ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಢ್ಯ ನಿಷೇಧ ಮತ್ತು ರಾಜಕೀಯ ಮಾರುಕಟ್ಟೆ

ಕುವೆಂಪು ರೀತಿಯಲ್ಲಿ ವೈಚಾರಿಕತೆಯನ್ನು ಸಮಾಜಕ್ಕೆ ಗುಡುಗಿನಂತೆ ಹೇಳುವ ಧೈರ್ಯದ ಅವಶ್ಯಕತೆ ಹೆಚ್ಚಾಗಿ ಬೇಕಾಗಿದೆ
Last Updated 19 ಜುಲೈ 2016, 19:30 IST
ಅಕ್ಷರ ಗಾತ್ರ

‘ಮೌಢ್ಯ ನಿಷೇಧ ಮಸೂದೆ’ ಜಾರಿ ನನೆಗುದಿಗೆ ಬಿದ್ದಿದೆ. ಸಮಾಜದ ಬಗ್ಗೆ ಕಳಕಳಿ ತೋರಿಸುವ ಸಚಿವ ರಮೇಶ್‌ ಕುಮಾರ್‌ ಹಾಗೂ ಪ್ರಭಾವಿ ಸಚಿವ ಡಿ.ಕೆ.ಶಿವಕುಮಾರ್‌ ಅವರ ವಿರೋಧವಿರುವುದನ್ನು ಹಾಗೂ ಮತ್ತೊಬ್ಬ ಸಚಿವ  ‘ನಾನೇ ಕೆಂಡ ತುಳಿವ ಸಂಪ್ರದಾಯದಲ್ಲಿದ್ದೇನಲ್ಲವೇ’ ಎಂದು ನಿಷೇಧಕ್ಕೆ ತಮ್ಮ ಸಹಮತ ಇಲ್ಲದಿರುವುದನ್ನು ತಿಳಿಸಿದ್ದಾರೆ (ಪ್ರ.ವಾ., ಜುಲೈ 9).

ಈ ಕಾನೂನು ಜಾರಿಯಿಂದ ಮತ ಬ್ಯಾಂಕಿಗೆ ಹಾನಿಯಾದೀತೆಂದು ಆಳುವ ಪಕ್ಷದ ಕೆಲವರು ಭಯ ವ್ಯಕ್ತಪಡಿಸಿದ್ದಾರೆ. ಕಾಗೋಡು ತಿಮ್ಮಪ್ಪ ಅವರು ‘ಕಾನೂನು ಮಾಡುವುದನ್ನು ಸರಿಯಾಗಿ ಮಾಡುವುದಾದರೆ ಮಾಡಿ’ ಎಂದು ಹೇಳಿದ್ದಾರೆ. ‘ಇದೊಂದು ಕಾಲ್ಪನಿಕಭಯ’ವೆಂದು ಹೇಳಿರುವ ನಿಡುಮಾಮಿಡಿ ಸ್ವಾಮೀಜಿ, ಇದೇ 24ರಂದು ಪ್ರಗತಿಪರರ ಸಭೆ ಕರೆದಿದ್ದಾರೆ.

ಈ ಮಸೂದೆ ತಡೆ, ವಿರೋಧ ಪಕ್ಷಕ್ಕಾಗುತ್ತಿರುವ ಲಾಭವೆಂಬುದನ್ನೇ ಆಳುವ ಪಕ್ಷ ಅರಿತಂತಿಲ್ಲ. ಮೌಢ್ಯ ನಿರ್ಬಂಧದ ಪಟ್ಟಿಯಲ್ಲಿ 22 ಅಂಶಗಳಿವೆ. ಎಲ್ಲವೂ ಮೌಢ್ಯದ ಪರಮಾವಧಿಗಳು. ‘ಕೆಂಡ ತುಳಿಯುವ’ ಆಚರಣೆಯಲ್ಲಿ ಈ ವರ್ಷ ಆದ ಅವಘಡ ಅರಿತರೆ ಅದನ್ನು ಉಳಿಸಿಕೊಳ್ಳಬೇಕೇ ಅಥವಾ 22ರ ಪಟ್ಟಿಯಲ್ಲಿ ಒಂದನ್ನು ಕಳೆದು ಮಸೂದೆ ತರಬೇಕೇ ಎಂಬುದು ಅರಿವಾಗುತ್ತದೆ.

ಮತ ಹಾಕುವ ಬಹುಸಂಖ್ಯಾತರನ್ನು ಕತ್ತಲಲ್ಲಿಟ್ಟು ವೋಟಿನ ರಾಜಕೀಯ ಮಾಡಬೇಕೆನ್ನುವ ಪಕ್ಷಗಳು ಇಡೀ ಸಮಾಜವನ್ನು ಯಾವುದರಿಂದ ಅಳೆಯುತ್ತಿವೆ? ಪ್ರಗತಿಪರ ಸಮಾಜಕ್ಕೆ ತಿಳಿವಳಿಕೆಯ ಸ್ವರೂಪವು ಸಹಕರಿಸಬೇಕು. ಇದು ವರ್ತಮಾನದ ತುರ್ತು. ಅದನ್ನು ಜನಜಾಗೃತಿ ಮೂಲಕ ಮಾಡಬೇಕೆನ್ನುವುದು ಕೂಡ ಅಷ್ಟೇ ಸರಿ. ಇದರಿಂದ ಸಹಕರಿಸಿದ ಪಕ್ಷಕ್ಕೆ ಮತವೃದ್ಧಿಯಾಗುತ್ತದೆಯೇ ಹೊರತು ಹಾನಿಯಾಗುವುದಿಲ್ಲ. ಜನ ಇದನ್ನು ಅರಿಯದಷ್ಟು  ಮೂಢರಲ್ಲ. ಕಾಲದ ಸ್ವೀಕಾರ ಪರ ಜನ ಇರುತ್ತಾರೆ.

ಬೆತ್ತಲೆ ಸೇವೆ, ಕೋಣಬಲಿಯಂಥವು ನಿಷೇಧಗೊಂಡಿರುವಾಗ ಮಡೆಸ್ನಾನದಂಥವು ಯಾಕೆ ಉಳಿಯಬೇಕೆಂಬುದರಲ್ಲಿ ಯಾವ ಅವಮಾನವೂ ಮಸೂದೆ ವಿರೋಧಿಗಳಿಗೆ ಇದ್ದಂತಿಲ್ಲ. ಜ್ಯೋತಿಷ, ವಾಸ್ತು ಮುಂತಾದವನ್ನಂತೂ ಪ್ರಗತಿಪರರಾಗಲಿ ಸರ್ಕಾರವಾಗಲಿ ಕೆದಕಲು ಹೋಗುತ್ತಿಲ್ಲ. ಅವೆಲ್ಲದರ ಹಿಂದೆ ಸನಾತನ ಭಾರತವೇ ಎದ್ದು ನಿಂತುಬಿಡುತ್ತದೆ.

‘ಗ್ರೀಕರು ಜ್ಯೋತಿಷ ಶಾಸ್ತ್ರವನ್ನು ಹಿಂದೂಗಳಿಗೆ ನೀಡಿದರೆ ಹಿಂದೂಗಳು ಖಗೋಳ ಶಾಸ್ತ್ರವನ್ನು ಅವರಿಗೆ ಕೊಟ್ಟರು’ ಎಂಬ ವಿವೇಕಾನಂದರ ಹೇಳಿಕೆಯಲ್ಲಿ, ವಿಜ್ಞಾನವನ್ನು ಮೌಢ್ಯಕ್ಕೆ ವಿನಿಮಯ ಮಾಡಿಕೊಂಡಿರುವ ಪ್ರಾಚೀನ ಹುನ್ನಾರಗಳಿವೆ. ಆ ರೀತಿ ಮೇಲುವರ್ಗದ ಸ್ವೀಕಾರ ಮಾರ್ಗವೇ ಇಂದಿನ ವ್ಯಾಪಾರ.

‘ಜ್ಯೋತಿಷ ಮುಂತಾದವನ್ನು ಹೇಳಿ ಉದರ ಪೋಷಣೆ ಮಾಡಿಕೊಳ್ಳುವವರ ಹತ್ತಿರ ಸಂಬಂಧವನ್ನು ಇಟ್ಟುಕೊಳ್ಳಕೂಡದು’ ಎಂಬ ಮಾತು ಭಗವಾನ್‌ ಬುದ್ಧನದು. ಈಗಿನದು ಕೇವಲ ಉದರ ಪೋಷಣೆಯಾಗಿ ಉಳಿದಿಲ್ಲ. ಮಾಧ್ಯಮ ದೃಶ್ಯಗಳೂ ಸೇರಿದಂತೆ ಅದರಿಂದ ದಂಧೆಯ ಭಯ ಸೃಷ್ಟಿಯಾಗಿದೆ. ಇದಕ್ಕೆಲ್ಲ ಚರ್ಚಿತ ನಿಷೇಧ ಮಸೂದೆಯಲ್ಲಿ ನಿರ್ಬಂಧವಿಲ್ಲದಿರುವುದರಿಂದ ಆ ಲಾಭದವರು ಭಯ ಪಡಬೇಕಾಗಿಲ್ಲ.

ಅಂದಹಾಗೆ  ಸಚಿವರಾಗಲಿ ಮುಖ್ಯಮಂತ್ರಿಯಾಗಲಿ ಪ್ರಗತಿಶೀಲ ನಡೆಗೆ ಬೆದರುವ ಅವಶ್ಯಕತೆಯೂ ಇಲ್ಲ. ಕುವೆಂಪು ರೀತಿಯಲ್ಲಿ ವೈಚಾರಿಕತೆಯನ್ನು ಸಮಾಜಕ್ಕೆ ಗುಡುಗಿನಂತೆ ಹೇಳುವ ಧೈರ್ಯದ ಅವಶ್ಯಕತೆ ಹೆಚ್ಚಾಗಿ ಬೇಕಾಗಿದೆ. ‘ಹಳೆಯ ಶಾಸ್ತ್ರ, ಬೂಸಲು ಧರ್ಮ, ಕೇಡಿ ಜಗದ್ಗುರು, ಸ್ವಾರ್ಥಶೀಲ ಆಚಾರ್ಯ ಇವರನ್ನೆಲ್ಲ ಮುಲಾಜಿಲ್ಲದೆ ಧಿಕ್ಕರಿಸುವಂತಾಗಬೇಕು’ ಎಂದು ಕುವೆಂಪು ನೀಡಿದ ಕರೆಗೆ ಕಿವಿ ನೀಡುವ ವಿಧಾನವು ಭಾರತ ಪ್ರಜಾಪ್ರಭುತ್ವವು ಸಂಕೋಲೆಗಳಿಂದ ಬಿಡಿಸಿಕೊಳ್ಳುವ ತಾಕತ್ತಿನದು.

ಇಂದಿಗೂ ದೇವಸ್ಥಾನಗಳಲ್ಲಿ, ಕುಡಿಯುವ ನೀರ ಬಾವಿಗಳಲ್ಲಿ, ಚೌರದ ಅಂಗಡಿಗಳಲ್ಲಿ ಸಮಾನತೆ ಬಂದಿಲ್ಲ. ಅಂದು ಮಹಾತ್ಮ ಗಾಂಧಿ ಪರಿಶಿಷ್ಟರಿಗೆ ಪ್ರವೇಶವಿಲ್ಲದ ಪುರಿ ಜಗನ್ನಾಥನ ಸನ್ನಿಧಿಯನ್ನೇ ಧಿಕ್ಕರಿಸಿದ್ದರು. ಅಂಬೇಡ್ಕರ್‌ ಅವರಂತೂ ಈ ಸನಾತನ ದೇವರ ಸಹವಾಸವೇ ಬೇಡವೆಂದು ಬುದ್ಧನ ಸನ್ನಿಧಿ ಬಯಸಿದರು. ಈ ನಡುವೆ ಸ್ವಾತಂತ್ರ್ಯ ಬಂದು ಏಳು ದಶಕಗಳಾಗುತ್ತಿವೆ, ಏನೂ ಬದಲಾಗಿಲ್ಲ. ಎಂಜಲೆಲೆ ಮೇಲೆ ಉರುಳಾಡಲು ಬಿಟ್ಟು ಹಿಂದೂ ಧರ್ಮದ ಔನ್ನತ್ಯವನ್ನು ಜಗದಗಲ ಸಾರಿ ಹೇಳುವವರಿದ್ದಾರೆ.

ರಾಹುಕಾಲದಲ್ಲಿ ಬಜೆಟ್‌ ಮಂಡಿಸಿದ, ಚಾಮರಾಜನಗರದ ಜನಕ್ಕೆ ಮರ್ಯಾದೆ ಉಳಿಸಿದ ಮುಖ್ಯಮಂತ್ರಿಗೆ ಬುದ್ಧನ– ಗಾಂಧಿಯ– ಅಂಬೇಡ್ಕರರ ಮಾರ್ಗ ತುಳಿಯಲು ಬೆದರಿಕೆ ಯಾಕೆ? ಜನ ಇವರೆಲ್ಲರನ್ನೂ ತಿರಸ್ಕರಿಸುವ ಭಾರತೀಯರಲ್ಲ. ಅದರ ಅರಿವು, ಚೊಕ್ಕಗೊಳಿಸಿದ ಗುಡಿ ಸುತ್ತುವ, ಉರುಳುವ ಹಂತಗಳನ್ನು ಪರೀಕ್ಷೆಗೆ ಒಡ್ಡಿಕೊಳ್ಳುತ್ತದೆ. ರಾಮಕೃಷ್ಣರನ್ನು, ವಿವೇಕಾನಂದರನ್ನು ಮೈಮೇಲೆ ಆಹ್ವಾನಿಸಿಕೊಳ್ಳುತ್ತದೆ.

ಮತಗಟ್ಟೆಯಿಂದ ಎದ್ದುಬರುವ ಭಾರತವು ಸ್ವಭಾವತಃ ಆಧ್ಯಾತ್ಮೀಕರಣಗೊಂಡ ಅನುಭಾವಿಗಳದು. ಅದರೊಳಗೆ ಬುದ್ಧನ, ಬಸವನ ಪರಂಪರೆಯ ಜ್ಞಾನಗಳಿರುತ್ತವೆ. ಉಪನಿಷತ್ತಿನ ಸ್ಪಂದನಗಳಿರುತ್ತವೆ. ಅವುಗಳನ್ನು ಮನುವಿನ ಹಗೇವುಗಳಿಂದ ಎತ್ತಿಕೊಳ್ಳುವುದೇ ಗಾಂಧಿ ಹೇಳಿದ ಪ್ರಜಾಪ್ರಭುತ್ವ. ಈ ಸೂಕ್ಷ್ಮಗಳನ್ನು ಆಳುವ ಪಕ್ಷ ನಗದೀಕರಿಸಿಕೊಳ್ಳಬೇಕು.

ಮೌಢ್ಯ ನಿಷೇಧವೆಂಬುದು ತನ್ನ ಮತ್ತು ತನ್ನ ಸಮಾಜದ ಆಹ್ವಾನಿತ ಆರೋಗ್ಯ. ಅರಿವಿನಿಂದ ಆಚೆ ನಿಲ್ಲಿಸುವುದು ರಾಜಕೀಯ ಮಾರುಕಟ್ಟೆಯ ಉದರ ಪೋಷಣೆಯ ಮಾರ್ಗ. ಶಾಸ್ತ್ರ, ಧರ್ಮ, ಗುರು, ಆಚಾರ್ಯರೆಲ್ಲರಿಗೂ ಕೂರಿಸಿ ಮಣೆ ಹಾಕುವುದು ಗೌರವದ ಸಮಾಜ ಕಾರ್ಯಗಳು ಸರಿ. ಅವು ಪರಂಪರೆಯ ವಿಜ್ಞಾನಕ್ಕೆ ಸಮೀಪದಲ್ಲಿರಬೇಕು. ದೇಶಕ್ಕೆ ಗೌರವ ತರುವ ವಿಧಾನಗಳಾಗಬೇಕು.

ಚರಿತ್ರೆ ಅನೇಕ ರೀತಿಯ ತುಳಿತಗಳನ್ನು ಕಾಪಾಡಿದೆ. ಅಂತಾದ್ದನ್ನು ಕಿತ್ತೊಗೆಯುವುದೇ ಗುಡಿ, ಚರ್ಚು, ಮಸೀದಿಗಳಾಚೆ ನಿಂತು ಮಾನವ ಜಾತಿ ಒಂದೇ ಎಂದು ಹೇಳುವ ಮಾರ್ಗ. ಈ ಒಂದಾಗುವ ಕ್ರಿಯೆಗೆ ಸ್ವಾರ್ಥ ಅಡ್ಡಿ ಬಂದರೆ ಅದೊಂದು ಮುಲಾಜಿಲ್ಲದೆ ಕಿತ್ತೊಗೆಯುವ ಕಾಯಕವಾಗಬೇಕು. ಮತ ನೀಡುವ ಪ್ರಭುವಿಗೆ ಹೊಟ್ಟೆಗೆ ಅನ್ನ, ಜಠರಕ್ಕೆ ಔಷಧಿ, ಕೈಗೊಂದಿಷ್ಟು ಕಾಂಚಾಣ ನೀಡುವುದಕ್ಕಿಂತ ಮೆದುಳಿಗೆ ಅನ್ನಾಂಗ ನೀಡುವ ರಾಜಕೀಯ ಚಿಂತಕರ ಅವಶ್ಯಕತೆಯ ಆದ್ಯತೆಯಿದೆ.

ಬುದ್ಧನೊಬ್ಬ ನಾಸ್ತಿಕ, ಭೌತ ವಿಜ್ಞಾನಿ, ಪ್ರಕೃತಿ ಸಮೀಪಿ. ಆತನೊಂದಿಗೆ ಒಂದಾಗುವುದೆಂದರೆ ಅದೊಂದು ಬದುಕಿನ ತತ್ವ. ನಾಸ್ತಿಕ ತತ್ವವೆಂಬುದು ದೈವ ವಿರೋಧಿ ಗುಣವಲ್ಲ. ಪ್ರಕೃತಿಯಲ್ಲಿ, ಮನುಷ್ಯರ ಹೃದಯಗಳಲ್ಲಿ, ಬಡವರ ಪಾದಗಳ ನಡಿಗೆಯಲ್ಲಿ ಹುಡುಕಿಕೊಳ್ಳುವ ಕಾಯಕದ ದೈವ. ಹಾಗೆ ದೊರಕಿಸಿಕೊಂಡ ಶಿವ– ಕೃಷ್ಣ– ರಾಮ– ರಹೀಮ– ಏಸುಗಳೆಲ್ಲರೂ ಬೇಕಾಗಿದ್ದಾರೆ. ಅವರಾರಲ್ಲೂ ಮೌಢ್ಯದ ಸುಳಿವಿಲ್ಲ. ಉಂಡ ಅನ್ನದ ಮೇಲೆ ಉರುಳುವ ಭಾರವೂ ಇಲ್ಲ.

ಆ ದೇವರು ಕಿರೀಟದಡಿಯಿಲ್ಲ, ಸಿಂಹಾಸನದ ಮೇಲಿಲ್ಲ, ಅಂಬಾರಿ ಮೇಲೂ ಇಲ್ಲ, ಕತ್ತೆತ್ತಿ ನೋಡಿದರೆ ಚಂದ್ರನ ರೂಪದಲ್ಲಿ; ಕಣ್ಣಿಗೆ ಕೈಹಿಡಿದು ನೋಡಿದರೆ ಸೂರ್ಯನ ಸ್ವರೂಪದಲ್ಲಿ ಸಮೀಪಕ್ಕೆ ಬಂದು ‘ತಥಾಸ್ತು’ ಎನ್ನುತ್ತಾನೆ. ಈ ತಿಳಿವಿನೊಳಗೆ ಮೌಢ್ಯವನ್ನು ತಿರಸ್ಕರಿಸುವ ಮನಸ್ಸುಗಳು ಬೇಕಾಗಿವೆ.

ಅದೇ ಸ್ವಾರ್ಥ ನಿರಾಕರಣೆಯ ದಾರಿ. ಇಂದು ಅಕ್ಷರವೆಂಬುದೇ ವಿದ್ಯೆ ಎಂಬ ಭ್ರಮೆಯದು. ಅಕ್ಷರಸ್ಥರೇ ಮೌಢ್ಯವೆಂಬುದನ್ನು ಜೇಬಿನೊಳಗೆ ಜೋಪಾನ ಮಾಡಿಕೊಂಡು ಅನಕ್ಷರಸ್ಥ ಸಮಾಜವನ್ನು ಸುಲಿಯುತ್ತಿದ್ದಾರೆ. ಇದೇ ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ಅವಮಾನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT