ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಹನ ಮುರಲಿಯ ಬೆನ್ನೇರಿ ‘ಸವಾರಿ’

Last Updated 17 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಮೊದಲ ‘ಸವಾರಿ’ ಯಶಸ್ಸು ಕಂಡ ಖುಷಿಯಲ್ಲೇ ನಿರ್ದೇಶಕ ಜೇಕಬ್ ವರ್ಗಿಸ್ ನೇತೃತ್ವದ ತಂಡ ಎರಡನೇ ಸಲ ಸವಾರಿಗೆ ಹೊರಟಿದೆ. ಈ ಪಯಣಕ್ಕೆ ಜೊತೆಯಾಗುವ ಹಾಡುಗಳ ಸಿ.ಡಿ ಬಿಡುಗಡೆ ಸಮಾರಂಭವನ್ನು ಅದ್ದೂರಿಯಾಗಿ ನಡೆಸಲಾಯಿತು.

ಕವಿ ಗೋಪಾಲಕೃಷ್ಣ ಅಡಿಗ ಅವರ ಪತ್ನಿ ಲಲಿತಾ ಅವರನ್ನು ಸನ್ಮಾನಿಸಿದ್ದು ಸಮಾರಂಭದ ವಿಶೇಷಗಳಲ್ಲೊಂದು. ಅಡಿಗರ ‘ಯಾವ ಮೋಹನ ಮುರಲಿ ಕರೆಯಿತು’ ಪದ್ಯವನ್ನು ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದ್ದಕ್ಕೆ ಈ ಕೃತಜ್ಞತೆ ಎಂದು ಜೇಕಬ್ ಹೇಳಿದರು. ಚಿತ್ರದಲ್ಲಿ ಈ ಹಾಡಿಗೆ ದನಿಗೂಡಿಸಿರುವುದು ರವಿ ಮೂರೂರ. ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಲಲಿತಾ, ‘ಸವಾರಿ-2 ಯಶಸ್ವಿಯಾಗಲಿ, ಎಲ್ಲರಿಗೂ ಒಳ್ಳೆಯದಾಗಲಿ’ ಎಂದು ಹಾರೈಸಿದರು.

ಸಿನಿಮಾಕ್ಕೆ ಹಾಡು ಬರೆಯುವ ಸ್ಪರ್ಧೆ ಏರ್ಪಡಿಸಿದ್ದು ‘ಸವಾರಿ–2’ ಚಿತ್ರದ ಇನ್ನೊಂದು ವಿಶೇಷ. ಸ್ಪರ್ಧೆಗೆ ಬಂದಿದ್ದ ಹಲವು ಹಾಡುಗಳ ಪೈಕಿ ಒಂದನ್ನು ಆಯ್ಕೆ ಮಾಡಲಾಗಿದೆ. ಈ ಗೀತೆಯನ್ನು ಬರೆದಿರುವುದು ಮಂಜು ದೊಡ್ಡಮನಿ ಹಾಗೂ ಅನುಪಮಾ. ನಟ ಪುನೀತ್ ರಾಜ್‌ಕುಮಾರ್ ಇದಕ್ಕೆ ದನಿ ನೀಡಿದ್ದಾರೆ.

ನಾಯಕ ಶ್ರೀನಗರ ಕಿಟ್ಟಿಗೆ ಇದು ಇನ್ನೊಂದು ವಿಶಿಷ್ಟ ಸವಾರಿಯಂತೆ. ಚಿತ್ರೀಕರಣಕ್ಕಾಗಿ ಕುಕ್ಕೆ ಸುಬ್ರಹ್ಮಣ್ಯ, ಚಿಕ್ಕಮಗಳೂರು ಹಾಗೂ ಕೆಮ್ಮಣ್ಣುಗುಂಡಿಯಲ್ಲಿ ನಡೆಸಿದ ರೋಚಕ ಪಯಣದ ಖುಷಿಯಲ್ಲಿ ಅವರಿದ್ದರು. ‘ಅದರಲ್ಲೂ ಗಿರೀಶ್ ಕಾರ್ನಾಡರ ಜತೆ ನಟಿಸಿದ ಅನುಭವ ನನ್ನ ವೃತ್ತಿಜೀವನದಲ್ಲಿ ಯಾವಾಗಲೂ ನೆನಪಿನಲ್ಲಿ ಉಳಿಯುವಂಥದು’ ಎಂದು ಸಂತಸಪಟ್ಟರು. ‘ಚಿತ್ರದಲ್ಲಿ ಕಿಟ್ಟಿ ಮಾಡಿರುವ ಪಾತ್ರ ಅವರಿಗಷ್ಟೇ ಹೊಂದುವಂಥದ್ದು. ಹಾಗಿದೆ ಆ ಪಾತ್ರ’ ಎನ್ನುವ ಶಿಫಾರಸು ಸಂಭಾಷಣೆಕಾರ ಮಂಜು ಮಾಂಡವ್ಯ ಅವರದು.

ಜಯಂತ್ ಕಾಯ್ಕಿಣಿ, ಕವಿರಾಜ್ ಹಾಗೂ ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದ್ದು, ಇವುಗಳಿಗೆ ತಾವು ಸಂಯೋಜಿಸಿದ ಸಂಗೀತ ಒಳ್ಳೆಯ ಪ್ರತಿಕ್ರಿಯೆ ಗಳಿಸಿದೆ ಎಂಬ ಪುಳಕವನ್ನು ಮಣಿಕಾಂತ ಕದ್ರಿ ಹಂಚಿಕೊಂಡರು. ಶ್ರುತಿ ಹರಿಹರನ್, ಕರಣ್ ರಾವ್, ಮಧುರಿಮಾ, ಛಾಯಾಗ್ರಾಯಕ ಶಶಿಕುಮಾರ್ ಮಾತನಾಡಿದರು.

ಸಿ.ಡಿ ಬಿಡುಗಡೆ ಮಾಡಿದ್ದು ಶ್ರೀನಗರ ಕಿಟ್ಟಿ ಅವರ ಮಗಳು. ತಮಿಳು ನಿರ್ದೇಶಕ ವೆಟ್ರಿಮಾರನ್, ‘ಲಹರಿ’ ವೇಲು, ನಿವೃತ್ತ ಪೊಲೀಸ್ ಅಧಿಕಾರಿ ಸಂಗ್ರಾಮ್ ಸಿಂಗ್ ವೇದಿಕೆಯಲ್ಲಿದ್ದರು. ಅಂದಹಾಗೆ, ಸಂಗ್ರಾಮ್ ಸಿಂಗ್ ಈ ಸಿನಿಮಾದಲ್ಲಿ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಮೇ ತಿಂಗಳಲ್ಲಿ ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂಬ ಮಾಹಿತಿಯನ್ನು ಜೇಕಬ್ ನೀಡಿದರು. ಇದೇ ಸಂದರ್ಭದಲ್ಲಿ ಎರಡನೇ ಸವಾರಿಯ ಮೂರು ಹಾಡುಗಳನ್ನು ಪ್ರದರ್ಶಿಸಲಾಯಿತು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT