ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ವಿರುದ್ಧ ಕಾಂಗ್ರೆಸ್‌ ಆರೋಪ

ಹವಾಲಾ ಆರೋಪಿ ಜತೆ ಮೋದಿ ಛಾಯಾಚಿತ್ರ
Last Updated 28 ಏಪ್ರಿಲ್ 2014, 20:06 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕಾಂಗ್ರೆಸ್‌ ಮತ್ತು ಬಿಜೆಪಿ ಮಧ್ಯೆ ಈಗ ಸಿ.ಡಿ ಬಿಡುಗಡೆಯ ಪೈಪೋಟಿ ನಡೆದಿದೆ.   ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಹವಾಲಾ ಹಗರಣದ ಪ್ರಮುಖ ಆರೋಪಿ ಜೊತೆಗಿರುವ ದೃಶ್ಯಗಳನ್ನು ಒಳಗೊಂಡ ಸಿ.ಡಿಯನ್ನು ಕಾಂಗ್ರೆಸ್‌ ಸೋಮವಾರ ಬಿಡುಗಡೆ ಮಾಡಿದೆ.

ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್‌ ವಾಧ್ರಾ ಅವರ ಭೂ ಅವ್ಯವ­ಹಾರದ ಬಗ್ಗೆ ವಿಡಿಯೊ ತುಣುಕಿನ ಕಿರುಚಿತ್ರವನ್ನು ಬಿಜೆಪಿ ಭಾನು­ವಾರ­ವಷ್ಟೇ ಬಿಡುಗಡೆ ಮಾಡಿತ್ತು.

ಒಂದು ಸಾವಿರ ಕೋಟಿ ರೂಪಾಯಿ­ಗಳ ಹವಾಲಾ ಹಗರಣದಲ್ಲಿ ಬಂಧಿತ­ನಾದ ಆರೋಪಿ ಅಫ್ರೋಜ್‌ ಫಟ್ಟಾ ಜೊತೆಗೆ ಮೋದಿ ಅವರು ಇರುವ ದೃಶ್ಯಗಳು ಈ ಸಿ.ಡಿಯಲ್ಲಿದೆ.

ಕಾಂಗ್ರೆಸ್‌ ಸವಾಲು: ಫಟ್ಟಾ ಜತೆಗಿನ ಸಂಬಂಧದ ಬಗ್ಗೆ ಮೋದಿ ಅವರು ಗುಜರಾತ್‌ ಸರ್ಕಾರದ ವ್ಯಾಪ್ತಿಗೆ ಒಳಪಡದ  ಸ್ವತಂತ್ರ ತನಿಖಾ ಸಂಸ್ಥೆ­ಯಿಂದ ತನಿಖೆ ಎದುರಿಸಲು ಸಿದ್ಧರಿ­ದ್ದಾ­ರೆಯೇ ಎಂದು ಕಾಂಗ್ರೆಸ್‌ ಸವಾಲು ಹಾಕಿದೆ.

‘ಹಲವು ಸಾಮಾಜಿಕ ಮತ್ತು ರಾಜ­ಕೀಯ ಕಾರ್ಯಕ್ರಮ­ಗಳಲ್ಲಿ  ಮೋದಿ ಮತ್ತು ಫಟ್ಟಾ ಒಟ್ಟಿಗೆ ಕಾಣಿಸಿ­ಕೊಂಡಿ­ದ್ದಾರೆ. ಹವಾಲಾ ಹಗರಣದ ಪ್ರಮುಖ ಆರೋಪಿ ಜೊತೆಗೆ ಮೋದಿ ಅವರು ಹೊಂದಿರುವ ಸಂಬಂಧವಾದರೂ ಏನು? ಫಟ್ಟಾ ರಕ್ಷಣೆಗೆ ಗುಜರಾತ್‌ ಮುಖ್ಯ­ಮಂತ್ರಿ ಅವರು ನಿಂತಿರುವುದೇಕೆ’  ಎಂದು  ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೆವಾಲಾ ಪ್ರಶ್ನಿಸಿದರು.

‘ಗುಜರಾತ್‌ ಮುಖ್ಯಮಂತ್ರಿ ಕಚೇರಿ­ಯಲ್ಲಿ ನಡೆದ ಸಭೆಗಳಲ್ಲಿ ಫಟ್ಟಾ ಭಾಗವ­ಹಿಸಿರುವ ಛಾಯಾ­ಚಿತ್ರಗಳು ಮೋದಿ ವೆಬ್‌ಸೈಟ್‌ ಮತ್ತು ಬಿಜೆಪಿ ವೆಬ್‌­ಸೈಟ್‌­ಗಳಲ್ಲಿವೆ’ ಎಂದರು.

‘ಹವಾಲಾ ಮೂಲಕ ವರ್ಗಾಯಿಸ­ಲಾದ ₨1 ಸಾವಿರ ಕೋಟಿ ಅಥವಾ ಅದಕ್ಕೂ ಹೆಚ್ಚಿನ ಮೊತ್ತವು ಯಾರಿಗೆ ಸೇರಿದ ಹಣ, ಇಷ್ಟೊಂದು ದೊಡ್ಡ ಮಟ್ಟದ ಹಣವನ್ನು ಅಕ್ರಮ ಮಾರ್ಗ­ದಲ್ಲಿ ದೇಶದೊಳಗೆ ತಂದ ಉದ್ದೇಶ­ವಾದರೂ ಏನು’ ಎಂದು ಸುರ್ಜೆವಾಲಾ ಪ್ರಶ್ನಿಸಿದರು.

ಫಟ್ಟಾ ಅವರ ವ್ಯವಹಾರ ಪಾಲುದಾರ ಅಫ್ಜಲ್‌ ದಲಾಲ್‌ ಅವರ ಸಹೋದರ ಅಮ್ಜದ್‌ ದಲಾಲನನ್ನು ಭೂಗತ ಪಾತಕಿ ಬಬ್ಲೂ ಶ್ರೀವಾಸ್ತವನ ಶೂಟರ್‌ಗಳು ಕೊಂದಿದ್ದರು. ಹವಾಲಾ ಅವ್ಯವಹಾರಕ್ಕೂ ಬಬ್ಲೂಗೂ ಸಂಬಂಧ ಇದೆಯೇ? ಹವಾಲಾ ಮೂಲಕ ವಿನಿಮಯವಾದ ಹಣದಲ್ಲಿ ಬಬ್ಲೂ ಪಾಲು ಕೇಳುತ್ತಿದ್ದಾನೆಯೇ? ಭೂಗತ ಅಪರಾಧಿಗಳು ಹಾಗೂ ಮೋದಿ ಮತ್ತಿತರರಿಗೂ ಸಂಬಂಧ ಇದೆಯೇ?’ ಎಂದು ಸುರ್ಜೆವಾಲ್‌ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌ ಈ ಆರೋಪ ಮಾಡಿದ ಕೂಡಲೇ ಮೋದಿ ಆಪ್ತ ಅಮಿತ್‌ ಷಾ ಅವರು, ಕಾಂಗ್ರೆಸ್‌ ಸಂಸದ ಮಹಮ್ಮದ್‌ ಅಜರುದ್ದೀನ್‌ ಅವರೂ ಫಟ್ಟಾ ಜತೆಗೆ ಇರುವ ಚಿತ್ರವನ್ನು ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ.

ಕಾಂಗ್ರೆಸ್‌ ವಾಗ್ದಾಳಿಗೆ ಪ್ರತಿಕ್ರಿಯಿಸಿ­ರುವ ಬಿಜೆಪಿ ವಕ್ತಾರೆ ಮೀನಾಕ್ಷಿ ಲೇಖಿ, ಸಾರ್ವಜನಿಕ ವ್ಯಕ್ತಿಗಳ ಜತೆ ಯಾರಾ­ದರೂ ಚಿತ್ರ ತೆಗೆಸಿಕೊಳ್ಳಬಹುದು. ಅದಕ್ಕಾಗಿ ಅವರ ಮೇಲೆ ಆರೋಪ ಹೊರಿಸಬೇಕಿಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT