ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪ ಆಡಿದ ಮಾತುಗಳ ಮೆಲುಕು...

Last Updated 8 ಜನವರಿ 2014, 20:18 IST
ಅಕ್ಷರ ಗಾತ್ರ

ಬೆಂಗಳೂರು: ಕೆಜೆಪಿ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು 405 ದಿನಗಳ ನಂತರ ಮತ್ತೆ ಮಾತೃ ಪಕ್ಷ ಬಿಜೆಪಿಗೆ ಮರಳಲು ಅಣಿಯಾಗಿದ್ದಾರೆ.

ಕೆಜೆಪಿಯನ್ನು ಬಿಜೆಪಿ ಜತೆ ವಿಲೀನ ಮಾಡುವ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ. ಇನ್ನೇನಿದ್ದರೂ ಬಿಜೆಪಿಯ ಸದಸ್ಯತ್ವ ಪಡೆದು, ಅಧಿಕೃತವಾಗಿ ಆ ಪಕ್ಷ ಸೇರುವುದು ಮಾತ್ರ ಬಾಕಿ ಇದೆ.

ಅದಕ್ಕಾಗಿ ಅವರು ಮತ್ತು ಅವರ  ಬೆಂಬಲಿಗರು ಗುರುವಾರ (ಜ.9) ಬೆಳಿಗ್ಗೆ 11ಕ್ಕೆ ಇಲ್ಲಿನ ಮಲ್ಲೇಶ್ವರದ ಬಿಜೆಪಿ ಕಚೇರಿಗೆ ತೆರಳಿ, ಪಕ್ಷದ ಸದಸ್ಯತ್ವ ಪಡೆಯಲಿದ್ದಾರೆ.

2012ರ ನವೆಂಬರ್‌ 30ರಂದು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದ್ದರು. ಅದರ ಬಳಿಕ ಬಿಜೆಪಿ ಮತ್ತು  ಆ ಪಕ್ಷದ ಮುಖಂಡರನ್ನು ಹಿಗ್ಗಾಮುಗ್ಗಾ ಟೀಕಿಸಿದ್ದರು.

2013ರ ವಿಧಾನಸಭಾ ಚುನಾವಣೆಯ ಫಲಿತಾಂಶ ಬರುವವರೆಗೂ ಅವರ ಮಾತಿನ ಧಾಟಿಯಲ್ಲಿ ಯಾವ ಬದಲಾವಣೆಯೂ ಇರಲಿಲ್ಲ. ಫಲಿತಾಂಶ ಹೊರ ಬಿದ್ದ ನಂತರ ಮಾತಿನ ಶೈಲಿಯನ್ನು ಬದಲಿಸಿದ್ದ ಅವರು ಬಿಜೆಪಿ ಸೇರಲು ಮಾನಸಿಕವಾಗಿ ಸಿದ್ಧರಾಗಿದ್ದರು. ಆದರೂ ಬಿಜೆಪಿ ಕಡೆಯಿಂದಲೇ ಆಹ್ವಾನ ಬರಲಿ ಎನ್ನುವ ಕಾರಣಕ್ಕೆ ಇತ್ತೀಚಿನವರೆಗೂ ಕೆಜೆಪಿ ಕಟ್ಟುವುದಾಗಿಯೇ ಹೇಳುತ್ತಿದ್ದರು. ಒಂದು ಹಂತದಲ್ಲಿ ಎನ್‌ಡಿಎ ಬೆಂಬಲಿಸುವುದಾಗಿ ಹೇಳಿದ್ದರು. ನರೇಂದ್ರ ಮೋದಿ ಪ್ರಧಾನಿಯಾಗಲು ತಾವು ಅವರ ಬೆಂಬಲಕ್ಕೆ ನಿಲ್ಲುವುದಾಗಿ ಹೇಳುತ್ತಾ ನಿಧಾನವಾಗಿ ತಮ್ಮ ನಿಲುವನ್ನು ಮಾರ್ಪಾಡು ಮಾಡಿಕೊಂಡಿದ್ದರು.

ಪರಸ್ಪರ ಚರ್ಚೆ ನಂತರ ಜನವರಿ 2ರಂದು ಅವರು ಕೆಜೆಪಿಯನ್ನು ಬಿಜೆಪಿ ಜತೆ ವಿಲೀನಗೊಳಿಸುವ ತೀರ್ಮಾನ ಪ್ರಕಟಿಸಿದರು.

ಬಿಜೆಪಿ ಬಿಟ್ಟ ದಿನದಿಂದ ಪುನಃ ವಾಪಸಾಗುವ ಹಿಂದಿನ ದಿನದವರೆಗೆ ಯಡಿಯೂರಪ್ಪ ನೀಡಿದ ಆಯ್ದ ಕೆಲ ಹೇಳಿಕೆಗಳು ಇಲ್ಲಿವೆ.

* ಬಿಜೆಪಿಯಲ್ಲಿನ ನನ್ನ ವಿರೋಧಿಗಳು ಹೇಳುವಂತೆ ನಾನು ಹತಾಶ ರಾಜಕಾರಣಿಯಲ್ಲ. ಅವರ ಕುತಂತ್ರ, ಕುಚೋದ್ಯಗಳ ಬಗ್ಗೆ ನನಗೆ ಸಹಜವಾಗಿಯೇ ಸಿಟ್ಟಿದೆ. ನಾಲ್ಕು ದಶಕಗಳ ಪರಿಶ್ರಮದಿಂದ ಇಟ್ಟಿಗೆ ಮೇಲೆ ಇಟ್ಟಿಗೆ ಇಟ್ಟು ಕಟ್ಟಿದ ರಾಜಕೀಯ ಸೌಧವನ್ನು ಮಡಕೆ ಮಾಡುವವನಿಗೆ ವರುಷ, ದೊಣ್ಣೆಗೆ ನಿಮಿಷ ಎಂಬಂತೆ ಅವಿವೇಕದಿಂದ ಅವರು ಕುಟ್ಟಿ ಕೆಡವಿದ್ದಕ್ಕೆ ನನಗೆ ಮತ್ತು ಪಕ್ಷದ ಲಕ್ಷಾಂತರ ಕಾರ್ಯಕರ್ತರಿಗೆ ವಿಷಾದ ಇದೆ.  ಕೆಜೆಪಿ ಸ್ಥಾಪನೆ ಕೇವಲ ಸಿಟ್ಟು, ಸೇಡು, ಸೆಡವಿಗಾಗಿ ಖಂಡಿತ ಅಲ್ಲ. ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಪ್ರಾದೇಶಿಕ ಪಕ್ಷ ಕಟ್ಟಲಾಗಿದೆ'

(2012ರ ನ.30ರಂದು ಬಿಜೆಪಿಗೆ ವಿದಾಯ ಹೇಳಿದ ಸಂದರ್ಭದಲ್ಲಿ)

* ಸ್ವಸಾಮರ್ಥ್ಯದ ಮೇಲೆ ನಾನು ಎತ್ತರಕ್ಕೆ ಬೆಳೆಯುವುದನ್ನು ಬಿಜೆಪಿ ವರಿಷ್ಠರು ಸಹಿಸಲಿಲ್ಲ. ಮುಕ್ತವಾಗಿ ಕೆಲಸ ಮಾಡಲು, ಕಾರ್ಯಕ್ರಮಗಳನ್ನು ರೂಪಿಸಲು ಅವಕಾಶವನ್ನೇ ನೀಡಲಿಲ್ಲ. ಉಸಿರುಕಟ್ಟುವ ವಾತಾವರಣವಿತ್ತು. ಜೀತದಾಳಿನ ಹಾಗೆ ಕೆಲಸ ಮಾಡಬೇಕು ಎಂದು ಹೈಕಮಾಂಡ್ ಬಯಸಿತು. ಇದನ್ನು ಸಹಿಸದೆ ಪಕ್ಷ ತೊರೆದಿದ್ದೇನೆ’
(2012ರ ಡಿ.7ರಂದು ಪ್ರಜಾವಾಣಿಗೆ ನೀಡಿದ ಸಂದರ್ಶನದಲ್ಲಿ)

* ಅನಂತಕುಮಾರ್‌ ಬಲು ಚಾಣಾಕ್ಷ. ಮುಳುಗುತ್ತಿರುವ ಬಿಜೆಪಿ ಹಡಗಿಗೆ ಪ್ರಹ್ಲಾದ ಜೋಶಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ ಟೋಪಿ ಹಾಕಿದ್ದಾರೆ’
(ಮೈಸೂರಿನಲ್ಲಿ 2013ರ ಮಾ.22ರಂದು ನಡೆದ ಕೆ.ಆರ್‌.ಕ್ಷೇತ್ರದ
ಕಾರ್ಯಕರ್ತರ ಸಭೆಯಲ್ಲಿ)

* ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ವಾರಕ್ಕೆ 2–3 ಸಂಪುಟ ಸಭೆ ನಡೆಸಿ ತಮ್ಮ ವ್ಯಾಪಾರ ಮುಗಿಸಿದ್ದಾರೆ. ರಾಜ್ಯದ ಖಜಾನೆ ತುಂಬಬೇಕಾದವರು ತಮ್ಮ ಜೇಬು ತುಂಬಿಸಿಕೊಂಡಿದ್ದಾರೆ. ಒಂದು ತಿಂಗಳ ಅವಧಿಯಲ್ಲಿ ₨ 100 ಕೋಟಿ ಲೂಟಿ ಹೊಡೆದಿದ್ದಾರೆ’
(ಮೈಸೂರಿನಲ್ಲಿ 2013ರ ಮಾ.22ರಂದು ನಡೆದ ಕೆ.ಆರ್‌. ಕ್ಷೇತ್ರದ
ಕಾರ್ಯಕರ್ತರ ಸಭೆಯಲ್ಲಿ)

* ಮನೆ ಹಾಳು ಬುದ್ದಿ ಇರುವುದು ಈಶ್ವರಪ್ಪ ಅವರಿಗೇ ಹೊರತು ನನಗಲ್ಲ. ತಾಕತ್ತು ಇದ್ದರೆ ಶಿವಮೊಗ್ಗ ನಗರಸಭೆಯನ್ನು ಗೆಲ್ಲಬೇಕಿತ್ತು’
(ಶಿವಮೊಗ್ಗದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ)

* ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ ಪಕ್ಷಕ್ಕೆ ಮತ್ತೆ ವಾಪಸಾಗಲಾರೆ’
(2013ರ ಸೆ.6ರಂದು ಬೆಂಗಳೂರಿನಲ್ಲಿ ಹೇಳಿಕೆ)

* ಕೆಜೆಪಿಯನ್ನು ಬಿಜೆಪಿಯಲ್ಲಿ ವಿಲೀನಗೊಳಿಸುವ ಅಥವಾ ನಾನು ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ. ಪ್ರವಾಸ ಮಾಡಿ ಪಕ್ಷ ಕಟ್ಟುತ್ತೇನೆ. ವಿಲೀನ ಕುರಿತು ಕೆಲವರು ಗೊಂದಲ ಸೃಷ್ಟಿಸುವ ಹೇಳಿಕೆ ನೀಡುತ್ತಿದ್ದು, ಆ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಬಾರದು’
(ಬೆಂಗಳೂರಿನ ನಿವಾಸದಲ್ಲಿ ಹೇಳಿಕೆ)

* ಗುಜರಾತ್‌ನಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿರುವುದು ಬಿಜೆಪಿಯ ಗೆಲುವಲ್ಲ. ಅದು ಮೋದಿ ಬ್ರಾಂಡ್‌ನ ಗೆಲುವು’
(ಬೆಂಗಳೂರಿನಲ್ಲಿ 2012ರ ಡಿ.20ರಂದು ನೀಡಿದ ಹೇಳಿಕೆ)

* ಕೆಜೆಪಿಯ ಹೊಣೆ ಹೊತ್ತ ಬಳಿಕ ಈ ಯಡಿಯೂರಪ್ಪ ಹಿಂದಿನ ಹಾಗೆ ಉಳಿದಿಲ್ಲ. ಇನ್ನು ಆರ್‌ಎಸ್‌ಎಸ್‌ ಜತೆಗೆ ಸಖ್ಯ ಇರುವುದಿಲ್ಲ. ನನ್ನದಿನ್ನು ಏನಿದ್ದರೂ ಕೆಜೆಪಿ ಸಿದ್ದಾಂತ ಮಾತ್ರ’
(2012ರ ಡಿ.12ರಂದು ಮಂಗಳೂರಿನಲ್ಲಿ ಹೇಳಿಕೆ)

* ನನ್ನನ್ನು ಭಸ್ಮಾಸುರ ಎಂದು ಸದಾನಂದ ಗೌಡರು ಕರೆದಿರಬಹುದು. ರಾಜ್ಯದಲ್ಲಿ ಬಿಜೆಪಿ ಕಟ್ಟಿ, ಅಭ್ಯರ್ಥಿಗಳನ್ನು ಗೆಲ್ಲಿಸಿ ಕೊಡುವ ಶಕ್ತಿಯನ್ನು ದೇವರು ಅವರಿಗೆ ನೀಡಲಿ ಎಂದಷ್ಟೇ ನಾನು ಪ್ರಾರ್ಥಿಸುತ್ತೇನೆ’
(2012ರ ಡಿ.12ರಂದು ಮಂಗಳೂರಿನಲ್ಲಿ ಹೇಳಿಕೆ)

* ಅನಂತಕುಮಾರ್‌ ಹಿಂಬಾಗಿಲ ಮೂಲಕ ರಾಜ್ಯ ರಾಜಕೀಯ ಪ್ರವೇಶಿಸಲು ಪ್ರಯತ್ನ ನಡೆಸಿದ್ದಾರೆ. ಜಗದೀಶ ಶೆಟ್ಟರ್‌ ಮುಖ್ಯಮಂತ್ರಿ ಅಭ್ಯರ್ಥಿಯೆಂದು ಬಿಜೆಪಿ ಘೋಷಿಸಿದ ನಂತರ ಅನಂತಕುಮಾರ್‌ಗೆ ನಿರಾಶೆಯಾಗಿದೆ’
(2013ರ ಜ.6ರಂದು ಬೆಂಗಳೂರಿನಲ್ಲಿ ಈ ಹೇಳಿಕೆ)

* ನನ್ನ ಬೆಂಬಲಕ್ಕೆ ನಿಂತ ಒಬ್ಬ ಸಚಿವೆ (ಶೋಭಾ ಕರಂದ್ಲಾಜೆ) ಅಥವಾ ನಿಗಮ ಮಂಡಳಿಗಳ ಅಧ್ಯಕ್ಷರನ್ನು ವಜಾ ಮಾಡುವುದರಿಂದ ಯಾವ ಪುರುಷಾರ್ಥವೂ ಈಡೇರುವುದಿಲ್ಲ’
(ಬೆಂಗಳೂರಿನಲ್ಲಿ ಹೇಳಿಕೆ)

* ನಾನು ಬಿಜೆಪಿ ಬಿಟ್ಟು ಬಹಳ ದೂರ ಬಂದಿದ್ದೇನೆ. ಮತ್ತೆ ಅತ್ತ ತಿರುಗಿಯೂ ನೋಡುವುದಿಲ್ಲ. ನಾನು ಹೊರ ಬಂದ ದಿನದಿಂದಲೂ ಬಿಜೆಪಿಯವರು ಇಂತಹ ಊಹಾಪೋಹ ಹಬ್ಬಿಸುತ್ತಿದ್ದಾರೆ. ಕೆಜೆಪಿಯ ಏಳ್ಗೆಗೆ ಅಡ್ಡಗಾಲು ಹಾಕುವುದೇ ಇದರ ಹಿಂದಿನ ಸಂಚು’
(ಬೆಂಗಳೂರಿನ ನಿವಾಸದಲ್ಲಿ ಹೇಳಿಕೆ)

* ಎಲ್ಲವನ್ನೂ ಯೋಚಿಸಿಯೇ ಬಿಜೆಪಿಯಿಂದ ಹೊರಬಂದಿದ್ದೇನೆ. ಮತ್ತೆ  ಆ ಪಕ್ಷಕ್ಕೆ ವಾಪಸ್ಸಾಗುವ ಪ್ರಮೇಯ ಕನಸಿನಲ್ಲೂ ಉದ್ಭವಿಸದು’
(2013ರ ಮೇ 29ರಂದು ನಡೆದ 14ನೇ ವಿಧಾನಸಭೆಯ ಮೊದಲ ದಿನದ
ಅಧಿವೇಶನದ ಸಂದರ್ಭ)

* ನಾನೊಬ್ಬ ಪೆದ್ದ, ಬೆನ್ನಿಗೆ ಚೂರಿ ಹಾಕುವವರು ನನ್ನ ಜತೆಗೆ ಇದ್ದರೂ ಅವರನ್ನು ಅರ್ಥಮಾಡಿಕೊಳ್ಳಲಿಲ್ಲ. ಮೊದಲು ಪಕ್ಷದವರು (ಬಿಜೆಪಿ) ಬೆನ್ನಿಗೆ ಚೂರಿ ಹಾಕಿದರು. ನಂತರ ನನ್ನ ಜತೆಗಿದ್ದ ಕೆಲವು ಸಚಿವರು ಆ ಕೆಲಸ ಮಾಡಿದರು’
(2013ರ ಮೇ 12ರಂದು ದೇವರಹಿಪ್ಪರಗಿಯ ಪ್ರಚಾರ ಸಭೆಯಲ್ಲಿ)

* ಅವನ್ಯಾವ ದೊಣ್ಣೆ ನಾಯಕ. ರಾಜಕೀಯದಲ್ಲಿ ಆತ ಇನ್ನೂ ಎಳಸು. ಅವನೊಬ್ಬ ಮೂರ್ಖ.  ಎಲುಬಿಲ್ಲದ ನಾಲಿಗೆ ಏನು ಬೇಕಾದರೂ ಮಾತನಾಡುತ್ತದೆ’
(ಯಡಿಯೂರಪ್ಪ ತಮ್ಮ ಸಂಪುಟದಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಪ್ರಾತಿನಿಧ್ಯ
ಕೊಡದೆ ಮೋಸ ಮಾಡಿದ್ದರು ಎಂದು ಸಿ.ಟಿ.ರವಿ ಟೀಕಿಸಿದ್ದಕ್ಕೆ  ಪ್ರತಿಯಾಗಿ
ಚಿಕ್ಕಮಗಳೂರಿನಲ್ಲಿ  2013ರ ಜ.7ರಂದು ಹೇಳಿದ್ದು)

* ಐದು ವರ್ಷಗಳ ಅಧಿಕಾರ ಅವಧಿಯಲ್ಲಿ ನನ್ನ ಹೆಸರನ್ನು ಬಳಕೆ ಮಾಡಿಕೊಂಡು ನನ್ನ ಗಮನಕ್ಕೂ ತರದೆ ಬಸವರಾಜ ಬೊಮ್ಮಾಯಿ ಕೋಟ್ಯಂತರ ರೂಪಾಯಿ ಲೂಟಿ ಹೊಡೆದಿದ್ದಾನೆ. ಅದೆಲ್ಲವನ್ನೂ ಸಹಿಸಿಕೊಂಡು ಆತನ ಮೇಲೆ ಮಗನಿಗಿಂತಲೂ ಹೆಚ್ಚು ವಿಶ್ವಾಸ ಇಟ್ಟುಕೊಂಡರೆ ಅವ ನನ್ನ ಬೆನ್ನಿಗೇ ಚೂರಿ ಇರಿದ’
(ಶಿಗ್ಗಾವಿ ಪಟ್ಟಣದಲ್ಲಿ 2013ರ ಏ.29ರಂದು ನಡೆದ ಚುನಾವಣಾ ಪ್ರಚಾರ
ಸಭೆಯಲ್ಲಿ)

* ಚುನಾವಣೆ ಬಳಿಕ ಬಿಜೆಪಿ– ಕೆಜೆಪಿ ಸೇರಿ ಸರ್ಕಾರ ರಚಿಸುತ್ತವೆ ಎನ್ನುವುದು ಬರಿ ಭ್ರಮೆ. ಅದು ಈ ಜನ್ಮದಲ್ಲಿ ಸಾಧ್ಯ ಇಲ್ಲ’
(ಮಲ್ಲೇಶ್ವರದ ಕೆನರಾ ಯೂನಿಯನ್‌ನಲ್ಲಿ 2013ರ ಜ.18ರಂದು ಪಕ್ಷದ
ಕಚೇರಿ ಉದ್ಘಾಟಿಸಿದ ನಂತರ ನೀಡಿದ ಹೇಳಿಕೆ)

* ಜಗದೀಶ ಶೆಟ್ಟರ್‌ ಅವರು ಚುನಾವಣೆ ನಂತರ ನಿಂತ ನೆಲ ನಡುಗಿ ಕೆಂಪು ದೀಪದ ಕಾರನ್ನು ನಿಂತಲ್ಲೇ ಬಿಟ್ಟು ತೆರಳುವ ಸ್ಥಿತಿ ನಿರ್ಮಾಣವಾಗಲಿದೆ’
(ನೆಲಮಂಗಲದ ಪ್ರಚಾರ ಸಭೆಯಲ್ಲಿ)

* ಕಾವೇರಿ ವಿಚಾರದಲ್ಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಅವರನ್ನು ಭೇಟಿ ಮಾಡಿ ಸಲಹೆ ನೀಡುವ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಅದೇ ವಿಚಾರದಲ್ಲಿ ನನ್ನ ವಿರುದ್ಧ ಆಕ್ರೋಶದ ಮಾತುಗಳನ್ನಾಡುತ್ತಾರೆ. ಇದು ಬಿಜೆಪಿ– ಜೆಡಿಎಸ್‌ ಒಳ ಒಪ್ಪಂದದ ಸಾಧ್ಯತೆಯನ್ನು ಎತ್ತಿ ತೋರಿಸುತ್ತದೆ’
(2013ರ ಫೆ.15ರಂದು ಬೆಂಗಳೂರಿನಲ್ಲಿ ಹೇಳಿಕೆ)

ಈಗ ಬಿಎಸ್‌ವೈ ಹೇಳುತ್ತಿರುವುದು....
* ಒಮ್ಮತದಿಂದ ಕೆಜೆಪಿಯನ್ನು ಬಿಜೆಪಿ ಜತೆ ವಿಲೀನಗೊಳಿಸಲು ನಿರ್ಧರಿಸಲಾಗಿದೆ. ಎಲ್ಲ ಭಿನ್ನಾಭಿಪ್ರಾಯಗಳನ್ನು ಮರೆತು ಬಿಜೆಪಿಯನ್ನು ಬಲಪಡಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು’

(ಜ.2ರಂದು ಬಿಜೆಪಿ ಮುಖಂಡರ ಜತೆ ಸಭೆ ನಡೆಸಿದ ಬಳಿಕ ಕೊಟ್ಟ
ಹೇಳಿಕೆ)

ಈಶ್ವರಪ್ಪ, ಶೋಭಾ ಹೇಳಿದ್ದು...

* ಸಿಬಿಐ ತನಿಖೆ ಎದುರಿಸುತ್ತಿರುವವರು ಮತ್ತು ಜೈಲಿಗೆ ಹೋಗಿ ಬಂದವರು ಪಕ್ಷದಲ್ಲಿ ಇಲ್ಲ ಎನ್ನುವ ಸಮಾಧಾನ ಇದೆ’

–ಕೆ.ಎಸ್‌.ಈಶ್ವರಪ್ಪ
(ಚುನಾವಣಾ ಸಿದ್ಧತೆ ಕುರಿತು 2013ರ
ಮಾ.20ರಂದು ಬೆಂಗಳೂರಿನಲ್ಲಿ
ನಡೆದ ಸಭೆ ಬಳಿಕ ಸುದ್ದಿಗಾರರ ಜತೆ)

* ಅನಂತಕುಮಾರ  ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ. ಅವರ ವಿರುದ್ಧ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ’
–ಶೋಭಾ ಕರಂದ್ಲಾಜೆ
(2013ರ ಆ.28ರಂದು ಯಡಿಯೂರಪ್ಪ ಮನೆಯಲ್ಲಿ ನಡೆದ ಪಕ್ಷದ
ಪ್ರಮುಖರ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT