ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾಕೀ ಆಹಾರ ಅಸ್ಪೃಶ್ಯತೆ?

Last Updated 29 ಜುಲೈ 2016, 19:30 IST
ಅಕ್ಷರ ಗಾತ್ರ

ಗೋರಕ್ಷಣೆಯ ಹೆಸರಲ್ಲಿ ದಲಿತರು ಹಾಗೂ ಮುಸಲ್ಮಾನರ ಮೇಲೆ ನಿರಂತರವಾಗಿ ಹಲ್ಲೆ, ಹತ್ಯೆ ದೇಶದ ಉದ್ದಗಲಕ್ಕೂ ನಿರಂತರವಾಗಿ ನಡೆಯುತ್ತಲೇ ಇವೆ. ಗೋಮಾತೆಯ ಗೋರಾಷ್ಟ್ರೀಯತೆ ಹಿಂದಿರುವ ಭಾವನೆ ಪರಿಶುದ್ಧವಾದ ಧಾರ್ಮಿಕ ನಡವಳಿಕೆ ಅಲ್ಲ. ಅದು ಜಾತಿ ಮತ್ತು ಜನಾಂಗವಾದದ ಮತೀಯ ದುರ್ನಡತೆ. ಇದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ. ಗೋಹತ್ಯೆ ಎಂಬ ಪರಿಭಾಷೆಯೇ ಅಪಾಯಕಾರಿಯಾದುದು. ಈ ಪದದ ಮೂಲಕ ಆಹಾರದ ಅಸ್ಪೃಶ್ಯತೆಯನ್ನು ನಿರಂತರವಾಗಿ ಆಚರಿಸುತ್ತಲೇ ಬರಲಾಗಿದೆ.

ಗೋ ರಾಷ್ಟ್ರೀಯತೆಯ ರಾಜಕಾರಣ ಬಹಳ ದುರ್ಬಲವಾದುದು. ಗೋವು ಮಾತ್ರ ಯಾಕೆ ಪವಿತ್ರ? ಹಿಂದೂ ಧರ್ಮದ ರಕ್ಷಣೆಗೆ ಯಾರ ಅಭ್ಯಂತರವೂ ಇಲ್ಲ. ಆದರೆ ಹಿಂದೂ ಧರ್ಮದ ಹೆಸರಲ್ಲಿ ಗೋ ರಾಜಕೀಯ ಮಾಡುವುದರಿಂದ ಹಿಂದೂ ಧರ್ಮಕ್ಕೆ ದೊಡ್ಡ ಲಾಭವೇನೂ ಇಲ್ಲ. ದೇಶದಲ್ಲಿ ಗೋವಿನ ಹೆಸರಲ್ಲಿ ಹೆಚ್ಚುತ್ತಿರುವ ಹಲ್ಲೆಗಳು ಅಸಹನೆ, ಅಸಹಿಷ್ಣುತೆಯನ್ನು ವ್ಯಾಪಕವಾಗಿ ತೋರುತ್ತಿವೆ. ಇನ್ನಷ್ಟು ಉಲ್ಬಣಿಸಿ ದೇಶದ ಆಂತರಿಕ ಭದ್ರತೆಗೇ ಪೆಟ್ಟು ಬೀಳುವ ಸಂಭವವೇ ಹೆಚ್ಚು.

ಯಾವುದೇ ಗೋ ‘ಹತ್ಯೆ’ಯ ವಿಚಾರ ಬಂದಾಗ ದಲಿತರನ್ನು ಯಾಕೆ ಇಷ್ಟು ಸುಲಭವಾಗಿ ಹಿಂಸಿಸಲಾಗುತ್ತದೆ? ಹಾಗೆ ಬಹಿರಂಗವಾಗಿ ಥಳಿಸಿ, ಹಿಂಸಿಸಿ, ಅಪಮಾನ ಮಾಡಿ ಕೊಲ್ಲುವಾಗ ಯಾಕೆ ಸಮಾಜದ ಅನೇಕರು ತಟಸ್ಥರಾಗಿ ಕೇವಲ ಪ್ರೇಕ್ಷಕರ ಹಾಗೆ ವರ್ತಿಸುವುದು? ಇದು ಹಿಂದೂ ಧಾರ್ಮಿಕತೆಯ ಘನತೆಯೇ? ಯಾಕೆ ಸರ್ಕಾರಗಳು ಈ ಬಗೆಯ ಘಟನೆಗಳು ನಡೆದಾಗ ವಿಚಾರಣೆಯ ನಾಟಕವಾಡಿ ಪ್ರೇಕ್ಷಕರ ಮನೋಧರ್ಮಕ್ಕೆ ತಕ್ಕಂತೆ ತೀರ್ಪು ನೀಡುವುದು? ಇಂತಹ ಬಹುಸಂಖ್ಯಾತ  ತಟಸ್ಥ ಪ್ರೇಕ್ಷಕರಿಂದಾಗಿಯೇ ಗೋ ರಾಷ್ಟ್ರೀಯತೆಗೆ ಬಲ ಬರುತ್ತಿದೆಯೇ?

ಗೋ ಹತ್ಯೆಗಿಂತಲೂ ಕ್ರೂರವಾದದ್ದಲ್ಲವೇ ಈ ಬಗೆಯ ನಡವಳಿಕೆ? ಜಾತಿಯ ಕತ್ತಿಯನ್ನು ಧರ್ಮದ ಹೆಸರಲ್ಲಿ ದಲಿತರ ಮೇಲೆ ಸಲೀಸಾಗಿ ಬೀಸಬಹುದು ಎಂಬ ಧೈರ್ಯ ಹಿಂದಿನಿಂದಲೂ ಮೇಲುಜಾತಿಗಳ ತೋಳುಗಳಿಗೆ ಬಂದುಬಿಟ್ಟಿದೆ. ವಿಶ್ವದ ಯಾವ ರಾಷ್ಟ್ರೀಯತೆಯೂ ಹೀಗೆ ಗೋಹತ್ಯೆ ಅಥವಾ ಪ್ರಾಣಿ ಹಿಂಸೆಯ ಹೆಸರಲ್ಲಿ ರಾಜಕೀಯವನ್ನು ಮಾಡುತ್ತಿಲ್ಲ. ಸುಭದ್ರ ಭಾರತದ ನಿರ್ಮಾಣಕ್ಕೆ ಇಂತಹ ರಾಜಕೀಯದಿಂದ ಅಪಾಯವಿದೆ.

ವಿಶ್ವವನ್ನು ಸುತ್ತುತ್ತಿರುವ ಪ್ರಧಾನಿ ಅವರು ಇದರ ಅಪಾಯವನ್ನು ಅರಿಯದಿದ್ದರೆ ದೇಶದ ಆಂತರಿಕ ಭದ್ರತೆಯೇ ಕೆಡುತ್ತದೆ. ಹಿಂದುತ್ವವನ್ನು ಗೋವಿನ ಹೆಸರಿನಲ್ಲಿ ಮಾಡುವುದು ಎಂದರೆ ಅನ್ಯಧರ್ಮೀಯರನ್ನು ಅಪಮಾನಿಸಿದಂತೆ. ಪ್ರಾಣಿಗಳ ರೂಪಕದಿಂದಲ್ಲ ಧರ್ಮದ ಘನತೆಯನ್ನು ಎತ್ತಿಹಿಡಿಯಬೇಕಿರುವುದು, ಆ ದೇಶದಲ್ಲಿ ಯಾವ ಬಗೆಯ ಮಾನವೀಯ ಸಂಬಂಧಗಳು ಸಮಾಜ ಮತ್ತು ರಾಜನೀತಿಯಲ್ಲಿ ಅಡಕವಾಗಿವೆ ಎಂಬುದರಿಂದ ಹಿರಿಮೆ ಸಾಧಿತವಾಗುತ್ತದೆ.

ಗೋಹತ್ಯೆ ಬಗ್ಗೆ ಮರುಕಪಡುವವರು ಮನುಷ್ಯರ ಹತ್ಯೆಯ ಬಗ್ಗೆಯೂ ಚಿಂತಿಸಬೇಕು. ಪ್ರಾಣಿದಯೆ ಬೇರೆ, ಅದನ್ನು ಸ್ವತಃ ಮಾಂಸಾಹಾರಿಗಳೂ ಬಲ್ಲರು. ಬೇರೆಯವರಿಗಿಂತಲೂ ಪ್ರಾಣಿದಯೆ ದಮನಿತರಲ್ಲೇ ಹೆಚ್ಚು. ಅಹಿಂಸೆಯನ್ನು ಸಾರಬೇಕಾದವರೇ ಹಿಂಸೆಯನ್ನು ಗೋಮಾತೆಯ ಹೆಸರಲ್ಲಿ ಬಿತ್ತುವುದು ತರವಲ್ಲ. ಬಹುಸಂಖ್ಯಾತ ಮೇಲುಜಾತಿಗಳನ್ನು ಮೆಚ್ಚಿಸಲು ಗೋರಕ್ಷಣೆಯ ಬಾಣವನ್ನು ಹೂಡಲಾಗಿದೆ. ಇದರಿಂದ ಬಿಜೆಪಿ ಪಡೆದುಕೊಳ್ಳುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು. ಗೋಮಾಂಸ ಸೇವನೆ ನಿಷೇಧ ಮಸೂದೆ ಜಾರಿಗೊಳಿಸಲು ಮಾಡುವ ಯತ್ನ ರಾಜಕೀಯ ಪ್ರಣೀತವಾದುದೇ ಹೊರತು ನಿಜವಾದ ಧಾರ್ಮಿಕತೆಯದಲ್ಲ. ಗೋರಕ್ಷಣೆಯ ನೆಪದಲ್ಲಿ ಅಸ್ಪೃಶ್ಯತೆಯನ್ನು ರಕ್ಷಿಸಲಾಗುತ್ತಿದೆ.

ಹಾಗೆಯೇ ತಾರತಮ್ಯ, ಪೂರ್ವಗ್ರಹಗಳನ್ನು ಬೆಳೆಸಲಾಗುತ್ತಿದೆ. ಗೋರಾಷ್ಟ್ರೀಯತೆ ಒಂದು ಸಣ್ಣ ವಿಷಯವಲ್ಲ. ಅದರ ಮೂಲಕ ಹಿಂದೂ ಸನಾತನತೆಯನ್ನು ಎತ್ತಿ ಹಿಡಿಯಲಾಗುತ್ತಿದೆ. ಇದರಿಂದ ಹಿಂದೂ ಧರ್ಮವೇನು ಪುನರುಜ್ಜೀವನಗೊಳ್ಳುವುದಿಲ್ಲ. ಹೆಚ್ಚೆಂದರೆ ಮತೀಯ ರಾಜಕಾರಣ ಭಾರತೀಯ ಸಮಾಜವನ್ನು ಮತ್ತಷ್ಟು ಹಿಂದಕ್ಕೆ ತಳ್ಳಲು ಯತ್ನಿಸಬಹುದು. ಆದರೆ ಕಾಲ ಬದಲಾಗುತ್ತಿದೆ. ಸನಾತನಿಗಳು ಎಷ್ಟೇ ತಂತ್ರ ಮಾಡಿದರೂ ಎಲ್ಲ ದಮನಿತರನ್ನೂ ಸದೆಬಡಿಯಲು ಸಾಧ್ಯವೇ ಇಲ್ಲ. ಅಲ್ಪಸಂಖ್ಯಾತರ ಮನಸ್ಸಿನಲ್ಲಿ ಆತಂಕವನ್ನುಂಟು ಮಾಡುವ ಈ ಬಗೆಯ ರಾಜಕಾರಣದಿಂದ ಯಾರಿಗೂ ಒಳ್ಳೆಯದಾಗುವುದಿಲ್ಲ.

ಪುಣ್ಯಕೋಟಿಯ ಕಥೆಯನ್ನು ವಿಪರೀತವಾಗಿ ಭಾರತದುದ್ದಕ್ಕೂ ಪ್ರಚಾರ ಮಾಡಲಾಗಿದೆ. ಹಸು ಮತ್ತು ಹುಲಿಯ ಆಟವನ್ನು ಮಕ್ಕಳಿಗೆ ಶಾಲೆಯಲ್ಲಿ ಈಗಲೂ ಆಡಿಸುತ್ತಿದ್ದಾರೆ. ಆ ಮೂಲಕ ಗೋಮಾತೆಯ ರಕ್ಷಣೆಯನ್ನು ಸಾರುತ್ತಿದ್ದಾರೆ. ಶಾಲಾ ಪಠ್ಯಪುಸ್ತಕಗಳಲ್ಲಿ ಪುಣ್ಯಕೋಟಿಯನ್ನು ಸೇರಿಸಿ, ದನದ ಮಾಂಸ ತಿನ್ನುವುದು ಅಪರಾಧ ಎಂಬ ಭಾವನೆಯನ್ನು ಬಿತ್ತುವ ಮೂಲಕ ಅಸ್ಪೃಶ್ಯತೆಯನ್ನು ತಣ್ಣಗೆ ಆಚರಿಸಲಾಗುತ್ತಿದೆ.

ಹಸುವಿನ ರೂಪಕದ ಮುಖವಾಡವನ್ನು ತೆರೆದರೆ ಭೀಕರವಾದ ವಿಕೃತಿಯು ಜಾತಿ ಮತ್ತು ಧರ್ಮದ ಹೆಸರಲ್ಲಿ ಗೋಚರಿಸುತ್ತದೆ. ಸತ್ಯ ಮತ್ತು ನ್ಯಾಯ ಎಂಬ ಎರಡು ಪದಗಳಿಂದಲೇ ಹಸು ಬಲಾಢ್ಯ ಹುಲಿಯನ್ನು ಕೊಂದುಬಿಡುತ್ತದೆ. ಹಸು ಯಾವ ಅಪಾಯಕಾರಿ ಆಯುಧಗಳನ್ನೂ ಬಳಸದೆಯೇ, ಒಂದು ತೊಟ್ಟು ನೆತ್ತರನ್ನೂ ಸುರಿಸದೆಯೇ ಮಾಯಾಮಯವಾಗಿ ‘ಹತ್ಯೆ’ ಮಾಡಿಬಿಡುತ್ತದೆ. ಇದು ಧರ್ಮವೇ? ಹಾರಿ ನೆಗೆದು ಹುಲಿ ತನ್ನ ಪ್ರಾಣವ ಬಿಟ್ಟಿತು ಎಂಬುದನ್ನು ಆಳವಾಗಿ ಭಾವಿಸಬೇಕು.

ಒಂದು ವೇಳೆ ಮುಗ್ಧವಾದ ಒಂದು ಹಸು ಪವಿತ್ರವೇ ಇರಬಹುದು. ಆದರೆ ಆ ಹಸುವಿನ ಹೆಸರಲ್ಲಿ ಪವಿತ್ರತೆಯ ಮಾತನಾಡುವವರು ಪವಿತ್ರವಾಗಿ ಇದ್ದಾರೆಯೇ? ಮಾರಮ್ಮನಿಗೆ ದಲಿತರು ಕೋಣ ಬಲಿಕೊಡುತ್ತಾರೆ. ದಲಿತರಿಗೆ ಕೋಣವು ದೈವಸಮಾನ ಹಾಗೆಯೇ ಪಿತೃಸಮಾನ. ಹಾಗೆಂದು ದಲಿತರು ನಮ್ಮದು ‘ಕೋಣ ರಾಷ್ಟ್ರೀಯತೆ’ ಎಂದೇನಾದರೂ ಒತ್ತಾಯಿಸಿದ್ದಾರೆಯೇ? ಗೋಮಾತೆಯ ಭಕ್ತಿ ಇಂತಹ ಅನೇಕ ರಾಷ್ಟ್ರೀಯತೆಗಳಿಗೆ ಎಡೆಮಾಡಿ ಕೊಡುವುದಿಲ್ಲವೇ? ಕತ್ತೆ ಉಪಯುಕ್ತ ಸಾಕುಪ್ರಾಣಿ. ಅದರ ಮೂಲಕವಾದರೂ ‘ಕತ್ತೆ ರಾಷ್ಟ್ರೀಯತೆ’ಯನ್ನು ಭಾವಿಸಲು ಸಾಧ್ಯವೇ? ಇಂತವುಗಳ ಮೂಲಕ ಒಂದು ದೊಡ್ಡ ದೇಶದ ಚಹರೆಗಳನ್ನು ಯಾರೂ ಹುಡುಕಬಾರದು.

ಹಿಂದೂ ಸನಾತನಿಗಳಿಗೆ ಬೇಕಿರುವುದು ಜಾತಿಯೇ ಹೊರತು ಧರ್ಮವಲ್ಲ. ಜಾತಿಯ ಉಳಿವಿಗಾಗಿ ಅವರು ಧರ್ಮವನ್ನೇ ಕೊಲ್ಲಬಲ್ಲರು. ಅಂತಾದ್ದರಲ್ಲಿ ಗೋರಕ್ಷಣೆಯ ಮಾತು ನಿಜವಲ್ಲ. ಜಾತಿ ಮತ್ತು ಜನಾಂಗವಾದವನ್ನು ಉಳಿಸಿಕೊಳ್ಳಲು ಗೋಮಾತೆಯಂತಹ ಸಾವಿರಾರು ಹುಸಿ ಕತೆಗಳನ್ನು ಕಟ್ಟಲಾಗಿದೆ. ಇದರ ಆಧಾರದಲ್ಲಿ ಆಧುನಿಕ ಭಾರತ ಕಟ್ಟಲು ಸಾಧ್ಯವಿಲ್ಲ. ಹೆತ್ತ ತಾಯಂದಿರನ್ನು ಕಡೆಗಣಿಸಿ ಗೋಮಾತೆಯನ್ನು ಆರಾಧಿಸುವುದು ವಿಪರ್ಯಾಸ. ಅಂಬೇಡ್ಕರ್ ಮಹಿಳಾ ಮೀಸಲಾತಿಗಾಗಿ ತೀವ್ರವಾಗಿ ಒತ್ತಾಯಿಸಿದ್ದರು. ಅದನ್ನು ರಾಜಕೀಯ ಪಕ್ಷಗಳು ಜಾರಿಗೆ ತರಲೇ ಇಲ್ಲ. ಗೋವನ್ನು ಬಿಟ್ಟು ಮಾತೃ ರಾಷ್ಟ್ರೀಯತೆಯ ಬಗೆಗಾದರೂ ಬಲಪಂಥೀಯರು ಮಾತನಾಡಬೇಕು.

ಒಂದು ಧರ್ಮ, ಅದರ ಸಮಾಜ, ಅಲ್ಲಿನ ರಾಜಕೀಯ ಹಾಗೂ ಅಲ್ಲಿನ ಮಾನವ ಸಂಬಂಧಗಳು ಯಾವತ್ತೂ ನಿಂತ ನೀರಲ್ಲ. ಇವುಗಳ ವಿಷಯದಲ್ಲಿ ಯಾರೂ ಸ್ವಜನ ಪಕ್ಷಪಾತ ಮಾಡುವಂತಿಲ್ಲ. ಭಾರತ ದೇಶ ನಡೆದುಬಂದಿರುವುದು ಆಯಾ ಪ್ರದೇಶಗಳ, ಸಮುದಾಯಗಳ, ಸಂಸ್ಕೃತಿಗಳ ಆಧಾರದ ಮೇಲೆ. ಧರ್ಮ ನಿರಪೇಕ್ಷವಾಗಿರಬೇಕು. ಎಲ್ಲ ರಾಜಕೀಯ ಪಕ್ಷಗಳು ಧರ್ಮದ ಮೂಢನಂಬಿಕೆಗಳಿಗೆ ಸಿಕ್ಕಿಹಾಕಿಕೊಂಡು ದೇಶದ ಹಾದಿಯನ್ನು ತಪ್ಪಿಸುತ್ತಲೇ ಬಂದಿವೆ.

ಗೋಮಾತೆ ಕೂಡ ಧರ್ಮದ ಒಂದು ಮೂಢನಂಬಿಕೆಯೇ ವಿನಃ ಅದೇ ಧರ್ಮದ ಸಾರವಲ್ಲ. ಗೋಮಾತೆಯ ಅಧಾರ್ಮಿಕ ರಾಜಕಾರಣದ ಹೆಸರಲ್ಲಿ ನಡೆಯುತ್ತಿರುವ ಹಲ್ಲೆ ಹಾಗೂ ಹತ್ಯೆಗಳು ರಾಷ್ಟ್ರೀಯ ಅಪರಾಧಗಳಾಗಿವೆ. ಇವು ಒಂದು ದೇಶದ ಸಾಮಾಜಿಕ ಸಾಮರಸ್ಯವನ್ನು ಭಂಗಪಡಿಸುತ್ತಿವೆ. ಈಗ ದೇಶದ ಎಲ್ಲೆಡೆ ಗೋಮಾತೆಯ ಮೂಢನಂಬಿಕೆಗಳೇ ತುಂಬಿವೆ. ಅವನ್ನೇ ಮುಂಚೂಣಿಗೆ ತರುವಲ್ಲಿ ಅಂತಹ ಸಂಘಟನೆಗಳು ತಮ್ಮ ರಾಜಕಾರಣವನ್ನು ಮಾಡುತ್ತಿರುತ್ತವೆ. ಆ ಬಗೆಯ ಮೂಢನಂಬಿಕೆಗಳಿಂದ ಮಾನವ ಕುಲಕ್ಕೆ ಎಳ್ಳಷ್ಟೂ ಪ್ರಯೋಜನವಿಲ್ಲ. ಅಂತಹವೆಲ್ಲವೂ ಕೋಮುವಾದದ ಹಿಂಸೆಗೆ ಬಳಕೆಯಾಗುತ್ತಿವೆ.

ದನದ ಮಾಂಸವನ್ನು ದಲಿತರು ತಿನ್ನುವುದೇ ಅಪರಾಧ ಎನ್ನುವುದಾದರೆ ದಲಿತರು ದೇಶಬಿಟ್ಟು ಹೋಗಬೇಕೇ? ಗೋರಾಷ್ಟ್ರೀಯತೆಯು ದೇಶದ ಸಾರ್ವಭೌಮತ್ವವನ್ನೇ ಅಣಕಿಸುವಂತಿದೆ. ದನದ ಮಾಂಸದ ಹೆಸರಿನಲ್ಲಿ ಹಲ್ಲೆ ಮಾಡಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಹಿಂದೂ ಧರ್ಮದಲ್ಲಿ ಇನ್ನೂ ಮಾನವೀಯತೆ ಉಳಿದಿದೆ ಎಂದು ತೋರಿಸಿಕೊಳ್ಳಬೇಕಾಗಿದೆ.

ಗೋಮಾಂಸ ನಿಷೇಧ ಕಾನೂನನ್ನು ಜಾರಿಗೆ ತರುವ ಮೂಲಕ ಎಲ್ಲ ಅಲ್ಪಸಂಖ್ಯಾತರ ಮೇಲೂ ಧಾರ್ಮಿಕ ಹಿಡಿತವನ್ನು ಹೊಂದಲು ಸಾಧ್ಯವಿಲ್ಲ. ಗೋಮಾಂಸದ ವಿಚಾರವು ಆಹಾರದ ಅಸ್ಪೃಶ್ಯತೆಯ ಸೂಕ್ಷ್ಮ ಆಚರಣೆ. ಇದನ್ನು ಬೆಂಬಲಿಸುವ ಸರ್ಕಾರ ಕೂಡ ಆಹಾರದ ಅಸ್ಪೃಶ್ಯತೆಯನ್ನು ಆಚರಿಸಿದಂತೆ. ಕೇಂದ್ರ ಸರ್ಕಾರ ಕೂಡಲೇ ಈ ಬಗ್ಗೆ ಎಚ್ಚೆತ್ತುಕೊಂಡು ಮುನ್ನಡೆಯಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT