ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌನ ಮುರಿಯುವ ನೊಂದವರು

Last Updated 1 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಎಡಿನ್‌ಬರೋದ ೨೦೧೩ರ ನಾಟಕೋತ್ಸವದಲ್ಲಿ ಮಾನವೀಯ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ನಾಟಕವೆಂದು ಪ್ರತಿಷ್ಠಿತ ಪದಕವನ್ನು ಗಳಿಸಿದ ಮತ್ತು ಅತ್ಯುತ್ತಮ ಹೊಸ ನಾಟಕ ಪುರಸ್ಕಾರಕ್ಕೆ ಪಾತ್ರವಾದ ದಕ್ಷಿಣ ಆಫ್ರಿಕದ ಯೇಲ್ ಫಾರ್ಬರ್ ನಿರ್ದೇಶನದ ೯೦ ನಿಮಿಷದ ಇಂಗ್ಲಿಷ್ ಮತ್ತು ಅಲ್ಲಲ್ಲಿ ಹಿಂದಿ ಭಾಷೆ ಇರುವ ‘ನಿರ್ಭಯ’ ಪ್ರದರ್ಶಿತವಾಯಿತು.

೨೦೧೨ರ ಡಿಸೆಂಬರ್ ೧೬ರ ರಾತ್ರಿ ದೆಹಲಿಯ ಬಸ್‌ನಲ್ಲಿ  ೨೪ರ ಹರೆಯದ ವೈದ್ಯಕೀಯ ವಿದ್ಯಾರ್ಥಿನಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಸಾವು-–ಬದುಕಿನ ನಡುವೆ ನಡೆಸಿದ ಹೋರಾಟದ ವಿಷಯ ಸಮೂಹ ಮಾಧ್ಯಮಗಳ ಗಮನ ಸೆಳೆದ ಹಾಗೂ ಯುವತಿಯ ಸಾವಿನಲ್ಲಿ ಅಂತ್ಯವಾದ, ಸಾಮಾನ್ಯವಾಗಿ ಎಲ್ಲರಿಗೂ ಪರಿಚಿತವಾದ ಸಂಗತಿಯೇ ನಾಟಕದ ವಸ್ತು.

ಪುರಾತನ ಕಾಲದಿಂದಲೂ ಭೌಗೋಳಿಕ ಗಡಿಗಳನ್ನು ಮೀರಿ ಹೆಣ್ಣಿನ ಮೇಲೆ ಗಂಡಿನ ಲೈಂಗಿಕ ಶೋಷಣೆ ನಡೆಸುತ್ತಿರುವುದರ ಹಿನ್ನೆಲೆಯಲ್ಲಿ ಪ್ರಸ್ತುತ ಘಟನೆಯ ವಿವರಗಳ ಆಧಾರದ ಮೇಲೆ ನಿರ್ದೇಶಕಿ ವಿಶಿಷ್ಟ ಬಗೆಯಲ್ಲಿ ನಾಟಕವನ್ನು ರಚಿಸಿ, ಪ್ರಸ್ತುತ ಪಡಿಸಿದ್ದಾರೆ. ವಿಗೀಡಾದ ತರುಣಿಯ ನಿಜವಾದ ಹೆಸರಿಗೆ ಬದಲಾಗಿ ಸರ್ಕಾರ ಕೊಟ್ಟ ಹೆಸರು ‘ನಿರ್ಭಯ’. ನಿರ್ದೇಶಕಿ ಅದನ್ನು  ವೈಯಕ್ತಿಕತೆಯನ್ನು ದಾಟಿ ರೂಪಕವಾಗಿ ಹಲವು ವಯೋಮಾನದ ಮತ್ತು ಹಲವು ನಗರದ ಹೆಣ್ಣುಗಳಿಗೆ ಹಾಗೂ ಭಾರತದಿಂದಾಚೆಗೂ ಸಲ್ಲುವಂತೆ ಪರಿಕಲ್ಪಿಸಿದ್ದಾರೆ.

ಪಾತ್ರಗಳ ಕಲ್ಪನೆಯಲ್ಲಿ ಆಯಾ ಪಾತ್ರದ  ಅನುಭವವನ್ನು ಅಭಿವ್ಯಕ್ತಿಸಲು ಒಂದೊಂದೂ ಪ್ರತ್ಯೇಕವಾಗಿ ನಿವೇದಿಸುವ ಸ್ವಗತದ ಶೈಲಿಯನ್ನು ಅಳವಡಿಸಿದ್ದಾರೆ ಮತ್ತು ಇಡೀ ನಾಟಕದಲ್ಲಿ ಎಲ್ಲ ಬಗೆಯ ಗಂಡಸಿನ ಪಾತ್ರಗಳನ್ನು ಏಕವ್ಯಕ್ತಿಯೇ ನಿರ್ವಹಿಸುವಂತೆ ಯೋಜಿಸಿದ್ದಾರೆ. ನಿರ್ಭಯಳ ಮೇಲೆ ಅತ್ಯಾಚಾರವೆಸಗುವವರು ರಾಮ್‌ಸಿಂಗ್ ಸೇರಿ ಒಟ್ಟು ಆರು ಜನ ಗಂಡಸರಾದರೂ ನಾಟಕದಲ್ಲಿನ ಏಕವ್ಯಕ್ತಿಯ ಜೊತೆ ಉಳಿದ ಹೆಣ್ಣುಗಳೂ ಉದ್ದೇಶಿತ ಪ್ರಭಾವ ಉಂಟುಮಾಡುವ ದೃಷ್ಟಿಯಿಂದ ಗಂಡುಗಳಂತೆಯೇ ವರ್ತಿಸುವುದು ವಿಶೇಷ. 

ಇವೆಲ್ಲ ನಾಟಕದ ಕಲ್ಪನಾ ವಿಲಾಸಕ್ಕೆ ಸಂಬಂಧಪಟ್ಟವುಗಳಾದರೆ, ರಂಗ ಪ್ರಯೋಗದಲ್ಲಿ ಅವು ಮೈದೋರಿರುವುದು ಹೇಗೆಂದು ತಿಳಿಯಬೇಕಾಗುತ್ತದೆ. ದಾರುಣತೆಯನ್ನು ಬಿಂಬಿಸುವ ಕಪ್ಪು ಬಣ್ಣದ ಹಿನ್ನೆಲೆಯಲ್ಲಿ ಮೊದಲೇ ಹಬ್ಬಲು ಬಿಟ್ಟ ಹೊಗೆಯಿಂದ ಲೈಟಿಂಗ್‌ನಿಂದಾಗಿ ಕೆಲವು ಬಣ್ಣಗಳ ಬೆಳಕಲ್ಲಿ ಪ್ರೇಕ್ಷಕರ ಸಮೂಹದಿಂದಿಲೇ ಒಂದೊಂದೇ ಪಾತ್ರ ರಂಗಸ್ಥಳ ಪ್ರವೇಶ ಮಾಡುವುದರ ಮೂಲಕ ನಾಟಕ ನೆಲೆ ಸಾರ್ವಜನಿಕ ಎಂದು ನಿರೂಪಿಸುತ್ತದೆ. ‘ನಿರ್ಭಯ’ಳೊಬ್ಬಳನ್ನು ಹೊರತು ಪಡಿಸಿದರೆ ಕಪ್ಪು ಬಣ್ಣದುಡುಗೆಯ ಉಳಿದೆಲ್ಲ ಪಾತ್ರಗಳು ಅದರ ಉದ್ವೇಗಭರಿತ ಧ್ವನಿಯನ್ನು ಮೂರ್ತರೂಪಗೊಳಿಸಲು ನಾಟಕದ ಅವಧಿಯುದ್ದಕ್ಕೂ ರಂಗಸ್ಥಳದ ಮೇಲೆ ಕೊನೆಯಿಂದ ಕೊನೆಗೆ ಅಡ್ಡಾದಿಡ್ಡಿ ಚಲಿಸುತ್ತಲೇ ಇರುತ್ತವೆ.

ಒಂದೊಂದು ಹೆಣ್ಣು ಪಾತ್ರವೂ ತಾನು ಲೈಂಗಿಕ ಶೋಷಣೆಗೆ ಗುರಿಯಾದದ್ದನ್ನು ಸೂಕ್ತ ಧ್ವನಿ ಏರಿಳಿತ,  ಆಂಗಿಕ ಅಭಿನಯ, ಇತರ ವ್ಯಕ್ತಿಗಳ ಸಹಕಾರ ಮತ್ತು ರಂಗ ಪರಿಕರಗಳನ್ನು ಉಪಯೋಗಿಸಿಕೊಂಡು ಮನದೊಳಗನ್ನು ವ್ಯಕ್ತಪಡಿಸುವುದರಲ್ಲಿ ಯಶಸ್ವಿಯಾಗುತ್ತದೆ. ಇದಕ್ಕೆ ಭಾವ ತೀವ್ರತೆಯ ಘಟ್ಟದಲ್ಲಿ ವಾದ್ಯಗಳ ಬಳಕೆಯಿಲ್ಲದ ಸೂಕ್ತ ಸಂಗೀತದ ಆಲಾಪನೆಯೂ ನೆರವು ನೀಡಿದೆ. ಇತರರಲ್ಲದೆ ಮನೆಯವರ ದಿವ್ಯ ನಿರ್ಲಕ್ಷ್ಯದ ವಾತಾವರಣದಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಸುಮ್ಮನೆ ಮೌನ ತಾಳಿದ ಆರು ವರ್ಷ, ಒಂಬತ್ತು  ವರ್ಷದ ಹೆಣ್ಣು ಹಸುಳೆಗಳ ಆಕ್ರಂದನಗಳು ಮನ ಮಿಡಿಯುವಂತಿವೆ.

ಅಲ್ಲದೆ ಗೃಹಿಣಿ, ಕಲಿತು ಅಮೆರಿಕದಲ್ಲಿರುವವಳು ಕೂಡ ಇದೇ ಬಗೆಯ ಕ್ರೂರ ಅನುಭವಕ್ಕೆ ಸಿಲುಕಬೇಕಾಗುತ್ತದೆ. ಹೆಣ್ಣುಗಳು ಬಸ್‌ನಲ್ಲಿ ಲೈಂಗಿಕ ಶೋಷಣೆಗೆ ಒಳಗಾಗುವುದನ್ನು ಮನಗಾಣಿಸುತ್ತಲೇ ‘ನಿರ್ಭಯ’ಳಿಗೆ ಸಂಬಂಧಿಸಿದಂತೆ ಜರುಗುವುದನ್ನು ಮತ್ತು ಸಾವಿನ ನಂತರ ಅವಳ ಶವ ಸಾಗಣೆಯನ್ನು ಕುರಿತಂತೆ ಅಗತ್ಯಕ್ಕಿಂತ ಹೆಚ್ಚಿನ ಅವಧಿಯಲ್ಲಿ ನಿರೂಪಿಸಿರುವುದಾಗಿ ತೋರುತ್ತದೆ. ಅಂತ್ಯದಲ್ಲಿ ಅತ್ಯಾಚಾರಕ್ಕೆ ಒಳಗಾದ ಹೆಣ್ಣು ಮೌನ ಮುರಿಯವುದರ ಅಗತ್ಯಕ್ಕೆ ಎಲ್ಲರ ಬೆಂಬಲ ವ್ಯಕ್ತವಾಗುತ್ತದೆ.    

ನಟವರ್ಗದ (ಪೂರ್ಣಾ ಜಗನ್ನಾಥನ್, ಪ್ರಿಯಾಂಕಾ ಬೋಸ್, ಅಂಕುರ್ ವಿಕಲ್ ಮತ್ತಿತರರು) ಸಮರ್ಥ ಅಭಿನಯದಿಂದ ಯಶಸ್ವಿ ಎನಿಸುವ ಪ್ರದರ್ಶನದ ನಡುವೆ ಎಂಥವರಿಗೂ ಅದರಲ್ಲಿನ ಕೆಲವು ಮಿತಿಗಳು ಹೊಳೆದರೆ ಆಶ್ಚರ್ಯವಿಲ್ಲ. ಉಳಿದ ಪಾತ್ರಗಳಿಗಿರುವಂತೆ ‘ನಿರ್ಭಯ’ಳಿಗೆ ವೇದನೆ ಬಿಟ್ಟರೆ ಸ್ವಗತದ ಬೆಂಬಲವಿಲ್ಲ. ವಸ್ತುವಿನ ಸಮಗ್ರತೆಯ ಕೊರತೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ‘ನಿರ್ಭಯ’ಳ
ತಂದೆ-–ತಾಯಿಯ ಸ್ಥಿತಿಯ ಬಗ್ಗೆ ಪ್ರಸ್ತಾಪವೇ ಇಲ್ಲದಿರುವುದು ಎದ್ದುಕಾಣುವ ಕೊರತೆ.
–-ಎ.ಎನ್. ಪ್ರಸನ್ನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT