ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದವ್‌ಗೆ ಚಿನ್ನದ ಕನಸು...

Last Updated 26 ನವೆಂಬರ್ 2015, 8:31 IST
ಅಕ್ಷರ ಗಾತ್ರ

‘ಬದುಕಿನ ಪ್ರತಿ ಹೆಜ್ಜೆಯಲ್ಲೂ ಕಾಡಿದ ಬಡತನದಿಂದ ಮನೆಯವರೆಲ್ಲರೂ ಬೇಸತ್ತು ಹೋಗಿದ್ದೆವು. ಸಾಕಷ್ಟು ಆಸ್ತಿ ಮಾಡಬೇಕು ಎನ್ನುವ ಆಸೆ ಇರಲಿಲ್ಲ. ಬದುಕಿನ ಬಂಡಿ ಸಾಗಲು ಅಗತ್ಯವಿರುವ ಹಣ ಸಿಕ್ಕರೆ ಸಾಕು ಎನ್ನುವಂತಹ ಸ್ಥಿತಿಯಿತ್ತು...’

ಹೀಗೆ ತಮ್ಮ ಮನೆಯ ಸ್ಥಿತಿ ನೆನೆದು ಭಾವುಕರಾಗಿದ್ದು ಕುಸ್ತಿ ಪಟು ನರಸಿಂಗ್ ಯಾದವ್. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ನರಸಿಂಗ್ ಈಗ ಅದೆಷ್ಟೋ ಅಭಿಮಾನಿಗಳ ಕಣ್ಮಣಿ. ಇವರ ಬದುಕಿನ ಗಾಥೆ ಒಂದು ಸಿನಿಮಾಕ್ಕೆ ಪ್ರೇರಣೆಯಾಗುವಂಥದ್ದು. ನರಸಿಂಗ್ ಯಾದವ್ ಉತ್ತರ ಪ್ರದೇಶ ರಾಜ್ಯದವರು. ಬದುಕು ಕಟ್ಟಿಕೊಳ್ಳುವ ಸಲುವಾಗಿ ಇವರ ತಂದೆ ಪಂಚಮ್ ಯಾದವ್ ಮುಂಬೈ ಸೇರಿದರು. ಅಲ್ಲಿ ಮನೆಮನೆಗೆ ಹಾಲು ಹಾಕಿ ಮಕ್ಕಳ ಬದುಕಿಗೆ ಆಸರೆಯಾದರು.

ನರಸಿಂಗ್ ಅವರಿಗೆ ಇಬ್ಬರು ಸಹೋದರರು. ಒಬ್ಬ ಸಹೋದರ ವಿನೋದ್ ತಂದೆಯ ಕೆಲಸಕ್ಕೆ ನೆರವಾಗಿದ್ದಾರೆ. ಇನ್ನೊಬ್ಬ ಸಹೋದರ ಜೋಗಿಶ್ವರ ಮುಂಬೈನಲ್ಲಿ ರೈಲ್ವೆ ಇಲಾಖೆಯಲ್ಲಿ ಟಿಕೆಟ್ ತಪಾಸಣಾ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ.

ಅಪ್ಪ ಹಾಲು ಮಾರಿ ಬಂದ ಹಣದ ನೆರವಿನಿಂದಲೇ ನರಸಿಂಗ್ ಕುಸ್ತಿ ಸ್ಪರ್ಧೆಗೆ ಬೇಕಾದ ತಯಾರಿ ಮಾಡಿಕೊಳ್ಳುತ್ತಿದ್ದರು. 26 ವರ್ಷದ ನರಸಿಂಗ್ ಇದೇ ವರ್ಷ ಲಾಸ್ ಏಂಜಲೀಸ್‌ನಲ್ಲಿ ನಡೆದಿದ್ದ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಜಯಿಸಿದ್ದರು.

2014ರ ಇಂಚೆನ್ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚು, ದೋಹಾದಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಕಂಚು, 2010ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಹೀಗೆ ಹಲವಾರು ಪದಕಗಳನ್ನು ಜಯಿಸಿದ್ದಾರೆ. ಮೊದಲ ಬಾರಿಗೆ ನಡೆಯುತ್ತಿರುವ ಕುಸ್ತಿ ಲೀಗ್‌ನಲ್ಲಿ ಬೆಂಗಳೂರು ಯೋದಾಸ್ ತಂಡದಲ್ಲಿ ಆಡಲಿದ್ದಾರೆ. ಕಳೆದ ವಾರ ಅವರು ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಅವರೊಂದಿಗೆ ‘ಕಾಮನಬಿಲ್ಲು’ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

*ಕುಸ್ತಿ ಲೀಗ್ ಬಗ್ಗೆ ಹೇಳಿ?
ಐಪಿಎಲ್, ಕೆಪಿಎಲ್, ಬ್ಯಾಡ್ಮಿಂಟನ್ ಲೀಗ್, ಕಬಡ್ಡಿ ಲೀಗ್ ಹೀಗೆ ಸಾಕಷ್ಟು ಟೂರ್ನಿಗಳು ಆರಂಭವಾಗಿವೆ. ಇದರಲ್ಲಿ ಕೆಲವು ಯಶಸ್ಸು ಕಂಡಿವೆ. ಇನ್ನೂ ಕೆಲ ಟೂರ್ನಿಗಳು ಯಶಸ್ಸಿನ ಹಾದಿಯಲ್ಲಿ ಸಾಗುತ್ತಿವೆ. ಈ ಪಂದ್ಯಗಳನ್ನು ನೋಡಿದಾಗ ನಮಗೂ ಕುಸ್ತಿ ಲೀಗ್ ಏಕಿಲ್ಲ ಎನ್ನುವ ಬೇಸರ ಕಾಡುತ್ತಿತ್ತು. ನಮಗೂ ಈ ಲೀಗ್ ಅಗತ್ಯವಿತ್ತು.

*ಕುಸ್ತಿ ಲೀಗ್‌ನಿಂದ ಏನು ಪ್ರಯೋಜನ?
ಮೊದಲನೆಯದಾಗಿ ಕುಸ್ತಿಗೆ ಜಾಗತಿಕ ಮಟ್ಟದಲ್ಲಿ ಪ್ರಚಾರ ಸಿಗುತ್ತದೆ. ಈಗಿನ ಕಾಲದಲ್ಲಿ ಎಲ್ಲರೂ ಕ್ರೀಡೆಯನ್ನೇ ನಂಬಿಕೊಂಡು ಬದುಕಲು ಸಾಧ್ಯವೇ. ಕ್ರೀಡಾ ಪರಿಕರಗಳನ್ನು ಖರೀದಿಸಲು, ಕೋಚ್‌ಗಳನ್ನು ನೇಮಿಸಿಕೊಳ್ಳಲು, ನಮ್ಮ ಆಹಾರಕ್ಕೆ ಹೀಗೆ ಸಾಕಷ್ಟು ಹಣ ಖರ್ಚಾಗುತ್ತದೆ. ಕುಸ್ತಿಯನ್ನು ಸಾಂಪ್ರದಾಯಿಕ ಕ್ರೀಡೆ ಎಂದು ಭಾರತದಲ್ಲಿ ಭಾವಿಸಲಾಗುತ್ತಿದೆ. ಇದು ನಮ್ಮ ಸಂಸ್ಕೃತಿಯ ಪ್ರತೀಕ ಎಂತಲೂ ಹೇಳುತ್ತಾರೆ. ಆದರೆ ಈಗ ಅದೆಷ್ಟೋ ಪೈಲ್ವಾನರು ಒಪ್ಪತ್ತಿನ ಊಟಕ್ಕೂ ಪರದಾಡುವ ಸ್ಥಿತಿಯಿದೆ. ಆದ್ದರಿಂದ ಕ್ರೀಡೆ ಬೆಳೆಯುವ ಜೊತೆಗೆ ಕ್ರೀಡಾಪಟುಗಳೂ ಬೆಳೆಯಬೇಕು. ಬದುಕಲು ನಮಗೂ ಹಣ ಬೇಕಲ್ಲವೇ.

*ಲೀಗ್‌ನಿಂದ ದೇಶಿ ಕುಸ್ತಿ ಶೈಲಿಯ ಸೊಬಗು ಹಾಳಾಗುವುದಿಲ್ಲವೇ?
ನನಗೆ ಹಾಗೇನು ಅನ್ನಿಸುವುದಿಲ್ಲ. ಒಂದಷ್ಟು ಗ್ಲಾಮರ್ ಸ್ಪರ್ಶ ಸಿಗುತ್ತದೆ. ಈಗಿನ ಜನರೂ ಬದಲಾವಣೆ ಬಯಸುತ್ತಾರೆ. ಕುಸ್ತಿ ಪಂದ್ಯಗಳನ್ನು ನೋಡುವ ಜೊತೆ ಮನರಂಜನೆಯೂ ಬೇಕೆಂದು ನಿರೀಕ್ಷೆ ಮಾಡುತ್ತಾರೆ. ಇದರಿಂದ ನಮಗೂ ಹೆಚ್ಚು ಅವಕಾಶಗಳು ಸಿಗುತ್ತವೆ. ಕ್ರೀಡಾಪಟುಗಳಿಗೆ ಪ್ರೋತ್ಸಾಹ ಸಿಕ್ಕರಷ್ಟೇ ಕ್ರೀಡೆ ಉಳಿಯಲು ಸಾಧ್ಯ.

*ನಿಮ್ಮ ಬದುಕಿಗೆ ತಿರುವು ನೀಡಿದ ಸಂದರ್ಭ ಯಾವುದು?
ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದ ಸಂದರ್ಭವನ್ನು ಎಂದಿಗೂ ಮರೆಯಲಾರೆ. ನವದೆಹಲಿ ಏಷ್ಯನ್ ಕೂಟದಲ್ಲಿ ಪದಕ ಜಯಿಸಿದ್ದು ಬದುಕಿಗೆ ಸಿಕ್ಕ ದೊಡ್ಡ ತಿರುವು. ಈ    ಟೂರ್ನಿಯಲ್ಲಿ ಪದಕ ಗೆದ್ದಾಗ ನನ್ನ ಬಗ್ಗೆ ತುಂಬಾ ಜನಕ್ಕೆ ಗೊತ್ತಾಯಿತು. ಹಲವು ಪ್ರಾಯೋಜಕರೂ ಮುಂದೆ ಬಂದರು. ಇದರಿಂದ ನನಗೆ ಮತ್ತಷ್ಟು ಸಾಧನೆ ಮಾಡಲು ಸಾಧ್ಯವಾಯಿತು.

*ಬದುಕಿನ ಗುರಿ ಏನಿದೆ?
ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಬೇಕೆನ್ನುವುದು ಪ್ರತಿ ಕ್ರೀಡಾಪಟುವಿನ ಕನಸು. ಇದರಿಂದ ನಾನೂ ಹೊರತಲ್ಲ. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಸಾಕಷ್ಟು ಪ್ರಯತ್ನಪಟ್ಟರೂ ಪದಕದ ಸನಿಹ ಬರಲು ಸಾಧ್ಯವಾಗಲಿಲ್ಲ. ಆದ್ದರಿಂದ ಈ ಬಾರಿ ಪದಕ ಜಯಿಸುವ ಹೆಗ್ಗುರಿ ಹೊಂದಿದ್ದೇನೆ.

*ಬೆಂಗಳೂರಿನ ಬಗ್ಗೆ ಹೇಳಿ?
ಬೆಂಗಳೂರಿನ ಬಗ್ಗೆ ಗೆಳೆಯರಿಂದ ತಿಳಿದುಕೊಂಡಿದ್ದೆ. ಆದರೆ ಒಮ್ಮೆಯೂ ಬಂದಿರಲಿಲ್ಲ. ಇಲ್ಲಿನ ವಾತಾವರಣ, ಪ್ರತಿ ಕ್ರೀಡೆಗೂ ಸಿಗುವ ಬೆಂಬಲದ ಬಗ್ಗೆ ಕೇಳಿದ್ದೇನೆ.

*ಈಗ ಹೇಗಿದೆ ಮನೆಯ ಸ್ಥಿತಿ?
ಮೊದಲಿಗಿಂತಲೂ ಸುಧಾರಿಸಿದೆ. ನಾವು ಈಗಿರುವ ಸ್ಥಿತಿಗೆ ಅಪ್ಪ ಕಾರಣ. ನನ್ನ ಬದುಕಿನ ಆಸೆ ತಿಳಿದು ಅಪ್ಪ ಬೆಂಬಲಿಸಿದರು. ನನ್ನ ಸಾಧನೆ ಹಿಂದೆ ಅವರ ಶ್ರಮವಿದೆ.

*ಕುಸ್ತಿಪಟು ಆಗಲು ಉತ್ತಮ ಸಾಮರ್ಥ್ಯ ಬೇಕಲ್ಲವೇ. ಯಾವ ರೀತಿಯ ಆಹಾರ ಸೇವಿಸುತ್ತೀರಿ?
ಪೌಷ್ಠಿಕಾಂಶ ಇರುವ ಆಹಾರವನ್ನು ಹೆಚ್ಚು ತಿನ್ನುತ್ತೇನೆ. ದಿನಕ್ಕೆ ಮೂರರಿಂದ ನಾಲ್ಕು ಲೀಟರ್ ಹಾಲು ಕುಡಿಯುತ್ತೇನೆ. ಹಸಿ ತರಕಾರಿಗಳನ್ನು ಸೇವಿಸುತ್ತೇನೆ. ಟೂರ್ನಿಗಳು ಹತ್ತಿರವಿದ್ದಾಗ ಮಾಂಸಾಹಾರ ಸೇವನೆಯನ್ನು ಕಡಿಮೆ ಮಾಡುತ್ತೇನೆ. ಪ್ರತಿ ಕುಸ್ತಿಪಟುವಿಗೂ ಯೋಗವೂ ಮುಖ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT