ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾಗಿ v/s ಆಟಾ ನೂಡಲ್ಸ್‌

Last Updated 1 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

ಐದು ತಿಂಗಳ ಕಾನೂನು ಸಮರದ ನಂತರ ಮ್ಯಾಗಿ ನೂಡಲ್ಸ್‌ ಮತ್ತೆ ಅಡುಗೆಮನೆಯಲ್ಲಿ ಜಾಗ ಪಡೆಯುತ್ತಿದೆ. ನಿಷೇಧ ವಿವಾದ ಇನ್ನೂ ತಾರ್ಕಿಕ ಅಂತ್ಯ ಕಂಡಿರದಿದ್ದರೂ ಗ್ರಾಹಕರು ಮ್ಯಾಗಿ ಖರೀದಿಗೆ ಮುಂದಾಗುತ್ತಿದ್ದಾರೆ.

ಮತ್ತೆ ಮಾರುಕಟ್ಟೆ  ಪ್ರವೇಶಿಸುವ ಹೊತ್ತಿನಲ್ಲಿ ಮ್ಯಾಗಿ ತಯಾರಿಕಾ ಸಂಸ್ಥೆ ನೆಸ್ಲೆ ಇಂಡಿಯಾ ಅನಿರೀಕ್ಷಿತವಾಗಿ ಹೊಸ ಪೈಪೋಟಿ ಎದುರಿಸಬೇಕಾಗಿ ಬಂದಿದೆ.

ಒಂದೆಡೆ ವಿವಾದದಿಂದ ಹೊರ ಬಂದು ಮತ್ತೆ ಗ್ರಾಹಕರ ಮನ ಗೆಲ್ಲುವ ಸವಾಲು ಎದುರಿಸಬೇಕಾದ ಸಂದರ್ಭದಲ್ಲಿ, ದೇಶಿ ಪತಂಜಲಿ ಆಯುರ್ವೇದ ಸಂಸ್ಥೆಯ ‘ಆಟಾ ನೂಡಲ್ಸ್‌’ನ ಸ್ಪರ್ಧೆ ಎದುರಾಗಿದೆ.

ಮ್ಯಾಗಿ ರುಚಿಗೆ ಪುಟಾಣಿಗಳು ಮತ್ತೆ ನಾಲಿಗೆ ಚಪ್ಪರಿಸುತ್ತಿದ್ದಾರೆ. ಗಡಿಬಿಡಿ ಅಮ್ಮಂದಿರಿಗೆ  ನೆಮ್ಮದಿ ಮರಳಿದಂತಾಗಿದೆ.  ನೆಸ್ಲೆ ಇಂಡಿಯಾ ಕಂಪೆನಿಯ ಅಧಿಕಾರಿಗಳು,  ಕಾರ್ಮಿಕರು, ಸರಕು ಸಾಗಿಸುವ ಲಾರಿ ಮಾಲೀಕರು ಕೂಡ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. ಬಾಂಬೆ ಹೈಕೋರ್ಟ್‌ ಅಕ್ಟೋಬರ್‌ 14ರಂದು ಇದರ ಮೇಲಿನ ನಿಷೇಧವನ್ನು ತೆರವುಗೊಳಿಸಿದೆ.

ಮ್ಯಾಗಿಯಲ್ಲಿ ಸೀಸದ ಪ್ರಮಾಣವು ನಿಗದಿತ ಮಟ್ಟಕ್ಕಿಂತ ಹೆಚ್ಚಿಗೆ ಇದೆ. ಇದರ ಸೇವನೆಯು ಅಪಾಯಕಾರಿ ಎಂದು ದೇಶದ ವಿವಿಧ ನ್ಯಾಯಾಲಯಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಜೂನ್‌ 5ರಂದು ದೇಶದಾದ್ಯಂತ ಈ ತಿನಿಸಿನ ಮೇಲೆ ನಿಷೇಧ ಹೇರಿತ್ತು.

ಕರ್ನಾಟಕ ರಾಜ್ಯ ಸರ್ಕಾರ ಕೂಡ ಮ್ಯಾಗಿಯ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ, ಪರೀಕ್ಷೆಗೆ ಒಳಪಡಿಸಲು ಸೂಚಿಸಿತ್ತು. ಇಷ್ಟೆಲ್ಲ ಕಾನೂನು ಸಂಘರ್ಷದ ನಂತರ ಈಗ ಮತ್ತೆ ಮ್ಯಾಗಿ ಮಾರುಕಟ್ಟೆಗೆ ಬಂದಿದೆ. ಆಹಾರ ಸಂಶೋಧ ನಾಲಯಗಳಲ್ಲಿ ಇದರ ಪರೀಕ್ಷೆ ನಡೆಸುವಂತೆ ನ್ಯಾಯಾಲಯ ಆದೇಶ ನೀಡಿತ್ತು. ಈ ಪ್ರಯೋಗಾಲಯಗಳ ಫಲಿತಾಂಶ ಆಧರಿಸಿ ನಿಷೇಧವನ್ನು ತೆರವುಗೊಳಿಸಲಾಗಿದೆ. ಆದರೆ, ಜನರಲ್ಲಿನ ಆತಂಕ ಮಾತ್ರ ಸಂಪೂರ್ಣ ನಿವಾರಣೆಯಾಗಿಲ್ಲ.

​ಬೆಂಗಳೂರಿನಲ್ಲಿರುವ ನ್ಯಾಷನಲ್‌ ಅಕ್ರೆಡಿಟೇಷನ್‌ ಬೋರ್ಡ್‌ ಫಾರ್‌ ಕ್ಯಾಲಿಬ್ರೇಷನ್‌ ಲ್ಯಾಬೊರೊಟರೀಸ್‌ (ಎನ್‌ಎಬಿಎಲ್‌) ಹಾಗೂ ಮೈಸೂರಿನ ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾಲಯಗಳು (ಸಿಎಫ್‌ಟಿಆರ್‌ಐ) ಕೂಡ  ಮ್ಯಾಗಿ ನೂಡಲ್ಸ್‌ ಅಪಾಯಕಾರಿಯಲ್ಲ ಎಂದು ಪ್ರಮಾಣಪತ್ರ ನೀಡಿವೆ. ಉಗ್ರಾಣದಲ್ಲೇ ಉಳಿದಿದ್ದ ಮ್ಯಾಗಿಯ ಹಳೆ ಪ್ಯಾಕುಗಳನ್ನೂ ತಪಾಸಣೆ ಮಾಡಲಾಗಿದೆ. ಹೊಸ ಪ್ಯಾಕುಗಳನ್ನೂ ಮಾರುಕಟ್ಟೆಗೆ ಬಿಡಲು ಬಾಂಬೆ ಹೈಕೋರ್ಟ್‌ ಅನುಮತಿ ನೀಡಿದೆ.

ತಯಾರಿಕೆ ಏಕಾಏಕಿ ಸ್ಥಗಿತಗೊಂಡಿತ್ತು. ನಿಷೇಧಾಜ್ಞೆ ತೆರವಾದ ನಂತರ ಬೇಡಿಕೆ ಹೆಚ್ಚಿದೆ. ಆದರೆ, ಸದ್ಯಕ್ಕೆ ತಯಾರಿಕೆ ಕಡಿಮೆ ಇದೆ. ದಕ್ಷಿಣ ಭಾರತದ ಕೆಲ ರಾಜ್ಯಗಳಲ್ಲಿ ಇನ್ನೂ ಸರಬರಾಜು ಸಾಧ್ಯವಾಗುತ್ತಿಲ್ಲ ಎನ್ನುವುದು ನೆಸ್ಲೆಯ ಮಾರುಕಟ್ಟೆ ಅಧಿಕಾರಿಗಳ ಹೇಳಿಕೆ.

​ಮ್ಯಾಗಿಯ ಮೂಲ
ನೆಸ್ಲೆ ಇಂಡಿಯಾ ಸಂಸ್ಥೆಯ ಉತ್ಪನ್ನಗಳಲ್ಲಿ ಮ್ಯಾಗಿ ನೂಡಲ್ಸ್‌ ಕೂಡ ಒಂದು. ದೇಶದ 5 ಸ್ಥಳಗಳಲ್ಲಿ ಮಾತ್ರ ಇದನ್ನು ತಯಾರಿಸಲಾಗುತ್ತಿದೆ. ಪಂಜಾಬ್‌ (ಮೋಗಾ ಪಟ್ಟಣ), ಗೋವಾ (ಬಿಚೊಲಿಮ್), ಕರ್ನಾಟಕ (ನಂಜನಗೂಡು), ಉತ್ತರಾಖಂಡ (ಪಂತನಗರ), ಹಿಮಾಚಲಪ್ರದೇಶ (ಪಾಲಿವಾಲ್).
ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣದಲ್ಲಿರುವ ಘಟಕ 2011ರಲ್ಲಿ ಆರಂಭವಾಗಿದೆ.  ಸದ್ಯಕ್ಕೆ  ಇದೇ ಘಟಕದಿಂದ ಕರ್ನಾಟಕ, ಕೇರಳ, ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಗೆ ಮ್ಯಾಗಿ ಸರಬರಾಜು ಮಾಡಲಾಗುತ್ತದೆ.

ನಂಜನಗೂಡು ಘಟಕದಿಂದ ಪ್ರತಿದಿನ 100 ಲಾರಿಗಳಲ್ಲಿ ಈ ನೂಡಲ್ಸ್‌ ಸರಬರಾಜು ಆಗುತ್ತದೆ. 650 ಕಾಯಂ ನೌಕರರು ಹಾಗೂ 600 ಗುತ್ತಿಗೆ ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಾರೆ. ಸಾವಿರಾರು ಕುಟುಂಬಗಳು ‘ಮ್ಯಾಗಿ’ ಹೆಸರಿನಲ್ಲೇ ತುತ್ತಿನಚೀಲ ತುಂಬಿಸಿಕೊಳ್ಳುತ್ತಿವೆ.

‘ನೆಸ್ಲೆ’ ಸ್ವಿಟ್ಜರ್ಲೆಂಡ್‌ ಮೂಲದ ಬಹುರಾಷ್ಟ್ರೀಯ ಕಂಪೆನಿ. 1866ನೇ ಇಸ್ವಿಯಲ್ಲಿ ಸ್ಥಾಪನೆಗೊಂಡಿದ್ದು, 2016ಕ್ಕೆ ಬರೋಬ್ಬರಿ 150 ವರ್ಷ ತುಂಬುತ್ತದೆ. ಜಗತ್ತಿನ ವಿವಿಧೆಡೆ ಇದರ 447  ಕಾರ್ಖಾನೆಗಳಿವೆ. ಭಾರತಕ್ಕೆ ಕಾಲಿಟ್ಟು 103 ವರ್ಷಗಳಾದವು! ದೇಶದಲ್ಲಿ ಆಹಾರ ಉತ್ಪಾದನೆ ತೀವ್ರ ಕುಸಿದಿದ್ದ ಸಂದರ್ಭದಲ್ಲೇ ನೆಸ್ಲೆ ಕಂಪೆನಿ ಇಲ್ಲಿ ಠಿಕಾಣೆ ಹೂಡಿತು. ಬ್ರಿಟಿಷ್‌ ಸರ್ಕಾರದ ಆಡಳಿತದಲ್ಲಿ ‘ನೆಸ್ಲೆ ಇಂಡಿಯಾ’ ಗಟ್ಟಿಯಾಗಿ ಬೇರೂರಿತು.

32 ವರ್ಷಗಳಿಂದಲೂ ಮ್ಯಾಗಿ ದೇಶಿ  ಮಾರುಕಟ್ಟೆಯಲ್ಲಿದೆ. ಇದಲ್ಲದೇ, ಕಾಫಿ, ಹಾಲಿನ ಪೌಡರ್, ಬೇಬಿಫುಡ್ಸ್, ಸೆರೆಲ್ಯಾಕ್, ಚಾಕ್‌ಲೇಟ್, ಸಾಸ್, ಮಸಾಲೆ ಪದಾರ್ಥಗಳನ್ನೂ ನೆಸ್ಲೆ ತಯಾರಿಸುತ್ತಿದೆ.

ಮ್ಯಾಗಿ ಸಿಂಹಪಾಲು
ದೇಶದಲ್ಲಿ ನೂಡಲ್ಸ್‌ ಮಾರುಕಟ್ಟೆ ಮೌಲ್ಯ ₹ 4,000 ಕೋಟಿಗಳಷ್ಟಿದೆ. ವಿವಾದ ಉ ದ್ಭವಿಸಿ ಸರಕನ್ನು ಮಾರುಕಟ್ಟೆಯಿಂದ ವಾಪಸ್‌ ಪಡೆಯುವ ಮುನ್ನ  ಮ್ಯಾಗಿ ಸಿಂಹಪಾಲು (ಶೇ 70ರಷ್ಟು) ಹೊಂದಿತ್ತು.

ಮ್ಯಾಗಿ ನೂಡಲ್ಸ್‌ ತಯಾರಿಕೆಗೆ ಬೇಕಾದ ಗೋಧಿಯನ್ನು ನಮ್ಮ ರೈತರೇ ಸರಬರಾಜು ಮಾಡುತ್ತಾರೆ. ಆದರೆ, ನೆಸ್ಲೆ ಕಂಪೆನಿ ರೈತರಿಂದ ನೇರವಾಗಿ ಇದನ್ನು ಖರೀದಿಸುವುದಿಲ್ಲ. ಮಿಲ್ಲುಗಳ ಮೂಲಕ ಅದರ ಗುಣಮಟ್ಟ ಖಚಿತಪಡಿಸಿಕೊಂಡು ಖರೀದಿಸುತ್ತದೆ. ಹೀಗಾಗಿ, ಇದರ ಲಾಭ ರೈತರಿಗೆ ನೇರವಾಗಿ ತಲುಪುವುದಿಲ್ಲ.

ಸೀಸ ಮತ್ತು ಮೋನೊಸೋಡಿಯಂ ಗ್ಲುಕೊಮ್ಯಾಟ್‌ (ಎಂಎಸ್‌ಜಿ)  ಮ್ಯಾಗಿ ಪ್ಯಾಕೆಟ್‌ನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪತ್ತೆಯಾಗಿತ್ತು. ಇದೇ ವಿಷಯ ದೇಶದಾದ್ಯಂತ ನಿಷೇಧಕ್ಕೆ ಕಾರಣವಾಗಿತ್ತು.

‘ಶ್ಯಾವಿಗೆ ಹಾಗೂ ಮಸಾಲೆ ಬಿಟ್ಟರೆ ಮ್ಯಾಗಿಯಲ್ಲಿ ಬೇರೇನೂ ಇರುವುದಿಲ್ಲ. ಮಕ್ಕಳು ಹಾಗೂ ವಯಸ್ಕರಿಗೆ ಇಷ್ಟವಾಗಲು ಇದರ ರುಚಿಕಟ್ಟಾದ ಮಸಾಲೆಯೇ ಕಾರಣ. ಒಂದು ಮ್ಯಾಗಿ ಪ್ಯಾಕೆಟ್‌ಗೆ 9 ತಿಂಗಳ ಮಿತಿ ಇರುತ್ತದೆ. ಸ್ವತಃ ನೆಸ್ಲೆ ಕಂಪೆನಿಯ ಲ್ಯಾಬ್‌ನಲ್ಲಿ ತಪಾಸಣೆ ಮಾಡಿದ ನಂತರವೇ ಇದನ್ನು ಮಾರುಕಟ್ಟೆಗೆ ಬಿಡಲಾಗುತ್ತದೆ. ಮೂರು ದಶಕಗಳಿಂದಲೂ ಈ ಆಹಾರ ಪದಾರ್ಥ ಮಾರುಕಟ್ಟೆಯಲ್ಲಿದೆ. ಒಂದೇ ಒಂದು ಜೀವಹಾನಿ ಪ್ರಕರಣವೂ ನಡೆದಿಲ್ಲ.

ಜನರ ಆರೋಗ್ಯ ಹಾಗೂ ವಿಶ್ವಾಸಾರ್ಹತೆ ನಮ್ಮ ಧ್ಯೇಯ. ಕಾನೂನು ಹೇಳುವ ಕಟ್ಟಳೆಗಳಿಗಿಂತಲೂ ನಾವು ಒಂದು ಹೆಜ್ಜೆ ಮುಂದೆ ಇದ್ದೇವೆ’ ಎನ್ನುತ್ತಾರೆ ಕಂಪೆನಿಯ ಮಾಧ್ಯಮ ಪ್ರತಿನಿಧಿಗಳು. ‘ಮೋನೊಸೋಡಿಯಂ ಗ್ಲುಕೊಮ್ಯಾಟ್‌ ಬಹಳಷ್ಟು ಪದಾರ್ಥಗಳಲ್ಲಿ ಇರುತ್ತದೆ. ಇದೊಂದು ನೈಸರ್ಗಿಕ ಉತ್ಪನ್ನ. ಗೋಬಿ ಮಂಚೂರಿ ಮತ್ತು ಇತರ ಮಾಂಸಾಹಾರದಲ್ಲೂ ಇರುತ್ತದೆ. ಇದನ್ನು ಆಹಾರದಲ್ಲಿ ಹಾಕಬಾರದು ಎಂಬ ಕಾನೂನು ಎಲ್ಲೂ ಇಲ್ಲ’ ಎನ್ನುತ್ತಾರೆ ನೆಸ್ಲೆ ಅಧಿಕಾರಿಗಳು.

***
ಶ್ಯಾವಿಗೆ ನಮ್ಮ ನೆಲದ ಪುರಾತನ ತಿನಿಸು. ಗೋಧಿಹಿಟ್ಟನ್ನು ನೀರಿನಲ್ಲಿ ಕಲಸಿಕೊಂಡು, ಕಟ್ಟಿಗೆ ಹಲಗಿನ (ಶ್ಯಾವಿಗೆ ಮಣೆ) ಮೇಲೆ ಶ್ಯಾವಿಗೆ ಹೊಸೆಯುತ್ತಿದ್ದ ಅಜ್ಜಿಯ ನೆನಪು ಇನ್ನೂ ಮಾಸಿಲ್ಲ. ಹೀಗೆ ಮಣೆಯ ಮೇಲೆ ಶ್ಯಾವಿಗೆ ಹೊಸೆಯುವುದೂ ಒಂದು ಕೌಶಲ. ಎಲ್ಲರಿಗೂ ಇದು ಸಾಧ್ಯವಿಲ್ಲ. ಈಗೀಗ ಯಂತ್ರ ಬಳಸಿಕೊಂಡು ಶ್ಯಾವಿಗೆ ಮಾಡುವವರಿದ್ದಾರೆ.

ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದ ಕೆಲವೆಡೆ ಶ್ಯಾವಿಗೆ ಹಬ್ಬದ ತಿನಿಸು. ಬೆಲ್ಲ ಅಥವಾ ಸಕ್ಕರೆಯ ಪಾನಕವನ್ನು ಶ್ಯಾವಿಗೆ ಜತೆಗೆ ಬೆರೆಸಿ ತಿನ್ನುವುದೇ ಸಂಭ್ರಮ. ಇದಲ್ಲದೇ ಖೀರು, ಉಪ್ಪಿಟ್ಟು... ಹೀಗೆ ವೈವಿಧ್ಯಮಯ ರೀತಿಯಲ್ಲಿ ಶ್ಯಾವಿಗೆ ಹೊಟ್ಟೆ ಸೇರುತ್ತಿತ್ತು.

ಬದಲಾದ ಜೀವನಕ್ರಮದ ಜತೆಗೆ ಅಜ್ಜಿಯ ನೆಚ್ಚಿನ ಶ್ಯಾವಿಗೆಯೂ ಬದಲಾಯಿತು. ಎಳೆಎಳೆಯಾಗಿ ಸುತ್ತಿಕೊಂಡು ಅಟ್ಟದ ಮೇಲಿನ ಸ್ಟೀಲ್‌ ಡಬ್ಬದಲ್ಲಿ ಇರುತ್ತಿದ್ದ ಶ್ಯಾವಿಗೆ; ಈಗ ಸಣ್ಣ ಪ್ಯಾಕೆಟ್‌ನಲ್ಲಿ ‘ಮ್ಯಾಗಿ’ ಆಗಿ ಅಂಗಡಿಗಳ ಮುಂದೆ ನೇತಾಡುತ್ತಿದೆ. ಅಕ್ಕಪಕ್ಕದ ಮಹಿಳೆಯರೆಲ್ಲ ಸೇರಿಕೊಂಡು ತಿಂಗಳುಗಟ್ಟಲೇ ಹೊಸೆಯುತ್ತಿದ್ದ ಶ್ಯಾವಿಗೆ ಈಗ ಎರಡು ನಿಮಿಷದ ಫಟಾಫಟ್‌ ತಿಂಡಿಯಾಗಿದೆ.

***
ಆಟಾ ನೂಡಲ್ಸ್ ವಿವಾದ
‘ಝಟ್‌ ಪಟ್‌ ಪಕಾವೊ, ಔರ್‌ ಬೇಫಿಕರ್‌ ಖಾವೊ’ (ಫಟಾ ಫಟ್‌ ಬೇಯಿಸಿ, ಚಿಂತೆ ಇಲ್ಲದೆ ಸೇವಿಸಿ)
–ಯೋಗ ಕಲಿಸುವ ಬಾಬಾ ರಾಮದೇವ್‌ ಅವರು ಇನ್ನು ಮುಂದೆ ತಮ್ಮ ಸಂಸ್ಥೆಯ ನೂಡಲ್ಸ್‌ ಪ್ರಚಾರಕ್ಕೆ ಈ ಮೇಲಿನ ಮಂತ್ರ ಜಪಿಸಲಿದ್ದಾರೆ. ಮ್ಯಾಗಿ ನೂಡಲ್ಸ್‌ ಮೇಲೆ ನಿಷೇಧ ಜಾರಿಗೆ ಬರುತ್ತಿದ್ದಂತೆಯೇ, ಬಾಬಾ ರಾಮದೇವ್‌ ಪ್ರವರ್ತಕರಾಗಿರುವ ಪತಂಜಲಿ ಆಯುರ್ವೇದ ಸಂಸ್ಥೆಯು ಇನ್‌ಸ್ಟಂಟ್‌ ನೂಡಲ್ಸ್‌ ತಯಾರಿಕೆಯತ್ತ ಗಮನ ಹರಿಸಿತು. ಮೂರು ತಿಂಗಳ ಅಲ್ಪಾವಧಿಯಲ್ಲಿಯೇ ತನ್ನದೇ ಆದ ನೂಡಲ್ಸ್‌ ತಯಾರಿಕೆಯ ಸೂತ್ರ ಸಿದ್ಧಪಡಿಸಿ ತಯಾರಿಕೆಗೂ ಚಾಲನೆ ನೀಡಿತು.

ಈಗ  ಮ್ಯಾಗಿ ನೂಡಲ್ಸ್‌ಗೆ ತೀವ್ರ ಪೈಪೋಟಿ ನೀಡಲು ದೇಶಿ ನೂಡಲ್ಸ್‌ ಮಾರುಕಟ್ಟೆ ಪ್ರವೇಶಿಸಲು ಹೊರಟಿದೆ. ‘ಆಟಾ ನೂಡಲ್ಸ್‌’ ಮಾರುಕಟ್ಟೆಗೆ ಪರಿಚಯಿಸಿದ ಬೆನ್ನಲ್ಲೇ ವಿವಾದಕ್ಕೂ ಗುರಿಯಾಗಿದೆ. ಸೀಸ ಅಥವಾ ಮೋನೊಸೋಡಿಯಂ ಗ್ಲುಟೊಮೇಟ್‌ (ಎಂಎಸ್‌ಜಿ) ಇಲ್ಲದ  ಆಟಾ ನೂಡಲ್ಸ್‌ ಇತರ ನೂಡಲ್ಸ್‌ಗಳಿಗೆ ಹೋಲಿಸಿದರೆ ಅಗ್ಗದ ಬೆಲೆಗೆ (₹15) ದೊರೆಯಲಿದೆ ಎಂದು ರಾಮದೇವ್‌ ಘೋಷಿಸಿದ್ದಾರೆ. ಆದರೆ ಈ ಉತ್ಪನ್ನ ಮಾರಾಟಕ್ಕೆ ಅನುಮತಿಯನ್ನೇ ಪಡೆದಿಲ್ಲ ಎನ್ನುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ಪತಂಜಲಿ ಸಂಸ್ಥೆಯ, ‘ಇನ್‌ಸ್ಟಂಟ್‌ ನೂಡಲ್ಸ್’ ಮಾರಾಟಕ್ಕೆ ಅನುಮತಿ ಪಡೆದಿಲ್ಲ ಎಂದು  ಹೇಳಿರುವ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್ಎಸ್ಎಐ)  ಈ ಸಂಬಂಧ ಸಂಸ್ಥೆಗೆ ಷೋಕಾಸ್‌ ನೋಟಿಸ್‌ ಜಾರಿ ಮಾಡಿದೆ.
- ಕೇಶವ ಜಿ. ಝಿಂಗಾಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT