ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ವೇಗಕ್ಕೆ ಸಜ್ಜಾಗುತ್ತಿದೆ ಅಧಿಕಾರಿ ವರ್ಗ

Last Updated 22 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅಧಿಕಾರ ಸ್ವೀಕಾರಕ್ಕೆ ಮುನ್ನವೇ ಅವರ ಕೆಲಸದ ವೇಗಕ್ಕೆ ಹೊಂದಿಕೊಳ್ಳಲು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ‘ತಾಲೀಮು’ ನಡೆಸುತ್ತಿದ್ದಾರೆ. ಚುನಾವಣೆಯಲ್ಲಿ ಬಿಜೆಪಿಗೆ ಅಗತ್ಯ ಬಹುಮತ ಸಿಗುತ್ತಿದ್ದಂತೆ ಮೈಕೊಡವಿ ಎದ್ದಿರುವ ಅಧಿಕಾರಿಗಳು ಪ್ರಮುಖ ಯೋಜನೆ– ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸುತ್ತಿದ್ದಾರೆ.

ಬಿಜೆಪಿ ಸಂಸದೀಯ ಪಕ್ಷದ ಸಭೆಗೆ ಮೊದಲೇ ಸಂಪುಟ ಕಾರ್ಯದರ್ಶಿ ಅಜಿತ್‌ ಕುಮಾರ್‌ ಸೇಠ್‌ ಅವರನ್ನು ಮೂರು ಸಲ ಕರೆಸಿಕೊಂಡು ಮಾತನಾಡಿ­ರುವ ಮೋದಿ ತಮ್ಮ ಕಾರ್ಯವಿಧಾನ ಕುರಿತು ಸ್ಪಷ್ಟ ಸೂಚನೆ ನೀಡಿದ್ದಾರೆ. ಕೇಂದ್ರ ಸರ್ಕಾರದ ಮುಂದಿರುವ ಪ್ರಮುಖ ಯೋಜನೆಗಳು, ಅವುಗಳು ಅನುಷ್ಠಾನ, ಪ್ರಗತಿ–ವೈಫಲ್ಯ ಕುರಿತು ನೀಲಿ ನಕ್ಷೆಯೊಂದನ್ನು ಸಿದ್ಧಪಡಿಸುವಂತೆ ಆದೇಶ ನೀಡಿದ್ದಾರೆ.

ನಿಯೋಜಿತ ಪ್ರಧಾನಿ ಆದೇಶದ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳು ತರಾತುರಿಯಲ್ಲಿ ಸಭೆ ನಡೆಸುತ್ತಿ­ದ್ದಾರೆ. ಹಿರಿಯ ಅಧಿಕಾರಿಗಳ ರಜೆ ರದ್ದುಪಡಿಸಲಾಗಿದೆ. ಯಾರೂ ವಿದೇಶ ಪ್ರವಾಸಕ್ಕೆ ಹೋಗಬಾರದೆಂದು ಸೂಚಿಸಲಾಗಿದೆ. ಕೇಂದ್ರದ ಅಧಿಕಾರಿಗಳು ಗುಜರಾತ್‌ ಸರ್ಕಾರದ ಹಿರಿಯ ಅಧಿಕಾರಿಗಳ ನಿಕಟ ಸಂಪರ್ಕ­ದಲ್ಲಿದ್ದು ಮೋದಿ ಅವರ ಕಾರ್ಯಶೈಲಿ ಕುರಿತು ಮಾಹಿತಿ ಪಡೆಯುತ್ತಿದ್ದಾರೆ.

ಗೃಹ ಕಾರ್ಯದರ್ಶಿ ಅನಿಲ್‌ ಗೋಸ್ವಾಮಿ ಈಗಾ­ಗಲೇ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾಹಿತಿ ನೀಡಿದ್ದಾರೆ. ಬೆಲೆ ಏರಿಕೆ ಹಾಗೂ ಹಣ­ದು­ಬ್ಬರ ಕುರಿತು ಗುರುವಾರ ಹಣಕಾಸು ಇಲಾಖೆ ಕಾರ್ಯ­ದರ್ಶಿ ಅರವಿಂದ್‌ ಮಾಯಾರಾಂ ಅವರು ಕೃಷಿ, ಆಹಾರ ಮತ್ತಿತರ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ.

ಈಗಾಗಲೇ ಕೃಷಿ ಇಲಾಖೆ ಕಾರ್ಯದರ್ಶಿ ಅಶೋಕ್ ಬಹುಗುಣ ಮಳೆ– ಬೆಳೆ ಪರಿಸ್ಥಿತಿ ಕುರಿತು ಸಂಬಂಧಪಟ್ಟ ಇಲಾಖೆಗಳೊಂದಿಗೆ ಚರ್ಚಿಸಿದ್ದಾರೆ. ದೇಶದ ಮಳೆ–ಬೆಳೆ ಪರಿಸ್ಥಿತಿ, ಆಹಾರಧಾನ್ಯಗಳ ಬೇಡಿಕೆ– ಪೂರೈಕೆ ಕುರಿತು ಅಗತ್ಯ ಮಾಹಿತಿ ಸಂಗ್ರಹಿಸಿದ್ದಾರೆ.

ಯುಪಿಎ ಸರ್ಕಾರದ ಯೋಜನೆಗಳು, ಅವುಗಳ ಅನುಷ್ಠಾನ, ಆಗಿರುವ ಪ್ರಗತಿ, ವೈಫಲ್ಯಗಳನ್ನು ಕುರಿತು ಹೊಸ ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ‘ಪವರ್‌ ಪಾಯಿಂಟ್‌ ಪ್ರೆಸೆಂಟೇಷನ್‌’ ಮಾಡಬೇ­ಕಾಗಿದೆ ಎಂದು ಸಂಪುಟ ಕಾರ್ಯದರ್ಶಿ ಸುತ್ತೋಲೆ ಕಳು­ಹಿ­ಸಿದ್ದಾರೆ. ‘ಇದುವರೆಗೆ ಏನು ಪ್ರಗತಿ ಆಗಿದೆ. ಇನ್ನೇನು ಆಗಬೇಕು. ಅಧಿಕಾರಿಗಳಿಗೆ ಮುಕ್ತ ಅಧಿಕಾರ ಕೊಟ್ಟರೆ ಹೇಗೆ’ ಎಂಬ ಬಗ್ಗೆ ಮುಂದಿನ ವಾರ ಮಾಹಿತಿ­ಯೊಂದಿಗೆ ಸಿದ್ಧರಿರಬೇಕು ಎಂದೂ ತಿಳಿಸಿದ್ದಾರೆ.

ಹೊಸದಾಗಿ ಜಾರಿಗೆ ಬಂದಿರುವ ಭೂಸ್ವಾಧೀನ ಕಾಯ್ದೆಗೂ ತಿದ್ದುಪಡಿ ಮಾಡುವ ಚಿಂತನೆ ಹೊಸ ಸರ್ಕಾರಕ್ಕಿದೆ. ಈ ಮಸೂದೆಯಿಂದಾಗಿ ಉದ್ಯಮಗಳಿಗೆ ಜಮೀನು ಸ್ವಾಧೀನ ಕಷ್ಟವಾಗಲಿದೆ ಎಂಬ ಅಭಿ­ಪ್ರಾ­ಯ­ವನ್ನು ಈಗಾಗಲೇ ಸಂಬಂಧಪಟ್ಟ ಇಲಾಖೆಗಳು ವ್ಯಕ್ತ­ಪಡಿಸಿವೆ.

ಯುಪಿಎ ಸರ್ಕಾರದ ಮಹತ್ವದ ಯೋಜನೆ­ಗಳಾಗಿರುವ ಆಹಾರ ಭದ್ರತೆ, ಉದ್ಯೋಗ ಖಾತ್ರಿ, ನರ್ಮ್‌ ಮುಂತಾದ ಯೋಜನೆಗಳನ್ನು ಮೋದಿ ಪರಿ­ಶೀಲಿ­ಸ­ಲಿದ್ದಾರೆ. ಆಹಾರ ಭದ್ರತೆ ಯೋಜನೆಗೆ ಸರ್ಕಾರ ₨ 1.10 ಲಕ್ಷ ಕೋಟಿ ಖರ್ಚು ಮಾಡುತ್ತಿದೆ. ಉದ್ಯೋಗ ಖಾತ್ರಿಗೆ ₨ 40 ಸಾವಿರ ಕೋಟಿ ವೆಚ್ಚವಾಗುತ್ತಿದೆ.

‘ಇದುವರೆಗೆ ಅಧಿಕಾರ ನಡೆಸಿರುವ ಎಲ್ಲ ಸರ್ಕಾರಗಳು ಒಂದಲ್ಲ ಒಂದು ಒಳ್ಳೆ ಕೆಲಸ ಮಾಡಿವೆ. ಒಳ್ಳೆಯ ಕೆಲಸಗಳನ್ನು ಮುಂದುವರಿಸುತ್ತೇವೆ. ನಿರೀಕ್ಷಿತ ಫಲ ಕೊಡದ ಹಲವು ಯೋಜನೆಗಳನ್ನು ಪುನರ್ ಪರಿಶೀಲಿಸುತ್ತೇವೆ’ ಎಂದು ನಿಯೋಜಿತ ಪ್ರಧಾನಿ ಈಗಾಗಲೇ ತಿಳಿಸಿದ್ದಾರೆ.

ಗುಜರಾತ್‌ ಸರ್ಕಾರದಲ್ಲಿ ಉತ್ತಮ ಕೆಲಸ ಮಾಡಿ­ರುವ ಕೆಲವು ನಂಬಿಕಸ್ಥ ಅಧಿಕಾರಿಗಳನ್ನು ಕೇಂದ್ರ ಸರ್ಕಾ­ರದ ಆಯಕಟ್ಟಿನ ಜಾಗಗಳಿಗೆ ತರುವ ಚಿಂತನೆಯೂ ಮೋದಿ ಅವರಿಗಿದೆ ಎಂದು ಮೂಲಗಳು ವಿವರಿಸಿವೆ.

ಖಾತೆಗಳ ಮಹತ್ವ
ರಸ್ತೆ, ರೈಲ್ವೆ, ವಿಮಾನ ನಿಲ್ದಾಣ, ಬಂದರು, ವಿದ್ಯುತ್‌, ಕಲ್ಲಿದ್ದಲು, ಗಣಿ, ಪರಿಸರ ಮತ್ತು ಅರಣ್ಯ, ಟೆಲಿಕಾಂ, ಪ್ರವಾಸೋದ್ಯಮ ಒಳ­ಗೊಂಡಂತೆ ಪ್ರಮುಖ ಇಲಾಖೆಗಳಿಗೆ ಮೋದಿ ಮಹತ್ವ ನೀಡಲಿದ್ದಾರೆ. ಯೋಜನೆಗಳ ವಿಳಂಬ ತಡೆಯುವ ಉದ್ದೇಶದಿಂದ ಅನೇಕ ಇಲಾಖೆ­ಗಳನ್ನು ‘ಒಂದೇ ಸೂರಿನಡಿ’ ತಂದು ಒಬ್ಬೊಬ್ಬ ಸಚಿವರು ಹಾಗೂ ಕಾರ್ಯ­ದರ್ಶಿ­ಗಳ ಅಧೀನಕ್ಕೆ ಕೊಡುವ ಚಿಂತನೆ ಹೊಂದಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT