ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಸ್ ಬಿಟ್ಟು ಮೊಲ ಹಿಡಿದಾತ

Last Updated 15 ಜನವರಿ 2014, 19:30 IST
ಅಕ್ಷರ ಗಾತ್ರ

ಹು­ಟ್ಟಿದ್ದು ಹಳ್ಳಿಯಲ್ಲಿ. ಓದಿದ್ದು ಕಂಪ್ಯೂಟರ್ ಸೈನ್ಸ್. ರಾಜಧಾನಿಯಲ್ಲಿ ಸಾಫ್ಟ್‌ವೇರ್ ಉದ್ದಿಮೆಯಲ್ಲಿ ಉದ್ಯೋಗ. ಕೈತುಂಬಾ ಸಂಬಳ. ಆದರೂ ಅತೃಪ್ತಿ. ಇದು ಹೆಚ್ಚು ಸಂಪಾದನೆಯ ಹಪಹಪಿಕೆಯಲ್ಲ. ಅರ್ಥಪೂರ್ಣವಾಗಿ ದುಡಿಯುವ ತುಡಿತ. ಅದಕ್ಕಾಗಿ ಇಪ್ಪತ್ತಾರರ ಹರೆಯದ ಎ.ಸಿ. ಸುನಿಲ್ ಎಂಬ ಈ ‘ತಾಂತ್ರಿಕ’ ಮೌಸ್ ಬಿಟ್ಟು ಮೊಲ ಹಿಡಿಯಲು ತೀರ್ಮಾನಿಸಿದರು.

ಈಗ ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿಯ ಕಾರೇಹಳ್ಳಿಯಲ್ಲಿ ‘ಎಸಿಎಸ್‌ ರ‍್ಯಾಬಿಟ್‌ ಫಾರ್ಮ್‌’ ಹಾಗೂ ವೈಜ್ಞಾನಿಕ ಹಿನ್ನೆಲೆಯ ‘ಬ್ರೀಡಿಂಗ್ ಸೆಂಟರ್‌’ ಇದೆ. ಮೂರು ವರ್ಷದ ಹಿಂದೆ ಮೊಲ ಹಿಡಿಯಲು ಹೊರಟ ಸುನಿಲ್‌ಗೆ ಮೌಸ್ ಹಿಡಿಯುವುದಕ್ಕಿಂತ ಹೆಚ್ಚಿನ ಸಂತೋಷ ದೊರೆಯುತ್ತಿದೆ. ಕೋಡಿಂಗ್, ಡಿಬಗ್ಗಿಂಗ್ ಎಂದುಕೊಂಡು ಮನೆಗೂ ಕಚೇರಿಗೂ ಸೀಮಿತನಾಗಿದ್ದ ಯುವಕನನ್ನು ಈಗ ಇಡೀ ಸಮಾಜ ಗುರುತಿಸುತ್ತಿದೆ.

ಸುನಿಲ್ ಅವರ ಮೊಲ ಸಾಕಣೆ ಕೇಂದ್ರಕ್ಕೆ ಇದುವರೆಗೂ ಸಾವಿರಕ್ಕೂ ಹೆಚ್ಚು ಜನ ಭೇಟಿ ನೀಡಿ ತಮ್ಮ ಸಾಧ್ಯತೆಗಳನ್ನು ಅರಿತುಕೊಂಡಿದ್ದಾರೆ. ಐವತ್ತಕ್ಕೂ ಹೆಚ್ಚು ಮಂದಿ ಸುನಿಲ್‌ ಮಾರ್ಗದರ್ಶನದಲ್ಲಿ ಮೊಲ ಸಾಕಣೆ ಆರಂಭಿಸಿ, ಯಶಸ್ಸಿನ ಪಥದತ್ತ ಸಾಗುತ್ತಿದ್ದಾರೆ.

ಮೊಲದತ್ತ ಚಿತ್ತ...
25ರಿಂದ 40 ವರ್ಷ ನಡುವಿನ ಅವಧಿ ಪ್ರತಿಯೊಬ್ಬರ ಜೀವನದಲ್ಲೂ ಬದಲಾವಣೆಯ ಪರ್ವ. ಅದಕ್ಕೇ ಸುನಿಲ್ ಕಾಲುಶತಕದತ್ತ ಸಾಗುತ್ತಿರುವಾಗಲೇ ಬದಲಾವಣೆಯ ದಾರಿಯನ್ನು ಆರಿಸಿಕೊಂಡರು. ಇದು ಅವರು ಏಕಾಏಕಿ ಕೈಗೊಂಡ ನಿರ್ಣಯವಲ್ಲ. ಅದರ ಹಿಂದೊಂದು ಚಿಂತನೆಯಿದೆ. ಅದನ್ನು ಅವರದೇ ಮಾತುಗಳಲ್ಲಿ ಹೀಗೆ ಸಂಗ್ರಹಿಸಬಹುದು:

‘ಯಾರೂ ಸುಮ್ಮನೆ ಸಂಬಳ ನೀಡಲ್ಲ. ನಮ್ಮ ಸಾಮರ್ಥ್ಯ ಅಳೆಯುತ್ತಾರೆ. ನಮಗೆ ರೂ. 1 ಲಕ್ಷ ಸಂಬಳ ಕೊಟ್ಟರೆ, ನಮ್ಮಿಂದ ರೂ. 2 ಲಕ್ಷ ಮೌಲ್ಯದ ದುಡಿಮೆ ಪಡೆಯುತ್ತಾರೆ. ಎಲ್ಲ ಖರ್ಚು ವೆಚ್ಚ ಕಳೆದು ಲಾಭದ ಒಂದು ಭಾಗವನ್ನು ಮಾತ್ರ ನಮಗೆ ಸಂಬಳದ ರೂಪದಲ್ಲಿ ನೀಡುತ್ತಾರೆ. ಸಂಬಳದ ಈ ಒಳಮರ್ಮ ಅರಿತೆ. ನಲವತ್ತು ತುಂಬುವುದರೊಳಗೆ ಮಾನಸಿಕ, ದೈಹಿಕ ಸಾಮರ್ಥ್ಯ ಕುಂಠಿತಗೊಂಡಿರುತ್ತದೆ. ಕಬ್ಬು ಹಿಂಡುವ ರೀತಿ ನಮ್ಮ ಸಾಮರ್ಥ್ಯವನ್ನು ಕಂಪೆನಿಗಳು ಹೀರಿ ಹಾಕುತ್ತವೆ.

ಕಂಪೆನಿಗಳಿಗಾಗಿ ಇಲ್ಲೀತನಕ ಅಹೋರಾತ್ರಿ ದುಡಿದ ನಮ್ಮಂಥವರಿಗೆ ಸಾಮರ್ಥ್ಯ ಕುಂದುತ್ತಿದ್ದಂತೆ ಚಿಕ್ಕಪುಟ್ಟ ತಪ್ಪಿಗೂ ಗೇಟ್‌ಪಾಸ್‌ ನೀಡುತ್ತಾರೆ. ಆಗ ನಮ್ಮ ಇಷ್ಟು ವರ್ಷದ ದುಡಿಮೆಗೆ ತಕ್ಕ ಗೌರವ, ಘನತೆ, ಸಂಪತ್ತು, ಕೀರ್ತಿ ದೊರಕಲಿಲ್ಲ ಎಂಬ ಪಶ್ಚಾತ್ತಾಪ ಕಾಡುತ್ತದೆ. ಬೇರೆ ಯಾರೂ ಕರೆದು ಕೆಲಸ ಕೊಡಲ್ಲ. ನಾವು ಹತ್ತಾರು ಕಂಪೆನಿಗೆ ಅಲೆದರೂ; ಕೆಲಸ ಸಿಗಲ್ಲ. ಅಂಥ ಸ್ಥಿತಿಯಲ್ಲಿ ನಾವು ಎಲ್ಲಿಗೆ ಹೋಗಬೇಕು.

ಸ್ವಾವಲಂಬಿಗಳಾದಾಗ ಮಾತ್ರ ನಮ್ಮ ಉದ್ಧಾರ ಎಂಬುದು ಹೊಳೆಯಿತು. ಯಾವ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹತ್ತು ಹಲವು ಕ್ಷೇತ್ರಗಳ ಅಧ್ಯಯನ ಕೈಗೊಂಡೆ. ಅದರ ಪ್ರತಿಫಲವೇ ಆಹಾರಕ್ಕಾಗಿ ಮೊಲ ಸಾಕಣೆ. ಸಾಫ್ಟ್‌ವೇರ್‌ನಲ್ಲೇ ಹೊಸ ಕಂಪೆನಿ ಆರಂಭಿಸೋಣ ಎಂದರೆ ತುಂಬಾ ಪೈಪೋಟಿ. ಹೆಜ್ಜೆ ಹೆಜ್ಜೆಗೂ ಸ್ಪರ್ಧೆ. ತಂತ್ರಜ್ಞಾನ ಕ್ಷೇತ್ರಕ್ಕಿಳಿಯೋಣ ಎಂದರೆ ಗಂಟೆಗೊಮ್ಮೆ ಬದಲಾವಣೆ. ಪ್ರತಿ ಕ್ಷಣವೂ ಅಪ್‌ಡೇಟ್‌ ಆಗಬೇಕು. ಇನ್ನು ರೀಟೇಲ್‌ ಇಂಡಸ್ಟ್ರಿಯೂ ಕಷ್ಟದಲ್ಲಿದೆ.

ಇರುವ ಚಿಲ್ಲರೆ ವ್ಯಾಪಾರಿಗಳೇ ಬೀದಿಗೆ ಬೀಳುತ್ತಿದ್ದಾರೆ. ಸಾಮಾನ್ಯ ಜನರ ಉದ್ಯಮಕ್ಕೆ ಮಲ್ಟಿನ್ಯಾಷನಲ್‌ ಕಂಪೆನಿಗಳು ಲಗ್ಗೆ ಹಾಕುತ್ತಿವೆ. ಗ್ರಾಹಕರನ್ನು ಸೆಳೆಯಲು ಆಫರ್‌ಗಳ ಸುರಿಮಳೆ ನೀಡುತ್ತಿವೆ. ಬೃಹತ್‌ ಕಂಪೆನಿಗಳಿಗೆ ವರ್ಷದ ನಷ್ಟ ಭರಿಸುವ ಸಾಮರ್ಥ್ಯ ಇದೆ. ನಮ್ಮಿಂದ ಆಗಲ್ಲ. ಅಲ್ಲೂ ಕಷ್ಟ ನಷ್ಟ ತಪ್ಪಿದ್ದಲ್ಲ. ಹೀಗೆ ಹತ್ತು ಹಲವು ರೀತಿ ಆಲೋಚನೆ ಮಾಡಿದ ಬಳಿಕ ಆಹಾರ ಉತ್ಪಾದನಾ ಕ್ಷೇತ್ರ ಎಂದೂ ಕೈಬಿಡಲ್ಲ ಎಂಬುದನ್ನು ಖಚಿತಪಡಿಸಿಕೊಂಡೆ. ಕೊನೆಗೆ ಮೊಲ ಸಾಕಣೆಯ ದೃಢ ನಿರ್ಧಾರ ಮಾಡಿದೆ. ಕಂಪ್ಯೂಟರ್ ಮೌಸ್‌ ಬಿಟ್ಟು ಬಂದ ನನ್ನನ್ನು ‘ಮೊಲ’ ಕೈ ಹಿಡಿದು ನಡೆಸುತ್ತಿದೆ’.

ಮೊಲ ಹಿಡಿದರೆ...
ಮೊಲ ಸಾಕಣೆಯಲ್ಲಿ ಕಡಿಮೆ ರಿಸ್ಕ್‌. ನಷ್ಟಕ್ಕೆ ಅವಕಾಶವಿಲ್ಲ. ಎಲ್ಲರೂ ಉಪಕಸುಬಾಗಿ ಸುಲಭವಾಗಿ ನಿರ್ವಹಿಸಬಹುದು. ಸುನಿಲ್ ಅವರ ಫಾರ್ಮ್‌ನಲ್ಲಿ ಮಾಂಸಕ್ಕಾಗಿ ಹಾಗೂ ತಳಿ ಅಭಿವೃದ್ಧಿಗಾಗಿ ಮೊಲ ಸಾಕಲಾಗುತ್ತಿದೆ. ಇಲ್ಲೀತನಕ ರೂ.10 ಲಕ್ಷ ಬಂಡವಾಳ ಹಾಕಿದ್ದು, ಮೂರು ವರ್ಷದಲ್ಲಿ ಶೇ. 90 ಭಾಗ ಮರಳಿದೆ ಎನ್ನುತ್ತಾರೆ ಸುನಿಲ್‌. ಮೊಲದ ಜೀವಿತಾವಧಿ 8 ವರ್ಷ. ವಂಶಾಭಿವೃದ್ಧಿ ಅತಿ ವೇಗವಾಗಿ ನಡೆಯುತ್ತದೆ. ಹುಟ್ಟಿದ ಮರಿ 6 ತಿಂಗಳಿಗೆ ಗರ್ಭ ಧರಿಸುವ ಸಾಮರ್ಥ್ಯ ಪಡೆಯುತ್ತದೆ. ನಂತರ ವರ್ಷಕ್ಕೆ ಆರು ಬಾರಿ ಮರಿ ಹಾಕುವುದು. ಮೊದಲ ತಿಂಗಳು ಗರ್ಭ ಧರಿಸಿದರೆ; ಮತ್ತೊಂದು ತಿಂಗಳು ಮರಿಗಳ ಆರೈಕೆ ಮಾಡುತ್ತದೆ.

ಮೂರು ತಿಂಗಳ ಮರಿ 2–2.5 ಕೆ.ಜಿ. ತೂಗುತ್ತದೆ. ವರ್ಷದ ಮೊಲ 5–6 ಕೆ.ಜಿ. ತೂಗುತ್ತದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಜೀವಂತ ಮೊಲದ ತೂಕ ಕೆ.ಜಿ.ಗೆ ರೂ. 130 ನಡೆಯುತ್ತಿದೆ. ಸಾಕಷ್ಟು ಬೇಡಿಕೆಯಿದೆ. ಸೋವಿಯತ್‌ ಚಿಂಚಿಲ್ಲಾ, ವೈಟ್‌ ಜೈಂಟ್‌, ನ್ಯೂಜಿಲೆಂಡ್‌ ವೈಟ್‌, ಕ್ಯಾಲಿಫೋರ್ನಿಯಾ ವೈಟ್‌, ರಷ್ಯನ್‌ ಗ್ರೇ ಜೈಂಟ್‌, ಜೈಂಟ್‌ ಫ್ಲೇಮೆಸ್‌ ಮಾಂಸಕ್ಕಾಗಿಯೇ ಸಾಕುವ ಮೊಲದ ತಳಿಗಳು.

ಇವುಗಳಿಗೆ ಎಲ್ಲೆಡೆ ಬೇಡಿಕೆ. ಮೊಲದ ಮಾಂಸದಲ್ಲಿ ಕೊಲೆಸ್ಟ್ರಾಲ್‌ ಕಡಿಮೆ. ಹೆಚ್ಚು ಪ್ರೋಟೀನ್‌ ಅಂಶ ಇರುವುದರಿಂದ ಮಕ್ಕಳು, ವಯಸ್ಕರು, ವೃದ್ಧರು ಸೇರಿದಂತೆ ರೋಗಿಗಳಿಗೂ ಉತ್ತಮ ಆಹಾರ. ಈ ಆರೋಗ್ಯದಾಯಕ ಮಾಂಸಾಹಾರಕ್ಕೆ ಎಲ್ಲೆಡೆ ಬೇಡಿಕೆ ಹೆಚ್ಚುತ್ತಿದೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿನ ಬೇಡಿಕೆ ದಿನಕಳೆದಂತೆ ದ್ವಿಗುಣಗೊಳ್ಳುತ್ತಿದೆ ಎಂದು ಸುನಿಲ್ ಮಾಹಿತಿ ನೀಡಿದರು.

ತುಪ್ಪಳಕ್ಕಾಗಿ ಅಂಗೋರಾ ಮೊಲ ಸಾಕಣೆ ಚಾಲ್ತಿಯಲ್ಲಿದೆ. ವರ್ಷಕ್ಕೆ ಒಂದು ಮೊಲದಿಂದ ಒಂದು ಕೆ.ಜಿ. ತುಪ್ಪಳ ಸಿಗುತ್ತದೆ. ಕೆ.ಜಿ.ಗೆ 1200 ರಿಂದ 2 ಸಾವಿರ ರೂಪಾಯಿಯಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದಕ್ಕೆ ಹೆಚ್ಚಿನ ಬೇಡಿಕೆಯಿದೆ.

ಸಾಕಾಣಿಕೆ ಹೇಗೆ?
ಮೊಲದ ವಸತಿ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಕಡಿಮೆ ಜನಸಂದಣಿ, ಉತ್ತಮ ನೆರಳಿರಬೇಕು. ಶುದ್ಧ ಗಾಳಿ, ಉತ್ತಮ ಬೆಳಕಿನ ಜಾಗದಲ್ಲಿ ಗೂಡು ಅಥವಾ ಮನೆ ನಿರ್ಮಿಸಬೇಕು. ಬೆಕ್ಕು, ನಾಯಿ, ಮುಂಗುಸಿ, ಹೆಗ್ಗಣ, ಇಲಿ... ಇತ್ಯಾದಿ ಪ್ರಾಣಿಗಳು ಬರದಂತೆ ನಿಯಂತ್ರಿಸಬೇಕು. ಪ್ರತಿಯೊಂದು ಮೊಲಕ್ಕೂ ಪ್ರತ್ಯೇಕ ಗೂಡು ನಿರ್ಮಿಸುವುದರಿಂದ ರೋಗ ತಡೆಗಟ್ಟುವ ಜತೆಗೆ ಆರೋಗ್ಯಕರವಾಗಿ ಬೆಳೆಸಬಹುದು. ಮೊಲಗಳು ಎಲ್ಲ ರೀತಿಯ ಹುಲ್ಲು, ಹಸಿರೆಲೆ, ಸೊಪ್ಪು, ತರಕಾರಿ, ಗೆಡ್ಡೆ–ಗೆಣಸು, ಮೊಳಕೆ ಕಾಳುಗಳನ್ನು ತಿನ್ನುತ್ತವೆ.

ಇದಲ್ಲದೆ ಮೊಲಗಳಿಗೆ ಬೇಕಾದ ಆಹಾರ ಮಾರುಕಟ್ಟೆಯಲ್ಲೂ ದೊರೆಯುತ್ತದೆ. ಬೆಳೆಯುವ ಮರಿಗಳಿಗೆ ನಿತ್ಯ ಶೇ 20ರಷ್ಟು ಪ್ರೊಟೀನ್, 50–80 ಗ್ರಾಂ ಧಾನ್ಯ ಮಿಶ್ರಣ, 100–200 ಗ್ರಾಂ ಹಸಿರು ಮೇವು, ತಾಯಿ ಹಾಗೂ ಗಂಡು ಮೊಲಗಳಿಗೆ ಶೇ 16ರಷ್ಟು ಪ್ರೊಟೀನ್‌, 100–150 ಗ್ರಾಂ ಧಾನ್ಯ ಮಿಶ್ರಣ, 200–300 ಗ್ರಾಂ ಹಸಿರು ಮೇವು ಒದಗಿಸಬೇಕು. ಗೂಡಿನಲ್ಲಿ ಸದಾ ಶುದ್ಧ ನೀರು ಇರಬೇಕು. ಕುದುರೆ ಮೆಂತ್ಯ ಸೊಪ್ಪು, ರೋಟ್ಸ್‌ ಹುಲ್ಲು ಉತ್ತಮ ಆಹಾರ. ಒಮ್ಮೆ ಬಿತ್ತಿದರೆ ಪ್ರತಿ ತಿಂಗಳು ಕಟಾವಿಗೆ ಬರುತ್ತದೆ. ರೋಟ್ಸ್‌ 10 ವರ್ಷ ಬಳಕೆಗೆ ಬಂದರೆ; ಕುದುರೆ ಮೆಂತ್ಯ ಸೊಪ್ಪು ಐದು ವರ್ಷ ಸಿಗುತ್ತದೆ.

ಎರಡು– ಮೂರು ಹೆಣ್ಣು ಮೊಲಗಳಿಗೆ ಒಂದು ಗಂಡು ಮೊಲ. ಗಂಡು ಮೊಲದ ಜತೆ ಮುಂಜಾನೆ ಅಥವಾ ಮುಸ್ಸಂಜೆ 2 ಗಂಟೆ ಅವಧಿ ಹೆಣ್ಣು ಮೊಲವನ್ನು ಬಿಡಬೇಕು. ನಂತರ ಗೂಡಿನಿಂದ ಬೇರ್ಪಡಿಸಬೇಕು. ಈ ದಿನಕ್ಕೆ ಸರಿಯಾಗಿ 28ರಿಂದ 30 ದಿನದ ಅವಧಿಯಲ್ಲಿ ಮರಿಗಳನ್ನು ಹಾಕುತ್ತವೆ. ಹತ್ತಕ್ಕಿಂತ ಹೆಚ್ಚು ಮರಿ ಹಾಕಿದಾಗ ಹಾಲು ಸಾಲದೆ ಮರಿಗಳು ಸಾಯಬಹುದು. ಅದನ್ನು ತಪ್ಪಿಸಲು ತಾಯಿ ಮೊಲಕ್ಕೆ ಸಾಕಷ್ಟು ಪ್ರಮಾಣದಲ್ಲಿ ಹುಲ್ಲು, ಧಾನ್ಯ ಮಿಶ್ರಣ ನೀಡಿ ಆರೈಕೆ ಮಾಡಿದರೆ, ಎಲ್ಲ ಮರಿಗಳು ಬದುಕುಳಿಯುವ ಸಾಧ್ಯತೆ ಹೆಚ್ಚಿರುತ್ತದೆ.

ವಂಶಾಭಿವೃದ್ಧಿಗಾಗಿ ಸುನಿಲ್‌, ವಂಶಾವಳಿ ದಾಖಲಾತಿ ತಂತ್ರಜ್ಞಾನ ಕಂಡುಕೊಂಡಿದ್ದಾರೆ. ಆರೋಗ್ಯವಂತ ಮೊಲಗಳನ್ನು ಆಯ್ದು ಬೇರೆ ಜೀನ್ಸ್‌ ಹೊಂದಿರುವ ಮೊಲಗಳ ಜತೆ ಅಭಿವೃದ್ಧಿ ಪಡಿಸುತ್ತಿದ್ದಾರೆ. ಇದರಿಂದ ಉತ್ತಮ ತಳಿ ಸೃಷ್ಟಿಯಾಗುವ ಜತೆ ಎಲ್ಲವೂ ಆರೋಗ್ಯಕರವಾಗಿರುತ್ತದೆ ಎಂಬ ಅಭಿಪ್ರಾಯ ಇವರದ್ದು.

ಮೊಲ ಸಾಕಲು ಬರುವವರ ಸಂಖ್ಯೆ ಹೆಚ್ಚುತ್ತಿದೆ. ಆಸಕ್ತರಿಗೆ ಮೊದಲು ಮೊಲಗಳನ್ನು ನೀಡದೆ ತರಬೇತಿ ಕೊಡಿಸಲಾಗುತ್ತಿದೆ. ಹೆಸರುಘಟ್ಟದಲ್ಲಿರುವ ಮೊಲ ಸಾಕಣೆ ತರಬೇತಿ ಕೇಂದ್ರದಲ್ಲಿ ಡಾ. ಸುಧಾಕರ್‌, ಡಾ. ಮಂಜುನಾಥ್‌ ತರಬೇತಿ ನೀಡುತ್ತಾರೆ. ಸಾಕಣೆಯ ಎಲ್ಲ ಕ್ರಮ ತಿಳಿಸಿ, ಸರ್ಟಿಫಿಕೇಟ್‌ ನೀಡುತ್ತಾರೆ. ‘ಹೀಗೆ ತರಬೇತಿ ಪಡೆದವರಿಗೆ ಮೊಲ ನೀಡಿದ್ದೇನೆ. ಇಷ್ಟಕ್ಕೆ ಸುಮ್ಮನಾಗದೆ ಅವರ ಸಂಪರ್ಕದಲ್ಲಿದ್ದು, ಎಲ್ಲ ಸಲಹೆ ನೀಡುತ್ತೇನೆ. ಅದನ್ನು ನನ್ನ ಮತ್ತೊಂದು ಬ್ರಾಂಚ್‌ ಎಂದು ಪರಿಗಣಿಸಿ ಆಗಾಗ್ಗೆ ಭೇಟಿ ನೀಡುತ್ತೇನೆ’ ಎನ್ನುತ್ತಾರೆ ಸುನಿಲ್.

ಹೊಸ ಮಾರುಕಟ್ಟೆ
ಮೊಲದ ಮಾಂಸಕ್ಕೆ ಎಲ್ಲೆಡೆ ಬೇಡಿಕೆ ಇದೆ. ಆದರೆ ಅದಕ್ಕೆ ತಕ್ಕಂಥ ವ್ಯವಸ್ಥಿತ ಮಾರುಕಟ್ಟೆಯಿಲ್ಲ. ಬೆಂಗಳೂರಿನ ಮಧ್ಯವರ್ತಿಗಳಿಗೆ ಮಾರಲಾಗುತ್ತಿದೆ. ಈ ಪರಿಸ್ಥಿತಿಯನ್ನು ಬದಲಾಯಿಸುವುದರ ಕುರಿತೂ ಸುನಿಲ್ ಚಿಂತಿಸುತ್ತಿದ್ದಾರೆ. ಅವರ ಬಳಿ ಮೊಲ ಖರೀದಿಸಿ ಸಾಕಲು ಕೊಂಡೊಯ್ದವರಿಗೆ ಮಾರುಕಟ್ಟೆ ಸಮಸ್ಯೆ ಎದುರಾಗಬಾರದು ಎಂಬ ಕಾರಣಕ್ಕೆ ಅವರೊಟ್ಟಿಗೆ ಕೆ.ಜಿ.ಗೆ ರೂ. 130ರಂತೆ ಮರು ಖರೀದಿಯ ‘ಒಪ್ಪಂದ’ ಮಾಡಿಕೊಳ್ಳುತ್ತಾರೆ.

‘ಒಬ್ಬನೇ ಬೆಳೆಯುವ ಹಂಬಲವಿಲ್ಲ. ಜತೆಯಾಗಿ ಎಲ್ಲರೂ ಬೆಳೆಯೋಣ ಎಂಬ ಚಿಂತನೆ ನನ್ನದು’ ಎನ್ನುವ ಸುನಿಲ್ ಅವರದ್ದು ಎರಡು ವರ್ಷದೊಳಗೆ ಸಾಕಣೆದಾರರ ಒಕ್ಕೂಟ ರಚಿಸಿಕೊಂಡು, ನೇರ ಮಾರುಕಟ್ಟೆ ಪ್ರವೇಶಿಸುವ ಚಿಂತನೆ. ಈ ಯೋಜನೆಯಲ್ಲಿ ಮಾಂಸ ಕೆಡದಂತೆ ಕಾಪಾಡುವ ಶೈತ್ಯಾಗಾರ, ಪ್ಯಾಕಿಂಗ್ ವ್ಯವಸ್ಥೆ, ಪಾಶ್ಚಾತ್ಯ ರಾಷ್ಟ್ರಗಳಿಗೆ ರಫ್ತು ಮಾಡುವುದು ಇತ್ಯಾದಿಗಳೆಲ್ಲವೂ ಒಳಗೊಂಡಿದೆ. ಶೈತ್ಯಾಗಾರ ಆರಂಭಗೊಂಡರೆ ಮೊಲದ ಚರ್ಮಕ್ಕೂ ಬೆಲೆ ಸಿಗುತ್ತದೆ. ಬೆಚ್ಚನೆಯ ಉಡುಪು ತಯಾರಿಕೆಗೆ ಬಳಕೆಯಾಗುತ್ತದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ. ಪ್ರಸ್ತುತ ಕೆ.ಜಿ.ಗೆ 700–800 ರೂಪಾಯಿ ಇದೆ. ಈ ಲಾಭವೂ ಸಾಕಣೆದಾರರ ಪಾಲಾಗುತ್ತದೆ.

ಈಗ ಸುನಿಲ್ ಅವರ ಫಾರ್ಮ್‌ನಲ್ಲಿ 550 ಹೆಣ್ಣು, 250 ಗಂಡು ಸೇರಿದಂತೆ 800 ಮೊಲಗಳಿವೆ. ಬ್ಯಾಚ್ ಮಾಡಿ ಸಾಕಲಾಗುತ್ತಿದೆ. ಪ್ರತಿ ಬ್ಯಾಚ್‌ನ ಮೊಲಗಳು ವಾರಕ್ಕೊಮ್ಮೆ ಮರಿ ಹಾಕುತ್ತಿವೆ. ಇದರಿಂದ ನಮಗೆ ಪ್ರತಿ ವಾರವೂ ವಹಿವಾಟು ನಡೆಯುತ್ತಿದೆ. ಪ್ರಸಕ್ತ ವಾರಕ್ಕೆ ಒಂದು ಸಾವಿರ ಕೆ.ಜಿ. ಜೀವಂತ ಮೊಲಗಳು ಮಾರಾಟವಾಗುತ್ತವೆ.

ಇದನ್ನು ಹೊರತುಪಡಿಸಿ ತಳಿ ಅಭಿವೃದ್ಧಿ ಪಡಿಸಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಪ್ರತಿ ತಿಂಗಳು ನೂರಕ್ಕೂ ಹೆಚ್ಚು ಮೊಲಗಳನ್ನು ಮಾರಾಟ ಮಾಡುತ್ತಾರೆ. ಇವರ ಫಾರ್ಮ್‌ನಲ್ಲಿ ಕೆಲಸಗಾರರಿಲ್ಲ. ಸುನಿಲ್ ಅವರ ಜೊತೆಗೆ ಅವರ ತಾಯಿ ಸಾಕಾಣಿಕೆಗೆ ನೆರವಾಗುತ್ತಾರೆ. ಸುನಿಲ್‌ ಸಂಪರ್ಕ ಸಂಖ್ಯೆ: 9483878916, 9141725110.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT