ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಲ್ಯ ವ್ಯವಸ್ಥೆಯೇ ಅಸಂಗತವಾಗುವ ವಾಸ್ತವ

Last Updated 23 ಮೇ 2015, 19:30 IST
ಅಕ್ಷರ ಗಾತ್ರ

ನಾ.ಮೊಗಸಾಲೆ ಅವರ ಹೊಸ ಕಾದಂಬರಿ ‘ಮುಖಾಂತರ’. ‘ಉಲ್ಲಂಘನೆ’ ಇವರ ಇನ್ನೊಂದು ಮಹಾ ಕಾದಂಬರಿ. ಮಹಾ ಕಾದಂಬರಿ ಪ್ರಕಾರದ ಬಗ್ಗೆ ಮೊಗಸಾಲೆ ಅವರಿಗೆ ಶ್ರದ್ಧೆ -ಆಸಕ್ತಿಗಳೆರಡೂ ಇವೆ. ಮಹಾ ಕಾದಂಬರಿಗಳ ಮೂಲ ಲಕ್ಷಣವೆಂದರೆ, ಹಲವು ಕೇಂದ್ರಗಳ ಸಾಂಗತ್ಯ. ಅನೇಕಗಳನ್ನು ಏಕತ್ರಗೊಳಿಸುವ ಗುಪ್ತಗಾಮಿನಿ ಸೂತ್ರವೊಂದು ಇರದಿದ್ದರೆ, ಮಹಾ ಕಾದಂಬರಿಗಳು ಕಥನಗಳ ಗುಚ್ಛಗಳಾಗಿ ಬಿಡುತ್ತವೆ.

‘ಉಲ್ಲಂಘನೆ’ ಮತ್ತು ‘ಮುಖಾಂತರ’ ಎರಡರಲ್ಲಿಯೂ ಮೊಗಸಾಲೆಯವರಿಗೆ ಈ ಸೂತ್ರವನ್ನು ತುಂಡಾಗದಂತೆ ಉಳಿಸಿಕೊಳ್ಳುವುದು ಸಾಧ್ಯವಾಗಿದೆ. ಬರಹಗಾರರಿಗೆ ತಮ್ಮ ನಿಜವಾದ ಮಾಧ್ಯಮವನ್ನು ಕಂಡುಕೊಳ್ಳುವುದೇ ನಿಜವಾದ ಸವಾಲು, ಅದನ್ನು ಅವರು ಸರಿಯಾಗಿ ಗುರುತಿಸಿಕೊಂಡರೆ ಅವರು ಅರ್ಧ ಯಶಸ್ಸನ್ನು ಪಡೆದಂತೆ ಎನ್ನುವುದು ಹಳೆಯ ನಂಬಿಕೆಯೇ ಇದ್ದೀತು, ಆದರೆ ಅದು ಸುಳ್ಳು ಎನ್ನಲು ನಮಗೆ ಆಧಾರಗಳಿಲ್ಲ.

ಮೊಗಸಾಲೆ ಅವರ ಮಟ್ಟಿಗೇ ಇದನ್ನು ಅನ್ವಯಿಸಿ ನೋಡುವ ಪ್ರಯತ್ನವನ್ನೂ ಮಾಡಬಹುದು! ನನ್ನ ಪ್ರಕಾರ, ಗದ್ಯವೇ ಮೊಗಸಾಲೆಯವರ ನಿಜ ಪ್ರಕಾರ. ಅವರ ಕಥಾ ಸಾಹಿತ್ಯವನ್ನೂ ಗಮನದಲ್ಲಿಟ್ಟುಕೊಂಡು ಈ ಮಾತುಗಳನ್ನು ನಾನು ಹೇಳುತ್ತಿದ್ದೇನೆ. ಕಥೆಗಳಲ್ಲಿ ಮೊಗಸಾಲೆಯವರು ಕಟ್ಟಿಕೊಂಡಿರುವ ‘ಸೀತಾಪುರ’ ಒಂದು ಕಾಲ್ಪನಿಕ ಊರು ನಿಜ. ಅದು ಒಂದು ರೂಪಕವೂ ಹೌದು.

ಆದರೆ ತನ್ನ ವಾಸ್ತವಿಕ ವಿವರಗಳಲ್ಲಿ ಅದು ಪಡೆದಿರುವ ಪ್ರಾತಿನಿಧಿಕತೆಯು ಅವರ ರಾಜಕೀಯ ಮತ್ತು ಸಾಮಾಜಿಕ ನಿಲುವುಗಳ ಸಮಕಾಲೀನತೆ ಮತ್ತು ಮಹತ್ವವನ್ನು ಹೇಳುತ್ತದೆ. ಗದ್ಯವು ಸಾಮಾನ್ಯವಾಗಿ ಪಡೆಯುವ ಸಾಧಾರಣೀಕರಣದ ನಿರೂಪಣಾ ಶಕ್ತಿ ಮತ್ತು ಸಾಧ್ಯತೆಯನ್ನು ಶಕ್ತವಾಗಿ ದುಡಿಸಿಕೊಂಡವರಲ್ಲಿ ಮೊಗಸಾಲೆಯವರೂ ಒಬ್ಬರು.

ಎಂದರೆ ಸಾಮಾಜಿಕ ಶೋಧವು ಮೊಗಸಾಲೆಯವರ ಕಥೆಗಳು ಮತ್ತು ಕಾದಂಬರಿಗಳ ಮುಖ್ಯ ಕೇಂದ್ರಗಳಲ್ಲಿ ಒಂದು. ಅವರ ‘ಉಲ್ಲಂಘನೆ’ ಕಾದಂಬರಿಯಲ್ಲಿಯೂ ಇಂಥ ಪ್ರಯತ್ನವಿದೆ. ಗಾಂಧಿಯನ್ನು, ಗಾಂಧಿಯ ತಾತ್ವಿಕತೆಗಳನ್ನು ಸಾಮಾನ್ಯರ ನಿಕಷಕ್ಕೆ ಒಡ್ಡುತ್ತಲೇ ಅದಕ್ಕೆ ಎದುರಾಗಿ ಸಾಮಾಜಿಕ ವಾಸ್ತವಗಳನ್ನು ಇಡುವ ಪ್ರಯತ್ನವನ್ನು ಅಲ್ಲಿ ಮಾಡಲಾಗಿದೆ. ಆಶಯಗಳು ಮತ್ತು ಆಕೃತಿಗಳು ಪರಸ್ಪರ ಎದುರಾಗುವ ಕುತೂಹಲಕಾರಿ ವಿನ್ಯಾಸವೊಂದು ‘ಉಲ್ಲಂಘನೆ’ಯಲ್ಲಿದೆ.

‘ಮುಖಾಂತರ’ ಕಾದಂಬರಿಯಲ್ಲಿ ಮೊಗಸಾಲೆಯವರು ಇನ್ನೊಂದು ದಿಕ್ಕಿನಿಂದ ಈ ಪ್ರಯಾಣದಲ್ಲಿ ತೊಡಗಿರುವಂತೆ ಕಾಣಿಸುತ್ತದೆ. ವ್ಯಕ್ತಿ-ಕುಟುಂಬ-ಸಮುದಾಯಗಳ ಭದ್ರ ಹೆಣೆಯುವಿಕೆಯನ್ನು ಆತ್ಯಂತಿಕವಾದ ಮಾನವೀಯ ನೆಲೆಯಲ್ಲಿ ನೋಡುವ ಮಹತ್ವಾಕಾಂಕ್ಷೆಯ ಪ್ರಯತ್ನ ಇಲ್ಲಿದೆ.

ಒಂದು ಬೀಸಿನಲ್ಲಿ ಈ ಕಾದಂಬರಿಯನ್ನು ಓದಿದಾಗ, ಅದೆಷ್ಟೋ ನಂಬಿಕೆ ಮತ್ತು ಗುರಿಗಳಿಂದ ಕಟ್ಟಲಾಗಿರುವ ಮೌಲ್ಯವ್ಯವಸ್ಥೆಯ ಬುಡಗಳೇ ಎಷ್ಟು ಸಡಿಲ, ಕೃತಕ ಎನ್ನುವುದನ್ನು ಹೇಳುತ್ತಲೇ ‘ಮೊದಲು ಮಾನವನಾಗುವುದು’ ಎಷ್ಟು ದೊಡ್ಡ ಸವಾಲು ಎನ್ನುವ ಪ್ರಶ್ನೆಯನ್ನೂ ಇದು ಮೈಮೇಲೆ ಹಾಕಿಕೊಂಡಿರುವುದು ಗೊತ್ತಾಗುತ್ತದೆ.

ಮನುಷ್ಯರ ಹಾಡು-ಪಾಡುಗಳನ್ನು ಸಾಮಾಜಿಕನ ಚಿಕಿತ್ಸಕ ದೃಷ್ಟಿಕೋನದಲ್ಲೂ ಅಪ್ಪಟ ಮನುಷ್ಯನ ಆರ್ದ್ರತೆಯಲ್ಲೂ ಅರ್ಥ ಮಾಡಿಕೊಳ್ಳಲು ಮತ್ತು ಒಳಗೊಳ್ಳಲು ಈ ಕಾದಂಬರಿ ಹವಣಿಸುತ್ತದೆ. ಈ ಕಾದಂಬರಿ ನಮ್ಮನ್ನು ಸೆಳೆಯುವುದು ಮುಖ್ಯವಾಗಿ ಈ ಜೀವಪ್ರೀತಿಯ ಕಾರಣಕ್ಕಾಗಿ.

ಪ್ರಭುತ್ವ, ಜಾತಿವ್ಯವಸ್ಥೆ, ಬಡತನದ ಅಸಹಾಯಕತೆ, ದುರ್ದಮ್ಯವಾದ ಬದುಕಿನ ಆಮಿಷಗಳು ಈ ಎಲ್ಲವೂ ಸೇರಿ ಮನುಷ್ಯನ ಬದುಕು ನೋಡ ನೋಡುತ್ತಿದ್ದಂತೆಯೇ ಕೈಜಾರಿ ಹೋಗುವುದನ್ನು, ಅದನ್ನು ತಡೆಯುವ ವ್ಯರ್ಥ ಪ್ರಯತ್ನಗಳನ್ನು ನಿರುದ್ವಿಗ್ನವಾಗಿ ಗುರುತಿಸುತ್ತಲೇ ಈ ಕಾದಂಬರಿ ಬದುಕು ಮತ್ತು ಮನುಷ್ಯ ಸಂಬಂಧವನ್ನು ಕುರಿತ ಪರಿಪ್ರೇಕ್ಷ್ಯವೊಂದನ್ನು ಹೆಣೆಯುತ್ತಾ ಹೋಗುತ್ತದೆ.

ವಿಲಕ್ಷಣವಾಗಿ, ಅಸಂಗತವಾಗಿ ಕಾಣಿಸುವ ಸಂಗತಿಗಳು ಮತ್ತು ಬೆಳವಣಿಗೆಗಳನ್ನು ಬದುಕಿನ ಸಹಜ ಗತಿ ಎನ್ನುವ ದೃಷ್ಟಿಕೋನದಲ್ಲಿ ನಿರೂಪಿಸುತ್ತಾ ಹೋಗುವುದೇ ಈ ಕಾದಂಬರಿಯ ಹೆಗ್ಗಳಿಕೆ.

ಅನಿರೀಕ್ಷಿತವಾಗಿ, ಯಾವ ಉದ್ದೇಶಗಳೂ ಇಲ್ಲದೆ ವ್ಯಕ್ತಿ ಘಟನೆಯೊಂದಕ್ಕೆ ಪ್ರತಿಕ್ರಿಯಿಸುವ, ಅದಕ್ಕೆ ಒಳಗಾಗುವ ಸನ್ನಿವೇಶಗಳೇ ಅವರ ಬದುಕಿನ ಗತಿಯನ್ನು ಸಂಪೂರ್ಣವಾಗಿ ಬದಲಿಸುವ ಹಲವು ಸಂದರ್ಭಗಳು ಈ ಕಾದಂಬರಿಯಲ್ಲಿವೆ. ತಿಳಿದು ನೋಡಿದರೆ ಎಲ್ಲರ ಬದುಕಿನಲ್ಲೂ ಇಂಥ ಒಂದಲ್ಲ ಅನೇಕ ಸಂಗತಿಗಳು ಇದ್ದೇ ಇರುವ, ಅವು ಬದುಕಿನ ದಾರಿಯನ್ನೇ ತಿರುವು ಮುರುವಾಗಿಸಿರುವ ಸಾಧ್ಯತೆಯನ್ನು ಮರಳಿ ನೋಡುವ ಹುಕಿ ಹುಟ್ಟಿಸುವಷ್ಟು ತೀವ್ರವಾಗಿ ಈ ಕಾದಂಬರಿ ಕಟ್ಟಿಕೊಡುತ್ತದೆ.

ಬಡತನದ್ದು ಎಂದೇ ಹೇಳಬಹುದಾದ ಸ್ಥಿತಿಯಲ್ಲಿದ್ದವರು ತಿರುಮಲೇಶ್ವರಭಟ್ಟರು. ಭೂಮಿಯನ್ನು ಕುರಿತಾದ ಅರ್ಜಿಗಳನ್ನು ತೀರ್ಮಾನಿಸಲು ಅಲ್ಲಿನ ಶಿರಸ್ತೇದಾರು, ಆ ಹಳ್ಳಿಗೇ ಭೇಟಿ ನೀಡಬೇಕಾದ ಸನ್ನಿವೇಶದಲ್ಲಿ, ‘ಬ್ರಾಹ್ಮಣ ಭೋಜನ’ಕ್ಕೆಂದು ಇವರ ಮನೆಗೆ ಬಂದಾಗ, ಅವರ ಅಪಾನವಾಯುವಿನ ಹೊಣೆಯನ್ನು ತಿರುಮಲೇಶ್ವರಭಟ್ಟರು ಬಡತನಕ್ಕೆ ಸಹಜವೂ ಅನಿವಾರ್ಯವೂ ಆದ ದೈನ್ಯದಲ್ಲಿ ಯಾರ ಒತ್ತಾಯವೂ, ಸೂಚನೆಯೂ ಇಲ್ಲದೆ ಹೊರುತ್ತಾರೆ.

ಇದನ್ನು ಅವರು ಅತಿಥೇಯನ ಕರ್ತವ್ಯಪ್ರಜ್ಞೆಯಲ್ಲಿ ಮಾಡುತ್ತಾರೋ, ಬಡತನ ಅವರನ್ನು ಇದಕ್ಕೆ ಅಪ್ರಜ್ಞಾಪೂರ್ವಕವಾಗಿ ನೂಕುತ್ತದೋ ಶಿರಸ್ತೇದಾರನ ಅಧಿಕಾರದ ಭಯ ಒಳಗೆ ಒತಾಯಿಸುತ್ತದೋ... ಬಗೆ ಹರಿಯುವುದೇ ಇಲ್ಲ ಈ ಪ್ರಶ್ನೆ ಅಂದುಕೊಂಡರೆ, ಆ ಶಿರಸ್ತೇದಾರ, ಆ ಬಡ ಬ್ರಾಹ್ಮಣ ನಡೆದುಕೊಳ್ಳಬೇಕಾಗಿದ್ದೇ ಹೀಗೆ ಎನ್ನುವ ಧರ್ತಿಯಲ್ಲಿ, ‘ಹೋಗಲಿ ಬಿಡಿ’ ಎನ್ನುವ ರಿಯಾಯತಿ ತೋರಿಸುತ್ತಾನೆ.

ಇದಕ್ಕೆ ಪ್ರತಿಯಾಗಿ ಎಂಬಂತೆ ಈತನಿಗೆ, ಒಂದಷ್ಟು ಜಮೀನನ್ನು ಕೊಡುವ ಔದಾರ್ಯ ತೋರಿಸುವ ಶಿರಸ್ತೇದಾರ ಇದನ್ನು ಔದಾರ್ಯದ ಉರುಲನ್ನಾಗಿಯೂ ಮುಂದುವರಿಸುತ್ತಾನೆ, ಮಕ್ಕಳಿಲ್ಲದ ಈ ದಂಪತಿಗಳಿಗೆ ತನಗೆ ಭಾರವಾಗಿದ್ದ ತನ್ನ ಮನೆಯಲ್ಲಿದ್ದ ಮಗುವನ್ನು ದತ್ತು ತೆಗೆದುಕೊಳ್ಳುವ ಆಮಿಷವನ್ನು ಒಡ್ಡುವ ಮೂಲಕ. ಮಗುವಿನ ಜೊತೆಗೆ ತಾಯಿಯೂ ಬಳುವಳಿಯಾಗಿ ಇವರ ಮನೆಗೆ ಬರುತ್ತಾಳೆ.

ಮುಂದಿನ ಬೆಳವಣಿಗೆಗಳು ನಾವು ಸಹಜವಾಗಿ ಊಹಿಸಬಲ್ಲಂತವು. ತಿರುಮಲೇಶ್ವರಭಟ್ಟರಿಗೆ ಆ ಮಗುವಿನ ತಾಯಿಯ ಜೊತೆ ಬೆಳೆಯುವ ಸಂಬಂಧ, ಅದರಿಂದ ಹುಟ್ಟುವ ಮಗು... ಆದರೆ ಈ ಘಟ್ಟದಲ್ಲಿ ಕಾದಂಬರಿ ಮನುಷ್ಯ ಸಂಬಂಧಗಳ ಇನ್ನೊಂದೇ ಮಗ್ಗುಲನ್ನು ತೆರೆಯುತ್ತದೆ. ತಿರುಮಲೇಶ್ವರಭಟ್ಟರ ಹೆಂಡತಿ ಪಾರೋತಿ ಇದನ್ನು ಒಪ್ಪಿಕೊಳ್ಳುವ ಬಗೆ.

ಒಳಗೆ ಇದು ವಿದ್ರೋಹ ಎನ್ನುವ ಭಾವವಿದ್ದೂ ಆ ಇನ್ನೊಂದು ಹೆಣ್ಣನ್ನು, ತನ್ನ ಬದುಕಿನ ಈ ತಿರುವನ್ನು ತನ್ನದಾಗಿಸಿಕೊಳ್ಳುವ ಕ್ರಮದಲ್ಲಿಯೇ ಅವಳು ಹೆಣ್ಣಿನ ಒಳಗೊಳ್ಳುವ ಮನೋವಿನ್ಯಾಸವನ್ನು ಪ್ರತಿನಿಧಿಸುತ್ತಾಳೆ. ಹೆಣ್ಣನ್ನು ಕುರಿತಾದ ಎಲ್ಲ ಸ್ಥಾಪಿತ ಚಿತ್ರಗಳನ್ನು ಬೀಸುವ ಗಾಳಿಯಷ್ಟು ಸಹಜತೆಯಲ್ಲಿ ಪಾರೋತಿ ಮುರಿಯುತ್ತಾಳೆ.

ಹೀಗೆನ್ನುವಾಗ ಇವಳನ್ನು ಕಾದಂಬರಿಕಾರರು ಆದರ್ಶ ಹೆಣ್ಣು ಎನ್ನುವ ಮಹತ್ವಾಕಾಂಕ್ಷೆಯ ಲ್ಲಾಗಲೀ ಕೃತಕತೆಯಲ್ಲಾಗಲೀ ಚಿತ್ರಿಸಿಲ್ಲ ಎನ್ನುವುದೂ ಅಷ್ಟೇ ಮುಖ್ಯ. ಹೆಣ್ಣು ಇರುವುದೇ ಹೀಗೇನೋ ಎನ್ನುವ ನಿಲುವಿನಂತೆ ಇದು ಕಾಣುತ್ತದೆ. (‘ಮರಳಿ ಮಣ್ಣಿಗೆ’ ಕಾದಂಬರಿಯ ಪಾರೋತಿ ನೆನಪಾಗುವುದು ಸುಮ್ಮನೆ ಇರಬೇಕು!).

ಈ ಅಂಶವನ್ನೇ ಇನ್ನೊಂದು ದಿಕ್ಕಿನಿಂದ ನೋಡುವುದಾದರೆ, ಆಳದಲ್ಲಿ ಜಾತಿಯ ಪ್ರಶ್ನೆಯನ್ನೂ ಅದರ ಅಸಂಗತತೆ ಯನ್ನೂ ಈ ಕಾದಂಬರಿ ಎತ್ತುತ್ತಿದೆ. ಹುಟ್ಟಿನ ಸಹಜತೆಯನ್ನೂ ಜಾತಿಯ ಅಸಹಜತೆಯನ್ನೂ ವೈದೃಶೀ ನೆಲೆಯಲ್ಲಿ ಇಡುವ ಮೂಲಕ ಒಳಗೇ ಎಲ್ಲರಲ್ಲೂ ಇರುವ, ಕಾಡುವ ಸತ್ಯಗಳನ್ನು ಒಪ್ಪಿಕೊಳ್ಳಲು ನಾವೇ ಸೃಷ್ಟಿಸಿಕೊಂಡಿರುವ ಅಡ್ಡಿಗಳನ್ನೂ ಈ ಕಾದಂಬರಿ ಧ್ವನಿಸುತ್ತದೆ.

ನಮ್ಮ ಪ್ರಜ್ಞೆ ಮತ್ತು ಪರಿಸರವನ್ನು ಕುರಿತ ಇಂಥ ಮೂಲಭೂತ ಸಂಗತಿಗಳನ್ನು ಎದುರಾಗುವ ಧೀರತೆಯಿಂದಲೇ ಈ ಕೃತಿ ಮುಖ್ಯವಾಗುತ್ತದೆ. ಹಲವು ಬಾರಿ ಪಾತ್ರಗಳು ಕಪ್ಪು ಬಿಳುಪಿನ ಅಂಚಿಗೆ ಸರಿಯುತ್ತಿವೆ, ತೆಳುವಾಗುತ್ತಿವೆ, ಅನಗತ್ಯ ವಿವರಗಳು ಸರಾಗ ಓದಿಗೆ ಕಿರಿಕಿರಿ ಉಂಟು ಮಾಡುತ್ತವೆ ಎನ್ನುವುದು ನಿಜ. ಆದರೆ ಮೂಲಭಿತ್ತಿ ನಮ್ಮನ್ನು ಗಾಢವಾಗಿ ಆವರಿಸುತ್ತದೆ ಎನ್ನುವುದೂ ಅಷ್ಟೇ ನಿಜ.

ಈ ಒಂದೆರಡು ಪ್ರಸಂಗಗಳನ್ನು ಪ್ರಸ್ತಾಪಿಸಿದ್ದು ಕಾದಂಬರಿಯ ಧಾಟಿ ಮತ್ತು ನಡೆಗಳನ್ನು ಪರಿಚಯಿಸಲು. ಆರಂಭದಲ್ಲಿ ಸಾಮಾಜಿಕ ಶೋಧ ಈ ಕಾದಂಬರಿಯ ಕೇಂದ್ರಗಳಲ್ಲಿ ಒಂದು ಎಂದು ಹೇಳಿದೆ. ವ್ಯಕ್ತಿಯ ಬದುಕಿನಲ್ಲಿ ವೈಯಕ್ತಿಕವಾದದ್ದೆಷ್ಟು ಸಾಮಾಜಿಕವಾದದ್ದೆಷ್ಟು ಎನ್ನುವ ಪ್ರಶ್ನೆ ಈ ಕಾದಂಬರಿಯುದ್ದಕ್ಕೂ ಅನುರಣಿತವಾಗಿದೆ.

ಪ್ರಭುತ್ವ, ವ್ಯಕ್ತಿ ಮತ್ತು ಸಮುದಾಯದ ಒಳ ಹೆಣಿಗೆಯನ್ನು ಬಿಡಿಸಿ ಬೇರೆ ಬೇರೆ ಮಾಡಲು ಸಾಧ್ಯವಿಲ್ಲ ಎನ್ನುವುದ ರೊಂದಿಗೇ ಒಂದು ಇನ್ನೊಂದನ್ನು ಆಕ್ರಮಿಸುತ್ತಾ ಹೋಗುವ ಪರಿ ವ್ಯಕ್ತಿಯ ಆಯ್ಕೆಯ ಸ್ವಾತಂತ್ರ್ಯ ವನ್ನೇ ಮೊಟಕು ಮಾಡಿಬಿಡುವ ಆತಂಕವನ್ನು ಇಲ್ಲಿಯ ಎಲ್ಲ ಮುಖ್ಯ ಪಾತ್ರಗಳೂ ತಲ್ಲಣದಿಂದಲೇ ಎದುರಿಸುತ್ತವೆ.

ಈ ಹೋಗುತ್ತ ಕೊಯ್ಯುವ ಬರುತ್ತ ಕೊಯ್ಯುವ ಸನ್ನಿವೇಶಗಳಲ್ಲಿ ಮನುಷ್ಯ ಮನುಷ್ಯತ್ವವನ್ನು ಉಳಿಸಿಕೊಳ್ಳುವುದೇ ಅದೆಷ್ಟು ಆತ್ಯಂತಿಕವಾದ ಸವಾಲು ಎನ್ನುವ ಅರಿವಿನೆಡೆಗೆ ಈ ಕಾದಂಬರಿ ಸಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT