ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲ್ಲಾಲಿಂಗ ಹತ್ಯೆ ಪ್ರಕರಣ: ಇದೀಗ ರಾಜಕೀಯ ಬಣ್ಣ

ಸುದ್ದಿ ವಾಹಿನಿಗೆ ಬೈಟ್‌ ಕೊಟ್ಟ ವಿದ್ಯಾರ್ಥಿ ಕೊಲೆ: ಪಕ್ಷಗಳ ಆರೋಪ –ಪ್ರತ್ಯಾರೋಪ
Last Updated 28 ಮೇ 2015, 7:34 IST
ಅಕ್ಷರ ಗಾತ್ರ

ಕೊಪ್ಪಳ: ಸುದ್ದಿ ವಾಹಿನಿಗೆ ಬೈಟ್‌ ಕೊಟ್ಟ ವಿದ್ಯಾರ್ಥಿ ಯಲ್ಲಾಲಿಂಗನ ಕೊಲೆ ಪ್ರಕರಣವು ಜಿಲ್ಲೆಯಲ್ಲಿ ಕಾವು ಹೆಚ್ಚಿಸಿ, ಇದೀಗ ರಾಜಕೀಯ ಬಣ್ಣ ಪಡೆದುಕೊಂಡಿದೆ. ಈ ಪ್ರಕರಣವನ್ನು ದಾಳವಾಗಿ ಬಳಸಿಕೊಂಡು ಕಾಂಗ್ರೆಸ್‌– ಬಿಜೆಪಿ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿವೆ. ಕಾಂಗ್ರೆಸ್‌ನಲ್ಲಿಯೇ ಆಂತರಿಕ ಕಲಹದ ಕಿಡಿಯೂ ಹೊತ್ತಿಕೊಂಡಿದೆ.

ಒಂದೆಡೆ ಬಿಜೆಪಿ ದಂಡು ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮೇಲೆ ಮುಗಿಬಿದ್ದರೆ, ಇನ್ನೊಂದೆಡೆ ಆರೋಪಿಯ ತಂದೆ ಹನುಮೇಶ ನಾಯಕ ತನಿಖಾ ತಂಡದ ಮೇಲೆ ಶಂಕೆ ವ್ಯಕ್ತಪಡಿಸಿ, ‘ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಅವರು ಒತ್ತಡ ಹೇರಿ ತಮ್ಮ ಕ್ಷೇತ್ರದ ಪೊಲೀಸ್‌ ಅಧಿಕಾರಿಗಳನ್ನು ತನಿಖಾ ತಂಡದ ನೇತೃತ್ವ ವಹಿಸುವಂತೆ ಮಾಡಿದ್ದಾರೆ.

ಇದು ಶಿವರಾಜ ತಂಗಡಗಿಯವರನ್ನು ಹಣಿಯುವ ತಂತ್ರ’ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಇದು ಕಾಂಗ್ರೆಸ್‌ನೊಳಗಿನ ಕಿಡಿಯನ್ನು ಇನ್ನಷ್ಟು ಹೆಚ್ಚಿಸಿದೆ. ಆದರೆ, ಪೊಲೀಸರು ಮಾತ್ರ ಕಾನೂನು ಪ್ರಕ್ರಿಯೆಯನ್ನು, ವಿವಿಧ ಸಂಘಟನೆಗಳು ಹೋರಾಟವನ್ನು ಮುಂದುವರೆಸಿವೆ.

‘ಗಂಗಾವತಿ ತಾಲ್ಲೂಕು ಕನಕಾಪುರದ ಕೆಂಚಮ್ಮ (ಯಲ್ಲಾಲಿಂಗನ ತಾಯಿ)ನ ಮನೆಗೆ ದಿನವೂ ರಾಜಕೀಯ ನಾಯಕರು ಬಂದು ಭೇಟಿ ನೀಡುತ್ತಿದ್ದಾರೆ. ಕೆಲವರು ಸಾಂತ್ವನ ಹೇಳಿ ಒಂದಿಷ್ಟು ಕಾಸು ಕೊಟ್ಟು ನಿರ್ದಿಷ್ಟ ರಾಜಕೀಯ ನಾಯಕರ ಮೇಲೆ ಆರೋಪ ಮಾಡಿ ಮುಂದೆ ಸಾಗುತ್ತಿದ್ದಾರೆ.

ಅದರ ಮಧ್ಯೆ ವಿವಿಧ ಸಂಘಟನೆಗಳ ಮುಖಂಡರು ಕೂಡಾ ಕೆಂಚಮ್ಮನ ಮೇಲೇ ಒತ್ತಡ ಹೇರಿ ಮತ್ತೆ ಮತ್ತೆ ಮಾಧ್ಯಮಗಳ ಮುಂದೆ ಹೇಳಿಕೆ ಕೊಡಿಸುತ್ತಿದ್ದಾರೆ. ಈ ಘಟನೆಯಲ್ಲಿ ರಾಜಕೀಯ ಬೆರೆಸುವುದು ಎಳ್ಳಷ್ಟೂ ಸರಿಯಲ್ಲ’ ಎಂದು ಗ್ರಾಮದ ಹಿರಿಯರಾದ ಪಂಪನಗೌಡ ಹೇಳಿದರು.

‘ಕೊಲೆ ಪ್ರಕರಣದ ಮೊದಲ ಆರೋಪಿ ಮಹಾಂತೇಶ ನಾಯಕನ ತಂದೆ ಹನುಮೇಶ ನಾಯಕ ಮೇ 22ರಂದು ಕೆಂಚಮ್ಮನ ಮನೆಗೆ ತೆರಳಿ ಕಾಲಿಗೆ ಬಿದ್ದು, ತನ್ನ ಮಗ ನಿರಪರಾಧಿ ಎಂದ ಪ್ರಸಂಗವೂ ನಡೆಯಿತು. ಇದರ ಹಿಂದೆ ಪ್ರಮುಖ  ಸುದ್ದಿ ವಾಹಿನಿಯೊಂದರ ಸಿಬ್ಬಂದಿಯ ಒತ್ತಡವೂ ಇತ್ತು. ಪ್ರಕರಣ ತನಿಖೆಯ ಹಂತದಲ್ಲಿರುವಾಗ ಆರೋಪಿಗೆ ಅನುಕೂಲವಾಗುವಂತೆ ವೈಭವೀಕರಣ ಮಾಡುವ ಅಗತ್ಯ ಏನಿತ್ತು?’ ಎಂದು ತನಿಖಾ ತಂಡದ ಮೂಲಗಳು ಅಸಮಾಧಾನ ವ್ಯಕ್ತಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT