ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಮುನಾ ಬಾಯಿ

ಕಥೆ
Last Updated 31 ಜನವರಿ 2015, 19:30 IST
ಅಕ್ಷರ ಗಾತ್ರ

ಮೇಲಧಿಕಾರಿಗಳ ಎಂಥ ಕಟುಕು ಹೃದಯವೂ ಕರಗಿ ನೀರಾಗುವಂತೆ ಮನವಿ ಪತ್ರಗಳನ್ನು ಬರೆಯುತ್ತಾನೆಂದು ಪ್ರಶಾಂತ ಎಂಬ ಹೆಸರಿನ ಕಾರಕೂನ ಆ ಕಚೇರಿಯಲ್ಲಿ ಪ್ರಖ್ಯಾತನಾಗಿದ್ದ. ದಿನವೂ  ಹತ್ತಾರು ಪತ್ರಗಳನ್ನು, ವಿನಂತಿ ಕಾಗದಗಳನ್ನು, ಅಥವಾ ವಿವರಣಾ ಪತ್ರಗಳನ್ನು ಬರೆದೇ ಅವನ ಅಂದಿನ ದಿನದ ಸೂರ್ಯ ಮುಳುಗುತ್ತಿದ್ದ.

ಪ್ಯೂನುಗಳಂತೂ ರಜೆ ಅರ್ಜಿಯನ್ನು ಬರೆಸಲು ಅವನ ಮರ್ಜಿ ಹಿಡಿಯುತ್ತಿದ್ದರು. ಇನ್ನು ಮೇಲಧಿಕಾರಿಗಳು ರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ, ಮತ್ತಾವುದೇ ಸಮಾರಂಭ ಏನೇ ಬರಲಿ ಅವರು ಪ್ರಶಾಂತನಿಗೆ ಬುಲಾವ್ ಕಳಿಸುತ್ತಿದ್ದರು. ಯಾವುದಾದರೂ ಸಮಾರಂಭ ನಡೆದರೆ ಅಲ್ಲಿ ಸ್ವಾಗತ ಮಾಡುವವನಿಂದ ಹಿಡಿದು ವಂದನಾರ್ಪಣೆ ಮಾಡುವವನವರೆಗೂ ಇವನೇ ನಾಲ್ಕು ಮಾತುಗಳನ್ನು ಬರೆದುಕೊಡಬೇಕಿತ್ತು. ಈ ಬಗೆಯ ಕೆಲಸ ಅವನನ್ನು ಎಷ್ಟರಮಟ್ಟಿಗೆ ಗ್ರಹಣದಂತೆ ಹಿಡಿದುಕೊಂಡಿತೆಂದರೆ– ಯಾರಾದರೂ ಮಾತಾಡಿಸಿದರೂ ಸಾಕು, ಅವರು ಭಾಷಣವನ್ನೋ ಅಥವಾ ಮನವಿ ಪತ್ರವನ್ನೋ ಬರೆಸಿಕೊಂಡು ಹೋಗಲಿಕ್ಕೆ ಬಂದಿರಬಹುದೆಂಬ ಅವ್ಯಕ್ತ ಭಯ ಅವನನ್ನು ಕಾಡತೊಡಗಿತು. ಯಾರಿಗೂ ಕಾಣಿಸದಂತೆ ಅವನು ಓಡಾಡತೊಡಗಿದ. ಸುಳ್ಳು ನೆವಗಳನ್ನು ತೆಗೆಯತೊಡಗಿದ. ಇಂತಹವುಗಳನ್ನು ಏನಾದರೂ ಬರೆಯಲು ಕೂತರೆ ಅವನ ಕೈ ನಡುಗುತ್ತಿದ್ದವು. ತಲೆ ಚಟ ಚಟ ಸಿಡಿಯತೊಡಗುತ್ತಿತ್ತು. ಅವನ ಬಾಸು ಅವನನ್ನು ಎಷ್ಟೋ ಬಾರಿ ಕೆಲಸದ ಅವಧಿಯಲ್ಲಿ ಹೀಗೆ ಕೆಲಸಕ್ಕೆ ಬಾರದ ಮನವಿ, ವಿನಂತಿ, ಇತ್ಯಾದಿ ಪತ್ರ ಬರೆಯುವುದನ್ನು ಕೂಡ ಆಕ್ಷೇಪಿಸಿದ್ದರು.

‘ಏನ್ರಿ ನೀವು ಕಚೇರಿ ಕೆಲ್ಸ ಮಾಡಕ ಬಂದಿರೋ ಏನು ಅವರಿವರ ಕತಿ ಬರಕೊಡಾಕ ಬಂದಿರೋ’ ಎಂದು ದಬಾಯಿಸುವಷ್ಟರ ಮಟ್ಟಿನ ಅತಿರೇಕವನ್ನು ಇದು ಮುಟ್ಟಿತು. ಇನ್ನು ಯಾರೇ ಬಂದು ದಮ್ಮಯ್ಯ ಅಂದು ಅಂಗಲಾಚಿದರೂ ಒಂದು ಅಕ್ಷರ ಬರೆಯಬಾರದೆಂದು ನಿರ್ಧರಿಸಿದ ದಿನದಂದೇ, ಎಂದೂ ಬಾರದ ಯಮುನಾಬಾಯಿ ಅಂದು ಅವನ ಎದುರು ಎರಡು ಬಿಳಿಹಾಳೆಗಳನ್ನು ಹಿಡಿದು ಪ್ರತ್ಯಕ್ಷಳಾದಳು.

ಈ ಯಮುನಾಬಾಯಿ ನಮ್ಮ ಕಚೇರಿಯಲ್ಲಿ ಈ ಹಿಂದೆ ನೌಕರಿ ಮಾಡುತ್ತಿದ್ದ ಪರಪ್ಪನ ಹೆಂಡತಿ. ಆ ಪರಪ್ಪ ಹಗಲೂ ಇರುಳೂ ಕಳ್ಳು ಕುಡಿದು, ಕರುಳಿಗೆ ತೂತಿಡಿದು ಅಕಾಲಿಕವಾಗಿ ಕೈಲಾಸವನ್ನು ಸೇರಿಕೊಂಡ ತರುವಾಯ ಅವನ ಜಾಗೆಗೆ ಅನುಕಂಪದ ಆಧಾರದ ಮೇಲೆ ಕೆಲಸಕ್ಕೆ ಬಂದಾಕೆ. ಜೀವನದ ಅರ್ಧ ವಯಸ್ಸನ್ನು ಗೃಹ ಕೃತ್ಯಗಳಲ್ಲೆ ಕಳೆದ ಆಕೆ ಒಮ್ಮಗೆ ಈ ಕಚೇರಿಯ ಬಹಿರಂಗ ಲೋಕಕ್ಕೆ ಕಾಲಿರಿಸಿದೊಡನೆ– ಇಲ್ಲಿನ ನಡಾವಳಿಗಳು, ನಿಯಮಗಳು, ವ್ಯವಹಾರಗಳು ಅರ್ಥವಾಗದೆ ಹೆಜ್ಜೆ ಹೆಜ್ಜೆಗೂ ಕಕ್ಕಾವಿಕ್ಕಿಯಾಗಿ ತಬ್ಬಿಬ್ಬಾಗುತ್ತಿದ್ದಳು. ಅವಳ ಅಧೀರತೆಗೆ ಉಳಿದವರು ಮತ್ತಷ್ಟು ಭಯ ತುಂಬುತ್ತಿದ್ದರು. ಈ ಭಯದಿಂದಾಗಿ ಇಡೀ ಮೈಯನ್ನು ಬಿಗಿ ಹಿಡಿದು, ತಲಿ ತುಂಬ ಸೆರಗು ಹೊದ್ದುಕೊಂಡು ಬಾಯಿಗೆ ಸೆರಗ ಅಡ್ಡ ಹಿಡಕೊಂಡು ಯಾರು ಏನು ಅನ್ನುತ್ತಾರೋ ಎಂಬ ಗಾಬರಿಯಲ್ಲಿಯೇ ಕೆಲಸ ಮಾಡುತ್ತಿದ್ದಳು.

ಇಂಥ ಗಾಬರಿಯಿಂದಾಗಿಯೇ ಸಹಜ ಅನ್ನಬಹುದಾದ ಕೆಲಸಗಳು ತೀರ ಕಷ್ಟ ಅನ್ನುವಂತಾಗಿ ಬಿಡುತ್ತಿದ್ದವು. ಅವಳ ವಯಸ್ಸು ಐವತ್ತ ಇದ್ದರೂ... ಚಿಂತೆ, ಕೊರಗುಗಳು ಅವಳನ್ನು ಅರವತ್ತರತ್ತ ನೂಕಿದಂತೆ ಅವಳ ಕೂದಲುಗಳು ನೆರೆತು, ತುಟಿಯ ಮುಂದಣ ಎರಡು ಹಲ್ಲುಗಳೂ ಉದುರಿ ಬೋಳಾಗಿ ಕಾಣುತ್ತಿದ್ದಳು.

ಆಕೆಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಚಿಕ್ಕ ವಯಸ್ಸಿನಲ್ಲಿಯೇ ಮನೆಯಿಂದ ನಾಪತ್ತೆಯಾದ ಮಗನು ಇದ್ದರು. ಓಡಿ ಹೋದ ಮಗ ಈಗ ಬದುಕಿಲ್ಲವೆಂದೇ ಎಲ್ಲರೂ ನಂಬಿದ ಹಾಗೆ ಆಕೆಯೂ ನಂಬಿದ್ದರೂ ಎಂದಾದರೊಂದು ದಿನ ಬಂದಾನೆಂದು ಅವಳ ಹೆತ್ತ ಕರುಳು ಆಗಾಗ ನೆನೆಯುತಿತ್ತು. ಈ ನಂಬಿಕೆಗೆ ಅವಳ ಪರಿಚಿತರು, ನೆಂಟರು ಆಗಾಗ ‘ನಿನ್ನ ಮಗನ್ನ ಬೆಂಗಳೂರಲ್ಲಿ ನೋಡಿದೆ ಕಣವ್ವಾ.. ನನ್ನ ನೋಡುತ್ತಿದ್ದತಂಲೆ ಕಣ್ಣಿಗೆ ಕಾಣಸದಂಗೆ ಜನಗಳ ಮಧ್ಯ ಓಡಿ ಹೋದ್ನವ್ವ’ ಅನ್ನುತ್ತಿದ್ದರು. ಇನ್ನು ಕೆಲವರು ತಾವು ಖುದ್ದಾಗಿ ಅವನನ್ನು ನೋಡಿದೆವೆಂದು, ಅವನೊಡನೆ ಮಾತಾಡಿದೆವೆಂದು, ಊರಿಗೆ ಕರೆದೆವೆನ್ನುವವರು.

ಆದರೆ ಅವ ‘ಬರೋ ವ್ಯಾಳಕ್ಕೆ ಬರುತ್ತೇನೆ’ ಅಂದನೆಂದು ಹೇಳುವರು. ಅಂತಹ ಮಾತುಗಳನ್ನು ಕೇಳಿದ ನಾಲ್ಕಾರು ದಿನ ಆಕೆಗೆ ಅವನದೇ ಕನಸು. ಇಷ್ಟು ವರ್ಷವಾದರೂ ಆ ಕನಸು ಆಕೆಯನ್ನು ಮರೀಚಿಕೆಯಂತೆ ಕಾಡುತ್ತಿತ್ತು.

ಎರಡು ಹೆಣ್ಣು ಹುಡುಗಿಯರ ಜೊತೆ ನೆಲ ಹಿಡಿದ, ವಯಸ್ಸಾದ ಮುದಿ ತಾಯಿ ಅವಳಿಗೆ ಅಂಟಿಕೊಂಡಿದ್ದಳು. ಆ ತಾಯಿಯೋ ಈಚೆಗೆ ಸಂಡಾಸ್ ಖೋಲಿಯಲ್ಲಿ ಬಿದ್ದು ಚಪ್ಪೆ ಮುರುಕೊಂಡು ಮನೆತುಂಬಾ ತೆವಳಿಕೊಂಡೋ ಇಲ್ಲ ಸದಾ ಮಂಚ ಹಿಡಿದೋ ದಿನ ದೂಡುವ ಸ್ಥಿತಿಗೆ ತಲುಪಿದ್ದಳು. ದೊಡ್ಡಾಕೆಯನ್ನು ಮದುವೆ ಮಾಡಿ ಮನೆಯಲ್ಲಿ ಯಾವುದಕ್ಕೂ ಗಂಡಸೆಂಬ ಪ್ರಾಣಿಯಿರಲಿ ಎಂದು ಅಳಿಯನನ್ನು ತನ್ನೊಟ್ಟಿಗೆ ಇರಿಸಿಕೊಂಡಿದ್ದಳು.

ಕೆಲಸವಿಲ್ಲದೆ ಓ.ಸಿ, ಇಸ್ಪೆಟ್ ಅಂತ ಓಣಿ ಓಣಿ ಹಿಡಿದು ತಿರುಗುತ್ತಿದ್ದ ಈ ಹಲಾಲಖೋರನನ್ನು ಬೇಕೆಂದೇ ಅವಳ ಸಂಬಂಧಿಕರು ‘ಹೇ ಹುಡುಗ ಬಹಳ ಚಲೋ.. ಖರೇ, ಒಂಚರೂ ಉಡಾಳದನ.. ಮದುವಿ ಅದಮ್ಯಾಗ ದಾರಿಗ್ ಬರ್‍ತಾನ’ ಅಂತ ಹೇಳಿ ಯಮುನಾಬಾಯಿಯ ಹಿರೇ ಮಗಳ ಕೊರಳಿಗೆ ಕಟ್ಟಿ ಹಾಕಿದ್ದರು. ಕೊರಳಿಗೆ ಗಂಟು ಬಿದ್ದ ಅವ ಬರುಬರುತಾ ಯಮುನಾಬಾಯಿಗೆ ಉರಲಾಗತೊಡಗಿದ. ಹೆಂಗಸರ ದೌರ್ಬಲ್ಯವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದ ಈ ಅಳಿಯ ಗತಿಸಿಹೋದ ಮಾವ ಪರಪ್ಪನನ್ನು ನೆನಪಿಸುವವನಂತೆ ನಿತ್ಯ ಕುಡಿದು ಬಂದು ರಾತ್ರಿ ದಾಂಧಲೆ ಎಬ್ಬಿಸುತ್ತಿದ್ದ.

ಇನ್ನೊಬ್ಬ ಕಿರಿ ಮಗಳು ಕಲಿಯಲು ಕಾಲೇಜಿಗೆ ಹೋಗುತ್ತಿದ್ದಳು. ಅವಳು ಕನ್ನಡಿ ಮುಂದೆ ನಿಲ್ಲುವ ಸಮಯವನ್ನೂ ಮತ್ತು ಮೊಬೈಲಿನೊಂದಿಗೆ ಕಳೆಯುವ ವೇಳೆಯನ್ನು ಲೆಕ್ಕ ಹಾಕಿದರೆ ಯಾರಾದರೂ ಕೂಡ ಆಕೆ ಹೇಗೆ ಓದುತ್ತಾಳೆ ಎಂದು ನಿಖರವಾಗಿ ಹೇಳಬಹುದೆಂಬಂತೆ ಆಕೆ ಇಂತಹ ಸಂಗತಿಗಳಲ್ಲಿಯೇ ಸದಾ ಮುಳುಗಿರುತ್ತಿದ್ದಳು. ಆಕೆಯ ಶೃಂಗಾರ ನೋಡಿ ನೋಡಿ ಆಕೆಯ ಮೊಬೈಲ್ ಆಲಾಪ ಕೇಳಿ ಕೇಳಿ ಯಮುನಾಬಾಯಿ ಹಣೆ ಹಣೆ ಬಡಿದುಕೊಂಡು ‘ಯವ್ವಾ ನೀ ಕಾಲೇಜಿಗೆ ಓದಾಕ ಹೊಕ್ಕಿಯೋ, ಏನು ಫ್ಯಾಶನ್ ಮಾಡಕ್ಕೋಕ್ಕಿಯೋ’ ಅಂತ ಆಕೆಯ ತಲೆಗೆ ಕುಕ್ಕುತ್ತಿದ್ದಳು.

ಇಂತಹ ಯಮುನಾಬಾಯಿ ಪ್ರಶಾಂತನ ಮುಂದೆ ನಿಂತು ‘ಸರ್, ನಂಗೊಂದು ಅರ್ಜಿ ಬರಕೊಡ್ರಿ’ ಅಂದಳು. ಆಕೆಯ ದೈನ್ಯ ಮುಖ ನೋಡಿ ಇನ್ನಾರಿಗೂ ಇನ್ನೆಂದಿಗೂ ಅರ್ಜಿ ಬರೆದು ಕೊಡಬಾರದೆಂದು ಈ ಕ್ಷಣದ ಹಿಂದಷ್ಟೇ ತೆಗೆದುಕೊಂಡ ಪ್ರಶಾಂತನ ವ್ರತ ಭಂಗವಾಯಿತು. ‘ಏನು ಅರ್ಜಿ ಬರಕೊಡಬೇಕು ಬಾಯಿ’ ಅಂದ.

‘ಸರ್ ನಾನು ಕ್ವಾಟರ್‍ಸ್ ಮನಿನ ಬಿಡ ಬೇಕಂತ ಮಾಡೇನಿ.. ಸಾಹೇಬ್ರಿಗೆ ಅರ್ಜಿ ಬರಕೊಡ್ರಿ’ ಅಂದಳು.

ಆಕೆ ಕ್ವಾಟರ್‍ಸ್ ಯಾಕೆ ಬಿಡುತ್ತಾಳೋ, ಏನು ಸಮಸ್ಯೆಯೋ, ಕ್ವಾಟರ್‍ಸ್ ಸಿಕ್ಕರೆ ಸಾಕಪ್ಪ ಎಂದು ಅದಕ್ಕಾಗಿ ವರ್ಷಗಟ್ಟಲೆ ನೌಕರರು ಒಂಟಿಗಾಲಲ್ಲಿ ಕಾಯುವಂತಹ ಸಮಯವಿರುವಾಗ ಈಕೆಗೇನು ಬಂತೋ ಅಂದುಕೊಂಡ ಪ್ರಶಾಂತ, ‘ಯಾಕ ಬಾಯಿ ಏನಾರ ತೊಂದ್ರಿ ಐತಾ.. ಸರ್ಕಾರದ ಮನಿ.. ಬಾಡಿಗಿ ಕಮ್ಮಿ, ಕಚೇರಿಗೆ ಸಮೀಪ’ ಎಂದ. ಅವನ ಹೆಸರು ಪ್ರಶಾಂತ ಎಂದಿದ್ದರೂ ಇಂತಹ ಮಂದಿಯ ಸಮಸ್ಯೆ ಕೇಳಿ ಕೇಳಿ ಅವುಗಳನ್ನೇ ನಿತ್ಯ ಬರೆದೂ ಬರೆದೂ ಅವನ ಮನಸ್ಸು ಅಶಾಂತಿಯ ಕಡಲಂತಾಗಿತ್ತು.
‘ನೀವು ಹೇಳದೆಲ್ಲಾ ಬರೋಬರಿ ಸರ್.. ಹಾಗಂತ ನಾನು ಈಸು ದಿನ ಆ ಮನಿನಾಗ ಇದ್ದೆ.. ಇತ್ಲಿತ್ತಾಗ ಮಂದಿ ಕಾಟ ಬಾಳ ಆಗೇದ. ನಮ್ಮ ಹೆಣ್ಣು ಹುಡುಗ್ರು ಹೊರಗ ತಲಿ ಆಕಂಗಿಲ್ಲ. ಹಿಂದಿನಿಂದ ಏನೇನೋ ಒದರ್‍ತಾವ. ಕೆಟ್ಟಗಣ್ಣಿಲೆ ನೋಡ್ತಾವ. ನನ್ನ ಅಳಿಯ ಅದಾನಲ್ಲ.. ಅವ ದಿನ ನಮ್ಮ ಮಾನ ತೆಗೆಯಕತ್ಯಾನ. ಕುಡಕಂಡು ಬಂದು ಗದ್ಲ ತೆಗಿತಾನ.

ಯಾರ್‍ಯಾರನ್ನೋ ನನ್ನ ಗೆಳಿಯಾರು ಅಂತ ಗುರ್ತು ಪರಿಚಯ ಇಲ್ಲದ ಮಂದಿನ ಮನಿಗೆ ಕರ್‍ಕಂಡು ಬರ್‍ತನಾ. ಹಿಂಗ ಕರ್‍ಕಂಡು ಬರಬ್ಯಾಡ ಅಂತ ಹೆಂಗ ಹೇಳಾದು...’ ಅಂದಳು ಯಮುನಾಬಾಯಿ.

‘ಬ್ಯಾರಿ ಕಡಿ ಹೋದರ ಇಂಥ ಮಂದಿ ಇಲ್ಲ ಅನ್ನೋದು ಏನು ಗ್ಯಾರಂಟಿ ಬಾಯಿ, ಈಗ ಲೋಕ ಬಾಳಾ ಕೆಟ್ಟೈತಿ’ ಅಂದ ಪ್ರಶಾಂತ.

‘ಸರ್ ನಮ್ಮ ಕಷ್ಟ ಎಷ್ಟು ಹೇಳಿದರೂ ತೀರದು. ಗಂಡನ್ನ ಕಳಕೊಂಡ ಹೆಂಗಸೂ ಈ ಪ್ರಪಂಚದಾಗ ಬಾಳೋದು ವಜ್ಜೆ ಅದ. ನಾ ಇಟೋತ್ತಿಗೆ ಹೊರಗೆಲ್ಲಾರ ಚಲೋ ಬಾಡಿಗಿ ಮನಿ ಹಿಡಿತಿದ್ದೆ. ನಮ್ಮ ಅವ್ವನ ಸಲುವಾಗಿ ಬಿಟ್ಟಿನಿ. ಆಕಿ ಮೊದ್ಲು ಏಟು ಚಲೋ ಗಟ್ಟ ಮುಟ್ಟ ಇದ್ದಳು. ಸಂಡಾಸ ಖೋಲಿಯಾಗ ಬಿದ್ದು ಚಪ್ಪೆ ಮುರುಕಂಡ ಮ್ಯಾಗ ಆಡೋ ಕೂಸ ಆಗ್ಯಾಳ.

ಎಲ್ಲ ಹಾಸಿಗೆ ಮ್ಯಾಲ. ನೆಲದ ಮ್ಯಾಗ ಕುಂಡಿ ಎಳಕೊಂಡು ತೆವಳತಾಳ. ಅಂತಾದರಾಗ ಕೆಲ್ಸ ಮಾಡ್ತಿನಿ ಅಂತ ಹೊಕ್ಕಾಳ. ಈ ಕ್ವಾಟರ್‍ಸ್ ಕಟ್ಟಿದ ಮನುಷ್ಯನಿಗೆ ಮನಿಯೊಳಗ ಪಾಯಖಾನಿ ಕಟ್ಟ ಬೇಕೂಂತ ಯಾಕ ತಿಳಿಲಿಲ್ಲಾಂತಿನಿ. ಅಲ್ಲಿ ರಾತ್ರಿ ದೀಪಾನೂ ಇಲ್ಲ. ಅಗಲೆಲ್ಲಾ ಸಂಡಾಸ ಬಂದರ ಏನು ಗತಿ ಅಂಬ ಚಿಂತಿಲಿ ಆಕಿ ಊಟನ ಕಡಿಮಿ ಮಾಡ್ಯಾಳ. ನಮ್ಮ ಚಿಂತಿಲಿ ಆಕಿ ಗುಬ್ಬಿ ಹಂಗ ಆಗ್ಯಾಳ.

ನೀವು ಖರೇವು ಹೇಳಿದರೂ ನಂಬತ್ತೀರಿ.. ಸುಳ್ಳು ಹೇಳಿದರೂ ನಂಬತ್ತೀರಿ. ಸಂಡಾಸ ಸಲುವಾಗಿನ ನಾ ಮನಿ ಬಿಡಕ್ಕಾತ್ತಿನಿ. ಸಂಡಾಸ ಚಲೋ ಇದ್ದದ್ದಿರೆ ನಮ್ಮವ್ವ ಚಪ್ಪೆ ಮುರಕಂತಿದ್ದಿಲ್ರಿ. ನಡು ರಾತ್ರ್ಯಾಗ ಆಕಿ ಒಬ್ಬಾಕಿನ ಸಂಡಾಸ ಮಾಡಕ್ಕೋಗಿ ರೊಂಡಿ ಮುರ್‍ಕಂಡು ಕುಂತಳ್ರಿ. ನಮ್ಮ ಕ್ವಾಟರ್‍ಸ್ ಮಂದಿ ಏಟು ಕೆಟ್ಟ ಅದಾರ ಅಂದರ... ಸಂಡಾಸ ಖೋಲಿ ಸಹಿತ ಮುಚ್ಕಳದಂಗೆ ಹಂಗೆ ಹೇಲಾಕ  ಕೂರ್‍ತಾವ್ರಿ. ಇಲ್ಲಿ ಹೆಣ್ಣು ಮಕ್ಕಳು ಓಡಾಡ್ತವ ಅಂಬೋ ಖಬರು ಇಲ್ಲ ಅವ್ಕ. ಬೀಡಿ ಸೇದ್ಕಂತಾ ಗುಟ್ಕಾ ಜಗ್ಕಂತ ತಾಸುಗಟ್ಟಲೆ ಹಂದಿಯಂಗೆ ಅಲ್ಲೇ ಗುರು ಗುರು ಅಂತ ಕೂರತಾವ. ಎಲ್ಲ ತ್ರಾಸಾ ಸರ್..

ಆ ಕ್ವಾಟರ್‍ಸ್ ಕಟ್ಟಿದವನ ಮನಿ ಹಾಳಾಗಲಿ... ಅಂತ ಸಂಡಾಸ ಬಾಜುಕ್ಕೆ ನೀರ ಹಿಡಿಯೋ ನಳ ಕೂರಸ್ಯಾನ್ರಿ.. ಆ ನೀರರಾ ಯಾವಾಗ ಬರ್‍ತಾವ ಅಂಬೋದು ನಚ್ಚಗಿನಾ ಇಲ್ಲ. ಒಮ್ಮೊಮ್ಮೆ ನಡು ರಾತ್ರ್ಯಾಗ ನೀರು ಬರ್‍ತಾವ. ಆ ನೀರ ಹಿಡಿಯಾಕ ನಾ ಮುಂದು ನೀ ಮುಂದು ಅಂತ ಜಗಳ. ನೀರಿಗೆ ಹಿಂಗ ಮಂದಿ ಕೂಡ ನಾವು ಕಿತ್ತಾಡಕತ್ತಿದ್ದರೆ ಅಳಿಯ ಹಾಸಿಗೆ ಬಿಟ್ಟು ಎದ್ದು ಬರಲ್ಲ. ಮಕ್ಕಂಡೆ... ‘ಏ ಏನು ಗದ್ಲ ಹಚ್ಚಿರೇ ನಡು ರಾತ್ರ್ಯಾಗ.. ನೀರು ನೀರು ಅಂತ ಯಾಕ ಕಾಗಿಯಂಗ ಒದರಾಡಕ್ಕತ್ತೀರೆ. ಎದ್ದು ಬಂದು ಎದೆಗೆ ಒದಿಲೇನು’ ಅಂತ ಕೆಟ್ಟ ಕೊಳಕ ಬೈತಾನೆ.. ಕೇಳಿದ ಮಂದಿಯಲ್ಲಾ ನಗಾಡ್ತರೆ...’

ಯಮುನಾಬಾಯಿ ಈ ಕ್ವಾಟರ್‍ಸ್‌ನ ಕತೆಯನ್ನು ಅರ್ಜಿಯ ಮೈಯೊಳಗೆ ಹೇಗೆ ಸೇರಿಸಬೇಕೆಂದು ಹೊಳೆಯದೇ ಚಿಂತಾಕ್ರಾಂತನಾದ ಪ್ರಶಾಂತ ‘ಬಾಯಿ, ನೀ ಹೇಳೋ ಕತಿಯನ್ನೆಲ್ಲಾ ಬರೆದ್ರೆ, ಎರಡು ನೋಟು ಬುಕ್ಕೇ ಬೇಕು. ನೀ ಕೊಟ್ಟ ಎರಡು ಹಾಳಿ ಯಾತಕೂ ಸಾಲದಿಲ್ಲ.. ಆಟು ದೊಡ್ಡದ ಐತಿ ನಿನ್ನ ಸಮಸ್ಯಾ’ ಅಂದ.

‘ಸರ್ ನೀವು ನಾ ಹೇಳದನಲ್ಲ ಕೇಳ್ರಿ.. ಬರಿವಾಗ ಎಟರ ಬರ್ರಿರಿ’ ಅಂದ ಯಮುನಾಬಾಯಿ ತನ್ನ ಕತಿಯನ್ನು ಮುಂದುವರಿಸಿದಳು.

‘ನನ್ನ ಮನಿ ಮ್ಯಾಲ ಇರೋ ಮನಿಯಾಗ ಬ್ಯಾರ ಜಾತಿ ಮಂದಿ ಅದಾರ. ಆ ಮನಿಯಾಗ ಒಬ್ಬ ಪುಂಡ ಪೋಕರಿ ಉಡಾಳ ಹುಡುಗ ಅದಾನ. ಕೆಲ್ಸ ಇಲ್ಲ ಬೊಗಸಿ ಇಲ್ಲ.. ಕುಂಡಿಗೆ ಪಲ್ಸರ್ ಬೈಕ್ ಸಿಕ್ಕಿಸಿಕೊಂಡು ಓಣಿ ಓಣಿ ತಿರುಗತಾನ. ಅವನ ಅಪ್ಪ-ಅವ್ವಗಳು ಹುಟ್ಟಿಸಿದ ಕಿಚ್ಚಿಗೆ ಅವನು ಬಂದಾಗ ಹೊಟ್ಟಿಗೆ ಹಿಟ್ಟು ಹಾಕ್ತಾವ... ಮತ್ತೇನು ಕೇಳಂಗಿಲ್ಲ-ಹೇಳಂಗಿಲ್ಲ. ಆವ ನನ್ನ ಮಗಳ ಹೆಸ್ರನ ತನ್ನ ಹೆಸರ ಕೂಡ ಜೋಡು ಮಾಡಿ ಕ್ವಾಟರ್‍ಸಿನ ಗ್ವಾಡಿಗ್ವಾಡಿ ಮ್ಯಾಗೆಲ್ಲ ‘ಐ ಲವ್ ಯೂ.. ಐ ಲವ್ ಯೂ’ ಅಂತ ಏನೇನೋ ಸುಡುಗಾಡ ಬರಿತಾನ್ರಿ.. ನಾವು ನೋಡಲಾರದೆ ದಿನಾ ಒರೆಸ್ತಿವಿ.. ಅಳಸ್ತಿವಿ.. ಮತ್ತ ಬರಿತಾನ.. ನನ್ನ ಮಗಳು ಅತಕಂತ ಕಾಲೇಜಿಗೆ ಹೋಗ್ತದ.. ಬರ್‍ತದ.. ಅವ್ನ ಕುತ್ತಿಗಿ ಹಿಡಿದು ಕೇಳೋ ಗಂಡ್ಸ ಮನಿಯಾಗಿಲ್ಲಂತ ಅವ ಹಿಂಗ ಮಾಡಕತ್ಯಾನ...

ಮಂದಿಗೆ ನನ್ನ ಮ್ಯಾಗ ಹೊಟ್ಟಿ ಉರಿ. ನನಗ ನನ್ನ ಗಂಡನ ಪೆನಶನ್ ಬರ್‍ತದ. ನನಗ ಪಗಾರ ಬರ್‍ತದ.. ನನ್ನ ಗಂಡ ಸತ್ತಾಗ ರೊಕ್ಕ ಬಂದೈತಿ.. ಹಿಂಗ ಅಂದುಕೊಂಡು ನನ್ನ ಅಳಿಯಾನ ಕಿವಿಯಾಗ ಏನೇನರ ತುಂಬಿ ಅವ್ನ ನನ್ನ ವಿರುದ್ಧ ಛೂ ಬಿಟ್ಟಾರ... ದಿನಾ ಅವ ಕುಡ್ದು ಬಂದು ‘ರೊಕ್ಕ ಇಟಗೊಂಡು ಏನು ಮಾಡ್ತಿರೇ... ಸರಿಯಾಗಿ ತಿನ್ನವಲ್ರಿ.. ಉಣವಲ್ರಿ.. ಉಡುವಲ್ರಿ.. ನಿಮ್ಮ ಮೈಗಳ ಅರಿವಿನಾರ ನೋಡಕೊಳ್ರಿ.. ಜೋಗ್ಯಾರ ಇದ್ದಂಗದಿರಿ.. ಚಹಾಕ ಸಕ್ಕರಿಯಿಲ್ಲ.. ಸಾರಿಗೆ ಉಪ್ಪಿಲ್ಲ.. ದೋಸಿಗೆ ಎಣ್ಣಿಲ್ಲ.. ನೀವೇನು ನನ್ನ ಸನ್ಯಾಸಿ ಮಾಡಕೊಂಟಿರೇನು ಮತ್ತ... ಇರತಂಕ ಚೆನ್ನಾಗಿ ಉಂಡು ತಿಂದು ಸಾಯಬೇಕ್ರಲೇ..’ ಅಂತ ದಿನಾ ಅವ ರೊಕ್ಕ ಬೇಡತಾನ... ಕೊಡಲಿಲ್ಲಾಂದ್ರ ಹೆಂಡ್ತಿಗೆ ಬಡಿತಾನ...

ವಯಸ್ಸಾದ ನಮ್ಮವ್ವ ತಡಿಲಾರದೆ ಏನಾರ ನಾಕು ಬುದ್ಧಿ ಮಾತು ಹೇಳಾಕ ಹ್ವಾದರ... ಅವ ‘ಹೇ ಮುದ್ಕಿ ಬಾಯಿ ಮುಚ್ಕಂಡು ಮಕ್ಕಾ... ರೊಂಡಿ ಮುರ್‍ಕಂಡು ಮೂಲಿಗೆ ಕುಂತಿ.. ನೀ ಹಿಂಗ ಅಡ್ಡಡ್ಡ ಮಾತಾಡಿದ ಅಂದ್ರ ನಿನ್ನ ಗೋಣು ಮುರ್‍ದು ಉಣಕಲ್ ಕೆರಿಗೆ ಒಗಿತಿನಿ’ ಅಂತಾನ. ಸರ್ ಏನು ಈ ಬಾಯಿ ಹಿಂಗ ಇಲ್ಲದ ಕತಿನೆಲ್ಲಾ ನನ ಮುಂದ ಹೇಳಕತಾಳಂತ ಬ್ಯಾಸರ ಮಾಡ್ಕ ಬ್ಯಾಡ್ರಿ. ಹೆಣ್ಣು ಹೆಂಗಸರು ಮಾನವಾಗಿ ಬಾಳಾಂತ ಕಾಲ ಅಲ್ಲ ಸರ್ ಇದು, ಕೆಟ್ಟ ಕಾಲ ಅನ್ನುತ್ತಾ ಆಕಿ ತನ್ನ ಕತಿಯನ್ನು ಹೇಳುತ್ತಾ ಹೋದಳು. ಆ ಕತಿಯಲ್ಲಿ ಏನೆಲ್ಲಾ ಬಂದು ಹೋದವೆಂದರೆ ವರ್ತಮಾನದಲ್ಲಿ ಕಾಣುವ ವ್ಯಕ್ತಿಯ ಹಿಂದ ಅವ್ಯಕ್ತವಾಗಿ ಅಡಗಿರುವ ಗುಪ್ತಚರಿತ್ರೆ ಎಷ್ಟೊಂದು ಭಯಂಕರವಾಗಿಯೂ ಕಲ್ಪನಾತೀತವಾಗಿರುತ್ತದೆಂದು ನಂಬಲಾರದಷ್ಟು ಮಟ್ಟಿಗಿತ್ತು.

ಪ್ರಶಾಂತನಿಗೆ ಹಿಂಗೆ ಮಂದಿಯ ಹಿಂದಣ ದುಃಖ ದುಮ್ಮಾನವನ್ನು ಅನಿವಾರ್ಯವಾಗಿ ಕೇಳಿ ತಪ್ತಗೊಳ್ಳುವುದು ಈಚೀಚೆಗೆ ಹೆಚ್ಚಾಗಿ ಹೋಗಿದೆ. ಇನ್ನೂ ಕೇಳಲಾರೆ ಎನ್ನುವಂತೆ ಅವ ‘ಬಾಯಿ ನಾಳಿಯೊಟತ್ತಿಗೆ ಬರ್‍ದು ಇಟ್ಟಿರ್‍ತಿನಿ. ಬಂದು ತಗಂಡೋಗು. ನಿನ್ನ ಸಮಸ್ಯ ಮನಿ ಬದ್ಲ ಮಾಡೋದರಿಂದ ಸರಿಯಾಕ್ಕತಿ ಅಂತ ನಂಗೇನೋ ಅನ್ನಿಸವಲ್ದು’ ಅಂದ.

ಯಮುನಾಬಾಯಿ ಕೂಡ ಇಷ್ಟು ಹೇಳುವ ಹೊತ್ತಿಗೆ ದಣಿದವಳಂತೆ ಕಂಡು ಬಂದಳು. ಅವಳ ಗಂಟಲು ಕಟ್ಟಿತು. ಕಣ್ಣುಗಳಲ್ಲಿ  ನೀರು ತುಂಬಿಕೊಂಡು ರೆಪ್ಪೆ ತುದಿಯಿಂದ ಕೆಳಕ್ಕೆ ಧುಮುಕಿದವು. ಸೆರಗಿನಿಂದ ಒರೆಸಿಕೊಂಡಳು. ‘ನನ್ನ ಚಿಕ್ಕ ಮಗಳಿಗೊಂದು ಚಲೋ ವರ ಸಿಕ್ಕರೆ ಮುದುವಿ ಮಾಡಿ ನಾ ತಲಿ ತೊಕ್ಕಂಬಿಡ್ತಿನಿ. ಅದೊಂದು ಆಸಿ ಐತಿ. ನಮ್ಮವ್ವ ಕಣ್ಣು ಮುಚ್ಚೋದರೊಳಗೆ ಅದೊಂದು ಕಾರ್ಯ ಮಾಡಬೇಕಂತಿದಿನಿ. ಆ ಮ್ಯಾಕ ಮನಿ ಚಿಂತಿ ಬಿಡ್ತಿನಿ’ ಅಂದು ಮೇಲೆದ್ದಳು.
***
ಮರುದಿನ ಯಮುನಾಬಾಯಿ ಕಚೇರಿಗೆ ಬರಲೇ ಇಲ್ಲ. ಪ್ರಶಾಂತ ಆಕೆ ಹೇಳಿದ ದೀರ್ಘ ಕತೆಯನ್ನು ಸಂಕ್ಷಿಪ್ತಗೊಳಿಸಿ ಮನವಿಯೊಂದನ್ನು ನೀಟಾಗಿ ಬರೆದು ರೆಡಿ ಇಟ್ಟು ಆಕೆಯ ಹಾದಿ ಕಾಯುತ್ತಿದ್ದ. ಆಕಿಯ ಮನಿಯ ಬಾಜು ಇರುವ ಅರವಟಗಿ ಬಂದವ ‘ಸರ ಗೊತ್ತಾತೇನ್ರಿ ವಿಷಯ’ ಅಂದ. ‘ಯಮುನಾಬಾಯಿ ಅವ್ವ ತೀರಕಂಡಳು’ ಅಂದ. ಪ್ರಶಾಂತ ‘ಹೌದಾ.. ಯಾವಾಗ’ ಅನ್ನುತ್ತಿದ್ದಂತೆ ಅರವಟಗಿ ಇನ್ನೊಂದು ಭೀಕರ ಸುದ್ದಿಯನ್ನು ಹೇಳಿದ.

‘ಯಮುನಾಬಾಯಿ ಕಾಲೇಜಿಗೆ ಹೋಗುತ್ತಿದ್ದ ಎರಡನೇಯ ಮಗಳು ನಿನ್ನೆಯಿಂದ ಮನಿಗೆ ಬಂದಿಲ್ಲ. ಯಾವುದೋ ಹುಡುಗನ ಜೊತಿ ಓಡಿ ಹೋಗಿದ್ದಾಳಂತೆ.. ಹೋಗುವಾಗ ಮನಿಯಲ್ಲಿನ ವಡವಿ, ವಸ್ತ್ರ, ದುಡ್ಡು ಎಲ್ಲ ಬಳಕಂಡು ಹೋಗ್ಯಾಳಂತ’ ಪ್ರಶಾಂತ ಕೈಯಲ್ಲಿನ ಅರ್ಜಿಯನ್ನು ನೋಡಿದ. ಅದು ಮುಂದಿನ ಕತೆಯನ್ನು ಸೇರಿಸಲು ಅವನನ್ನು ಕೈ ಮಾಡಿ ಕರೆಯುವಂತೆ ಕಾಣಿಸಿತು.

ಯಮುನಾಬಾಯಿಯನ್ನು ಮಾತಾಡಿಸಿಕೊಂಡು ಬಂದರಾಯಿತೆಂದು ಆಫೀಸಿನ ‘ಡ ವರ್ಗ’ದ ನೌಕರರೆಲ್ಲ ಹೊರಟು ನಿಂತಾಗ ಪ್ರಶಾಂತನು ಅವರೊಟ್ಟಿಗೆ ಹೊರಟ. ನಗರದ ಮಧ್ಯದ ಸ್ಲಂನಂತೆ ಇತ್ತು ಆಕೆಯ ಕ್ವಾಟರ್‍ಸ್. ಒಂದಕ್ಕೊಂದು ಒತ್ತಿಕೊಂಡು ಮತ್ತೊಂದನ್ನು ನೀ ದೂರ ಸರಿ ಅಂದು ದಬಾಯಿಸುವಂತೆ ಕಾಣುವ ಸಾಲು ಸಾಲು ಚಿಕ್ಕ ಚಿಕ್ಕ ಮನೆಗಳು.

ಯಾವುದೋ ಓಬಿರಾಯನ ಕಾಲದಲ್ಲಿ ಕಟ್ಟಿದ್ದ ಅವು ಈ ಆಧುನಿಕ ಕಾಲವನ್ನು ಅಣಕಿಸುವಂತೆ ಇದ್ದವು. ಅಂತಹ ಮನಿಯಲ್ಲಿ ವಾಸಿಸುವ ಮಂದಿಯ ಮನಸ್ಸನ್ನು ಅವು ಪರಿವರ್ತಿಸಿ ಬಿಟ್ಟಿವೆಯೇನೋ ಅನ್ನುವಂತೆ ಜನ ಕೂಡ ಅಸಡ್ಡಾಳರಂತೆ ಕಾಣುತಿದ್ದರು. ಅವರು ಉಟ್ಟ ಬಟ್ಟೆ, ಮಾತುಕತೆ ಎಲ್ಲ ಯಾವುದೋ ಪುರಾತನ ಕಾಲಕ್ಕೆ ಸಂಬಂಧಿಸಿದಂತೆ ಕೇಳುತಿತ್ತು. ಅದರಲ್ಲಿ ಬಹಳಷ್ಟು ಮಂದಿ ಆಂಧ್ರದಿಂದ ವಲಸೆ ಬಂದವರೇ ಇದ್ದಂತೆ ಕಾಣುತ್ತಿದ್ದರು.

ಆಂಧ್ರದ ಮಣ್ಣಿನ ವಾಸನೆಯನ್ನು ಮೈಗೆ ಅಂಟಿಸಿಕೊಂಡವರಂತೆ ತೆಲುಗನ್ನು ಕನ್ನಡದೊಳಕ್ಕೆ ತುರುಕಿ ಮಿಶ್ರತಳಿಯ ಭಾಷೆಯೊಂದನ್ನು ಅವರು ಬಳಸುತ್ತಿದ್ದರು. ಮನಿಗಳ ಸುತ್ತೂ ಸಂಡಾಸಿನ, ಬಾತ್ ರೂಂನ ನೀರು ಹರಿಯುತಿತ್ತು. ಅವುಗಳಲ್ಲಿ ಹಂದಿಗಳು ಮೈ ತೊಳೆಯುತ್ತಿದ್ದವು. ಕಿಟಕಿಯ ಜಾಲಂಧ್ರ - ಹೊರಗಿನ ಸಿಮೆಂಟ್ ಕಟ್ಟೆಗಳ ಮೇಲೆ ತೊಳೆದ ಅರಿವೆಗಳನ್ನೆಲ್ಲ ಹರವಿದ್ದರು. ಅವು ಗಾಳಿಗೆ ಪಟ ಪಟ ಸದ್ದು ಮಾಡುತ್ತಿದ್ದವು.

ತಮ್ಮ ಮನಿಯ ಬಾಜು ಮುದುಕಿಯೊಂದು ಸತ್ತಿದೆಯೆಂಬ ಶೋಕದ ಸೋಂಕು ಇಲ್ಲದೆ ಮಂದಿ ಹೊರಗ ನಿಂತು-ಕುಂತು ಬೀಡಿ, ಸಿಗರೇಟುಗಳ ಹೊಗೆ ಎಬ್ಬಿಸಿದ್ದರು. ಕೆಲವರಂತೂ ಬಾಯಿತುಂಬ ಗುಟ್ಕ ತುಂಬಿಕೊಂಡು ಗಳಿಗೆಗೊಮ್ಮೆ ಯಾರಿಗೋ ಉಗಿಯುವವರಂತೆ ನೆಲಕ್ಕೆ ಉಗಿಯುತ್ತಿದ್ದರು. ಯಮುನಾಬಾಯಿಯ ಪಕ್ಕದ ಮನೆಯ– ನಮ್ಮ ಕಚೇರಿಯಲ್ಲಿಯೇ ಕೆಲಸ ಮಾಡುವ ಪಾಟೀಲ ಅವರನ್ನೆಲ್ಲಾ ಎದುರುಗೊಂಡು ‘ಅಳಬೇಕೋ ನಗಬೇಕೋ ಒಂದು ತಿಳಿದಂಗಾಗೇದ. ಬರ್ರಿ’ ಅಂದ. ಅವನ ಮಾತು ಕೇಳಿ ಅವರಿಗೆಲ್ಲ ಅಚ್ಚರಿಯಾಯ್ತು.

ಒಮ್ಮೆಗೆ ಎಲ್ಲರೂ ‘ಯಾಕೋ’ ಅಂದರು.. ಅವ ‘ಯಮುನಾಬಾಯಿಯ ಓಡಿ ಹೋದ ಮಗ ಬಂದಾನ’ ಅಂದ. ಎಲ್ಲರಿಗೂ ಸಿಡಿಲು ಬಡಿದಂತಾಯಿತು. ಆ ಕಡೆ ಅಜ್ಜಿ ಪರಲೋಕ ಸೇರಿದ್ದರೆ.. ಈ ಕಡೆ ದೇಶಾಂತರ ಹೋದ ಮಗ ಬಂದಿದ್ದಾನೆ.. ಅತ್ತ ಮಗಳು ನಿನ್ನೆ ರಾತ್ರಿಯೇ ಯಾವನೊಟ್ಟಿಗೋ ಗಾಯಬ್ ಆಗಿದ್ದಾಳೆ... ಯಮುನಾಬಾಯಿಯ ಮನಸ್ಸಿಗೆ ಏನನಿಸುತ್ತಿರಬಹುದು.. ಛೇ. ಪಾಪ..

ಎಲ್ಲರೂ ಭಯದಿಂದ ಯಮುನಾಬಾಯಿಯ ಮನೆ ಮುಂದೆ ನಿಂತರು. ಸವೆದೂ ಸವೆದೂ ಜೀರ್ಣವಾಗಿದ್ದ ಮುದುಕಿಯನ್ನು ಮನೆಯ ಹೊರಗೆ ಗೋಡೆಗೆ ಆನಿಸಿ ಕೂರಿಸಿದ್ದರು. ಕುತ್ತಿಗೆಗೆ ದಬ್ಬೆಯೊಂದನ್ನು ಸಿಗಿಸಿ ಗೋಣು ನೆಟ್ಟಗೆ ನಿಲ್ಲುವಂತೆ ಆನಿಸಿ ಕೂರಿಸಿದ್ದರು. ಒಂದೆರಡು ಮಾಲೆಗಳನ್ನು ಕೊರಳ ಸುತ್ತ ಇಳಿಬಿಟ್ಟಿದ್ದರು. ಯಮುನಾಬಾಯಿಗೆ ಈ ಲೋಕದಲ್ಲಿ ಸಂಬಂಧಿಕರೇ ಇಲ್ಲವೇನೋ ಎಂಬಂತೆ ಹತ್ತಾರು ಜನ ಅಲ್ಲಿ ಹೆಣದ ಮುಂದೆ ಹೆಣದಂತೆ ನಿಂತಿದ್ದರು. ಯಮುನಾಬಾಯಿ ಮಾತ್ರ ರೋದಿಸಿ ಅಳುತ್ತಿದ್ದಳು. ಬಿಕ್ಕುತ್ತಿದ್ದಳು. ಹಣಿಹಣಿ ಬಡಿದುಕೊಳ್ಳುತ್ತಿದ್ದಳು. ಆಗಾಗ ವಿಸ್ಮೃತಿಗೆ ಒಳಗಾದವಳಂತೆ ಒಂದಕ್ಕೊಂದು ಅಸಂಬದ್ಧ ಮಾತಾಡುತ್ತಿದ್ದಳು. ‘ನೋಡಬೇ.. ನಿನ್ನ ಮೊಮ್ಮಗ ಬಂದಾನ.. ಎಲ್ಲಿ ಎಲ್ಲಿ ಅಂತ ಗಳಿಗೆಗೊಮ್ಮೆ ನೆನಸ್ತಿದ್ದಲ್ಲಬೇ.. ಬಂದಾನ ನೋಡು ನಿನ್ನ ಕಳಸಾಕ ಅಂತ’– ದೂರದಲ್ಲಿ ಕಂಬಕ್ಕೆ ಒರಗಿ ನಿಂತ ಇಪ್ಪತ್ತರ ತರುಣನ ಕಡೆ ಕೈ ಮಾಡಿ ಅಳುತ್ತಿದ್ದಳು... ಆ ಹುಡುಗನೋ ಯಾವುದೋ ಅನ್ಯಲೋಕಕ್ಕೆ ಬಂದವನಂತೆ... ಇದೆಲ್ಲ ಏನು ಎಂದು ಕೇಳುವವನಂತೆ ಅತ್ತಿತ್ತ ಪಿಳಿಪಿಳಿ ಕಣ್ಣಾಡಿಸಿ ಗೋಣು ಕೆಳ ಮಾಡಿ ಕಾಲ್ಬೆರಳುಗಳ ತೀಡುತ್ತಿದ್ದ. ಅಲ್ಲಿದ್ದ ಮಂದಿಯೆಲ್ಲ ಸತ್ತ ಮುದುಕಿಯನ್ನ ನೋಡುವುದನ್ನು ಬಿಟ್ಟು ಇವನತ್ತಲೇ ಕಣ್ಣು ಕೀಲಿಸಿದ್ದರು. ಅವನು ಖರೇ ಯಮುನಾಬಾಯಿಯ ಗರ್ಭ ಸಂಜಾತನೇ ಎಂದು ಅನುಮಾನದಿಂದ ಒಮ್ಮೆ ಅವನನ್ನು ಮತ್ತೊಮ್ಮೆ ಯಮುನಾಬಾಯಿಯ ಮುಖವನ್ನು ಹೋಲಿಸಿ ನೋಡುತ್ತಿದ್ದರು. ಒಮ್ಮೆಗೆ ಯಮುನಾಬಾಯಿ ಓಡಿಹೋದ ಮಗಳನ್ನು ನೆನಪಿಗೆ ತಕ್ಕೊಂಡು ‘ಹೋದಲವ್ವ ನನ್ನ ಬಾಳೇವು ಬರ್‍ದ ಮಾಡಿ.. ಮುಖಕ ಮಸಿ ಬಳ್ದ ಹೋದಳವ್ವ.. ಮಂದಿ ಮುಂದ ನಾ ಮೊಕ ಎತ್ತಿ ಹೆಂಗ ಓಡಾಡಲಿ... ಅವ್ವಾ ನಿನ್ನ ಕೂಡ ನನ್ನೂ ಕರ್‍ಕಂಡು ಹೋಗಬಾರ್ದೇನೇ.. ನನ್ನ ಯಾಕ ಬಿಟ್ಟು ಹೊಂಟೆ..’ ಅನ್ನುತ್ತಿದ್ದಳು.

ದೊಡ್ಡ ಮಗಳು ಅವ್ವನನ್ನು ಸುಮ್ಮನಿರಿಸಲು ಯಮ ಸಾಹಸ ಮಾಡುತ್ತಿದ್ದಳು. ಆಕೆಯ ಗಂಡ, ಯಮುನಾಬಾಯಿಯ ಅಳಿಯ ಅಷ್ಟೊತ್ತಿಗೆ ಪರಮಾತ್ಮನನ್ನ ಮೈಗೆ ಅಹ್ವಾನಿಸಿಕೊಂಡು ಬಂದಿದ್ದನೋ ಏನೋ.. ‘ಏ ಅತ್ತರೇ ಏನು ಬರ್‍ತಾದೆ.. ತಾಬಡತೂಬಡ ಹೆಣ ಎತ್ತರೆ.. ಮನಿ ಮುಂದ ಹೆಣ ಇದ್ದರ ಮನಿಗ ಅನಿಷ್ಟ.. ಬಂದ ನಿಂತಾನ ನೋಡ್ರಿ ಕುಲಪುತ್ರ. ಇನ್ನ ನೀವು ಉಂಟು ಅವ ಉಂಟು.. ನನ್ನ ಎದಕ್ಕೂ ಕರಿಬ್ಯಾಡ್ರಿ.. ನಿಮ್ಮ ಸಹವಾಸ ನಂಗ ಸಾಕೇಗೆದ...’ ಅನ್ನುತ್ತಾ ತೂರಾಡುತ್ತ ಯಮುನಾಬಾಯಿ ಹತ್ತಿರ ಹೋಗಿ ಆಕೆಯ ರಟ್ಟೆ ಹಿಡಿದು, ‘ಖರೇ ಅವ ನಿನ್ನ ಮಗ ಏನು... ಎಲ್ಲಿಂದ ಕರೆಸಿ ಹೇಳು... ನನ್ನತ್ತರ ಈ ನಾಟಕ ನಡಿಯಾಕಿಲ್ಲ. ಯಾವನೋ ಬೇಬರ್ಸಿನ ಮಗ ಅಂತಿಯಲ್ಲ, ನಿಂಗ ನಾಚಿಗ ಬರಲ್ಲ. ಯಾವನೋ... ಯಾವ ಜಾತಿಯವನೋ... ಅವ್ವ ಅಂತ ಬಂದ, ಈಕೆ ಮಗನೇ ಅಂತ ಹೋದಳು... ಇವತ್ತೇ ಈ ಹೆಣದ ಮುಂದ ಎಲ್ಲ ಚುಕ್ತಾ ಆಗಬೇಕು...’

ಇಂತಹ ಗದ್ದಲದಲ್ಲಿ ಆಫೀಸಿನವರು ಯಮುನಾಬಾಯಿಯ ಹತ್ತಿರ ಹೋಗಿ ನಾಲ್ಕು ಮಾತಾಡಿಸಿ ಸಾಂತ್ವನ ಹೇಳಿ ಹೋಗಬೇಕೆಂದವರು ಹಾಗೆಯೇ ನಿಂತರು. ಪ್ರಶಾಂತ ತಾನು ತಂದ ಅರ್ಜಿಯನ್ನು ಚೂರು ಚೂರು ಮಾಡಿ ಗಾಳಿಗೆ ಬಿಟ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT