ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಂಟ್‌ ಎವರೆಸ್ಟ್‌ ಏರಿದ ಕಿರಿಯ ಬಾಲಕಿ ಪೂರ್ಣಾ

Last Updated 25 ಮೇ 2014, 19:30 IST
ಅಕ್ಷರ ಗಾತ್ರ

ಹೈದರಾಬಾದ್‌ (ಪಿಟಿಐ): ವಿಶ್ವದ ಅತಿ ಎತ್ತರದ ಶಿಖರ ಎವರೆಸ್ಟ್‌ ಪರ್ವತವನ್ನು ಏರಿದ ಅತ್ಯಂತ ಕಿರಿಯ ವಯಸ್ಸಿನ ಹೆಣ್ಣುಮಗಳು
ಎಂಬ ಶ್ರೇಯಕ್ಕೆ ಆಂಧ್ರಪ್ರದೇಶದ ಬಾಲಕಿ ಮಾಲಾವತ್‌ ಪೂರ್ಣಾ ಪಾತ್ರಳಾ­ಗಿದ್ದಾಳೆ.

13 ವರ್ಷದ ಪೂರ್ಣಾ ಮತ್ತು ಆಂಧ್ರದ ಮತ್ತೊಬ್ಬ ಬಾಲಕ 16 ವರ್ಷದ ಸಾಧನಪಲ್ಲಿ ಆನಂದ್‌ ಕುಮಾರ್‌  ಭಾನುವಾರ ಮುಂಜಾನೆ ಆರು ಗಂಟೆ ಹೊತ್ತಿಗೆ ಎವರೆಸ್ಟ್‌ ಉತ್ತುಂ­ಗ­ವನ್ನು ಏರಿ ಸಾಧನೆ ಮಾಡಿದ್ದಾರೆ.

52 ದಿನಗಳ ಕಾಲ ಪರ್ವತಾ­ರೋಹಣ ಯಾತ್ರೆ ಕೈಗೊಂಡಿದ್ದ ಈ ಮಕ್ಕಳು, ಈಗ ಪರ್ವತದ ಇಳಿಮುಖ ಹಾದಿಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇವರಿಬ್ಬರು ಆಂಧ್ರದ ಸಮಾಜ ಕಲ್ಯಾಣ ಇಲಾಖೆ ನಡೆಸುವ ‘ರಾಷ್ಟ್ರ ಸಾಂಘಿಕ ಸಂಕ್ಷಮ ಗುರುಕುಲ’ದ ವಿದ್ಯಾರ್ಥಿಗಳು.

ಬುಡಕಟ್ಟು ಜನಾಂಗದವಳಾದ ಪೂರ್ಣಾ, ನಿಜಾಮಾಬಾದ್‌ ಜಿಲ್ಲೆಯ ತಾಡ್ವಾಯಿ ಎಂಬ ಊರಿನ ಗುರುಕುಲ­ದಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಈಕೆಯ ತಂದೆ– ತಾಯಿ ದಿನಗೂಲಿ ಕಾರ್ಮಿಕರು.

ದಲಿತ ಸಮುದಾಯಕ್ಕೆ ಸೇರಿದ ಆನಂದ್‌, ಖಮ್ಮಂ ಪಟ್ಟಣದಲ್ಲಿರುವ ಗುರು­ಕುಲದ ಕಲಾ ವಿಭಾಗದಲ್ಲಿ ಪ್ರಥಮ ಪಿಯು ವಿದ್ಯಾರ್ಥಿ. ಈತನ ತಂದೆ ಮೆಕ್ಯಾನಿಕ್‌.

ಎವರೆಸ್ಟ್‌ ಉತ್ತುಂಗಕ್ಕೆ ಇವರಿಬ್ಬರು ಡಾ.ಬಿ.ಆರ್‌. ಅಂಬೇಡ್ಕರ್‌ ಮತ್ತು ಮಾಜಿ ಐಎಎಸ್‌ ಅಧಿಕಾರಿಯಾಗಿದ್ದ ಎಸ್‌.ಆರ್‌. ಶಂಕರನ್‌ ಅವರ ಭಾವಚಿತ್ರಗಳನ್ನು ಕೊಂಡೊಯ್ದಿದ್ದರು.

‘ಅತ್ಯಂತ ಕ್ಲಿಷ್ಟಕರವಾದ ಪರ್ವತಾ­ರೋಹಣಕ್ಕೆ ಪ್ರಾಥಮಿಕ ಹಂತದಲ್ಲಿ ಸುಮಾರು 150 ಮಕ್ಕಳು ಆಯ್ಕೆ ಆಗಿದ್ದರು. ಎರಡನೇ ಹಂತಕ್ಕೆ 20 ಮಕ್ಕ­ಳನ್ನು ಆರಿಸಿ ಡಾರ್ಜಿಲಿಂಗ್‌­ನಲ್ಲಿರುವ ಪರ್ವತಾರೋಹಣ ತರಬೇತಿ ಸಂಸ್ಥೆಗೆ ಕಳುಹಿಸಲಾಗಿತ್ತು. ಇವರಲ್ಲಿ ಒಂಬತ್ತು ಮಕ್ಕಳು ಭಾರತ– ಚೀನಾ ಗಡಿಯಲ್ಲಿನ ಎವರೆಸ್ಟ್‌ ಆರೋಹಣ ಶಿಬಿರಕ್ಕೆ ತೆರಳಿದ್ದರು. ಪೂರ್ಣಾ ಮತ್ತು ಆನಂದ್‌ ಯಶಸ್ವಿಯಾಗಿ ಶಿಖರವನ್ನು ಏರಿ ಸಾಧನೆ ಮಾಡಿದ್ದಾರೆ’ ಎಂದು ಸಮಾಜ ಕಲ್ಯಾಣ ಇಲಾಖೆ ಮೂಲಗಳು ತಿಳಿಸಿವೆ.

ಸಾಹಸ ಕ್ರೀಡೆಗೆ ಆಯ್ಕೆಯಾದ ಶೋಷಿತ ವರ್ಗಗಳ ಈ ಮಕ್ಕಳು ಚಿಕ್ಕ­ವಯಸ್ಸಿನವರೆಂದು  ಮೊದಲು ಎವರೆಸ್ಟ್‌ ಆರೋಹಣ ಸಾಹಸಕ್ಕೆ ಆಯ್ಕೆ ಮಾಡಿರ­ಲಿಲ್ಲ. ಆದರೆ, ಇದನ್ನೇ ಸವಾಲಾಗಿ ತೆಗೆದುಕೊಂಡ ಈ ಮಕ್ಕಳು, ‘ನಾವು ಎವರೆಸ್ಟ್‌ ಏರೇ ಏರುತ್ತೇವೆ. ವಾಪಸು ಬಂದು ಐಪಿಎಸ್‌ ಅಧಿಕಾರಿ­ಗಳಾಗುತ್ತೇವೆ’ ಎಂದು ಆತ್ಮವಿಶ್ವಾಸ­ದಿಂದ ನುಡಿದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT