿಂದ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬೇಕೇ ಅಥವಾ ಬೇಡವೇ ಎಂಬ ಗೊಂದಲಕ್ಕೆ ಸರ್ಕಾರ ಸಿಕ್ಕಿಕೊಂಡಿದೆ.

ಸಚಿವ ಎಂ.ಬಿ. ಪಾಟೀಲ ಶುಕ್ರವಾರ ಸಂಜೆ ದೆಹಲಿಗೆ ತೆರಳಿದ್ದು, ರಾಜ್ಯದ ಕೆಲವು ವಕೀಲರು ಹಾಗೂ ತಜ್ಞರ ಜತೆ ಸಮಾಲೋಚನೆ ನಡೆಸಲಿದ್ದಾರೆ.
ಜಲ ಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ, ಕೃಷ್ಣಾ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಎಂಜಿನಿಯರ್‌ ಅವರೂ ಸಚಿವರ ಜತೆ ತೆರಳಿದ್ದಾರೆ.

ಈ ಸಭೆಯಲ್ಲಿ ಬರುವ ಅಭಿಪ್ರಾಯ ನೋಡಿಕೊಂಡು ಹಿರಿಯ ವಕೀಲ ನಾರಿಮನ್‌ ಅವರನ್ನು ಪಾಟೀಲರು ಭೇಟಿ ಮಾಡಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.

ನ್ಯಾಯಮಂಡಳಿ ವಿರುದ್ಧ ರಾಜ್ಯ ಸರ್ಕಾರ ಸಲ್ಲಿಸುವ ಅರ್ಜಿ ಅಕಸ್ಮಾತ್‌ ಸುಪ್ರೀಂ ಕೋರ್ಟ್‌ನಲ್ಲೂ ಬಿದ್ದು ಹೋದರೆ ಅದು ಮೂಲ ಅರ್ಜಿ ಮೇಲೂ ಪರಿಣಾಮ ಬೀರಬಹುದು ಎಂಬ ಆತಂಕದಿಂದ ಎಚ್ಚರಿಕೆ ಹೆಜ್ಜೆ ಇಡಲು ಸರ್ಕಾರ ನಿರ್ಧರಿಸಿದೆ.

ದೌರ್ಜನ್ಯ ನಿಲ್ಲಿಸಲು 48 ಗಂಟೆ ಗಡುವು: ಕುಮಾರಸಾŅಮಿ
ಮೈಸೂರು:
ಮಹಾದಾಯಿ ನದಿ ನೀರು ಹೋರಾಟಕ್ಕೆ ಸಂಬಂಧಿಸಿದಂತೆ ಅಮಾಯಕರ ಮೇಲಿನ ಪೊಲೀಸ್ ದೌರ್ಜನ್ಯ ನಿಲ್ಲಬೇಕು. ಬಂಧಿಸಿರುವ ಮುಗ್ಧರನ್ನು 48 ಗಂಟೆಯಲ್ಲಿ ಬಿಡುಗಡೆ ಮಾಡದಿದ್ದರೆ ಹೋರಾಟಕ್ಕೆ ಇಳಿಯುವುದಾಗಿ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಇಲ್ಲಿ ಶುಕ್ರವಾರ ಎಚ್ಚರಿಸಿದರು.

ಮುಷ್ಕರ ಹೂಡಿದ್ದಾಗ ಜನರು ಬೆಂಬಲ ನೀಡಿದ್ದರು ಎಂಬುದನ್ನು ಪೊಲೀಸರು ಮರೆಯಬಾರದು. ಇದೀಗ ಜನರಿಗೆ ಅನ್ಯಾಯವಾಗಿದೆ. ಶಾಂತ ರೀತಿಯಿಂದ ಪ್ರತಿಭಟನೆ ಮಾಡಲು ಬಿಡಬೇಕು. ಯಾರನ್ನೋ ಮೆಚ್ಚಿಸಲು ಅಮಾಯಕರ ಮೇಲೆ ಪೊಲೀಸರು ಪ್ರಕರಣ ದಾಖಲಿಸುವುದು ಸರಿಯಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿದೇಶಕ್ಕೆ ತೆರಳಿದ್ದಾರೆ. ಆದರೆ, ಅವರು ಹೋಗುವಾಗ ಯಾರಿಗೆ ಜವಾಬ್ದಾರಿ ಕೊಟ್ಟಿದ್ದಾರೆ ಎಂಬುದು ತಿಳಿದಿಲ್ಲ. ಗೃಹಸಚಿವರು ಮಹಾದಾಯಿ ಹೋರಾಟದಲ್ಲಿ ಏನಾದರೂ ಅನಾಹುತ ಸಂಭವಿಸಿದರೆ ಪೊಲೀಸ್ ಅಧಿಕಾರಿಗಳನ್ನೇ ಹೊಣೆ ಮಾಡುವುದಾಗಿ ಹೇಳಿದ್ದಾರೆ. ಇದರಿಂದಲೇ ಪೊಲೀಸರು ಅಮಾಯಕರನ್ನು ಬಂಧಿಸಲು ತೊಡಗಿದ್ದಾರೆ. ಕಾಶ್ಮೀರದ ಹೋರಾಟಗಾರರ ಮೇಲೂ ನಡೆಯದ ಅನಾಗರಿಕ ವರ್ತನೆ ಮಹಾದಾಯಿ ಹೋರಾಟಗಾರರ ಮೇಲೆ ನಡೆಯುತ್ತಿದೆ ಎಂದು ಅವರು ಹೇಳಿದರು.

ಬಿಜೆಪಿ ಮುಖಂಡರಿಗೆ ಸ್ವಾಭಿಮಾನ ಇಲ್ಲವೇ?: ಬಿಜೆಪಿ ಮುಖಂಡರಿಗೆ ಸ್ವಾಭಿಮಾನ ಇಲ್ಲವೇ ಎಂದು ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದರು.
ಕೇವಲ ಎರಡೇ ಸೆಕೆಂಡಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸಮಸ್ಯೆಯನ್ನು ಬಗೆಹರಿಸಬಹುದಿತ್ತು. ಕಾಂಗ್ರೆಸ್‌ಗಿಂತ ಹೆಚ್ಚಿನ ಜವಾಬ್ದಾರಿ ಬಿಜೆಪಿಗಿದೆ. ರಾಜ್ಯದ 17 ಮಂದಿ ಬಿಜೆಪಿ ಸಂಸದರು ಈಗಾಲಾದರೂ ಎಚ್ಚೆತ್ತುಕೊಂಡು ಗಟ್ಟಿಯಾಗಿ ಮಾತನಾಡಬೇಕು. ರಾಜ್ಯದ ಋಣ ತೀರಿಸುವ ಜವಾಬ್ದಾರಿ ಅರಿತು ರಾಜೀನಾಮೆ ನೀಡುವ ಮೂಲಕ ಕೇಂದ್ರದ ಮೇಲೆ ಒತ್ತಡ ಹಾಕಬೇಕು. ಇಲ್ಲದಿದ್ದರೆ, ಬಿಜೆಪಿ ಭಸ್ಮವಾಗಿ ಬಿಡುತ್ತದೆ ಎಂದರು.

ಅನಂತ ಕುಮಾರ್ ಯಾವ ಪುರುಷಾರ್ಥಕ್ಕೆ ಕೇಂದ್ರ ಸಚಿವ ಸಂಪುಟದಲ್ಲಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಸಂಸತ್ತಿನಲ್ಲಿ ಕಾಂಗ್ರೆಸ್‌ನವರು ಬಿಜೆಪಿ ಮೇಲೆ, ಬಿಜೆಪಿಯವರು ಕಾಂಗ್ರೆಸ್ ಮೇಲೆ ಆರೋಪ, ಪ್ರತ್ಯಾರೋಪ ಮಾಡುತ್ತಾ ಕಾಲಹರಣ ಮಾಡುತ್ತಿದ್ದಾರೆಯೇ ಹೊರತು ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ತಜ್ಞರೇ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಕಮಿಷನ್ ಆಸೆಗೆ ಬೇಜವಾಬ್ದಾರಿ ಎಂಜಿನಿಯರ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಇವರು ಸರಿಯಾದ ಅಂಕಿಅಂಶಗಳನ್ನು ನೀಡದಿದ್ದರೆ ವಕೀಲರು ಸಮರ್ಥವಾಗಿ ವಾದ ಮಂಡಿಸುವುದಾದರೂ ಹೇಗೆ ಎಂದು ಅವರು ಪ್ರಶ್ನಿಸಿದರು.

ಅಂತಿಮ ತೀರ್ಪು ಹೀಗೆ ಇರಬಹುದು: ಮಹಾದಾಯಿ ವಿಚಾರದಲ್ಲಿ ಮಧ್ಯಂತರ ತೀರ್ಪಿನಂತೆಯೇ ಅಂತಿಮ ತೀರ್ಪು ಬರಬಹುದು ಎಂಬ ಆತಂಕ ಕಾಡುತ್ತಿದೆ. ಇತ್ತ ಕೆಆರ್ಎಸ್ ಇನ್ನೂ ತುಂಬಿಲ್ಲ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮುಂದೇನಾಗಬಹುದೋ ಎಂಬ ಆತಂಕ ವ್ಯಕ್ತಪಡಿಸಿದರು.

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಮುಂದೆ ಕಾಂಗ್ರೆಸ್, ಬಿಜೆಪಿ ಎರಡೂ ಮಂಡಿಯೂರುತ್ತಿವೆ. ಹೀಗಾಗಿ, ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಯಿತು, ಕೃಷ್ಣ ನದಿ ವಿಚಾರದಲ್ಲೂ ನ್ಯಾಯ ಸಿಕ್ಕಿಲ್ಲ. ಸತತವಾಗಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಕೇಂದ್ರ ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳಬೇಕು ಎಂದು ತಿಳಿಸಿದರು.

ಅತಿಥಿಗೃಹ ಕೊಡುತ್ತಿಲ್ಲ
ಸರ್ಕಾರಿ ಅತಿಥಿ ಗೃಹದಲ್ಲಿ ಪತ್ರಿಕಾಗೋಷ್ಠಿ ನಡೆಸಲು ಅಧಿಕಾರಿಗಳು ಅವಕಾಶ ಕೊಡಲಿಲ್ಲ. ಬೆಂಗಳೂರಿನಿಂದ ಅನುಮತಿ ಬೇಕು ಎಂದರು.

ಇದು ಹೊಸ ನಿಯಮವಂತೆ. ಹೀಗಾಗಿ, ಪತ್ರಿಕಾಭವನಕ್ಕೆ ಬರಬೇಕಾಯಿತು ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT